Connect with us

ಲೈಫ್ ಸ್ಟೈಲ್

‘ಕೋವಿಡ್’ ನಾ ಕಂಡ ಹಾಗೆ : ಡಾ. ರಾಘವೇಂದ್ರ. ಎಫ್. ಎನ್

Published

on

  • ಡಾ. ರಾಘವೇಂದ್ರ. ಎಫ್. ಎನ್

ಬ್ಬ ಯೋದ ಯುದ್ಧದಲ್ಲಿ ಪಾಲ್ಗೊಂಡಾಗ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೊರಾಡುತ್ತಾನೆ. ಕೆಲವರು ಚತುರವಾಗಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡು ಅಲ್ಪಸ್ವಲ್ಪ ಗಾಯ ಮಾಡಿಕೊಂಡರೂ ಸರಿ, ಆದರೂ ಹೋರಾಡಿ ಕೊನೆಗೆ ಗೆಲುವು ಸಾಧಿಸುತ್ತಾರೆ ಆದರೇ ಇನ್ನೂ ಕೆಲವರು ವೀರಾವೇಶದಿಂದ ಉದ್ವೇಗವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಯಾಕೆ ಇದನ್ನು ಹೇಳಿದೆ ಎಂದರೆ ಇದರಿಂದ ಸೋಂಕಿತರಾದ ಕೆಲವರ ಪರಿಸ್ಥಿತಿ ಹಾಗೆಯೆ.

ಕೋವಿಡ್ ಈಗ ಜಾಗತಿಕಮಾರಿ.ಜಗತ್ತನ್ನೇ ಭಯಭೀತಗೊಳಿಸಿ ಊನ ಮಾಡಿರುವ ಈ ವೈರಾಣು ಕೆಲವರನ್ನು ಸ್ವಲ್ಪ ದಿನ ಮಾತ್ರ ಕಾಡಿ ಸುಮ್ಮನೆ ಬಿಟ್ಟುಬಿಟ್ಟರೆ ಇನ್ನೂ ಕೆಲವರನ್ನು ಹಿಂಡಿ ಹಿಪ್ಪೆಕಾಯಿಮಾಡಿ ಪ್ರಾಣವನ್ನೇ ತೆಗೆದುಬಿಡುತ್ತದೆ.ಯಾಕೆ ಹೀಗೆ?

ಕೊರೊನ ಮತ್ತು ದೇಹದ ಯುದ್ಧ..!

ಇಲ್ಲಿ ಬರೀ ಕೊರೊನ ವೈರಾಣುವನ್ನು ಒಂದನ್ನೇ ದೂಷಿಸುವುದು ತರವಲ್ಲ. ನಾನು ಈಗಾಗಲೇ ಹೇಳಿದ ಹಾಗೆ ನಮ್ಮ ದೇಹದ ರೋಗನಿರೋಧಕ ಶಕ್ತಿ, ಸೈನಿಕರ ದಂಡು ಇದ್ದ ಹಾಗೆ ಈ ವೈರಾಣುವನ್ನು ಈ ಸೈನಿಕರು ಎಷ್ಟು ಚಾಣಾಕ್ಷವಾಗಿ ಹದ್ದು ಬಸ್ತಿಗೆ ತರುತ್ತಾರೆಯೋ ಅಥವಾ ಅತಿರೇಕವಾಗಿ ಹೋರಾಡಿ ತಮ್ಮ ದೇಹವನ್ನ ತಾವೇ ಹಾನಿ ಮಾಡಿಕೊಳ್ಳುತ್ತಾರೆಯೋ ಅದರ ಮೇಲೆ ನಿರ್ಭರ.

ಈ ವೈರಾಣು ಹೇಗೆ ದೇಹ ಪ್ರವೇಶಿಸುತ್ತದೆ, ಹೇಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಯಾಕೆ ಕೆಲವರು ಬರೀ ಶೀತ, ಕೆಮ್ಮು, ಜ್ವರ, ಮೈ ಕೈ ನೋವಿನಿಂದ ಬಳಲಿ ಗುಣಮುಖರಾಗುತ್ತಾರೆ ಮತ್ತು ಇನ್ನೂ ಕೆಲವರು ಉಸಿರಾಟದ ತೊಂದರೆ, ಆಯಾಸ, ಅಂಗವೈಫಲ್ಯ, ಆಮ್ಲಜನಕ ಕೊರತೆಯಿಂದ ಬಳಲಿ ಆಸ್ಪತ್ರಗೆ ಸೇರಿ ಆಮ್ಲಜನಕ, ವೆಂಟಿಲೇಟರ್ ಇತ್ಯಾದಿ ಉತ್ತಮ ಮಟ್ಟದ ವೈದ್ಯಕೀಯ ಚಿಕಿತ್ಸೆ, ಔಷಧ ಪಡೆದರೂ ಕೂಡ ಅಸುನೀಗುತ್ತಾರೆ ಎಂಬುದು ಒಂದು ವೈದ್ಯಕೀಯ ವೈಚಿತ್ರವೇ ಸರಿ.

ಇದಕ್ಕೆ ಕಾರಣ ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ಅದು ಹೋರಾಡುವ ಪರಿ ಅತಿಯಾಗಿ ಹೋರಾಡಿದರೆ ದೇಹದಲ್ಲಿನ ರೋಗನಿರೋಧಕ ಕಣಗಳು ಅಗತ್ಯಕ್ಕಿಂತ ಹೆಚ್ಚಾಗಿ ಹೊರಬಂದು, ರಕ್ತ ಸಂಚಲನೆ ತಡೆಯೊಡ್ಡಿ,, ಪುಪ್ಪಸದಲ್ಲಿ ರಕ್ತಹೆಪ್ಪುಗಟ್ಟಿ, ನೀರು ತುಂಬಿ ತೀವ್ರ ಉಸಿರಾಟದ ತೊಂದರೆಯಾಗಿ ಕೊರತೆಯಾಗಿ(ಹೈಪೈಕ್ಸಿಯಾ), ವೆಂಟಿಲೇಟರ್ ಇನ್ನಿತರ ಸಲಕರಣೆ ಮೂಲಕ ಆಮ್ಲಜನಕ ಪೂರೈಕೆ ಮಾಡಿ ಮತ್ತು ಅತೀ ಉನ್ನತ ಔಷಧಗಳನ್ನು ಕೊಟ್ಟರೂ ಸಾವನ್ನಪ್ಪುತ್ತಾರೆ.

ನಮ್ಮ ರೋಗನಿರೋಧಕ ಹೋರಾಟ ಅತೀ ಮಂದವಾಗಿದ್ದರೂ ಹಾನಿ, ಅತೀ ವೇಗವಾಗಿದ್ದರೂ ಹಾನಿ. ಮಧ್ಯಮದಲ್ಲಿದ್ದರೆ ಉತ್ತಮ.ಹಿಡಿತದಲ್ಲಿದ್ದರೆ ದೇಹಕ್ಕೆ ಇನ್ನೂ ಉತ್ತಮ, ಹೀಗಿದ್ದರೆ ಶೀಘ್ರ ಗುಣಮುಖರಾಗಲು ಅಥವಾ ರೋಗ ಸೋಂಕಿದ ನಂತರ, ಗುಣಮುಖರಾದ ಮೇಲೆ ದೇಹದ ಮೇಲೆ ಆಗುವ ಪರಿಣಾಮಗಳನ್ನು ತಡೆಗಟ್ಟಬಹುದು.

ಆದರೇ ಇದು ನಮ್ಮ ಕೈಯಲ್ಲಿಲ್ಲ ಆದರೂ ವಿಜ್ಞಾನಿಗಳು ಇಂತಹ ಪರಿಸ್ಥಿತಿ ಎದುರಿಸಲು ಕೆಲವು ಔಷಧಗಳನ್ನು ಕಂಡುಹಿಡಿದಿದ್ದಾರೆ. ವೈರಾಣುವನ್ನು ದೇಹದ ಒಳಗೆ ಬರುವುದನ್ನು ತಡೆಗಟ್ಟುವ ಕೆಲವು ಔಷಧಗಳಾದ ಹೈಡ್ರಾಕ್ಸಿಕ್ಲೋರೊಕ್ಕಿನ್, ವೈರಾಣು ದೇಹದೊಳಗಡೆ ದ್ವಿಗುಣಗೊಳ್ಳುವುದನ್ನು ತಡೆಗಟ್ಟಲು ಐವರ್ಮೆಕ್ಟಿನ್, ಲೋಪಿನವೀರ್, ಫೆವಿಪಿರವೀರ್, ರೆಮಿಡೀಸ್ವೀರ್ ಇತ್ಯಾದಿಗಳು ಹಾಗು ದೇಹದ ರೋಗನಿರೋಧಕ ಶಕ್ತಿ ಅತೀ ಹೆಚ್ಚು ಪ್ರಮಾಣದಲ್ಲಿದ್ದು ದೇಹಕ್ಕೆ ಹಾನಿ ಮಾಡುವಂಥ ಸೈಟೋಕೈನ್ ಎಂಬ ನಮ್ಮ ರೋಗ ನಿರೋಧಕ ಕಣಗಳೇ ನಮಗೆ ವೈರಿಯಾಗಿ ಬಿಡುತ್ತವೆ ಮತ್ತು ಸೈಟೊಕೈನ್ರಭಸದ ಖಾಯಿಲೆ ಅಥವಾ ಸೈಟೊಕೈನ್ಸ್ಟಾಮ್ ಸಿಂಡ್ರೋಮ್ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಅತೀಶೀಘ್ರವಾಗಿ ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದು ಎರಡನೇ ವಾರದಲ್ಲಿ ಕೆಲವರಲ್ಲಿ ಆಗುವ ಸಂಭವ ಹೆಚ್ಚು. ಹೀಗೆ ಹೆಚ್ಚಾದ ಸಂದರ್ಭದಲ್ಲಿ, ಅದನ್ನು ತಡೆಗಟ್ಟುವ ಔಷಧಗಳಾದ ಸ್ಟಿರಾಯ್ಡ್ಸ್, ಟೋಕ್ಲಿಜುಮ್ಯಾಬ್, ಉಲಿನ ಸ್ಟಾಟಿನ್ಹೀಗೆ ಇನ್ನೂ ಇತ್ಯಾದಿ ಔಷಧಗಳನ್ನ ಬಳಸಬಹುದು. ಆದರೇ ಇದು ಸಂಪೂರ್ಣವಾಗಿ ವೈದ್ಯರ ಮಾರ್ಗದರ್ಶನದಲ್ಲಿ, ತೀವ್ರ ನಿಗಾ ಘಟಕದಲ್ಲಿ ಕೊಡಬೇಕು. ಇದರಲ್ಲಿ ಕೆಲವರು ತೀವ್ರತೆ ಇಂದ ಹೊರಬರುತ್ತಾರೆ ಇನ್ನೂ ಕೆಲವರು ಇದಕ್ಕೆ ಸ್ಪಂದಿಸದೆ ಅಸುನೀಗುತ್ತಾರೆ.

ಮೊದಲೇ ರೋಗಲಕ್ಷಣಗಳು ಕಂಡಾಗ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ. ಬೆರಳತುದಿಗೆ “ಪಲ್ಸ್‍ಆಕ್ಸಿಮೀಟರ್” ಎಂಬ ದೇಹದೊಳಗಿನ ಆಮ್ಲಜನಕ ಸಾಂದ್ರತೆ ಅಳೆಯುವ ಚಿಕ್ಕ ಮಾಪನವನ್ನು ತೂರಿಸಿ ಪರೀಕ್ಷೆಮಾಡಿಕೊಳ್ಳುವುದು ಬಹಳಮುಖ್ಯ. ಎಷ್ಟೋ ಜನ ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡರೂ ಅವರ ಆಮ್ಲಜನಕ ಸಾಂದ್ರತೆ (ಎಸ್ಪಿ 02)ಕಡಿಮೆ ಇರುತ್ತದೆ ಅದು ಹೊರಗಡೆ ತೋರ್ಪಡದೆ ಇದ್ದಕ್ಕಿದ್ದ ಹಾಗೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗುವವರು ಬಹಳ. ಇದಕ್ಕೆ ಇಂಗ್ಲಿಷ್‍ನಲ್ಲಿ “ಹ್ಯಾಪಿಹೈಪೆಕ್ಸಿಯಾ” ಅಥವಾ “ಒಳ ಹುದುಗಿರುವ ಕ್ಷೀಣಗೊಂಡ ಆಮ್ಲಜನಕದ ಕೊರತೆ” ಇಂಥ ಸಂದರ್ಭದಲ್ಲಿ ಬೇಗನೆ ಆಮ್ಲಜನಕ ಪೂರೈಕೆ ಮಾಡಿದರೆ ಬಹಳಷ್ಟು ಜನ ಬದುಕುವರು.

ಸಾಮಾನ್ಯವಾಗಿ ಈ ಆಮ್ಲಜನಕ ಸಾಂದ್ರತೆ ದೇಹದಲ್ಲಿ ಶೇಕಡಾ 95 ಅಥವಾ ಮೇಲ್ಪಟ್ಟು ಇರಬೇಕು. 90 ರಿಂದ 95 ಇದ್ದರೆ ಮಧ್ಯಮ, 90 ಕ್ಕಿಂತಲೂ ಕಡಿಮೆ ಇದ್ದರೆ ತೀವ್ರ ಹಾಗು 85 ಕ್ಕಿಂತಲೂ ಕಡಿಮೆ ಇದ್ದರೆ ಅತೀ ತೀವ್ರ ಆಮ್ಲಜನಕ ಕೊರತೆ ಎನ್ನುವರು. ಇಂಥವರಿಗೆ, ಸಿಲಿಂಡರ್ ಮೂಲಕ, ವಿಧವಾದ ಮಾಸ್ಕ್ ಮೂಲಕ ಅಥವಾ ನಳಿಕೆಗಳ ಮೂಲಕ ತೀವ್ರ ಆಮ್ಲಜನಕ ಪೂರೈಕೆ (ಹೆಚ್.ಎಫ್.ಎನ್.ಸಿ) ಅಥವಾ ಕೊನೆಗೆ ಕೃತಕ ಉಸಿರಾಟವನ್ನು ವೆಂಟಿಲೇಟರ್ ಮೂಲಕ ಪೂರೈಸಬೇಕಾಗಬಹುದು. ಇವೆಲ್ಲದರ ನಿರ್ಧಾರವನ್ನು ತೀವ್ರ ನಿಗಾ ಘಟಕದ ತುರ್ತು ವೈದ್ಯತಂಡದ ವೈದ್ಯರು ನಿರ್ಧರಿಸುತ್ತಾರೆ.

ರಕ್ತಪರೀಕ್ಷೆಗಳಾದ, ರಕ್ತಕಣಗಳು, ಡಿಡೈಮರ್, ಫೆರಿಟೀನ್, ಎಲ್ಡಿಹೆಚ್, ಸಕ್ಕರೆ ಪ್ರಮಾಣ, ಉಪ್ಪಿನಂಶ, ಇಂಟೆರ್ಲುಕಿನ್ 6 ಹೀಗೆ ಅನೇಕ ರಕ್ತಪರೀಕ್ಷೆಗಳನ್ನ ವೈದ್ಯರು ಮಾಡಿಸಿ ಅವರ ಮಾರ್ಗದರ್ಶನದಂತೆ ಚಿಕಿತ್ಸೆಕೊಡುತ್ತಾರೆ. ಎದೆಯ ಭಾಗದ ಕ್ಷ ಕಿರಣ ಚಿತ್ರ ಹಾಗೂ ಎದೆಯ ಸಿಟಿ ಸ್ಕ್ಯಾನ್ ಅನ್ನು ವೈದ್ಯರು ಸಲಹೆ ನೀಡಿ, ಅದರ ಉಪಲಬ್ಧತೆ ಮೇರೆಗೆ ಮಾಡಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವರು. ಇವೆಲ್ಲವನ್ನೂ ನಾಲ್ಕರಿಂದ ಎಂಟನೇ ದಿನಗಳ ಮಧ್ಯದಲ್ಲಿ ಮಾಡಿಸಿ ನಿರ್ಧರಿಸುತ್ತಾರೆ.

ರಕ್ತದಲ್ಲಿ ಕಣಗಳ ಸಾಂದ್ರತೆ ಹೆಚ್ಚಾದರೆ ಉಸಿರಾಟದ ಏರುಪೇರು ಹೆಚ್ಚು. ವಯಸ್ಸಾದವರು, ಸಕ್ಕರೆಖಾಯಿಲೆ, ಹೃದಯ, ಕಿಡ್ನಿ, ಲಿವರ್, ಕ್ಯಾನ್ಸರ್, ರೋಗನಿರೋಧಕ ಶಕ್ತಿ ಕುಂಠಿತಗೊಂಡ ಖಾಯಿಲೆಗಳ ರೋಗಿಗಳು ಹೆಚ್ಚಾಗಿ ತೊಂದರೆ ಅನುಭವಿಸುತ್ತಾರೆ. ಮಕ್ಕಳಲ್ಲಿ, ಯುವಕರಲ್ಲಿ ಮತ್ತು ಗರ್ಭಿಣಿಯರಲ್ಲಿ ಇದರ ತೀವ್ರತೆ ಕಡಿಮೆ.

ಬೋರಲು ಮಲಗುವುದು..!

ಹೌದು, ಬೋರಲು ಮಲಗುವುದು ಅಥವಾ ಪ್ರೈನ್ಪೊಸಿಷನ್ಲ್ಸೀಪಿಂಗ್ ಅಂತ ಏನು ಹೇಳುತ್ತೇವೆಯೋ ಇದರಲ್ಲಿ ಬೋರಲಾಗಿ ಮಲಗಿ ನಂತರ ಎಡಪಕ್ಕ ತಿರುಗಿ, ಹಾಗೆ ಬಲಪಕ್ಕ ತಿರುಗಿ ಮತ್ತೇ ಬೋರಲು ಮಲಗುವ ಈ ಚಕ್ರವನ್ನು ಪ್ರತಿ ಅರ್ಧ ಗಂಟೆಯಿಂದ ಒಂದು ಘಂಟೆ ಮಾಡುತ್ತಾ ಹೋದರೆ ಪುಪ್ಪಸಕ್ಕೆ ಮತ್ತು ಅದರ ಕೆಳಭಾಗಕ್ಕೆ ಹೆಚ್ಚು ಆಮ್ಲಜನಕ ಪೂರೈಕೆ ಆಗುತ್ತದೆ. ಈ ಕೊರೊನದಿಂದ ಉಂಟಾಗುವ ಊತ ಅಥವಾ ನ್ಯುಮೋನಿಯಾ ಪುಪ್ಪಸದ ಕೆಳಭಾಗಕ್ಕೆ ಹೆಚ್ಚು ಅಂಟಿಕೊಳ್ಳುತ್ತ್ತದೆ, ಇಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಈ ಬೋರಲು ಮಲಗುವ ಅಭ್ಯಾಸ ಬಹಳ ಉಪಾಯಕಾರಿ.

ಹೀಗೆ ಸತತವಾಗಿ ಆಮ್ಲಜನಕ ತೆಗೆದುಕೊಂಡವರು ಅಥವಾ ವೆಂಟಿಲೇಟನಿರ್ಂದ ಹೊರ ಬಂದವರು ತಮ್ಮ ಪುಪ್ಪಸದ ಮೊದಲಿನ ಶಕ್ತಿ ಮತ್ತು ಅಯಸ್ಸನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಅದನ್ನು ತಡೆಗಟ್ಟಲು ಉಸಿರಾಟದ ಪುನಸ್ರ್ಥಾಪನೆ, ಪ್ರಾಣಾಯಾಮ, ಪರಿಶುದ್ಧ ಗಾಳಿ ಸೇವನೆ, ಮಾನಸಿಕ ಸ್ಥೈರ್ಯ, ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರಿಂದ ದೇಹವು ಮತ್ತೆ ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಮಾಡುತ್ತದೆ. ಇದನ್ನು ಉಳಿಸಿಕೊಳ್ಳಲು ವೈದ್ಯರ ಸಲಹೆ ಮೇರೆಗೆ ಸ್ಟಿರೋಯ್ಡ್, ಹೊಸ ಔಷಧಗಳು, ಆಸ್ಪಿರಿನ್ಹೀಗೆ ಇತ್ಯಾದಿಗಳನ್ನು ಕೆಲವು ದಿನ ಅಥವಾ ತಿಂಗಳುಗಟ್ಟಲೆ ಮುಂದುವರಿಸ ಬೇಕಾಗಬಹುದು

ಆಂಟಿಬಯೋಟಿಕ್ಸ್ ಮೊದಲ ದಿನ ದಿಂದಲೇ ಕೊಟ್ಟರೆ ಅಷ್ಟೇನೂ ಲಾಭವಿಲ್ಲ ಆದರೇ ವಾರದ ಕೊನೆ ಅಥವಾ ಎರಡನೇ ವಾರದ ಹಂತದಲ್ಲಿ ಬ್ಯಾಕ್ಟೀರಿಯಾ ಎಂಬ ರೋಗಾಣುಗಳು ಈ ವೈರಸ್‍ನಿಂದ ಕ್ಷೀಣಗೊಂಡ ರೋಗನಿರೋಧಕ ಶಕ್ತಿಯ ಅವಕಾಶ ಉಪಯೋಗಿಸಿಕೊಂಡು ದೇಹದ ಮೇಲೆ ದಾಳಿ ಮಾಡುತ್ತವೆ, ಅದನ್ನು ತಡೆಗಟ್ಟಲು ಈ ಅಂಟಿಬಯೋಟಿಕ್ ಉಪಯೋಗಿಸಬಹುದು.

ವಿಟಮಿನ್ಸಿ, ಜಿಂಕ್, ಡಿ ಹಾಗು ಇತರೆ ಮಾತ್ರೆಗಳು, ಮನೆ ಮದ್ದುಗಳು, ಆರೋಗ್ಯಕರವಾದ ಹಣ್ಣು ಮತ್ತು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆಯೇ ಹೊರತು ಕೊರೊನ ಬರದೇ ಇರುವ ಹಾಗೆ ತಡೆಗಟ್ಟುವುದಿಲ್ಲ. ಇವೆಲ್ಲವನ್ನು ವೈದ್ಯರ ಸಲಹೆ ಮೇರೆಗೆ ಬಳಸಿದರೆ ತಪ್ಪೇನಿಲ್ಲ.

ಜಗತ್ತಿನಾದ್ಯಂತ ಎಷ್ಟೊಂದು ಚರ್ಚೆಗಳು, ಸಂಶೋಧನೆಗಳು, ಔಷದ ಮತ್ತು ರೋಗನಿರೋಧಕ ಲಸಿಕೆ ಕಂಡುಹಿಡಿಯುವತ್ತ ಹಗಲುರಾತ್ರಿ ಬಿಡುವಿಲ್ಲದೆ ಕೆಲಸಗಳು ನಡೆಯುತ್ತಲಿವೆ, ಈ ಕೆಲಸಗಳ ಮಧ್ಯೆ, ಊಟ ಉಪಚಾರ ನಿದ್ದೆ ಮರೆತು ವೈದ್ಯರು ಹಗಲಿರುಳೆನ್ನದೆ ಸೇವೆ ಮಾಡುತ್ತಿದ್ದಾರೆ. ವೈದ್ಯರ ಈ ನಿಸ್ವಾರ್ಥ ಮನೋಭಾವವನ್ನು ಜೀವನಮಾನವಿಡಿ ನೆನೆದರೆ ಸಾಲದು.

ಕರೋನ ಒಂದು ಹೊಸಯುಗವನ್ನೇ ಹುಟ್ಟುಹಾಕಿದೆ, ಹಲವು ಪಾಠಗಳನ್ನು ಕಲಿಸುತ್ತಲಿದೆ ಇನ್ನೂ ಕಲಿಯಬೇಕಾದದ್ದು ಬಹಳಷ್ಟು ಇದೆ ಇಲ್ಲಿ ಯಾರೂ ಪಂಡಿತರಲ್ಲ ಎಲ್ಲರೂ ವಿದ್ಯಾರ್ಥಿಗಳೇ..!

ಇದನ್ನು ತಡೆಗಟ್ಟಲು ಮುಖಕ್ಕೆ ಮತ್ತು ಮೂಗಿಗೆ ಮುಖಗವಸು ಅಥವಾ ಮಾಸ್ಕ್, ಸ್ವಚ್ಛತೆ, ಭೌತಿಕ ಮತ್ತು ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ ಒಂದೇ ರಾಜಮಾರ್ಗ.

ಇದರಿಂದ ಪೀಡಿತರಾದ ರೋಗಿಗಳನ್ನು ವೈದ್ಯರು, ವಿಜ್ಞಾನಿಗಳು ತಮ್ಮ ಶಕ್ತಿಮೀರಿ ವೈಜ್ಞಾನಿಕ ಚೌಕಟ್ಟಿನಲ್ಲಿ ಈ ಕರೋನವನ್ನು ತಡೆಗಟ್ಟಲು ಪ್ರಯತ್ನ ಮಾಡಬಹುದೇ ಹೊರತು ಇದನ್ನು ಸಂಪೂರ್ಣವಾಗಿ ಗುಣಮಾಡುವ ಶಕ್ತಿ ಯಾವ ವೈದ್ಯರ ಕೈಲಿಲ್ಲ.

ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ, ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ವೈರಾಣುವಿನ ಜೊತೆ ಇದರ ಪ್ರತಿಸ್ಪಂದನೆ, ಧನಾತ್ಮಕ ಚಿಂತನೆ ಮತ್ತು ಗಟ್ಟಿಯಾದ ಮನೋಬಲ ನಮ್ಮನ್ನು ಇದರಿಂದ ಕಾಪಾಡಿ ಹೊರತರುವುದರಲ್ಲಿ ಎರಡು ಮಾತಿಲ್ಲ.

ಡಾ. ರಾಘವೇಂದ್ರ. ಎಫ್. ಎನ್
ಎಂಬಿಬಿಎಸ್. ಎಂಡಿ.
ಸಹಪ್ರಾಧ್ಯಾಪಕರು ಮತ್ತು ಕನ್ಸಲ್ಟೆಂಟ್ಫಿಜಿಷಿಯನ್ ವೈದ್ಯಕೀಯ ವಿಭಾಗ
ಕೋವಿಡ್ ನೊಡಲ್ ಆಫೀಸರ್
ವಿಮ್ಸ್, ಬಳ್ಳಾರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending