ಅಂತರಂಗ
ಗಾಂಧೀಜಿ ಎಂಬ ಧೀಶಕ್ತಿ..!
- ಎಂ.ಪಿ. ಕುಮಾರಸ್ವಾಮಿ
ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ
ಇಂದು, ಜಗತ್ತಿನ ಶ್ರೇಷ್ಠ ಮಹಾಪುರುಷ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಈ ವಿಶೇಷ ದಿನವನ್ನು ಅಹಿಂಸಾ ದಿನ, ಸತ್ಯಾಗ್ರಹ ದಿನ, ಸರಳತೆಯ ದಿನ ಎಂದು ಆಚರಿಸಲೂಬಹುದು. ಭಾರತದ ಜೀವವೇ ಆಗಿರುವ ಇವರನ್ನು ಸದಾ ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಕೂಡ. ಗಾಂಧೀಜಿಯವರ ಜೀವಿತದ ಪ್ರತಿ ಸಂದರ್ಭಗಳು ವೈಶಿಷ್ಟ್ಯಪೂರ್ಣವೂ ಅದ್ವಿತೀಯವೂ ಆದರ್ಶವೂ ಆಗಿದೆ.
ಸ್ವಾತಂತ್ರ್ಯಕ್ಕಾಗಿ ನೂರಾರು ವರ್ಷಗಳಿಂದ ಹಲವಾರು ಕ್ರಾಂತಿಗಳನ್ನು ಮಾಡಿ ನಿರಾಯುಧರಾಗಿದ್ದ ಭಾರತೀಯರ ಮುಂದೆ ಗಾಂಧೀಜಿಯವರ ‘ಸತ್ಯ’ ಮತ್ತು ‘ಅಹಿಂಸಾ’ ಎಂಬ ಆತ್ಮಶಕ್ತಿಯ ಆಯುಧಗಳು ಭಾರತೀಯರನ್ನು ಬ್ರಿಟೀಷರ ಸಂಕೋಲೆಯಿಂದ ಬಿಡುಗಡೆ ಮಾಡುವಂತೆ ಮಾಡಿದ್ದು ನಮ್ಮ ದೇಶದ ಮಹಾಪಲ್ಲಟ ಹಾಗೂ ಮಹತ್ವಪೂರ್ವ ಘಟನೆ.
ಗಾಂಧೀಜಿಯವರು ‘ನನ್ನ ಸತ್ಯಾನ್ವೇಷಣೆ’ಯಲ್ಲಿ ಹೀಗೆ ಮುನ್ನುಡಿಯುತ್ತಾರೆ; “ನಾನು ಹೇಳಬಯಸುವ ಸತ್ಯಶೋಧನೆಯ ನನ್ನ ಅನೇಕ ಪ್ರಯೋಗಗಳ ಕಥೆಯನ್ನು ಮಾತ್ರ. ನನ್ನ ಜೀವನ ಈ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ.”- ಹೀಗೆ ತಮ್ಮ ಬದುಕನ್ನೇ ಪ್ರಯೋಗಶಾಲೆ ಮಾಡಿಕೊಂಡು ಯಶಸ್ವಿಯಾಗಿ ಮಹಾನ್ ಸಾಧಕರಾದ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಜನಾಂಗ ಪಕ್ಷಪಾತ ಹಾಗೂ ವರ್ಣಭೇದ ನೀತಿಯ ವಿರುದ್ಧ ನಡೆಸಿದ ಹೋರಾಟದಲ್ಲಿ ‘ಸತ್ಯಾಗ್ರಹ’ ಎಂಬ ಕರ್ಯತತ್ವವನ್ನು ರೂಪಿಸಿಕೊಂಡಿದ್ದರು.
ಈ ಮೂಲಕ ಸತ್ಯಾಗ್ರಹವನ್ನು ‘ಆತ್ಮಶಕ್ತಿ’ ಅಥವಾ ‘ಪ್ರೇಮಶಕ್ತಿ’ ಎಂದು ಸೂಚಿಸಿ, ಈ ಶಕ್ತಿಯನ್ನು ಸ್ವಾತಂತ್ರ ಸಂಗ್ರಾಮದ ಆಯುಧವನ್ನಾಗಿ ಬಳಸಿದರು. ಸತ್ಯವನ್ನೇ ತಮ್ಮ ಶಕ್ತಿಯಾಗಿ ಮಾಡಿಕೊಂಡ ಗಾಂಧೀಜಿಯವರಿಗೆ ಸತ್ಯದ ಮೇಲೆ ಬಹಳ ಒಲವು ಇತ್ತು. ಹಾಗೆಯೇ ಅವರ ವಿಚಾರಗಳು ತುಂಬಾ ಭಿನ್ನವಾಗಿದ್ದವು. ಪ್ರಸಿದ್ಧ ಆಂಗ್ಲ ಕವಿ ಕೀಟ್ಸ್ ‘ಸೌಂರ್ಯವೇ ಸತ್ಯ’ ಎಂದನು. ಆದರೆ ಗಾಂಧೀಜಿ ‘ಸತ್ಯವೇ ಸೌಂರ್ಯ’ ಎಂದರು. ಬಾಹ್ಯರೂಪದಲ್ಲಿ ಅಷ್ಟೇನು ಚೆನ್ನಾಗಿ ಕಾಣದ ಪ್ರಾಚೀನ ಗ್ರೀಕ್ ತತ್ವಜ್ಞಾನಿ ಸಾಕ್ರೇಟಿಸ್ನನ್ನು ‘‘A Beautiful soul’
ಎಂದು ಕರೆದು ಆತ್ಮಶುದ್ಧಿಗೆ ಹೆಚ್ಚು ಮಹತ್ವಕೊಟ್ಟರು.
ಸರಳತೆಗೆ ಸಾಹುಕಾರರಾದ ಗಾಂಧೀಜಿಯವರಿಗೆ ಜೀವನವೇ ಒಂದು ಐಶ್ರ್ಯ. “ಯಾವ ದೇಶದಲ್ಲಿ ಉದಾತ್ತ ಮನಸ್ಕರೂ ನೆಮ್ಮದಿಯಿಂದ ಬಾಳುವವರೂ ಆದ ವ್ಯಕ್ತಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವರೋ ಆ ದೇಶ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತವಾದುದು. ಹಾಗೆಯೇ ಯಾವ ಮನುಷ್ಯ ಜೀವನದಲ್ಲಿ ತನ್ನೆಲ್ಲಾ ಕರ್ತವ್ಯಗಳನ್ನು ಪರಿಪೂರ್ಣಗೊಳಿಸುವುದಲ್ಲದೆ ಇತರರ ಬಾಳ್ವೆಯ ಮೇಲೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸಹಾಯವಾಗಬಲ್ಲ ಪ್ರಭಾವ ಬೀರುವನೋ ಅವನು ಮಿಕ್ಕೆಲ್ಲರಿಗಿಂತ ಶ್ರೀಮಂತನೆನ್ನಬೇಕು” ಎಂಬ ಅವರ ಮಾತಿನ ಹಿನ್ನೆಲೆಯಲ್ಲಿ ಅವರ ಬದುಕಿನ ಸತ್ಯಾನ್ವೇಷಣೆ ಅಡಗಿರುವುದು ಪ್ರಯೋಗಾತ್ಮಕ ಸಂಗತಿಯಾಗಿದೆ.
ಗಾಂಧೀಜಿ ತಮ್ಮನ್ನು ಸನಾತನೀ ಹಿಂದೂ ಎಂದು ಕರೆದುಕೊಂಡು, ಗೋವಿಗೆ ಹೆಚ್ಚಿನ ಮಹತ್ವಕೊಟ್ಟಿದ್ದಾರೆ. ಗೋ ಸೇವೆಯನ್ನು ಹಿಂದೂ ಧರ್ಮದ ತಿರುಳೆಂದು ತಿಳಿದು ‘ಕರುಣೆಯ ಕಾವ್ಯ’ ಎನ್ನುವಷ್ಟರ ಮಟ್ಟಿಗೆ ಗೋವನ್ನು ತಾಯಿ, ಸತ್ವಶಕ್ತಿಯ ಅವತಾರ ಎಂದು ಕರೆದಿದ್ದಾರೆ. ಹೀಗೆ ಭಾವನಾತ್ಮಕವಾಗಿ ಯೋಚಿಸುವುದರ ಜೊತೆಗೆ ಹಿಂದೂ ಸಮಾಜದಲ್ಲಿರುವ ಪಾಪಕೃತ್ಯಗಳಾದ ದೇವದಾಸಿ ಪದ್ಧತಿ, ಪ್ರಾಣಿಹತ್ಯೆ, ಮದ್ಯಪಾನ, ಜೂಜು, ಅಸ್ಪೃಶ್ಯತೆ, ಮಲಿನತೆ ಇವುಗಳನ್ನು ಸುಧಾರಿಸಲು ಯತ್ನಿಸಿದ್ದಾರೆ. ಜತೆಗೆ ಸರ್ವಧರ್ಮ ಸಮಭಾವವನ್ನೂ ಬೋಧಿಸಿದ್ದಾರೆ.
ಗಾಂಧೀಜಿಯವರ ಮಾನವೀಯ ಗುಣ ಎಲ್ಲರನ್ನು ಆಕರ್ಷಿಸುವಂತಹುದು. ಮನುಷ್ಯನಿಗೆ ಮನುಷ್ಯನಾಗಿಯೇ ಒಂದು ಮೌಲ್ಯವಿದೆ. ಈ ಮೌಲ್ಯ ಎಲ್ಲ ಬಂಧನಗಳನ್ನು ಮೀರಿದ್ದು. ಪ್ರತಿಯೊಬ್ಬ ಮಾನವನಿಗೂ ಮಾನವನೇ ಆಗಬೇಕು. ಮಾನವನನ್ನು ಪ್ರೀತಿಸುವುದನ್ನು ‘ಮಾನವೀಯತೆಯ ಹಕ್ಕು’ ಎಂದು ಪ್ರತಿಪಾದಿಸಿದರು.
ಬಡತನದ ಪ್ರತೀಕವಾಗಿ ಒಬ್ಬ ಹೆಂಗಸು ತನ್ನಲ್ಲಿದ್ದ ಒಂದೇ ಸೀರೆಯ ಅರ್ಧಭಾಗವನ್ನು ಉಟ್ಟು ಇನ್ನರ್ಧ ಸೀರೆಯನ್ನು ತೊಳೆದು ದಿನಕಳೆಯುತ್ತಿದ್ದ ಪರಿಸ್ಥಿತಿಯನ್ನು ನೋಡಿ, ತಾನು ಸೂಟುಬೂಟನ್ನು ಧಿಕ್ಕರಿಸಿ, ತನ್ನ ಕೊನೆಗಾಲದ ತನಕ ಸರಳ ಉಡುಪಿಗೆ ಬದ್ಧರಾಗಿದ್ದ ಗಾಂಧೀಜಿಯ ಇಂಥ ಮೌಲ್ಯಯುತ ಜೀವನವು ನಮಗೆ ಆದರ್ಶ ಮಾದರಿ.
ಇಂತಹ ಸರಳತೆಯ ಸ್ವಚ್ಛತೆಯ ದೈವತ್ವದ ‘ಗಾಂಧಿ ಮಾದರಿ’ ಈ ಕಾಲಕ್ಕೆ ತೀರ ಆವಶ್ಯವಾಗಿದೆ. ಇವರ ಹೋರಾಟಗಳು ಜಗತ್ತಿನಲ್ಲಿ ಅತ್ಯಂತ ಪರಿಶುದ್ಧವಾಗಿವೆ ಮತ್ತು ದಾರಿ ದೀಪವಾಗಿವೆ. ಸ್ವಾತಂತ್ರö್ಯ ಹೋರಾಟವು ರಕ್ತಪಾತದಿಂದ ಕೊನೆಗೊಂಡು ಅಲ್ಪಾಯುಷ್ಯ ಹೊಂದಬಾರದು ಎಂದು ಮನಗಂಡು, ತಾತ್ವಿಕ ಹೋರಾಟಕ್ಕೆ ಕೊಂಡೊಯ್ಯಬಲ್ಲ ಅಹಿಂಸಾತ್ಮಕ ಹೋರಾಟಕ್ಕೆ ಗಾಂಧೀಜಿ ಮುನ್ನುಡಿ ಬರೆದರು.
ಇವರ ಹೋರಾಟದಲ್ಲಿ ಅಳವಡಿಸಿಕೊಂಡ ಮಹಾವೀರನ ಅಹಿಂಸೆ, ಬುದ್ಧನ ಶಾಂತಿ, ಯೇಸುವಿನ ಪ್ರೀತಿ ಇಂತಹ ಮಾರ್ಗಗಳ ಮೂಲಕ ಸತ್ಯಾಗ್ರಹ, ಮೌನ ಪ್ರತಿಭಟನೆ, ಅಸಹಕಾರದಂತಹ ಹರಿತ ಅಸ್ತçಗಳನ್ನು ಮಾನವ ಜನಾಂಗಕ್ಕೆ ಪರಿಚಯಿಸಿದ ಅವತಾರ ಪುರುಷ. ಇದೇ ಹಾದಿಯಲ್ಲಿ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಅಂಗ್ಸಾನ್ ಸೂ ಕೀ ಇವರು ಯಶಸ್ವಿಯಾಗಿರುವುದು ನಮ್ಮ ಕಣ್ಣ ಮುಂದೆ ಇದೆ.
23-02-1922 ರ‘ಯಂಗ್ ಇಂಡಿಯಾ’ ದ ಅಗ್ರಲೇಖನ ‘ಷೇರಿಂಗ್ ದಿ ಮೆನ್ಸ್’ನಲ್ಲಿ ಗಾಂಧೀಜಿ ಹೀಗೆ ಬರೆಯುತ್ತಾರೆ; “ಅಧಿಕಾರವೆಂಬ ಮದ್ಯ ಹಾಗೂ ಬಡಜನಾಂಗಗಳಿಂದ ಮಾಡಿದ ಕೊಳ್ಳೆಗಳಿಂದ ಮತ್ತೇರಿರುವ ಯಾವ ಸಾಮ್ರಾಜ್ಯ ಈ ಜಗತ್ತಿನಲ್ಲಿ ಬಹುಕಾಲ ಬಾಳಲ್ಲ.” ಇಂತಹ ಪ್ರತಿಮಾ ವಿಧಾನದ ಮಾತು ಕೇವಲ ಬ್ರಿಟೀಷರಿಗೆ ಮಾತ್ರ ಸೀಮಿತವಾಗುವುದಿಲ್ಲ.
ಪ್ರತಿಯೊಬ್ಬರ ಆತ್ಮೋದ್ಧಾರವನ್ನು, ಲೋಕದ ಹಿತವನ್ನು ಸಾಧಿಸಬೇಕಾದರೆ ಈ ಸಂದರ್ಭದಲ್ಲಿ ‘ಸರ್ವೋದಯ’ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳುವುದಕ್ಕೆ ಈ ವರ್ಷ ಪ್ರೇರಕವಾಗಲಿ ಎಂದು ಬಯಸಿ, ಗಾಂಧೀಜಿಯವರ ಬಗ್ಗೆ ಆಲ್ಬರ್ಟ್ ಐನ್ಸ್ಟೀನ್ ಮಾತನ್ನು ನೆನೆಯುತ್ತೇನೆ; “ಇಂತಹ ವ್ಯಕ್ತಿಯೊಬ್ಬ ದೇಹಧಾರಿಯಾಗಿ ಈ ನೆಲದ ಮೇಲೆ ನಡೆದಾಡಿದನು ಎಂಬುದನ್ನು ಮುಂದಿನ ಪೀಳಿಗೆಗಳು ನಂಬುವುದು ವಿರಳ.” ಈ ನಂಬಿಕೆಯ ವಿರಳತೆಯನ್ನು ನಾವು ಬಹುಳ ಮಾಡಬೇಕಾಗಿರುವುದು ನಮ್ಮೆಲ್ಲರ ಧೀಶಕ್ತಿಯ ಸಂಕಲ್ಪವಾಗಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


