ದಿನದ ಸುದ್ದಿ
ದಾವಣಗೆರೆ ಲಾಕ್ಡೌನ್ ಸಡಿಲಿಕೆ | ಏನಿರುತ್ತೆ ; ಏನಿರಲ್ಲ : ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್ , ಮಿಸ್ ಮಾಡ್ದೆ ಓದಿ
ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ಸೋಂಕಿನ ಮೂರು ಪ್ರಕರಣದಿಂದಾಗಿ ಆರೇಂಜ್ ಜೋನ್ನಲ್ಲಿದ್ದ ದಾವಣಗೆರೆ ಜಿಲ್ಲೆ ಸೋಮವಾರ ಗ್ರೀನ್ ಜೋನ್ಗೆ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಇಲಾಖೆಗಳಿಗೆ ಮತ್ತು ಆಯ್ದ ಕೆಲವು ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ಕೆಲ ನಿಬಂಧನೆ ಹಾಗೂ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೀನ್ ಜೋನ್ ಘೋಷಣೆಯ ಉದ್ದೇಶ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಆರ್ಥಿಕ ಚಟುವಟಿಕೆಗಳು ನಡೆಯಲು ಅವಕಾಶ ಕಲ್ಪಿಸುವುದಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹವಾನಿಯಂತ್ರಿತ ಸಲಕರಣೆ ಉಪಯೋಗಿಸದೆ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಬಹುದಾಗಿದೆ ಎಂದರು.
ನಿಯಮದ ಪ್ರಕಾರ ಕೊನೆಯ ಪಾಸಿಟಿವ್ ಪ್ರಕರಣ ವರದಿ ನಂತರದ 28 ದಿನಗಳ ಅವಧಿಯಲ್ಲಿ ಯಾವುದೇ ಪ್ರಕರಣ ವರದಿಯಾಗದಿದ್ದರೆ ಅದನ್ನು ಗ್ರೀನ್ ಜೋನ್ಗೆ ಸೇರಿಸಲಾಗುತ್ತದೆ. ಮಾ.27ರ ನಂತರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ಜಿಲ್ಲೆಯೂ ಗ್ರೀನ್ ಜೋನ್ ಎಂದು ಘೋಷಿಸಲಾಗಿದೆ ಎಂದರು.
ಏನಿರುತ್ತೆ
- ಮುನ್ಸಿಪಲ್ ಕಾರ್ಪೋರೇಷನ್ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿನ ಕೈಗಾರಿಕೆಗಳು ಕಾರ್ಯ ಆರಂಭಿಸಬಹುದಾಗಿದೆ. ಎಸ್ಇಝಡ್ ನಿರ್ಮಾಣದ ಏರಿಯಾದಲ್ಲಿನ ಎಲ್ಲಾ ಕೈಗಾರಿಕೆ ಅವಕಾಶ ನೀಡಲಾಗಿದೆ.
- ಪಸ್ತಕ-ಲೇಖನ ಸಾಮಗ್ರಿ ಅಂಗಡಿ, ಕನ್ನಡಕದ ಅಂಗಡಿ, ಜೆರಾಕ್ಸ್, ಹಾರ್ಡ್ವೇರ್, ಸ್ಟೀಲ್, ಫ್ಲೈವುಡ್, ಪೈಂಟ್, ಇಟ್ಟಂಗಿಭಟ್ಟಿ, ರೈಸ್ ಮಿಲ್, ಫೋಟೊ ಸ್ಟುಡಿಯೋ, ಆಯಿಲ್ ಮಿಲ್, ಚಪ್ಪಲಿ ಅಂಗಡಿ, ಮರಳು ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಪ್ಲಾಸಿಕ್, ಟಾರ್ಪಲ್ ಅಂಗಡಿ ಹಾಗೂ ಆಟೋ ಮೊಬೈಲ್ಸ್ ಅಂಗಡಿ, ಪ್ರಿಟಿಂಗ್ ಪ್ರೆಸ್ಗಳಿಗೆ ಅವಕಾಶವಿದೆ.
- ಮದುವೆ ಸಮಾರಂಭ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳನ್ನು ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಂಡು, ಗರಿಷ್ಠ 20 ಜನ ಮೀರದಂತೆ ಕಾರ್ಯಕ್ರಮಗಳನ್ನು ಮಾಡಬಹುದಾಗಿದೆ.
- ಕೃಷಿ, ಮಾರುಕಟ್ಟೆ, ಸಬ್ ರಿಜಿಸ್ಟಾರ್ ಆಫೀಸ್, ಎಪಿಎಂಸಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲೆಯಲ್ಲಿ ವಿವಿಧ ರೀತಿಯ ಅಂಗಡಿಗಳು ಸೇರಿದಂತೆ ಒಟ್ಟು 13 ಸಾವಿರ ಅಂಗಡಿಗಳು ನೊಂದಣಿ ಮಾಡಿವೆ. ಇನ್ನಿಳಿದ 3 ಸಾವಿರ ಅಂಗಡಿಗಳು ನೊಂದಣಿ ಆಗಬೇಕಿದೆ ಎಂದರು.
ಏನಿರಲ್ಲ
- ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಆಟೋ, ಟ್ಯಾಕ್ಸಿ, ಬಸ್ಗಳ ಯಾವುದೇ ಓಡಾಟ ನಿಷೇಧಿಸಲಾಗಿದೆ. ಜನರು ಗುಂಪು ಗುಂಪಾಗಿ ಜನರು ಸೇರುವಂತಿಲ್ಲ. ಸಡಿಲಿಕೆಯ ಅಂಗಡಿಗಳಲ್ಲಿ ಶುಚಿತ್ವ ಕಾಪಾಡಿಕೊಂಡು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು.
- ಇಲ್ಲದಿದ್ದರೆ ಅವಘಡ ನಿರ್ಮಾಣವಾಗುತ್ತೆ ಎನ್ನುವ ಸೂಚನೆ ಕಂಡುಬಂದರೆ ಅಂಗಡಿಗಳನ್ನು ನಿರ್ದಿಷ್ಟ ಅವಧಿಯವರೆಗೆ ಸೀಲ್ ಮಾಡಲಾಗುವುದು. ಜೊತೆಗೆ ಬಿಗ್ ಬಜಾರ್ ಇನ್ನುಳಿದ ಇಂಡಸ್ಟ್ರೀಯಲ್ ಉದ್ಯಮಗಳಲ್ಲಿ ಎಸಿ ಬಳಸುವಂತಿಲ್ಲ. ಎಸಿ ಬಳಸಿದರೆ ಅವರ ಉದ್ದಿಮೆ ಪರವಾನಗಿ ರದ್ದು ಮಾಡಲಾಗುವುದು ಎಂದರು.ಬೀಡಿ, ಸಿಗರೇಟ್, ತಂಬಾಕು ಉತ್ಪನ್ನ, ಮದ್ಯವನ್ನು ಮೇ 3 ರವರೆಗೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಸಾರ್ವಜನಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ.
- ಜನರಿಗೆ ಆರ್ಥಿಕ ವ್ಯವಸ್ಥೆಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಸಾರ್ವಜನಿಕವಾಗಿ ಮೇ 3 ರವರೆಗೆ ಗುಂಪು ಸೇರುವಂತಿಲ್ಲ. ನಗರದಲ್ಲಿ ಯಾವುದೆ ಜವಳಿ ಹಾಗೂ ಜ್ಯುವೆಲ್ಲರಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ.
- ಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ, ತಂಬಾಕು ಉಗುಳಿದರೆ ಕರ್ನಾಟಕ ಪೊಲೀಸ್ ಆಕ್ಟ್ ಕಾಯ್ದೆ ಅನ್ವಯ ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಅಪರಾಧಗಳಿಗೆ ದಂಡ ವಿಧಿಸಲಾಗುವುದು.
- ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಪಾನಿಪುರಿ, ಎಗ್ರೈಸ್, ಗೋಬಿ ಅಂಗಡಿಗಳನ್ನು ತೆರೆಯಲು ಅವಕಾಶವಿರುವುದಿಲ್ಲ.
- ಸಾರ್ವಜನಿಕ ಸ್ಥಳಗಳಲ್ಲಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯವಹಾರ ಮಾಡುವುದು ಕಂಡು ಬಂದಲ್ಲಿ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಿ, ಶಿಸ್ತು ಕ್ರಮ ಜರುಗಿಸಲಾಗುವುದು.
ಈ ವ್ಯಕ್ತಿಗಳ ಸಂಚಾರಕ್ಕೆ ಅನುಮತಿ ಇದೆ
ವೈದ್ಯಕೀಯ ಮತ್ತು ಪಶು ವೈದ್ಯಕೀಯ ಸೇರಿದಂತೆ ತುರ್ತು ಸೇವೆಯ ಖಾಸಗಿ ವಾಹನಗಳು ಮತ್ತು ಅಗತ್ಯ ಸೇವೆಗಳು, ಸಾಮಗ್ರಿಗಳನ್ನು ಒದಗಿಸುವ ಹಾಗೂ ಕರ್ತವ್ಯಕ್ಕೆ ತೆರಳುವವರಿಗೆ ಸಂಬಂಧಿಸಿದಂತೆ ದ್ವಿಚಕ್ರ ವಾಹನದಲ್ಲಿ ಒಬ್ಬ ಸವಾರರು ಮತ್ತು ನಾಲ್ಕು ಚಕ್ರದ ವಾಹನಗಳಲ್ಲಿ ವಾಹನ ಚಾಲಕರೊಂದಿಗೆ ಒಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ನಿಮ್ಮ ಆರೋಗ್ಯದ ಕೀಲಿ ಕೈ ನಿಮ್ಮ ಕೈಯಲ್ಲಿದೆ
ಜಿಲ್ಲೆಯೂ ಸ್ಮಾರ್ಟ್ ಸಿಟಿಯಾಗಿರುವುದರಿಂದ ಜಿಲ್ಲೆಯ ಜನರು ಸ್ಮಾಟ್ ಆಗಿ ವರ್ತಿಸಬೇಕು. ಅಂಗಡಿಗಳಲ್ಲಿ ಗದ್ದಲ ಇರುವ ಸಮಯದಲ್ಲಿ ಹೋಗದೆ, ಅನುಕೂಲ ಮಾಡಿಕೊಂಡು ಅವಶ್ಯಕತೆಗೆ ಅನುಗುಣವಾಗಿ ಹೋಗಬೇಕು. ಆ ಮೂಲಕ “ನಿಮ್ಮ ಆರೋಗ್ಯದ ಕೀಲಿ ಕೈ ನಿಮ್ಮ ಕೈಯಲ್ಲಿದೆ” ಎಂದು ಜಿಲ್ಲಾಧಿಕಾರಿ ಹೇಳಿದರು.
144 ಸೆಕ್ಷನ್ ಮುಂದುವರೆಯಲಿದೆ
ಗ್ರೀನ್ ಜೋನ್ನಿಂದ ಸಾರ್ವಜನಿಕರು ಮೈಮರೆಯುಂತಿಲ್ಲ. ಮುಂದೇನಾದರೂ ಹೊಸ ಪ್ರಕರಣ ವರದಿಯಾದಲ್ಲಿ ಮತ್ತೆ ವಲಯ ವ್ಯತ್ಯಾಸವಾಗಲಿದೆ. ಸೇಫ್ ಜೋನ್ಗೆ ಬಂದಿರುವ ಸ್ಥಿತಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೇಲ್ಲರ ಮೇಲಿದೆ. ಹಾಗಾಗಿ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಇನ್ಮುಂದೆ ಮತ್ತಷ್ಟು ಸುಲಭ: ‘ಸಕಾಲ’ ಸೇವೆಗೆ ಭೌತಿಕ ಆರ್ಟಿಐ ಅರ್ಜಿಗಳ ಸೇರ್ಪಡೆ, ಗ್ರಾಮ ಒನ್ನಲ್ಲೂ ಲಭ್ಯ
ಸುದ್ದಿದಿನ,ಬೆಂಗಳೂರು: ನಾಗರಿಕರಿಗೆ ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯನ್ನು ಇನ್ನಷ್ಟು ಸುಲಭವಾಗಿ ಬಳಸಲು ಹಾಗೂ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರವು ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಎರಡು ಪ್ರಮುಖ ಹಾಗೂ ನೂತನ ನಿರ್ಧಾರಗಳನ್ನು ಕೈಗೊಂಡಿದೆ.
ಭೌತಿಕ ಆರ್ಟಿಐ ಅರ್ಜಿಗಳ ದಾಖಲಾತಿ ಈಗ ‘ಸಕಾಲ’ ಸೇವೆ
ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ (ಕಾಗದದ ರೂಪದ) ಆರ್ಟಿಐ ಅರ್ಜಿಗಳನ್ನು ಸ್ವೀಕರಿಸಿದ ಸಾರ್ವಜನಿಕ ಪ್ರಾಧಿಕಾರವು 2 ದಿನಗಳ ಒಳಗಾಗಿ ಆರ್ಟಿಐ ಆನ್ಲೈನ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
ಇದನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ರ ಅಡಿಯಲ್ಲಿ ಖಾತ್ರಿ ಸೇವೆಯಾಗಿ ಅಧಿಸೂಚಿಸಲಾಗಿದೆ. ಇದರಿಂದ ಪ್ರತಿಯೊಬ್ಬ ಅರ್ಜಿದಾರರಿಗೂ ಆನ್ಲೈನ್ ನೋಂದಣಿ ಸಂಖ್ಯೆ ದೊರೆಯಲಿದ್ದು, ಅರ್ಜಿಯ ಸ್ಥಿತಿಗತಿಯನ್ನು (Status) ಯಾವಾಗ ಬೇಕಾದರೂ ಪರಿಶೀಲಿಸಬಹುದು.
ಅರ್ಜಿಗಳು ಕಳೆದುಹೋಗುವ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇರುವುದಿಲ್ಲ. ನಿಯಮಿತ ۲ ದಿನಗಳಲ್ಲಿ ಪೋರ್ಟಲ್ನಲ್ಲಿ ದಾಖಲಿಸದಿದ್ದರೆ ನಾಗರಿಕರು ಸಕಾಲ ಕಾಯ್ದೆಯಡಿ ಪರಿಹಾರ ವೆಚ್ಚ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಯೇ ಇದಕ್ಕೆ ಹೊಣೆಗಾರರಾಗುತ್ತಾರೆ.
ಎಲ್ಲಾ ಒನ್ ಕೇಂದ್ರಗಳಲ್ಲಿ ಆನ್ಲೈನ್ ಆರ್ಟಿಐ ಸೇವೆ ಲಭ್ಯ
ಇಂಟರ್ನೆಟ್ ಅಥವಾ ಕಂಪ್ಯೂಟರ್ ಬಳಕೆ ತಿಳಿಯದ ಸಾರ್ವಜನಿಕರನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯದ ಎಲ್ಲಾ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್ಲೈನ್ ಆರ್ಟಿಐ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ನಾಗರಿಕರು ತಮ್ಮ ಸಮೀಪದ ಕೇಂದ್ರಕ್ಕೆ ತೆರಳಿ ಸಿಬ್ಬಂದಿಯ ನೆರವಿನಿಂದ ಅರ್ಜಿ ಸಲ್ಲಿಸಬಹುದು.
ನಿಗದಿತ ಆರ್ಟಿಐ ಶುಲ್ಕ ಮತ್ತು ಕೇಂದ್ರದ ನಾಮಮಾತ್ರ ಸೇವಾ ಶುಲ್ಕವನ್ನು ಪಾವತಿಸಿ, ಸ್ಥಳದಲ್ಲೇ ಆನ್ಲೈನ್ ಸ್ವೀಕೃತಿ (Acknowledgement) ಪಡೆಯಬಹುದು.
ಗ್ರಾಮ ಪಂಚಾಯಿತಿ ಮಟ್ಟದ ‘ಗ್ರಾಮ ಒನ್’ ಕೇಂದ್ರಗಳ ಮೂಲಕ ಈಗ ಹಳ್ಳಿಯ ಪ್ರತಿಯೊಬ್ಬ ನಾಗರಿಕರಿಗೂ ಆನ್ಲೈನ್ ಆರ್ಟಿಐ ಸೌಲಭ್ಯ ತಲುಪಿದೆ.
ಪ್ರಮುಖ ಪ್ರಯೋಜನಗಳು
ಏಕರೂಪದ ವೇದಿಕೆ: ಭೌತಿಕ, ಆನ್ಲೈನ್ ಅಥವಾ ಸೇವಾ ಕೇಂದ್ರಗಳ ಮೂಲಕ ಬರುವ ಎಲ್ಲಾ ಅರ್ಜಿಗಳು ಒಂದೇ ವೇದಿಕೆಯಡಿ ಬರಲಿವೆ. ಪಾರದರ್ಶಕತೆ: ಆರ್ಟಿಐ ಕಾಯ್ದೆ 2005ರ ಕಾಲಮಿತಿಗಳ ಪಾಲನೆಯನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು.
ಇದರಿಂದ ಮಾಹಿತಿ ಅಧಿಕಾರಿಗಳಿಂದಾಗುವ ವಿಳಂಬವನ್ನು ಶೀಘ್ರವಾಗಿ ಗುರುತಿಸಬಹುದು.
ನಾಗರಿಕರಿಗೆ ತಮ್ಮ ಅರ್ಜಿಗಳ ವಿಶ್ವಾಸಾರ್ಹ ದಾಖಲೆ ಲಭ್ಯವಾಗುತ್ತದೆ.
ಸಾರ್ವಜನಿಕರು ನೇರವಾಗಿ ಆನ್ಲೈನ್ನಲ್ಲಾಗಲಿ ಅಥವಾ ತಮ್ಮ ಸಮೀಪದ ಸೇವಾ ಕೇಂದ್ರಗಳ (ಬೆಂಗಳೂರು ಒನ್/ಕರ್ನಾಟಕ ಒನ್/ಗ್ರಾಮ ಒನ್) ಮೂಲಕವಾಗಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆಆರ್.ಐ.ಡಿ.ಎಲ್ ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
-
ದಿನದ ಸುದ್ದಿ4 days agoಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಇನ್ಮುಂದೆ ಮತ್ತಷ್ಟು ಸುಲಭ: ‘ಸಕಾಲ’ ಸೇವೆಗೆ ಭೌತಿಕ ಆರ್ಟಿಐ ಅರ್ಜಿಗಳ ಸೇರ್ಪಡೆ, ಗ್ರಾಮ ಒನ್ನಲ್ಲೂ ಲಭ್ಯ

