ದಿನದ ಸುದ್ದಿ
ಪ್ರಮುಖ ಸುದ್ದಿಗಳು
ಪ್ರಮುಖ ಸುದ್ದಿಗಳು
- ಸಂಸದರ ಆದರ್ಶ ಗ್ರಾಮದಡಿ ಆಯ್ಕೆಯಾಗಿರುವ ಕಡಬ ತಾಲೂಕಿನ ಬಳ್ಪ ಗ್ರಾಮದ ಸಂಪೂರ್ಣ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 60 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ತಿಳಿಸಿದ್ದಾರೆ.
- ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸುವಂತೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದಾವಣಗೆರೆಯಲ್ಲಿ ನಿನ್ನೆ ಜಿಲ್ಲಾ ಸಮನ್ವಯ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ದುಡಿಯುವ ಕೈಗಳಿಗೆ ಹೆಚ್ಚು ಉದ್ಯೋಗ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಲಾಭವನ್ನು ಬಹುಪಾಲು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದು ತಿಳಿಸಿದ್ದಾರೆ.
- ಗಣಿಗಾರಿಕೆ ಕ್ಷೇತ್ರದಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಅದಿರು ಮತ್ತು ಲೋಹ ಕ್ಷೇತ್ರದ ಆತ್ಮನಿರ್ಭರತೆಗೆ ಹಲವಾರು ಕ್ರಮಗಳನ್ನು ಜರುಗಿಸಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ಹೇಳಿದ್ದಾರೆ.
- ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 10 ಸಾವಿರದ 649 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 19 ಸಾವಿರದ 677 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 96 ಸಾವಿರದ 442ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
- ಕೋವಿಡ್ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಸಾರ್ವತ್ರಿಕ ಲಸಿಕಾ ಅಭಿಯಾನದಡಿ ಕಳೆದ 24 ಗಂಟೆಗಳಲ್ಲಿ 27 ಲಕ್ಷ 17 ಸಾವಿರದ 979 ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ಇದೂವರೆಗೆ 210 ಕೋಟಿ 58 ಲಕ್ಷ 83 ಸಾವಿರದ 682 ಲಸಿಕಾ ಡೋಸ್‌ಗಳನ್ನು ನೀಡಿದಂತಾಗಿದೆ ಎಂದು ಸಚಿವಾಲಯ ತಿಳಿಸಿದೆ.
- ಸ್ವರಸಾಮ್ರಾಟ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ಕೊಡಮಾಡುವ ಪ್ರಸಕ್ತ ಸಾಲಿನ ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಗೆ ದೆಹಲಿಯ ಪಂಡಿತ್ ಮಧೂಪ್ ಮೂದ್ಗಲ್ ಭಾಜನರಾಗಿದ್ದಾರೆ. ಪ್ರಶಸ್ತಿ 1ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಯುವ ಪ್ರಶಸ್ತಿಗೆ ಪ್ರತಿಭಾವಂತ ಹಾರ್ಮೋನಿಯಂ ವಾದಕ ಬೆಂಗಳೂರಿನ ಸತೀಶ ಕೊಳ್ಳಿ ಮತ್ತು ಪುಣೆಯ ಗಾಯಕ ವಿರಾಜ್ ಜೋಶಿ ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಪ್ರಶಸ್ತಿ ತಲಾ 25 ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಕೇಸ್, ಉಡುಪಿಯಿಂದ ವ್ಯಕ್ತಿಯನ್ನು ಠಾಣೆಗೆ ಕರೆತಂದ ಕ್ರಮಕ್ಕೆ ಹೈಕೋರ್ಟ್ ಗರಂ
ಸುದ್ದಿದಿನ,ಬೆಂಗಳೂರು: ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಕಾರ್ಯಕ್ರಮ ರದ್ದಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ವಿಚಾರಣೆ ಹೆಸರಿನಲ್ಲಿ ಠಾಣೆಗೆ ಕರೆತಂದ ವೈಟ್‌ಫೀಲ್ಡ್ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣ ರದ್ದು ಕೋರಿ ಮೋಹನ್‌ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪೊಲೀಸ್ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದೆ.
http://Visit : www.suddidina.com
ನ್ಯಾಯಾಲಯದ ಮುಂದೆ ಡಿಸಿಪಿ ಸೈದುಲು ಅಡಾವತ್, ಎಸಿಪಿ ರೀನಾ ಸುವರ್ಣ ಹಾಗೂ ತನಿಖಾಧಿಕಾರಿ ಹಾಜರಾಗಿದ್ದರು. ಈ ವೇಳೆ ಪೊಲೀಸ್ ಠಾಣೆಯ ಕಾರ್ಯವೈಖರಿ, ಬಂಧನದ ಕ್ರಮ ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಬಗ್ಗೆ ನ್ಯಾಯಪೀಠ ಹಲವು ಪ್ರಶ್ನೆಗಳನ್ನು ಕೇಳಿತು.
‘ವೈಟ್‌ಫೀಲ್ಡ್ ಠಾಣೆ ಡಾರ್ಕ್‌ಫೀಲ್ಡ್ ಆಗಲಿ’
ವೈಟ್‌ಫೀಲ್ಡ್ ಠಾಣೆಯಲ್ಲಿ ವಿದ್ಯುತ್ ಹಾಗೂ ಸಿಸಿಟಿವಿ ವ್ಯವಸ್ಥೆ ಕುರಿತ ವಿಚಾರವನ್ನೂ ನ್ಯಾಯಪೀಠ ಪ್ರಸ್ತಾಪಿಸಿತು. ಠಾಣೆಯ ಚಟುವಟಿಕೆಗಳೇ ಅಂಧಕಾರದಲ್ಲಿವೆ ಎಂದು ವ್ಯಂಗ್ಯವಾಡಿದ ನ್ಯಾಯಮೂರ್ತಿಗಳು, ‘ವೈಟ್‌ಫೀಲ್ಡ್ ಠಾಣೆಯನ್ನು ಡಾರ್ಕ್‌ಫೀಲ್ಡ್ ಠಾಣೆಯನ್ನಾಗಿ ಬದಲಾಯಿಸಿಕೊಳ್ಳಿ’ ಎಂದು ಕಿಡಿಕಾರಿದರು.
ಉಡುಪಿಗೆ ತೆರಳಿ ಮೋಹನ್‌ಗೌಡರನ್ನು ವಶಕ್ಕೆ ಪಡೆದಿದ್ದೇಕೆ, ಬೆಳಗಿನ ಜಾವ 2 ಗಂಟೆಗೆ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದೇಕೆ ಎಂಬುದರ ಕುರಿತು ಅಧಿಕಾರಿಗಳಿಂದ ನ್ಯಾಯಪೀಠ ವಿವರಣೆ ಕೇಳಿತು.
ಡಿಸಿಪಿ ಪರವಾಗಿ, ಮೋಹನ್‌ಗೌಡ ಹಲವು ಟ್ವೀಟ್‌ಗಳನ್ನು ಮಾಡಿದ್ದರು. ಅವರನ್ನು ಬಂಧಿಸಿರಲಿಲ್ಲ, ಫೋನ್ ಮಾಡಿದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರು ಕಾರಿನಲ್ಲಿ ಬಂದಿದ್ದರು. ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಉತ್ತರಿಸಲಾಯಿತು.
‘ಯೂನಿಫಾರ್ಮ್ ಇದ್ದರೆ ಏನು ಬೇಕಾದರೂ ಮಾಡಬಹುದೇ?’
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಾತ್ರಕ್ಕೆ ಪೊಲೀಸರು ಮನಬಂದಂತೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಯೂನಿಫಾರ್ಮ್ ಧರಿಸಿರುವ ಕಾರಣಕ್ಕೆ ನಾಗರಿಕರ ಸ್ವಾತಂತ್ರ್ಯ ಕಸಿಯಲು ಸಾಧ್ಯವಿಲ್ಲ ಎಂದು ಕೋರ್ಟ್ ಎಚ್ಚರಿಸಿತು.
ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಕುರಿತು ಕ್ರಮ ಕೈಗೊಳ್ಳುವಾಗ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೊಲೀಸರು ತಮ್ಮನ್ನು ತಾವೇ ಕಾನೂನು ಎಂದು ಭಾವಿಸಬಾರದು. ಬಂಧನದ ಅಧಿಕಾರವನ್ನು ವಿವೇಚನೆಯಿಲ್ಲದೆ ಬಳಸಬಾರದು ಎಂದು ನ್ಯಾಯಪೀಠ ತಿಳಿಸಿತು.
ಪೊಲೀಸ್ ಠಾಣೆಗಳಲ್ಲಿ CCTV ಆಡಿಟ್‌ಗೆ ಸೂಚನೆ
ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮತ್ತು ಯುಪಿಎಸ್ ಬ್ಯಾಕಪ್ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯಮಟ್ಟದ ಆಡಿಟ್ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಅಧಿಕಾರ ದುರುಪಯೋಗ ಅಥವಾ ನ್ಯಾಯಾಲಯದ ಆದೇಶ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಪೊಲೀಸ್ ಠಾಣೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪುಗಳ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ
ಕುನಾಲ್ ಕಾಮ್ರಾ ಶೋ ವಿರೋಧಿಸಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಈ ಬೆಳವಣಿಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮೋಹನ್‌ಗೌಡ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಉಡುಪಿಯಿಂದ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದ ಕ್ರಮ ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ದಿನದ ಸುದ್ದಿ
ಗೃಹಲಕ್ಷ್ಮೀ ಯೋಜನೆಯಲ್ಲಿ ಮಹತ್ವದ ಬದಲಾವಣೆ: ಅರ್ಹ ಫಲಾನುಭವಿಗಳ ಖಚಿತತೆಗೆ ಮನೆ-ಮನೆ ಪರಿಶೀಲನೆ
ಸುದ್ದಿದಿನ,ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯಲ್ಲಿ ಸರ್ಕಾರ ಮಹತ್ವದ ಪರಿಶೀಲನಾ ಕ್ರಮಕ್ಕೆ ಮುಂದಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಪ್ರಯೋಜನ ತಲುಪಬೇಕು ಎಂಬ ಉದ್ದೇಶದಿಂದ, ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖಚಹರೆ ದೃಢೀಕರಣವನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪ್ರಕ್ರಿಯೆಯನ್ನು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತದೆ.

http://Visit : www.suddidina.com
ಮನೆ-ಮನೆ ಸಮೀಕ್ಷೆಯ ಜತೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ಪರಿಶೀಲನಾ ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಪ್ರಕಾರವೇ ಫಲಾನುಭವಿಗಳ ಮರುಪರಿಶೀಲನೆ ನಡೆಯಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಒಂದು ತಿಂಗಳಲ್ಲಿ ಕ್ಷೇತ್ರ ಪರಿಶೀಲನೆ ಪೂರ್ಣಗೊಳಿಸಲು ಸೂಚನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಗತ್ಯ ಮಾದರಿ ನಮೂನೆಗಳನ್ನು ಸಿದ್ಧಪಡಿಸಲಿದೆ. ಮಾಸ್ಟರ್ ತರಬೇತುದಾರರ ಮೂಲಕ ಕ್ಷೇತ್ರ ಗಣತಿದಾರರಿಗೆ ತರಬೇತಿ ನೀಡಲಾಗುತ್ತದೆ. ಆಗಸ್ಟ್ 30ರಿಂದ ಒಂದು ತಿಂಗಳೊಳಗೆ ಕ್ಷೇತ್ರ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಸಮಿತಿಗಳು ಮತ್ತು ಸ್ಥಳೀಯ ಮಟ್ಟದ ಸಮಿತಿಗಳು ನಿಗದಿತ ಅವಧಿಯಲ್ಲಿ ಪರಿಶೀಲನೆ ಪೂರ್ಣಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್‌ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಗಣತಿದಾರರನ್ನಾಗಿ ಬಳಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.
ಮನೆ ಬಾಗಿಲಿಗೆ ಬರಲಿದೆ ಪರಿಶೀಲನಾ ತಂಡ
ಫಲಾನುಭವಿಗಳ ಮನೆಗಳಿಗೆ ಕಡ್ಡಾಯವಾಗಿ ಭೇಟಿ ನೀಡುವಂತೆ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿಗೆ ಸೂಚಿಸಲಾಗಿದೆ. ಫಲಾನುಭವಿ ಅಥವಾ ಕುಟುಂಬದ ಸದಸ್ಯರು ಗಣತಿ ನಮೂನೆಯನ್ನು ಭರ್ತಿ ಮಾಡಿ ಹಿಂತಿರುಗಿಸಬೇಕು. ಯಾವುದೇ ಕಾರಣಕ್ಕೂ ಮನೆ ಭೇಟಿ ತಪ್ಪಿಸಬಾರದು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ಫಲಾನುಭವಿಯ ಭಾವಚಿತ್ರ ಅಥವಾ ಮನೆಯ ಫೋಟೊ, ಜಿಪಿಎಸ್ ಮ್ಯಾಪಿಂಗ್, ಮುಖಚಹರೆ ದೃಢೀಕರಣ ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಸ್ಥಳದಲ್ಲಿಯೇ ದಾಖಲಿಸಬೇಕು. ಈ ಮೂಲಕ ಫಲಾನುಭವಿಯ ಗುರುತು ಹಾಗೂ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸುವ ಉದ್ದೇಶ ಹೊಂದಲಾಗಿದೆ.
ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಹೊಣೆ
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರ್ಡ್ ಹಾಗೂ ಗ್ರಾಮವಾರು ಸ್ಪಷ್ಟ ನಿಯೋಜನೆಯೊಂದಿಗೆ ಗಣತಿದಾರರಿಗೆ ಲಿಖಿತ ಆದೇಶ ನೀಡಬೇಕು. ಪರಿಶೀಲನಾ ಪ್ರಕ್ರಿಯೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಮೇಲ್ವಿಚಾರಣೆ ನಡೆಸಬೇಕಿದೆ.
ಒಟ್ಟಿನಲ್ಲಿ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮತ್ತಷ್ಟು ನಿಖರಗೊಳಿಸಿ, ಅರ್ಹರಿಗೆ ಮಾತ್ರ ಸರ್ಕಾರದ ನೆರವು ತಲುಪಿಸುವುದು ಈ ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ. ಮನೆ-ಮನೆ ಸಮೀಕ್ಷೆ ಮತ್ತು ಡಿಜಿಟಲ್ ದೃಢೀಕರಣದ ಬಳಿಕ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಲಿವೆಯೇ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.

ದಿನದ ಸುದ್ದಿ
ಬೆಂಗಳೂರು ಮೆಟ್ರೋದಲ್ಲಿ ಸುರಕ್ಷತೆಗೆ ಹೊಸ ಕವಚ: PSD ಕಾಮಗಾರಿ ಯಾವಾಗ?
ಸುದ್ದಿದಿನ,ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂಪಿಸಿರುವ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ಯೋಜನೆಗೆ ಕೇಂದ್ರದ ಅನುಮೋದನೆಯ ವಿಳಂಬವೇ ದೊಡ್ಡ ಅಡ್ಡಿಯಾಗಿದೆ. ಮೆಟ್ರೋ 3ನೇ ಹಂತದ ಕೆಂಪು ಮಾರ್ಗದ ಡಿಪಿಆರ್‌ಗೆ ಕೇಂದ್ರ ಸರಕಾರದಿಂದ ಒಪ್ಪಿಗೆ ದೊರೆಯುವವರೆಗೆ PSD ಅಳವಡಿಕೆ ಕಾಮಗಾರಿ ಆರಂಭಿಸುವುದು ಕಷ್ಟವಾಗಲಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.
ಪ್ರಸ್ತುತ ಮತ್ತು ಭವಿಷ್ಯದ ಮೆಟ್ರೋ ಯೋಜನೆಗಳನ್ನು ಪರಿಗಣಿಸಿದರೆ ಬೆಂಗಳೂರಿನಲ್ಲಿ ಒಟ್ಟು 191 ನಿಲ್ದಾಣಗಳು ನಿರ್ಮಾಣವಾಗುವ ನಿರೀಕ್ಷೆಯಿದೆ. ಈ ಪೈಕಿ 177 ನಿಲ್ದಾಣಗಳಲ್ಲಿ PSD ಅಳವಡಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಇದಕ್ಕಾಗಿ ಅಂದಾಜು ₹1,274 ಕೋಟಿ ವೆಚ್ಚವಾಗಲಿದೆ.
ಹೈಲೈಟ್ಸ್: |
|
http://Visit : www.suddidina.com
₹1,274 ಕೋಟಿ ಯೋಜನೆ: ಎಲ್ಲಿ ಎಷ್ಟು ಖರ್ಚು?
PSD ಯೋಜನೆಯ ಒಟ್ಟು ವೆಚ್ಚದಲ್ಲಿ ಸಾಮಗ್ರಿ ಖರೀದಿಗೆ ಸುಮಾರು ₹747 ಕೋಟಿ, ಸಿವಿಲ್ ಕಾಮಗಾರಿಗಳಿಗೆ ₹317 ಕೋಟಿ ಹಾಗೂ ಸಿಗ್ನಲಿಂಗ್, ಟೆಲಿಕಾಂ ಮತ್ತು ವಿದ್ಯುತ್ ವ್ಯವಸ್ಥೆಗಳ ಮಾರ್ಪಾಡಿಗೆ ₹210 ಕೋಟಿ ಮೀಸಲಿಡುವ ಪ್ರಸ್ತಾವನೆ ಇದೆ.
ಆದರೆ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಪ್ರತ್ಯೇಕವಾಗಿ ಸಲ್ಲಿಸಲಾಗಿಲ್ಲ. ಹೆಬ್ಬಾಳ–ಸರ್ಜಾಪುರ 3ಎ ಹಂತದ ಡಿಪಿಆರ್‌ನ ಭಾಗವಾಗಿಯೇ ಕಳುಹಿಸಲಾಗಿದೆ. ಹೀಗಾಗಿ 3ಎ ಹಂತದ ಯೋಜನೆಗೆ ಕೇಂದ್ರದ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅನುಮೋದನೆ ದೊರೆಯುವವರೆಗೆ PSD ಯೋಜನೆಗೂ ಅಂತಿಮ ಒಪ್ಪಿಗೆ ಸಿಗುವುದಿಲ್ಲ.
ಹಾಲಿ ನಿಲ್ದಾಣಗಳಲ್ಲಿ ಕಾಮಗಾರಿ ಸವಾಲು
ಹೊಸ ನಿಲ್ದಾಣಗಳಲ್ಲಿ PSD ಅಳವಡಿಕೆ ತುಸು ಸುಲಭವಾದರೂ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳ ನಿಲ್ದಾಣಗಳಲ್ಲಿ ಕಾಮಗಾರಿ ನಡೆಸುವುದು ಸವಾಲಿನ ಕೆಲಸವಾಗಿದೆ. ತಾಂತ್ರಿಕ ಕಾಮಗಾರಿಗಳನ್ನು ಮುಖ್ಯವಾಗಿ ರಾತ್ರಿ ವೇಳೆ, ರೈಲು ಸಂಚಾರ ಸ್ಥಗಿತಗೊಂಡ ಬಳಿಕ ನಡೆಸಬೇಕಾಗುತ್ತದೆ. ಅಗತ್ಯವಿದ್ದರೆ ರೈಲುಗಳ ವೇಗ ಕಡಿಮೆ ಮಾಡುವುದು ಅಥವಾ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಪರಿಸ್ಥಿತಿಯೂ ಎದುರಾಗಬಹುದು.
ಟ್ರ್ಯಾಕ್‌ಗೆ ಇಳಿಯುವ ಘಟನೆಗಳು ಆತಂಕ
ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಟ್ರ್ಯಾಕ್‌ಗೆ ಇಳಿಯುವುದನ್ನು ತಡೆಯಲು ಈಗಾಗಲೇ ಭದ್ರತಾ ಸಿಬ್ಬಂದಿ ಹಾಗೂ ಸ್ಟೀಲ್ ಗ್ರಿಲ್‌ಗಳಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಟ್ರ್ಯಾಕ್‌ಗೆ ಇಳಿಯುವ ಘಟನೆಗಳು ಸಂಪೂರ್ಣವಾಗಿ ನಿಂತಿಲ್ಲ. ಈ ಹಿನ್ನೆಲೆಯಲ್ಲಿ PSD ಅಳವಡಿಕೆ ಪ್ರಯಾಣಿಕರ ಸುರಕ್ಷತೆಗೆ ಮಹತ್ವದ ಹೆಚ್ಚುವರಿ ಕವಚವಾಗಬಹುದು.
3ಎ ಹಂತದ ಪರಿಷ್ಕೃತ ಡಿಪಿಆರ್
ಹೆಬ್ಬಾಳ–ಸರ್ಜಾಪುರ 37 ಕಿ.ಮೀ. ಕಾರಿಡಾರ್‌ನ ಪರಿಷ್ಕೃತ ಡಿಪಿಆರ್ ಕೇಂದ್ರದ ಅನುಮೋದನೆಗಾಗಿ ಕಾಯುತ್ತಿದೆ. ವೆಚ್ಚ ಪರಿಷ್ಕರಣೆಯ ಬಳಿಕ ಯೋಜನೆಯ ಅಂದಾಜು ₹28,405 ಕೋಟಿಯಿಂದ ₹25,999 ಕೋಟಿಗೆ ಇಳಿಕೆಯಾಗಿದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯ ಒಪ್ಪಿಗೆ ದೊರೆತ ಬಳಿಕವೇ ಮುಂದಿನ ಹಂತದ ಕಾಮಗಾರಿಗಳಿಗೆ ವೇಗ ಸಿಗಲಿದೆ.

-
ದಿನದ ಸುದ್ದಿ5 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ5 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ5 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ6 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ6 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಡಾಲಿಯ ಕನಸು ಒಂದೇ ಹೀರೋ ಆಗೋದು
-
ದಿನದ ಸುದ್ದಿ6 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ

