Connect with us

ದಿನದ ಸುದ್ದಿ

ಅರ್ಥವ್ಯವಸ್ಥೆಯ ದುರಸ್ತಿಯೂ ಭವಿಷ್ಯದ ದುರವಸ್ಥೆಯೂ–ಕೊರೋನಾ ಸಂಕಟ

Published

on

  • ನಾ ದಿವಾಕರ

“ಕೊನೆಗೂ ಭಾರತದ ಪ್ರಜೆಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ ”. ಹೀಗೇನಾದರೂ ಭಾವಿಸಿದರೆ ನಾವು ಯಾವುದೋ ಲೋಕದಲ್ಲಿದ್ದೇವೆ ಎಂದೇ ಅರ್ಥ. ಅಥವಾ ನಮ್ಮ ಸುದ್ದಿಮನೆಗಳಲ್ಲಿ ಕುಳಿತಿರುವ ಅನರ್ಥಶಾಸ್ತ್ರಜ್ಞರ ಮೋಡಿ(ದಿ)ಗೆ ಬಲಿಯಾಗಿದ್ದೇವೆ ಎಂದರ್ಥ. ಯಾವುದೇ ಸರ್ಕಾರ ವಿಪತ್ತಿನ ಸಂದರ್ಭದಲ್ಲಿ ಘೋಷಿಸುವ ಆರ್ಥಿಕ ಪ್ಯಾಕೇಜಿಗೆ ವಿಭಿನ್ನ ಮಜಲುಗಳು, ಆಯಾಮಗಳು, ಮಾರ್ಗಗಳು ಇರುತ್ತವೆ.

ಕಬ್ಬಿಣದ ತಿಜೋರಿಯಲ್ಲಿದ್ದ ಹಣವನ್ನೆತ್ತಿ ಎಲ್ಲರಿಗೂ ಹಂಚುವ ವಿಧಾನ ಇದಲ್ಲ. 20 ಲಕ್ಷ ಕೋಟಿಯನ್ನು 130ರಿಂದ ಭಾಗಿಸಿ ತಲಾ 15 ಸಾವಿರ ರೂ ಸಿಗುತ್ತದೆ ಎಂದು ಮೆರೆಯುವ ಸುದ್ದಿಮನೆಗಳು, ರೋಚಕತೆಗಾಗಿಯೇ ಹೀಗೆ ಮಾಡಿದ್ದರೂ ಇದು ಮುಠ್ಠಾಳ ಕೆಲಸ ಎನ್ನಲು ಅಡ್ಡಿಯಿಲ್ಲ.ಜನಪ್ರತಿನಿಧಿಗಳಲ್ಲೇ ಅರ್ಥಶಾಸ್ತ್ರದ ಅರಿವಿನ ಕೊರತೆ ಇರುವ ದೇಶದಲ್ಲಿ ಇದೇನೂ ಅಚ್ಚರಿ ಮೂಡಿಸುವ ವಿಚಾರವಲ್ಲ

ಕೊರೋನಾ ಪೂರ್ವದಲ್ಲಿದ್ದ ಭಾರತಕ್ಕೂ , ವರ್ತಮಾನದ ಸಂದರ್ಭಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಸಮಸ್ಯೆ ಉಲ್ಬಣಿಸಿದೆ ಅಷ್ಟೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ದೇಶದ ಉತ್ಪಾದನೆ ಕುಸಿದಿದೆ, ಜನಸಾಮಾನ್ಯರ ಖರೀದಿ ಸಾಮರ್ಥ್ಯ ಕ್ಷೀಣಿಸಿದೆ, ಮಾರುಕಟ್ಟೆಯಲ್ಲಿ ನಗದು ಚಲಾವಣೆ ಕಡಿಮೆಯಾಗುತ್ತಿದೆ, ಕೃಷಿ ಕ್ಷೇತ್ರ ಮಾರುಕಟ್ಟೆಯ ನೆರವು ಇಲ್ಲದೆ ಬರಡಾಗುತ್ತಿದೆ, ಗ್ರಾಮೀಣ ಆರ್ಥಿಕತೆ ಹಳ್ಳ ಹಿಡಿದಿದೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೆಳ ಮಧ್ಯಮವರ್ಗಗಳು ಮತ್ತು ಸಣ್ಣ-ಸೂಕ್ಷ್ಮ ವ್ಯಾಪಾರಿ ವರ್ಗ ಅಸ್ಥಿರತೆಯನ್ನು ಎದುರಿಸುತ್ತಿದೆ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರಧಾನ ಪಾತ್ರವಹಿಸುವ ದೇಶದ ದುಡಿಯುವ ವರ್ಗಗಳ ಜೇಬುಗಳು ಖಾಲಿಯಾಗಿವೆ.

ದುಡಿಮೆಯೂ ಇಲ್ಲದೆ, ಕೂಲಿಯೂ ಇಲ್ಲದೆ ತಮ್ಮ ತವರಿನ ಸೂರು ಅರಸಿ “ ಸತ್ತರೆ ನಮ್ಮ ತಾಯ್ನಾಡಿನಲ್ಲೇ ಸಾಯೋಣ ” ಎನ್ನುವ ಧೋರಣೆಯೊಂದಿಗೆ ಗುಳೆ ಹೊರಟಿರುವ ಕೋಟ್ಯಂತರ ಕಾರ್ಮಿಕರ “ ನಾಳೆಗಳು ” ಅನಿಶ್ಚಿತವಾಗಿವೆ.

ಅರ್ಥವ್ಯವಸ್ಥೆಗೂ ಈ ಸಮಸ್ಯೆಗಳಿಗೂ ಸಂಬಂಧ ಇರುವುದನ್ನು ಗುರುತಿಸದೆ ಹೋದರೆ, ನಮ್ಮ ಅನರ್ಥಶಾಸ್ತ್ರ ತರಕಾರಿ ಹರಾಜು ಮಾರುಕಟ್ಟೆಯಂತಾಗಿಬಿಡುತ್ತದೆ. 20 ಲಕ್ಷ ಕೋಟಿ ಎಂದ ಕೂಡಲೇ ನಮ್ಮ ಅಂಗಳದಲ್ಲಿ ಹಣದ ಮಳೆ ಸುರಿದಿದೆ ಎಂದು ಪಿಳಿಪಿಳಿ ನೋಡುವ ಅವಶ್ಯಕತೆ ಇಲ್ಲ. ಈ ಮೊತ್ತ ಎಲ್ಲಿಗೆ ತಲುಪುತ್ತದೆ, ಯಾವ ಮಾರ್ಗಗಳಲ್ಲಿ ಸಂಚರಿಸುತ್ತದೆ, ಯಾರನ್ನು ಮೇಲಕ್ಕೆತ್ತುತ್ತದೆ, ಯಾರನ್ನು ತುಳಿಯುತ್ತದೆ, ಸಂಚರಿಸುವ ಮಾರ್ಗಗಳಲ್ಲಿ ಎತ್ತೆತ್ತ ಉಪನಾಲೆಗಳನ್ನು ನಿರ್ಮಿಸಲಾಗುತ್ತದೆ ಈ ಎಲ್ಲ ಅಂಶಗಳನ್ನೂ ಪರಾಮರ್ಶೆ ಮಾಡಬೇಕು.

ಇನ್ನೂ ಮುಖ್ಯ ಸಂಗತಿ ಎಂದರೆ ಇದು ಎಲ್ಲಿಂದ ಸಂಗ್ರಹವಾಗುತ್ತದೆ ಎನ್ನುವ ಪ್ರಶ್ನೆ. ಏಕೆಂದರೆ ಇದನ್ನು ಸರಿದೂಗಿಸುವ ಹೊಣೆಯೂ ಈ ದೇಶದ ಜನಸಾಮಾನ್ಯರ ಮೇಲೆಯೇ ಇರುತ್ತದೆ. ಅರ್ಥಶಾಸ್ತ್ರದ ವಿದ್ವತ್ ಕೋಣೆಗಳಿಂದ ಹೊರನಿಂತು ನೋಡಿದರೂ ಈ ವಾಸ್ತವಗಳಿಗೆ ನಾವು ಉತ್ತರ ಹುಡುಕಬೇಕಾಗುತ್ತದೆ.

ಕೊರೋನಾ ಸಂದರ್ಭದಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಕಾಡಿದ ಹಲವು ಸಮಸ್ಯೆಗಳಿಗೆ ವೈರಾಣು ಕಾರಣವಲ್ಲ. ಉತ್ಪಾದನಾ ವಲಯ, ಕೃಷಿ ಉತ್ಪಾದನೆ ಮತ್ತು ಎಂಎಸ್‍ಎಂಇ ಉದ್ಯಮಗಳು ಬಂಡವಾಳದ ಕೊರತೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ಬಸವಳಿದಿದ್ದನ್ನು ಆರು ತಿಂಗಳ ಹಿಂದೆಯೇ ಅನೇಕ ಅರ್ಥಶಾಸ್ತ್ರಜ್ಞರು ಉಲ್ಲೇಖಿಸಿದ್ದಾರೆ.

ಮೇಕ್ ಇನ್ ಇಂಡಿಯ ಎನ್ನುವ ಮಹತ್ವಾಕಾಂಕ್ಷಿ ಯೋಜನೆ ತಳಮಟ್ಟದ ಉತ್ಪಾದನಾ ವಲಯಗಳಿಗೆ ಯಾವುದೇ ಉತ್ತೇಜನ ನೀಡದಿದ್ದುದನ್ನೂ ಕಳೆದ ಆರು ವರ್ಷಗಳಲ್ಲಿ ಗಮನಿಸಿದ್ದೇವೆ. ಇದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಸೃಷ್ಟಿಸಿರುವ ಸನ್ನಿವೇಶ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2020-21ರ ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳು ಜಾರಿಯಾಗುವ ಮುನ್ನವೇ ಕೊರೋನಾ ಅಪ್ಪಳಿಸಿದ್ದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆಯಷ್ಟೆ.

ಈಗ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಗಳ ಬೃಹತ್ ಪ್ಯಾಕೇಜ್ ನೀಡಿದೆ. ಇದನ್ನು ಅನ್ಯ ದೇಶಗಳಿಗೆ ಹೋಲಿಸಿ ನೋಡುವ ಅನಗತ್ಯ ಪೈಪೋಟಿಯನ್ನು ಸುದ್ದಿಮನೆಗಳಲ್ಲೇ ಬಿಟ್ಟು ಈ ಪ್ಯಾಕೇಜಿನ ಮೂಲ ಉದ್ದೇಶಗಳೇನು ಎನ್ನುವುದನ್ನು ಯೋಚಿಸಬೇಕಿದೆ. 3 ಲಕ್ಷ ಕೋಟಿ ರೂಗಳನ್ನು ಎಂಎಸ್‍ಎಂಇ ವಲಯದ ಪುನಶ್ಚೇತನಕ್ಕಾಗಿ ನೀಡಲಾಗಿದ್ದು ಬ್ಯಾಂಕುಗಳು ಖಾತರಿರಹಿತ ಸಾಲ ಒದಗಿಸುವಂತೆ ಆದೇಶಿಸಲಾಗಿದೆ.

ಸರ್ಕಾರವೇ ಖಾತರಿ ನೀಡುವುದರ ಮೂಲಕ ಸಣ್ಣ ಉದ್ದಿಮೆಗಳಿಗೆ ನೆರವಾಗುತ್ತದೆ. ಇದರ ಯಶಸ್ಸು ಬ್ಯಾಂಕುಗಳನ್ನು ಅವಲಂಬಿಸಿರುತ್ತದೆ. ಹಿಂದಿನ ಅನುಭವಗಳನ್ನು ನೋಡಿದರೆ ಆಶಾದಾಯಕವಾಗಿ ಕಾಣುವುದಿಲ್ಲ. ಆದರೂ ಭರವಸೆಯೊಂದಿಗೆ ಮುನ್ನಡೆಯಬಹುದು. ಸಾಲ ನೀಡುವ ಮೂಲಕ ಒಂದು ಉತ್ಪಾದನಾ ವಲಯದ ಆದಾಯ ಹೆಚ್ಚಿಸುವ ನೀತಿಯನ್ನು ಈ ಶತಮಾನದ ಆರಂಭದಲ್ಲೂ ಅನುಸರಿಸಲಾಗಿತ್ತು. ಇದು ಬ್ಯಾಂಕಿಂಗ್ ವ್ಯವಸ್ಥೆಯ ದುರವಸ್ಥೆಗೆ ಕಾರಣವಾಗಿದ್ದು ಹೌದು.

ಕೇಂದ್ರ ಸರ್ಕಾರದ ಮುಖ್ಯ ಗುರಿ ತಳಮಟ್ಟದ ಆರ್ಥಿಕತೆಯನ್ನು ಸದೃಢಗೊಳಿಸುವುದು ಆಗಬೇಕಿತ್ತು. ಸರಬರಾಜು ಸರಪಳಿಯನ್ನು ಬಲಪಡಿಸುವುದು ಸರ್ಕಾರದ ಮತ್ತು ಮಾರುಕಟ್ಟೆ ಶಕ್ತಿಗಳ ಉದ್ದೇಶವೇ ಆದರೂ, ದುಡಿಯುವ ವರ್ಗಗಳ ಖರೀದಿ ಸಾಮರ್ಥ್ಯ ಕುಸಿದಿರುವುದನ್ನೂ ಗಮನಿಸಬೇಕಲ್ಲವೇ ? ಇದನ್ನು ಹೆಚ್ಚಿಸಬೇಕೆಂದರೆ ದುಡಿಮೆಯ ಆದಾಯ ಹೆಚ್ಚಾಗಬೇಕು. ಆಗಲೇ ಸರಬರಾಜು ಸರಪಣಿಗೆ ಪೂರಕವಾಗಿ ನಗದು ಹರಿದಾಡುತ್ತದೆ. ಮಾರುಕಟ್ಟೆ ಚೇತರಿಸಿಕೊಳ್ಳುತ್ತದೆ. ಖರೀದಿ ಸಾಮರ್ಥ್ಯ ಹೆಚ್ಚಿಸಲು ತಾತ್ಕಾಲಿಕ ಶಮನದ ಕ್ರಮಗಳು ನೆರವಾಗುವುದಿಲ್ಲ.

ಕಾರ್ಮಿಕರ ವೇತನದಲ್ಲಿ ಏರಿಕೆಯಾಗಬೇಕು. ದುರಂತ ಎಂದರೆ ಕಾರ್ಮಿಕರ ದುಡಿಮೆಯ ಅವಧಿ ಹೆಚ್ಚಾಗುತ್ತಿದೆ, ಆದಾಯ ಕುಸಿಯುತ್ತಿದೆ. ಹೆಚ್ಚಿನ ಕೂಲಿ/ವೇತನ ನೀಡಲು ಎಂದೂ ಮುಂದಾಗದ ಎಂಎಸ್‍ಎಂಇ ಉದ್ಯಮಿಗಳು ಇನ್ನೆಷ್ಟೇ ಬಂಡವಾಳ ವೃದ್ಧಿಯನ್ನು ಕಂಡರೂ ವೇತನ ಹೆಚ್ಚಿಸುವುದಿಲ್ಲ. ಏಕೆಂದರೆ ಅವರ ಲಾಭಗಳಿಕೆಯೇ ಪ್ರಧಾನವಾಗಿರುತ್ತದೆ. ಮಾರುಕಟ್ಟೆ ವ್ಯವಸ್ಥೆ ಇದಕ್ಕೆ ಅವಕಾಶವನ್ನೇ ನೀಡುವುದಿಲ್ಲ.

ಕಾರ್ಪೋರೇಟ್ ಕೇಂದ್ರಿತ ಎಂಎಸ್‍ಎಂಇ ಉದ್ಯಮಿಗಳಿಗೆ ಇಲ್ಲಿ ನೆರವಾಗುತ್ತಿರುವುದು ಇದೇ ಸರ್ಕಾರಗಳೇ ಅಲ್ಲವೇ ? ಈಗಾಗಲೇ ಬಿಜೆಪಿ ಆಡಳಿತದ ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸರ್ಕಾರಗಳು ಮೂರು ತಿಂಗಳ ಅವಧಿಗೆ ಎಲ್ಲ ಕಾರ್ಮಿಕ ಕಾನೂನುಗಳನ್ನೂ ರದ್ದುಪಡಿಸಿದ್ದು, ದುಡಿಮೆಗಾರರ ಹಕ್ಕುಗಳ ತಾತ್ಕಾಲಿಕ ಸಮಾಧಿ ನಿರ್ಮಿಸಿಬಿಟ್ಟಿವೆ. ಕರ್ನಾಟಕ ಸರ್ಕಾರ ಇದೇ ಹಾದಿಯಲ್ಲಿ ನಡೆದಿದೆ. ತಮ್ಮ ಹಕ್ಕುಗಳನ್ನು ಕಳೆದುಕೊಂಡೇ ಕಾರ್ಮಿಕರು ದಿನಕ್ಕೆ ನಾಲ್ಕು ಗಂಟೆ ಹೆಚ್ಚು ದುಡಿಯುವ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ತಮ್ಮ ಸ್ವಗ್ರಾಮಗಳಿಗೆ ತೆರಳಿರುವ ವಲಸೆ ಕಾರ್ಮಿಕರು ಮರಳಿ ಬಾರದೆ ಹೋದರೆ ನಗರಗಳಲ್ಲಿನ ಎಂಎಸ್‍ಎಂಇ ಉದ್ದಿಮೆಗಳಲ್ಲಿ ನೌಕರರ ಕೊರತೆ ಉಂಟಾಗುತ್ತದೆ. ಅಥವಾ ಸ್ಥಳೀಯರಿಗೆ ಉದ್ಯೋಗ ದೊರೆತರೂ ಅವರ ಬದುಕು ಸುಂದರವಾಗೇನೂ ಇರುವುದಿಲ್ಲ. ಕಡಿಮೆ ಕೂಲಿಯಲ್ಲಿ ಹೆಚ್ಚಿನ ದುಡಿಮೆಗೆ ಶರಣಾಗಬೇಕಾಗುತ್ತದೆ. ಬಂಡವಾಳ ವ್ಯವಸ್ಥೆಯ ಈ ಕ್ರೌರ್ಯವನ್ನು “ ಪುನಶ್ಚೇತನ ” ಎಂದು ಬಣ್ಣಿಸುವುದು ಎಷ್ಟುಸರಿ ? ಇಲ್ಲಿ ನಮಗೆ ಜೀತ ಪದ್ಧತಿಯ ಪುನರ್ಜನ್ಮ ಕಾಣದೆ ಹೋದರೆ ಹೇಗೆ ? ವಿವೇಚನೆಗೆ ಬಿಟ್ಟ ವಿಚಾರ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಸ್ಥ ಉದ್ದಿಮೆಗಳ ವ್ಯಾಖ್ಯಾನವನ್ನು ಬದಲಿಸಲಾಗಿದ್ದು ಹೆಚ್ಚಿನ ಬಂಡವಾಳ ಹೂಡಿರುವ ಉದ್ದಿಮೆಗಳು, ಕೈಗಾರಿಕೆಗಳು ಈಗ ಎಂಎಸ್‍ಎಂಇ ಕ್ಷೇತ್ರಕ್ಕೆ ಒಳಪಡುತ್ತವೆ. ಕೊರೋನಾ ಸಂದರ್ಭದಲ್ಲಿ ಮತ್ತು ಇದಕ್ಕೂ ಮುಂಚಿನಿಂದಲೇ ತೀವ್ರ ಆರ್ಥಿಕ ಮುಗ್ಗಟ್ಟು, ಬಂಡವಾಳದ ಕೊರತೆ, ಕಚ್ಚಾವಸ್ತುಗಳ ಪೂರೈಕೆಯ ಕೊರತೆ, ಬೇಡಿಕೆ ಮತ್ತು ಸರಬರಾಜಿನಲ್ಲಿನ ವ್ಯತ್ಯಯ ಇವೆಲ್ಲ ಸಮಸ್ಯೆಗಳನ್ನು ಹೊತ್ತುಕೊಂಡು ಕುಂಟುತ್ತಿದ್ದ ಈ ಉದ್ದಿಮೆಗಳಲ್ಲಿ ಈಗ ಕಾರ್ಮಿಕ ರಕ್ಷಣಾ ಕಾನೂನುಗಳನ್ನು ರದ್ದುಪಡಿಸುವ ಮೂಲಕ, ಆಡಳಿತ ನಿರ್ವಹಣೆಗೆ ಸುಗಮ ಮಾರ್ಗವನ್ನು ಸೃಷ್ಟಿಸಲಾಗುತ್ತದೆ.

ಈ ವಲಯದ ಉದ್ದಿಮೆಗಳು ತೀವ್ರ ಸಂಕಷ್ಟದಲ್ಲಿರುವುದರಿಂದ, ಕಾರ್ಮಿಕರು ಕೆಲ ಕಾಲ ತ್ಯಾಗ ಮಾಡಿದರೆ ತಪ್ಪೇನಿಲ್ಲ ಎನ್ನುವ ಸಾರ್ವಜನಿಕ ಅಭಿಪ್ರಾಯವನ್ನು ತಯಾರಿಸಲು ಸುದ್ದಿಮನೆಗಳು ಈಗಾಗಲೇ ತಯಾರಾಗಿವೆ. ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯ ಸಾಲ ಪಡೆದರೂ ಉದ್ದಿಮೆಗಳು ಆ ಸಾಲದ ಹೊರೆಯನ್ನು ಕಾರ್ಮಿಕರ ದುಡಿಮೆಯಿಂದಲೇ ವಸೂಲಿ ಮಾಡುತ್ತವೆ ಎನ್ನುವುದನ್ನು ಅರ್ಥಶಾಸ್ತ್ರ ಬಲ್ಲವರಿಗೆ ಹೇಳಬೇಕಿಲ್ಲ.

ಕೊರೋನಾ ಸಂಕಟದ ಕಾಲದಲ್ಲಿ ಪುನಶ್ಚೇತನ ಬೇಕಿರುವುದು ಈ ದುಡಿಮೆಯ ಕೈಗಳಿಗೆ. ಈ ಕೈಗಳನ್ನು ನಂಬಿ ಬದುಕುವ ಕುಟುಂಬಗಳಿಗೆ. ತಮ್ಮ ಸ್ವಂತ ಸೂರು ತೊರೆದು ಮತ್ತೊಂದು ಊರು ಕಟ್ಟಲು ಹೋಗುವ ಶ್ರಮಜೀವಿಗಳಿಗೆ. ಇನ್ನೆರಡು ತಿಂಗಳಿಗೆ ಇವರ ಬದುಕು ನಡೆಯುವಷ್ಟು ದವಸ ಧಾನ್ಯ ನೀಡಿ ಕೈಗಿಷ್ಟು ಹಣ ನೀಡುವುದು ಸ್ವಾಗತಾರ್ಹವೇ. ಆದರೆ ಇವರ ಭವಿಷ್ಯದ ಬದುಕು ಸುಭದ್ರವಾಗಿರುವಂತಹ ಬುನಾದಿ ಹಾಕುವುದೂ ಅಷ್ಟೇ ಅವಶ್ಯಕ ಅಲ್ಲವೇ ? ಹಠಾತ್ತನೆ ಸ್ವದೇಶಿ ಮಂತ್ರ ಬಳಸುವ ಮುನ್ನ ಭಾರತದ ಪ್ರಭುತ್ವ ಯೋಚಿಸಬೇಕಾದ್ದು, ಇನ್ನು ಮುಂದಿನ ದಿನಗಳಲ್ಲಿ ಭಾರತದ ದುಡಿಮೆಯ ಕೈಗಳು ಯಾರಬಳಿ ಜೀತಕ್ಕಿರುತ್ತವೆ ಎನ್ನುವುದನ್ನು.

ಭಾರತದಲ್ಲೇ ತಯಾರಿಸಿ ಎನ್ನುವುದಕ್ಕೂ , ಭಾರತದವರಿಂದಲೇ ತಯಾರಿಸಿ ಎನ್ನುವುದಕ್ಕೂ ವ್ಯತ್ಯಾಸ ಇದೆಯಲ್ಲವೇ ? ಹೊರದೇಶಗಳಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಒಡಂಬಡಿಕೆಗಳಿಗೆ ಸಹಿ ಮಾಡಿ, ವಿದೇಶಿ ಕಂಪನಿಗಳು ನಮ್ಮ ನೆಲದಲ್ಲಿ ಉತ್ಪಾದಿಸುವ ಸರಕುಗಳನ್ನು ಸ್ವದೇಶಿ ಎಂದು ಚಪ್ಪರಿಸುವುದಾದರೆ ಅಡ್ಡಿಯಿಲ್ಲ.

ಈ ಔದ್ಯಮಿಕ ಲೋಕದ ಲಾಭ ಎತ್ತ ಹರಿಯುತ್ತದೆ, ಯಾರ ಭಂಡಾರವನ್ನು ತುಂಬಿಸುತ್ತದೆ ಎಂದು ಯೋಚಿಸದೆ ಹೋದರೆ ನಾವು ಹಣಕಾಸು ಬಂಡವಾಳ ವ್ಯವಸ್ಥೆಯ ಕ್ರೌರ್ಯವನ್ನು ಸ್ವದೇಶಿ ಚೌಕಟ್ಟಿನಲ್ಲೇ ಆಸ್ವಾದಿಸುವುದನ್ನು ಕಲಿತುಬಿಡುತ್ತೇವೆ. ಕೊರೋನಾ ಹೊರಗಿಟ್ಟು ನೋಡಿದರೂ ಭಾರತಕ್ಕೆ ಇಂದು ಅತ್ಯವಶ್ಯವಾಗಿ ಬೇಕಿರುವುದು ಸಾರ್ವಜನಿಕ ಬಂಡವಾಳ ಹೂಡಿಕೆ, ಕೃಷಿ ಬಂಡವಾಳ ಹೂಡಿಕೆ ಮತ್ತು ಸ್ಥಳೀಯ ಬಂಡವಾಳ ವೃದ್ಧಿಗೆ ಅಗತ್ಯವಾದ ಮೂಲ ಸೌಕರ್ಯಗಳು. ಈ ವಲಯಗಳಿಗೆ ಎಂದೋ ತರ್ಪಣ ಬಿಟ್ಟಿರುವ ನವ ಉದಾರವಾದದ ಪ್ರವರ್ತಕರು ಸರಬರಾಜು ಕೇಂದ್ರಿತ ಆರ್ಥಿಕತೆಯನ್ನೇ ಪೋಷಿಸುತ್ತಿದ್ದಾರೆ.

ಇತ್ತ ಬೇಡಿಕೆಯನ್ನು ಹೆಚ್ಚಿಸಲು ಬೇಕಾದ ಕ್ರಮಗಳ ಬಗ್ಗೆ ಚಿಂತಿಸುತ್ತಲೂ ಇಲ್ಲ. ಕೊರೋನಾ ಸಂದರ್ಭದಲ್ಲೂ, 20 ಲಕ್ಷ ಕೋಟಿ ಪ್ಯಾಕೇಜಿನಲ್ಲೂ ಇದನ್ನೇ ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ, ತುಟ್ಟಿಭತ್ಯೆಯನ್ನೂ ಕಳೆದುಕೊಳ್ಳಲಿದ್ದಾರೆ. ವೇತನ ಪರಿಷ್ಕರಣೆ ಬಹುಶಃ ಇನ್ನು ಕನಸಿನ ಮಾತಾಗುತ್ತದೆ. ವೇತನ ಪಡೆಯುವ ನೌಕರರ ಪಾಡು ಇದಾದರೆ ಕೂಲಿ ಮಾಡಿ ಬದುಕುವವರು ಹೇಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಲು ಸಾಧ್ಯ ?

ಅಂದರೆ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ಔದ್ಯಮಿಕ ವಲಯದ ಚೇತರಿಕೆಗೆ ಇಂಧನ ಒದಗಿಸುತ್ತದೆ. ಆದರೆ ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದಿಲ್ಲ. ಉತ್ಪಾದನೆಗೆ ಹೆಚ್ಚಿನ ಬಂಡವಾಳ ಹರಿದುಬರುತ್ತದೆ. ದುಡಿಮೆ ಅಗ್ಗವಾಗುತ್ತಾ ಹೋಗುತ್ತದೆ. ಅಗ್ಗದ ಕೂಲಿಯಲ್ಲೇ ಜೀವನ ಸವೆಸಬೇಕಾದ ಕೋಟ್ಯಂತರ ಕಾರ್ಮಿಕರು ಕ್ರಮೇಣ ಬಂಡವಾಳದ ದಾಸ್ಯದ ಸಂಕೋಲೆಗಳಲ್ಲಿ ಬಂದಿಗಳಾಗುತ್ತಾರೆ.

ಮತ್ತೊಂದೆಡೆ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸರ್ಕಾರ ತನ್ನ ಪ್ಯಾಕೇಜ್ ಮೂಲಕ ನೀಡುತ್ತಿರುವ ಸಾಲದ ಹೊರೆಯಲ್ಲೇ ಬದುಕು ಸವೆಸಬೇಕಾಗುತ್ತದೆ. ನೆರವಿಗೆ ಧಾವಿಸಿ ಸಾಲ ನೀಡುವುದು ಊಳಿಗಮಾನ್ಯ ಹಣಕಾಸು ವ್ಯವಸ್ಥೆಯ ಲಕ್ಷಣವಲ್ಲವೇ? ಬಂಡವಾಳ ವ್ಯವಸ್ಥೆಯೂ ಭಿನ್ನವಾಗಿರುವುದಿಲ್ಲ ಎಂದು ಮೋದಿ ಸರ್ಕಾರ ನಿರೂಪಿಸಿದೆ.

ಕಳೆದ ಆರು ವರ್ಷಗಳಿಂದಲೂ ಸರಬರಾಜು ಕೇಂದ್ರಿತ ಆರ್ಥಿಕ ನೀತಿಗಳನ್ನೇ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಕೊರೋನಾ ಸೃಷ್ಟಿಸಿರುವ ಸಂಕಷ್ಟದ ಸಮಯದಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಯೋಚಿಸಬೇಕಿತ್ತಲ್ಲವೇ ? ಔದ್ಯಮಿಕ ವಲಯದ ಸರಕು ಮತ್ತು ಸೇವೆಯ ಉತ್ಪಾದನೆಯನ್ನು ಮತ್ತು ಸರಬರಾಜು ಸರಪಣಿಯನ್ನು ನಿರ್ಧರಿಸುವ ಮಾರುಕಟ್ಟೆ ಶಕ್ತಿಗಳೇ ಬೇಡಿಕೆಯನ್ನೂ ನಿಯಂತ್ರಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ಇಲ್ಲಿ ಗ್ರಾಹಕರ ಬೇಡಿಕೆಗಳು ಮತ್ತು ಆಯ್ಕೆಗಳನ್ನೂ ಸಹ ಮಾರುಕಟ್ಟೆಯೇ ನಿರ್ಧರಿಸುತ್ತದೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ಸೂಪರ್ ಮಾರುಕಟ್ಟೆಗಳಲ್ಲಿ, ಮಾಲ್‍ಗಳಲ್ಲಿ ಕಾಣಬಹುದು. ಅಲ್ಲಿ ನಾವು ಖರೀದಿಸುವುದು ನಮ್ಮ ಆಯ್ಕೆಯ ವಸ್ತುಗಳನ್ನಲ್ಲ, ಅವರು ಒಂದಕ್ಕೊಂದು ಉಚಿತ ನೀಡುವ ಉತ್ಪನ್ನಗಳನ್ನು. ಪದಾರ್ಥಗಳ ಅವಶ್ಯಕತೆ ಮತ್ತು ಗುಣಮಟ್ಟ ಮೌನವಾಗಿ ನೇಪಥ್ಯಕ್ಕೆ ಸರಿಯುತ್ತದೆ. ನಾವು ಹಣ ಕಳೆದುಕೊಂಡು ಬಂದರೂ ಲಾಭ ಗಳಿಸಿದ ಹಿರಿಮೆಯಲ್ಲಿ ಹೊರಬರುತ್ತೇವೆ.

ಕಳೆದ ಐದಾರು ವರ್ಷಗಳಿಂದಲೇ ಸಾರ್ವಜನಿಕ ಬಂಡವಾಳ ಹೂಡಿಕೆ ಇಲ್ಲದೆ ಸೊರಗಿಹೋಗಿರುವ ಭಾರತದ ಕೃಷಿ ಕ್ಷೇತ್ರ ಕೊರೋನಾ ಸಂದರ್ಭದಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಕೃಷಿ ಕ್ಷೇತ್ರದ ಪುನಶ್ಚೇತನ ಸರ್ಕಾರದ ಆದ್ಯತೆಯಾಗಲಾರದು. ಏಕೆಂದರೆ ನವ ಉದಾರವಾದದ ಅರ್ಥವ್ಯವಸ್ಥೆಯಲ್ಲಿ ಕೃಷಿ ಪ್ರಧಾನವಾಗಿ ಕಾಣುವುದಿಲ್ಲ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟೀಕರಣಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿರುವುದು ಕಳೆದ ಬಜೆಟ್ ಸಂದರ್ಭದಲ್ಲೇ ಸ್ಪಷ್ಟವಾಗಿದೆ. ಈ ಎರಡು ತಿಂಗಳ ಲಾಕ್ ಡೌನ್ ಅವಧಿಯಲ್ಲಿ ಮತ್ತು ಇನ್ನು ಮುಂದಿನ ಕೊರೋನಾ ದಿನಗಳಲ್ಲಿ ಕೃಷಿಕರ ಬದುಕಿಗೆ ಯಾವ ರೀತಿ ಸಾಂತ್ವನ ನಿರೀಕ್ಷಿಸಲು ಸಾಧ್ಯ. ಇದನ್ನು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಕರ್ನಾಟಕ ಸರ್ಕಾರದ ಕ್ರಮದಲ್ಲಿ ಕಾಣಬಹುದು.

ಈಗಿರುವ 1966ರ ಎಪಿಎಂಸಿ ಕಾಯ್ದೆಯನ್ನು 1986ರಲ್ಲಿ ಮತ್ತಷ್ಟು ಬಲಪಡಿಸಿ, ಕೃಷಿ ಉತ್ಪನ್ನಗಳ ಖರೀದಿದಾರರು, ರೈತರು ಎಪಿಎಂಸಿಗೆ ಸಲ್ಲಿಸುವ ಉತ್ಪನ್ಮಗಳನ್ನು ನೋಂದಣಿ ಮಾಡಿಸಿದ ನಂತರವೇ ಖರೀದಿಸುವ ನಿಯಮ ಜಾರಿಯಲ್ಲಿತ್ತು. ಈ ಕಾಯ್ದೆಯಡಿ ಕಾರ್ಪೋರೇಟ್ ಉದ್ದಿಮೆಗಳು ರೈತರಿಂದ ನೇರವಾಗಿ ಖರೀದಿಸಲು ಸಾಧ್ಯವಿರಲಿಲ್ಲ. ತಮ್ಮದೇ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಹೊಂದಿರುವ ಕಾರ್ಪೋರೇಟ್ ಉದ್ದಿಮೆಗಳೂ ಎಪಿಎಂಸಿಯೊಡನೆ ಒಡಂಬಡಿಕೆ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು.

ಈ ಕಾಯ್ದೆಯನ್ನು ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮುಂದಾಗಿದೆ. ಈ ತಿದ್ದುಪಡಿ ಜಾರಿಯಾದರೆ ಎಪಿಎಂಸಿ ಆವರಣದಲ್ಲೇ ರೈತರಿಂದ ನೇರವಾಗಿ ಖರೀದಿಸಲು ಬೃಹತ್ ಕಾರ್ಪೋರೇಟ್ ಉದ್ದಿಮೆಗಳಿಗೆ ಅವಕಾಶ ದೊರೆಯುತ್ತದೆ. ಇದು ರೈತರನ್ನು ಕಾರ್ಪೋರೇಟ್ ಗುಲಾಮಗಿರಿಗೆ ಒಳಪಡಿಸುವ ಮಾರುಕಟ್ಟೆ ತಂತ್ರ ಎನ್ನುವುದು ಸ್ಪಷ್ಟ. ಈಗಾಗಲೇ ಆರ್ಥಿಕ ಮುಗ್ಗಟ್ಟು, ಕುಸಿದ ಉತ್ಪನ್ನ, ಹೆಚ್ಚಿರುವ ಗೊಬ್ಬರ ಮತ್ತು ಬೀಜದ ಬೆಲೆ, ಅಗ್ಗದ ಬೆಂಬಲ ಬೆಲೆ ಇಂತಹ ಹತ್ತು ಹಲವು ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯ ಬೀದಿಪಾಲಾಗಲು ಸಜ್ಜಾಗಬೇಕಿದೆ.

ತಮ್ಮ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದ ಒಂದು ಅಂಶವನ್ನು ಗಮನಿಸಬೇಕು. ಈ ಪ್ಯಾಕೇಜ್ ಮೂಲತಃ ದುಸ್ಥಿತಿಯಲ್ಲಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಭೂಮಿ, ಶ್ರಮ ಮತ್ತು ಹಣಕಾಸು ದ್ರವೀಕರಣ(ಲಿಕ್ವಿಡಿಟಿ) ಒದಗಿಸುವ ಉದ್ದೇಶ ಹೊಂದಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಡೀ ಪ್ಯಾಕೇಜಿನ ಅಂತರಾತ್ಮ ಈ ಮೂರು ಸ್ತಂಭಗಳಲ್ಲಿ ಅಡಗಿದೆ.

ಹೊರದೇಶಗಳಿಂದ ಮೇಕ್ ಇನ್ ಇಂಡಿಯ ಯೋಜನೆಯಡಿ ಔದ್ಯಮಿಕ ಸಾಮ್ರಾಜ್ಯ ಸ್ಥಾಪಿಸಲು ಬರುವ ಕಾರ್ಪೋರೇಟ್ ಉದ್ಯಮಿಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ಸುಲಭವಾಗುವಂತೆ ಶಾಸನ ಜಾರಿಮಾಡಲಾಗುತ್ತದೆ. ಅಗ್ಗದ ಶ್ರಮ ಲಭ್ಯವಾಗುವಂತೆ ಶ್ರಮಿಕರನ್ನು ಕಟ್ಟಿಹಾಕಲು ಈಗಾಗಲೇ ಕಾರ್ಮಿಕ ಕಾನೂನುಗಳನ್ನು ನೆಲಸಮ ಮಾಡಲಾಗುತ್ತಿದೆ. ಇನ್ನು ಸರಬರಾಜು ಕೇಂದ್ರಿತ ಆರ್ಥಿಕತೆಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ದ್ರವೀಕರಣ ಸಹಜವಾಗಿಯೇ ನಡೆಯುತ್ತದೆ. ಸಾರ್ವಜನಿಕ ಹಣಕಾಸು ವಲಯದ ಸಾಂಸ್ಥಿಕ ನೆಲೆಗಳನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ.

ಬಂಡವಾಳ ವ್ಯವಸ್ಥೆ ಮತ್ತು ಹಣಕಾಸು ಬಂಡವಾಳದ ನವ ಉದಾರವಾದಿ ಮಾರುಕಟ್ಟೆಯ ಕ್ರೌರ್ಯದ ನಡುವೆಯೇ ಭಾರತದ ಶ್ರಮಿಕ ವರ್ಗ, ಕೃಷಿಕ ವರ್ಗ, ವಲಸೆ ಕಾರ್ಮಿಕರ ವರ್ಗ ಮತ್ತು ಕೆಳ ಮಧ್ಯಮ ವರ್ಗಗಳು ಕೊರೋನಾ ವಿರುದ್ಧ ಸೆಣಸಾಡಬೇಕಾಗುತ್ತದೆ. ದುರಂತ ಎಂದರೆ ದೇಶಾದ್ಯಂತ ಸಾವಿರಾರು ಜನರನ್ನು ಒಂದು ವೈರಾಣು ಸಾವು ಬದುಕಿನ ಸಂಘರ್ಷದಲ್ಲಿ ತೊಡಗಿಸಿರುವಾಗ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶ್ರಮಿಕ ವರ್ಗಗಳ, ಉತ್ಪಾದಕೀಯ ಶಕ್ತಿಗಳ ಕತ್ತು ಹಿಸುಕುವ ಪ್ರಯತ್ನಗಳು ನಡೆಯುತ್ತಿದೆ.

ಅಭಿವೃದ್ಧಿಯ ಪರಿಭಾಷೆ ಮತ್ತು ಪ್ರಗತಿಯ ಪರಿಕಲ್ಪನೆ ಎರಡನ್ನೂ ನಿಷ್ಕರ್ಷೆಗೊಳಪಡಿಸಿ ಹೊಸ ಜಗತ್ತನ್ನು ನಿರ್ಮಿಸುವ ಹೊಣೆ ಬಹುಶಃ ದುಡಿಯುವ ವರ್ಗಗಳ ಮೇಲೆಯೇ ಇದೆ. ವರ್ಗ ಸಂಘರ್ಷ ಇದರ ಒಂದು ಮಾರ್ಗ. ಇದು ಸಾಕಾರಗೊಳ್ಳುವುದೋ ಇಲ್ಲವೋ, ಸಾರ್ಥಕ ಮಾರ್ಗವೋ ಅಲ್ಲವೋ ಎನ್ನುವುದಕ್ಕಿಂತಲೂ ಇದು ಅನಿವಾರ್ಯವೋ ಅಲ್ಲವೋ ಎಂದು ಯೋಚಿಸುವುದು ಇಂದಿನ ತುರ್ತು.

ಕೊರೋನಾ ಶ್ರಮಜೀವಿಗಳ ಪಾಲಿಗೆ ಒಂದು ರೀತಿಯಲ್ಲಿ ಮಾರಣಾಂತಿಕವಾಗಿದ್ದರೂ ಮತ್ತೊಂದು ರೀತಿಯಲ್ಲಿ ಪ್ರಭುತ್ವದ ನೈಜ ಮುಖವನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನೂ ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ಹೊಸ ಬದುಕು ಮತ್ತು ಹೊಸ ನಾಡು ಕಟ್ಟುವುದು ನಮ್ಮ ಹೊಣೆ. ಕೊರೋನಾ ನಂತರ ಈ ಹೊಣೆ ಇನ್ನೂ ಹೆಚ್ಚಾಗುತ್ತದೆ. ಈ ಸಂಘರ್ಷದ ನಿರೀಕ್ಷೆಯೊಂದಿಗೇ ಮುನ್ನಡೆಯೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆ‌ಆರ್.ಐ.ಡಿ.ಎಲ್  ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಮಾಯಕೊಂಡ  ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್‌ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.

ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.

ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending