ದಿನದ ಸುದ್ದಿ
ಸುದ್ದಿದಿನ | ಬೆಳಗಿನ ಪ್ರಮುಖ ಸುದ್ದಿಗಳು
ಸುದ್ದಿದಿನ | ಬೆಳಗಿನ ಪ್ರಮುಖ ಸುದ್ದಿಗಳು
- 2021-2022ನೇ ಶೈಕ್ಷಣಿಕ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಮಧ್ಯಾಹ್ನ 12.30 ಕ್ಕೆ www.karresults.nic.in ಜಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.
ಭದ್ರಾ ಜಲಾಶಯದಿಂದ ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕುಗಳಲ್ಲಿನ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, 2 ಮತ್ತು 3ನೇ ಹಂತದ ಕಾಮಗಾರಿಗೆ ಈ ವರ್ಷವೇ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಜೂನ್ 15ರೊಳಗೆ ನೂತನ ಯುವ ನೀತಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಯುವನೀತಿ-2022ರ ಕರಡನ್ನು ಬಿಡುಗಡೆ ಮಾಡಿದ ಸಚಿವರು, ಯುವ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ನೀತಿ ಕರಡು ರೂಪಿಸಲಾಗಿದೆ ಎಂದರು.
ಪ್ರಸಕ್ತ ವರ್ಷ 14 ಲಕ್ಷದ 10ಸಾವಿರ ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. ದೆಹಲಿಯಲ್ಲಿಂದು ಅಸೋಚಾಮ್ ಒಕ್ಕೂಟ ಆಯೋಜಿಸಿದ್ದ ಮೂಲದಲ್ಲಿ ತೆರಿಗೆ ಕಡಿತ – ಟಿಡಿಎಸ್ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೇಂದ್ರೀಯ ನೇರ ತೆರಿಗೆ ಮಂಡಳಿ – ಸಿಬಿಡಿಟಿ ಜಂಟಿ ಕಾರ್ಯದರ್ಶಿ ಕಮಲೇಶ್ ಸಿ. ವರ್ಷ್ಣೆ, ತೆರಿಗೆ ಪಾವತಿ ಮಾಡುವ ಮೂಲಕ ನಾಗರಿಕರು ದೇಶದ ಅಭಿವೃದ್ಧಿ ಪಥದಲ್ಲಿ ಪಾಲುದಾರರಾಗಿದ್ದಾರೆ ಎಂದರು.
ದೇಸಿನಿರ್ಮಿತ ಪ್ರಥಮ ನೌಕಾ ನಿರೋಧಕ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಬಾಲಸೋರ್ನಲ್ಲಿ ಭಾರತೀಯ ನೌಕಾಪಡೆ ನಿನ್ನೆ ಯಶಸ್ವಿಯಾಗಿ ನಡೆಸಿದೆ. ಸಾಗರ ಕ್ಷಿಪಣಿ ತಂತ್ರಜ್ಞಾನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಇದು ದೇಸಿನಿರ್ಮಿತ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತೀಯ ನೌಕಾಪಡೆಯ ಬದ್ಧತೆಯ ಪ್ರತೀಕವಾಗಿದೆ ಎಂದು ನೌಕಾಪಡೆ ಟ್ವೀಟ್ ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ – ಡಿಆರ್ಡಿಒ ಸಹಯೋಗದೊಂದಿಗೆ ಈ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ.
- ವಿಶ್ವ ಆರ್ಥಿಕ ವೇದಿಕೆ ಪ್ರಾಥಮಿಕ ಹಂತದ ಸಭೆಯಲ್ಲಿಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ವರ್ಚುವಲ್ ಮಾದರಿಯಲ್ಲಿ ಭಾಗವಹಿಸಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ನಿಗದಿಯಾಗಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
- ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಂಪೆ, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡಲಾಗುವುದು. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತ ಪೀಠದಲ್ಲಿ ರೂಪ್ವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
- ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನೋತ್ಸವವನ್ನು ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಇಂದು ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಾಸಕ ಎನ್.ಮಹೇಶ್, ಸಾಹಿತಿ ಬರಗೂರು ರಾಮಚಂದ್ರಪ್ಪ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
- ಉತ್ತರಾಖಂಡದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ತಾಣಗಳನ್ನು ಒಳಗೊಂಡ ಚಾರ್ಧಾಮ್ ಯಾತ್ರೆ ಮೇ ೩ರಿಂದ ಆರಂಭಗೊಂಡಿದ್ದು, ಇದುವರೆಗೆ 5 ಲಕ್ಷ 72 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಾಲ್ಗೊಂಡಿದ್ದಾರೆ. ಯಾತ್ರಾರ್ಥಿಗಳ ಅನುಕೂಲ ಮತ್ತು ಸುರಕ್ಷತೆಗಾಗಿ ಯಾತ್ರೆ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಯಾತ್ರಾರ್ಥಿಗಳು ವೈದ್ಯರಲ್ಲಿ ದೈಹಿಕ ತಪಾಸಣೆ ನಡೆಸಿದ ನಂತರವಷ್ಟೇ ಯಾತ್ರೆ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸಲಹೆ ನೀಡಿದೆ.
- ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳಲಿದ್ದು, 200 ದಶಲಕ್ಷಕ್ಕೆ ಏರಿಕೆಯಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ದೇಶದಲ್ಲಿ ಕಳೆದ 8 ವರ್ಷಗಳಲ್ಲಿ 67 ನೂತನ ವಿಮಾನ ನಿಲ್ದಾಣಗಳು, ವಾಟರ್ ಡ್ರೋಮ್ ಮತ್ತು ಹೆಲಿಪೋರ್ಟ್ಗಳನ್ನು ನಿರ್ಮಿಸಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆಯನ್ನು 200ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
- ಮುಂಗಾರು ಋತುವಿನಲ್ಲಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೂಡಲೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಸೂಚಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸಲಹೆ ನೀಡಿದೆ. ಈ ಕುರಿತಂತೆ ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳಿಗೆ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಪ್ರತ್ಯೇಕ ಪತ್ರ ಬರೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ ವಿಶೇಷಾಂಕ; ಗೋವರ್ಧನರ ಆಸಕ್ತಿ ಹಾಗು ಅಕ್ಷರ ಪ್ರೀತಿಯ ಪ್ರತಿಬಿಂಬ
ಸುದ್ದಿದಿನ ಪತ್ರಿಕೆ ಗೋವರ್ಧನರಿಗೆ ಪ್ರೀತಿಯ ಮಗು. ಅದಕ್ಕೀಗ ಐದು ವರ್ಷ. ಅನ್ನುವ ಭಾವದಲ್ಲಿ ನನಗೆ ಅನ್ನಿಸಿದ್ದನ್ನು ಹೇಳಬೇಕಾದ ಒಂದು ವಾಕ್ಯ; “ಹೆತ್ತಪ್ಪನ ಖುಶಿ, ಪತ್ರಿಕೆಯ ವಿಶೇಷಾಂಕದ ತುಂಬ ಬೆಳಕಿನ ಬೀಜ ಬಿತ್ತಿದೆ.”
ಅಕ್ಷರ ಕೃಷಿ ಕೂಡ ಸುಲಭದ್ದಲ್ಲ. ಅದರಲ್ಲಿಯೂ “ಬೆಳೆಯಬೇಕು” ಮತ್ತು “ಬೆಳೆಸಬೇಕು” ಅನ್ನುವ ಹೃದಯವಂತಿಕೆ ಕಾಣಸಿಗುವುದು ಅಪರೂಪ. ಜಿಲ್ಲಾ ಮಟ್ಟದ ಪತ್ರಿಕೆ ರಾಜ್ಯ ಸ್ತರೀಯ ದೀಪಾವಳಿ ವಿಶೇಷಾಂಕ ಪ್ರಕಟಿಸುವ ಮತ್ತು ಕಥೆ-ಕವಿತೆಗಳಿಗೆ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಿ ನಿರ್ವಹಿಸಿದ್ದು ಕೂಡ ಅಷ್ಟೇ ಅಪರೂಪ.
ಪತ್ರಿಕೋದ್ಯಮವೆಂದರೆ, ಮೈಮೇಲೆ ಚೇಳುಗಳನ್ನು ಬಿಟ್ಟುಕೊಳ್ಳುವ ವ್ಯಸನ! ಆಗಾಗ ಕುಟುಕುವ ನಂಜುಣ್ಣುತ್ತಲೆ ವಿಷಕಂಠನಂತೆ ಸ್ಥಿತಪ್ರಜ್ಞನಾಗಿ ದುಡಿಯುವ ಸಂಪಾದಕನ ಹೊಣೆ ಸಣ್ಣದಲ್ಲ! ಬೆರಳ ತುದಿಯಿಂದ ಜಗವ ತೆರೆಯುವ ಈ ಕಾಲದಲ್ಲಿ ದಿನ ಪತ್ರಿಕೆ ನಡೆಸುವುದು ತುಂಬ ಸಾಹಸದ ಕೆಲಸ. ಅದನ್ನು ತಪವೆಂದುಕೊಂಡರೂ ಪರಿತಾಪ ತಪ್ಪಿದ್ದಲ್ಲ! ಹೀಗಿರುವಾಗ, ಜಿಲ್ಲಾ ಪತ್ರಿಕೆಯೊಂದು ತನ್ನ ಐದನೇ ವರ್ಷದಲ್ಲಿ ಇಂಥದೊಂದು ಜಿಗಿತ ಪ್ರದರ್ಶಿಸುತ್ತಿರುವುದು ಅಸಾಮಾನ್ಯ ಸಂಗತಿ! ಸಂಪಾದಕರ ಎದೆಗಾರಿಕೆಗೆ ಮೆಚ್ಚಲೇ ಬೇಕು!
ಉತ್ತರಕನ್ನಡ ಜಿಲ್ಲೆಯಲ್ಲಿ “ಸುದ್ದಿದಿನ” ಸುದ್ದಿಮಾಡಿದ್ದು ಪ್ರಾಯಶಹ ಈ ಕಥಾ ಸ್ಪರ್ಧೆಯಿಂದಲೇ. ರಾಜ್ಯ ಮಟ್ಟದಲ್ಲಿ ಕೂಡ ಪತ್ರಿಕೆಯ ಹೆಸರು ಪ್ರಚಲಿತವಾಗಿದೆ ಅನ್ನುವುದು ನನ್ನ ಭಾವನೆ. ಕಥಾ ಸ್ಪರ್ಧೆಗೆ ಕಥೆ ಕಳುಹಿಸಿದ್ದ ನನಗೆ ನಾಲ್ಕನೆಯ ಬಹುಮಾನ ಬಂತು. ಅದು ನನಗೂ ಸಮಾಧಾನಕರವೆನ್ನಿಸಿದ್ದು, ತೀರ್ಪುಗಾರರ ಮೊದಲ ಮೂರು ಕಥೆಗಳನ್ನು ಓದಿದಾಗ! ಬಹುಶಹ ಕವಿತೆಗಳನ್ನು ಕಳುಹಿದವರ ಅನುಭವವೂ ಹೀಗೆಯೇ ಇರಬೇಕು. ಆಯ್ಕೆಯಾದ ಕವಿತೆಗಳಲ್ಲಿ ಹೊಸತನವಿದೆ, ಚಿಂತನೆ ಇದೆ. ಇಲ್ಲಿ ಸ್ಪರ್ಧೆ ಯುದ್ಧವಾಗಿಲ್ಲ ಅನ್ನುವುದು ಸ್ಪಷ್ಟ! ಈ ನೆಲೆಯಲ್ಲಿ ತೀರ್ಪುಗಾರರೂ ಕೂಡ ಅಭಿನಂದನಾರ್ಹರು. ಅನೇಕ ಸಂದರ್ಭಗಳಲ್ಲಿ ಇದಕ್ಕೆ ವ್ಯತಿರಿಕ್ತ ಅನುಭವವಾಗುವುದಿದೆ. ತತ್ವ ಮತ್ತು ಸತ್ವಾಧಾರಿತ ನಿಲುಮೆಯ ಸಂಪಾದಕರಿದ್ದರೆ ಮಾತ್ರವೇ ಸ್ಪರ್ಧೆಗಳು ನ್ಯಾಯಯುತವಾಗಿರುತ್ತವೆ. ಇಲ್ಲಿ ಅಂತಹ ಸುಹೃದ ಅನುಭವ ನನಗಂತೂ ಆಗಿದೆ.
ವಿಶೇಷಾಂಕ ಕೈಸೇರಿದ ದಿನದಿಂದ ಮೂರ್ನಾಲ್ಕು ದಿನ ಅದರಲ್ಲಿಯೇ ಮುಳುಗಿದ್ದೆ. ಅಷ್ಟರ ಮಟ್ಟಿಗೆ ಅದು ನನ್ನನ್ನು ಹಿಡಿದಿಟ್ಟುಕೊಂಡಿತು. ವರ್ತಮಾನದ ಓದುಗ ವಲಯ ಇಷ್ಟಪಡುವಂತಹ ಸಂಗತಿಗಳನ್ನೇ ಪಾಕಗೊಳಿಸಿ ಬಡಿಸಿದ ಮೃಷ್ಟಾನ್ನದಂತೆ ಲೇಖನಗಳು, ಸಂದರ್ಶನಗಳು, ವ್ಯಕ್ತಿ ಪರಿಚಯಗಳು, ವೈಚಾರಿಕ ಪ್ರಬಂಧಗಳು ನಡುನಡುವೆ ಕವಿತೆಗಳು ಎಲ್ಲವೂ ಮುದನೀಡುವಂತಿದ್ದರೆ ಇಡೀ ವಿಶೇಷಾಂಕದ ಮುನ್ನುಡಿಯಂತಿರುವ ಸಂಪಾದಕೀಯ ಒಂದಂಗುಲ ಮೇಲೆನ್ನಿಸಿ ಆಪ್ತವೆನ್ನಿಸಿತು.
ಗೋವರ್ಧನ ಗಿರಿಯವರ ಆಸಕ್ತಿ ಮತ್ತು ಧೋರಣೆಯಲ್ಲಿ ಸ್ಪಷ್ಟತೆಯಿದೆ. ಅವುಗಳ ನಿರ್ವಹಣೆ ಉತ್ತುಂಗವಾಗಿದೆ. ಸಂಪಾದಕರ ಅಂತರಂಗವನ್ನು ಬಹಿರಂಗಗೊಳಿಸಿದ ಭಾವಕ್ಕೆ ತಲೆ ತೂಗಿದೆ. ಅವರ ಕ್ಷಮತೆ, ಹೊತ್ತ ಹೊಣೆಗಾರಿಕೆ, ಸಂಚಿಕೆಯ ಪ್ರತಿ ಪುಟಗಳಲ್ಲಿ ಪ್ರತಿ ಅಕ್ಷರಗಳಲ್ಲಿಯೂ ಕಾಣಿಸಿದೆ. ಪತ್ರಿಕೋದ್ಯಮದೆಡೆ ಅವರಿಗೆ ಗಂಭೀರತೆ ಇದೆ. “ದೇವನಗರಿ ಸುದ್ದಿದಿನ” ಪತ್ರಿಕೆ, ಸಮಾಜದೆದುರಿನ ಕನ್ನಡಿಯಾಗಬೇಕು ಅನ್ನುವ ಅವರ ಹಂಬಲದಲ್ಲಿ ಪ್ರಾಮಾಣಿಕತೆಯಿದೆ. ಆ ನೆಲೆಯಲ್ಲಿಯೇ ವಿಶೇಷಾಂಕದ ಒಂದೊಂದೂ ಪುಟವನ್ನೂ ಅವರು ಅಳೆದು ತೂಗಿ ಕಾಳಜಿಯಿಂದ ಓದುಗರಿಗೊಪ್ಪಿಸಿದ್ದಾರೆ. ಅವರವರ ಆಸಕ್ತಿಗಳಿಗೆ ಒಂದಿಲ್ಲೊಂದು ಓದಿನ ಸಖ್ಯವನ್ನು ಹೊತ್ತಿಗೆ ಒದಗಿಸಿದೆ.
ಇನ್ನು, ಕಿರೀಟದೊಳಗಿನ ಮುತ್ತುಗಳಂತೆ ಪ್ರಕಾಶಿಸುವ ಚಿತ್ರಗಳು ಸಂಚಿಕೆಗೆ ಇನ್ನಷ್ಟು ಮೆರಗು ನೀಡಿವೆ. ಮುಖಪುಟದ ರೂಪದರ್ಶಿಯ ಸಹಜ ಸೌಂದರ್ಯ ಕಣ್ಣೆಳೆಯುವಂತೆ, ವಿಶೇಷಾಂಕ ಇಡೀಯಾಗಿ ಮನಸ್ಸನ್ನು ಮುಟ್ಟಿದೆ ಅನ್ನುವಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಗೋವರ್ಧನರ ಶ್ರಮ ಮತ್ತು ಸಮಯ ಇಲ್ಲಿ ಸಾರ್ಥಕವಾಗಿದೆ.
ಅಭಿನಂದನೆಗಳು ಗೋವರ್ಧನ ಗಿರಿ ಹಾಗೂ ಅವರ ತಂಡಕ್ಕೆ.
–ಟಿ.ಆರ್. ಪ್ರಕಾಶ ಭಾಗವತ, ಶಿರಸಿ. 9902720407, 7019360579

ಅಂತರಂಗ
ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೇವನಗರಿ ಸುದ್ದಿದಿನ ಕನ್ನಡ ದಿನಪತ್ರಿಕೆ, ಏಕಾಂತಗಿರಿ ಟ್ರಸ್ಟ್, ದಾವಣಗೆರೆ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ‘ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿ–2026’ ಘೋಷಿಸಲಾಗಿದ್ದು, ಅರ್ಹ ಬರಹಗಾರರಿಂದ ಕಾದಂಬರಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ, ಸೃಜನಶೀಲತೆ ಹಾಗೂ ವಿಭಿನ್ನ ಕಥನ ಸಾಧ್ಯತೆಗಳನ್ನು ಹೊಂದಿರುವ ಕಾದಂಬರಿಕಾರರನ್ನು ಪರಿಚಯಿಸುವ ಆಶಯದೊಂದಿಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದುವರೆಗೆ ಯಾವುದೇ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದ ಬರಹಗಾರರಿಗೆ ತಮ್ಮ ಸೃಜನಶೀಲತೆಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲು ಇದು ಉತ್ತಮ ವೇದಿಕೆಯಾಗಲಿದೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿರುವ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗೆ ಸಲ್ಲಿಸುವ ಕಾದಂಬರಿಯು ಸಂಪೂರ್ಣ ಸ್ವತಂತ್ರ ಹಾಗೂ ಲೇಖಕರ ಸ್ವಂತ ರಚನೆಯಾಗಿರಬೇಕು. ಕಾದಂಬರಿಯ ಯಾವುದೇ ಭಾಗವು ಈ ಮೊದಲು ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು ಅಥವಾ ಪ್ರಸಾರವಾಗಿರಬಾರದು. ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಕಾದಂಬರಿಗಳನ್ನು ಪರಿಗಣಿಸಲಾಗುವುದಿಲ್ಲ. ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ.
ಹಸ್ತಪ್ರತಿಯನ್ನು A4 ಅಳತೆಯ ಹಾಳೆಯಲ್ಲಿ ನುಡಿ ಅಥವಾ ಯುನಿಕೋಡ್ ಕನ್ನಡ ಫಾಂಟ್ ಬಳಸಿ, 12 ಪಾಯಿಂಟ್ ಅಕ್ಷರ ಗಾತ್ರದಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿರಬೇಕು. ಕಾದಂಬರಿಯು ಕನಿಷ್ಠ 120 ಪುಟಗಳಿಗಿಂತ ಕಡಿಮೆ ಇರಬಾರದು. ಹಸ್ತಪ್ರತಿಯ ಮೊದಲ ಪುಟದಲ್ಲಿ ಕಾದಂಬರಿಯ ಶೀರ್ಷಿಕೆಯನ್ನು ಮಾತ್ರ ನಮೂದಿಸಬೇಕು. ಲೇಖಕರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಹಾಗೂ ಕಾದಂಬರಿಯ ಸಂಕ್ಷಿಪ್ತ ಪರಿಚಯವನ್ನು ಪ್ರತ್ಯೇಕ ಲಕೋಟೆಯಲ್ಲಿ ಕಳುಹಿಸಬೇಕು. ಕೃತಿಯು ಸ್ವತಂತ್ರ ರಚನೆಯಾಗಿದ್ದು, ಈ ಮೊದಲು ಪ್ರಕಟವಾಗಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರವನ್ನೂ ಲಗತ್ತಿಸುವುದು ಕಡ್ಡಾಯವಾಗಿದೆ.
ಕೃತಿಗಳ ಆಯ್ಕೆಯಲ್ಲಿ ಸಾಹಿತ್ಯಕ ಗುಣಮಟ್ಟ, ಭಾಷಾ ಸೊಗಸು, ಕಥನ ತಂತ್ರ, ಸೃಜನಶೀಲತೆ, ವೈಚಾರಿಕತೆ ಹಾಗೂ ಸಾಮಾಜಿಕ ಪ್ರಸ್ತುತತೆಗೆ ಆದ್ಯತೆ ನೀಡಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಸಲ್ಲಿಸಿದ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆಯಾಗುವ ಕಾದಂಬರಿಗೆ ₹10,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಆಸಕ್ತರು ತಮ್ಮ ಹಸ್ತಪ್ರತಿಗಳನ್ನು ಡಿಸೆಂಬರ್ 30, 2026ರೊಳಗೆ ಕಳುಹಿಸಬೇಕು.
ಹಸ್ತಪ್ರತಿಗಳನ್ನು ‘ಸಂಪಾದಕರು, ದೇವನಗರಿ ಸುದ್ದಿದಿನ–ಕನ್ನಡ ದಿನಪತ್ರಿಕೆ, #3231/01, ಸಂಜೀವ ಸದನ, 11ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್, ದಾವಣಗೆರೆ–577004’ ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9980346243 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಅಂತರಂಗ
ಸಂತೆಬೆನ್ನೂರು ಫೈಜ್ನಟ್ರಾಜ್ ಗೆ ಮುದ್ದಣ ಕಾವ್ಯ ಪ್ರಶಸ್ತಿ
ಸುದ್ದಿದಿನ,ದಾವಣಗೆರೆ:ಮೂಡುಬಿದರೆಯ ಕಾಂತಾವರ ಕನ್ನಡ ಸಂಘ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ವತಿಯಿಂದ ಪ್ರತಿವರ್ಷ’ ಮುದ್ದಣ ಕಾವ್ಯ ಪ್ರಶಸ್ತಿ ಗಾಗಿ’ ಏರ್ಪಡಿಸುವ ಕವನ ಸಂಕಲನಗಳ ಹಸ್ತಪ್ರತಿ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ” ಅಂಗುಲಿಮಾಲನ ಎದುರು ಕೂತ ಬುದ್ಧ ನೀನಲ್ಲ” ಎಂಬ ಹಸ್ತಪ್ರತಿಗೆ 2026 ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ನಾ. ಮೊಗಸಾಲೆ ಘೋಷಣೆ ಮಾಡಿದ್ದಾರೆ.
ನಾಡಿನ ಪ್ರತಿಷ್ಠಿತ ಕವಿ ಉಡುಪಿಯ ನಂದಳಿಕೆ ಲಕ್ಷ್ಮೀ ನಾರಾಯಣ ಅಥವಾ ನಂದಳಿಕೆಯ ಮುದ್ದಣ ಹೆಸರಿನಲ್ಲಿ ಕೊಡಲ್ಪಡುವ ಈ ಪ್ರಶಸ್ತಿ ಗೆ 1979 ರಿಂದಲೂ ಈ ಸ್ಪರ್ಧೆ ನಡೆಯುತ್ತಾ ಬಂದಿದೆ.
ಇದುವರೆಗೂ ಕರ್ನಾಟಕದ ಗಮನಾರ್ಹ ಕವಿಗಳು ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ನಾಡಿನಾದ್ಯಂತ ಕಥೆ, ಕವಿತೆ, ಪ್ರಬಂಧಗಳ ಮೂಲಕ ಮನೆಮಾತಾಗಿರುವ ಮತ್ತು ಹದಿನೈದು ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಫೈಜ್ನಟ್ರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಅಲ್ಲದೇ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಘ ( ಶಿವಮೊಗ್ಗ) ನೀಡುವ ಪಿ.ಲಂಕೇಶ್ ಪ್ರಶಸ್ತಿ, ಕಸಾಪದಿಂದ ಸಿಸು ಸಂಗಮೇಶ ಪ್ರಶಸ್ತಿ,, ರಾಜ್ಯಮಟ್ಟದ ಅನೇಕ ಕಥಾ ಪ್ರಶಸ್ತಿ, ವಿಭಾ ಕಾವ್ಯ ಪುರಸ್ಕಾರ ಇನ್ನೂ ಮುಂತಾದ ಪ್ರಶಸ್ತಿ ಪಡೆದಿದ್ದಾರೆ.
ವಿ.ವಿಗಳಲ್ಲೂ ಇವರ ಕತೆ, ಕವಿತೆ ಪಠ್ಯ ಆಗಿವೆ.
ಪ್ರಸ್ತುತ ಪ್ರಶಸ್ತಿಯೂ ಹತ್ತು ಸಾವಿರ ನಗದು,ತಾಮ್ರಪತ್ರ ಮತ್ತು ಸನ್ಮಾನ ಒಳಗೊಂಡಿದ್ದು 2027 ಮಾರ್ಚ್ ನಲ್ಲಿ ನಡೆಯುತ್ತದೆ.ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ಸಮಾರಂಭ ನೆರವೇರುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸದಾನಂದ ನಾರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




