Connect with us

ದಿನದ ಸುದ್ದಿ

ಸಹಾಯಕ ಪ್ರಾಧ್ಯಾಪಕರ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ: ಸಕಲ ಸಿದ್ದತೆಗೆ ಸೂಚನೆ

Published

on

ಸುದ್ದಿದಿನ,ಶಿವಮೊಗ್ಗ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಾ.12 ರಿಂದ 16 ರವರೆಗೆ ಜಿಲ್ಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಇಂದು ಉನ್ನತ ಶಿಕ್ಷಣ ಸಚಿವರಾದ ಸಿ.ಅಶ್ವಥ್‍ನಾರಾಯಣರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಿಂದ ನಡೆದ ವಿಡಿಯೋ ಕಾನ್ಫರೆನ್ಸ್ ಬಳಿಕ ಜಿಲ್ಲಾಡಳಿತ ಕಚೇರಿಯಲ್ಲಿ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸುವ ಕುರಿತು ಸೂಚನೆಗಳನ್ನು ನೀಡಿದರು.

ನಗರದ ಒಟ್ಟು 09 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯ ಪರೀಕ್ಷಾ ಅಧಿವೇಶನಗಳು ನಡೆಯಲಿವೆ. ಮಾ.12 ಮತ್ತು 13 ರಂದು ಎರಡೂ ಅಧಿವೇಶನ ಸೇರಿ ಒಟ್ಟು 3840 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮಾ.14 ರಂದು ಒಟ್ಟು 1512, ಮಾ.15 ರಂದು ಒಟ್ಟು 1920 ಹಾಗೂ ಮಾ.16 ರಂದು ಒಟ್ಟು 456 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಪ್ರತಿ ಕೇಂದ್ರಕ್ಕೆ ಒಬ್ಬ ವೀಕ್ಷಕರಂತೆ ಹಾಗೂ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಬಂಡಲ್‍ಗಳನ್ನು ಸಂಬಂಧಪಟ್ಟ 09 ಪರೀಕ್ಷಾ ಕೇಂದ್ರಗಳಿಗೆ ನೀಡಲು ಎರಡು ತ್ರಿಸದಸ್ಯ ಸಮಿತಿ ರಚಿಸಲಾಗಿದೆ ಎಂದ ಅವರು ಪ್ರತಿ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಓರ್ವ ಪುರುಷ ಮತ್ತು ಮಹಿಳಾ ಪೇದೆ ನೇಮಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ಕೇಂದ್ರಗಳಲ್ಲಿ ಸಿಸಿ ಟಿವಿ ಇದ್ದು, ಗೋಡೆ ಗಡಿಯಾರದ ವ್ಯವಸ್ಥೆ, ಶುದ್ದ ಕುಡಿಯುವ ನೀರು, ಉತ್ತಮ ಆಸನ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು ಕೇಂದ್ರದ ಮುಖ್ಯಸ್ಥರು, ವೀಕ್ಷಕರು, ಮಾರ್ಗಾಧಿಕಾರಿಗಳು, ಇನ್‍ವಿಜಿಲೇಟರ್ ಇತ್ಯಾಧಿ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ವಿವರಿಸಿ, ಹೆಚ್ಚಿನ ಕಾಳಜಿ ವಹಿಸಿ ಪರೀಕ್ಷಾ ಕರ್ತವ್ಯವನ್ನು ನಿರ್ವಹಿಸಬೇಕೆಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು 144 ಸೆಕ್ಷನ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಸಚಿವರ ಸಭೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವರಾದ ಸಿ.ಅಶ್ವಥ್‍ನಾರಾಯಣರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ(ವಿಡಿಯೊ ಕಾನ್ಫರೆನ್ಸ್) ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪಾಲ್ಗೊಂಡು ಮಾತನಾಡಿ, ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯವಾದ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಿದ್ದತೆ ಕುರಿತು ವಿವರಣೆ ನೀಡಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿವೈಎಸ್‍ಪಿ ಪ್ರಶಾಂತ್ ಮುನ್ನೊಳಿ, ಡಿಡಿಪಿಯು ನಾಗರಾಜ್ ಕಾಗಲ್ಕರ್, ಜಿಲ್ಲಾ ಖಜಾನಾಧಿಕಾರಿ ಎಂ.ಎಸ್. ಸಾವಿತ್ರಿ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಡಿನೆಲ್ಲೆಡೆ ಆಯುಧಪೂಜೆ ಸಡಗರ; ಮೈಸೂರು ಅರಮನೆಯಲ್ಲಿ ಪಟ್ಟದ ಹಸು, ಆನೆ, ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ

Published

on

ಸುದ್ದಿದಿನಡೆಸ್ಕ್:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನವಾದ ಇಂದು ಸಾಂಪ್ರದಾಯಿಕವಾಗಿ ಆಯುಧಪೂಜೆ ನೆರವೇರಿತು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧಪೂಜೆ ನೆರವೇರಿಸಿದರು.

ಅರಮನೆ ಮುಂಭಾಗದಲ್ಲಿ ಪಟ್ಟದ ಹಸು, ಆನೆ, ಕುದುರೆ, ಒಂಟೆಗಳಿಗೆ, ಪಲ್ಲಕ್ಕಿ ಹಾಗೂ ರಾಜರ ಕಾರುಗಳಿಗೆ ಪೂಜೆ ಸಲ್ಲಿಸಿದರು. ಅರಮನೆಯ ಪೂರ್ವಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೂ ಪೂಜೆ ನೆರವೇರಿಸಲಾಯಿತು. ದಸರಾ ವೈಭವ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದಾರೆ.

ರಾಜ್ಯಾದ್ಯಂತ ನವರಾತ್ರಿಯ 9ನೇ ದಿನವಾದ ಇಂದು ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ ಆಯುಧಪೂಜೆ ಮತ್ತು ದಸರಾ ಮಹೋತ್ಸವದ ಸಂಭ್ರಮ ಇಮ್ಮಡಿಗೊಂಡಿದೆ. ಆಯುಧ ಪೂಜೆಯ ಭಾಗವಾಗಿ ಬೆಳಿಗ್ಗೆಯಿಂದ ಜನರು ವಾಹನಗಳನ್ನು ತೊಳೆದು ಹೂವು, ಬಾಳೆಕಂದುಗಳನ್ನು ಕಟ್ಟಿ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಆಯುಧಪೂಜೆಯನ್ನು ಶ್ರಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ತಮ್ಮ ವಾಹನಗಳಿಗೆ ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಕೋಲಾರ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಯುಧ ಪೂಜೆ ಹಿನ್ನಲೆ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಆಯುಧಪೂಜೆ ಸಂಭ್ರಮ ಇಮ್ಮಡಿಗೊಂಡಿದ್ದು, ಕಾಫಿ ತೋಟಗಳಲ್ಲಿ ಮಾಲೀಕರು ತೋಟದ ಯಂತ್ರೋಪಕರಣಗಳನ್ನು ಶೃಂಗರಿಸಿ ಪೂಜೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹಾವೇರಿ ಜಿಲ್ಲೆಯಾದ್ಯಂತ ಆಯುಧ ಪೂಜೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉದ್ಯಮಿ ರತನ್ ಟಾಟಾ ನಿಧನ; ಗಣ್ಯರಿಂದ ಸಂತಾಪ

Published

on

ಸುದ್ದಿದಿನಡೆಸ್ಕ್:ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮತ್ತು ಉದ್ಯಮಿಗಳು ಸಂತಾಪ ಸೂಚಿಸಿದ್ದಾರೆ.

ಟಾಟಾ ಸಮೂಹ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಅವರು, ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಬೆಳಗ್ಗೆ ಅವರ ಆರೋಗ್ಯಸ್ಥಿತಿಯಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಕಾರಣ, ಅವರನ್ನು ಮುಂಬೈಗೆ ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅವರು ನಿಧನರಾದರು.

ರತನ್ ಟಾಟಾ ಅವರ ನಿಧನದಿಂದ, ಭಾರತವು ಸಾಂಸ್ಥಿಕ ಬೆಳವಣಿಗೆಯನ್ನು ರಾಷ್ಟ್ರ ನಿರ್ಮಾಣದೊಂದಿಗೆ ಮತ್ತು ಶ್ರೇಷ್ಠತೆಯನ್ನು ನೀತಿಯೊಂದಿಗೆ ಸಂಯೋಜಿಸಿದ ವ್ಯಕ್ತಿಯನ್ನು ಕಳೆದುಕೊಂಡಿದೆ. ರತನ್ ಟಾಟಾ ಅವರು ಶ್ರೇಷ್ಠ ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ಹೆಚ್ಚು ಪ್ರಭಾವಶಾಲಿ ಜಾಗತಿಕ ಉಪಸ್ಥಿತಿಯನ್ನು ನೀಡಿದರು. ಅನುಭವಿ ವೃತ್ತಿಪರರು ಹಾಗೂ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ರತನ್ ಟಾಟಾ ಅವರ ನಿಧನದಿಂದಾಗಿ ತೀವ್ರ ದುಃಖವಾಗಿದೆ. ಅವರು ದೊಡ್ಡ ಕನಸು ಕಾಣುವ ಮತ್ತು ಸಮಾಜಕ್ಕೆ ಮರಳಿ ನೀಡುವ ಉತ್ಸಾಹವನ್ನು ಹೊಂದಿದ್ದರು. ದೇಶದಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಪ್ರಾಣಿ ಕಲ್ಯಾಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಟಾಟಾ ಸಮೂಹ ಮುಂಚೂಣಿಯಲ್ಲಿದೆ. ರತನ್ ಟಾಟಾ ಅವರು ಅಸಾಧಾರಣ ಮತ್ತು ದೂರದೃಷ್ಟಿಯ ಉದ್ಯಮಿಯಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಅ.12ರಂದು ಮದ್ಯ ಮಾರಾಟ ನಿಷೇಧ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಅಕ್ಟೋಬರ್ 11 ಮತ್ತು 12 ರಂದು ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬ ಆಚರಿಸಲಿದ್ದು. ಈ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 12 ರ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಮದ್ಯದಂಗಡಿ ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending