ಲೈಫ್ ಸ್ಟೈಲ್
ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ
- ಡಾ. ಸಿದ್ದಯ್ಯ ರೆಡ್ಡಿಹಳ್ಳಿ
ಜಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.
ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.
ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.
ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.
ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.
ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.
ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.
ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.
ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.
ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.
ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.
ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.
ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.
ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.
ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.
ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.
(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



