ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪ್ರವಾಸೋದ್ಯಮ ಇಲಾಖೆ | ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಆಹಾರ ಕರಕುಶಲ ಸಂಸ್ಥೆ ಮೈಸೂರು ( Food Craft Institute ) ಮತ್ತು ಹೋಟೆಲ್ ನಿರ್ವಹಣಾ ಸಂಸ್ಥೆ ಬೆಂಗಳೂರು (Institute Of Hotel Management ) ಇವರ ಸಹಯೋಗದಲ್ಲಿ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲ್ಟಿ ಕ್ಯೂಸಿನ್ ಕುಕ್ ( Multi Cusine Cook ) ಮತ್ತು ಫುಡ್ ಅಂಡ್ ಬೇವರೇಜ್ ಸರ್ವಿಸ್ ಸ್ಟೇವಾರ್ಡ್ ( Food And Beverage Service Steward ) ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಜಿಲ್ಲೆಯ ಅಭ್ಯರ್ಥಿಗಳು ಮಾ.25 ರಿಂದ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿನ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ದ್ವಿ-ಪ್ರತಿಯಲ್ಲಿ ಏಪ್ರಿಲ್ 3 ರೊಳಗೆ ನೇರವಾಗಿ ಇಲಾಖೆಗೆ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಕಾವ್ಯ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ

ಸುದ್ದಿದಿನ,ದಾವಣಗೆರೆ:ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ, ಹಿರಿಯ ಸಾಹಿತಿ, ಯಕ್ಷಗಾನ ವಿದ್ವಾಂಸರು, ತಾಳಮದ್ದಳೆಯ ಅರ್ಥಧಾರಿಗಳಾದ ಜಯಲಕ್ಷ್ಮಿ ಕಾರಂತ್‌ರವರಿಗೆ ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಭಂಟರ ಭವನದಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಟ್ರಸ್ಟ್ ಹಮ್ಮಿಕೊಳ್ಳಲಾದ ಮಹಿಳಾ ಘಟಕದ 8ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ “ಯಕ್ಷ ಧ್ರುವ” ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಎಂದು ಕಲಾಕುಂಚ ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಿರಿಯ, ಕಿರಿಯ ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನ ಮದ್ದಳೆ ತರಬೇತಿ, ಮಹಾಭಾರತ, ರಾಮಾಯಣ ಪರಂಪರೆಯ ಪೌರಾಣಿಕ ಪ್ರಸಂಗಗಳ ರಚನೆ, ನಿವೃತ್ತಿ ಶಿಕ್ಷಕಿಯಾದರೂ ಶೈಕ್ಷಣಿಕ ಕಾಳಜಿಯ ಸ್ವಯಂ ಸೇವೆಯೊಂದಿಗೆ, ಕಲೆ, ಸಾಹಿತ್ಯ, ಸಂಗೀತ, ಭಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಗುರುತಿಸಿ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರನ್ನು ಮಹತ್ವಪೂರ್ಣ ಈ ಪ್ರಶಸ್ತಿಗೆ ಭಾಜನಾಗಿದ್ದು ಕಲಾಕುಂಚ ಯಕ್ಷರಂಗ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ7 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ದಿನದ ಸುದ್ದಿ6 days ago
ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು
-
ಅಂಕಣ6 days ago
ಸಿದ್ಧಾಂತ ಮತ್ತು ಪತ್ರಿಕೋದ್ಯಮ
-
ದಿನದ ಸುದ್ದಿ6 days ago
ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು
-
ದಿನದ ಸುದ್ದಿ6 days ago
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್
-
ಅಂಕಣ3 days ago
ಕವಿತೆ | ಅಲರ್ಟ್..!
-
ದಿನದ ಸುದ್ದಿ1 day ago
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ