ದಿನದ ಸುದ್ದಿ
ಸಾರ್ವಜನಿಕರ ಸಮಸ್ಯೆಗಳ ಸ್ಪಂದನೆಗೆ ಡಿಜಿಟಲ್ ಮೊರೆ ಹೋದ ಪಾಲಿಕೆ : ವಾಟ್ಸ್ ಆ್ಯಪ್ ನಂಬರ್ ಪೋಸ್ಟರ್ ಬಿಡುಗಡೆ ಮಾಡಿದ ಮೇಯರ್ ಎಸ್.ಟಿ.ವೀರೇಶ್
ಸುದ್ದಿದಿನ,ದಾವಣಗೆರೆ : ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಮಹಾನಗರಪಾಲಿಕೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು, ಗ್ರಾಹಕರು ತಮ್ಮ ಸಮಸ್ಯೆಗಳನ್ನು ತಕ್ಷಣವೇ ತಿಳಿಸಲು ವಾಟ್ಸ್‍ಆ್ಯಪ್ ನಂಬರ್‍ನ್ನು ನೀಡಲಾಗಿದೆ.
ಶುಕ್ರವಾರ ಮಹಾನಗರಪಾಲಿಕೆಯ ಮಹಾಪೌರರಾದ ಎಸ್.ಟಿ.ವೀರೇಶ್ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆ-ಡಿಜಿಟಲ್ ತಂತ್ರಜ್ಞಾನ ವಾಟ್ಸ್‍ಆ್ಯಪ್ ಚಾಲನೆ ಪೋಸ್ಟರ್ ಬಿಡುಗಡೆ ಮಾಡಿ 8277234444 ವಾಟ್ಸ್‍ಆ್ಯಪ್ ನಂಬರ್‍ಗೆ ಚಾಲನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗಿದ್ದು, ಸಾಮಾನ್ಯ ಜನರು ಸಹ ಮೊಬೈಲ್‍ಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಾಟ್ಸ್‍ಆ್ಯಪ್ ಸಂವಹನ ಮಾಧ್ಯಮವಾಗಿ ವ್ಯಾಪಕ ಬಳಕೆಯಲ್ಲಿದ್ದು, ಗ್ರಾಹಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದರು.
ಮಹಾನಗರಪಾಲಿಕೆಯ ಸ್ಥಿರ ದೂರವಾಣಿ 234444 ಇದ್ದು, ಸಾರ್ವಜನಿಕರ ಚಿರಪರಿಚಿತ ಸಂಖ್ಯೆಯು ಆಗಿದೆ. ಆದ್ದರಿಂದ ಇದೇ ನಂಬರ್‍ಗೆ 8277 ಎಂಬ ನಾಲ್ಕು ಸಂಖ್ಯೆಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು 8277234444 ನಂಬರ್‍ಗೆ ವಾಟ್ಸ್‍ಆ್ಯಪ್ ಮಾಡಬಹುದು ಎಂದು ತಿಳಿಸಿದರು.
ನಗರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು, ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ನಗರದಾದ್ಯಂತ ಯಾವುದೇ ಸೌಲಭ್ಯಗಳ ಪೂರೈಕೆ ಸ್ಥಗಿತಗೊಂಡಿದ್ದಲ್ಲಿ ಮಹಾನಗರ ಪಾಲಿಕೆ ನೀಡಿರುವ ವಾಟ್ಸ್‍ಆ್ಯಪ್ ನಂಬರ್‍ಗೆ ಮೆಸೇಜ್, ಫೋಟೋಗಳನ್ನು ಕಳಿಸಿಕೊಡಬಹುದು.
ಅಥವಾ ಕರೆ ಮಾಡಿ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಸಾರ್ವಜನಿಕರು ತಿಳಿಸುವ ಸಮಸ್ಯೆಗಳನ್ನು ಪಾಲಿಕೆ ವ್ಯಾಪ್ತಿಯ ಕಂಟ್ರೋಲ್ ರೂಂ ನಿರ್ವಹಿಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆಯನ್ನು ಬಗೆಹರಿಸುತ್ತಾರೆ.
ಇದನ್ನೂ ಓದಿ |ಪಡಿತರ ಚೀಟಿದಾರರು ಕೂಡಲೇ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಿ
ಈಗಾಗಲೇ ಕೆಲ ವಾರ್ಡ್‍ಗಳಲ್ಲಿ ಇದರ ಪ್ರಯೋಗ ಮಾಡಿದ್ದು ಯಶಸ್ವಿಯಾಗುತ್ತಿರುವುದರ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ನಗರದಾದ್ಯಂತ ವಿಸ್ತರಿಸುತ್ತಿದ್ದೇವೆÉ. ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು ಮೊದಮೊದಲು ನಿಭಾಯಿಸಲು ಕಷ್ಟವೆನಿಸಬಹುದು. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಸಾರ್ವಜನಿಕರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.
ದಾವಣಗೆರೆ ಜಿಲ್ಲೆಯು ವಾಸಯೋಗ್ಯ ನಗರವೆಂದು ದೇಶದಲ್ಲಿ 9ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಆದರೆ ಉಳಿದ ವಿಚಾರಗಳಲ್ಲಿ ಹಿಂದೆ ಉಳಿದಿದೆ. ಹಾಗೂ ಮಂಗಳೂರಿನಲ್ಲಿ ಸ್ವಚ್ಛ ಅಭಿಯಾನದಡಿ ಸುಮಾರು 440 ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಯಶಸ್ವಿಯಾಗಿದ್ದು, ಇದೀಗ ಸ್ವಚ್ಛ ದಾವಣಗೆರೆಯನ್ನು ಮಾಡಲು ಹಿರಿಯ ತಜ್ಞರು, ಆಡಳಿತಾಧಿಕಾರಿಗಳು, ಮಾಧ್ಯಮ ವರ್ಗದವರು,ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ವಾರ್ಡ್ ವಿಸಿಟ್
ವಾರಕ್ಕೆ ನಾಲ್ಕು ಬಾರಿ ಮುಖಂಡರು, ಆಡಳಿತಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಆಯಾ ವಾರ್ಡ್‍ಗಳ ಕಾರ್ಪೋರೇಟರ್‍ಗಳು ಖುದ್ದಾಗಿ ಸ್ಥಳ ವೀಕ್ಷಣೆ ಮಾಡಲು ಮುಂದಾಗಿದ್ದು, ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಶೀಲಿಸಿ ಸಾಧ್ಯವಾದಲ್ಲಿ ಸ್ಥಳದಲ್ಲೇ ಬಗೆಹರಿಸಲು ಯತ್ನಿಸುತ್ತೇವೆ. ಇಲ್ಲದಿದ್ದಲ್ಲಿ ಸಮಯವಕಾಶ ತೆಗೆದುಕೊಂಡು ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.
ತಿಂಗಳ ಅಂತ್ಯದಲ್ಲಿ ಬಜೆಟ್ ಮಂಡನೆ
ಮಾರ್ಚ್ ತಿಂಗಳ ಅಂತ್ಯದಲ್ಲಿ ಬಜೆಟ್ ಮಂಡನೆ ಮಾಡಲಿದ್ದು, ಅಧಿಕಾರಿಗಳು ಸೇರಿದಂತೆ ನಗರದ ಸಮಸ್ತ ಜನರು ನಗರಾಭಿವೃದ್ಧಿಗೆ ಸೂಕ್ತ ಸಲಹೆ, ಸೂಚನೆಗಳನ್ನು ವಾಟ್ಸ್‍ಆ್ಯಪ್ ನಂಬರ್‍ಗೆ ತಲುಪಿಸಬಹುದು ಅಥವಾ ಬರಹದ ಮೂಲಕ ಕಚೇರಿಗೆ ತಂದು ಕೊಡಬಹುದು. ನಿಮ್ಮ ಸಲಹೆಗಳನ್ನು ಪರಿಶೀಲಿಸಿ ಬಜೆಟ್‍ನಲ್ಲಿ ಅನುಮೋದಿಸಲು ಯತ್ನಿಸುತ್ತೇವೆ ಎಂದು ತಿಳಿಸಿದರು.
ಸನ್ಮಾನ, ಸಮಾರಂಭಗಳಿಗೆ ಕರೆಯಬೇಡಿ
ಮೇಯರ್ ಅವಧಿ ಒಂದು ವರ್ಷ ಮಾತ್ರ ಇದ್ದು, ಈ ಸಂಪೂರ್ಣ ಅವಧಿಯನ್ನು ಸಾರ್ವಜನಿಕರ ಸೇವೆಗೆ ಮೀಸಲಿಡುತ್ತೇನೆ. ಸಮಯದ ಅಭಾವವಿರುವುದರಿಂದ ಸಮರ್ಪಕ ಸೇವೆ ಸಲ್ಲಿಸಲು ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸನ್ಮಾನ, ಸಭೆ-ಸಮಾರಂಭಗಳಿಗೆ ನನ್ನನ್ನು ಕರೆದು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಬೇಡಿ.
ನನ್ನ ಅವಧಿ ಮುಗಿದ ನಂತರ ನಾನು ಮಾಡಿದ ಸೇವೆಯನ್ನು ಪರಿಶೀಲಿಸಿ ನಂತರ ಸನ್ಮಾನಿಸಿ ಹಾಗೂ ಹಾರ, ಬೊಕ್ಕೆ ಎಂದು ನೀಡುವ ಬದಲು ಪುಸ್ತಕಗಳನ್ನು ಕೊಡಿ ಎಂದು ಮನವಿ ಮಾಡಿದರು. ಈಗಾಗಲೇ 2 ಸಾವಿರ ಪುಸ್ತಕಗಳು ಕಚೇರಿಗೆ ಬಂದಿದ್ದು, ಅವುಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್, ಶಿವಪ್ರಕಾಶ್, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


