ದಿನದ ಸುದ್ದಿ
75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಪಕ್ಷಾತೀತ ‘ಸ್ವಾತಂತ್ರ್ಯ ನಡಿಗೆ’ : ಡಿ.ಕೆ. ಶಿವಕುಮಾರ್
ಸುದ್ದಿದಿನ,ಬೆಂಗಳೂರು: ದೇಶದ 75ನೇ ಸ್ವಾತಂತ್ರ್ಯದಿನಾಚಾರಣೆ ಅಂಗವಾಗಿ ಆಗಸ್ಟ್ 15ರಂದು ಮಧ್ಯಾಹ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿವರೆಗೂ ರಾಷ್ಟ್ರಧ್ವಜ ಹಿಡಿದು ‘ಫ್ರೀಡಂ ಮಾರ್ಚ್’ (ಸ್ವಾತಂತ್ರ್ಯ ನಡಿಗೆ) ಎಂಬ ಪಕ್ಷಾತೀತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಸುಮಾರು 75 ಸಾವಿರದಿಂದ 1 ಲಕ್ಷದವರೆಗೂ ಜನ ಸೇರಲಿದ್ದಾರೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಜನರು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದು, ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದರು.
ಇದೊಂದು ಪಕ್ಷಾತೀತ ಕಾರ್ಯಾಕ್ರಮವಾಗಿದ್ದು, ಇದರಲ್ಲಿ ಎಲ್ಲ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಕ್ರೀಡಾಪಟುಗಳು, ಕಲಾವಿದರು ಸೇರಿದಂತೆ ಎಲ್ಲರೂ ಭಾಗವಹಿಸಬಹುದು ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ರಾಜ್ಯದಲ್ಲಿ ಪಾದಯಾತ್ರೆ ಮೂಲಕ ಆಚರಿಸಲು ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ಈ ನಡಿಗೆಯನ್ನು ಒಂದು ಜಿಲ್ಲೆಯ ಎಷ್ಟು ತಾಲೂಕುಗಳಲ್ಲಿ ಮಾಡಬೇಕು ಎಂಬುದನ್ನು ಆಯಾ ಜಿಲ್ಲಾ ಕಾಂಗ್ರೆಸ್ ನಾಯಕರ ಇಚ್ಛೆಗೆ ಬಿಟ್ಟಿದ್ದೇವೆ ಎಂದರು.
ಆ.1 ರಿಂದ ಆ.10 ರವರೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಬೇಕಾದರೂ ಈ ಪಾದಯಾತ್ರೆ ಮಾಡಬಹುದು. ಕೆಲವು ನಾಯಕರು ತಮ್ಮ ಕ್ಷೇತ್ರಗಳಲ್ಲೇ 75 ಕಿ.ಮೀ ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದು, ಅದಕ್ಕೂ ಅನುಮತಿ ನೀಡಿದ್ದೇವೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ, ಈ ದೇಶಕ್ಕೆ ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಯನ್ನು ಕೊಡುಗೆಯಾಗಿ ನೀಡಿದ್ದು ಕಾಂಗ್ರೆಸ್. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಇದ್ದರೆ ಅವರನ್ನು ಅಥವಾ ಅವರ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಆಯಾ ತಾಲೂಕಿನ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ವೇದಿಕೆಯಲ್ಲಿ ಸಿದ್ದರಾಮೋತ್ಸವ
‘ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು 75ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಪಕ್ಷದ ಚೌಕಟ್ಟಿನಲ್ಲಿ ನಡೆಸಲು ಅವರ ಹಿತೈಷಿಗಳು ತೀರ್ಮಾನಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಆಗಮಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ ಎಂದರು.
ಪಕ್ಷ ಸಂಘಟನೆ ವಿಚಾರವಾಗಿ ಪದಾಧಿಕಾರಿಗಳ ಸಭೆ
‘ಇಂದು ಪಕ್ಷದ ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ಸಭೆಯನ್ನು ನಡೆಸಿದ್ದು, ಪಕ್ಷದ ಸಂಘಟನೆ ಜವಾಬ್ದಾರಿಯನ್ನು ಯಾವ ರೀತಿ ನಿರ್ವಹಿಸಬೇಕು ಎಂದು ತಿಳಿಸಿದ್ದೇವೆ. ಮುಂದಿನ 10 ತಿಂಗಳು ಪ್ರತಿಯೊಬ್ಬರು ತಮಗೆ ವಹಿಸಿರುವ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ತಿಂಗಳಿಗೆ ಕನಿಷ್ಠ 20 ದಿನಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದರು.
ಬೂತ್ ಮಟ್ಟದಿಂದ ಪಂಚಾಯ್ತಿವರೆಗೂ ಎಲ್ಲ ವಿಭಾಗಗಳಲ್ಲೂ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪಕ್ಷದ ಸಂಘಟನೆ ಮಾಡಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು 50 ವರ್ಷದೊಳಗಿನವರೇ ಆಗಿರುವಂತೆ ನೋಡಿಕೊಳ್ಳಬೇಕು. ಐದು ವರ್ಷ ಅಥವಾ ಎರಡು ಮೂರು ಅವಧಿಗೆ ಅಧ್ಯಕ್ಷರಾಗಿದ್ದವರಿಗೆ ಬಡ್ತಿ ನೀಡಿ ಆ ಸ್ಥಾನವನ್ನು ಹೊಸಬರಿಗೆ ನೀಡಬೆಕು. ಪ್ರತಿ ಪಂಚಾಯ್ತಿಗೂ ಪ್ರಧಾನ ಕಾರ್ಯದರ್ಶಿಗಳು ಪ್ರವಾಸ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದರು.
ಎಡಿಜಿಪಿ ಅಮೃತ್ ಪೌಲ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಇದರಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ನಾವು ಆಗ್ರಹಿಸಿದ್ದೇವೆ. ಈವರೆಗೂ ಬಂಧಿತರಾಗಿರುವವರ ಹೇಳಿಕೆ, ಯಾರು ಯಾರನ್ನು ಬಿಡಿಸಿದ್ದಾರೆ, ಏನೆಲ್ಲಾ ಪ್ರಭಾವ ಬೀರಿದ್ದಾರೆ ಎಂಬುದು ನನಗೆ ಗೊತ್ತಿದೆ’ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅವರು ಹವಾಲ ನಡೆಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪ ಸಂಬಂಧ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಮೊದಲು ಅವರ ಮುಖ್ಯಮಂತ್ರಿಗಳು, ಅವರ ದೊಡ್ಡ ನಾಯಕರ ಮುಖಕ್ಕೆ ಅಂಟಿರುವ ಮಸಿ ತೊಳೆದುಕೊಳ್ಳಲಿ’ ಎಂದು ತಿರುಗೇಟು ಕೊಟ್ಟರು.
ಜಮೀರ್ ಅಹ್ಮದ್ ಅವರ ಮನೆ ಮೇಲಿನ ಎಸಿಬಿ ದಾಳಿ ಮಾದರಿಯಲ್ಲಿ ಅಭಯ್ ಪಾಟೀಲ್ ಅವರ ಮೇಲೂ ಎಸಿಬಿ ದೂರು ದಾಖಲಿಸಿದ್ದು, ಅವರ ಮನೆ ಮೇಲೆ ದಾಳಿ ಮಾಡಲು ಸ್ಪೀಕರ್ ಅವರ ಅನುಮತಿ ಕೋರಲಾಗಿದೆ ಎಂಬುದನ್ನು ಗಮನಕ್ಕೆ ತಂದಾಗ ಕೇಳಿದ, ‘ನನ್ನ ಮನೆ ಮೇಲೆ ದಾಳಿ ಮಾಡುವಾಗ ಯಾರೂ ಸ್ಪೀಕರ್ ಬಳಿ ಅನುಮತಿ ಕೇಳಿರಲಿಲ್ಲ’ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;
1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.
ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ2 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ12 hours agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

