ಅಂತರಂಗ
ಭಾವ ಸಂಗಮ ಸಮಾಗಮ : ನೆನಪೇ ಸಂಭ್ರಮ
ಅಬ್ಬಾ ಪ್ರತಿದಿನದ ಜಂಜಾಟ, ಯಾಂತ್ರಿಕ ಜೀವನ, ಎಲ್ಲವನ್ನೂ ಮರೆತು ಕುಟುಂಬದವರೆಲ್ಲರೂ ಒಂದಾಗುವ ಸೇರುವ ಸಮಾಗಮವೆ, ಸಾಹಿತ್ಯ ಸಮಾಗಮ. ಈ ಸಂಗಮಕ್ಕೆ ನನ್ನನ್ನೂ ರಾಜೇಂದ್ರ ಪಾಟೀಲ್ ಭಾವಸಂಗಮದ ಸಂಚಾಲಕರು ಮೂರು ತಿಂಗಳ ಹಿಂದೆ ಸೇರಿಸಿದರು. ಮೊದಮೊದಲು ಸಂಗಮಕ್ಕೆ ಸೇರಿದಾಗ ಕೊಂಚ ಅಳುಕಿತ್ತು.
ಏಕೆಂದರೆ ಈ ಸಂಗಮದಲ್ಲಿ ಎಲ್ಲರೂ ಪದಗಳ ಜೊತೆಗೆ ಆಟವಾಡುವ ಸಾಹಿತಿಗಳು, ಕಲ್ಪನಾ ಲೋಕದಲ್ಲಿ ಮುಳುಗಿರುವ ಕವಿ, ಕವಯಿತ್ರಿಯರು, ತಪ್ಪುಗಳನ್ನು ತಿದ್ದಿ, ಕಲ್ಲನ್ನು ಶಿಲ್ಪಿ ಮಾಡುವ ಶಿಲ್ಪಿಕಾರಂತಿರುವ ಶಿಕ್ಷಕ-ಶಿಕ್ಷಕಿಯರು, ನ್ಯಾಯ ದೇವತೆಯ ಪುತ್ರರು, ಸದಾಕಾಲ ನ್ಯಾಯವನ್ನು ಎತ್ತಿ ಹಿಡಿಯುವಂತಹ ವಕೀಲರು, ಶಿಸ್ತಿನ ಸೀಪಾಯಿಗಳಂತೆ ಸಮವಸ್ತ್ರ ತೊಟ್ಟು ಕೈಯಲ್ಲೊಂದು ಲಾಠಿ ಹಿಡಿಯುವ ಆರಕ್ಷಕರು, ಸಮಾಜವನ್ನು ಒಂದು ನಿರ್ದಿಷ್ಟ ದಾರಿಯತ್ತ ಕೈಹಿಡಿದು ಸದಾಕಾಲ ಸಮಾಜದ ಅಭಿವದ್ಧಿಗಾಗಿ ದುಡಿಯುವ ವಿವಿಧ ರಾಜ್ಯಮಟ್ಟ, ಜೀಲ್ಲಾಮಟ್ಟ, ಪ್ರಾದೇಶಿಕ ಮಟ್ಟದ ಪತ್ರಿಕೆಗಳ ಹಿರಿಯ ಪರ್ತಕರ್ತರು, ಆಕಾಶವಾಣಿ ಹಾಗೂ ದೂರವಾಣಿಯ ವರದಿಗಾರರು, ಸಮಾಜದ ಅಭಿವೃದ್ಧಿಯಲ್ಲಿ ತಮ್ಮದೆ ರಿತಿಯಲ್ಲಿ ವಿಶಾಲವಾದ ಜಗತ್ತಿಗೆ ಕಾಲಿಡುತ್ತಿರುವ ಭಾವಿ ಪತ್ರಕರ್ತರು, ಹೀಗೆ ಅನೇಕ ವಿಭಿನ್ನ ಮನಸ್ಸುಗಳ ಸಮಾಗಮವೆ ಈ ಭಾವ ಸಂಗಮವಾಗಿತ್ತು.
‘ಭಾವ ಸಂಗಮ’ ವಾಟ್ಸ್ ಗ್ರೂಪ್ ಸಂಯೋಜನೆಗೆ ಕಾರಣ ಹಾಗೂ ಮೂಲ
ಕನ್ನಡ ಸಾಹಿತ್ಯ, ಸಂಗೀತ, ನಾಟಕ, ಕಲೆ ಇತ್ಯಾದಿ ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿಯುಳ್ಳವರನ್ನು, ಪ್ರತಿಭಾನ್ವಿತರನ್ನು, ಉದಯೋನ್ಮುಖರನ್ನು, ಹಾಗೂ ಸಹೃದಯದವರನ್ನು ಎಲ್ಲರನ್ನು ಒಂದೇ ಕಡೆಗೆ ಸೇರಿಸುವುದಾಗಿದೆ. ಇವರೆಲ್ಲರ ಸಾಹಿತಿಕ ಬರವಣಿಗೆಗಳನ್ನು ಪ್ರತಿಭೆಗಳನ್ನು ಎಲ್ಲರೂ ನೋಡಿ ಆನಂದಿಸಬೇಕು ಎಂದುಕೊಂಡೆ. ಹಿರಿಯರು ಆಶೀರ್ವಾದಿಸಬೇಕು, ಕಿರಿಯರು ತಮ್ಮ ಪ್ರತಿಭೆಯ ಪ್ರದರ್ಶನ ಮಾಡಬೇಕು. ಈ ಎಲ್ಲಾ ಉದ್ದೇಶದಿಂದ ಭಾವ ಸಂಗಮ ಆರಂಭಿಸಲಾಗಿದೆ ಎಂದು ಭಾವಸಂಗಮದ ವಾಟ್ಸ್ಆ್ಯಪ್ ಗ್ರೂಪ್‍ನ ಸಂಚಾಲಕರಾದ ರಾಜೇಂದ್ರ ಪಾಟೀಲ ಅವರು ತಿಳಿಸುತ್ತಾರೆ.
ಇದು ಮೂಲತಃ ಸಾಮಾಜಿಕ ಜಾಲತಾಣವಾದ ಫೇಸ್ಬುಕ್‍ನಲ್ಲಿಯೇ 2009ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಆಗ ಇದರ ಕ್ರಯಾ ಚಟುವಟಿಕೆಗಳು ಅಷ್ಟೊಂದು ತಿವ್ರವಾಗಿರಲಿಲ್ಲ. ನಂತರ 2015ರ ಜುಲೈ 10ರಂದು ನನ್ನ ಕೈಗೆ ಸ್ಮಾರ್ಟ ಫೋನ್ ಬಂತು. ಆ ದಿನವೆ ನನ್ನ ಜನ್ಮದಿನವಿತ್ತು. ಅಂದೆ ನಾನು ಭಾವ ಸಂಗಮ ಎನ್ನುವ ವಾಟ್ಸಾಪ್ ಗ್ರೂಪ್ ಸೃಷ್ಟಿಸಿದೆ ಎಂದು ರಾಜೇಂದ್ರ ಪಾಟೀಲ( ಉಮಾತನಯರಾಜ) ಅವರು ಹೇಳುತ್ತಾರೆ.
ಭಾವ ಸಂಗಮದ ಸಂಪೂರ್ಣ ಪಕ್ಷಿನೋಟ ಇಲ್ಲಿದೆ
ಆಗಷ್ಟೇ ಅನೇಕರು ವಾಟ್ಸಾಪ್ ನಲ್ಲಿ ಪ್ರವೇಶ ಪಡೆದಿದ್ದರು. ಭಾವ ಸಂಗಮ ತಯಾರಿಕೆಗಾಗಿ ಮೊದಲಿಗೆ 65ಜನರು ಸಿಕ್ಕರು, ಇದೆ ವಿಷಯವಾಗಿ ಬಾದಾಮಿಯ ಗೆಳೆಯ ವೆಂಕಟೇಶ ಇನಾಮದಾರ ಹಾಗೂ ನಾವು ಚರ್ಚೆ ಮಾಡಿದೆವು, ನಾವೆಲ್ಲಾ ಸಹೃಯಗಳು ಒಂದೆಡೆಗೆ ಸೇರೋಣ, ಸಮಾವೇಶ ಮಾಡೋಣ, ನಮ್ಮ ಪ್ರತಿಭೆಗಳನ್ನು ತೋರಿಸೊಣ, ಅದೊಂದು ವಿಭಿನ್ನವಾದ ಕೌಟುಂಬಿಕ ಕಾರ್ಯಕ್ರಮ ಮಾಡೋಣ ಎನ್ನುವ ಚರ್ಚೆ ಮಾಡಲಾಯಿತು. ಈ ಚರ್ಚೆಯ ಹಿನ್ನೆಲೆಯಲ್ಲಿ 2015ರ ನ.8 ರಂದು ಬಾದಾಮಿಯ ಮಹಾಕೂಟದಲ್ಲಿ ನಿಸರ್ಗದತ್ತವಾಗಿ ನಯನ ಮನೋಹರವಾಗಿ ಮೊದಲ ಸಮಾಗಮವನ್ನು ಅನೌಪಚಾರಿಕವಾಗಿ ಅರಳಿಮರದ ಕೆಳಗೆ ಟೇಬಲ್, ಕುರ್ಚಿ, ಮೈಕ್ ಯಾವುದೇ ಸೌಲಬ್ಯಗಳಿಲ್ಲದೆ ಜಮಖಾನಿ ಹಾಸಿ ಕೂತುಕೊಂಡು ಸರಳತೆಯಿಂದ ಕಾರ್ಯಕ್ರಮವನ್ನು ನಡೆಸಿದ್ದೆವು. ಇದರಲ್ಲಿ ಕೆಲವರು, ಸಂಗೀತ ಹಾಡಿದರು, ಕವಿತೆಗಳನ್ನು ಹೇಳಿದರು, ಕವನ ವಾಚನ ಮಾಡಿದರು. ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ರೀತಿಯಲ್ಲಿ ‘ಭಾವ ಸಂಗಮ’ ಮೊದಲ ವರ್ಷದಲ್ಲಿ ಬುನಾದಿ ಹಾಕಿತು ಎಂದು ರಾಜೆಂದ್ರ ಪಾಟೀಲ ಸ್ಮರಿಸಿಕೊಳ್ಳುತ್ತಾರೆ.
ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳಿಗೆ ಹಾಗೂ ಉದ್ಯಮಿಗಳಿಗೆ ಆಹ್ವಾನ ನೀಡಿರಲಿಲ್ಲ. ಇದಕ್ಕೆ ಕೇವಲ ಸಾಹಿತ್ಯ ಆಸಕ್ತರು, ಕವಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ಕಾರ್ಯಕ್ರಮದ ನೆನಪಿನ ಸ್ಮರಣಿಕೆಗಳನ್ನು ವಿತರಿಸುವಲ್ಲಿ ವೆಂಕಟೇಶ್ ಇನಾಮದಾರ ಅವರು ಸಹಾಯ ಮಾಡಿದರು. ಅದೇ ರೀತಿ ಊಟ ಜವಬ್ದಾರಿಯನ್ನು ಸಹ ಇನಾಮದಾರ ಹಾಗೂ ಅವರ ಸ್ನೇಹಿತರ ಬಳಗದವರೆ ಜವಾಬ್ದಾರಿ ವಹಿಸಿಕೊಂಡಿದ್ದರು. ಒಟ್ಟಾರೆಯಾಗಿ ಮೊದಲ ವರ್ಷದಲ್ಲಿ ಕಾರ್ಯಕ್ರಮ ಅದ್ಬುತವಾಗಿ ನಡೆಯಿತು ಎಂದು ಸಂಚಾಲಕರು ಹರ್ಷ ವ್ಯಕ್ತ ಪಡಿಸುತ್ತಾರೆ.
ನಂತರದ ವರ್ಷದಲ್ಲಿ ಭಾವ ಸಂಗಮದ ಸದಸ್ಯರ ಸಂಖ್ಯೆ ಹಾಗೂ ಆಸಕ್ತರ ಸಂಖ್ಯೆಯು ಬೆಳೆಯುತ್ತಾ ಹೋಯಿತು. ಇದರಲ್ಲಿ ಸಾಹಿತಿಗಳು, ಯುವ ಕವಿಗಳು, ಬರಹಗಾರರು ಇದ್ದಾರೆ. ಹಿರಿಯರು ಇದ್ದಾರೆ. ಹಿರಿಯರು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ. 2017ರ ಆ.13ರಂದು ಧಾರವಾಡದ ಆಲೂರು ವೆಂಕಟರಾಯರ ಸಭಾಂಗಣದಲ್ಲಿ ದ್ವೀತಿಯ ವರ್ಷರದ ಸಮಾಗಮ ನಡೆಯಿತು. ಇದಕ್ಕೆ ಸುನಿಲ್ ಕುಲಕರ್ಣಿ ಮತ್ತು ಅವರ ಸಾಕಾರ ತಂಡದ ಸದಸ್ಯರು ತುಂಬಾ ಸಹಕಾರ ನೀಡಿದರು. ಆಗ ಸದಸ್ಯರ ಸಂಖ್ಯೆ 165. ನನ್ನ ನೀರಿಕ್ಷೆಗೂ ಮೀರಿ ಭಾವ ಸಂಗಮದಲ್ಲಿ ಕಾರ್ಯಕ್ರಮಗಳು ನಡೆದವು ಎಂದು ರಾಜೇಂದ್ರ ಪಾಟೀಲರು ( ರಾಪಾ) ನೆನಪಿಸಿಕೊಂಡರು.
2018 ಆಗಷ್ಟ್.26ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ತೃತೀಯ ವರ್ಷದ ಭಾವ ಸಂಗಮದ ಸಮಾಗಮವನ್ನು ಆಯೋಜನೆಯನ್ನು ಮಾಡಲಾಗಿತ್ತು.ಬೆಂಗಳೂರಿನವರಾದ ಸಾಹಿತಿಗಳು ಹಾಗೂ ಸಂಗಮದ ಸದಸ್ಯರಾದ ವಿಜಯಲಕ್ಷ್ಮೀ ಸತ್ಯಮೂರ್ತಿ, ಶ್ರೀಕಾಂತ ಪತ್ರೆಮರ, ರಾ.ಸು.ವೆಂಕಟೇಶ, ಮಾನಸಾ ಕೆ.ಕೆ, ಜಯಶ್ರೀ ಗುಡಿ, ಹಾಗೂ ಶಂಕರ ಹೂಗಾರ ಹೀಗೆ ಬೆಂಗಳೂರಿನ ಅನೇಕ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಗಾರ ಅವರು ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು, ಜೊತೆಗೆ ಕನ್ನಡ ಹೋರಾಟಗಾರ ಮಾಯಣ್ಣ , ಚಂದ್ರಶೇಖರ ಪಾಟೀಲ, ಎಂ.ತಿಮ್ಮಯ್ಯ, ಕನ್ನಡ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಅವರು ಉಪಸ್ಥಿತರಿದ್ದು ಭಾವ ಸಂಗಮ ಸಮಾಗಮಕ್ಕೆ ವಿಶೇಷ ಮೆರುಗನ್ನು ತಂದರು. ಅನೇಕ ಬರಹಗಾರರು, ಕಲಾವಿದರು, ಸಂಗೀತಗಾರರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ 185ಕ್ಕೂ ಹೆಚ್ಚು ಜನ ಸದಸ್ಯರಿದ್ದರು ಎಂದು ಅವರು ಮಹಿಳಾ ವಿವಿಯ ಮಹಿಳಾ ಧ್ವನಿ ಪ್ರಾಯೋಗಿಕ ಪತ್ರಿಕೆಯ ವರದಿಗಾರರಿಗೆ ರಾಪಾ ಅವರು ತಿಳಿಸಿದರು.
ಭಾವ ಸಂಗಮಕ್ಕಿಗ ನಾಲ್ಕನೇ ವಸಂತ ತುಂಬಿದೆ. ಈ ಸಂಗಮದ ಸಮಾಗಮ ಎಲ್ಲಿ ಎಂಬ ಪ್ರಶ್ನೆ ಮೂಡಿದಾಗ ಶಿವಮೊಗ್ಗದಲ್ಲಿ ಎನ್ನುವ ಉತ್ತರ ದೊರೆಯಿತು. ಸಂಪೂರ್ಣ ಉಸ್ತುವಾರಿಯನ್ನು ವಿಜಯ ಆರ್ ಬಾಯರಿ, ಹರೀಶ ಬೇದ್ರೆ, ಶೀಲಾ ಸುರೇಶ, ವೆಂಕಟೇಶ ಇನಾಮದಾರ ಅವರು ವಹಿಸಿಕೊಂಡಿದ್ದರು. ಡಾ.ಜಿ.ಎಸ್.ಸರೋಜಾ, ಏಕನಾಥ ಬೊಂಗಾಳೆ, ಸರಸ್ವತಿ ಟಿಎನ್, ಸಹನಾಚೇತನ, ರಂಜಿನಿ ದತ್ತಾತ್ರಿ, ಕೈಜೋಡಿಸಿದರು. ವ ಶಿವಮೊಗ್ಗದ ಕನ್ನಡ ಸಭಾಂಗಣದಲ್ಲಿ ಭಾನುವಾರ ಆ.18ರಂದು ನಡೆಯಿತು.
ಈ ನಾಲ್ಕನೇ ವಾರ್ಷಿಕೋತ್ಸವದ ಸಮಾಗಮದ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಪ್ರಥಮ ಮಹಿಳಾ ಅಧ್ಯಕ್ಷೆ ವಿಜಯಾ. ಶ್ರೀಧರ ಅವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಸುಮಾ ಕಳಸಾಪೂರ ಹಾಗೂ ನೂರಸಮದ್ ಅಬ್ಬಲಗೆರೆ ಅವರು ಮಾತನಾಡಿದರು. ಕಾರ್ಯಕ್ರದ ಅತಿಥಿಗಳನ್ನು ಹರೀಶ ಬೇದ್ರೆ ಅವರು ಸ್ವಾಗತಿಸಿದರು. ರಾಜೇಂದ್ರ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. 50 ಕವಿಗಳು ಪಾಲ್ಗೊಂಡಿದ್ದ ಕವಿಗೋಷ್ಠಿಯನ್ನು ಎ.ಎನ್.ರಮೇಶ್ ನಿರೂಪಿಸಿದರು. ಡಾ.ಪ್ರಕಾಶ ಕಾಡೆಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಗೆ ಎಲ್.ಎಸ್.ಶಾಸ್ತ್ರಿ ಮುಖ್ಯ ಅತಿಥಿಗಳಾಗಿದ್ದರು. ಅನನ್ಯ ಐತಾಳ ಮತ್ತು ಗೆಳತಿಯರ ಪ್ರಾರ್ಥನೆ, ಸಹನಾಚೇತನ ತಂಡದವರ ಸ್ವಾಗತ ನೃತ್ಯ ಕಣ್ಮನ ಸೆಳೆಯಿತು.
ಅಂಕಣದ ಹುಟ್ಟು ಗುಟ್ಟು
ನಾವು ದಿನಪತ್ರಿಕೆಗಳಲ್ಲಿ ಅನೇಕ ಸಾಹಿತಿಗಳ ಅಂಕಣಗಳನ್ನು ಓದುತ್ತೇವೆ. ಅದೇರೀತಿ ನಾವೇಕೆ ಈ ಸಾಮಾಜಿಕ ಜಾಲತಾಣದಲ್ಲಿ ಅಂಕಣ ಬರವಣಿಗೆಯನ್ನು ಜಾರಿ ಮಾಡಬಹುದಲ್ಲಾ ಎಂದು ಯೋಚಿಸಿ ಸದಸ್ಯರ ಜೊತೆಗೆ ಚರ್ಚೆ ಮಾಡಲಾಯಿತು. ಅದೇ ವರ್ಷದಲ್ಲಿ ಅಂದರೆ 2018ರ ಜುಲೈ 10ರಂದು ‘ವಸುಧೈವ ಕುಟುಂಬಕಂ’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ‘ಮಾಲತಿ ಮುದುಕವಿ’ಯವರು ಅಂಕಣ ಬರೆದುವುದರ ಜೊತೆಗೆ ಹೊಸಕಲ್ಪನೆಯೊಂದಿಗೆ ಅಡಿಗಲ್ಲು ಹಾಕಿದರು. ಇವರ ನಂತರ ‘ವಿಜಯಲಕ್ಷ್ಮಿ ಸತ್ಯಮೂರ್ತಿ’ ಅವರು ‘ಸಂಚಯ’ ಎಂಬ ಶೀರ್ಷಿಕೆಯ ಅಂಕಣ ಬರೆದರು. ಇವರಂತು ಸಂಪೂರ್ಣವಾಗಿ ಒಂದು ವರ್ಷಗಳ ಕಾಲ (53ವಾರ) ನಿರಂತರವಾಗಿ ಸಂಚಿಕೆಗಳ ಅಂಕಣ ಬರೆದರು. ಇದುವರೆಗೂ ಸುಮಾರು 25ಜನ ಲೇಖಕ, ಲೇಖಕಿಯರು ಅಂಕಣಗಳನ್ನು ಬರೆಯುತ್ತಿದ್ದಾರೆ.
ಸದ್ಯದ ದಿನಗಳಲ್ಲಿ ಭಾವ ಸಂಗಮದ ಸದಸ್ಯರೆಲ್ಲರಲ್ಲಿಯು ಕಿರಣ ಹಿರಿಸಾವೆ ಅವರು ಬರೆಯುವ ಮಂಗಳವಾರದ ‘ಚಚ್ಚೌಕದ ಬಾವಿ’ ಎನ್ನುವ ಅಂಕಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ಜಯಂತಿ ಚಂದ್ರಶೇಖರ ಅವರ ಮಂಗಳಾಕ್ಷತೆ ಅಂಕಣ ಗಮನ ಸೆಳೆಯುತ್ತಿದೆ. ಸೋಮವಾರದ ಯದ್ಭಾವಂ ತದ್ಭವತಿ, ಬುಧವಾರದ ತುಂಗೆ ತಪ್ಪಲಿನ ತಂಬೆಲರು, ಗುರುವಾರದ ಪರಿಕ್ರಮ, ಶುಕ್ರವಾರದ ನೆಲದ ಸುಗಂಧ ಅಂಕಣಗಳು ಭಾವ ಸಂಗಮದ ಮೆರುಗು ಹೆಚ್ಚಿಸಿವೆ. ಪ್ರತಿದಿನಾಲೂ ಮಧ್ಯಾಹ್ನ ಮೂರರಿಂದ ಸಂಜೆ ಆರರ ವರೆಗೆ ಅಂಕಣದ ಸಮಯ ಈ ಸಮಯದಲ್ಲಿ ಬೇರೆ ವಿಷಯಗಳ ಚರ್ಚೆಗೆ ಅವಕಾಶ ಇಲ್ಲ ಎನ್ನುತ್ತಾರೆ ರಾಪಾ ಸರ್ ಅವರು.
ವಿಭಿನ್ನ ಅನುಭವ
ಅಬ್ಬ ಭಾವ ಸಂಗಮಕ್ಕೆ ಪ್ರತಿದಿನ ಹೊಸ ಸದಸ್ಯರ ಆಗಮನ. ಕೆಲವು ಸದಸ್ಯರು ತಮ್ಮ ಪ್ರತ್ಯೇಕವಾಗಿರುವ ಜೀವನದಲ್ಲಿ ನಡೆಯುವ ವಿಶೇಷ ಘಟನೆಗಳನ್ನು ಹಂಚಿಕೊಳ್ಳುವುದು, ಪೋಟೋಗಳನ್ನು ಹಾಕುವುದು, ಪ್ರತಿದಿನ ಬೆಳಗ್ಗಿನ ಜಾವ ಸುಮಾರು ನಾಲ್ಕು ಗಂಟೆಗೆ ಶುಭನುಡಿಯೊಂದಿಗೆ ಸಂಗಮದ ಭಾಗಿಲು ತೆಗೆಯುವುದು. ಈ ಶುಭನುಡಿಯ ಬೆನ್ನಲ್ಲೆ ಒಂದಾದ ಒಂದರಂತೆ ಉತ್ತರ ಕನ್ನಡ ಜಿಲ್ಲೆಯವರು ಪಕೃತಿಯ ಸುಂದರ ದೃಶ್ಯವನ್ನು ಸೆರೆಹಿಡಿಯುತ್ತಾ ಅದಕ್ಕೆ ತಕ್ಕಂತೆ ಒಂದು ಸಾಲಿನಲ್ಲಿಯೆ ಕವಿತೆ, ಕವನಗಳು, ಗಜಲ್‍ಗಳನ್ನು ಹಾಕುವುದು. ಓದುಗರು ಎಲ್ಲದಕ್ಕೂ ಪದಗಳ ಗುಂಪಿನ ವಿಮರ್ಶೆ ಮಾಡುವುದೆ ಚೆಂದ. ಇದರ ಜೊತೆಗೆ ವೆಂಕಟೇಶ ಇನಾಮದಾರ ಅವರ ವ್ಯಂಗ್ಯಚಿತ್ರಗಳ ಪ್ರಭಾವ ಅದಕ್ಕೆ ತಕ್ಕಂತೆ ನಗೆ ಚುಟುಕುಗಳನ್ನು ಹಾರಿಸುವುದು. ಮಧ್ಯಾಹ್ನ ಮೂರರಿಂದ ಆರರ ನಡುವೆ ಅಂಕಣ ಅಂಕಣಕಾರು ಓದುಗರ ಅಭಿಪ್ರಾಯಕ್ಕೆ ಕಾಯುವುದು. ಕೆಲವು ಅಂಕಣಕಾರರ ಅಂಕಣಕ್ಕಾಗಿ ಕಾಯುವುದು. ಆ ಅಂಕಣಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸುವುದು ನಿಜಕ್ಕೂ ವಿಶೇಷ.
ಇಂಡಿ ತಾಲ್ಲೂಕಿನ ಅಥರ್ಗಾದಿಂದ ಶಿವಮೊಗ್ಗದತ್ತ ವಿಜಯಪುರ ಸಾಹಿತಿಗಳೊಂದಿಗೆ ಒಂದು ಸುತ್ತು
ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ನಾನು ಕಾಂಚನಾ. ಬಸವರಾಜ. ಪೂಜಾರಿ. ಕರ್ನಾಟಕ ರಾಜ್ಯದ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವೀತಿಯ ವರ್ಷದಲ್ಲಿ ಓದುತ್ತಿದ್ದೆನೆ. ನನ್ನ ಒಂದು ಲೇಖನಿಯಿಂದ ಸಂಚಾಲಕರು ಈ ಭಾವ ಸಂಗಮಕ್ಕೆ ಸೇರಿಸಿದರು. ಮೊದಲು ಸ್ವಲ್ಪ ದಿನಗಳ ಕಾಲ ನಾನು ಭಾವಸಂಗಮದ ಕಾರ್ಯ ಚಟುವಟಿಕೆಗಳನ್ನು ಗಮನಿಸಿದೆ. ಕೆಲವು ವಿಷಯಗಳ ಕುರಿತು ನೇರವಾಗಿ ಸಂಚಾಲಕರ ಜೊತೆಗೆ ಮಾತನಾಡಿ ನನ್ನ ಅನುಮಾನಗಳನ್ನು ಬಗೆಹರಿಸಿಕೊಂಡೆ. ನಂತರದಲ್ಲಿ ನಾನು ಕ್ರಮೆಣವಾಗಿ ಕವಿತೆ, ಕವನ, ಅಂಕಣಗಳಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸಲು ಆರಂಭ ಮಾಡಿದೆ. ಇದರ ಜೊತೆಗೆ ನಾನು ಬರೆದ ಲೇಖನಿಗಳು ಈಗಾಗಲೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಮತ್ತೊಮ್ಮೆ ಎಲ್ಲವನ್ನು ಸಂಗಮದಲ್ಲಿ ಹಾಕಿದೆ. ಮೊದಲಿಗೆ ಯಾರು ಪ್ರತಿಕ್ರಿಯೆ ನೀಡಲಿಲ್ಲ. ಆಗ ನನಗೆ ಕೊಂಚ ಅಳುಕು ಉಂಟಾಯಿತು. ಎರಡು ದಿನಗಳ ನಂತರದಲ್ಲಿ ಸದಸ್ಯರೊಬ್ಬರು ನನ್ನ ಲೇಖನ ಚೆನ್ನಾಗಿದೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದರು. ಅದನ್ನು ಓದಿದ ನನಗೆ ಸ್ವಲ್ಪ ಸಮಾಧಾನವಾಯಿತು.
ಅದಾದ ನಂತರದಲ್ಲಿ ನಾನು ಆಗೊಂದು ಈಗೊಂದು ಲೇಖನಗಳನ್ನು ಬರೆದು ಹಾಕಲು ಪ್ರಾರಂಭ ಮಾಡಿದೆ. ಹಾಗೂ ಅಂಕಣಗಳನ್ನು ಗಮನಿಸುತ್ತಾ ಹೋದೆ. ಇದರಲ್ಲಿ ಬರುವ ಅಂಕಣಗಳನ್ನು ಓದಲು ಸಮಯ ಹೊಂದಿಸಿಕೊಳ್ಳುತ್ತಿದ್ದೆ. ಅದಕ್ಕೆ ತಕ್ಕನಾಗಿ ವಿಮರ್ಶೆಯನ್ನು ಸಹ ಮಾಡುವೆ.
ನನಗೆ ತಿಳಿದಿರುವ ಪ್ರಕಾರ ಭಾವ ಸಂಗಮ ನಾಲ್ಕನೇ ಸಮಾಗಮ ಕಾರ್ಯಕ್ರಮದ ಕುರಿತಾಗಿ ಮೂರು ತಿಂಗಳುಗಳಿಂದನೆ ಮುಂಚಿತವಾಗಿ ತಯಾರಿ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ, ಅಥವಾ ಬರುವುದಿಲ್ಲ ಎನ್ನುವುದರ ಕುರಿತು ಸ್ವಲ್ಪ ದೊಡ್ಡ ಮಟ್ಟದಲ್ಲಿಯೆ ಚರ್ಚೆಗಳು ನಡೆದವು. ನನಗಂತು ಅನೇಕರು ಕಾರ್ಯಕ್ರಮಕ್ಕೆ ಬರುವಂತೆ ಒತ್ತಾಯ ಮಾಡಿದರು.ರಾಪಾ ಅವರು ಗುಂಪಿನಲ್ಲಿಯೇ ಪ್ರೀತಿಯಿಂದ ಬೈದರು. ಟಿ. ಎನ್. ಶಿವಕುಮಾರಅವರು ವೈಯಕ್ತಿಕವಾಗಿ ಕರೆ ಮಾಡಿ ಮಾತನಾಡಿದರು. ಆಗ ನಾನು ನೋಡಿದರಾಯಿತು ಎಂದುಕೊಂಡೆ. ಆದರೆ ಸಂಗಮದಲ್ಲಿ ನಡೆಯುವ ಸಂಭಾಷಣೆ ನೋಡಿದಾಗ ನನ್ನಲ್ಲೆ ಗೊಂದಲಗಳು ಶುರುವಾದವು. ಒಂದು ದಿನ ರಾಪಾ ಅವರು ನನ್ನ ಅಪ್ಪನ ಜೊತೆಗೆ ಮತನಾಡಿದರು.
ಅಲ್ಲಿಯವರೆಗೂ ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಿರಲಿಲ್ಲ. ಅದಾದ ಮೇಲೆ ಮನೆಯಲ್ಲಿ ಹೇಳಿದೆ. ಅಪ್ಪನು ಏನು ಹೇಳಲಿಲ್ಲ ಸುಮ್ಮನಿದ್ದರು. ನಾನು ಸುಮ್ಮನಾದೆ. ಕಾರ್ಯಕ್ರಮಕ್ಕೆ ಇನ್ನೇನು ಒಂದು ವಾರ ಉಳಿದಿತ್ತು. ಆಗ ನಾನು ಕೂಡಾ ಶಿವಮೊಗ್ಗಕ್ಕೆ ಬರುತ್ತೇನೆ ಎಂದು ಸಂದೇಶ ಹಾಕಿದಾಗ ಸಂಚಾಲಕರು ಸಂತಸ ಪಟ್ಟರು. ನಂತರ ಮುರುಗೇಶ ಸಂಗಮ ಅವರು ಕರೆ ಮಾಡಿ ಬರುತ್ತಿರಾ ಎಂದು ವಿಚಾರಿಸಿದರು. ಆಗಲೂ ಸಹ ಗೊಂದಲದಲ್ಲಿಯೇ ಒಪ್ಪಿಗೆ ಸೂಚಿಸಿದೆ.
2019 ಆ. 17 ರಂದು ಸಂಜೆ ಸುಮಾರು ಸಂಜೆ 7 ಕ್ಕೆ ಬಸವನಬಾಗೇವಾಡಿಯ ಸಾಹಿತಿ ಡಾ. ಮುರುಗೇಶ ಸಂಗಮ ಅವರ ಬಳಗದೊಂದಿಗೆ ವಿಜಯಪುರದಿಂದ ಪಯಣ ಬೆಳೆಸಿದೆ. ಬಳಗದವರನ್ನು ನೋಡಿದ ನನಗೆ ಮನಸಿನ ಒಂದು ಮುಲೆಯಲ್ಲಿ ಮತ್ತಷ್ಟು ಅಳಕು ಶುರುವಾಯಿತು. ಇದೇನಪ್ಪ ಎಲ್ಲರೂ ಹಿರಿಯರಿದ್ದಾರೆ. ನಾನು ಹೇಗೆ ಇವರ ಜೊತೆಗೆ ಹೊಂದಿಕೊಳ್ಳೊದು? ಏನು ಮಾತಾಡೊದು? ಅಂತ ಯೋಚಿಸುತ್ತದೆ. ಅಷ್ಟರಲ್ಲಿ ಮುರುಗೇಶ ಅವರು ಎಲ್ಲರ ಪರಿಚಯ ಮಾಡಿಸಿದರು. ಸ್ವಲ್ಪ ಮುಜುಗರ ತೋರೆದು ಪರಸ್ಪರ ಮಾತನಾಡಲು ಆರಂಬಿಸಿದೆವು. ನಂತರ ರಸ್ತೆಯ ಮಧ್ಯೆದಲ್ಲಿ ಒಂದು ಕಡೆಗೆ ಎಲ್ಲರೂ ಸೇಲ್ಫಿಗೆ ಫೋಸ್ ಕೊಟ್ಟೆವು. ಅದನ್ನು ಸಂಗಮದಲ್ಲಿಯೂ ಹಾಕಿದೆವು.
ರಾತ್ರಿ ಸುಮಾರು 10 ಗಂಟೆಯಷ್ಟೊತ್ತಿಗೆ ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು. ರಾತ್ರಿ ವೇಳೆಯಾಗಿದ್ದರಿಂದ ಒಂದು ಪೇಟ್ರೋಲ್ ಬಂಕ್ ಹತ್ತಿರ ಹೋಟೆಲ್ ನಲ್ಲಿ ಊಟಕ್ಕೆ ಗಾಡಿಯನ್ನು ನಿಲ್ಲಿಸಿದೆವು. ನಾನು ಸುಮಾರು 10ಗಂಟೆಗಳ ಕಾಲ ಮಾತಿನ ಮಲುಕು, ಹಳೆ ಹಾಡುಗಳನ್ನು ಗೊನಗುವುದು, ಚಲಿಸುವ ಗಾಡಿಯಲ್ಲಿಯೇ ನನ್ನದೊಂದಿಷ್ಟು ತುಂಟಾಟದ ವಿಡಿಯೋಗಳನ್ನು ಮಾಡುವುದು. ಕಿಡಕಿಯ ಪಕ್ಕದಲ್ಲಿ ಕುಳಿತು ತಣ್ಣನೆಯ ತಂಪಾದ ಗಾಳಿಯಲ್ಲಿ ರಸ್ತೆಯ ಉದ್ದಕ್ಕೂ ಬರೆದಿರುವ ಫಲಕಗಳನ್ನು ಓದುತ್ತಾ ಹೋಗುವುದೆ ಖುಷಿಯ ವಿಚಾರ. ಇದರ ಮಧ್ಯ ನಾನು ಸಂಗಾತಿಯನ್ನು ಸಹ ಕರೆದುಕೊಂಡು ಹೋಗಿದ್ದೆ. ಇದ್ಯಾರಪ್ಪ! ಇವರ ಮತ್ತೊಬ್ಬ ಸಂಗಾತಿ ಅಂತಿರಾ? ಅದು ಮತ್ಯಾರು ಅಲ್ಲಾ, ನನ್ನ ಲ್ಯಾಪ್‍ಟಾಪ್ ಹಾಗೂ ಪುಸ್ತಕಗಳೆ ನನ್ನ ಸಂಗಾತಿಗಳು. ರಾತ್ರಿಯಿಡಿ ಮಲಗಲಿಲ್ಲ.
ಸುಮಾರು ಬೆಳಗಿನ ಜಾವ ಚುಮುಚುಮು ಚಳಿಗೆ ಟೀ ಕುಡಿವ ಆಸೆ ನನ್ನಲ್ಲಿ ಹೆಚ್ಚಾಗುತ್ತಿತ್ತು. ಇದರ ಜೊತೆಗೆ ಮಲೆನಾಡಿನ ಸೌಂದರ್ಯವನ್ನು ಸವಿಯುತ್ತಿದೆ. ಮೊದಲೆ ನಾವು ಉತ್ತರ ಕರ್ನಾಟಕದವರು ನೋಡಿ ನಮಗೆಲ್ಲ ನಿಸರ್ಗದ ಸೌಂದರ್ಯ ಎಲ್ಲಾವು ಅಪರೂಪಕ್ಕೆ ಸಿಗುತ್ತೆ. ಅಂಥಹುದರಲ್ಲಿ ಸೌಂದರ್ಯದ ಸವಿ ಸವಿಯದೆ ಹೋದರೆ ತಪ್ಪಾಗುತ್ತದೆ. ಇದೆ ರೀತಿಯಲ್ಲಿ ನೈಸರ್ಗದ ಸೌಂದರ್ಯವನ್ನು ಸವಿತ್ತಾ, ಮಾತು, ಹರಟೆ, ಮಾಡುತ್ತಾ ಸುಮಾರು 10ಗಂಟೆಗಳ ಕಾಲ ಪ್ರಯಾಣ ಮಾಡಲಾಯಿತು. ಬೆಳಗಿನ ಜಾವ ಐದುವರೆಗೆ ಶ್ರೀಕಾಂತ .ಪತ್ರೆಮರ ಅವರ ಸೋದರಿಯ ಮನೆ ತಲುಪಿದವು. ಅಲ್ಲಿಯೇ ನಮ್ಮ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡೆವು, ನಂತರ ಅವರ ತಂಗಿಯವರು ಮಾಡಿದ ಉಪ್ಪಿಟ್ಟು ಚಹಾ ಸೂಪರ್ ಆಗಿತ್ತು. ನಂತರ ಎಲ್ಲರೂ ಸೇರಿ ಸಭಾಂಗಣಕ್ಕೆ ತೆರಳಿದವು. ಅನೇಕರು ಎಲ್ಲಿ ನಮ್ಮನ್ನು ಸ್ವಾಗತಿಕೊಂಡರು. ಕಲವರು ಮಾತನಾಡಿಸಿದರು. ನನ್ನಗೆ ತುಂಬಾ ಸಂತೋಷವಾಯಿತು, ಆದರು ಸಹ ನಾನು ಮೊದಲೆ ಹೇಳಿದ ಹಾಗೆ ಕೊಚ ಅಳುಕು ಮುಂದುವರೆದೆ ಇತ್ತು. ಇದೇ ಕಾರಣದಿಂದಾಗಿ ನಾನು ಸ್ವಲ್ಪ ದೂರದಲ್ಲಿಯೆ ಇದ್ದು ಹಾಡು ಕೇಳುತ್ತಾ ಅಲ್ಲಿರುವ ಹೂಗಳ ಚಿತ್ರಿಕರಣ ಮಾಡುತ್ತಿದ್ದೆ.
ಅಷ್ಟರಲ್ಲಿಯೇ ರಾಜೇಂದ್ರ ಪಾಟೀಲ ಸರ್ ಆಗಮನವಾಯಿತು. ನಂತರದಲ್ಲಿ ವಿಜಯಮ್ಮ, ರಾಸು ವೆಂಕಟೇಶ, ಜಯಂತಿ ಅಮ್ಮ, ತ.ನಾ.ಶಿ ಹೀಗೆ ಅನೇಕರ ದಂಡು ತಂಡೋಪ ತಂಡದಲ್ಲಿ ಬಂದರು. ಇವರಲ್ಲ ನನ್ನನ್ನು ಮಾತನಾಡಿಸಿ ನನ್ನಲ್ಲಿದ ಭಯವನ್ನು ಹೋಗಲಾಡಿಸಿದರು. ಎಲ್ಲರೂ ಸೇರಿ ತಿಂಡಿ ಮಾಡಿದವು. ನಂತರ ವಿಜಯಮ್ಮಾ ನಡಗೆರೆ, ಶ್ರೀವಲ್ಲಭ, ವೆಂಕಟೇಶ ಇನಾಮದಾರ, ತ.ನಾ.ಶಿ ಅನೇಕ ಜೊತೆಗೆ ಸ್ವಲ್ಪ ತರಲೆ, ತುಂಟಾಟ ಮಾಡುತ್ತಾ, ಸ್ವಲ್ಪ ಕಾಲು ಏಳೆದು ಏಳೆಸಿಕೊಂಡೆ. ಇವರೆಲ್ಲರೂ ಸಾಹಿತ್ಯ, ಪತ್ರಿಕೋದ್ಯಮ, ಶಿಕ್ಷಣದ ಹೀಗೆ ಅನೇಕ ವಿಷಯಗಳ ಬಗ್ಗೆ ತಮ್ಮ ಅನುಭಮಗಳನ್ನು ಹಂಚಿಕೊಂಡು ಸಲಹೆಗಳನ್ನು ನೀಡಿದರು. ಈ ಸುಂದರ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಸುಂದರ ಸಮಾಗಮ ಮುಗಿಸಿಕೊಂಡೆ ಮನೆಗೆ ಬಂದಿದ್ದು ಮರುದಿನ
ಬೆಳಗಿನ ಜಾವ ಆರು ಗಂಟೆಗೆ.
ಧನ್ಯವಾದಗಳು.
–ಕಾಂಚನಾ ಪೂಜಾರಿ
86609 89900
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ2 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ4 hours agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


