ದಿನದ ಸುದ್ದಿ
ಹೆದ್ದಾರಿಯಲ್ಲಿ ಹಾಲಿನ ಹೊಳೆ! ಪಲ್ಟಿಯಾದ ನಂದಿನಿ ಟ್ಯಾಂಕರ್‌ನಿಂದ 21 ಸಾವಿರ ಲೀಟರ್ ಹಾಲು ರಸ್ತೆಗೆ
ತುಮಕೂರು: ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿಯುವುದನ್ನು ನೋಡುತ್ತೇವೆ. ಆದರೆ ತುಮಕೂರಿನ ಶಿರಾ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದ ಘಟನೆ ಮಾತ್ರ ವಿಭಿನ್ನ. ಇಲ್ಲಿ ನೀರಿನ ಬದಲು ಸಾವಿರಾರು ಲೀಟರ್ ಹಾಲು ಹೆದ್ದಾರಿಯುದ್ದಕ್ಕೂ ಹರಿದು, ರಸ್ತೆ ಸಂಪೂರ್ಣ ಹಾಲಿನ ಹೊಳೆಯಂತಾಗಿದೆ. ಕೆಎಂಎಫ್‌ನ ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಈ ಘಟನೆ ನಡೆದಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

http://Visit : www.suddidina.com
21 ಸಾವಿರ ಲೀಟರ್ ಹಾಲು ಹೊತ್ತೊಯ್ಯುತ್ತಿದ್ದ ಟ್ಯಾಂಕರ್
ಶಿರಾ ಸಮೀಪದ ಗುಮ್ಮನಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 21 ಸಾವಿರ ಲೀಟರ್ ಹಾಲನ್ನು ತುಂಬಿಕೊಂಡಿದ್ದ ಕೆಎಂಎಫ್‌ನ ನಂದಿನಿ ಹಾಲಿನ ಟ್ಯಾಂಕರ್ ತುಮಕೂರಿನಿಂದ ಮುಂಬೈ ಕಡೆಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ಯಾಂಕರ್ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ.
ಟ್ಯಾಂಕರ್ ಪಲ್ಟಿಯಾದ ಬೆನ್ನಲ್ಲೇ ಅದರೊಳಗಿದ್ದ ಹಾಲು ರಸ್ತೆಗೆ ಭಾರೀ ಪ್ರಮಾಣದಲ್ಲಿ ಹರಿದುಬಂದಿದೆ. ಕೆಲವೇ ಕ್ಷಣಗಳಲ್ಲಿ ಹೆದ್ದಾರಿಯ ಒಂದು ಭಾಗ ಬಿಳಿ ಬಣ್ಣದ ಹಾಲಿನಿಂದ ಆವೃತವಾಗಿದ್ದು, ನೋಡಲು ಅಕ್ಷರಶಃ ‘ಹಾಲಿನ ನದಿ’ ಹರಿದಂತೆ ಕಂಡಿದೆ.
ಬಾಟಲಿ, ಕ್ಯಾನ್ ಹಿಡಿದು ಓಡಿಬಂದ ಜನ
ಹಾಲು ರಸ್ತೆಯಲ್ಲಿ ಹರಿಯುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಕೆಲವರು ಪ್ಲಾಸ್ಟಿಕ್ ಬಾಟಲಿ, ಇನ್ನು ಕೆಲವರು ಪಾತ್ರೆ ಹಾಗೂ ಕ್ಯಾನ್‌ಗಳನ್ನು ಹಿಡಿದುಕೊಂಡು ಹಾಲು ಸಂಗ್ರಹಿಸಲು ಮುಂದಾಗಿದ್ದಾರೆ.
ಘಟನೆಯ ವಿಡಿಯೋದಲ್ಲಿ ಜನರು ರಸ್ತೆಯಲ್ಲಿ ಹರಿಯುತ್ತಿದ್ದ ಹಾಲನ್ನು ವಿವಿಧ ಪಾತ್ರೆಗಳಲ್ಲಿ ತುಂಬಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದೇ ಕಾರಣಕ್ಕೆ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
https://x.com/zingabad/status/2093215448036962774
ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ
ಅಪಘಾತದಲ್ಲಿ ಟ್ಯಾಂಕರ್‌ನ ಚಾಲಕ ಹಾಗೂ ಕ್ಲೀನರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಹಾಲು ಹೆದ್ದಾರಿಯಲ್ಲಿ ಹರಿದಿದ್ದಲ್ಲದೆ, ಅಪಘಾತದ ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ವಾಹನ ಸಂಚಾರಕ್ಕೂ ಕೆಲಕಾಲ ಅಡ್ಡಿಯಾಯಿತು. ಬಳಿಕ ಸ್ಥಳಕ್ಕೆ ಕ್ರೇನ್ ತರಿಸಿ ಪಲ್ಟಿಯಾಗಿದ್ದ ಟ್ಯಾಂಕರ್‌ನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ವೈರಲ್ ವಿಡಿಯೋಗೆ ನಟ್ಟಿಗರ ವಿಭಿನ್ನ ಪ್ರತಿಕ್ರಿಯೆ
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು “ಉಚಿತವಾಗಿ ಸಿಕ್ಕರೆ ಜನ ಹೇಗೆ ಮುಗಿಬೀಳುತ್ತಾರೆ” ಎಂದು ವ್ಯಂಗ್ಯವಾಡಿದ್ದರೆ, ಇನ್ನು ಕೆಲವರು “ಹಾಲು ವ್ಯರ್ಥವಾಗುವುದಕ್ಕಿಂತ ಜನ ತೆಗೆದುಕೊಂಡು ಹೋದರೆ ತಪ್ಪೇನು?” ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ, ಅಪಘಾತದಿಂದ ಅಪಾರ ಪ್ರಮಾಣದ ಹಾಲು ವ್ಯರ್ಥವಾಗಿರುವುದು ಬೇಸರದ ಸಂಗತಿಯಾಗಿದ್ದು, ಅದೃಷ್ಟವಶಾತ್ ಟ್ಯಾಂಕರ್‌ನಲ್ಲಿದ್ದವರ ಜೀವಕ್ಕೆ ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ.

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆಆರ್.ಐ.ಡಿ.ಎಲ್ ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


