Connect with us

ನೆಲದನಿ

ಮ್ಯಾಸ ನಾಯಕ ಬುಡಕಟ್ಟಿನಲ್ಲಿ ದೂಲಿ ಹಬ್ಬದ ಆಚರಣೆ

Published

on

  • ಡಾ. ಸಿ ಬಿ ಅನ್ನಪೂರ್ಣ ಜೋಗೇಶ್‌, ನಿವೃತ್ತ ಪ್ರಾಂಶುಪಾಲರು, ಬೆಂಗಳೂರು

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ.

ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ. ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ.

ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು.

ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ. ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ.

ಪ್ರಕೃತಿಯ ವಿಶಿಷ್ಟ್ಯತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತನ್ನನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಲೇಖಕರು : ಡಾ. ಸಿ ಬಿ ಅನ್ನಪೂರ್ಣ ಜೋಗೇಶ್‌, ನಿವೃತ್ತ ಪ್ರಾಂಶುಪಾಲರು, ಬೆಂಗಳೂರು

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ.

ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ. ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.

ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ. ಮ್ಯಾಸ ಭಾಷೆಯಲ್ಲಿ ಇದನ್ನು ‘ದೂಲಿ ಪಂಡುವ’ ಎಂದು ಕರೆಯಲಾಗುತ್ತದೆ.

ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು
ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ. ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ.

ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ. ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ. ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ.

ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಗೆಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ. ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ.

ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ.ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ.

ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿAದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬAಧ ಮುಖ್ಯವಾಗಿರುತ್ತದೆ.ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

Trending