ಬಹಿರಂಗ
ಸಾಮಾಜಿಕ ಪ್ರಜ್ಞೆಯೂ ಸಾಂಸ್ಕೃತಿಕ ಭೂಮಿಕೆಗಳೂ
ಬೌದ್ಧಿಕ ಆಲೋಚನಾಕ್ರಮವನ್ನು ಮೊಳಕೆಯಲ್ಲೇ ಚಿವುಟುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.
- ನಾ ದಿವಾಕರ
ಆಳುವ ವರ್ಗಗಳು ಸದಾ ಸಮಾಜದಲ್ಲಿನ ಪ್ರಬಲ ವರ್ಗಗಳ ಭಾಷೆಯಲ್ಲೇ ಮಾತನಾಡಲಿಚ್ಚಿಸುತ್ತದೆ. ಪ್ರಜಾಪ್ರಭುತ್ವದಲ್ಲೂ ಸಹ ಸಾಂವಿಧಾನಿಕ ಮಾರ್ಗಗಳ ಮೂಲಕವೇ ಪ್ರಬಲ ವರ್ಗಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಗಳಿರುವುದರಿಂದ ಆಡಳಿತ ವ್ಯವಸ್ಥೆಯ ಎಲ್ಲ ಕವಲುಗಳಲ್ಲೂ ಇದೇ ವರ್ಗಗಳ ಅಭಿಪ್ರಾಯ, ಪ್ರತಿಪಾದನೆ ಮತ್ತು ತಾತ್ವಿಕ ನೆಲೆಗಳು ತಮ್ಮ ಪಾರಮ್ಯ ಕಂಡುಕೊಳ್ಳುತ್ತವೆ.
ವರ್ತಮಾನ ಭಾರತದ ಸಂದರ್ಭದಲ್ಲಿ ಈ ವರ್ಗಗಳನ್ನು ನಾವು ಮೂರು ಮಜಲುಗಳಲ್ಲಿ ಗುರುತಿಸಬಹುದು. ಮೊದಲನೆಯದು ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳಾಗಿಯೇ ಈಗ ಕಾರ್ಪೋರೇಟ್ ಮಾರುಕಟ್ಟೆಯ ವಾರಸುದಾರರಾಗಿ ರೂಪಾಂತರಗೊಂಡಿರುವ ಔದ್ಯಮಿಕ ವರ್ಗ. ಎರಡನೆಯದು ಪ್ರಜಾಪ್ರಭುತ್ವದ ನೆರಳಿನಲ್ಲೇ, ಸಾಂವಿಧಾನಿಕ ಮಾರ್ಗದಲ್ಲೇ ಜನಪ್ರಾತಿನಿಧ್ಯದ ವಾರಸುದಾರಿಕೆ ವಹಿಸಿಕೊಂಡಿರುವ ಅಧಿಕಾರ ರಾಜಕಾರಣದ ಉತ್ತರಾಧಿಕಾರಿಗಳು.
ಮೂರನೆಯದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಆಧುನಿಕತೆಯ ಕವಚದೊಂದಿಗೆ ಯಥಾವತ್ತಾಗಿ ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ ಆಧಿಪತ್ಯದ ವಾರಸುದಾರರು. ಈ ಮೂರೂ ವರ್ಗಗಳನ್ನು ಚುನಾವಣಾ ರಾಜಕಾರಣದ ಅಂಗಳದಲ್ಲಿ ಪ್ರತ್ಯೇಕಿಸಬಹುದಾದರೂ, ಪ್ರಭುತ್ವದ ಆಡಳಿತ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಏಕಾಭಿಪ್ರಾಯ ಹೊಂದಿರುವ ಒಂದು ಗುಂಪಾಗಿ ಕಾಣಬಹುದು.
ಸಾಮಾಜಿಕವಾಗಿ ಭಾರತ ತನ್ನ ಸಾಂವಿಧಾನಿಕ ಮೌಲ್ಯಗಳಿಗನುಗುಣವಾಗಿ ಎಷ್ಟೇ ಸಮಾನತೆಯ ಹಾದಿಯಲ್ಲಿ ಸಾಗುತ್ತಿದ್ದರೂ, ಪ್ರಬಲ ಜಾತಿ ಸಮುದಾಯಗಳು ಗ್ರಾಮದಿಂದ ದೆಹಲಿಯವರೆಗೆ ತಮ್ಮ ಆಧಿಪತ್ಯವನ್ನು ಸಾಧಿಸಿವೆ. ಸಮತಲ ನೆಲೆಯಲ್ಲಿ ಕಾಣಬಹುದಾದ ಸಮಾನತೆಯ ಹಾದಿಗಳು ಲಂಬ ನೆಲೆಯಲ್ಲಿ ಸಮತೋಲನವನ್ನು ಕಳೆದುಕೊಳ್ಳುವುದನ್ನೂ ಗಮನಿಸುತ್ತಿದ್ದೇವೆ. ಹಾಗಾಗಿಯೇ ಮೀಸಲಾತಿಯ ಫಲಾನುಭವಿಗಳೂ ಕೆಲವೊಮ್ಮೆ ಲಂಬನೆಲೆಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಊಳಿಗಮಾನ್ಯ ಧೋರಣೆ ಮತ್ತು ಪಿತೃಪ್ರಧಾನ ಮನಸ್ಥಿತಿ ಇಂದಿಗೂ ಜೀವಂತವಾಗಿರುವ ಭಾರತೀಯ ಸಮಾಜದಲ್ಲಿ ಈ ಮೇಲರಿಮೆಯ ಅಹಮಿಕೆಗಳು ಮತ್ತು ಶ್ರೇಷ್ಠತೆಯ ಜೀವಂತಿಕೆಯೇ ಇಲ್ಲಿನ ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆಯ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗಗಳನ್ನು ಇಂದಿಗೂ ರಕ್ಷಿಸುತ್ತಿವೆ. ಸಾಮಾಜಿಕ ಸಮಾನತೆಯೊಂದಿಗೆ ಆರ್ಥಿಕ ಸಮಾನತೆಯನ್ನೂ ಸಾಧಿಸದಿದ್ದರೆ ಪ್ರಜಾಪ್ರಭುತ್ವ ಪರಿಪೂರ್ಣವಾಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ.
ಬಂಡವಾಳಶಾಹಿ ಆರ್ಥಿಕತೆಯನ್ನೇ ಪೋಷಿಸಿಕೊಂಡು ಬಂದಿರುವ ಭಾರತದ ಆಳುವ ವರ್ಗಗಳು, ಪಕ್ಷಾತೀತವಾಗಿ ಈ ತರತಮಗಳನ್ನೂ ಕಾಪಾಡಿಕೊಂಡು ಬಂದಿವೆ. ಭಾರತದ ಮೇಲ್ಪದರದ ಶೇ 10ರಷ್ಟು ಜನರ ಬಳಿ ದೇಶದ ಶೇ 77ರಷ್ಟು ಸಂಪತ್ತು ಕ್ರೋಢೀಕೃತವಾಗಿದ್ದರೆ, ಶೇ 57ರಷ್ಟು ರಾಷ್ಟ್ರೀಯ ಆದಾಯದ ಪಾಲನ್ನು ಹೊಂದಿದೆ. ಶೇ 1ರಷ್ಟು ಜನರ ಬಳಿ ಶೇ 22ರಷ್ಟು ರಾಷ್ಟ್ರೀಯ ಆದಾಯ ಶೇಖರಣೆಯಾಗಿದೆ. 2017ರ ನಂತರ ಉತ್ಪಾದನೆಯಾದ ಶೇ 73ರಷ್ಟು ರಾಷ್ಟ್ರೀಯ ಸಂಪತ್ತು ಮೇಲ್ಪದರದ ಶೇ 1ರಷ್ಟು ಜನರ ಪಾಲಾಗಿದೆ.
ಭಾರತ ಜಾಗತಿಕ ಬಂಡವಾಳ ಮಾರುಕಟ್ಟೆಯಲ್ಲಿ ಯಾವ ಸ್ಥಾನವನ್ನು ಗಳಿಸಿದರೂ, ತಳಮಟ್ಟದ ವಾಸ್ತವ ಸನ್ನಿವೇಶವನ್ನು ಗಮನಿಸಿದಾಗ ಅನೌಪಚಾರಿಕ ಕ್ಷೇತ್ರವೇ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿರುವುದು ಕಂಡುಬರುತ್ತದೆ. ಎನ್‌ಎಸ್‌ಎಸ್‌ಒ ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಕೃತ ವರದಿಯ ಪ್ರಕಾರ ಭಾರತದ ಕಾರ್ಮಿಕರಲ್ಲಿ ಶೇ 93ರಷ್ಟು ಅನೌಪಚಾರಿಕ ವಲಯದಲ್ಲಿದ್ದಾರೆ.
ಕೋವಿದ್ ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರ ಆಘಾತಕ್ಕೊಳಗಾದ ಈ ವಲಯ ನಂತರ ಚೇತರಿಸಿಕೊಂಡಿದ್ದರೂ, ಮುಂಚಿನ ಸ್ಥಿತಿಗೆ ತಲುಪಲು ಸಾಧ್ಯವಾಗಿಲ್ಲ. 2021ರ ಸಮೀಕ್ಷೆಯ ಪ್ರಕಾರ ದೇಶದಲ್ಲಿರುವ ಒಟ್ಟು 6.36 ಕೋಟಿ ಉದ್ಯಮಗಳ ಪೈಕಿ ಶೇ 99.7ರಷ್ಟು ಉದ್ದಿಮೆಗಳು ಅಸಂಘಟಿತ ಕ್ಷೇತ್ರದಲ್ಲಿದೆ.
ನೋಂದಣಿಯಾಗಿರುವ ಔಪಚಾರಿಕ ಕ್ಷೇತ್ರದ ಉದ್ದಿಮೆಗಳ ಸಂಖ್ಯೆ ಕೇವಲ 1 ಲಕ್ಷ 70 ಸಾವಿರ ಅಥವಾ ಶೇ 0.3ರಷ್ಟಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಶ್ರಮಿಕರ ನೆರವಿಗೆ ಸೂಕ್ತ ಯೋಜನೆಗಳನ್ನು ರೂಪಿಸುವ ಸಲುವಾಗಿ ರಚಿಸಿರುವ ಇ-ಶ್ರಮ್ ಪೋರ್ಟಲ್‌ನಲ್ಲಿ ಅನೌಪಚಾರಿಕ ಕ್ಷೇತ್ರದ ಎಲ್ಲ ದುಡಿಮೆಗಾರರೂ ನೋಂದಣಿ ಮಾಡಿಸಬೇಕಿದೆ. ನಿಖರವಾಗಿ ಈ ವಲಯದಲ್ಲಿರುವ ಕಾರ್ಮಿಕರನ್ನು ಗುರುತಿಸುವುದೇ ಸಾಧ್ಯವಾಗದೆ ಇರುವುದರಿಂದ ನೋಂದಾಯಿತ 27.69 ಕೋಟಿ ಕಾರ್ಮಿಕರ ಪೈಕಿ ಶೇ 94ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ.
ನೋಂದಾಯಿತವಾಗಿರುವ 27.69 ಕೋಟಿ ಕಾರ್ಮಿಕರ ಪೈಕಿ ಶೇ 74ರಷ್ಟು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಕಾರ್ಮಿಕರಿದ್ದಾರೆ. ಶೇ 45.32 ಒಬಿಸಿ, ಶೇ 20.95 ಪರಿಶಿಷ್ಟ ಜಾತಿ ಮತ್ತು ಶೇ 8.17ರಷ್ಟು ಪರಿಶಿಷ್ಟ ಪಂಗಡಗಳ ಕಾರ್ಮಿಕರಿದ್ದಾರೆ. ಅನೌಪಚಾರಿಕ ಕ್ಷೇತ್ರದಲ್ಲಿ ಶೇ 94.11ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ. ಶೇ 4.36ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ರಿಂದ 15 ಸಾವಿರ ರೂಗಳಷ್ಟಿದೆ.
ದೇಶದಲ್ಲಿ ಒಟ್ಟು 38 ಕೋಟಿ ಅನೌಪಚಾರಿಕ ವಲಯದ ಕಾರ್ಮಿಕರಿರುವುದಾಗಿ ಅಂದಾಜು ಮಾಡಲಾಗಿದ್ದು, ಈ ದತ್ತಾಂಶಗಳನ್ನು ಪರಿಶೀಲಿಸಿದರೆ ದೇಶದ ಆರ್ಥಿಕತೆಯಲ್ಲಿ ಅಸಮಾನತೆ ಢಾಳಾಗಿ ಕಾಣುತ್ತದೆ. ಈ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸುವುದು ಇ-ಶ್ರಮ್ ಪೋರ್ಟಲ್‌ನ ಸ್ಥಾಪಿತ ಉದ್ದೇಶವಾಗಿದೆ.
ಈ ಸಮೀಕ್ಷೆಯ ಅನುಸಾರ ನೋಂದಾಯಿತ ಶೇ 61.72ರಷ್ಟು ಕಾರ್ಮಿಕರ ವಯಸ್ಸು 18 ರಿಂದ 40 ವರ್ಷಗಳಷ್ಟಿದೆ. ಶೇ 22.12ರಷ್ಟು ಕಾರ್ಮಿಕರು 40 ರಿಂದ 40 ವಯೋಮಾನದವರಾಗಿದ್ದಾರೆ. ಶೇ 2.98ರಷ್ಟು ಕಾರ್ಮಿಕರ ವಯೋಮಾನ 16 ರಿಂದ 18 ವರ್ಷಗಳಾಗಿವೆ. ನೋಂದಾಯಿತ ಮಹಿಳಾ ಕಾರ್ಮಿಕರ ಸಂಖ್ಯೆ ಶೇ 52.18ರಷ್ಟಿದೆ. ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕಾರ್ಮಿಕರ ಸಂಖ್ಯೆಯೇ ಶೇ 52.11ರಷ್ಟಿದೆ. ಅಂದರೆ ಅರ್ಧಕ್ಕಿಂತಲೂ ಹೆಚ್ಚಿನ ಅಸಂಘಟಿತ ಕಾರ್ಮಿಕರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನೇ ಅವಲಂಬಿಸಿರುವುದು ಭಾರತೀಯ ಆರ್ಥಿಕತೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
ಈ ಅಸಮಾನತೆಗಳು ಢಾಳಾಗಿ ಕಾಣುತ್ತಿರುವಂತೆಯೇ ದೇಶದ ಅನೌಪಚಾರಿಕ ವಲಯದ ಲಕ್ಷಾಂತರ ದುಡಿಮೆಯ ಕೈಗಳು ಬೀದಿಪಾಲಾಗುತ್ತಿವೆ. ಓಲಾ, ಊಬರ್, ಜಮೋಟೋ, ಸ್ವಿಗಿ ಮುಂತಾದ ಆದಾಯ ಮಾರ್ಗಗಳಲ್ಲಿ ಎದುರಾಗುತ್ತಿರುವ ಬಿಕ್ಕಟ್ಟು ಈ ದೇಶದ ನಿರುದ್ಯೋಗಿ ಯುವ ಜನತೆಯನ್ನು ಬಾಣಲೆಯಿಂದ ಬೆಂಕಿಗೆ ಬೀಳಿಸುತ್ತಿವೆ. ತಾತ್ಕಾಲಿಕವಾಗಿ ಜೀವನ ನಿರ್ವಹಣೆಗೆ ನೆರವಾಗುವ ಯಾವುದೇ ಉದ್ಯೋಗವೂ ಒಂದು ಸುಸ್ಥಿರ ಸಮಾಜವನ್ನು ನಿರ್ಮಿಸಲು ಪೂರಕವಾಗಿರುವುದಿಲ್ಲ. ಬಹುಶಃ ಇನ್ನು ಹತ್ತು ವರ್ಷಗಳಲ್ಲಿ ಭಾರತ ಈ ಸಂದಿಗ್ಧತೆಯನ್ನು ಎದುರಿಸುತ್ತದೆ.
ಸ್ವಯಂ ಉದ್ಯೋಗ, ಕೌಶಲ್ಯಾಧಾರಿತ ಉದ್ಯೋಗ ಮತ್ತು ತ್ವರಿತ ಆದಾಯ ಗಳಿಕೆಯ ಮಾರ್ಗಗಳು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಅದ್ಭುತ ಫಲಿತಾಂಶಗಳನ್ನು ತೋರುವುದಾದರೂ, ದೀರ್ಘಾವಧಿಯಲ್ಲಿ ಒಂದು ಅಸ್ಥಿರ ಸಮಾಜವನ್ನು ಸೃಷ್ಟಿಸುವುದನ್ನು ಹಲವು ದೇಶಗಳಲ್ಲಿ ಕಾಣಬಹುದು. ಹಾಗೆಯೇ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಉದ್ಯೋಗಾವಕಾಶಗಳು ಹಣಕಾಸು ಬಂಡವಾಳದ ಅವಶ್ಯಕತೆಗಳಿಗನುಗುಣವಾಗಿಯೇ ಇರುವುದರಿಂದ, ಈ ನೌಕರಿಯನ್ನು ಅವಲಂಬಿಸುವವರು ಮಾರುಕಟ್ಟೆ ವ್ಯತ್ಯಯಗಳ ಮೊದಲ ಬಲಿ ಆಗುತ್ತಾರೆ.
ಈ ಬಲಿಪೀಠಗಳನ್ನು ಸೃಷ್ಟಿಸಲೆಂದೇ ಸರ್ಕಾರಗಳು ಹಲವು ಯೋಜನೆಗಳನ್ನೂ, ಆಡಳಿತ ನೀತಿಗಳನ್ನೂ ರೂಪಿಸುತ್ತಿರುತ್ತವೆ. ಹಾಗಾಗಿಯೇ ಇಂದು ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಯೋಜನೆಯ ನೌಕರರು ತಮ್ಮ ಬದುಕಿನ ಘನತೆಗಾಗಿ, ಹಕ್ಕಿಗಾಗಿ ಹೋರಾಡುವಂತಾಗಿದೆ.
ದೇಶದ ಒಂದು ಬೃಹತ್ ಜನಸಮೂಹ ತಮ್ಮ ಜೀವನ ನಿರ್ವಹಣೆಗೆ ಪರದಾಡುತ್ತಿರುವುದನ್ನು ಅಧಿಕೃತ ಅಂಕಿಅಂಶಗಳೇ ಸಾಬೀತುಪಡಿಸುತ್ತವೆ. ಕರ್ನಾಟಕದಲ್ಲೇ 42 ಸಾವಿರ ಆಶಾ ಕಾರ್ಯಕರ್ತೆಯರು ತಮ್ಮ ಸೇವಾ ಭತ್ಯೆಗಳಿಗಾಗಿ, ಸುಭದ್ರ ನೌಕರಿಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಆಶಾ ಕಾರ್ಯಕರ್ತೆಯರು ಕನಿಷ್ಟ ವೇತನದೊಂದಿಗೆ, ಉದ್ಯೋಗ ಭದ್ರತೆ ಇಲ್ಲದೆ ಅನಿಶ್ಚಿತ ಬದುಕು ಎದುರಿಸುತ್ತಿದ್ದಾರೆ.
ಕರ್ನಾಟಕದಲ್ಲಿ 60 ವರ್ಷ ದಾಟಿದ ಕಾರಣಕ್ಕಾಗಿಯೇ ಹೊರಹಾಕಲ್ಪಟಿರುವ 12 ಸಾವಿರ ಬಿಸಿಯೂಟ ಯೋಜನೆಯ ಮಹಿಳೆಯರು ತಮ್ಮ ಜೀವನ ಭದ್ರತೆಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 13 ಲಕ್ಷ ಅಂಗನವಾಡಿ ನೌಕರರು, ಬಹುಪಾಲು ಮಹಿಳೆಯರು, ಹೊಸ ಶಿಕ್ಷಣ ನೀತಿಯ ಪರಿಣಾಮ ತಮ್ಮ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ದೇಶದ ಬಹುದೊಡ್ಡ ಉದ್ಯೋಗದಾತ ಸಾರ್ವಜನಿಕ ಸಂಸ್ಥೆ ರೈಲ್ವೆ ಇಲಾಖೆಯಲ್ಲಿ 72 ಸಾವಿರ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಬಿಜೆಪಿ ಸಂಸದ ವರುಣ್ ಗಾಂಧಿ ಇತ್ತೀಚೆಗೆ ಹೇಳಿದಂತೆ 60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ.
ಭಾರತದ ಬೃಹತ್ ಜನಸಮೂಹದ ಬದುಕಿನ ಪ್ರಶ್ನೆಯಾಗಿರುವ ಈ ಸಮಸ್ಯೆಗಳು ಇಂದಿನ ಸಾರ್ವಜನಿಕ ಸಂಕಥನದ ಒಂದು ಭಾಗವಾಗಬೇಕಿತ್ತು. ಆದರೆ ಭಾರತ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ ದಾಖಲಾಗಿದ್ದರೂ, ಎಂಟು ವರ್ಷಗಳಲ್ಲೇ ಅತಿ ಹೆಚ್ಚು ಹಣದುಬ್ಬರ ದಾಖಲಾಗಿದ್ದರೂ ಸಾರ್ವಜನಿಕ ಹಾಗೂ ಬೌದ್ಧಿಕ ವಲಯದ ಸಂಕಥನಗಳು ಭಿನ್ನ ಮಾರ್ಗದಲ್ಲಿ ಸಾಗುತ್ತಿವೆ. ಈ ವಿಕೃತ ಬೆಳವಣಿಗೆಯ ಮೂಲವನ್ನು ನಾವು ಸಾಂಸ್ಕೃತಿಕ ಹಾಗೂ ರಾಜಕೀಯ ಭೂಮಿಕೆಗಳಲ್ಲಿ ಶೋಧಿಸಬೇಕಿದೆ.
ಇಲ್ಲಿ ಬೌದ್ಧಿಕ ವಲಯದ ತಾತ್ವಿಕ ಗ್ರಹಿಕೆ ಮತ್ತು ಸಾಂಸ್ಕೃತಿಕ ವಲಯದ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ರಾಜಕೀಯ ಮತ್ತು ಸೈದ್ಧಾಂತಿಕ ನಿಲುಮೆಗಳು ವಸ್ತುನಿಷ್ಠವಾಗದೆ ಹೋದರೆ ಸತ್ಯದ ಸಮಾಧಿಯಾಗುತ್ತದೆ. ತಾವು ಅನುಕರಿಸುವ ನಾಯಕರಲ್ಲಿ ಸರ್ವಶ್ರೇಷ್ಠತೆಯನ್ನು, ಸಾರ್ವಭೌಮತ್ವವನ್ನು ಕಾಣುವಂತಹ ವಂಧಿಮಾಗದ ಸಂಸ್ಕೃತಿಯನ್ನು ತಳಮಟ್ಟದವರೆಗೂ ತಲುಪಿಸಿರುವ ಭಾರತದ ರಾಜಕೀಯ ಪರಂಪರೆ ಇಂದು ದೇಶದ ಭವಿಷ್ಯತ್ತಿಗೆ ಮುಳುವಾಗಲಿದೆ. ಆಂತರಿಕ ಪ್ರಜಾತಂತ್ರದ ಮೌಲ್ಯಗಳನ್ನೇ ಮರೆತಿರುವ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣವನ್ನು ಒಂದು ಅವಕಾಶದ ಭೂಮಿಕೆ ಎಂದು ಭಾವಿಸದೆ, ತಮ್ಮ ವಾರಸುದಾರಿಕೆ ಅಥವಾ ಉತ್ತರಾಧಿಕಾರದ ವೇದಿಕೆ ಎಂದು ಭಾವಿಸುತ್ತಿರುವುದೇ ಇಂದಿನ ಸಕಲ ಸಮಸ್ಯೆಗಳಿಗೆ ಕಾರಣವಾಗಿದೆ.
ವರ್ತಮಾನದ ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಈ ದೇಶದ ಸಂಸ್ಕೃತಿಯಷ್ಟೇ ವೈವಿಧ್ಯಮಯ ಅಷ್ಟೇ ಜಟಿಲ. ಆದರೆ ಈ ಸಮಸ್ಯೆಗಳಿಗೆ ಅಧಿಕಾರ ರಾಜಕಾರಣ ಸೂಚಿಸುತ್ತಿರುವ ಪರಿಹಾರ ಮಾರ್ಗಗಳು ಜನಸಾಮಾನ್ಯರಿಗೆ ಅರ್ಥವೇ ಆಗದಷ್ಟು ಸಂಕೀರ್ಣವಾಗಿರುತ್ತವೆ. ಹಾಗಾಗಿಯೇ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಡ್ರೋನ್ ಮೂಲಕ ವೀಕ್ಷಿಸುತ್ತಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಿಂದ ಇಡೀ ದೇಶವೇ ಪುಳಕಿತವಾಗುತ್ತದೆ.
ಆದರೆ ಈ ಡ್ರೋನ್ ವೀಕ್ಷಣೆಗೆ ಕರ್ನಾಟಕದ ಭ್ರಷ್ಟಾಚಾರದ ಕೂಪಗಳು ನಿಲುಕದೆ ಹೋಗುತ್ತವೆ. ರಾಜಕೀಯ ಭ್ರಷ್ಟಾಚಾರ ಭಾರತದ ಆಡಳಿತ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗ ಎನ್ನುವ ವಾಸ್ತವವನ್ನು ಅರಿತಿದ್ದರೂ ಜನಸಾಮಾನ್ಯರು ಭ್ರಷ್ಟರನ್ನೇ ಪೋಷಿಸಲು ತತ್ವ ಸಿದ್ಧಾಂತಗಳ ಮೊರೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಕೇಳಿಬರುತ್ತಿರುವ 40 % ಕಮಿಷನ್ ದಂಧೆ, ಪಿಎಸ್‌ಐ ಪರೀಕ್ಷೆಯ ಹಗರಣ, ಕೆಪಿಎಸ್‌ಸಿ ಹಗರಣ ಇವೆಲ್ಲವೂ ಕೇವಲ ಅಧಿಕಾರಶಾಹಿಯ ಚೌಕಟ್ಟಿನಲ್ಲೇ ಕಂಡುಬರುತ್ತವೆ.
ಸಾರಿಗೆ ನೌಕರರ ಸಂಘಟಿತ ಶಕ್ತಿಯನ್ನು ಭಂಗಗೊಳಿಸುವ ಉದ್ದೇಶದಿಂದಲೇ ತಮ್ಮ ಪರಿಣತ ಕ್ಷೇತ್ರವನ್ನು ಬಿಟ್ಟು ಕಾರ್ಮಿಕ ಸಂಘಟನೆಗೆ ಮುಂದಾದ ಕೋಡಿಹಳ್ಳಿ ಚಂದ್ರಶೇಖರ್ ಈಗ ಬೃಹತ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೂ, ಪ್ರಾಮಾಣಿಕತೆಯನ್ನೇ ಹೊದ್ದಿಕೊಂಡಿರುವ ಆಮ್ ಆದ್ಮಿ ಪಕ್ಷ ಅವರನ್ನು ಉಚ್ಚಾಟಿಸಲು ಹಿಂಜರಿಯುತ್ತದೆ. ಕಾನೂನು ಪಾಲನೆ ರಕ್ಷಣೆ ಮತ್ತು ಸಾರ್ವಜನಿಕ ಸ್ವಾಸ್ಥ್ಯದ ಹೊಣೆ ಹೊರಬೇಕಾಗಿರುವ ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡುತ್ತಿದೆ. ತಾಂಡವಾಡುತ್ತಿದೆ
ಈ ಎಲ್ಲ ಬೆಳವಣಿಗೆಗಳೂ ಅಭಿವೃದ್ಧಿ ಕಾಮಗಾರಿಗಳ ಒಂದು ಭಾಗವಾಗಿಯೇ ಇರುವಾಗ, ಡ್ರೋನ್ ವೀಕ್ಷಣೆಯಲ್ಲಿ ಕಾಣದೆ ಹೋಗುವುದಾದರೂ ಹೇಗೆ ? ಇಷ್ಟೆಲ್ಲಾ ಅಕ್ರಮಗಳ ನಡುವೆಯೂ ಸರ್ಕಾರಗಳು ಅಬಾಧಿತವಾಗಿರುತ್ತವೆ, ಸಂಬಂಧಪಟ್ಟ ಸಚಿವರು ʼಮೇಲಿನವರʼ ಕೃಪಾಕಟಾಕ್ಷದೊಂದಿಗೆ ನಿರಾಳವಾಗಿರುತ್ತಾರೆ. ಸಾರ್ವಜನಿಕ ವಲಯದಲ್ಲೂ ಇದು ಯಾವುದೇ ಪ್ರತಿರೋಧದ ದನಿಗಳನ್ನು ಮೂಡಿಸುವುದಿಲ್ಲ. ಏಕೆಂದರೆ ಜನಸಾಮಾನ್ಯರ ಸಾಮಾಜಿಕ ಪ್ರಜ್ಞೆ ಯಾವುದೋ ಒಂದು ನಿಷ್ಠೆಗೊಳಗಾಗಿ ನಿಷ್ಕ್ರಿಯವಾಗಿರುತ್ತದೆ.
ಈ ತಾರತಮ್ಯಗಳನ್ನು ಯಥಾವತ್ತಾಗಿ ಕಾಪಾಡಲೆಂದೇ ಅಥವಾ ಮತ್ತಷ್ಟು ಕಂದರಗಳನ್ನು ಸೃಷ್ಟಿಸುವ ಸಲುವಾಗಿಯೇ ರೂಪಿಸಲಾಗುವ ಆಡಳಿತ ನೀತಿಗಳನ್ನು ಜಾರಿಗೊಳಿಸಲು ಗ್ರಾಮ ಮಟ್ಟದಿಂದ ದೆಹಲಿಯವರೆಗೂ ಒಂದು ಸಾಮಾಜಿಕ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಈ ಸಾಮಾಜಿಕ ಚೌಕಟ್ಟು ಶತಮಾನಗಳ ಬುನಾದಿ ಇರುವ ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತದೆ. ದಿನನಿತ್ಯ ಕೇಳಿಬರುವ ಜಾತಿ ದೌರ್ಜನ್ಯಗಳು ನಮ್ಮ ಆಂತರಿಕ ಪ್ರಜ್ಞೆಯನ್ನು ಕದಡುತ್ತಿಲ್ಲ. ಏಕೆಂದರೆ ದೌರ್ಜನ್ಯಕ್ಕೊಳಗಾಗುತ್ತಿರುವುದು ಆರ್ಥಿಕ ನೆಲೆಯಲ್ಲಿ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ.
ಇಲ್ಲಿರುವ ಜಾತ್ಯತೀತ ಲಕ್ಷಣ ರಾಜಕೀಯ ನೆಲೆಯಲ್ಲಾಗಲೀ, ಸಾಂಸ್ಕೃತಿಕ ನೆಲೆಯಲ್ಲಾಗಲೀ ಕಂಡುಬರುವುದಿಲ್ಲ. ಅಂದರೆ, ಮತನಿರಪೇಕ್ಷವಾಗಿ, ಜಾತಿ ಗೋಡೆಗಳನ್ನು ಮೀರಿದ ಒಂದು ಅಸಮಾನತೆ ನಮ್ಮ ಸಮಾಜದಲ್ಲಿ ಬೇರೂರುತ್ತಿದೆ. ಶ್ರೀಮಂತಿಕೆ ಮತ್ತು ದಾರಿದ್ರ್ಯತೆಯ ನಡುವಿನ ಕಂದರದಲ್ಲಿ ಹುದುಗಿಹೋಗುವ ಅಸಂಖ್ಯಾತ ಅಸಹಾಯಕ ದನಿಗಳು ತಮ್ಮ ಪ್ರತಿರೋಧವನ್ನು ದಾಖಲಿಸಲೂ ಸಾಧ್ಯವಾಗದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಎಲ್ಲ ಜಾತಿ ಮತದ ನೆಲೆಗಳಲ್ಲಿ ವಿಸ್ತರಿಸಿರುವ ಈ ತಾರತಮ್ಯಗಳನ್ನು ವಿರೋಧಿಸಲು ಅತ್ಯವಶ್ಯವಾದ ಒಂದು ಜಾತ್ಯತೀತ ಭೂಮಿಕೆಯನ್ನು ಶೈಶಾವಸ್ಥೆಯಲ್ಲೇ ಭಗ್ನಗೊಳಿಸಲಾಗುತ್ತಿದೆ.
ಯಾವುದೇ ಭೌಗೋಳಿಕ ರಾಷ್ಟ್ರದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಜಾಗೃತವಾಗಿರಬೇಕಾದ ಸಾರ್ವಜನಿಕ ಅರಿವು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೊಳಕೆಯಲ್ಲೇ ಚಿವುಟಿ, ಯಾವುದೋ ಒಂದು ಆಧಿಪತ್ಯಕ್ಕೊಳಪಡಿಸುವ ನಿಟ್ಟಿನಲ್ಲಿ ಇಂದು ರಾಷ್ಟ್ರ ರಾಜಕಾರಣ ಬೆಳೆಯುತ್ತಿದೆ. ಅಂತರಿಕವಾಗಿ ಜಾತಿ, ಉಪಜಾತಿ, ಒಳಜಾತಿ ಮತ್ತು ಮೇಲ್ಜಾತಿಗಳ ಆಧಿಪತ್ಯಗಳು ಬಲವಾಗುತ್ತಿರುವಂತೆಯೇ ವ್ಯಾಪಕ ನೆಲೆಯಲ್ಲಿ ಮತಧರ್ಮಗಳ ಆಧಿಪತ್ಯದ ನೆಲೆಗಳೂ ಪ್ರಬಲವಾಗುತ್ತಿವೆ.
ಈ ಆಧಿಪತ್ಯದ ನೆಲೆಗಳು ತಮ್ಮ ಸಾಂಸ್ಥಿಕ, ಸಾಂಘಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲೆಂದೇ ಸಾರ್ವಜನಿಕ ಸಂಕಥನಗಳ ನಿರೂಪಣೆಗಳನ್ನೂ ನಿರ್ಧರಿಸುತ್ತವೆ. ಆಳುವ ವರ್ಗಗಳು ಈ ಆಧಿಪತ್ಯದ ನೆಲೆಗಳನ್ನೇ ಬಳಸಿಕೊಂಡು ಇಂತಹ ಸಾಪೇಕ್ಷ ನಿರೂಪಣೆಗಳಿಗೆ ಸಾರ್ವತ್ರಿಕತೆಯನ್ನು ಕಲ್ಪಿಸಲು ಸಾಂವಿಧಾನಿಕ ಮಾರ್ಗಗಳನ್ನೇ ಅನುಸರಿಸುತ್ತವೆ. ತಂತ್ರಜ್ಞಾನ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಡಿಜಿಟಲ್ ವೇದಿಕೆಗಳು ಇದಕ್ಕೆ ಸಹಾಯಕವಾಗಿರುತ್ತವೆ. ಇಂದು ಸಾರ್ವಜನಿಕವಾಗಿ ಬಹುಚರ್ಚಿತವಾಗಿರುವ ಪಠ್ಯ ಪರಿಷ್ಕರಣೆಯೂ ಇದರ ಒಂದು ಭಾಗವಷ್ಟೇ ಆಗಿದೆ.
ಹಿಂದುತ್ವ ರಾಜಕಾರಣ ಈ ಮೇಲ್ಜಾತಿ, ಮೇಲ್ವರ್ಗ ಮತ್ತು ವೈದಿಕಶಾಹಿ ಸಾಂಸ್ಕೃತಿಕ ನೆಲೆಗಳ ಸಮ್ಮಿಶ್ರಣವಾಗಿರುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಈ ಆಧಿಪತ್ಯ ರಾಜಕಾರಣದ ಮಹತ್ವಾಕಾಂಕ್ಷೆಗೆ ಒಂದು ಪ್ರಜಾಸತ್ತಾತ್ಮಕ ಪ್ರತಿರೋಧದ ನೆಲೆಯನ್ನು ರೂಪಿಸುವುದು ಈ ಸಂದರ್ಭದ ಅನಿವಾರ್ಯತೆಯೂ ಆಗಿದೆ. ಭಾರತದ ಸಂವಿಧಾನ ಈ ನಿಟ್ಟಿನಲ್ಲಿ ನಮಗೆ ದಾರಿದೀಪವಾಗಬಹುದು ಹಾಗೆಯೇ ನಮ್ಮೊಳಗಿನ ಜಾಗೃತ ಸಾಮಾಜಿಕ ಪ್ರಜ್ಞೆ ಬೆಳಕಿನ ಕಿಂಡಿಯೂ ಆಗಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.



