Connect with us

ದಿನದ ಸುದ್ದಿ

ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರು ಭಯೋತ್ಪಾದಕರು : ಬಿಕೆ ಹರಿಪ್ರಸಾದ್ ವಾಗ್ದಾಳಿ

Published

on

ಸುದ್ದಿದಿನ,ಬೆಂಗಳೂರು : ರಾಜ್ಯದಲ್ಲಿ ಯಾರು ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು, ಅಶಾಂತಿ ಸೃಷ್ಟಿಸುವ ಮೂಲಕ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದಾರೋ ಅವರು ಭಯೋತ್ಪಾದಕರು, ಕೂಡಲೇ ಯುಎಪಿಎ ಅಡಿಯಲ್ಲಿ ಬಂಧನ ಮಾಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಮಾಧ್ಯಮದವರನ್ನ ಕುರಿತು ಮಾತ್ನಾಡಿದ ಅವರು, ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ಸಂಘ ಪರಿವಾರದ ವಿವಿಧ ಆಕ್ಟೋಪಸ್ ಇದ್ದ ಹಾಗೆ, ಇವರ ಕೈಯಲ್ಲಿ ಈ ಕೆಲಸ ಮಾಡಿಸುತ್ತಿದ್ದಾರೆ‌. ರಾಜ್ಯದಲ್ಲಿ ಶಾಂತಿ ಕದಡಲು ಯಾರು ಪ್ರಯತ್ನ ಮಾಡುತ್ತಿದ್ದಾರೋ ಅವರನ್ನು ಭಯೋತ್ಪಾದಕರು ಎಂದು ಯುಎಪಿಎ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದ್ರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಅವರು, ಸರ್ಕಾರದ ನಿರ್ಣಯ 1200 ಉಪನ್ಯಾಸಕರ ವರ್ಗಾವಣೆ ಅವೈಜ್ಞಾನಿಕವಾಗಿದೆ. ಸಚಿವರ ಗಮನಕ್ಕೆ ತರುವ ನಿಟ್ಟಿನಲ್ಲಿ ಪರಿಷತ್ ಸದಸ್ಯ ಮರಿತಿಬ್ಬೇಗೌಡರ ಧರಣಿಗೆ ಬೆಂಬಲ ನೀಡಿದ್ದೇವೆ. ಏಪ್ರಿಲ್ ಮೇ ತಿಂಗಳಲ್ಲಿ ಕಾಲೇಜು ಪರೀಕ್ಷೆ, ಮೌಲ್ಯಮಾಪನ ನಡೆಯುತ್ತಿದೆ ಈ ಸಂದರ್ಭದಲ್ಲಿ ಅವೈಜ್ಞಾನಿಕ ವರ್ಗಾವಣೆ ಸರಿಯಲ್ಲ
ಗರ್ಭಿಣಿ ಮಹಿಳೆಯರು, ಅಂಗವಿಕಲರು ಇರುತ್ತಾರೆ ಏಕಾಏಕಿ ವರ್ಗಾವಣೆ ಮಾಡಲಾಗಿದೆ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಸರ್ಕಾರದ ಕ್ರಮದ ವಿರುದ್ಧ ಹರಿಹಾಯ್ದರು.

ಸರ್ಕಾರ ಕಮಿಷನ್ ದಂಧೆ ನಡೆಯುತ್ತಿರುವುದು ಕುಖ್ಯಾತಿ ಆಗಿದೆ. ಶಿಕ್ಷಕರ ವರ್ಗಾವಣೆ ಕಮಿಷನ್ ದಂಧೆ ಊಹಾಪೋಹಗಳು ಇವೆ. ವರ್ಗಾವಣೆ ನೀತಿಯನ್ನು ಸರ್ಕಾರ ತರಬೇಕು. ಏಕಾಏಕಿ ವರ್ಗಾವಣೆ ಶಿಕ್ಷಣಕ್ಕೆ ಅಡ್ಡಿ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ತೊಂದರೆ ಆಗುತ್ತಿದೆ. ಮರಿತಿಬ್ಬೇಗೌಡರ ಧರಣಿ ಹಿನ್ನೆಲೆಯಲ್ಲಿ ಸಚಿವರು ಖುದ್ದಾಗಿ ಭೇಟಿ ನೀಡಿ ಮಾತನಾಡಬೇಕು. ಅಧಿಕಾರಿಗಳ ಮಾತು ಕೇಳಿಕೊಂಡು ವರ್ಗಾವಣೆ ಮಾಡಬಾರದು ಸಚಿವರು ತಕ್ಷಣವೇ ವರ್ಗಾವಣೆ ಪ್ರಕ್ರಿಯೆ ರದ್ದು ಮಾಡಬೇಕೆಂದು ಒತ್ತಾಯಿಸಿದ್ರು.

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಸದಸ್ಯರಾದ ವೆಂಕಟೇಶ್, ಗೋವಿಂದ ರಾಜು, ಮೋಹನ್ ಕೊಂಡಜ್ಜಿ ಭಾಗವಹಿಸಿದ್ರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೆ. ಬೇವಿನಹಳ್ಳಿ, ಸಾಲಕಟ್ಟೆ ಗ್ರಾಮದಲ್ಲಿ ರಕ್ತದಾನ ಶಿಬಿರ

Published

on

ಸುದ್ದಿದಿನ,ದಾವಣಗೆರೆ:ಕೆ. ಬೇವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 21 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದೇ ವೇಳೆ ಸಾಲಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರ ಇವರ ಸಂಯುಕ್ತ ಆಶ್ರಯದಲ್ಲಿ 11 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಶಿಬಿರದಲ್ಲಿ ಸತ್ಯನಾರಾಯಣ ಕ್ಯಾಂಪ್‌ನ ಡಾ. ರಾಮಾಂಜನೇಯ ಸ್ವಾಮಿ ಅವರು ಇದುವರೆಗೆ 110 ಬಾರಿ ರಕ್ತದಾನ ಮಾಡಿರುವುದು ವಿಶೇಷವಾಗಿದ್ದು, ಈ ಬಾರಿ ತಮ್ಮ ಮಗನೊಂದಿಗೆ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ ವಿರೂಪಾಕ್ಷಪ್ಪ ಬಿ.ಕೆ. (ವಿ.ಆರ್.ಡಬ್ಲ್ಯೂ) ಎಂಬ ವಿಶೇಷ ಚೇತನರು 5ನೇ ಬಾರಿ ರಕ್ತದಾನ ಮಾಡಿ ಗಮನಾರ್ಹರಾಗಿದ್ದಾರೆ.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ (ಟಿ.ಎಚ್.ಒ) ಉಮಣ್ಣ ಅವರು ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲವಾದುದರಿಂದ ರಕ್ತದಾನದ ಮಹತ್ವ ಅತ್ಯಂತ ಮಹತ್ತರವಾಗಿದೆ ಎಂದು ತಿಳಿಸಿದರು.

ವೈದ್ಯಾಧಿಕಾರಿಗಳಾದ ಡಾ. ರೇವತಿ ಎಚ್ ಬುಟ್ಟೆ ಅವರು ಮಾತನಾಡಿ, ಗ್ರಾಮದ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿರುವುದು ಸಂತೋಷದ ಸಂಗತಿ. ಅತಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದಾನವು ಅನೇಕ ರೋಗಿಗಳ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು. ದಾವಣಗೆರೆ ಕೇಂದ್ರ ರಕ್ತ ನಿಧಿಯ ಡಾ. ಗೀತಾ ಡಿ.ಎಚ್. ಹಾಗೂ ಸಿಬ್ಬಂದಿಗಳು ರಕ್ತವನ್ನು ಸಂಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕರಾದ ಉಮೇಶ್ ಎಂ.ಆರ್.ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರಾದ ವಿಶ್ವನಾಥ್ ಡಿ.ಆರ್. (ಉಪನ್ಯಾಸಕರು), ವಿಶ್ವನಾಥ್ ಎ.ಎಸ್., ಬನ್ನಿಕೋಡು ಸುರೇಶ್, ರೇವಣಸಿದ್ದಪ್ಪ, ಕೆ.ಜಿ. ಸಂತೋಷ್, ಜಿ.ಎಂ. ಮುರುಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೆ. ಬೇವಿನಹಳ್ಳಿ ಮತ್ತು ಸಾಲಕಟ್ಟೆ ಗ್ರಾಮಸ್ಥರ ಸಹಕಾರದಿಂದ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಾಂಗ್ರೆಸ್ ನ ಹಿರಿಯ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ನಿಧನ

Published

on

ಸುದ್ದಿದಿನ,ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮುಸ್ಲಿಂ ಸಮಾಜದ ನಾಯಕರಾಗಿದ್ದ ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸೈಫುಲ್ಲಾ ಸಾಬ್ (79ವರ್ಷ) ಅವರು ಇಂದು ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರು . ಮೃತರ ನಿಧನಕ್ಕೆ ಮುಸ್ಲಿಂ ಸಮುದಾಯದ ಮುಖಂಡರು, ವಿವಿಧ ಪಕ್ಷಗಳ ನಾಯಕರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಕರೆಕಟ್ಟೆಜನಾಬ್ ಸೈಯದ್ ಸೈಫುಲ್ಲ ಸಾಬ್ಮಿ ಲ್ಲತ್ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರೂ ಆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಸೈಯದ್ ಸೈಫುಲ್ಲಾ ಸಾಬ್ ಅವರು ಸಿಎಂ ಸಿದ್ದರಾಮಯ್ಯ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರ ಆಪ್ತರಾಗಿದ್ದರು.

ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರನ್ನು ಸೇರಿದಂತೆ ಕುಟುಂಬಸ್ಥರು, ಅಪಾರ ಬಂಧುಬಳಗದವರನ್ನು ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸಾಬ್ ಅವರು ಅಗಲಿದ್ದಾರೆ.

2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿ ಈ ಪಕ್ಷದಿಂದ ಸ್ಪರ್ಧಿಸಿ 26 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪರ ವಿರುದ್ಧ ಸೋತರೂ ಎರಡನೇ ಸ್ಥಾನ ಪಡೆದಿದ್ದರು. ಆಗ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, ಸಿದ್ದರಾಮಯ್ಯರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರು ಸ್ನಾತಕೋತ್ತರ ವೃತ್ತಿಪರ ಬಿಎಸ್ಸಿ ಅನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದರು. ದಾವಣಗೆರೆಯ ಡಿಆರ್ ಎಂ ಕಾಲೇಜಿನಲ್ಲಿ ಬಿ. ಎಡ್ ವ್ಯಾಸಂಗ ಮಾಡಿದ್ದರು. ಎಂ. ಎಂ. ಬಸಪ್ಪ ಶಿಕ್ಷಣ ಸಂಘದ ಕಾಲೇಜಿನಲ್ಲಿ ಪದವಿ ಪೂರೈಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕೆರೆಗಳ ಸಂರಕ್ಷಣೆ; ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಗಂಗಾಧರಸ್ವಾಮಿ ಜಿ.ಎಂ

Published

on

ಸುದ್ದಿದಿನ,ದಾವಣಗೆರೆ:ಈ ವರ್ಷ ಬರಗಾಲದ ಲಕ್ಷಣಗಳಿರುವುದರಿಂದ ಜಲಚರಗಳ ರಕ್ಷಣೆ ಹಾಗೂ ಕುಡಿಯುವ ನೀರಿನ ಲಭ್ಯತೆಗೆ ಮೊದಲ ಆದ್ಯತೆ ನೀಡಬೇಕು. ಜಿಲ್ಲೆಯ ಕೆರೆಗಳಲ್ಲಿರುವ ನೀರಿನ ಪ್ರಮಾಣದ ಬಗ್ಗೆ ನಿಖರವಾದ ಅಧ್ಯಯನ ನಡೆಸಿ ವರದಿ ನೀಡುವಂತೆ , ಜಿಲ್ಲೆಯ ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರುಗಳಿಗೆ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.

ಅವರು (ಏ.15) ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು ಹಾಗೂ ಮುಂಬರುವ ಬೇಸಿಗೆಯ ಕುಡಿಯುವ ನೀರಿನ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಒಟ್ಟು 533 ಕೆರೆಗಳ ಪೈಕಿ ಇನ್ನೂ 20 ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಚನ್ನಗಿರಿ ತಾಲ್ಲೂಕಿನ 5 ಕೆರೆಗಳಾದ ಹರೇಗಂಗೂರು, ಸಾಗರಪೇಟೆ, ದಾಗಿನಕಟ್ಟೆ, ತ್ಯಾವಣಿಗ ಮತ್ತು ಸೂಳೆಕೆರೆ; ಹರಿಹರ ತಾಲ್ಲೂಕಿನ 7 ಕೆರೆಗಳಾದ ಹಿಂಡಸಗಟ್ಟ, ಜಿಗಳಿ, ಹಾಲಿವಾಣ, ಕಮಲಾಪುರ, ಗುಡ್ಡದತುಮ್ಮಿನಕಟ್ಟೆ, ಕುಂಬಳೂರು, ಯಲವಟ್ಟಿ; ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹದಡಿ, ಮಾಳಗೊಂಡನಹಳ್ಳಿಯ 3 ಕೆರೆಗಳು ಹಾಗೂ ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ, ಬನ್ನಿಕೊಡು, ಕುಂಬಳೂರು, ಸಾಸ್ವೆಹಳ್ಳಿ ಮತ್ತು ಬಲಮುರಿ ಕೆರೆಗಳನ್ನು ಶೀಘ್ರವಾಗಿ ಗುರುತಿಸಿ ತೆರವುಗೊಳಿಸಲು ಕ್ರಮವಹಿಸಬೇಕು. ತೆರವು ಕಾರ್ಯಾಚರಣೆಯನ್ನು ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣದೊಂದಿಗೆ ಪಾರದರ್ಶಕವಾಗಿ ನಡೆಸಿ ಗ್ರಾಮ ಪಂಚಾಯತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಬೇಕು ಎಂದು ತಿಳಿಸಿದರು.

ಚನ್ನಗಿರಿ ಹಾಗೂ ದಾವಣಗೆರೆ ತಾಲ್ಲೂಕಿನ ಹಲವು ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವ ಕೆರೆಗಳ ನೀರಿನ ಮಾದರಿಯನ್ನು ಪ್ರತಿ ತಿಂಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ಸಲ್ಲಿಸಬೇಕು. ಯೋಗ್ಯವಾಗಿದ್ದರೆ ಮಾತ್ರ ಕುಡಿಯಲು ಬಳಸಬೇಕು ಎಂದರು.

ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೇವಲ ರೈತರಿಗೆ ಮಾತ್ರ ಸೀಮಿತಗೊಳಿಸಬೇಕು. ಅಕ್ರಮ ಮಣ್ಣು ಸಾಗಾಟಕ್ಕೆ ಆಸ್ಪದ ನೀಡದಂತೆ ಭೂ-ವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಹಾಗೂ ಮಣ್ಣಿನ ಮೂಲ ಪದರ ಹಾನಿಯಾಗದಂತೆ ಕ್ರಮವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಗಳನ್ನು ಒತ್ತುವರಿಯಿಂದ ಶಾಶ್ವತವಾಗಿ ಮುಕ್ತಗೊಳಿಸಲು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕೆರೆಗಳ ಬಫರ್ ವಲಯದಲ್ಲಿ ಸಸಿಗಳನ್ನು ನೆಟ್ಟು ಜೈವಿಕ ಬೇಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಂಬರುವ ಮಳೆಗಾಲದ ವೇಳೆಗೆ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಕೆರೆಗಳ ನೀರಿನ ಸಂಗ್ರಹಣಾ ಮಟ್ಟದ ಕುರಿತು ವಿವರ (ಮಾರ್ಚ್ 31 ಅಂತ್ಯಕ್ಕೆ)

ಪೂರ್ಣ ತುಂಬಿದ ಕೆರೆಗಳು: ಜಿಲ್ಲೆಯ ಒಟ್ಟು 08 ಕೆರೆಗಳು ಶೇ. 100 ರಷ್ಟು ಭರ್ತಿಯಾಗಿವೆ.

ಶೇ. 51 ರಿಂದ ಶೇ. 99 ರಷ್ಟು: ಒಟ್ಟು 47 ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ.

ಶೇ. 31 ರಿಂದ ಶೇ. 50 ರಷ್ಟು: ಸುಮಾರು 164 ಕೆರೆಗಳು ಅರ್ಧದಷ್ಟು ನೀರಿನ ಮಟ್ಟವನ್ನು ಹೊಂದಿವೆ.

ಶೇ. 1 ರಿಂದ ಶೇ. 30 ರಷ್ಟು: ಜಿಲ್ಲೆಯ ಗರಿಷ್ಠ ಅಂದರೆ 250 ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.

ಶೂನ್ಯ ಮಟ್ಟ (ತುಂಬಿರದ ಕೆರೆಗಳು): ಪ್ರಸ್ತುತ ಜಿಲ್ಲೆಯ 64 ಕೆರೆಗಳಲ್ಲಿ ನೀರಿನ ಸಂಗ್ರಹವಿಲ್ಲದೆ ಖಾಲಿಯಾಗಿವೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣನವರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರುಗಳು, ಬೃಹತ್‌ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು , ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending