Connect with us

ದಿನದ ಸುದ್ದಿ

ಸಹಜತೆಯೇ ಸಾಹಿತ್ಯದ ನಿಜ ಸೊಬಗು : ಹಿರಿಯ ಸಾಹಿತಿ ಸುಶೀಲಾ ದೇವಿ ಆರ್ ರಾವ್

Published

on

ಸುದ್ದಿದಿನ, ದಾವಣಗೆರೆ : ಸರಳ ಭಾಷೆ, ಸಹಜ ವಿಷಯ ವಸ್ತುವಿನಿಂದ ಕೂಡಿದ ಸಾಹಿತ್ಯ ಓದುಗರ ಮನವನ್ನು ಶೀಘ್ರ ತಲುಪಬಲ್ಲದು ಎಂದು ಹಿರಿಯ ಸಾಹಿತಿ, ದಾವಣಗೆರೆ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯುಕ್ತ ಸರ್ವಾಧ್ಯಕ್ಷರಾದ ಶ್ರೀಮತಿ ಸುಶೀಲಾದೇವಿ ಆರ್ ರಾವ್ ಅವರು ಅಭಿಪ್ರಾಯಿಸಿದರು.

ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ವತಿಯಿಂದ ದಿನಾಂಕ : 20.03.2022 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಸೀತಮ್ಮ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಅನ್ನಪೂರ್ಣ ಪಾಟೀಲ್, ವಕೀಲರಾದ ಜಗದೀಶ ಎಸ್ ಮರಕಳ್ಳಿ ದಂಪತಿಗಳ ಶ್ಯಾಮನೂರು ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಭಾವ ಸಂಗಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಕವಿ ಕಾವ್ಯ ಭಾವ ಸಂಗಮ, ಹ್ಯಾಪಿನೆಸ್ ಡೇ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಳತೆಯೇ ಸಾಹಿತ್ಯದ ನಿಜ ಸೊಬಗು ಎಂದು ಬಣ್ಣಿಸಿದರು.

ಕಲ್ಪನೆಗಿಂತ ಸಾಂದರ್ಭಿಕ ಮತ್ತು ಸಮಕಾಲೀನ ಚಿಂತನೆಗಳಿಗೆ ಬರವಣಿಗೆ ತೆರೆದುಕೊಳ್ಳಬೇಕು. ಆಂತಹ ಸಾಹಿತ್ಯ ಮರು ದೃಷ್ಟಿಗೆ – ಹೊಸ ಸೃಷ್ಟಿಗೆ ಕಾರಣವಾಗುತ್ತದೆ. ಅದೇ ನಿಜವಾದ ಸತ್ವಯುತ ಬರಹ ಎಂದು ವಿಶ್ಲೇಷಿಸಿದರು.

ವಿಶೇಷ ಗೌರವ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ರಾಣೇಬೆನ್ನೂರು ಭರಮಗಿರಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಆದರ್ಶ ಸಾಧಕ ಮಹಿಳೆ ಶ್ರೀಮತಿ ಸರೋಜಿನಿ ಯರೇಶೀಮಿ ಸಮಾಜ ಸೇವೆಗೆ ಹಣ ಬೇಕಾಗಿಲ್ಲ. ಸೇವೆ ಮಾಡುವ ಮನಸ್ಸಿದ್ದರೆ ಸಾಕು, ಎಲ್ಲವೂ ನಿಶ್ಚಿಂತೆಯಿಂದ ಸುಗಮವಾಗಿ ಸಾಗುತ್ತದೆ ಎಂದು ನುಡಿದರು.

ಆಶಯ ನುಡಿಯಾಡಿದ ಬಳಗದ ಸಂಚಾಲಕ ಗಂಗಾಧರ ಬಿ ಎಲ್ ನಿಟ್ಟೂರ್ ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಉತ್ಕೃಷ್ಟ ಸಾಹಿತ್ಯಿಕ ಕೊಡುಗೆ ನೀಡುವ ಜೊತೆ ಸರಳ ಸಜ್ಜನಿಕೆ ಮೈಗೂಡಿಸಿಕೊಂಡು ಆದರ್ಶಪ್ರಾಯರಾಗಿರುವ ಸುಶೀಲಾದೇವಿ ಅಮ್ಮನವರು ಹಾಗೂ ದೇಶ ವಿದೇಶಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ತಾಯ್ನೆಲದ ಒಲವಿನ ಧ್ಯೋತಕವಾಗಿ ತಮ್ಮ ಜ್ಞಾನಾನುಭವವನ್ನು ಸಮಾಜ ಸೇವೆಯ ಮೂಲಕ ಕನ್ನಡ ನಾಡಿಗೆ ಹಂಚುತ್ತಿರುವ ಮಾದರಿ ಸಾಧಕ ಮಹಿಳೆ ಶ್ರೀಮತಿ ಸರೋಜಿನಿ ಯರೇಶೀಮಿ ಅವರ ಉಪಸ್ಥಿತಿಯಿಂದಾಗಿ ತಿಂಗಳ ಅಂಗಳ ಬಳಗದ ಮಹಿಳಾ ದಿನಾಚರಣೆ ಸಾರ್ಥಕಗೊಂಡಿತು ಎಂದು ಧನ್ಯತಾ ಭಾವ ವ್ಯಕ್ತಪಡಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರರಾಗಿ ಆಯ್ಕೆ ಗೊಂಡಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಶ್ರೀಮತಿ ಸುಶೀಲಾದೇವಿ ಆರ್ ರಾವ್ ಅವರಿಗೆ ಬಳಗದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಹೂಕುಂಡಲಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಹಿತಿ ಮಹಾಂತೇಶ್ ಬಿ ನಿಟ್ಟೂರು ನಿರೂಪಣೆಯೊಂದಿಗೆ ಕವನ ವಾಚಿಸಿದರು.

ಬಳಗದ ಆಹ್ವಾನಿತ ಕವಿ ಮಿತ್ರರಾದ ಶಿವಯೋಗಿ ಹಿರೇಮಠ, ಅರುಂಧತಿ ರಮೇಶ್, ಶಕುಂತಲ, ಮಲ್ಲಮ್ಮ ನಾಗರಾಜ್, ಶೈಲಜಾ, ಎನ್ ಕೆ ಕೊಟ್ರೇಶ್, ಜಗದೀಶ್ ಬೂದಿಹಾಳ, ತಾಜುದ್ದೀನ್ ಬೇತೂರು, ಪ್ರಿಯದರ್ಶಿನಿ, ಸೌಮ್ಯ, ಶಿವಾನಂದಯ್ಯ, ಕುಸುಮ ಲೋಕೇಶ್, ಶೋಭಾ, ವಿಶ್ವನಾಥ್ ಸೇರಿದಂತೆ ಇತರರು ಸಂತಸ, ಸಮೃದ್ಧಿ, ಮಹಿಳೆ ಹಾಗೂ ಮಾನವೀಯ ಮೌಲ್ಯ ಬಿಂಬಿಸುವ ಸ್ವರಚಿತ ಕವನ ವಾಚಿಸಿದರು.

ಪ್ರಾಯೋಜಕರಾದ ಶ್ರೀಮತಿ ಅನ್ನಪೂರ್ಣ ಪಾಟೀಲ್ , ಜಗದೀಶ್ ಮರಕಳ್ಳಿ, ಶಂಕರ್ ಗೌಡ ಪಾಟೀಲ್, ಸೌಜನ್ಯ, ಹಾಗೂ ಅವರ ಕುಟುಂಬ ವರ್ಗ ಮತ್ತು ಬಂಧುಮಿತ್ರರು ಹಾಜರಿದ್ದರು. ಉತ್ತರ ಕರ್ನಾಟಕದ ಸವಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭ; ಕೃಷಿ ಚಟುವಟಿಕೆ ಆರಂಭ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ ಒಂದು ವಾರ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಈ ಜಿಲ್ಲೆಗಳ ಜತೆಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಪ್ರತಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಸಮೇತ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆ ತೀವ್ರತೆ ಹೆಚ್ಚಾಗಲಿದ್ದು, ಇದೇ 20ರ ವರೆಗೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿವೇಳೆ ಹಗುರದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ನಿನ್ನೆ ರಾತ್ರಿ ಶಿವಮೊಗ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು, ಓರ್ವ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ, ದಾವಣಗೆರೆ, ಹಾಸನ, ಕೊಡಗು ಜಿಲ್ಲೆಗಳಲ್ಲಿ ವರ್ಷಧಾರೆ ಉತ್ತಮವಾಗಿದ್ದು, ರೈತರಲ್ಲಿ ಸಂತಸ ಉಂಟುಮಾಡಿದೆ. ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಗೊಂಡಿರುವ ಬಗ್ಗೆ ನಮ್ಮ ಪ್ರತಿನಿಧಿಗಳು ವರದಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಪರಿಹಾರವನ್ನು ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಹಣ ಪಾವತಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.

ಇದರ ಜತೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿ ವರೆಗೆ ರಾಜ್ಯ ಸರ್ಕಾರದ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಹಾವೇರಿ ಜಿಲ್ಲಿಯಲ್ಲಿ ಒಂದು ಲಕ್ಷ 98 ಸಾವಿರದ 455 ರೈತರಿಗೆ 9 ಹಂತದಲ್ಲಿ 37 ಕೋಟಿ 73 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಗದಗ ಜಿಲ್ಲೆಯಲ್ಲಿ ಕಳೆದ ಸಾಲಿನ ಹಂಗಾಮಿನಲ್ಲಿ ಬೆಳೆಹಾನಿಗೆ ಒಂದು ಲಕ್ಷದ 13 ಸಾವಿರದ 328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ.

ರೈತರು ತಮ್ಮ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಸಹಾಯವಾಣಿಯ ಮೂಲಕ ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೇಲ್ಮನೆಯ ಆರು ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಪ್ರಗತಿಯಲ್ಲಿ ; ಕಣದಲ್ಲಿ 103 ಅಭ್ಯರ್ಥಿಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದು ನಾಮಪತ್ರಗಳ ಪರಿಶೀಲನೆ ಕಾರ್ಯ ಆರಂಭಗೊಂಡಿದೆ.

ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜತೆಗೆ, ದೊಡ್ಡ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ 24 ನಾಮಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ 18 ನಾಮಪತ್ರಗಳು ಸಲ್ಲಿಕೆಯಾದರೆ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ 11 ನಾಮಪತ್ರಗಳು, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ 7 ನಾಮಪತ್ರಗಳು, ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರದಿಂದ 12ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 13 ನಾಮಪತ್ರಗಳು ನಿನ್ನೆ ಸಲ್ಲಿಕೆಯಾಗಿದ್ದವು.

ಇದುವರೆಗೆ ಒಟ್ಟು 103 ಅಭ್ಯರ್ಥಿಗಳಿಂದ 156 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ. ಸಂಜೆ ವೇಳೆಗೆ ಅಂತಿಮವಾಗಿ ಕಣದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಾಗುವುದು. ನಾಮಪತ್ರ ವಾಪಸ್ ಪಡೆಯಲು ಇದೇ 20ರಂದು ಕೊನೆಯ ದಿನವಾಗಿದೆ.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಜೂನ್ 3 ರಂದು ಮತದಾನ ನಡೆಯಲಿದೆ. ಮತದಾನದ ಸಂಬಂಧ ಚಿತ್ರದುರ್ಗ ಜಿಲ್ಲೆಯ ಮತದಾನ ಕೇಂದ್ರಗಳ ಪಟ್ಟಿಯನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಿಸಿದರು. ಜಿಲ್ಲೆಯಲ್ಲಿ ಒಟ್ಟು 7 ಮತದಾನ ಕೇಂದ್ರಗಳಿವೆ.

ಮೊಳಕಾಲ್ಮೂರು ತಾಲೂಕಿನ ಶಿಕ್ಷಕರ ಮತದಾರರು ಮೊಳಕಾಲ್ಮೂರು ಪಟ್ಟಣದ ತಾಲೂಕು ಆಡಳಿತ ಕೇಂದ್ರದಲ್ಲಿ ಮತ ಚಲಾಯಿಸಬಹುದು. ಚಳ್ಳಕೆರೆ ನಗರದ ಬಿ.ಎಂ.ಜಿ.ಎಚ್.ಎಸ್ ಶಾಲೆ, ಚಿತ್ರದುರ್ಗ ನಗರದ ಬಾಲಕಿಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ 1, ಕೋಠಡಿ 2 ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಿರಿಯೂರು ನಗರದ ತಾಲೂಕಿನ ಕಚೇರಿಯಲ್ಲಿ, ಹೊಸದುರ್ಗ ಪಟ್ಟಣ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹೊಳಲ್ಕರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮತಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕ ಮತದಾರರು ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 4 ಸಾವಿರದ 615 ಶಿಕ್ಷಕ ಮತದಾರರು ಇದ್ದಾರೆ ಎಂದು ಅವರು ಅಂಕಿ-ಅಂಶ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಶಾಲೆಯಲ್ಲಿನ 7, 8 ಮತ್ತು 9ನೇ ತರಗತಿಗಳಲ್ಲಿನ ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಸತಿ ಶಾಲೆಗಳಲ್ಲಿ 2024-25ನೇ ಸಾಲಿಗೆ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿಯಿರುವ ಸ್ಥಾನಗಳನ್ನು ಜಿಲ್ಲಾ ಹಂತದಲ್ಲಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಸ್ಥಾನಗಳ ವಿವರ ಇಂತಿವೆ

7ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-1, 8 ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-2. ಪ್ರವರ್ಗ-1 ರಲ್ಲಿ ಹೆಣ್ಣು-1, 2ಎ ರಲ್ಲಿ ಹೆಣ್ಣು-1, 3ಬಿ ಯಲ್ಲಿ ಗಂಡು-1 ಹಾಗೂ 9ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-1. ಪ.ವರ್ಗದಲ್ಲಿ ಹೆಣ್ಣು- 5 ಒಟ್ಟು 12 ಸ್ಥಾನಗಳು ಖಾಲಿಯಿರುತ್ತವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಸ್ಥಾನ ಲಭ್ಯವಿರುವುದಿಲ್ಲ.

ಮೇಲ್ಕಾಣಿಸಿದ ಖಾಲಿ ಸ್ಥಾನಗಳನ್ನು ಹೊರತು ಪಡಿಸಿ ಇತರೆ (ಲಿಂಗ, ಜಾತಿ) ಆಸಕ್ತಿಯಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ, ವಸತಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಖಾಲಿಯಾಗಬಹುದಾದ ಸ್ಥಾನಗಳಿಗೆ ಹೆಚ್ಚುವರಿ ಆಯ್ಕೆಪಟ್ಟ(Waiting List) ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದಾಖಲಾತಿಗೆ ಪರಿಗಣಿಸಲಾಗುವುದು.

ಅರ್ಜಿಗಳನ್ನು ಸಮೀಪದ ಮೊರಾರ್ಜಿದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್, ಪ್ರತಿಭಾನ್ವಿತ ಹೆಣ್ಣುಮಕ್ಕಳ ವಸತಿ ಶಾಲೆಗಳಲ್ಲಿ ಮೇ.17 ರಿಂದ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮೇ.31 ರೊಳಗಾಗಿ ಜಂಟಿ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಇಲ್ಲಿ ಕಡ್ಡಾಯವಾಗಿ ಸಲ್ಲಿಸುವುದು. ಜೂನ್ 5ರಂದು ಮೊರಾರ್ಜಿದೇಸಾಯಿ ವಸತಿ ಶಾಲೆ ದೇವರಬೆಳಕೆರೆ, ಹರಿಹರ ತಾಲ್ಲೂಕು ಇಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ.ಕೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending