ನೆಲದನಿ
ತತ್ವಪದಕಾರ ಡಿ.ಬಿ.ಓಬಯ್ಯ ಅವರ ದಾರ್ಶನಿಕ ನೆಲೆಯಲ್ಲಿ ಕನ್ನಡ ನೆಲದ ಸೊಗಡು
ತತ್ವಪದ ಸಾಹಿತ್ಯ ಪ್ರಕಾರವು ಜಾನಪದದ ಒಂದು ಸ್ವತಂತ್ರ ಭಾಗವಾಗಿ ಬೆಳೆದುಬಂದಿದೆ. ತತ್ವಪದಕಾರರು ತಾವು ಕಂಡುಂಡ ನೋವು, ನಲಿವು ಹಾಗೂ ಬದುಕಿನ ಹತಾಶೆಗಳನ್ನು ತಮ್ಮ ಅನುಭಾವಿಕ ದರ್ಶನದ ಮೂಲಕ ಪದಕಟ್ಟಿ ಹಾಡುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ತತ್ವಪದ ಪರಂಪರೆಯು ಉಲುಸಾಗಿ ಬೆಳೆದು ಬಂದಿರುವುದು ಉತ್ತರ ಕರ್ನಾಟಕದಲ್ಲಿ.
ಈ ಭಾಗದಲ್ಲಿ ಇದು ತನ್ನ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ. ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಪ್ರಾಂತ್ಯವು ಅತ್ಯಂತ ಹಿಂದುಳಿದ ಭಾಗವಾಗಿದ್ದು ಸಾಮಾನ್ಯ ಜನತೆ ಹಾಗೂ ದೀನ ದಲಿತರ ಬದುಕು ತುಂಬ ದುಸ್ತರದಲ್ಲಿತ್ತು. ಹಾಗೆಯೇ “14ನೇ ಶತಮಾನದಿಂದ ಕರ್ನಾಟಕದ ಉತ್ತರ ಭಾಗದಲ್ಲಿ ಇಸ್ಲಾಮ್ ಮೂಲದ ಬಹಮನಿ ರಾಜ್ಯವು ಹುಟ್ಟಿಕೊಂಡು ನೆಲೆಯೂರಲು ಸ್ಥಳೀಯ ಜನಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡವು. ಉತ್ತರದಿಂದ ಬಂದ ಸೂಫಿ ಪಂಥದ ಸಂತರು ಜನಸಾಮಾನ್ಯರ ಸಮುದಾಯಗಳಲ್ಲಿ ಬೆರೆತರು. ತಮ್ಮ ಸರಳ ಜೀವನ ಕ್ರಮದಿಂದ ಅನುಭಾವದಿಂದ ಜನರಿಗೆ ಹತ್ತಿರವಾದರು.
ಧರ್ಮ ಹೊರತಾಗಿ ಧಾರ್ಮಿಕ ನೆಲೆಯಿಂದ ತಮ್ಮ ಸರಳ ತತ್ವಗಳನ್ನು ಪ್ರಸಾರ ಮಾಡಿದರು. ಸ್ಥಳೀಯ ಜನಸಮುದಾಯಗಳಲ್ಲಿ ಯೋಗ, ಧ್ಯಾನ ಅನುಭಾವದ ಜೀವನ ಇತ್ತು. ಅವುಗಳ ಜೊತೆಗೆ ಸೂಫಿ ಪಂಥವು ಸೇರಿಕೊಂಡಿತು.” (ಅಮರೇಶ ನುಗಡೋಣ , ತತ್ವಪದ ಸಾಹಿತ್ಯ, ಪು-20) ಹಾಗೆಯೇ ಶರಣ ಚಳವಳಿಯು ರೂಪ ತಳೆದದ್ದು ಕೂಡ ಉತ್ತರ ಕರ್ನಾಟಕದ ಭೌಗೋಳಿಕ ಪರಿಸರದಲ್ಲಿ. ಹೀಗಾಗಿ ಈ ಭಾಗದ ಜನತೆಯ ಸಂವೇದನೆಯನ್ನು ಜಾನಪದ ನೆಲೆಗಟ್ಟಿನಲ್ಲಿ ತತ್ವಪದಕಾರರು ಪದಕಟ್ಟಿ ಹಾಡುತ್ತ ಬಂದಿದ್ದಾರೆ. ಈ ತತ್ವಪದಕಾರರು ತಮ್ಮ ಆರಾಧ್ಯ ದೈವ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಸ್ಥಳೀಯ ಗುರುವಿನ ಮುಖಾಂತರ ದೀಕ್ಷೆ ಪಡೆದು ಇಲ್ಲವೇ ಅವರ ಶಿಷ್ಯನಾಗಿ ತತ್ವಪದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಈ ತತ್ವಪದಕಾರರು ಜನ ಬದುಕಿನ ಒಂದು ಭಾಗವಾಗಿಯೂ ಸ್ವತಂತ್ರ ನೆಲೆಯಲ್ಲಿ ತತ್ವಪದಗಳನ್ನು ರಚಿಸಿಕೊಂಡು ಹಾಡು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇಂತಹ ತತ್ವಪದಕಾರರಲ್ಲಿ ಡಿ.ಬಿ.ಓಬಯ್ಯನವರು ಒಬ್ಬರಾಗಿದ್ದಾರೆ. ಶ್ರೀಯುತರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಚಿನ್ನೋಬನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಇವರು ‘ಕುಡತಿನಿ ಶಂಕ್ರಪ್ಪತಾತ’ನವರ ಅನುಯಾಯಿ ಪಂಥದಿಂದ ದೀಕ್ಷೆಯನ್ನು ಪಡೆದುಕೊಂಡು ತತ್ವಪದ ಪರಂಪರೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ನಮ್ಮ ಸಮಾಜದಲ್ಲಿ ದಲಿತ ತತ್ವಪದಕಾರರನ್ನು ತೃತಿಯ ಜಗತ್ತನ ತತ್ವಪದಕಾರರು ಎಂಬುದಾಗಿ ಗುರುತಿಸಲಾಗಿದೆ. ಇವರು ಸಮಾಜದಲ್ಲಿ ಅತ್ಯಂತ ತಿರಸ್ಕಾರಕ್ಕೆ ಗುರಿಯಾಗಿರುವ ಕಾರಣದಿಂದ ಇವರನ್ನು ತೃತಿಯ ಜಗತ್ತಿನ ತತ್ವಪದಕಾರರೆಂದು ಕರೆಯಲಾಗಿದೆ. ಈ ವರ್ಗದ ಅನುಭಾವಿಗಳು ಜಾತಿ, ಮತ, ಪಂಥಗಳನ್ನು ಮೆಟ್ಟಿನಿಂತು ಸಮಾಜದ ಎಲ್ಲ ವಲಯಗಳನ್ನು ಕುರಿತು ಪದಕಟ್ಟಿ ಹಾಡಿದ್ದಾರೆ. “ತೃತಿಯ ಜಗತ್ತಿನ ತತ್ವಪದಕಾರರು ಇತರೆ ತತ್ವಪದಕಾರರಿಗಿಂತ ಕಡಿಮೆ ಇಲ್ಲವೆಂಬ ಸತ್ವವನ್ನು ಮನನ ಮಾಡಿಕೊಟ್ಟಿದ್ದಾರೆ. ಈ ಹೊತ್ತಿನ ದಲಿತ ಬಂಡಾಯದ ಸ್ಮøತಿ ಪಟಲಗಳಿರಲಿಲ್ಲ. ಆಕ್ರೋಶದ ಅಲೆಗ ಇರಲಿಲ್ಲ. ಕಠೋರತೆಯ ವ್ಯಾಕುಲತೆ ಇಲ್ಲ. ಇವರು ‘ದೇಶಿ’ಯಲ್ಲಿ ಪ್ರಾದೇಶಿಕತೆಯೊಳಗೆ ತಿರಸ್ಕøತ ಜನರ ಜೀವಂತ ಪರದೆಯಲ್ಲಿ ಹೊಸತನ್ನು ಆ ಕಾಲಘಟ್ಟದಲ್ಲಿ ಕಟ್ಟಿ ಹಾಡಿದ್ದಾರೆ. ಇವರ ತತ್ವಪದಗಳ ಒಳಸುಳಿಯೊಳಗೆ ಮುಟ್ಟಿಸಿಕೊಳ್ಳಲಾರದ ಅಳಲು, ದಾಸ್ಯತ್ವ ದಿನನಿತ್ಯದ ಜ್ವಲಂತ ಅಸ್ಪøಶ್ಯತೆ, ಬದುಕಿನ ಜಂಜಾಟ, ಕಂಡುಂಡ ನೋವು, ಅನುಭವಿಸಿದ ಭಯಂಕರವಾದ ಗುಲಾಮತ್ವ, ಶತಶತಮಾನ ಗಳಿಂದಲೂ ಶೋಷಣೆಗೆ ಬಲಿಯಾಗಿ ಬೆಳಕನ್ನು ಕಾಣದ ಪರಿಸರದಲ್ಲಿ ಜೀವಿಸುವ ಜೀವಂತ ಬದುಕಿನ ಬವಣೆಗಳ ಚಿತ್ರಣವನ್ನು ಕೊಟ್ಟಿದ್ದಾರೆ. ಇವರ ವೈಚಾರಿಕ ತಾತ್ವಿಕತೆಯು ತತ್ವಪದಗಳಲ್ಲಿ ಅಡಗಿಕೊಂಡಿದೆ. ಅಲ್ಲಿ ಭ್ರಷ್ಟತೆ, ಮೋಸ, ದಗ, ವಂಚನೆ, ತಲೆಹಿಡುಕತನ, ಅನ್ಯಾಯದ ವಿರುದ್ಧ ಕಿಡಿಕಾರುವುದು ಕಂಡುಬರುತ್ತದೆ.” (ಹೆಬ್ಬಾಲೆ. ಕೆ. ನಾಗೇಶ್, ಬಿಂಬದೊಳಗಣ ಪ್ರಾಣ, ಪು-65) ಇಂತಹ ದಲಿತ ತತ್ವಪದಕಾರರ ಪರಂಪರೆಯ ಮುಂದುವರೆದ ರೂಪವಾಗಿ ಕಾಣುವ ಡಿ.ಬಿ.ಓಬಯ್ಯನವರು ಸಮಾಜಿಕ ತಲ್ಲಣಗಳನ್ನು ಕುರಿತ ತತ್ವಪದಗಳನ್ನು ಹಾಡುತ್ತ ಹಾಗೂ ಸ್ವತಃ ತತ್ವಪದಗಳನ್ನು ರಚಿಸುವ ಮೂಲಕ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇವರು ಹಲವು ಕಡೆಗಳಲ್ಲಿ ನಡೆಸುವ ಯುವಜನೋತ್ಸವ, ಧಾರ್ಮಿಕ ಕಾರ್ಯಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವಾಗಿ ತತ್ವಪದ ಪ್ರಕಾರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಜಾನಪದದ ಶ್ರೀಮಂತ ಸೆಲೆಯಾಗಿರುವ ಚಿನ್ನೋಬನಹಳ್ಳಿ ಗ್ರಾಮಕ್ಕೆ ಇವರ ಈ ಕೊಡುಗೆಯು ಕೂಡ ಮಹತ್ತರವಾದ ಮೈಲಿಗಲ್ಲನ್ನು ನಿರ್ಮಿಸಿದೆ. ಜಾನಪದ ಕ್ಷೇತ್ರದ ಬಗೆಗಿನ ನನ್ನ ವೈಯಕ್ತಿಕ ಆಸಕ್ತಿ ಹಾಗೂ ಕುತುಹಲದಿಂದಾಗಿ ಈ ಗ್ರಾಮದ ದಲಿತ ಸಮುದಾಯದ ಆರಾಧ್ಯ ದೈವವಾದ ಕಂಚೋಬಳೇಶ್ವರ ದೇವರ ಮೇಲೆ ಜಾನಪದ ಹಾಡುಗಾರ್ತಿಯರು ಸೋಬಾನೆ ಪದಗಳನ್ನು ಹಾಡುತ್ತಾರೆಂಬ ಜಾಡುಹಿಡಿದು ಹೋದಾಗ ಈ ಕ್ಷೇತ್ರದಲ್ಲಿ ಪರಿಣ ತಿ ಇರುವ ಡಿ.ಬಿ.ಓಬಯ್ಯನವರ ಹೆಂಡತಿಯಾದ ಮಾರಕ್ಕನವರ ಹೆಸರು ಸೂಚಿಸಿದರು. ಸಂಜೆಯ ವೇಳೆ ಬಿಡುವಿನ ವೇಳೆಯನ್ನು ಗುರುತಿಸಿಕೊಂಡು ಅವರ ಒಂದು ಸಂಚಿಕೆಯ ಧಾರವಾಯಿ ದಿನಕ್ಕೆ ಕನ್ನಹಾಕಿ, ದೇವರ ಮೇಲಿನ ಸೋಬಾನೆ ಹಾಡುಗಳನ್ನು ಹಾಡುವಂತೆ ಕೇಳಿಕೊಂಡೆವು. ಕ್ಷಣಾರ್ಧದಲ್ಲಿ ನಾವು ಮಾರಕ್ಕ ಓಬಯ್ಯ ದಂಪತಿಗಳ ಕುಟುಂಬದ ಸದಸ್ಯರಾಗಿ ಮಾರಕ್ಕನವರ ತಂಡದಿಂದ ದೇವರ ಮೇಲಿನ ಸೋಬಾನೆ ಹಾಡುಗಳನ್ನು ಹಾಡಿಸಿ ಅವುಗಳನ್ನು ದಾಖಲಿಕರಿಸಿಕೊಂಡೆವು.
ಈ ಸಂದರ್ಭಕ್ಕಾಗಲೇ ಮಾರಕ್ಕನ ಗಂಡನಾದ ಡಿ.ಬಿ.ಓಬಯ್ಯನವರು ತತ್ವಪದಕಾರರೆಂಬ ವಿಚಾರ ತಿಳಿದು ಅವರಿಂದ ಕೆಲವು ತತ್ವಪದ ಹಾಡುಗಳನ್ನು ಕೇಳಬೇಕೆಂಬ ಕುತುಹಲ ಉಂಟಾಯಿತು. ಆ ವೇಳೆಗಾಗಲೇ ರಾತ್ರಿ ತುಂಬ ಸಮಯವಾದ ಕಾರಣ ಅಳುಕಿನಿಂದಲೇ ಒಂದಿಷ್ಟು ತತ್ವಪದಗಳನ್ನು ಹಾಡುವಂತೆ ಕೇಳಿಕೊಂಡೆವು. ಆ ವೇಳೆಗಾಗಲೇ ನಮ್ಮನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದ ಅವರು ತುಂಬು ಮನಸ್ಸಿನಿಂದ ಹಾಡುವುದಕ್ಕೆ ಮುಂದಾದರು. ಅಂದು ಓಬಯ್ಯನವರು ಹಾಡಿದ ತತ್ವಪದ ಹಾಡುಗಳಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಸಾರುವ ‘ಚೆಲುವ ಕನ್ನಡ’ ನಾಡು ಎಂಬ ತತ್ವಪದವು ಪ್ರಾದೇಶಿಕ ಹಿರಿಮೆಯನ್ನು ಸಾರುವ ಬಗೆಯನ್ನು ಕುರಿತು ಪ್ರಸ್ತುತ ಲೇಖನದ ಅಡಿಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಈ ಕನ್ನಡ ನಾಡಿನ ಹಿರಿಮೆಯನ್ನು ಸಾರುವ ತತ್ವಪದವು ಈ ಮುಂದಿನಂತಿದೆ.
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ನಾಯಕನಟ್ಟಿ ತಿಪ್ಪೇಸ್ವಾಮಿ | ಕಾನಮಡುಗು ಶಿವಶರಣೇಶ ||
ಉಜ್ಜನಿ ಮರುಳಸಿದ್ಧೇಶ ಅವತರಿಸಿದ ಕನ್ನಡನಾಡು ||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಕುಡತಿನಿ ಶಂಕ್ರಪ್ಪ ತಾತ | ಕೊಟ್ಟೂರು ಗುರುಬಸವೇಶ ||
ತಿಪ್ಪಗಿರಿ ಬೊಂ ಬೊಂ ತಾತ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ತಿರುಪತಿ ವೆಂಕಟೇಶ | ರಾಯದುರ್ಗ ಶೇಕಬ್ದುಲ್ಲ ತಾತ ||
ಪಾವಗಡದ ಶನಿಮಾತ್ಮ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಶೃಗೇರಿ ಶಾರದಾಂಬ | ಕೊಲ್ಲೂರು ಮೂಕಾಂಭಿಕೆ ||
ಬೆಟ್ಟದ ಚಾಮುಂಡೇಶ್ವರಿ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಓಂ ಶಿವಾಯಃ ಓಂ ನಮಃ ಶಿವಾಯಃ ||
ಓಂ ಶಿವಾಯಃ ಓಂ ನಮಃ ಶಿವಾಯಃ || (ಡಿ.ಬಿ.ಓಬಯ್ಯ, ವಯಸ್ಸು 70, ಚಿಕ್ಕೋಬನಹಳ್ಳಿ, ಮೊಳಕಾಲ್ಮೂರು).
ತತ್ವಪದಕಾರರು ಸ್ಥಾಪಿತ ನೆಲೆಯಲ್ಲಿ ನಿಂತು ಕನಿಷ್ಟ ಭಾವನೆಗಳನ್ನು ಸೃಷ್ಟಿಮಾಡುವುದಿಲ್ಲ. ಸರ್ವರನ್ನು ಸಮಾನ ನೆಲೆಯಲ್ಲಿಯೇ ಗ್ರಹಿಸುವ ಅನುಭಾವಿಕ ಮಾರ್ಗವನ್ನು ಅನುಸರಿಸಿಕೊಂಡು ಬಂದಿದ್ದಾರೆ. “ಈ ತತ್ವಪದಕಾರರಿಗೆ ಸಮಾಜದಲ್ಲಿರುವ ವಿವಿಧ ವರ್ಗಗಳ ದೈವಗಳ ಮೇಲೆ ದ್ವೇಷವಾಗಲಿ, ವಿರೋಧವಾಗಲಿ ಕಂಡುಬರುವುದಿಲ್ಲ. ಎಲ್ಲ ದೇವಕ್ಕೂ ವಿಧೇಯರಾಗಿ ಅವುಗಳನ್ನು ಸಮೀಕರಿಸಿಕೊಂಡು ಬಂದಿದ್ದಾರೆ. ತತ್ವಪದಕಾರರು ತಮ್ಮ ಅನುಭಾವಿಕತೆಯಿಂದ ‘ಮೇಲು-ಕೀಳು’ಗಳ ನಡುವೆ ಬೆಳೆದಿರುವ ಮೌಢ್ಯತೆಯನ್ನು ಬಯಲಿಗೆ ಹಾಕುವ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಈ ತತ್ವಪದಕಾರರು ವಸಾಹತುಶಾಹಿ ಸೃಷ್ಟಿಸಿರುವ ಮತ್ತು ಸೃಷ್ಟಿಸುತ್ತಿರುವ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡುವಂತೆ, ಸಮಾಜದಲ್ಲಿ ಪುರೋಹಿತಶಾಹಿಯು ಸೃಷ್ಟಿಸಿರುವ ಜಾತಿಯತೆಯ ಕಟ್ಟಳೆಗಳಿಗೂ ತಮ್ಮ ಪ್ರತಿಕ್ರಿಯೆ ನೀಡಿರುವುದನ್ನು ದಲಿತ ತತ್ವಪದಕಾರರಲ್ಲಿ ಗುರುತಿಸಬಹುದಾಗಿದೆ.” (ಕೆ. ಎ ಓಬಳೇಶ್, ಅಸ್ಮಿತೆ ಮತ್ತು ಆತ್ಮವಿಮರ್ಶೆ, ಪು-112, 113) ಅದೇ ರೀತಿ ಇಲ್ಲಿ ಓಬಯ್ಯನವರು ಹಾಡಿರುವ ಕನ್ನಡ ನಾಡು ನುಡಿಯೊಂದಿಗೆ ಜನಮನದಲ್ಲಿ ಬೆರೆತುಹೋಗಿರುವ ವಿವಿಧ ವರ್ಗವನ್ನು ಪ್ರತಿನಿಧಿಸುವ ದೈವಗಳು ಹಾಗೂ ಅವಧೂತರನ್ನು ಅಖಂಡ ಕರ್ನಾಟಕದ ಭಾಗವಾಗಿ ಬೆಸೆಯುವ ವಿಶಿಷ್ಟ ಬಗೆಯೊಂದು ಇಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ಅಸಮಾನತೆಯನ್ನು ಧಾರ್ಮಿಕ ನೆಲೆಯಲ್ಲಿ ಕಾಪಾಡಿಕೊಂಡು ಬಂದಿರುವ ಪುರೋಹಿತಶಾಹಿಗೆ ಲೋಕವನ್ನು ಒಡೆದು ನೋಡುವ ಗುಣ ಪರಂಪರಾಗತವಾಗಿ ಬೆಳೆದುಬಂದಿದೆ. ಇಲ್ಲಿ ಸಮಾನತೆ, ಸಹಕಾರ, ಸಹಭಾಳ್ವೆಯಂತಹ ಉದಾರವಾದಿ ಮಾನವೀಯ ತತ್ವಗಳಿಗೆ ಅವಕಾಶವಿಲ್ಲ. ಈ ಶಿಷ್ಟ ಪರಂಪರೆಯವರಿಗೆ ಮಡಿ ಮೈಲಿಗೆಯನ್ನು ಕಾಪಾಡಿಕೊಳ್ಳುವುದೆ ಸಾಮಾಜಿಕ ಮೌಲ್ಯ ಹಾಗೂ ಘನತೆಯ ಪ್ರಶ್ನೆಯಾಗಿದೆ. ಆದರೆ ಲೋಕದ ಪ್ರತಿಯೊಂದು ಜೀವ ಸಂಕುಲವನ್ನು ಕಾರುಣ್ಯದ ನೆಲೆಯಲ್ಲಿ ನೋಡುವ ಗುಣವು ಮೌಖಿಕ ಪರಂಪರೆಯ ಜಾನಪದರಲ್ಲಿ ಕಂಡುಬರುತ್ತದೆ. ಇಲ್ಲಿ ತತ್ವಪದಕಾರರು ಚೆಲುವ ಕನ್ನಡನಾಡಿನ ಅಡಿಯಲ್ಲಿ ಆರಾಧನ ನೆಲೆಯಲ್ಲಿ ಪದಕಟ್ಟಿ ಹಾಡಿರುವ ದೈವಗಳು ಹಾಗೂ ಸಾಂಸ್ಕøತಿಕ ನಾಯಕರುಗಳು ವಿವಿಧ ಸಮುದಾಯಗಳಿಂದ ಬಂದವರಾದರು ಸಹ ಇವರನ್ನು ತಮ್ಮ ಬದುಕಿನ ಬಂದು ಭಾಗವಾಗಿ ಸ್ವೀಕರಿಸಿಕೊಂಡು ಬಂದಿದ್ದಾರೆ. ಇಲ್ಲಿ ಚಿತ್ರತವಾಗಿರುವ ಸ್ಥಳೀಯ ಆರಾಧ್ಯ ದೈವಗಳಾದ ನಾಯಕನಹಟ್ಟಿ ತಿಪ್ಪೇಸ್ವಾಮಿ, ಕಾನಮಡುಗು ಶಿವಶರಣ, ಉಜ್ಜನಿ ಮರುಳಸಿದ್ಧ, ಕುಡತಿನಿ ಶಂಕ್ರಪ್ಪ ತಾತ, ಕೊಟ್ಟೂರು ಗುರುಬಸವೇಶ, ತಿಪ್ಪಗಿರಿ ಬೊಂ ಬೊಂ ತಾತ, ರಾಯದುರ್ಗ ಶೇಕಬ್ದುಲ್ಲ ತಾತ ಇವರುಗಳು ಸಮಾಜ ಸುಧಾರಣೆಗಾಗಿ ಜನ್ಮವೆತ್ತ ಬಂದ ಅವಧೂತರಾಗಿದ್ದಾರೆ. ಇವರೆಲ್ಲರೂ ಸಮಸಮಾಜದ ಕನಸೊತ್ತು ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇವರಿಗೆ ‘ಮೇಲು-ಕೀಳು’ ಎಂಬ ಎಂಬ ಯಾವುದೇ ತರತಮ ಭಾವವಿಲ್ಲ. ಶರಣ ಚಳವಳಿಯ ಆಶಯಗಳನ್ನು ಪುನರ್ ಸ್ಥಾಪಿಸುವ ನೆಲೆಗಟ್ಟಿನಲ್ಲಿ ಇವರೆಲ್ಲ ತಮ್ಮ ಹೋರಾಟವನ್ನು ಕೈಗೊಂಡವರು. ಈ ಮೇಲೆ ಉಲ್ಲೇಖಿಸಿರುವ ಕ್ರಾಂತಿಪುರುಷರು ವಿವಿಧ ಜಾತಿ, ಸಮುದಾಯದಿಂದ ಬಂದವರಾದರು ಸಹ ಇವರ ಹೋರಾಟದ ಗುರಿ ಮಾತ್ರ ಜಾತಿ, ಮತ, ಪಂಥವನ್ನು ಮೀರಿದ ಸಮಾನತೆಯನ್ನು ಪ್ರತಿಪಾದಿಸುವುದಾಗಿತ್ತು. ಆದರೆ ತಳವರ್ಗಗಳ ಪ್ರಗತಿಗಾಗಿ ವಿವಿಧ ವರ್ಗಗಳಲ್ಲಿ ಜನ್ಮವೆತ್ತಿ ಬಂದ ಇವರನ್ನು ಮೂಲಭೂತವಾದಿಗಳು ಆಯಾ ಜಾತಿ, ಮತ, ಪಂಥಗಳ ಪ್ರತಿಮೆಗಳಾಗಿಸಿ ಮೂಲಭೂತವಾದವನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಆದರೆ ತಳವರ್ಗಗಳ ಪರವಾಗಿ ತುಡಿದ ಈ ಶಕ್ತಿಗಳನ್ನು ದಲಿತ ಹಾಗೂ ತಳ ವರ್ಗಗಳ ತತ್ವಪದಕಾರರು ಮಾತ್ರ ಅವರ ಮೂಲ ಆಶಯಗಳ ಅಡಿಯಲ್ಲಿ ಇವರನ್ನು ಆಶ್ರಯಿಸಿ ಮುನ್ನಡೆಯುತ್ತಿದ್ದಾರೆ. ಹಾಗೆಯೇ ವೈದಿಕರ ಪಿತ್ರಾರ್ಜಿತ ಆಸ್ತಿಯೆಂಬಂತೆ ಕಂಡುಬರುವ ತಿರುಪತಿ ವೆಂಕಟೇಶ, ಶೃಂಗೇರಿ ಶಾರದೆ, ಕೊಲ್ಲೂರು ಮೂಕಾಂಬಿಕೆ ಹಾಗೂ ಮೈಸೂರು ಬೆಟ್ಟದ ಚಾಮುಂಡಿಯನ್ನು ದೈವಿಕ ನೆಲೆಯಲ್ಲಿ ಆರಾಧಿಸುತ್ತ ಬಂದ ನಮ್ಮ ತತ್ವಪದಕಾರರು ಇವರನ್ನು ಕನ್ನಡ ನಾಡಿನ ಹಿರಿಮೆ ಗರಿಮೆಯ ಪ್ರತೀಕವಾಗಿಸುತ್ತಾರೆ. ಜಾತಿ, ಮತ, ಭೇದವನ್ನು ಮರೆತು ಇವರು ಅಖಂಡ ನೆಲೆಯಲ್ಲಿ ಸಮಾಜವನ್ನು ಗ್ರಹಿಸುವ ವಿಶ್ವಮಾನವರಾಗಿ ಕಂಡುಬರುತ್ತಾರೆ. ಜೀವಸಂಕುಲಕ್ಕೆ ಪ್ರಧಾನತೆಯನ್ನು ಕೊಡುವ ತತ್ವಪದಕಾರರು ಜೀವ ಕಾರಣ್ಯದ ಸೆಲೆಯನ್ನು ತಮ್ಮಲ್ಲಿ ಗರ್ಭಿಕರಿಸಿಕೊಂಡು ಬಂದಿದ್ದಾರೆ.
ಮಾನವ ಸಮಾಜದಲ್ಲಿ ‘ಮೇಲು-ಕೀಳು’ ಎಂಬ ತರತಮ ಭಾವನೆಗಳನ್ನು ಸೃಷ್ಟಿಸಿಕೊಂಡು ಬಂದಿರುವ ವೈದಿಕತೆಯ ಸ್ಥಾಪಿತ ಮೌಲ್ಯಗಳಿಗೆ ಪ್ರತಿರೋಧದ ನೆಲೆಯಲ್ಲಿ ಪರ್ಯಾಯವಾದ ಜೀವಪರ ಮಾರ್ಗವನ್ನು ರೂಪಿಸಿಕೊಂಡು ಬಂದ ಕೀರ್ತಿಯು ನಮ್ಮ ತಳವರ್ಗದ ತತ್ವಪದಕಾರರಿಗೆ ಸಲ್ಲುತ್ತದೆ. ಇವರು ಸಮಾಜದ ತರತಮ ಭಾವಗಳಿಂದ ನೊಂದವರು. ಈ ನೋವಿಗೆ ಪ್ರತಿಯಾಗಿ ಅವರ ಆಂತರ್ಯದಲ್ಲಿ ಒಡಮೂಡಿದ ಜೀವಕಾರುಣ್ಯದ ಸೆಲೆಗಳೆ ತತ್ವಪದದ ನೆಲೆಯಲ್ಲಿ ಪದಗಳಾಗಿ ಹೊರಹೊಮ್ಮಿವೆ. ವೈದಿಕತೆಯು ಯಾವುದನ್ನು ತುಚ್ಚಿಕರಿಸುತ್ತ ಬಂದಿತೊ ಅದರಲ್ಲಿಯೇ ಸತ್ವ ಹಾಗೂ ಮೌಲ್ಯಗಳನ್ನು ಗುರುತಿಸಿದವರು ಈ ತತ್ವಪದಕಾರರು. ಹೀಗಾಗಿಯೇ ವೈದಿಕತೆಯು ಒಡೆದು ನೋಡುವ ದೇವಾನುದೇವತೆಗಳನ್ನು ಅಖಂಡ ನಾಡಿನ ಭಾಗವಾಗಿ ಗುರುತಿಸುವ ಕೀರ್ತಿಯು ನಮ್ಮ ತತ್ವಪದಕಾರರಿಗೆ ಸಲ್ಲುತ್ತದೆ. ತಮ್ಮ ಸ್ಥಳೀಯ ಪರಿಸರದಲ್ಲಿ ಕಂಡುಬರುವ ಅವಧೂತರಿಂದ ದೀಕ್ಷೆ ಪಡೆದು ಗುರುವಿನ ಮಾರ್ಗದಲ್ಲಿ ಮುನ್ನಡೆಯುತ್ತ ಬಂದಿರುವ ಈ ತತ್ವಪದಕಾರರು ಸಮಕಾಲೀನ ಸಮಾಜದ ಡಂಭಾಚಾರಗಳನ್ನು ವಿಮರ್ಶೆಗೊಳಪಡಿಸುತ್ತ ಮುನ್ನಡೆಯುತ್ತಿದ್ದಾರೆ.
ಇಂತಹ ಅವಧೂತ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಡಿ.ಬಿ.ಓಬಯ್ಯ ನವರ ತತ್ವಪದ ಹಾಡಿನಲ್ಲಿ ಕನ್ನಡನಾಡಿನ ನಾಡು ನುಡಿಯ ಬಗೆಗೆ ಪ್ರಶಂಸೆಯಿದೆ. ಇದರೊಂದಿಗೆ ಕನ್ನಡನಾಡಿನಲ್ಲಿ ನೆಲೆಸಿರುವ ದೇವತೆಗಳೆಲ್ಲ ಒಂದೆ ಎಂಬ ನೀತಿ ತತ್ವವಿದೆ. ಹೀಗಾಗಿ ಜನಪದರ ಬದುಕಲ್ಲಿ ಬೆರೆತು ಹೋಗಿರುವ ತತ್ವಪದ ಸಾಹಿತ್ಯದಲ್ಲಿ ಅಡಗಿರುವ ವಿಶ್ವದೃಷ್ಟಿಯನ್ನು ಎತ್ತಿಹಿಡಿಯುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ. ರಾಷ್ಟ್ರೀಯತೆಯನ್ನು ರಾಜಕೀಯ ಅಜೆಂಡವಾಗಿ ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆಯನ್ನು ಪೂರೈಸಿಕೊಳ್ಳವವರು ಒಂದು ಕಡೆಯಲ್ಲಿ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಆದರೆ ನಿಜವಾದ ರಾಷ್ಟ್ರೀಯತೆ, ನಾಡು ನುಡಿಯ ಬಗೆಗಿನ ಅಭಿಮಾನವನ್ನು ಹೊಂದಿರುವ ವರ್ಗವೊಂದು ಎಲೆ ಮರೆಯ ಕಾಯಿಯಂತಿದ್ದು, ಮಾನವತ್ವದ ನೆಲೆಯಲ್ಲಿ ಸಮಾಜವನ್ನು ನಿರ್ಮಿಸುವ ಆಶಯವೊತ್ತು ಮುನ್ನಡೆಯುತ್ತಿದೆ. ನಮ್ಮ ಮುಂದಿರುವ ಈ ಎರಡು ವರ್ಗಗಳಲ್ಲಿ ಯಾವುದು ಮಹತ್ವದ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ನಾವು ಆಲೋಚಿಸಬೇಕಿದೆ, ಅದನ್ನು ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಶಾಂತಿಯುತ ಸಮಾನತೆಯ ಸಮಾಜವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ.

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243




