ದಿನದ ಸುದ್ದಿ
ಇಂದಿನ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ : ಹೃದಯಾಘಾತ ತಡೆಯಲು ಹೀಗೆ ಮಾಡಿ
- ಸಂಗಮೇಶ ಎನ್ ಜವಾದಿ, ಕೊಡಂಬಲ
ಭಾರತ ದೇಶದ ಇಂದಿನ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತೀವ್ರ ಆತಂಕಕಾರಿ ಕಳವಳ ವಿಷಯವಾಗಿದೆ. ಹೃದಯಾಘಾತದ ಪ್ರಕರಣಗಳು ದಿನನಿತ್ಯ ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಯುವಕರು ಸೇರಿದಂತೆ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳು ಕಾಣುತ್ತಿದ್ದೇವೆ.
ಇದರ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಮುಖಾಂತರ ಸದೃಢ ಆರೋಗ್ಯ
ಭವಿಷ್ಯದ ಭಾರತ ನಿರ್ಮಾಣ ಮಾಡುವ ಅನಿವಾರ್ಯತೆ ಸಧ್ಯ ಎದುರಾಗಿದೆ ಎನ್ನುವುದು ಸುಳ್ಳಲ್ಲ. ಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದುಡಿಮೆ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತಾ ಪ್ರಮಾಣ ಹೆಚ್ಚಿಸಿದೆ.
ಆದರೂ ಶೇ. 76ರಷ್ಟುಜನರು ಸಮಸ್ಯೆ ಅಂತಿಮ ಹಂತಕ್ಕೆ ಹೋಗುವ ತನಕ ವೈದ್ಯರ ತಪಾಸಣೆಗೆ ಒಳಗಾಗುತ್ತಿಲ್ಲ ಹಾಗೂ
18 ರಿಂದ 65 ವಯೋಮಾನದ ಶೇ.60ರಷ್ಟು ಭಾರತೀಯರಿಗೆಈ ಕುರಿತು ಸೂಕ್ತ ತಿಳುವಳಿಕೆಯೇ ಇಲ್ಲ. 18 ರಿಂದ 30ರ ಹರೆಯದ ಯುವ ಜನತೆ, ತಮಗೆ ಹೃದಯಸಂಬಂಧಿ ಸಮಸ್ಯೆ ಬರುವುದಿಲ್ಲ ಎಂಬ ದೃಢನಂಬಿಕೆಯಲ್ಲಿ ತಪಾಸಣೆಗೆ ಒಳಗಾಗುವುದಿಲ್ಲ ಎನ್ನುವುದಂತು ಸತ್ಯ.
ಇತ್ತೀಚಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾಗುವ ಜೀವನ ಶೈಲಿಯ ನಡುವಳಿಕೆಗಳಿಗಳನ್ನು ಅಳುವಡಿಸಿ ಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇಂದಿನ ದಿನಗಳಲ್ಲಿ ಅಂದರೆ, ಶೇ. 20ರಷ್ಟು ಜನರಿಗೆ ಹೃದ್ರೋಗ ವಂಶವಾಹಿಯಾಗಿದೆ ಎಂದು ಆರೋಗ್ಯ ಸಮೀಕ್ಷೆ ತಿಳಿಸಿದ್ದು, ಆಧುನಿಕ ಜೀವನಶೈಲಿಯು ಯುವಜನತೆಯಲ್ಲಿ ಹೃದಯನಾಳ ತೊಂದರೆ, ಹೃದಯಾಘಾತ, ಪಾಶ್ರ್ವವಾಯು ಸಂಭವವನ್ನು ಮೂರುಪಟ್ಟು ಹೆಚ್ಚಿಸಿದೆ ಮತ್ತು ಹೆಚ್ಚಿಸುತ್ತಿದೆ.
ಸಧ್ಯ ಭಾರತದಲ್ಲಿ ಹೃದಯಾಘಾತ ಸಂಭವದ ವಯೋಮಿತಿಯು 40 ರಿಂದ 20 ವರ್ಷಕ್ಕೆ ಇಳಿದಿದೆ ಎನ್ನುವುದು ಆತಂಕದ ವಿಷಯ ಬಂಧುಗಳೆ.
ಕೂತಲ್ಲೇ ಕೆಲಸ (ಮಾಹಿತಿ ತಂತ್ರಜ್ಞಾನ, ಕಚೇರಿ ಕೆಲಸ)ವಿಶ್ರಾಂತಿರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ, ಮದ್ಯಪಾನ ಹವ್ಯಾಸ-ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರಪಂಚದ ನಂಬರ್ ಒನ್ ಕಿಲ್ಲರ್ ಹೃದಯಾಘಾತ.ಒತ್ತಡದ ಜೀವನ, ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ, ಧೂಮಪಾನ, ಮದ್ಯಪಾನ, ದೈಹಿಕ ಶ್ರಮ ರಹಿತ ಜೀವನ ಹೃದಯಾಘಾತ ಸಂಭವ ಹೆಚ್ಚಲು ಪ್ರಮುಖ ಕಾರಣಾಗಿದೆ ಎನ್ನುತ್ತಿದೆ.
ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ.ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಹೃದಯಘಾತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆ ದೇಶಗಳಲ್ಲಿನ ಜನ ಸಾಮಾನ್ಯರಲ್ಲಿ ಹೆಚ್ಚಿದ ಜಾಗೃತಿ ಹಾಗೂ ಆರಂಭದ ವರ್ಷಗಳಲ್ಲೇ ಕೈಗೊಂಡ ಮುನ್ನೆಚ್ಚರಿಕೆಗಳ ಫಲವಾಗಿ ಹಾರ್ಟ್ ಆಟ್ಯಾಕ್ ಹತೋಟಿಗೆ ಬಂದಿವೆ ಎನ್ನಬಹುದು.
ಹೃದಯಾಘಾತದ ಸಾಮಾನ್ಯ ಲಕ್ಷಣಗಳು
- ಎದೆನೋವು, ಹೃದಯ ಭಾರವಾಗುವಿಕೆ
- ಉಸಿರಾಟದಲ್ಲಿ ತೊಂದರೆ, ಕೆಮ್ಮು , ವ್ಹಿಜಿಂಗ್
- ಮಾನಸಿಕ ಕ್ಷೋಭೆ ಅಥವಾ ಒತ್ತಡದಂಥ ಲಕ್ಷಣಗಳು
- ಹೊಟ್ಟೆ ,ಹೆಗಲು, ಕುತ್ತಿಗೆ ,ಭುಜ ,ಕೈ ಅಥವಾ ದವಡೆ ನೋವು
- ಅಸ್ವಸ್ಥತೆ, ಸುಸ್ತು
- ಕಡಿಮೆ ನಾಡಿಮಿಡಿತ
- ಅತಿಯಾಗಿ ಬೆವರುವಿಕೆ
- ವಾಂತಿ, ಅಸಿಡಿಟಿ
- ತಲೆಸುತ್ತುವಿಕೆ/ಶಿರೋಭ್ರಮಣೆ/ ಜ್ಞಾನ
ತಪ್ಪುವುದು ಇವುಗಳೆಲ್ಲ ಹೃದಯಾಘಾತ ಕಾರಣವಾಗಬಹುದು ಅಲ್ಲದೆ
ಹೃದಯಾಘಾತದ ಚಿಹ್ನೆ ಮತ್ತು ಲಕ್ಷಣಗಳಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಿರುತ್ತವೆ. ಒಮ್ಮೊಮ್ಮೆ ಈ ಲಕ್ಷಣ ಬಿರುಸಾಗಿದ್ದರೆ, ಕೆಲವೊಮ್ಮೆ ಲಘುವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಯಾವುದೇ ಲಕ್ಷಣವಿಲ್ಲದೇ ಅಥವಾ ಲಘು ಲಕ್ಷಣಗಳೊಂದಿಗೆ ಸಂಭವಿಸುವ ಹಾರ್ಟ್ ಅಟ್ಯಾಕ್ ತೀವ್ರ ಎದೆನೋವಿನಂಥ ಮರಣಾಂತಿಕ ಪರಿಣಾಮಗಳಷ್ಟೇ ಅಪಾಯ ತಂದೊಡ್ಡುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಹೃದಯಾಘಾತಕ್ಕೆ ಕಾರಣವಾಗುವ ಕೆಲವು ರಿಸ್ಕ್ ಫ್ಯಾಕ್ಟರ್‍ಗಳು
- ತಂಬಾಕು ಸೇವನೆ/ಧೂಮಪಾನ
- ಅಧಿಕ ಕೊಲೆಸ್ಟರಾಲ್
- ಅಧಿಕ ಎಲ್‍ಡಿಎಲ್ ಕೊಲೆಸ್ಟರಾಲ್
- ಕಡಿಮೆ ಎಚ್‍ಡಿಎಲ್ ಕೊಲೆಸ್ಟರಾಲ್
- ಅಧಿಕ ಬ್ಲಡ್ ಷುಗರ್/ಡಯಾಬಿಟಿಸ್
- ಅಧಿಕ ರಕ್ತದೊತ್ತಡ
- ಅಧಿಕ ತೂಕ
- ದೈಹಿಕ ಶ್ರಮವಿಲ್ಲದ ಜೀವನ
- ಐಷಾರಾಮಿ ಅಭ್ಯಾಸಗಳು/ಸೇಡೆಂಟರಿ ಲೈಫ್ ಸ್ಟೈಲ್
- ಉದ್ವೇಗ ಮಾನಸಿಕ, ಒತ್ತಡಗಳು ಮತ್ತು ಆಯಾಸ
- ಸಂಸ್ಕರಿಸಿದ ಆಹಾರ/ಜಂಕ್ ಫುಡ್ /ಅತಿಯಾದ ಜಿಡ್ಡು ಪದಾರ್ಥ ಸೇವನೆ
- ಪರಿಸರ / ಗಾಳಿ ಮಾಲಿನ್ಯ
- ಅನುವಂಶಿಯ ಅಂಶಗಳು
ಇವು ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳು.
ಒತ್ತಡಕ್ಕೆ ಸಂಬಂಧಿಸಿದ ಹೃದ್ರೋಗ ತಡೆಗಟ್ಟಲು ಜೀವನಶೈಲಿ ಬದಲಾವಣೆಯೂ ಅಗತ್ಯವಾಗಿದೆ ಈ ಹಿನ್ನಲೆಯಲ್ಲಿ ಕೆಲ ಪ್ರಮುಖ ವಿಚಾರಗಳು ತಮ್ಮಲ್ಲಿ ಹಂಚುತ್ತಿರುವೆ.
ಧೂಮಪಾನ ತೇಜಿಸಿ
ಧೂಮಪಾನ ದುಶ್ಚಟದಿಂದ ದೂರವಿರಿ. ಧೂಮಪಾನ ತೇಜಿಸಲು ನಿರ್ಧರಿಸಿದ ತಕ್ಷಣ ಸಿಗರೇಟ್‍ಗಳು, ಆ್ಯಷ್‍ಟ್ರೇ ಮತ್ತು ಲೈಟರ್‍ನನ್ನು ಹೊರಗೆ ಎಸೆಯಿರಿ.ನಿಮ್ಮ ವೈದ್ಯರೊಂದಿಗೆ ಈ ಕುರಿತು ಮುಕ್ತ ವಾಗಿ ಚರ್ಚೆ ಮಾಡಿ. ಧೂಮಪಾನ ತೇಜಿಸಿದ ನಂತರ ನಿಮ್ಮ ದೇಹದಲ್ಲಿ ಕೆಲವು ಪ್ರತಿಕ್ರಿಯೆಗಳು ಕಂಡುಬಂದರೆ ಔಷಧಿ ನೀಡಬೇಕಾಗುತ್ತದೆ.
ನಿಮಗೆ ನಿಕೋಟಿನ್ ಪರ್ಯಾಯದ ಅಗತ್ಯವಿದಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇದು ಗಮ್, ಇನ್‍ಹೇಲರ್ ಮೊದಲಾದ ರೂಪದಲ್ಲಿ ಬರುತ್ತದೆ. ಯಾವುದೇ ರೀತಿಯ ತಂಬಾಕು ಸೇವನೆ ಗುಟ್ಕಾ , ಪಾನ್ ಬೀಡಾ , ನಸ್ಯ (snuff) ಚಟಗಳನ್ನು ಬೀಡಬೇಕು,ಬೀಡುವುದು ಅವಶ್ಯಕತೆ ಇದೆ.
ಆರೋಗ್ಯಕರ ಆಹಾರ
ಆರೋಗ್ಯ ರಕ್ಷಣೆ ಹಾಗೂ ದೈಹಿಕ-ಮಾನಸಿಕ ಆರೋಗ್ಯ ಹೆಚ್ಚಳದಲ್ಲಿ ಉತ್ತಮ ಆಹಾರ ಮಹತ್ವದ ಪಾತ್ರ ವಹಿಸುತ್ತದೆ. ಹಸಿರು ತಾಜಾ ತರಕಾರಿ , ಹಣ್ಣು ಹಂಪಲ , ಡ್ರೈ ಫ್ರುಟ್ಸ್ ,ಪೂರ್ತಿ ಕಾಳು ಆರೋಗ್ಯಕರವಾದ ಸಂತುಲಿತ ಮತ್ತು ಪ್ರೊಟೀನ್ ಯುಕ್ತ ಪೌಷ್ಟಿಕ ಆಹಾರ ದೇಹವನ್ನು ಸಮತೋಲನದಲ್ಲಿ ಇಡುತ್ತದೆ. ಆದರೆ ಸಕಾಲದಲ್ಲಿ ಸೇವನೆ ಮತ್ತು ಸೂಕ್ತ ಪ್ರಮಾಣದಲ್ಲಿ ಆಹಾರ ಸೇವನೆ ಮುಖ್ಯ. ಆದಷ್ಟು ಬಿಳಿ ಪೂರ್ಣ ಪಾಲಿಶ್ ಮಾಡಿದ ಅಕ್ಕಿ ಅನ್ನದ ಬದಲಾಗಿ ಕುಶಲಕ್ಕಿ , ಬಾಯಿಲ್ಡ್ ಅಕ್ಕ್ಕಿ , ಅನ್ ಪಾಲಿಶ್/ಕುಟ್ಟಿದ ಅಕ್ಕಿ ಬಳಸುವುದು ಒಳ್ಳೆಯದು .
ಉತ್ತಮ ನಿದ್ರೆ
ಮನುಷ್ಯನ ಆರೋಗ್ಯ ಸ್ಥಿತಿಗೆ ಸೂಕ್ತ ನಿದ್ರೆಯೂ ಅತ್ಯಗತ್ಯ. ಸಾಕಷ್ಟು ನಿದ್ರೆಯ ಮಹತ್ವದ ಬಗ್ಗೆ ಜನರಲ್ಲಿ ಅನೇಕ ತಪ್ಪು ತಿಳುವಳಿಕೆ ಇದೆ. ಸೂಕ್ತ ಸಮಯದಲ್ಲಿ ನಿದ್ರೆ ಮಾಡುವುದು ಒಳ್ಳೆಯದು. ಬೇಗನೆ ಮಲಗಿ ಬೇಗನೆ ಏಳುವುದು ಉತ್ತಮ ಅಭ್ಯಾಸ. ಆದಾಗ್ಯೂ ಸಾಕಷ್ಟು ನಿದ್ರೆ ಇಲ್ಲದಿದ್ದರೆ ಕೆಲವೊಂದು ತೊಂದರೆಗಳಿಗೆ ಕಾರಣವಾಗುತ್ತದೆ. ಅನಿದ್ರತೆ, ತಲೆನೋವು, ನಿರುತ್ಸಾಹ, ಮಂಕು ಇತ್ಯಾದಿ.
ಕೆಲವೊಮ್ಮೆ ಇದು ಬೊಜ್ಜು, ಅಜೀರ್ಣ, ಜ್ಞಾಪಕ ಶಕ್ತಿ ನಷ್ಟದಂಥ ಗಂಭೀರ ಸಮಸ್ಯೆಗಳಿಗೂ ಎಡೆ ಮಾಡಿಕೊಡಬಹುದು ಜೊತೆಗೆ
ನಿರಂತರ ನಿಯಮಿತ ವ್ಯಾಯಾಮ
ಕನಿಷ್ಠ ದಿನಕ್ಕೆ 60 ನಿಮಿಷ ಏರೋಬಿಕ್ ಎಕ್ಸರ್ಸೈಜ್ , ವಾರಕ್ಕೆ 3-4 ಸಾವಿರ ಕ್ಯಾಲೋರಿಸ್ ದೈಹಿಕ ಶ್ರಮದ ಮುಖಾಂತರ ವ್ಯಯಿಸಬೇಕು.
ಇದಲ್ಲದೆ ನಿಯಮಿತವಾಗಿ ದೇಹ ತೂಕದ ತಪಾಸಣೆ, ಕೊಬ್ಬು ರಹಿತ ಪದಾರ್ಥಗಳ ಸೇವನೆ ಹಾಗೂ ಪ್ರತಿದಿನಿತ್ಯ 45 ನಿಮಿಷಗಳ ಕಾಲ ವೇಗದ ನಡಿಗೆ ನಡೆಯುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ನಾವೆಲ್ಲರೂ ನಿಯಂತ್ರಿಸಬಹುದು.ಹಾಗೂ ವೈದ್ಯರು ತಿಳಿಸುವ ಸಲಹೆ – ಸೊಚನೆಗಳನ್ನು ತಪ್ಪದೇ ಪಾಲಿಸಬೇಕು.
ಕೊನೆಯ ಮಾತು
ಮುಂಜಾಗ್ರತೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಮೂಲಕ ಹೃದಯಾಘಾತವನ್ನು ದೊಡ್ಡ ಮಟ್ಟದಲ್ಲಿ ತಡೆಗಟ್ಟಬಹುದು ಅನ್ನುವುದು ನಾವೆಲ್ಲರೂ ಮರೆಯುವಂತಿಲ್ಲ.
ನಮ್ಮ ದೇಶದಲ್ಲಿ ತುರ್ತಾಗಿ ಈ ಕುರಿತು ಜನ ಜಾಗೃತಿ ಮತ್ತು ಅರಿವಿನ ಕಾರ್ಯಕ್ರಮಗಳು ಅಗತ್ಯವಿದೆ. ಯಾಕೆಂದರೆ ಹಣ ಸಂಪಾದನೆಯು ಗರಿಷ್ಠ ಮಟ್ಟದಲ್ಲಿದ್ದಾಗ ಬಹುತೇಕ ಮಂದಿ ಹೃದಯಘಾತಕ್ಕೆ ತುತ್ತಾಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅದಕ್ಕಾಗಿ ನೆಮ್ಮದಿಯ ಜೀವನ,ಶ್ರಮಜೀವಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.
ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು
ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.
ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.
ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.
ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ
ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.
ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”
ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


