Connect with us

ಲೈಫ್ ಸ್ಟೈಲ್

ಮೊಬೈಲ್ ಜಗತ್ತು ; ಸಹನೆಗೆ‌ ಕುತ್ತು..!

Published

on

  • ಹಿರಿಯೂರು ಪ್ರಕಾಶ್

ನಿಮ್ಮ ಕೈಯ್ಯಲ್ಲಿ ಮೊಬೈಲ್ ಇಲ್ಲದೇ ಅಥವಾ ಅದನ್ನು ಉಪಯೋಗಿಸದೇ ಎಷ್ಟು ಸಮಯ ಹಾಗೇ ಸುಮ್ಮನೇ ಇರಬಲ್ಲಿರಿ ? ಎಲ್ಲಾದರೂ ಹೊರಗೆ ಹೋದಾಗ, ಯಾರಿಗಾದರೂ ಕಾಯುತ್ತಾ ಕುಳಿತಾಗ, ಪ್ರಯಾಣಿಸುವಾಗ ಅಥವಾ ಸ್ವಲ್ಪ ಬಿಡುವಿನ ಸಮಯದಲ್ಲಿ ಮೊಬೈಲ್ ಗೆ ಕೈ ಹಾಕದೇ ಇರಲು ಸಾಧ್ಯವೇ ?

ಬಹುಶಃ ಯಾರನ್ನು ಬಿಟ್ಟಿರಬಹುದಿದ್ದರೂ ಇದನ್ನು ಬಿಡಲು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇದು ನಮ್ಮ ಮೈ ಮನವನ್ನಾವರಿಸಿಕೊಂಡು ಬಿಟ್ಟಿದೆ. ಹೀಗಾಗಿ ಮೊಬೈಲ್ ಅನ್ನೋದು ನಮ್ಮ‌ ಜೀವನಕ್ಕೆ ಒಂದು “Some ಗತಿ ” ಕಾಣಿಸುವವರೆಗೂ ಅದು ನಮ್ಮ “ಸಂಗಾತಿ” ಯೇ ! ನೋ ಡೌಟ್.

ಭೂಗತ ಜಗತ್ತು ಅಂತ ಇದೆಯಂತೆ ! ಆದರೆ ಆ ಬಗ್ಗೆ ಎಲ್ಲರಿಗೂ ಅಷ್ಟು ಗೊತ್ತಿರಲಿಕ್ಕಿಲ್ಲ. ಆದರೆ ಈ ಮೊಬೈಲ್ ಜಗತ್ತು ಮಾತ್ರ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಮನುಷ್ಯನ ಗುಣ, ಸ್ವಭಾವ ,ವರ್ತನೆ ಹಾಗೂ ನಿತ್ಯ ಚಟುವಟಿಕೆಗಳ ಮೇಲೆ ಸಕತ್ ಪ್ರಭಾವ ಬೀರಿ ಅಟ್ಟಹಾಸಗೈಯ್ಯುತ್ತಿರುವುದಂತೂ ದಿಟ.

ಮೊಬೈಲ್ ಬಳಕೆ ಕುರಿತಂತೆ ಅದರ ಉಪಯೋಗ, ದುರುಪಯೋಗ_ ಅನುಕೂಲ- ಅನಾನುಕೂಲ ಇತ್ಯಾದಿಗಳ ಬಗ್ಗೆ ಪ್ರಬಂಧ ಅಥವಾ ಟಿಪ್ಪಣಿ ಬರೆದು ಬೋರ್ ಹೊಡೆಸೊಲ್ಲ. ಅದು ಎಲ್ಲರಿಗೂ ಗೊತ್ತಿರೋದೇ ! ಆದರೆ ಬಹುತೇಕ ಮೊಬೈಲ್ ಬಳಕೆದಾರರಲ್ಲಿ ನಾನು ಕಂಡುಕೊಂಡ ಒಂದು ವಿಷಾದನೀಯ ಸತ್ಯವೆಂದರೆ, ಅತಿಯಾದ ಮೊಬೈಲ್ ಸಹವಾಸದಲ್ಲಿ‌ ಮನುಷ್ಯನ ತಾಳ್ಮೆ, ಸಹನೆ ದಿನೇ ದಿನೇ ಅಧೋಗತಿಗಿಳಿಯುತ್ತಿರುವುದು !.

ಮೊಬೈಲ್ ನಲ್ಲಿ ತನ್ಮಯರಾಗಿ ಬೆರಳಾಡಿಸುವಾಗ , ನೆಟ್ ನಲ್ಲಿ ದೃಷ್ಟಿ ನೆಟ್ಟು ಮುಳುಗಿರುವಾಗ ಯಾರಾದರೂ ಮಾತನಾಡಿಸಿದರೂ ಸಡನ್ನಾಗಿ ನಮ್ಮೊಳಗಿನ‌ ಅಸಹನೆ ಭುಗಿಲೇಳುತ್ತದೆ ; ಇಲ್ಲವೇ ಅತಿಯಾದ ಕರೆಗಳಿಂದ‌ ಸಹನೆಯ ಕಟ್ಟೆಯೊಡೆದು ಮಾತನಾಡುವುದೇ ಬೇಡವೆನಿಸಿ ಒಂಥರಾ Frustrated ಮೂಡ್ ಗೆ ಮನಸು ವಾಲಿಬಿಡುತ್ತೆ. ‌

ಅಷ್ಟೆಲ್ಲಾ ಯಾಕೆ ! ನೀವು ಫೇಸ್ ಬುಕ್ ನಲ್ಲೋ ವಾಟ್ಸಪ್ ನಲ್ಲೋ ಸಿಕ್ಕಾಪಟ್ಟೆ ಬಿಜ಼ಿಯಾಗಿದ್ದಾಗ ನಿಮ್ಮ ಸ್ವಂತದವರೇ ಕರೆ ಮಾಡಿದರೂ ಅದು‌ ನಿಮಗೆ ಆ ಕ್ಷಣಕ್ಕೆ ಸಹ್ಯವೆನಿಸದು ! ಒಂದು ವೇಳೆ ಕರೆ ಸ್ವೀಕರಿಸಿದರೂ ಅದಕ್ಕೆ ಮನಸಿಟ್ಟು ಉತ್ತರಿಸದೇ ಬ್ರೌಸ್ ಮಾಡುತ್ತಲೇ ಮಾತನಾಡುವ ಅಸಡ್ಡೆತನವೂ ಗೊತ್ತಿಲ್ಲದೇ ಬೆಳೆದುಬಂದಿದೆ.

ಯಾರ ಸಹವಾಸವನ್ನೂ ಬೇಡದೇ ಒಬ್ಬನೇ‌ ಕೂತು ಇಡೀ ದಿನ ನೆಟ್ಟಗಿರದೇ ನೆಟ್ಟಿಗನಾಗಿ ಕಾಲ ಕಳೆಯೋದೇ ಹೆಚ್ಚು ಆಪ್ಯಾಯವಾಗಿ ಕಾಣಿಸುತ್ತದೆ. ಅದರಲ್ಲೂ ಈ ಲಾಕ್ ಡೌನ್ ಸಮಯದಲ್ಲಿ ಮೊಬೈಲ್ ನಮ್ಮ ಅತ್ಯಂತ ಆಪ್ತ ಸಂಗಾತಿಯಾಗಿ ಹೊರಹೊಮ್ಮಿದ್ದು ಅದರ ಸೆಳೆತದಿಂದ ಬಿಡಿಸಿಕೊಳ್ಳೋದೇ ಸಮಸ್ಯೆಯಾಗಿ ತೋರುತ್ತಿದೆ. ಸೋ…… ಮನಸಿನ‌ ‘ಉದ್ವೇಗ’ ಕ್ಕೂ ಮೊಬೈಲ್ ನ ‘ವೇಗ’ ಕ್ಕೂ ಒಂಥರಾ ಕೆಮಿಸ್ಟ್ರಿ ಲಾಕ್ ಆಗಿರಲೇಬೇಕಲ್ಲವೇ ?

ನಮ್ಮಲ್ಲಿರಬೇಕಾದ ಅತಿ ಮೌಲ್ಯಯುತವಾದ ಗುಣಗಳಲ್ಲಿ ತಾಳ್ಮೆ ಹಾಗೂ ಸಹನೆ ಬಹು ಮುಖ್ಯ. ನಮ್ಮ‌ ಬಹುತೇಕ ಸಮಸ್ಯೆಗಳನ್ನು ಮನಸಿನ ಮೇಲೆ‌ ಹತೋಟಿ ಇಟ್ಟುಕೊಳ್ಳುವುದರಿಂದ ಸಮರ್ಥವಾಗಿ ಎದುರಿಸಬಹುದು ಎಂಬುದು ಸಾರ್ವಕಾಲಿಕ ಸತ್ಯ. ಆದರೆ ಈ ಮೊಬೈಲ್ ಮೇನಕೆಯೆಂಬ ಮಾಯಾಂಗಿನಿಯ ಮೋಹಪಾಶದಲ್ಲಿ ನಮ್ಮ ವಿಶ್ವಾಮಿತ್ರನಂತಹಾ ಮನಸಿನ ನಿಯಂತ್ರಣ ತಪ್ಪಿ ಅನಾಹುತವಾಗುತ್ತಲೇ ಬಂದಿದೆ .

ಮಾಯೆಯ ಬಗೆಗಿನ ನಿರ್ಮೋಹಿಗಳನ್ನು ಪುರಾಣ ಕಾಲದಿಂದಲೂ ಅಲ್ಲಲ್ಲಿ ಕಂಡಿದ್ದೇವೆಯಾದರೂ, ಮೊಬೈಲ್ ನಿರ್ಮೋಹಿಗಳನ್ನು ಕಾಣುವುದು ದುಸ್ತರವಾಗಿದೆ. ಹೀಗಾಗಿ ನೆಟ್ಟಿಗರಲ್ಲಿನ ಮನಸು ನೆಟ್ಟಗಿರಲು ಸಾಧ್ಯವಾಗದೇ ಸಹನೆ ಎನ್ನುವುದು ನಮ್ಮಿಂದ‌ ನಿಧಾನಕ್ಕೆ ‌ನಿಧನವಾಗುತ್ತಲಿದೆ. ಸಹನೆಯ ಜಾಗದಲ್ಲಿ ಅಸಹನೆ ಒಳಗೊಳಗೇ ಬುಸುಗುಟ್ಟುತ್ತಾ ನಮ್ಮ‌ ವ್ಯಕ್ತಿತ್ವಕ್ಕೇ ಮಾರಕವಾಗಿ ಕಿರಿಕ್ ಜಗತ್ತನ್ನೇ ಸೃಷ್ಟಿಸಿದೆ.

ಕೊನೇಪಕ್ಷ ಹೆಂಡತಿ ಮಕ್ಕಳೊಂದಿಗೂ ಆಪ್ಯಾಯವಾಗಿ, ಆನಂದವಾಗಿ ಸಮಯ ಕಳೆಯಲು, ಬಂಧು ಬಳಗ, ಸ್ನೇಹಿತರೊಂದಿಗೆ ಮುಕ್ತವಾಗಿ ಹರಟಲು ಆಗದಂತಹಾ ವಿಚಿತ್ರ ವಿಷವ್ಯೂಹದ ವಾತಾವರಣವನ್ನು ಮೊಬೈಲ್ ಜಗತ್ತು ಕ್ರಿಯೇಟ್ ಮಾಡಿ ಬದುಕಿನ ಸುಂದರ ಕ್ಷಣಗಳನ್ನು ಆಪೋಷನ ತೆಗೆದುಕೊಂಡಿದೆ. ಈ ವಸ್ತು ಸದಾ ನಮ್ಮೊಂದಿಗಿರುವುದರಿಂದ ಏನೋ ಒಂಥರಾ ತಳಮಳ, ಜುಗುಪ್ಸೆ, ಅಸಹನೆ, ಬೇಸರ, ತಾತ್ಸಾರ, ಒಂಟಿತನ, ಸಿಡುಕುತನ, ಸಿನಿಕತನ….ಈ ಎಲ್ಲದರ ಸಹವಾಸವೂ ಬೋನಸ್ ರೂಪದಲ್ಲಿ ಬಂದು ವಕ್ಕರಿಸಿ ಬಿಟ್ಟಿವೆ.

ನಿಮ್ಮಲ್ಲಿ ಕೆಲವರು ನನ್ನ ಬರಹಕ್ಕೆ ಈ ರೀತಿ ಪ್ರತಿಕ್ರಿಯಿಸಲೂ ಬಹುದು .

” ಯಾವುದಾದರೂ ಅತಿಯಾದರೆ ಹೀಗೇನೇ ಆಗೋದು. ಎಷ್ಟು ಬೇಕೋ ಅಷ್ಟು ಬಳಸಬೇಕು. ಹಗಲೂ ರಾತ್ರಿ ಅದಕ್ಕೆ ದಾಸರಾಗಬಾರದು, ನಮ್ಮ‌ಬುದ್ದಿ ನಮ್ಮ‌ ಕೈಯ್ಯಲ್ಲಿರಬೇಕು . ಆಗ ಯಾವ ತೊಂದರೆಯೂ ಇರೋಲ್ಲ “… ಎಂಬ‌ ಉಪದೇಶದಲ್ಲೋ, ಅಥವಾ ” ಈಗ ನೀವು ಬರೆದ ಬರಹ ಮೊಬೈಲ್ ನಲ್ಲಿ ತಾನೇ ??? ಎಂತಲೋ ಕಾಮೆಂಟಿಸಲೂ ಬಹುದು. ಆದರೆ ಅಂಥವರ ವ್ಯಕ್ತಿತ್ವದಲ್ಲೂ ಅನೇಕ ಬದಲಾವಣೆಗಳು ಅವರಿಗೆ ಗೊತ್ತಿಲ್ಲದಂತೆಯೇ ಈ ಮಾಯಾಂಗಿನಿ ತಂದು ಬಿಟ್ಟಿರುತ್ತದೆ. ಒಮ್ಮೆ ಕೇಳಿನೋಡಿ‌ !

ಈ ಜಂಗಮವಾಣಿ ನಮ್ಮ ವ್ಯಕ್ತಿತ್ವದಲ್ಲಿ ನಕಾರಾತ್ಮಕ ‌ಬದಲಾವಣೆಗಳನ್ನು ತಂದೊಡ್ಡುವ ಮುನ್ನ ಸ್ವಲ್ಪ ಜಾಗರೂಕರಾಗೋದು ಒಳ್ಳೆಯದು. ಯಾಕೋ ಇತ್ತೀಚೆಗೆ ಬಹುತೇಕ ಮಂದಿ ಮಾತನಾಡಿಸಿದರೆ ಸಾಕು ಮೈಮೇಲೆ ಎಗರಿ ಬೀಳುತ್ತಾರೆ, ಶಾರ್ಟ್ ಟೆಂಪರ್ ಗಳ ಬಂಪರ್ ಗಳಂತೆ ರೇಗಿ ಬೀಳುತ್ತಿದ್ದಾರೆ, ಸುಖಾಸುಮ್ಮನೇ ಸಿಡಿದು ಸಿಟ್ಟಿಗೇಳುತ್ತಿದ್ದಾರೆ…!

ಇದಕ್ಕೆಲ್ಲಾ ಅತಿಯಾದ ಅಹರ್ನಿಶಿ ಮೊಬೈಲ್‌ ಬಳಕೆ ಕಾರಣವೆಂದು ಸಾರಾಸಗಟಾಗಿ ಆರೋಪಿಸಲಾಗದಿದ್ದರೂ ಅದರ ಪ್ರಭಾವ ಮಾತ್ರ ಸಾಕಷ್ಟಿದೆ ಎನ್ನಬಹುದು. ಜೀವನದಲ್ಲಿನ ಚಿಕ್ಕ‌ಚಿಕ್ಕ ಸಂತೋಷಗಳನ್ನು ಕಿತ್ತುಕೊಂಡು ನಮ್ಮೆಲ್ಲರನ್ನೂ ಭ್ರಮಾಲೋಕದ ಭಾವನೆಗಳ ಸಾಗರದಲ್ಲಿ ತೇಲಾಡಿಸುತ್ತಾ , ಆಕರ್ಷಕ ‌ಜಗತ್ತಿನಲ್ಲಿ‌ ಅಮಲೇರಿಸುತ್ತಾ ಸಾಗಿರುವ ಮೊಬೈಲ್ ಜಗತ್ತು ಸಂಪರ್ಕ ಕ್ರಾಂತಿಯ ಜೊತೆ ಜೊತೆಗೇ ‘ಸಂ‌ ‘ ಕಿರಿಕ್ ಭ್ರಾಂತಿಯನ್ನೂ ನಮಗೆ ತಗಲು ಹಾಕಿಬಿಟ್ಟಿದೆ.

ಮರೆಯುವ ಮುನ್ನ

ಬರೀ ಮೊಬೈಲ್‌ನ‌ ನೆಗೆಟಿವಿಟಿ ಬಗ್ಗೆ ಹೇಳಿದ ಮಾತ್ರಕ್ಕೇ , ಸಂಪರ್ಕ ಕ್ಷೇತ್ರದಲ್ಲಿ ಅದರ ಮಹೋನ್ನತ ಕೊಡುಗೆಯನ್ನು ಸ್ಮರಿಸದೇ ಇರಲಾಗದು . ಅದರದ್ದು ಪದಗಳಿಗೆ‌ ನಿಲುಕದ ಕೊಡುಗೆ. ಆದರೂ ಮನುಷ್ಯನ ವ್ಯಕ್ತಿತ್ವದಲ್ಲಿ , ಅವನ ಧೋರಣೆಯಲ್ಲಿ, ಮಾನವೀಯ ಮೌಲ್ಯಗಳಲ್ಲಿ, ಮನುಷ್ಯ ಸಂಬಂಧಗಳಲ್ಲಿ , ಗುಣ‌ ವಿಶೇಷಣಗಳಲ್ಲಿ ಮೊಬೈಲ್ ನ ಸುಧೀರ್ಘ ಬಳಕೆ ದುಷ್ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾದದ್ದು ಇಂದಿನ ತುರ್ತು ಅಗತ್ಯವೆಂದು ಅನಿಸುತಿದೆ.

ಆಪ್ತರಿಂದ ಫೋನ್ ಬಂದರೂ ಅದರತ್ತ ವಿಶೇಷ ಲಕ್ಷ್ಯ ಹರಿಸದೇ ಅಂತರ್ಜಾಲದ ಅಂತಃಪುರದಲ್ಲಿಯೇ ಸದಾ ಮುಳುಗಿ ಅಸಡ್ಡೆಯಿಂದ ಉತ್ತರಿಸುವ ಕ್ಯಾರೆಕ್ಟರ್ ಒಂದರ ಕರೆ ಈಗಷ್ಟೇ ಬಂದು ಅವನ ನೆನಪಾಗಿ ಇಷ್ಟೆಲ್ಲಾ ಕೊರೆತಕ್ಕೆ ಕಾರಣವಾಯಿತು ನೋಡಿ !

ನಿರ್ಜೀವ ವಸ್ತುವಿನ ಮುಂದೆ ನಿರ್ಮೋಹಿಯಾಗದಿದ್ದರೂ ಪರವಾಗಿಲ್ಲ ಆದರೆ ಅದಕ್ಕೆ ಶರಣಾಗಿ ಬಾಗದಿರಲಿ ಎನ್ನ‌ ಕಾಯ…. ಶಿವಾ…!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್

Published

on

ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.

ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.

ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending