Connect with us

ಸಿನಿ ಸುದ್ದಿ

ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಅಷ್ಟೇ ಅಲ್ಲ..!

Published

on

  • ಚೇತನ್ ನಾಡಿಗೇರ್

ಹಿಂದಿ ರಾಷ್ಟ್ರ ಭಾಷೆ ಹೌದು, ಅಲ್ಲ ಎನ್ನುವುದರ ಕುರಿತು ಇಡೀ ದೇಶದಲ್ಲಿ ಕಳೆದೊಂದು ದಿನದಿಂದ ದೊಡ್ಡ ಚರ್ಚೆಯಾಗುತ್ತಿದೆ. ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗಗಳ ನಡುವೆ ಯಾರು ಮೇಲು ಎಂಬುದರ ಕುರಿತು ಕೆಲವು ತಿಂಗಳುಗಳಿಂದ ತರ್ಕ ನಡೆಯುತ್ತಿದೆ. ಇದು ಒಂದೆಡೆಯಾದರೆ, ಇನ್ನೊಂದು ಕಡೆ ಚಿತ್ರರಂಗಗಳನ್ನು ಭಾಷೆ ಮತ್ತು ಪ್ರಾಂತ್ಯಗಳ ಆಧಾರದ ಮೇಲೆ ವಿಂಗಡಿಸುವುದನ್ನು ಬಿಟ್ಟು ನಾವು ಭಾರತೀಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಒಂದು ಚಿತ್ರವನ್ನು ಒಂದು ಭಾಷೆಗೆ ಸೀಮಿತ ಮಾಡದೆ, ಭಾರತೀಯ ಚಿತ್ರ ಎಂದು ನೋಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಇಂತಹ ಚರ್ಚೆಗಳು ಇಲ್ಲಿ ಭಾಷೆಗಳು ಮತ್ತು ರಾಜ್ಯಗಳ ನಡುವೆ ನಡಯುತ್ತಿವೆ. ಆದರೆ, ಜಾಗತಿಕ ಚಿತ್ರರಂಗದಲ್ಲಿ ಭಾರತೀಯ ಚಿತ್ರರಂಗಕ್ಕೆ ಬೇರೆಯದೇ ಸ್ಥಾನವಿದೆ. ಬೇರೆಯದೇ ಮಹತ್ವವಿದೆ. ಏಕೆಂದರೆ, ಬೇರೆ ಭಾಷೆಗಳ ಚಿತ್ರರಂಗಗಳಿಗಿಂತ ಭಾರತೀಯ ಚಿತ್ರರಂಗ ವಿಭಿನ್ನವಾಗಿ ನಿಲ್ಲುವುದೇ ಇಲ್ಲಿನ ಭಾಷೆ, ಸೊಗಡು ಮತ್ತು ವೈವಿಧ್ಯತೆಯೇ ಕಾರಣ.

ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ಅದರದ್ದೇ ಆದ ಚಿತ್ರರಂಗಗಳಿವೆ. ಇಂಗ್ಲೀಷ್, ಫ್ರೆಂಚ್, ಪರ್ಶಿಯನ್, ಜರ್ಮನ್, ಕೊರಿಯನ್, ಜಾಪನೀಸ್, ಚೈನೀಸ್ (ಮಾಂಡರಿನ್), ಇಟಾಲಿಯನ್, ರಷ್ಯನ್ ಹೀಗೆ ಬೇರೆಬೇರೆ ದೇಶಗಳಲ್ಲಿ ಅದರದ್ದೇ ಆದ ಚಿತ್ರರಂಗಗಳಿವೆ. ಇಂಗ್ಲೀಷ್ ಚಿತ್ರಗಳು ಬರೀ ಹಾಲಿವುಡ್ನಲ್ಲಿ ಮಾತ್ರ ತಯಾರಾಗುವುದಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಲ್ಲೂ ತಯಾರಾಗುತ್ತಿವೆ.

ಎಲ್ಲಾ ದೇಶಗಳಲ್ಲಿ ವರ್ಷವೊಂದಕ್ಕೆ ನೂರಾರು ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಆದರೆ, ಭಾರತದಲ್ಲಿ ಕಂಡಂತೆ ಯಾವುದೇ ದೇಶದಲ್ಲೂ ಇಷ್ಟೊಂದು ಭಾಷೆಗಳ ಚಿತ್ರಗಳನ್ನು ಕಾಣುವುದಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ಮುಖ್ಯ ಭಾಷೆಯಲ್ಲದೆ ಒಂದೆರೆಡು ಉಪಭಾಷೆಗಳ ಚಿತ್ರಗಳು ಬರಬಹುದು ಅಷ್ಟೇ. ಆದರೆ, ಭಾರತದಲ್ಲಿ ಹಾಗಿಲ್ಲ.

ಇಲ್ಲಿ ಭಾರತೀಯ ಚಿತ್ರರಂಗ ಎಂದು ಯಾವುದೋ ಒಂದು ಭಾಷೆಯ ಚಿತ್ರರಂಗಕ್ಕೆ ಹೇಳುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೊರಜಗತ್ತಿಗೆ ಭಾರತೀಯ ಚಿತ್ರರಂಗವೆಂದರೆ, ಹಿಂದಿ ಚಿತ್ರರಂಗ ಅಥವಾ ಬಾಲಿವುಡ್ ಮಾತ್ರ ಕಾಣಬಹುದು. ಆದರೆ, ಅದರ ಹೊರತಾಗಿಯೂ ೨೦ಕ್ಕೂ ಹೆಚ್ಚು ಚಿತ್ರರಂಗಗಳಿವೆ ಮತ್ತು ಪ್ರತಿಯೊಂದು ರಾಜ್ಯದಲ್ಲೂ ಆಯಾ ಭಾಷೆಯ ಒಂದು ಚಿತ್ರರಂಗವಿದ್ದೇ ಇದೆ.

ಭಾರತದ ಮೊದಲ ಚಿತ್ರ `ರಾಜ ಹರಿಶ್ಚಂದ್ರ’ ಬಿಡುಗಡೆಯಾಗಿ ಕೆಲವು ವರ್ಷಗಳಲ್ಲೇ ಬೇರೆಬೇರೆ ಭಾಷೆಗಳಲ್ಲೂ ಚಿತ್ರಗಳ ನಿರ್ಮಾಣ ಪ್ರಾರಂಭವಾಗಿದೆ. ಆದರೆ, ಎಲ್ಲವೂ ಮೂಕಿ ಚಿತ್ರಗಳಾದ್ದರಿಂದ, ಅದು ಯಾವುದೋ ಒಂದು ಭಾಷೆಯ ಚಿತ್ರ ಎಂದು ಗುರುತಿಸುವುದು ಕಷ್ಟ. 1931ರಲ್ಲಿ ಭಾರತದ ಮೊದಲ ಟಾಕಿ ಚಿತ್ರವಾದ ‘ಆಲಂ ಅರಾ’ ಬಿಡುಗಡೆಯಾದ ಮೇಲೆ ಬೇರೆ ಭಾಷೆಗಳಲ್ಲೂ ಚಿತ್ರನಿರ್ಮಾಣ ಪ್ರಾರಂಭವಾಗಿ, ಬೇರೆ ಭಾಷೆಗಳ ಚಿತ್ರರಂಗಗಳೂ ಪ್ರಾರಂಭವಾಗಿವೆ. ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಲಿ, ಮರಾಠಿ, ಭೋಜಪುರಿ, ಗುಜರಾತಿ, ರಾಜಸ್ತಾನಿ, ಒಡಿಯಾ, ಮಣಿಪುರಿ, ಅಸ್ಸಾಮಿ, ಡೋಗ್ರಿ, ಪಂಜಾಬಿ, ಹರಿಯಾಣ್ವಿ, ನಾಗ್ಪುರಿ, ಮೇಯ್ತಿ ಹೀಗೆ 20ಕ್ಕೂ ಹೆಚ್ಚು ಚಿತ್ರರಂಗಗಳಿವೆ.

ಇನ್ನು, ಇತ್ತೀಚಿನ ವರ್ಷಗಳಲ್ಲಿ, ಹೈದರಾಬಾದಿನ ಉರ್ದು ಮಾತನಾಡುವ ಜನರಿಗಾಗಿಯೇ ಡೆಕ್ಕನಿ ಎಂಬ ಚಿತ್ರರಂಗ ಹುಟ್ಟಿಕೊಂಡಿದ್ದು, ಡೆಕ್ಕನಿ ಭಾಷೆಯ ಚಿತ್ರಗಳು ನಿರ್ಮಾಣವಾಗುತ್ತಿವೆ. ಈ ಭಾಷೆಯ ಚಿತ್ರಗಳು ಆಂಧ್ರ ಪ್ರದೇಶ, ತೆಲಂಗಾಣ ಮುಂತಾದ ಕಡೆ ಪ್ರದರ್ಶನವಾಗುತ್ತವೆ. ಇವಿಷ್ಟು ಚಿತ್ರರಂಗಗಳಲ್ಲದೆ, ಪ್ರಾದೇಶಿಕ ಚಿತ್ರರಂಗಗಳು ಬೇರೆ ಇವೆ.

ಉದಾಹರಣೆಗೆ, ಕನ್ನಡದಲ್ಲೇ ಪ್ರಾದೇಶಿಕ ಭಾಷೆ ಎಂದು ಗುರುತಿಸಿಕೊಂಡಿರುವ ತುಳು, ಕೊಂಕಣಿ, ಕೊಡವ, ಬಂಜಾರ ಮತ್ತು ಬ್ಯಾರಿ ಭಾಷೆಗಳಿವೆ. ಈ ಎಲ್ಲಾ ಭಾಷೆಗಳಲ್ಲೂ ಚಿತ್ರ ನಿರ್ಮಾಣವಾಗುತ್ತಿರುವುದು ವಿಶೇಷ. ಮುಖ್ಯ ಭಾಷೆಯಂತೆ ಈ ಭಾಷೆಗಳಲ್ಲಿ ಸತತವಾಗಿ ಚಿತ್ರಗಳ ನಿರ್ಮಾಣವಾಗದಿದ್ದರೂ, ಆಗಾಗ ಒಂದೊಂದು ಪ್ರಯತ್ನ ಮತ್ತು ಪ್ರಯೋಗಗಳಾಗುತ್ತಲೇ ಇರುತ್ತವೆ. ಉದಾಹರಣೆಗೆ, ತುಳು ಚಿತ್ರರಂಗ 1931ರಿಂದಲೇ ಅಸ್ತಿತ್ವದಲ್ಲಿದ್ದರೂ, ನಿರ್ಮಾಣವಾಗುತ್ತಿದ್ದ ಚಿತ್ರಗಳ ಸಂಖ್ಯೆ ಕಡಿಮೆಯೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ತುಳು ಭಾಷೆಯಲ್ಲಿ ನಿರ್ಮಾಣ ಹೆಚ್ಚಾಗಿದ್ದು, ಪ್ರತಿ ವರ್ಷ 10ಕ್ಕೂ ಹೆಚ್ಚು ಸಂಖ್ಯೆಯ ಚಿತ್ರಗಳು ನಿರ್ಮಾಣವಾಗುತ್ತಿವೆ.

ಇದಲ್ಲದೆ ಬಿಹಾರದಲ್ಲಿ ಹಿಂದಿ ಮತ್ತು ಭೋಜಪುರಿಯ ಜೊತೆಗೆ ಮಘಹಿ ಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತವೆ. ಗುಜರಾತ್ನಲ್ಲಿ ಗುಜರಾತಿ ಭಾಷೆಯ ಚಿತ್ರಗಳ ಜೊತೆಗೆ ಕಛ್ಛಿ ಭಾಷೆಯ ಚಿತ್ರಗಳು ಸಹ ತೆರೆ ಕಾಣುತ್ತವೆ. ಇನ್ನು ಒಡಿಯಾದಲ್ಲಿ ಒಡಿಸ್ಸಿ ಭಾಷೆಯ ಜೊತೆಗೆ ಸಂಭಲಪುರಿ ಅಥವಾ ಖೋಸ್ಲಿ ಭಾಷೆಯ ಚಿತ್ರಗಳನ್ನು ನೋಡಬಹುದು. ಇದಲ್ಲದೆ ಭಾರತದ ಅತ್ಯಂತ ಪುರಾತನ ಭಾಷೆಯಾದ ಸಂಸ್ಕೃತದಲ್ಲೂ ಆಗಾಗ ಚಿತ್ರಗಳು ನಿರ್ಮಾಣವಾಗುವುದುಂಟು.

ಇಷ್ಟೆಲ್ಲಾ ಚಿತ್ರರಂಗಗಳು ಆಯಾ ಭಾಷೆಯ ಹೆಸರಿನಿಂದಲೇ ಗುರಿತಿಸಿಕೊಳ್ಳುತಿತ್ತು. ಆದರೆ, 90ರ ದಶಕದಿಂದಿತ್ತೀಚೆಗೆ, ಈ ಚಿತ್ರರಂಗಗಳನ್ನು ಗುರುತಿಸುವ ಪರಿಪಾಠ ಬದಲಾಯಿತು. ಇಂಗ್ಲೀಷ್ ಚಿತ್ರಗಳನ್ನು ಹೇಗೆ ಹಾಲಿವುಡ್ ಎಂದು ಗುರುತಿಸಲಾಯಿತೋ, ಭಾರತದಲ್ಲೂ ಒಂದೊಂದು ಭಾಷೆಗೂ ಒಂದೊಂದು ವುಡ್ ಎಂದು ಹೆಸರು ಕೊಡುವ ಟ್ರೆಂಡ್ ಶುರುವಾಯಿತು. ಮೊದಲಿಗೆ ಹಿಂದಿ ಚಿತ್ರರಂಗಕ್ಕೆ ಬಾಲಿವುಡ್ ಎಂದು ಕರೆಯಲಾಯಿತು.

ಕ್ರಮೇಣ ಈ ಚಾಳಿ ಎಲ್ಲಾ ಚಿತ್ರರಂಗಗಳಿಗೂ ವ್ಯಾಪಸಿತು. ತಮಿಳಿಗೆ ಕಾಲಿವುಡ್, ತೆಲುಗಿಗೆ ಟಾಲಿವುಡ್, ಕನ್ನಡದಕ್ಕೆ ಸ್ಯಾಂಡಲ್ವುಡ್, ತುಳು ಚಿತ್ರಗಳಿಗೆ ಕೋಸ್ಟಲ್ವುಡ್, ಮಲಯಾಳಂಗೆ ಮಾಲಿವುಡ್, ಭೋಜಪುರಿಗೆ ಭೋಜಿವುಡ್, ಡೋಗ್ರಿ ಚಿತ್ರಗಳಿಗೆ ಪಹಾಡಿವುಡ್, ಗುಜರಾತಿ ಸಿನಿಮಾಗಳಿಗೆ ಗಾಲಿವುಡ್, ಒಡಿಯಾ ಭಾಷೆಯ ಚಿತ್ರಗಳಿಗೆ ಒಲಿವುಡ್, ಪಂಜಾಬಿಗೆ ಪಾಲಿವುಡ್ … ಹೀಗೆ ಏನೇನೋ ಚಿತ್ರ-ವಿಚಿತ್ರ ಹೆಸರುಗಳಿವೆ. ಹೀಗೆ ಪ್ರತಿಯೊಂದು ಚಿತ್ರರಂಗಕ್ಕೂ ಒಂದೊಂದು ಹೆಸರು ಬಂದು, ಆ ಹೆಸರಿನಿಂದಲೇ ಆ ಚಿತ್ರರಂಗವನ್ನು ಗುರುತಿಸಲಾಗುತ್ತಿದೆ.

ಇದೆಲ್ಲದರಿಂದಲೇ ಭಾರತದಲ್ಲಿ ಪ್ರತೀ ವರ್ಷ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ 1400 ದಾಟುತ್ತಿದೆ. ಇದರಲ್ಲಿ ಹಿಂದಿಯ ಪಾಲು ಹೆಚ್ಚೆಂದರೆ 200-250 ಇರಬಹುದು. ಮಿಕ್ಕಂತೆ ದಕ್ಷಿಣ ಭಾರತೀಯ ಚಿತ್ರರಂಗಗಳಿಂದ 850ಕ್ಕೂ ಹೆಚ್ಚು ಚಿತ್ರಗಳು ತಯಾರಾಗುತ್ತಿವೆ. ಮಿಕ್ಕೆಲ್ಲ ಭಾಷೆಯ ಚಿತ್ರಗಳನ್ನು ಒಟ್ಟುಗೂಡಿಸಿದರೆ ವರ್ಷವೊಂದಕ್ಕೆ 1400 ಪ್ಲಸ್ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇಲ್ಲಿ ಯಾವುದೇ ಚಿತ್ರರಂಗ ದೊಡ್ಡದಲ್ಲ, ಯಾವುದೂ ಚಿಕ್ಕದಲ್ಲ.

ಕೆಲವು ಚಿತ್ರರಂಗಗಳ ರೀಚ್ ಚಿಕ್ಕದಿರಬಹುದು, ಅಲ್ಲಿ ತಯಾರಾಗುವ ಚಿತ್ರಗಳ ಬಜೆಟ್ ಕಡಿಮೆ ಇರಬಹುದು, ಆ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಇರಬಹುದು … ಆದರೆ, ಎಲ್ಲ ಚಿತ್ರರಂಗಗಳಿಗೂ ಅದರದ್ದೇ ಆದ ಐತಿಹಾಸಿಕ ಮಹತ್ವವಿದೆ ಮತ್ತು ಎಲ್ಲ ಚಿತ್ರರಂಗಗಳು ಸಹ ತಮ್ಮದೇ ರೀತಿಯಲ್ಲಿ ಸಂಸ್ಕೃತಿ ಮತ್ತು ಸೊಗಡನ್ನು ಬಿಂಬಿಸುತ್ತಿವೆ ಎನ್ನುವುದಷ್ಟೇ ಮುಖ್ಯ.

(ಚೇತನ್ ನಾಡಿಗೇರ್ ಅವರ ಫೇಸ್‌ಬುಕ್‌ ನಿಂದ ಆಯ್ದುಕೊಂಡ ಬರಹ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ಅಭಿಮಾನಿಗಳ ಸಂಭ್ರಮದಿಂದ ದೂರ ಕಿಚ್ಚನ ಬರ್ತ್‌ಡೇ; 53ನೇ ವಸಂತದಲ್ಲಿ ಸುದೀಪ್‌ ಸಿನಿಮಾ ಸರ್ಪ್ರೈಸ್‌ಗೆ ಕೌಂಟ್‌ಡೌನ್!

Published

on

ಹುಟ್ಟುಹಬ್ಬದ ದಿನವೂ ಕಿಚ್ಚನಿಗೆ ಸಿನಿಮಾ ಜಪ; 30 ವರ್ಷದ ಸಿನಿ ಪಯಣಕ್ಕೆ ಹೊಸ ಅಧ್ಯಾಯ

ಸುದ್ದಿದಿನ,ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಇಂದು, ಸೆಪ್ಟೆಂಬರ್‌ 2, ವಿಶೇಷ ದಿನ. 53ನೇ ವಸಂತಕ್ಕೆ ಕಾಲಿಡುತ್ತಿರುವ ಸುದೀಪ್‌, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಸೆ.2ರಂದು ಮನೆ ಬಳಿ ಅಭಿಮಾನಿಗಳು ಯಾರೂ ಬರಬಾರದು ಎಂದು ಸುದೀಪ್‌ ಈಗಾಗಲೇ ಮನವಿ ಮಾಡಿದ್ದರು. ಹೀಗಾಗಿ ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸುತ್ತಿದ್ದ ಕಿಚ್ಚನ ಬರ್ತ್‌ಡೇ ಈ ಬಾರಿ ವಿಭಿನ್ನವಾಗಿದೆ.

ಆದರೆ, ಅಭಿಮಾನಿಗಳಿಗೆ ನಿರಾಸೆಯಾಗದಂತೆ ಸಿನಿಮಾ ವಿಚಾರದಲ್ಲಿ ಭರ್ಜರಿ ಸರ್ಪ್ರೈಸ್‌ ಸಿಗುವ ನಿರೀಕ್ಷೆ ಮೂಡಿದೆ. ಹುಟ್ಟುಹಬ್ಬದ ಸಂದರ್ಭದಲ್ಲೇ ಕಿಚ್ಚನ ಮುಂಬರುವ ಸಿನಿಮಾಗಳ ಕುರಿತು ಮಹತ್ವದ ಅಪ್‌ಡೇಟ್‌ಗಳು ಹೊರಬರುವ ಸಾಧ್ಯತೆ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

http://Visit : www.suddidina.com

53ನೇ ವಸಂತ, 30 ವರ್ಷದ ಸಿನಿ ಪಯಣ

ಕಿಚ್ಚ ಸುದೀಪ್‌ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, 1997ರಲ್ಲಿ ಬಿಡುಗಡೆಯಾದ ‘ತಾಯವ್ವ’ ಚಿತ್ರದ ಮೂಲಕ ಸಿನಿಮಾ ಪಯಣ ಆರಂಭಿಸಿದ್ದರು. ಇದೀಗ ಚಿತ್ರರಂಗದಲ್ಲಿ ಮೂರು ದಶಕಗಳ ಪಯಣ ಪೂರ್ಣಗೊಳಿಸಿರುವುದು ಈ ಹುಟ್ಟುಹಬ್ಬದ ಮತ್ತೊಂದು ವಿಶೇಷ.

ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣ ಹಾಗೂ ಕಿರುತೆರೆಯಲ್ಲಿಯೂ ಸುದೀಪ್‌ ತಮ್ಮದೇ ಗುರುತು ಮೂಡಿಸಿದ್ದಾರೆ. ‘ಬಿಗ್‌ ಬಾಸ್‌ ಕನ್ನಡ’ ಕಾರ್ಯಕ್ರಮದ ನಿರೂಪಕರಾಗಿ ಸತತವಾಗಿ ಮುಂದುವರಿದಿರುವುದು ಅವರ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಗಿದೆ.

 

View this post on Instagram

 

‘ಬಿಲ್ಲ ರಂಗ ಭಾಷಾ’ ಮೇಲೆ ಹೆಚ್ಚಿದ ನಿರೀಕ್ಷೆ

‘ವಿಕ್ರಾಂತ್‌ ರೋಣ’ ಬಳಿಕ ನಿರ್ದೇಶಕ ಅನೂಪ್‌ ಭಂಡಾರಿ ಹಾಗೂ ಸುದೀಪ್‌ ಮತ್ತೊಮ್ಮೆ ‘ಬಿಲ್ಲ ರಂಗ ಭಾಷಾ’ ಮೂಲಕ ಒಂದಾಗಿದ್ದಾರೆ. ಈಗಾಗಲೇ ಚಿತ್ರದ ಲುಕ್‌ ಅಭಿಮಾನಿಗಳ ಗಮನ ಸೆಳೆದಿದ್ದು, ಮಾಸ್‌ ಅವತಾರದಲ್ಲಿ ಕಿಚ್ಚ ಕಾಣಿಸಿಕೊಂಡಿರುವುದು ನಿರೀಕ್ಷೆ ಹೆಚ್ಚಿಸಿದೆ.

ಚಿತ್ರದ ಬಗ್ಗೆ ನಿರ್ದೇಶಕ ಅನೂಪ್‌ ಭಂಡಾರಿ ಕೂಡ ಉತ್ಸಾಹ ವ್ಯಕ್ತಪಡಿಸಿದ್ದು, ಸುದೀಪ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಿನಿಮಾಗೆ ಸಂಬಂಧಿಸಿದ ಹೊಸ ಅಪ್‌ಡೇಟ್‌ ಸಿಗುವ ಸಾಧ್ಯತೆ ಇದೆ. ಸಿನಿಮಾ 2027ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

4 ಸಿನಿಮಾಗಳ ಸದ್ದು?

2024ರಲ್ಲಿ ‘ಮ್ಯಾಕ್ಸ್‌’ ಬಿಡುಗಡೆಯಾದ ಬಳಿಕ ಸುದೀಪ್‌ ಅವರ ಹೊಸ ಸಿನಿಮಾ ತೆರೆಗೆ ಬಂದಿಲ್ಲ. ಇದೀಗ ಒಂದೇ ಬಾರಿ ನಾಲ್ಕು ಸಿನಿಮಾಗಳ ಕುರಿತಂತೆ ಘೋಷಣೆ ಅಥವಾ ಅಪ್‌ಡೇಟ್‌ ಸಿಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಈ ಮೂಲಕ ಬರ್ತ್‌ಡೇ ಸಂಭ್ರಮದಿಂದ ದೂರವಿದ್ದರೂ, ಸಿನಿಮಾ ಸುದ್ದಿಗಳ ಮೂಲಕ ಕಿಚ್ಚ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲಿದ್ದಾರೆ.

ಸೆ.6ಕ್ಕೆ ಮತ್ತೆ ಟಿವಿ ಪರದೆ ಮೇಲೆ ಕಿಚ್ಚ

ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಕಿಚ್ಚನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಗ್ರ್ಯಾಂಡ್‌ ಪ್ರೀಮಿಯರ್‌ ಸೆಪ್ಟೆಂಬರ್‌ 6ರಂದು ನಡೆಯಲಿದ್ದು, ಮತ್ತೊಮ್ಮೆ ಸುದೀಪ್‌ ನಿರೂಪಕರಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೀಗಾಗಿ 53ನೇ ಹುಟ್ಟುಹಬ್ಬ, 30 ವರ್ಷದ ಸಿನಿ ಪಯಣ, ಹೊಸ ಸಿನಿಮಾಗಳ ನಿರೀಕ್ಷೆ ಹಾಗೂ ‘ಬಿಗ್‌ ಬಾಸ್‌’ ಎಂಟ್ರಿ—ಈ ಬಾರಿ ಕಿಚ್ಚನ ಬರ್ತ್‌ಡೇಗೆ ವಿಶೇಷ ಅರ್ಥ ಸಿಕ್ಕಿದೆ.

Continue Reading

ದಿನದ ಸುದ್ದಿ

Bigg Boss Kannada 13: ಹೊಸ ಥೀಮ್, ಹೊಸ ಸ್ಪರ್ಧಿಗಳು, 24×7 ಲೈವ್‌; ಕಿಚ್ಚ ಸುದೀಪ್‌ ಸಾರಥ್ಯದ ಬಿಗ್‌ಬಾಸ್‌ ಕನ್ನಡ 13ರ ವಿಶೇಷತೆಗಳೇನು?

Published

on

Source: Vijayakarnataka
Bigg Boss Kannada 13: ಅರಮನೆಗೆ ಗುಡ್‌ಬೈ, ಈ ಬಾರಿ ‘ಫ್ಲೈಟ್’ನಲ್ಲಿ ಬಿಗ್‌ಬಾಸ್‌ ಪ್ರಯಾಣ; ಸೆ.6ರಿಂದ ಹೊಸ ಸೀಸನ್‌ ಶುರು!

ಸುದ್ದಿದಿನ,ಬೆಂಗಳೂರು: ಅಂತೂ ಇಂತೂ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ **‘ಬಿಗ್‌ಬಾಸ್‌ ಕನ್ನಡ ಸೀಸನ್‌ 13’**ಗೆ ಅಧಿಕೃತ ಚಾಲನೆ ಸಿಗುವ ಸಮಯ ಬಂದಿದೆ. ಈಗಾಗಲೇ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ ಕುತೂಹಲ ಹೆಚ್ಚಿಸಿರುವ ಕಾರ್ಯಕ್ರಮದ ಟಿವಿ ಸೀಸನ್‌ ಸೆಪ್ಟೆಂಬರ್‌ 6ರಿಂದ ಆರಂಭವಾಗಲಿದೆ. ಹೊಸ ಸೀಸನ್‌ನಲ್ಲಿ ಮನೆ, ಥೀಮ್‌, ಸ್ಪರ್ಧಿಗಳ ಆಯ್ಕೆ ಹಾಗೂ ವೀಕ್ಷಣಾ ಅನುಭವದಲ್ಲೂ ಹಲವು ವಿಶೇಷತೆಗಳನ್ನು ಪರಿಚಯಿಸಲಾಗುತ್ತಿದೆ.

ಕಳೆದ 12 ಸೀಸನ್‌ಗಳಂತೆ ಈ ಬಾರಿಯೂ ಕಿಚ್ಚ ಸುದೀಪ್‌ ಕಾರ್ಯಕ್ರಮದ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಸತತ 13 ಸೀಸನ್‌ಗಳನ್ನು ನಿರೂಪಣೆ ಮಾಡುತ್ತಿರುವುದು ಬಿಗ್‌ಬಾಸ್‌ ಇತಿಹಾಸದಲ್ಲೇ ಗಮನಾರ್ಹ ದಾಖಲೆಯಾಗಿದೆ.

ಹೈಲೈಟ್ಸ್: ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್‌ ಹವಾ

  • ಸೆಪ್ಟೆಂಬರ್‌ 6ರಂದು ಸಂಜೆ 7ಕ್ಕೆ ಬಿಗ್‌ಬಾಸ್‌ ಕನ್ನಡ 13ರ ಗ್ರ್ಯಾಂಡ್‌ ಪ್ರೀಮಿಯರ್‌
  • ಈ ಬಾರಿ ‘Flight’ ಥೀಮ್‌ನಲ್ಲಿ ಬಿಗ್‌ಬಾಸ್‌ ಮನೆ ಮತ್ತು ಕಾರ್ಯಕ್ರಮ
  • ಸೆಲೆಬ್ರಿಟಿಗಳ ಜತೆಗೆ ಮೂವರು ಸಾಮಾನ್ಯ ಸ್ಪರ್ಧಿಗಳಿಗೆ ಅವಕಾಶ
  • ಜಿಯೋಹಾಟ್‌ಸ್ಟಾರ್‌ನಲ್ಲಿ 24×7 ಲೈವ್‌ ವೀಕ್ಷಣೆಯ ಸೌಲಭ್ಯ
  • ಕಿಚ್ಚ ಸುದೀಪ್‌ ಸತತ 13ನೇ ಸೀಸನ್‌ಗೂ ನಿರೂಪಕರಾಗಿ ಮುಂದುವರಿಕೆ

http://Visit : www.suddidina.com

ಈ ಬಾರಿ ‘Flight’ ಥೀಮ್‌ ಏಕೆ ವಿಶೇಷ?

ಕಳೆದ ಸೀಸನ್‌ನಲ್ಲಿ ವೀಕ್ಷಕರು ಅರಮನೆ ಮಾದರಿಯ ಬಿಗ್‌ಬಾಸ್‌ ಮನೆಯನ್ನು ಕಂಡಿದ್ದರು. ಆದರೆ ಈ ಬಾರಿ ಇಡೀ ಕಾರ್ಯಕ್ರಮದ ಕಲ್ಪನೆಯೇ ಬದಲಾಗಿದೆ. ‘Flight’ ಥೀಮ್‌ ಆಧಾರಿತವಾಗಿ ಸೀಸನ್‌ 13 ರೂಪಿಸಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲೂ ಇದರ ಝಲಕ್‌ ಕಾಣಿಸಿಕೊಂಡಿದೆ.

ವಿಶೇಷವೆಂದರೆ ಫ್ಲೈಟ್‌ ಥೀಮ್‌ ಕೇವಲ ಪ್ರೋಮೋಗೆ ಸೀಮಿತವಾಗಿಲ್ಲ. ಬಿಗ್‌ಬಾಸ್‌ ಮನೆಯ ವಿನ್ಯಾಸದಲ್ಲೂ ಇದೇ ಪರಿಕಲ್ಪನೆಯನ್ನು ಬಳಸಲಾಗಿದೆ. ಹೀಗಾಗಿ ಈ ಬಾರಿ ಮನೆ ಹೇಗೆ ಕಾಣಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಸೆಲೆಬ್ರಿಟಿಗಳ ಜತೆಗೆ ಕಾಮನ್‌ ಮ್ಯಾನ್‌ ಎಂಟ್ರಿ

ಬಿಗ್‌ಬಾಸ್‌ ಕನ್ನಡದ ಪ್ರತಿ ಸೀಸನ್‌ನಲ್ಲೂ ಸ್ಪರ್ಧಿಗಳ ಆಯ್ಕೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಬಾರಿ ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ ಮೂವರು ಸಾಮಾನ್ಯ ಸ್ಪರ್ಧಿಗಳು ಸೀಸನ್‌ 13ರ ಮನೆಗೆ ಪ್ರವೇಶಿಸಲಿದ್ದಾರೆ. ಇದರಿಂದ ಮನೆಯಲ್ಲಿ ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವಿನ ಸಂವಹನ, ಅಭಿಪ್ರಾಯ ಭೇದ ಹಾಗೂ ಹೊಸ ರೀತಿಯ ಸ್ಪರ್ಧೆ ಮೂಡುವ ನಿರೀಕ್ಷೆಯಿದೆ.

ಮನೆಯ ಪ್ರತಿಕ್ಷಣವೂ 24×7 ಲೈವ್‌

ಈ ಬಾರಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ. ಟಿವಿ ಎಪಿಸೋಡ್‌ಗಳಿಗೆ ಮಾತ್ರ ಸೀಮಿತವಾಗದೆ, ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್‌ ಮನೆಯ 24×7 ಲೈವ್‌ ವೀಕ್ಷಣೆ ಲಭ್ಯವಿರಲಿದೆ.

ಅಂದರೆ ದಿನದ ಎಪಿಸೋಡ್‌ನಲ್ಲಿ ಪ್ರಸಾರವಾಗದ ಮನೆಯೊಳಗಿನ ಹಲವು ಬೆಳವಣಿಗೆಗಳನ್ನೂ ವೀಕ್ಷಕರು ಗಮನಿಸಬಹುದು. ಸ್ಪರ್ಧಿಗಳ ನಡುವಿನ ಮಾತುಕತೆ, ಚಟುವಟಿಕೆಗಳು ಹಾಗೂ ಅನಿರೀಕ್ಷಿತ ಘಟನೆಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.

ಪ್ರಸಾರದ ಸಮಯವೂ ಫಿಕ್ಸ್‌

ಸೆಪ್ಟೆಂಬರ್‌ 6ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್‌ ಪ್ರೀಮಿಯರ್‌ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.

ಇನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ನಡೆಸಿಕೊಡುವ ಶನಿವಾರ ಮತ್ತು ಭಾನುವಾರದ ವಿಶೇಷ ಸಂಚಿಕೆಗಳು ರಾತ್ರಿ 9 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿವೆ.

ಬಿಗ್‌ಬಾಸ್‌ ಪ್ರಯಾಣ ಯಾವ ದಿಕ್ಕಿಗೆ?

ಫ್ಲೈಟ್‌ ಥೀಮ್‌, ಹೊಸ ಮುಖಗಳು, ಸಾಮಾನ್ಯ ಸ್ಪರ್ಧಿಗಳ ಪ್ರವೇಶ ಮತ್ತು 24×7 ಲೈವ್‌ ವೀಕ್ಷಣೆಯೊಂದಿಗೆ ಸೀಸನ್‌ 13 ಕುತೂಹಲ ಮೂಡಿಸಿದೆ. ಈ ‘ಫ್ಲೈಟ್‌’ನಲ್ಲಿ ಯಾರು ಟೇಕಾಫ್‌ ಆಗುತ್ತಾರೆ, ಯಾರು ಮಧ್ಯದಲ್ಲೇ ಎಲಿಮಿನೇಟ್‌ ಆಗುತ್ತಾರೆ ಮತ್ತು ಕೊನೆಯವರೆಗೂ ಯಾರು ಪ್ರಯಾಣ ಮುಂದುವರಿಸುತ್ತಾರೆ ಎಂಬುದೇ ಮುಂದಿನ ದಿನಗಳ ಪ್ರಮುಖ ಪ್ರಶ್ನೆ.

Continue Reading

ದಿನದ ಸುದ್ದಿ

Bigg Boss Agniparikshé: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಕುಮಾರಿ ಎಕ್ಸಿಟ್; ಆಟ ಮುಗಿದರೂ ಭವಿಷ್ಯಕ್ಕೆ ಸಿಕ್ಕಿತು ದೊಡ್ಡ ಗಿಫ್ಟ್

Published

on

Bigg Boss Agniparikshé: ಅನಾರೋಗ್ಯದಿಂದ ಅರ್ಧಕ್ಕೆ ಶೋ ಬಿಟ್ಟ ನಂಜನಗೂಡಿನ ಕುಮಾರಿ; ₹5 ಲಕ್ಷ ನೆರವು, ದುಬೈ ಉದ್ಯೋಗದ ಆಫರ್!

ಸುದ್ದಿದಿನ,ಬೆಂಗಳೂರು: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ರಿಯಾಲಿಟಿ ಶೋನಲ್ಲಿ ತಮ್ಮ ಸರಳತೆ, ಮುಗ್ಧತೆ ಹಾಗೂ ಸಹಜ ವರ್ತನೆಯಿಂದ ವೀಕ್ಷಕರ ಗಮನ ಸೆಳೆದಿದ್ದ ನಂಜನಗೂಡಿನ ಕುಮಾರಿ ಇದೀಗ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರಿ, ವೈದ್ಯರ ಸಲಹೆಯಂತೆ ಆಟವನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೋನಿಂದ ಹೊರಬಂದಿದ್ದಾರೆ.

ಕಳೆದ ಕೆಲವು ಸಂಚಿಕೆಗಳಲ್ಲಿ ಕುಮಾರಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಅವರು ಯಾಕೆ ಕಾರ್ಯಕ್ರಮದಲ್ಲಿ ಕಾಣಿಸುತ್ತಿಲ್ಲ ಎಂಬ ಪ್ರಶ್ನೆಯೂ ಚರ್ಚೆಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಮತ್ತೊಬ್ಬ ಸ್ಪರ್ಧಿ ಪೂರ್ಣಿಮಾ, ತಮ್ಮನ್ನು ಕಳುಹಿಸಿ ಕುಮಾರಿಯನ್ನು ಕರೆತರಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಕುಮಾರಿ ಶೋನಿಂದ ದೂರ ಉಳಿದಿರುವ ನಿಜವಾದ ಕಾರಣ ಅನಾರೋಗ್ಯ ಎಂಬುದು ಸ್ಪಷ್ಟವಾಗಿದೆ.

http://Visit : www.suddidina.com

ಆಟ ಅರ್ಧಕ್ಕೆ ನಿಂತರೂ ಸಿಕ್ಕಿತು ₹5 ಲಕ್ಷ!

ಕುಮಾರಿಯ ಬಿಗ್ ಬಾಸ್ ಪಯಣ ಅರ್ಧಕ್ಕೆ ಅಂತ್ಯಗೊಂಡಿದ್ದರೂ, ಕಾರ್ಯಕ್ರಮದ ವೇದಿಕೆ ಅವರಿಗೆ ನಿರೀಕ್ಷೆಗೂ ಮೀರಿದ ನೆರವು ನೀಡಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆ ಕುಮಾರಿಗೆ ಬರೋಬ್ಬರಿ ₹5 ಲಕ್ಷ ನಗದು ನೆರವು ನೀಡಿದೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕುಮಾರಿಗೆ ಈ ಹಣ ದೊಡ್ಡ ಆರ್ಥಿಕ ಆಸರೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗೆ ಈ ಹಣ ನೆರವಾಗಬಹುದು ಎಂಬ ನಿರೀಕ್ಷೆಯೂ ಇದೆ.

ಶಿಕ್ಷಣದ ಬಳಿಕ ಉದ್ಯೋಗಕ್ಕೂ ಭರವಸೆ

₹5 ಲಕ್ಷ ನೆರವಿನ ಜತೆಗೆ ಕುಮಾರಿಗೆ ಮತ್ತೊಂದು ಮಹತ್ವದ ಅವಕಾಶವನ್ನು ಸಂಸ್ಥೆ ಘೋಷಿಸಿದೆ. ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶ ನೀಡಲಾಗಿದೆ.

ಇದು ಕುಮಾರಿಯ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಘೋಷಣೆಯಾಗಿದೆ. ರಿಯಾಲಿಟಿ ಶೋನಿಂದ ಸಿಕ್ಕ ಜನಪ್ರಿಯತೆಯ ಜತೆಗೆ ಇದೀಗ ಶಿಕ್ಷಣ ಮತ್ತು ಉದ್ಯೋಗದ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಡುವ ಅವಕಾಶವೂ ದೊರೆತಿದೆ.

ಭಾವುಕ ವಿದಾಯ, ಹೊಸ ಬದುಕಿನ ಭರವಸೆ

ಹಳ್ಳಿಯಿಂದ ಬಂದ ಕುಮಾರಿಗೆ ಬೆಂಗಳೂರನ್ನು ನೋಡುವ ಅವಕಾಶದಿಂದ ಹಿಡಿದು ದೊಡ್ಡ ರಿಯಾಲಿಟಿ ಶೋ ವೇದಿಕೆಯಲ್ಲಿ ಸ್ಪರ್ಧಿಸುವವರೆಗೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಹಲವು ಹೊಸ ಅನುಭವಗಳನ್ನು ನೀಡಿದೆ. ಶೋನಿಂದ ನಿರ್ಗಮಿಸುವ ಸಂದರ್ಭದಲ್ಲಿ ಕುಮಾರಿ ಸೇರಿದಂತೆ ಇತರ ಸ್ಪರ್ಧಿಗಳು ಭಾವುಕರಾದರು.

ಸ್ಪರ್ಧೆಯಲ್ಲಿ ಮುಂದುವರಿಯಲು ಸಾಧ್ಯವಾಗದ ನೋವಿನ ನಡುವೆಯೂ, ಇಷ್ಟು ದೊಡ್ಡ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದಾಗಿ ಅವರ ಆಟ ಅಂತ್ಯಗೊಂಡಿದ್ದರೂ, ₹5 ಲಕ್ಷ ನೆರವು ಮತ್ತು ಭವಿಷ್ಯದ ಉದ್ಯೋಗದ ಭರವಸೆ ಕುಮಾರಿಯ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಹೀಗಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕುಮಾರಿಯ ಆಟ ಅರ್ಧಕ್ಕೆ ನಿಂತಿದ್ದರೂ, ಕಾರ್ಯಕ್ರಮದ ವೇದಿಕೆಯಿಂದ ಸಿಕ್ಕ ಬೆಂಬಲ ಅವರ ಮುಂದಿನ ಬದುಕಿಗೆ ಮಹತ್ವದ ತಿರುವು ನೀಡಿದೆ.

Continue Reading

Trending