ಬಹಿರಂಗ
” ಯಾವ ಘನಂದಾರಿ ಸಾಹಸಕ್ಕೆ…ವೈ- ಪ್ಲಸ್ ಸೆಕ್ಯುರಿಟಿ “..?
- ಹಿರಿಯೂರು ಪ್ರಕಾಶ್
ಸುಮ್ಮನಿರಲಾರದೇ ಇರುವೆ ಬಿಟ್ಟುಕೊಳ್ಳುವುದು ಎಷ್ಟು ಪೆದ್ದುತನ, ಅಮಾಯಕತನ ಅಥವಾ ಉಡಾಫ಼ೆತನವೋ ಆ ರೀತಿ ಅಹಂನಿಂದ ಸ್ವಯಂ ಇರುವೆ ಬಿಟ್ಟುಕೊಂಡು ಫಜೀತಿ ಸೃಷ್ಟಿಸಿದವರ ನೆರವಿಗೆ ಆದ್ಯತೆ ಮೇರೆಗೆ ಸರ್ಕಾರವೇ ಧಾವಿಸುವುದು ಮತ್ತಷ್ಟು ಕಿರಿಕಿರಿಯಂತೆ ಗೋಚರಿಸುತ್ತದೆ.
ಅಲ್ಲದೇ ಮತ್ತೇನು ! ಬಾಲಿವುಡ್ ನಲ್ಲಿ ಅಭಿನಯಕ್ಕಿಂತ ತನ್ನ ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಕಂಗನಾ ರನೋತ್ ಎಂಬ ನಟೀ ಮಣಿ ಸುಮ್ಮನಿರಲಾರದೇ ತನ್ನ ಟ್ವೀಟ್ ಮೂಲಕ ಸೃಷ್ಟಿಸಿದ ಅನಗತ್ಯ ಅವಾಂತರ ಮತ್ತು ಅದಕ್ಕೆ ಕೇಂದ್ರ ಸರ್ಕಾರ ತಕ್ಷಣಕ್ಕೆ ಸ್ಪಂದಿಸಿದ ರೀತಿ- ನೀತಿ ನೋಡಿದಲ್ಲಿ ಮೇಲಿನಂತೆ ಅನಿಸುವುದು ಸಹಜ. ಕೆಲ ದಿನಗಳ ಹಿಂದೆ ಈಕೆ ಮುಂಬೈ ಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿ.ಓ.ಕೆ) ಕ್ಕೆ ಹೋಲಿಸಿ, ‘ ಸಿನಿಮಾ ಮಾಫ಼ಿಯಾಗಿಂತ ತಾನು ಮುಂಬೈ ಪೊಲೀಸ್ ಕಂಡರೆ ಹೆದರುತ್ತೇನೆ ” ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಲ್ಲದೇ ಮುಂಬೈ ಸುರಕ್ಷಿತವಲ್ಲ ಎಂದೂ ಟ್ವೀಟ್ ಮಾಡಿದ್ದರು.
ಮುಂಬೈನಲ್ಲೇ ಇದ್ದುಕೊಂಡು ಅಲ್ಲಿಯೇ ಹೆಸರು ಮಾಡಿ ಅಲ್ಲಿನ ಅನ್ನ ತಿನ್ನುತ್ತಾ ಈಗ ಅದನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವ ಈ ನಟಿಯ ಟ್ವೀಟ್ ಗೆ ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಯಾರಿಗಾದರೂ ತಾನು ಮುಂಬೈಗೆ ಬರುವುದನ್ನು ಧೈರ್ಯವಿದ್ದರೆ ತಡೆಯಲಿ ಎಂಬ ಸವಾಲನ್ನೂ ಎಸೆದಿದ್ದಾರೆ.! ಕರ್ಮ ಕಾಂಡ .
ಆದರೆ ಇದ್ಯಾವುದೂ ನನಗೆ ವಿಶೇಷ ಅನ್ನಿಸೋಲ್ಲ. ಕಾರಣ – ಕೆಲವರು ಇರೋದೇ ಹಾಗೆ. ಮೂಲ ಕಸುಬು ಬಿಟ್ಟು ಸದಾ ವಿವಾದಾತ್ಮಕ ಕಾರ್ಯ ಮಾಡೋದೇ ಇಂತಹವರ ವರಸೆ. ಅದು ಅವರ ವೈಯುಕ್ತಿಕ ಸ್ವಾತಂತ್ರ್ಯ, ಹಕ್ಕು ! ಅಂಥವರು ಏನನ್ನಾದರೂ ಮಾಡಿಕೊಳ್ಳಲಿ.
ಆದರೆ ಸುಮ್ಮನಿರಲಾರದೇ ಏನನ್ನೋ ಕೆದಕಿ ಕೆಣಕಿ ವಿವಾದ ಸೃಷ್ಟಿಸಿದವರನ್ನು ಸರ್ಕಾರ ಗಂಭೀರವಾದ ಎಚ್ಚರಿಕೆ ಕೊಟ್ಟು ಸುಮ್ಮನಾಗಿಸುವುದನ್ನು ಬಿಟ್ಟು ಅವರಿಗೆ ಮತ್ತಷ್ಟು ಬಿಲ್ಡಪ್ ಕೊಟ್ಟು ವೈ- ಪ್ಲಸ್ ಭದ್ರತೆ ನೀಡಿ ಅವರ ರಕ್ಷಣೆಗೆ ಹತ್ತು ಮಂದಿ ಶಸ್ತ್ರ ಸಜ್ಜಿತ ಕಮಾಂಡೋಗಳನ್ನು ನೇಮಿಸಿದ್ದನ್ನು ನೋಡಿದರೆ ನಗಬೇಕೋ ಅಳಬೇಕೋ, ಈ ದೇಶದ ತೆರಿಗೆದಾರನಾಗಿ ವ್ಯಥೆ ಪಡಬೇಕೋ ತಿಳಿಯುತ್ತಿಲ್ಲ.
ಈ ನಟಿ ದೇಶದ ಹಿತಕ್ಕಾಗಿ ಅಥವಾ ಜನಪರ ಕಾಳಜಿಗಾಗಿ ಹೋರಾಟ ನೆಡೆಸಿದ್ದರ ಪ್ರಭಾವದಿಂದ ವಿರೋಧಿಗಳು ಹುಟ್ಟಿಕೊಂಡದ್ದಕ್ಕಾಗಿ ಅವರಿಗೆ ಸೆಕ್ಯುರಿಟಿ ಕೊಡಬೇಕೆಂದುಕೊಂಡರೆ ಅದು ತಪ್ಪಲ್ಲ. ಕೊಡಲಿ ! ಅಥವಾ ದೇಶದ ಮಾಜೀ ಪ್ರಧಾನಿಯೋ, ರಕ್ಷಣಾ ಮಂತ್ರಿಯೋ , ಅತ್ಯುನ್ನತ ವಿಜ್ಞಾನಿಯೋ ಇಲ್ಲವೇ ಅತೀ ಸೂಕ್ಷ್ಮ ಹುದ್ದೆಯಲ್ಲಿನ ಗಣ್ಯರೋ ಇಂದೋ, ಹಿಂದೆಯೋ ಆಗಿದ್ದರೂ ಭದ್ರತೆ ಕೊಡಲಿ.
ಆದರೆ ಇದಾವುದೂ ಇಲ್ಲದೇ ಹೋದರೂ ಕೇವಲ ತನ್ನ ಖಯಾಲಿಗಾಗಿ ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಾ ಬೇಕಾಗಿಯೇ ವಿರೋಧ ಸೃಷ್ಟಿಸಿಕೊಳ್ಳುತ್ತಾ ಬಂದಿರುವ ಈ ಬಾಲಿವುಡ್ ನಟಿಗೆ CRPF ಶಸ್ತ್ರ ಸಜ್ಜಿತ ಕಮಾಂಡೋಗಳ ರಕ್ಷಣೆ ನೀಡುವ ನಿರ್ಧಾರ ಆಕೆಗೆ ಇಂತಹಾ ಮತ್ತಷ್ಟು ತಪರಾಕಿಗಳನ್ನು ಯಾವುದೇ ಎಗ್ಗಿಲ್ಲದೇ ತಗಲಾಕಿಕೊಳ್ಳಲು ಉತ್ತೇಜಿಸಿದಂತಾಗಲಿಲ್ಲವೇ ?? ಆಕೆಗೆ ಮುಂಬೈನಲ್ಲಿ ಇರುವುದು ಉಸಿರು ಕಟ್ಟಿಸಿದಂತಹ ಅನುಭವವಾಗಿದ್ದರೆ ಅದನ್ನು ಬಿಟ್ಟು ದೇಶದ ಇನ್ನಿತರೆ ಯಾವುದೇ ಭಾಗದಲ್ಲಿ ವಾಸಿಸಲು ಅವರು ಸ್ವತಂತ್ರರು.
ಮೇಲಾಗಿ ಕೇಂದ್ರ ಸರ್ಕಾರ ತಾನೇ ಈಕೆಯ ಟ್ವೀಟ್ ಸೃಷ್ಟಿಸಿದ ಆವಾಂತರದ ಮಹತ್ಕಾರಣಕ್ಕಾಗಿ ಸಿ.ಆರ್.ಪಿ.ಎಫ಼್ ಭದ್ರತೆ ಒದಗಿಸುವ ಬದಲು ಅವರೇ ಸೆಕ್ಯುರಿಟಿ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಬಹುದಿತ್ತು ! ಇಲ್ಲವೇ ಸುಮ್ಮನಿದ್ದಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ ! ತಮಾಷೆಯೆಂದರೆ ಇಡೀ ದೇಶದಲ್ಲಿ ಸಿ ಆರ್ ಪಿ ಎಫ಼್ ಭದ್ರತೆ ಪಡೆದ ಅರವತ್ತು ಮಂದಿ ಗಣ್ಯರಲ್ಲಿ ಈಗ ಕಂಗನಾ ಕೂಡಾ ಒಬ್ಬರು ! ಮತ್ತು ಈ ಸೌಲಭ್ಯ ಪಡೆದ ಮೊಟ್ಟ ಮೊದಲ ಬಾಲಿವುಡ್ ನಟಿಯೂ ಕೂಡ.
ನಮ್ಮಲ್ಲಿ ಒಂದು ರೋಗವಿದೆ. ಅದೆಂದರೆ ಯಾವುದೇ ವಿಷಯವನ್ನು ರಾಜಕೀಯ ಗೊಳಿಸುವುದು.! ಘಟನೆಯನ್ನು ವಸ್ತುನಿಷ್ಠ ಹಿನ್ನೆಲೆಯಲ್ಲಿ ನೋಡದೇ ಅದನ್ನು ರಾಜಕೀಯಕರಣಗೊಳಿಸಿ ನಿರ್ಧಾರ ತೆಗೆದುಕೊಳ್ಳುವುದರಿಂದ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಇಂತಹಾ ಅಸಹಜ ಬೆಳವಣಿಗೆಗಳು ಆಗಾಗ್ಗೆ ಜರುಗುತ್ತಲೇ ಇರುತ್ತವೆ.
ಹೀಗಾಗಿ ಯಾರದೋ ಕ್ಷುಲ್ಲಕ ವಿಚಾರಗಳೂ ಸಹ ರಾಜಕೀಯ ಸ್ವರೂಪ ಪಡೆದು ಕೊನೆಗೆ ಅದರ ದುಷ್ಪರಿಣಾಮ ಬೀರುವುದು ಸಾರ್ವಜನಿಕರ ತೆರಿಗೆ ಹಣದ ಮೇಲೆಯೇ ! ಕಷ್ಟಪಟ್ಟು ಮೈಮುರಿದು ದುಡಿದು ಸರ್ಕಾರಕ್ಕೆ ತೆರಿಗೆ ಕಟ್ಟಿದ ಹಣ ಇಂತಹಾ ಕ್ಷುಲ್ಲಕ ಕಾರ್ಯಕ್ಕೆ ವಿನಿಯೋಗವಾಗುವುದು ನಮ್ಮಲ್ಲಿ ಮಾತ್ರ ! ಸರ್ಕಾರ ಇವರಿಗೆ ಭದ್ರತೆ ಕೊಟ್ಟಿದ್ದಕ್ಕೆ ನಿಜವಾಗಿಯೂ ಬೇಸರವಿಲ್ಲ. ಆದರೆ ಸುಮ್ಮನಿರದೇ ವಿನಾಕಾರಣ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಉಡಾಫ಼ೆಯವರಿಗೆ ಮಣೆ ಹಾಕಿ ಮೆರವಣಿಗೆ ಮಾಡುವ ಸರ್ಕಾರಗಳ ಧೋರಣೆಯಷ್ಟೇ ಪ್ರಶ್ನಾರ್ಹ !
ಮರೆಯುವ ಮುನ್ನ
ಯಾವುದೇ ಜವಾಬ್ದಾರಿಯುತ ಆಡಳಿತ ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡುವ ಮುನ್ನ ಅದರಿಂದ ಸಾರ್ವಜನಿಕರಿಗೆ ಉಪಯೋಗವಿದೆಯೇ ಅಥವಾ ಸಮಾಜಕ್ಕೆ ರಾಜ್ಯಕ್ಕೆ, ದೇಶಕ್ಕೆ ಅದರಿಂದ ಸೇವೆ ಸಲ್ಲಿಸಿದಂತಾಗುತ್ತದೆಯೇ ಎಂಬುದರ ಸೂಕ್ಷ್ಮವನ್ನು ಅರಿಯಬೇಕಾಗಿದೆ.
ಈ ಸೂಕ್ಷ್ಮತೆ ಆಳುವವರಿಗೆ ಇಲ್ಲವಾದಲ್ಲಿ ಅದು ಸಾರ್ವಜನಿಕರಿಗೆ ಮತ್ತು ತೆರಿಗೆದಾರರಿಗೆ ಮಾಡುವ ಅನ್ಯಾಯದಂತೆಯೇ ಗೋಚರಿಸುತ್ತದೆ. ರಾಜಕೀಯವನ್ನು ಬದಿಗಿಟ್ಟು ನೋಡುವುದಾದಲ್ಲಿ ಕಂಗನಾ ರಣಾವತ್ ಮಾಡಿಕೊಂಡ ಸ್ವಯಂ ಕಿರಿಕ್ ಗಳಿಗೆ ಸಿ ಆರ್ ಪಿ ಎಫ಼್ ರಕ್ಷಣೆ ನೀಡುವ ವಿಚಾರದಲ್ಲಿನ ಕೇಂದ್ರದ ನಿರ್ಧಾರ ಸಮಂಜಸವಲ್ಲವೆಂದೇ ಹೇಳಬೇಕಾಗುತ್ತದೆ. ವೈಯುಕ್ತಿಕ ಪ್ರತಿಷ್ಠೆಯ ಟ್ವೀಟ್ ಗೆ ಇಷ್ಟೆಲ್ಲಾ ದುಬಾರಿ ಸ್ಕೋಪ್ ಸಿಗೋದು ನಮ್ಮಂತಹಾ ” ಬಡಾ” ದೇಶದಲ್ಲಿ ಮಾತ್ರವೇ ಅನ್ಸುತ್ತೆ.
ಇಂತಹಾ ಘಟನೆಗಳನ್ನೆಲ್ಲಾ ನೋಡಿದಾಗ…… ಇಂದು ಬರೀ ಖತರ್ ನಾಕ್ ಕುಖ್ಯಾತರಿಗೆ , ಪೊಳ್ಳು ಪ್ರಚಾರ ಗಿಟ್ಟಿಸುವವರಿಗೆ, ಗಿಮಿಕ್ ಗಳ ಗ್ಲಾಮರ್ ಗಳಿಗೆ, ಪ್ರಯೋಜನಕ್ಕೆ ಬಾರದ ಮಾತುಗಳ ಮಲ್ಲರಿಗಷ್ಟೇ ಕಾಲವೆನಿಸುತ್ತದೆ…!
So sad….!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.



