Connect with us

ರಾಜಕೀಯ

ಆಯುಷ್ಮಾನ್ ಭಾರತ : ಆರೋಗ್ಯ ವಿಮೆಯಿಂದ ಯಾರಿಗೆ ಲಾಭ?

Published

on

  • ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.
  • ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಖಾಸಗಿಯವರ ಮೂಲಕದ ಆರೋಗ್ಯ ವಿಮೆಯ ಪ್ರಯೋಜನ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಅಂಕಿ-ಅಂಶಗಳು ಹೇಳುತ್ತವೆ.

-ಕೆ.ಎಂ.ನಾಗರಾಜ್

ಮಾನವ ಹಕ್ಕುಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಮುಖ್ಯವಾಗಿ ಆರೋಗ್ಯ ಒಂದು ಹಕ್ಕು ಎಂದು ಪರಿಗಣಿತವಾದಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ, ಆರೋಗ್ಯ ಒಂದು ಹಕ್ಕು ಎಂಬುದನ್ನು ನಮ್ಮ ಸಂವಿಧಾನ ಇನ್ನೂ ಒಪ್ಪಿಕೊಂಡಿಲ್ಲ. ಸಂವಿಧಾನದ ಮಾರ್ಗದರ್ಶಿ ತತ್ವಗಳಡಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸುವಂತೆ ಸುಪ್ರೀಂ ಕೋರ್ಟಿನ ಆದೇಶಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ. ಹಣಕಾಸಿನ ತೊಂದರೆಯಿಂದಾಗಿ ಸುಮಾರು ಎಂಟು ಕೋಟಿಯಷ್ಟು ಭಾರತೀಯರು ಕಾಯಿಲೆ ಇದ್ದಾಗಲೂ ಯಾವುದೇ ಔಷಧೋಪಚಾರ ಪಡೆಯುತ್ತಿಲ್ಲ.

ಇನ್ನು ಔಷಧೋಪಚಾರ ಪಡೆಯುವವರ ಪರಿಸ್ಥಿತಿಯಂತೂ ಭಯಾನಕವಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ಹೇಳತೀರದಷ್ಟು ದುಬಾರಿಯಾಗಿದೆ. ಆರೋಗ್ಯ ರಕ್ಷಣೆಗಾಗಿ ಒಂದು ಕುಟುಂಬವು ಮಾಡುವ ಖರ್ಚಿನಲ್ಲಿ 67% ಹಣ ಸಣ್ಣ ಪುಟ್ಟ ಔಷಧೋಪಚಾರ ಮತ್ತು ಇತರ ಕೆಲವು ಖರ್ಚುಗಳಿಗೆ ತಗಲುತ್ತದೆ ಎಂಬುದಾಗಿ ವರದಿಗಳು ತಿಳಿಸುತ್ತವೆ.

ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.

ಮೋದಿ ಸರ್ಕಾರವು ತನ್ನ 2018-19ರ ಬಜೆಟ್‌ನಲ್ಲಿ ಆಯುಷ್ಮಾನ್ ಭಾರತ ಎಂಬ ಆರೋಗ್ಯ ವಿಮೆ ಯೋಜನೆಯನ್ನು ಘೋಷಿಸಿತ್ತು. 10 ಕೋಟಿ ಕುಟುಂಬಗಳಿಗೆ (ಅಂದರೆ, ಸುಮಾರು 50 ಕೋಟಿ ಮಂದಿಗೆ) ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಯು ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಸರ್ಕಾರ ಹೇಳಿಕೊಂಡಿತ್ತು ಮತ್ತು ಅದಕ್ಕಾಗಿ ಬಜೆಟ್‌ನಲ್ಲಿ 2000 ಕೋಟಿ ರೂ ನಿಗದಿಪಡಿಸಿತ್ತು. ವಿಮಾ ಕಂಪೆನಿಗಳ ಮೂಲಕ ಜಾರಿಯಾಗುವ ಈ ಯೋಜನೆಗೆ ಫಲಾನುಭವಿಗಳ ಸಂಖ್ಯೆಯ ಆಧಾರದ ಮೇಲೆ ಸರ್ಕಾರವು ಪ್ರೀಮಿಯಂ ತೆರಬೇಕಾಗುತ್ತದೆ. ಹಾಗಾಗಿ, ಸರ್ಕಾರ ನಿಗದಿಪಡಿಸಿದ 2000 ಕೋಟಿ ರೂ ಗಳಲ್ಲಿ 50ಕೋಟಿ ಮಂದಿಗೆ ಪ್ರೀಮಿಯಂ ಲೆಕ್ಕದಲ್ಲಿ ಒದಗುವ ಹಣ ತಲಾ 40 ರೂಗಳಾಗುತ್ತದೆ.

ಈ ಒಂದು ಅಂಶವೇ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ವಿಮೆಯ ನಿಜ ಸ್ವರೂಪವನ್ನು ಬಯಲು ಮಾಡಿತ್ತು. ಆದರೂ, ಬಿಜೆಪಿಯು 2019ರ ಚುನಾವಣೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು. ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದ ನಂತರವೂ ಮೋದಿ ಸರ್ಕಾರವು 2019-20ರ ಬಜೆಟ್‌ನಲ್ಲಿ ಈ ಯೋಜನೆಗೆ 6400 ಕೋಟಿ ರೂ ನಿಗದಿಪಡಿಸಿದೆ. ಹಾಗಾಗಿ, ಈ ಯೋಜನೆಯು ಅದೆಷ್ಟು ಟೊಳ್ಳು ಎಂಬುದನ್ನು ಅರ್ಥಮಾಡಿಕೊಳ್ಳಲು ಹಿಂದಿನ ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ ಸರ್ಕಾರಗಳು) ಜಾರಿಗೊಳಿಸಿದ್ದ ಆರೋಗ್ಯ ವಿಮಾ ಯೋಜನೆಗಳನ್ನು ಅವಲೋಕಿಸಬೇಕಾಗುತ್ತದೆ.

2002ರಲ್ಲಿ ಕರ್ನಾಟಕ ಸರ್ಕಾರವು ಯಶಸ್ವಿನಿ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಆರಂಭದಲ್ಲಿ, ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತಗೊಂಡಿದ್ದ ಈ ಕಿರು ಯೋಜನೆಯು ಸದಸ್ಯರಿಂದ ತಿಂಗಳಿಗೆ ತಲಾ ಐದು ರೂ ವಂತಿಕೆಯ ಮೂಲಕ ಸ್ವತಃ ಹಣ ಒದಗಿಸಿಕೊಳ್ಳುತ್ತಿತ್ತು. ಹೃದಯ ಸಂಬಂಧಿ ಮತ್ತು ಇತರ ಕೆಲವು ಶಸ್ತ್ರ ಚಿಕಿತ್ಸೆಗಳಿಗೆ ಗುರುತಿಸಿದ ಕೆಲವು ಆಸ್ಪತ್ರೆಗಳ ಮೂಲಕ ನಗದುರಹಿತ ಸೌಲಭ್ಯ ಒದಗಿಸಿತ್ತು.

ಈಚೆಗೆ, ಎರಡು ಲಕ್ಷದ ವರೆಗಿನ ವಿಮೆಯೊಂದಿಗೆ ವಾರ್ಷಿಕ ಪ್ರೀಮಿಯಂ ಮೊತ್ತವನ್ನು ಗ್ರಾಮೀಣದವರಿಗೆ 600ರೂ ಮತ್ತು ಪಟ್ಟಣದವರಿಗೆ 710 ರೂ ಏರಿಸಲಾಗಿದೆ ಮತ್ತು ಅನೇಕ ಆಸ್ಪತ್ರೆಗಳು ಮತ್ತು ಸುಮಾರು ಎಲ್ಲ ಶಸ್ತ್ರ ಚಿಕಿತ್ಸೆಗಳೂ ಯೋಜನೆಗೆ ಸೇರ್ಪಡೆಯಾಗಿವೆ. ಈ ನಡುವೆ, ಕರ್ನಾಟಕ ಸರ್ಕಾರವು ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯಭಾಗ್ಯ ಮುಂತಾದ ಎಲ್ಲ ಯೋಜನೆಗಳನ್ನೂ ಸೇರಿಸಿ ಆರೋಗ್ಯ ಕರ್ನಾಟಕ ಎಂಬ ಹೆಸರಿನ ಯೋಜನೆಯು ಗೊಂದಲದ ಗೂಡಾಗಿತ್ತು. ಆಯುಷ್ಮಾನ್ ಭಾರತ ಯೋಜನೆಯನ್ನು ಒಪ್ಪಿಕೊಳ್ಳಲಾಗದ ಪರಿಸ್ಥಿತಿಯಲ್ಲಿ, ಹಿಂದಿನ ಮತ್ತು ಇಂದಿನ ಮುಖ್ಯ ಮಂತ್ರಿ, ಇಬ್ಬರೂ, ಹಳೆಯ ಯಶಸ್ವಿನಿ ಯೋಜನೆಯನ್ನೇ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಯುಪಿಎ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಜನನಿ ಸುರಕ್ಷಾ ಮುಂತಾದ ಯೋಜನೆಗಳ ಜೊತೆಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ 30 ಸಾವಿರ ರೂ ವರೆಗಿನ ವಾರ್ಷಿಕ ಒಳ-ರೋಗಿ ಚಿಕಿತ್ಸೆಯನ್ನು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಕಲ್ಪಿಸಲಾಗಿತ್ತು.

ಈ ಯೋಜನೆಯನ್ನೇ ಮುಂದುವರೆಸಿದರೂ, ಅದೊಂದು ತನ್ನ ಹೊಸ ಯೋಜನೆಯೆಂಬಂತೆ ಪ್ರಸ್ತುತಪಡಿಸುತ್ತ ಮೋದಿ ಸರ್ಕಾರವು 2016-17ರ ಬಜೆಟ್‌ನಲ್ಲಿ, ಬಡ ಕುಟುಂಬಗಳಿಗೆ ಒಂದು ಲಕ್ಷ ರೂ ವರೆಗಿನ ಒಳ-ರೋಗಿ ಚಿಕಿತ್ಸೆಯನ್ನು ಮತ್ತು ಹಿರಿಯ ನಾಗರಿಕರಿಗೆ 30 ಸಾವಿರ ರೂ ಅಧಿಕವಾಗಿ ಒದಗಿಸುವುದಾಗಿ ಹೇಳಿತ್ತು. ಆದರೆ, ಈ ಯೋಜನೆ ಅನುಷ್ಠಾನಗೊಳ್ಳಲೇ ಇಲ್ಲ. ಬದಲಿಗೆ, ಮೂಗಿಗೆ ತುಪ್ಪ ಸವರುವ ಆಯುಷ್ಮಾನ್ ಭಾರತ ಯೋಜನೆಯ ಘೋಷಣೆಯಾಗಿದೆ.

ವಿಮೆಗೆ ಸಂಬಂಧಿಸಿದ ಅಂಕಿ-ಅಂಶಗಳ ಲೆಕ್ಕ ಹಾಕುವ ತಜ್ಞರ ಪ್ರಕಾರ, 50 ಕೋಟಿ ಮಂದಿಗೆ ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ ಯೋಜನೆಯ ತಲಾ ವಾರ್ಷಿಕ ಪ್ರೀಮಿಯಂ ಕನಿಷ್ಠ ಐದು ಸಾವಿರ ರೂ ಆಗುತ್ತದೆ. ಅಂದರೆ, ಸರ್ಕಾರವು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ರೂಗಳಷ್ಟು ಪ್ರೀಮಿಯಂ ತೆರಬೇಕಾಗುತ್ತದೆ. ಆದರೆ, ಈ ಬಾಬ್ತು ಮೋದಿ ಸರ್ಕಾರವು 2019-20ರ ಬಜೆಟ್‌ನಲ್ಲಿ ತೆಗೆದಿಟ್ಟಿರುವ ಹಣ ಕೇವಲ 6,400 ಕೋಟಿ ರೂ. ಇದು ಮೋದಿ ಸರ್ಕಾರದ ಮಾತಿಗೂ ಮತ್ತು ಕೃತಿಗೂ ಇರುವ ಅಂತರವನ್ನು ತೋರಿಸುತ್ತದೆ.

ವಾಸ್ತವವಾಗಿ ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಯೋಜನೆಯೇ ಆಗಿದೆ. ಖಾಸಗಿಯವರ ಮೂಲಕ ಆರೋಗ್ಯ ವಿಮೆಯ ಮೇಲೆ ಹೆಚ್ಚಿನ ಒತ್ತು ನೀಡುವ ಇಂತಹ ಯೋಜನೆಗಳಿಂದ ನಿಜವಾಗಿ ಯಾರಿಗೆ ಲಾಭ ಎಂಬುದನ್ನು ಅಧ್ಯಯನ ಮಾಡುತ್ತಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅಂಕುರ್ ವರ್ಮ ಪ್ರಕಾರ (Who Benefits from the Govt Funded Health Insurance? , ನ್ಯೂಸ್‌ಕ್ಲಿಕ್, ಡಿಸೆಂಬರ್ 3, 2019) 2014ರಿಂದ 2018ರ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಪ್ರಮಾಣವೇನೂ ಹೆಚ್ಚಿಲ್ಲ.

ವಿಮಾಯೋಜನೆಯನ್ನು ಸಾರ್ವತ್ರಿಕಗೊಳಿಸಿರುವ ರಾಜ್ಯಗಳಲ್ಲಿ ಮಾತ್ರವೇ ಆರೋಗ್ಯ ವಿಮೆಯ ಫಲಾನುಭವಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಇರುವುದು. ಈ ಆರೋಗ್ಯ ವಿಮೆಯ ಪ್ರಯೋಜನ ಕೂಡ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಹೇಳಬಹುದು.

ಅಂಕುರ್‌ವರ್ಮ ತಮ್ಮ ಲೇಖನದಲ್ಲಿ ಹೋಲಿಸಿರುವ ೭೫ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ 71ನೇ ಮತ್ತು 75ನೇ ಸುತ್ತಿನ ಮಾಹಿತಿಗಳು ಕುತೂಹಲಕಾರಿಯಾಗಿವೆ. ಜುಲೈ 2017 ಮತ್ತು ಜೂನ್ 2018ರ ನಡುವೆ, ಎನ್‌ಎಸ್‌ಎಸ್‌ಒ ನಡೆಸಿದ 75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ, ಆರೋಗ್ಯ ಸಂಬಂಧವಾಗಿ ಕುಟುಂಬಗಳು ಮಾಡುವ ಖರ್ಚಿನ ವಿವರಗಳನ್ನು ಸಂಗ್ರಹಿಸಿದ ವರದಿಯನ್ನು ನವೆಂಬರ್ 24ರಂದು ಬಿಡುಗಡೆ ಮಾಡಿದೆ. ಇದೇ ಸರ್ವೆಯನ್ನು ಹಿಂದೆ 2014ರ 71ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ ಮಾಡಲಾಗಿತ್ತು.

75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಪ್ರಕಾರ, 2017-18ರಲ್ಲಿ, 85.9% ಗ್ರಾಮೀಣ ಜನತೆ ಮತ್ತು 82% ನಗರವಾಸಿಗಳು ಯಾವುದೇ ಆರೋಗ್ಯ ವಿಮೆಗೆ ಒಳಪಟ್ಟಿರಲಿಲ್ಲ. ವಿಮೆಗೆ ಒಳಪಡದವರ ಸಂಖ್ಯೆ 2014ರ ಸರ್ವೆಯಲ್ಲಿಯೂ ಇಷ್ಟೇ ಇತ್ತು ಮತ್ತು ಈ ನಾಲ್ಕು ವರ್ಷಗಳ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಸಂಖ್ಯೆಯು ನಗರಗಳಲ್ಲಿ ಮಾತ್ರ ಕೇವಲ 1.1% ಹೆಚ್ಚಿದೆ.

ವಿಮೆಗೆ ಒಳಪಟ್ಟವರಲ್ಲಿ ಬಹುತೇಕ ಎಲ್ಲರೂ ಸರ್ಕಾರ-ಪ್ರಾಯೋಜಿತ ವಿಮೆಗೊಳಪಟ್ಟಿದ್ದಾರೆ (ಕೋಷ್ಟಕ-1). ಗ್ರಾಮೀಣದಲ್ಲಿ, 0.2% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು 0.3% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ. ನಗರಗಳಲ್ಲಿ, 3.8% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು ಕೇವಲ 2.9% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ.

ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಆಂಧ್ರ, ತೆಲಂಗಾಣ, ಕೇರಳ ಮತ್ತು ಛತ್ತೀಸ್‌ಘಡ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು ಅರ್ಹತೆಯನ್ನು ಸಡಿಲಗೊಳಿಸಿರುವುದರಿಂದಾಗಿ, ಬಹುತೇಕ ಎಲ್ಲರೂ ಆರೋಗ್ಯ ವಿಮೆಗೊಳಪಟ್ಟಿದ್ದಾರೆ. ಉಳಿದ ರಾಜ್ಯಗಳಲ್ಲಿ ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ನಿಕೃಷ್ಟವಾಗಿದೆ.

ಈ ಸರ್ವೆಯಿಂದ ಹೊರಹೊಮ್ಮುವ ಒಂದು ಮುಖ್ಯವಾದ ಅಂಶವೆಂದರೆ, ಬಡವರಿಗಾಗಿಯೇ ಇರುವ ಯೋಜನೆಗಳನ್ನೊಳಗೊಂಡ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೆ ಬಡ ಕುಟುಂಬಗಳಿಗಿಂತ ಅತಿ ಹೆಚ್ಚು ಸಂಖ್ಯೆಯ ಶ್ರೀಮಂತರೇ ಒಳಪಟ್ಟಿದ್ದಾರೆ (ಕೋಷ್ಟಕ-2).ಶೇ.20 ತಳ ಮಟ್ಟದ ಬಡ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಕೇವಲ 10% ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಇನ್ನೊಂದೆಡೆಯಲ್ಲಿ, ಶೇ.20 ಅತಿ ಶ್ರೀಮಂತ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಶೇ.22 ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಈ ಶ್ರೀಮಂತ ಕುಟುಂಬಗಳಲ್ಲಿ ಶೇ.20ರಷ್ಟು ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಯ ಸೌಲಭ್ಯ ಬಳಸಿಕೊಂಡಿದ್ದಾರೆ. ನಗರ ವಾಸಿಗಳಲ್ಲಿ ಸುಮಾರು 8% ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೊಳಪಟ್ಟಿದ್ದಾರೆ.

ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಸ್ವತಃ ಮಾಡಿದ ಖರ್ಚಿನಲ್ಲಿ ಸ್ವಲ್ಪ ಹಣ ಮರಳಿಸಲಾಗುತ್ತದೆ. ಈ ಪ್ರಕಾರವಾಗಿ, ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆ, ಖಾಸಗಿ ಉದ್ಯೋಗದಾತರು ಒದಗಿಸಿದ ಆರೋಗ್ಯ ವಿಮೆ ಮತ್ತು ಸ್ವಂತವೇ ಪಡೆದ ಆರೋಗ್ಯ ವಿಮೆಗಳ ಮೂಲಕ ಶ್ರೀಮಂತರು ಹೆಚ್ಚು ಹಣ ಮರಳಿ ಪಡೆಯುತ್ತಾರೆ (ಕೋಷ್ಟಕ-3). ಉದಾಹರಣೆಗೆ, ಗ್ರಾಮೀಣದಲ್ಲಿ, ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರ ಪ್ರಕರಣಗಳಲ್ಲಿ ಕೇವಲ 1.6% ಮತ್ತು ಶ್ರೀಮಂತರ 4% ಪ್ರಕರಣಗಳಲ್ಲಿ ಸ್ವಲ್ಪ ಹಣ ಮಾತ್ರ ಮರಳಿ ಪಡೆಯುತ್ತಾರೆ. ಬಡ ಕುಟುಂಬಗಳು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4% ಹಣ ಮರಳಿ ಪಡೆದರೆ, ಶ್ರೀಮಂತರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ 22% ಹಣ ಮರಳಿ ಪಡೆಯುತ್ತಾರೆ. ಅದೇ ರೀತಿಯಲ್ಲಿ, ನಗರ ವಾಸಿಗಳಲ್ಲಿ, ಬಡವರು 1.5% ಹಣ ಮರಳಿ ಪಡೆದರೆ, ಶ್ರೀಮಂತರು 22% ಹಣ ಮರಳಿ ಪಡೆಯುತ್ತಾರೆ.

ನಗರವಾಸಿಗಳು ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4 % ಹಣ ಮರಳಿ ಪಡೆದರೆ, ಶ್ರೀಮಂತರು 27% ಹಣ ಮರಳಿ ಪಡೆಯುತ್ತಾರೆ. ನಿರ್ದಿಷ್ಟವಾಗಿ, ಗ್ರಾಮೀಣ ಬಡವರು, ಒಂದು ಪ್ರಕರಣದಲ್ಲಿ, ಸರಾಸರಿ 279ರೂ ಮರಳಿ ಪಡೆದರೆ, ನಗರವಾಸಿ ಶ್ರೀಮಂತರು, ಒಂದು ಪ್ರಕರಣದಲ್ಲಿ, ಸರಾಸರಿ 12000 ರೂ ಮರಳಿ ಪಡೆಯುತ್ತಾರೆ. ಇದು, ಆರೋಗ್ಯ ವಿಮೆಯ ಒಳಗೊಳ್ಳುವಿಕೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಖರ್ಚಾದ ಹಣ ಮರಳಿಪಡೆಯುವಲ್ಲಿ ಅದೆಷ್ಟು ತಾರತಮ್ಯತೆ ಇದೆ ಮತ್ತು ಬಡವರು ಅದೆಷ್ಟು ತಿರಸ್ಕಾರಕ್ಕೊಳಗಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಂದು ಅಂದಾಜಿನ ಪ್ರಕಾರ, ದುಬಾರಿ ವೆಚ್ಚದ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿಯೇ ಪ್ರತಿ ವರ್ಷವೂ ಸುಮಾರು ಆರು ಕೋಟಿ ಮಂದಿ ಭಾರತೀಯರು ಬಡತನಕ್ಕೆ ತಳ್ಳಲ್ಪಡುತ್ತಾರೆ.

ಕೋಷ್ಟಕ – 1

2014 ಮತ್ತು 2018ರಲ್ಲಿ ಬೇರೆ ಬೇರೆ ಮಾದರಿಯ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡ ವ್ಯಕ್ತಿಗಳ ಶೇಖಡಾವಾರು
ಆರೋಗ್ಯ ವಿಮೆಯ ಮಾದರಿ 71ನೇ ಸುತ್ತು 2014ರಲ್ಲಿ 75ನೇ ಸುತ್ತು 2017-18ರಲ್ಲಿ

ಗ್ರಾಮೀಣ ಪ್ರದೇಶ

ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 13.1 13.5
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 0.6 0.3
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 0.3 0.2ಇತರೆ 0.1 0.1
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 85.9 85.9

ನಗರ ಪ್ರದೇಶ

ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 12 12.2
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 2.4 2.9
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 3.5 3.8
ಇತರೆ 0.2 0.2
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 82 80.9

ಕೋಷ್ಟಕ – 2

2018ರಲ್ಲಿ ಆರೋಗ್ಯ ವಿಮೆಗೊಳಗಾದ ಕುಟುಂಬಗಳ ಅನುಪಾತ (ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)
ಕುಟುಂಬಗಳ ಐದು ಗುಂಪುಗಳು
ಸರ್ಕಾರದ ಆರೋಗ್ಯ ವಿಮೆ ಬಳಸಿಕೊಂಡವರು ಯಾವುದೋ ಒಂದು ಆರೋಗ್ಯ ವಿಮೆಗೆ ಒಳಪಟ್ಟವರು ಗ್ರಾಮೀಣ ನಗರ ಗ್ರಾಮೀಣ ನಗರ
ಶೇ.20 ತಳಮಟ್ಟದಬಡಕುಟುಂಬಗಳು 10.1 8.1 10.2 9.8
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 9.2 11.9 9.4 14
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 12.5 14.2 12.9 18.2
ಶೇ.20 ಶ್ರೀಮಂತಕುಟುಂಬಗಳು (60-80) 15.4 13.2 16 20.4
ಶೇ.20 ಅತಿಶ್ರೀಮಂತಕುಟುಂಬಗಳು 20 13.5 21.9 33

ಕೋಷ್ಟಕ – 3

ಆಸ್ಪತ್ರೆಗೆ ಸೇರಿದ್ದಾಗ ಮಾಡಿದ ಖರ್ಚಿನಲ್ಲಿ ಶೇ. ಎಷ್ಟು ಮಂದಿ ಮರಳಿ ಹಣ ಪಡೆದರು ಮತ್ತು ಅದರ ಮೊತ್ತ ವೆಷ್ಟು(ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)

ಕುಟುಂಬಗಳ ಐದು ಗುಂಪುಗಳು

ಗ್ರಾಮೀಣ ನಗರ

ವೆಚ್ಚ ಮರಳಿ ಪಡೆದವರು(ಶೇ. ಸಂಖ್ಯೆ) ಮರಳಿ ಪಡೆದ ಸರಾಸರಿ ಮೊತ್ತ ವೆಚ್ಚ ಮರಳಿ ಪಡೆದವರು
(ಶೇ. ಸಂಖ್ಯೆ ಮರಳಿ ಪಡೆದ ಸರಾಸರಿ ಮೊತ್ತ
ಶೇ.20 ತಳಮಟ್ಟದಬಡಕುಟುಂಬಗಳು 1.6 279 1.5 562
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 1.1 211 3.4 1467
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 1.9 417 5.5 2527
ಶೇ.20 ಶ್ರೀಮಂತಕುಟುಂಬಗಳು (60-80) 2.2 705 7.8 4030
ಶೇ.20 ಅತಿಶ್ರೀಮಂತಕುಟುಂಬಗಳು 4 1373 21.8 12000

(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ‌ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ಕೆಎಸ್‌ಆರ್‌ಟಿಸಿ | 300 ಹೊಸ ಬಸ್ ಖರೀದಿಗೆ ಸರ್ಕಾರ ನಿರ್ಧಾರ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ರಾಜ್ಯದಲ್ಲಿ ಈಗಾಗಲೇ 375ಬಸ್ ಗಳನ್ನು ಖರೀದಿ ಮಾಡಲಾಗಿದೆ. ಮತ್ತೆ 300 ಹೊಸ ಬಸ್ ಗಳನ್ನ ಖರೀದಿ ಮಾಡಲಾಗುವುದು ಎಂದು ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಬಸ್ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಸರಕಾರದ ಗಮನಕ್ಕೂ ತರಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ನಗರಕ್ಕಿಂತ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯ ಅನುಕೂಲ ಮಾಡಲಾಗುವುದು. ಕಾನೂನು ಪ್ರಕಾರ ಹತ್ತು ಲಕ್ಷ ಕಿಲೋಮೀಟರ್ ಚಲಿಸಿದ ಬಸ್ ಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದಾರೆ. ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜನಸಂಖ್ಯೆ ನಿಯಂತ್ರಣ ; ಗರ್ಭ ನಿರೋಧಕ ಅಳವಡಿಕೆಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

Published

on

ಸುದ್ದಿದಿನಡೆಸ್ಕ್:ಜನಸಂಖ್ಯೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಗರ್ಭ ನಿರೋಧಕ ಅಳವಡಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ಒಡಂಬಡಿಕೆಯೊಂದಿಗೆ ಪ್ರಾಯೋಗಿಕವಾಗಿ ರಾಜ್ಯದ 4 ಜಿಲ್ಲೆಗಳನ್ನು ಗರ್ಭ ನಿರೋಧಕ ಅಳವಡಿಕೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಎಲ್ಲ ಜಿಲ್ಲೆಗಳ ಯೋಜನೆ ಸಂಪೂರ್ಣ ಯಶಸ್ವಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಡಬ್ಲ್ಯುಎಚ್‌ಒ ಒಡಂಬಡಿಕೆ ಯೊಂದಿಗೆ 6 ಜಿಲ್ಲೆಗಳಿಗೆ ಯೋಜನೆ ವಿಸ್ತರಣೆಯಾಗಲಿದೆ ಎಂದರು.

ಚಿತ್ರದುರ್ಗದಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಜನಸಂಖ್ಯಾ ಸ್ಫೋಟದಿಂದ ಭವಿಷ್ಯದ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಹೇಳಿದರು. ಜನಸಂಖ್ಯೆ ನಿಯಂತ್ರಣದಿಂದ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿ ಪಾಟೀಲ ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರೋಗ್ಯ ಸಚಿವ ಗುಂಡೂರಾವ್ ಚಿಗಟೇರಿ ಜಿಲ್ಲಾ ಆಸ್ಪತ್ರೆ ಭೇಟಿ ; 20 ಕೋಟಿ ವೆಚ್ಚದಲ್ಲಿ ನೂತನ ಬ್ಲಾಕ್ ನಿರ್ಮಾಣ

Published

on

ಸುದ್ದಿದಿನ,ದಾವಣಗೆರೆ:ಚಿಗಟೇರಿ ಜಿಲ್ಲಾ ಆಸ್ಪತ್ರೆ 400 ಬೆಡ್ ಸಾಮಥ್ರ್ಯದ ಸಿಬ್ಬಂದಿ ಇದ್ದರೂ 930 ಬೆಡ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿನ ಕಟ್ಟಡ ಹಳೆಯದಾಗುತ್ತಿದೆ. ಹಳೆ ಕಟ್ಟಡದ ಮಾದರಿಯಲ್ಲಿಯೇ ಶಿಥಿಲವಾದ ಕಟ್ಟಡ ತೆರವು ಮಾಡಿ ಹಂತ ಹಂತವಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲು ಪ್ರಸ್ತುತ ದಕ್ಷಿಣ ಬ್ಲಾಕ್ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ರೂ. 20 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.

ಅವರು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕರೊಂದಿಗೆ ಚಿಗಟೇರಿ ಆಸ್ಪತ್ತೆಗೆ ಭೇಟಿ ನೀಡಿ ಶಿಥಿಲಗೊಂಡಿರುವ ಕಟ್ಟಡ, ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕ, ತುರ್ತು ಚಿಕಿತ್ಸಾ ವಿಭಾಗ, ಡಯಾಲಿಸೀಸ್ ಕೇಂದ್ರ, ಶಸ್ತ್ರ ಚಿಕಿತ್ಸಾ ಕೊಠಡಿ, ವಾರ್ಡ್‍ಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

ಈಗಿರುವ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು ಅಲ್ಲಲ್ಲಿ ಶಿಥಿಲವಾಗುತ್ತಿದೆ, ಕಟ್ಟಡವನ್ನು ಬಹಳ ವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಎಲ್ಲಾ ಕಟ್ಟಡ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅಂದಾಜು 100 ಕೋಟಿಗಿಂತಲೂ ಹೆಚ್ಚು ಅನುದಾನ ಬೇಕಾಗುತ್ತದೆ. ಆದ್ದರಿಂದ ಅಗತ್ಯವಿರುವ ಬ್ಲಾಕ್‍ಗಳನ್ನು ಹಂತ ಹಂತವಾಗಿ ತೆರವು ಮಾಡುವ ಮೂಲಕ ಇದೇ ಮಾದರಿಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮೊದಲ ಹಂತವಾಗಿ ದಕ್ಷಿಣ ಭಾಗದಲ್ಲಿನ ಬ್ಲಾಕ್ ತೆರವು ಮಾಡಿ ಇದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ರೂ.20 ಕೋಟಿ ಅನುದಾನ ನೀಡಲಾಗುತ್ತದೆ. ಇದರಲ್ಲಿ ಮಾದರಿ ಶಸ್ತ್ರ ಚಿಕಿತ್ಸಾ ಕೊಠಡಿಗಳು ಸೇರಲಿವೆ ಎಂದರು.

ಇಲ್ಲಿನ ಆಸ್ಪತ್ರೆಗೆ ಇತರೆ ಜಿಲ್ಲೆಗಳಿಂದಲೂ ರೆಫರಲ್ ಆಗಿ ಹೆರಿಗೆಗಾಗಿ ಬರುತ್ತಿದ್ದು ತಿಂಗಳಿಗೆ 600 ರಿಂದ 700 ರಷ್ಟು ಹೆರಿಗೆಯಾಗುತ್ತಿದೆ. ಮತ್ತು ನವಜಾತ ಶಿಶುಗಳು ಹಾಗೂ ಮಕ್ಕಳ ಚಿಕಿತ್ಸೆಗಾಗಿ ಹೆಚ್ಚು ಜನರು ಆಗಮಿಸುತ್ತಿರುವುದರಿಂದ ಈಗಿರುವ ಸ್ಥಳಾವಕಾಶ ಸಾಕಾಗುವುದಿಲ್ಲ. ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದ್ದು ಒಂದು ವಾರದಲ್ಲಿ ಅಲ್ಲಿಗೆ ಸ್ಥಳಾಂತರಿಸಲು ತಿಳಿಸಿ ವಾರದಲ್ಲಿ ಟ್ರಾಮಾ ಕೇರ್ ಸೆಂಟರ್ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಲಾಗುತ್ತದೆ ಎಂದರು.

ಇಲ್ಲಿಗೆ ಎಂಆರ್‍ಐ ಸ್ಕ್ಯಾನ್ ಬೇಕೆಂದು ಬೇಡಿಕೆ ಇದ್ದು ಇನ್ನೆರಡು ತಿಂಗಳಲ್ಲಿ ನೀಡಲಾಗುತ್ತದೆ. ಶವಾಗಾರ ಸೇರಿದಂತೆ ಒಳಚರಂಡಿ, ಓವರ್‍ಹೆಡ್ ಟ್ಯಾಂಕ್, ಸೇರಿದಂತೆ ಮಕ್ಕಳ ನಿಗಾ ಘಟಕಕ್ಕೆ ವೆಂಟಿಲೇಟರ್, ಆರ್ಥೋ ವಿಭಾಗಕ್ಕೆ ಮಾದರಿ ಓಟಿ ಬೇಕೆಂದು ಸರ್ಜನ್ ಮನವಿ ಮಾಡಿದರು. ಆಸ್ಪತ್ರೆಯ ಬಳಕೆ ಅನುದಾನ ಮತ್ತು ಎಬಿಆರ್‍ಕೆ ಯಡಿ ಬರುವ ಅನುದಾನವನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ಅನುಮೋದನೆ ಪಡೆದು ಜಿಲ್ಲಾಧಿಕಾರಿಯವರಿಂದ ಮಂಜೂರಾತಿ ಪಡೆದು ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಸರ್ಜನ್ ತಿಳಿಸಿ ಯೂಸರ್ ಫಂಡ್ ಮತ್ತು ಎಬಿಆರ್‍ಕೆಯಡಿ 5 ಕೋಟಿಯಷ್ಟು ಅನುದಾನವಿದ್ದು ಇದನ್ನು ವೆಚ್ಚ ಮಾಡಿ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ತಿಳಿಸಿದರು.

24 ಗಂಟೆ ಫಾರ್ಮಸಿ ಓಪನ್‍ಗೆ ಸೂಚನೆ:ಆಸ್ಪತ್ರೆಗೆ ಬೇಕಾದ ಔಷಧಗಳನ್ನು ಬಳಕೆ ಅನುದಾನ ಮತ್ತು ಎಬಿಆರ್‍ಕೆಯಡಿ ಖರೀದಿ ಜೊತೆಗೆ ಅರೋಗ್ಯ ಇಲಾಖೆ ಉಗ್ರಾಣದಿಂದಲೂ ಔಷಧ ಪೂರೈಕೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿನ ಫಾರ್ಮಸಿ ದಿನದ 24 ಗಂಟೆಯು ತೆರೆದಿರುವ ಮೂಲಕ ಹೊರಗಡೆ ಚೀಟಿ ಬರೆಯವುದನ್ನು ತಪ್ಪಿಸಬೇಕೆಂದು ಸೂಚನೆ ನೀಡಿದರು.

ಶಸ್ತ್ರ ಚಿಕಿತ್ಸೆ ಹೆಚ್ಚಿಸಿ, ಆದಾಯ ಹೆಚ್ಚಿಸಿ ಸೌಕರ್ಯ ಪಡೆಯಿರಿ:ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ವಿದವಾದ ತಜ್ಞ ವೈದ್ಯರ ಜೊತೆಗೆ ಮೆಡಿಕಲ್ ಕಾಲೇಜ್ ತಜ್ಞ ವೈದ್ಯರು ಲಭ್ಯವಾಗುವುದರಿಂದ ಇಲ್ಲಿ ವಿನೂತನವಾದ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳುವ ಅವಕಾಶ ಇದೆ. ಆರ್ಥೋ ವಿಭಾಗದಲ್ಲಿ ಎಲ್ಲಾ ಬಗೆಯ ಶಸ್ತ್ರ ಚಿಕಿತ್ಸೆ ಮಾಡಬಹುದು ಮತ್ತು ನೇತ್ರ ಚಿಕಿತ್ಸಾ ವಿಭಾಗದಲ್ಲಿಯು ರೆಟಿನಾ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿ ಕೈಗೊಳ್ಳುವಂತಾಗಬೇಕು. ಇದರಿಂದ ಎಬಿಆರ್‍ಕೆಯಡಿ ಹೆಚ್ಚು ಅನುದಾನ ಲಭ್ಯವಾಗುವುದರಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ ಆಸ್ಪತ್ರೆಗೆ ಬೇಕಾದ ಓವರ್‍ಹೆಡ್ ಟ್ಯಾಂಕ್ ಮತ್ತು ಆಸ್ಪತ್ರೆಯೊಳಗೆ ಪ್ರಮುಖ ರಸ್ತೆಗಳನ್ನು ಪಾಲಿಕೆ ಅಥವಾ ಇತರೆ ಸರ್ಕಾರದ ಯೋಜನೆಯಲ್ಲಿ ಕೈಗೊಳ್ಳಲಾಗುತ್ತದೆ. ಆಸ್ಪತ್ರೆಯ ಮೂಲಭೂತ ಸೌಕರ್ಯಕ್ಕಾಗಿ ಈಗಿರುವ 7 ಕೋಟಿಯನ್ನು ಇತರೆ ಸೌಲಭ್ಯಗಳಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಚಿಗಟೇರಿ ಆಸ್ಪತ್ರೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಕ್ಷಣದ ಕ್ರಮವಾಗಿ ಅಂದಾಜು 50 ಕೋಟಿ ಅಗತ್ಯವಾಗಿದ್ದು ಈ ಅನುದಾನವನ್ನು ಸರ್ಕಾರದಿಂದ ತಂದು ದಾವಣಗೆರೆ ಜನರಿಗೆ ಆರೋಗ್ಯ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.

ಇನ್ನೊಂದು ವಾರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡುವ ಮೂಲಕ ಜನರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.

ಸಭೆಯಲ್ಲಿ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್.ಬಸವಂತಪ್ಪ, ದೇವೇಂದ್ರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಾ; ರಂದೀಪ್, ಎನ್‍ಹೆಚ್‍ಎಂ ಯೋಜನಾ ನಿರ್ದೇಶಕರಾದ ಡಾ; ನವೀನ್ ಭಟ್ ಪೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಹಾಗೂ ಚಿಗಟೇರಿ ಆಸ್ಪತ್ರೆ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending