ದಿನದ ಸುದ್ದಿ
ಅಂತಃಕರಣೆಯ ಹುಡುಕುತ್ತಾ..

- ಬಿ.ಶ್ರೀನಿವಾಸ
ಒಂದು ಊರಿನ ಮೌನ ಅರ್ಥವಾಗಬೇಕಾದರೆ, ದುಃಖ ಅರ್ಥವಾಗಬೇಕಾದರೆ ನಾವು ಏನನ್ನು ಮಾಡಬೇಕು? ನಾವು ಹೇಗೆ ಬದುಕಬೇಕು? ಗಾಯಗೊಂಡ ಬೆಟ್ಟ-ಗುಡ್ಡ ,ನದಿ ತೊರೆಗಳ ಬತ್ತಿಹೋದ ನೆಲದ ಕಣ್ಣಿಂದ ಪ್ರಾಣಿ-ಪಕ್ಷಿಗಳ ಆ ದೈನೇಸಿ ನೋಟಗಳಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರೀತಿ ,ಸಹಾನುಭೂತಿ ಗಳನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಮುತ್ತಲ ಬದುಕು ನರಕ ಸದೃಶವಾಗಿದ್ದರೂ ನೆಮ್ಮದಿಯಿಂದ ಉಣ್ಣ ಬಲ್ಲರು. ನಿದ್ರಿಸಬಲ್ಲರು, ಬರೆಯಬಲ್ಲರು.
ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಬಹುತೇಕ ಹಳ್ಳಿಗಳು ರೋಗಗ್ರಸ್ತ ಪೀಡಿತರಂತೆ ಕಾಣುತ್ತಿವೆ .ಕಳೆದ ದಶಕದ ಅವಧಿಯೊಂದರಲ್ಲಿ ನಡೆದ ಗಣಿಗಾರಿಕೆಯಿಂದಾಗಿ ಇಡೀ ಪ್ರದೇಶ ಶಾಶ್ವತ ಬರಪೀಡಿತ ಪ್ರದೇಶವಾಗಿ ಬಿಟ್ಟಿದೆ. ಅದಿರು ಸಾಗಾಣಿಕೆಯ ಹೆಚ್ಚಳದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಆಸ್ಫೋಟಿಸಿದೆ. ಅಪರೂಪದ ಗಿಡ-ಮರಗಳು, ಪಕ್ಷಿಗಳು ,ಅಳಿವಿನಂಚಿಗೆ ತಳ್ಳಲ್ಪಟ್ಟಿವೆ.
ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಟ್ಟವು. ಅದಿರು ಹೊತ್ತ ಲಾರಿಗಳಲ್ಲಿ ಮಕ್ಕಳ ಅಕ್ಷರಗಳನ್ನು ತುಂಬಿ ಕಳುಹಿಸಲಾಯಿತು. ಜನರು ಇಂತಹ ಬದುಕಿಗೆ ಹೊಂದಿಕೊಳ್ಳದೆ ಅನ್ಯ ಮಾರ್ಗವೇ ಇರಲಿಲ್ಲ. ಸತತ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನಡೆದ ಗಣಿಗಾರಿಕೆಯಿಂದಾಗಿ ಜನರ ಸಾಕ್ಷರತೆಯ ಪ್ರಮಾಣ ಮತ್ತು ಜೀವನಾಯುಷ್ಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ . ರಕ್ತಹೀನತೆಯಿಂದ ಬಳಲುವ ಮಹಿಳೆಯರ ಸಂಖ್ಯೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಅಧಿಕವಾಗಿದೆ.
ಇಲ್ಲಿನ ಸಂಪನ್ಮೂಲ ಇರುವುದೇ ತಮ್ಮ ಭೋಗ ವಿಲಾಸಕ್ಕೆ ಎಂದು ರಾಜಕೀಯವರ್ಗ,ಉದ್ಯಮಿಗಳು ಮತ್ತು ಕೆಲ ಆಡಳಿತಶಾಹಿ ಅಧಿಕಾರಿಗಳು ತಿಳಿದುಕೊಂಡಿದ್ದರು ಬಳ್ಳಾರಿ ಜಿಲ್ಲೆ ಇರುವುದೇ ಲೋಲುಪತೆ ಗೋಸ್ಕರ ಇಲ್ಲಿ ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಮತಗಳನ್ನು ಮತದಾರರನ್ನು ಕೊಂಡುಕೊಳ್ಳಬಹುದು, ರಾಜಕೀಯ ಚುನಾವಣಾ ಪ್ರಚಾರಕ್ಕೆ ದಿನವೊಂದಕ್ಕೆ ಲಕ್ಷದಂತೆ ತಿಂಗಳುಗಟ್ಟಲೆ ಪ್ರಚಾರ ಮಾಡಿದ ಸಿನಿತಾರೆಯರಿಗೇನೂ ಕಡಿಮೆ ಇಲ್ಲ.ಸಂಪನ್ಮೂಲಗಳ ಹಗಲು ದರೋಡೆ ರಾಜಾರೋಷವಾಗಿ ನಡೆದುಹೋಯಿತು.
ಈ ಊರುಗಳಲ್ಲಿ ಬುಡುಬುಡುಕಿಯವರಿದ್ದರು, ಹಗಲುವೇಷಗಾರರು, ನಕ್ಕುನಗಿಸುವ ಹಾಡುಗಾರರು, ಬಯಲಾಟದವರು,ಕುರ್ರಮಾಮುಡು ವಸ್ತುನ್ನಾಡು…ಟಿಮ್ ಟಿಮ್….ಎನ್ನುತ್ತ ಬರುವವರು,ಗಿಣಿಶಾಸ್ತ್ರ ಹೇಳುವವರು ,ಬಣ್ಣಬಣ್ಣದ ಹರಳು ಮಾರುವ ಮಹಾ ಗಟ್ಟಿಗಿತ್ತಿಯರು, ಕಾಡಿನ ಗರ್ಭ ಹೊಕ್ಕು ಒಣ ಮರದ ಕಟ್ಟಿಗೆ ತಂದು, ಹೊತ್ತು ಮಾರಿ ಜೀವಿಸುವ ಲಂಬಾಣಿ ಯಾಡಿಗಳಿದ್ದರು. ಜೊತೆಗೆ ಅವರ ಉಡಿಗಳಲ್ಲಿ ಕಾರಿ, ಕವಳಿ,ಪುಟ್ಲಾಸು, ಬಿಕ್ಕಿ ಹಣ್ಣಿನಂತಹ ಹಣ್ಣುಗಳು ಇರುತ್ತಿದ್ದವು.
ಆಹಾರ ಸಂಪಾದನೆಯ ಬೇರೆ ಮೂಲಗಳೇ ಗೊತ್ತಿಲ್ಲದ ಇವರಿಗೆ ಭಿಕ್ಷೆಯೊಂದೇ ಉಳಿದಿರುವ ಮಾರ್ಗ. ಇವರುಗಳೆಲ್ಲಾ ಸಮಾಜದ ಕಣ್ಣಿನಲ್ಲಿ ಅಪರಾಧಿಗಳಂತೆ ಕಾಣುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ .ಇವರನ್ನು ಇವರ ಕಲೆಯನ್ನು ಗೌರವಿಸುವ ಒಂದು ಸಮುದಾಯವೇ ನಾಶವಾಗಿಹೋಯಿತು.ರೊಕ್ಕಾ ಕೊಟ್ಟರೆ ಏನು ಬೇಕಾದುದನ್ನು ಪಡೆಯಬಹುದೆಂಬ ಅಹಂ-ಭಾವಹೀನ ಮನುಷ್ಯರನ್ನು ಸೃಷ್ಟಿಸುತ್ತಾ ನಡೆದಿದೆ.
ಸೊಂಡೂರು -ಬಳ್ಳಾರಿ ಜಿಲ್ಲೆಯ ಮಲೆನಾಡು .ಪುಟ್ಟ ಕಾಶ್ಮೀರ. ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರನಾಡು .ಅತಿ ಫಲವತ್ತಾದ ಮಣ್ಣು ತುಂಬಿದ ನೆಲ. ಜಲಮೂಲಗಳುಳ್ಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಸೊಂಡೂರಿನ ಸುತ್ತಮುತ್ತ ಸುಮಾರು 40 ಕಿಲೋಮೀಟರ್ ಉದ್ದದ, 15 ಕಿಲೋಮೀಟರುಗಳಷ್ಟು ಅಗಲದ ಬೆಟ್ಟಗಳಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಳಿವೆ. ಇಲ್ಲಿ ದೊರೆಯುವ ಹೆಮಟೈಟ್ ಉತ್ತಮ ದರ್ಜೆಯ ಕಬ್ಬಿಣದ ಅದಿರು. ಹಾಗೆಯೇ ಮ್ಯಾಂಗನೀಸ್ ಕೂಡ ಡೇರಸ್ ಫಿಲೈಟ್ ಎಂಬ ಕಲ್ಲುಗಳಲ್ಲಿ ಹೇರಳವಾಗಿ ದೊರೆಯುತ್ತದೆ.
ಇದೇ ರೀತಿಯ ಸಂಪತ್ತು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎಂದಲ್ಲ. ವಿಶ್ವದರ್ಜೆಯ ಶ್ರೇಷ್ಠ ಮಟ್ಟದ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸುಬ್ರಾಯನಹಳ್ಳಿ ,ರಾಮಘಡಗಳಂತಹ ಹಳ್ಳಿಗಳ ಶಿಖರಗಳಲ್ಲಿ ದೊರೆಯುತ್ತವೆ. ಈ ಅದಿರಿನ ವಿಶೇಷವೆಂದರೆ ಬಹುತೇಕ ಅದಿರುಗಳಲ್ಲಿ ಸೇರಿಹೋಗಿರುವ ಫಾಸ್ಪೇಟ್ ಮತ್ತು ಸಲ್ಫರ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದರಿಂದ ಇಲ್ಲಿನ ಮ್ಯಾಂಗನೀಸ್ ವಿಶ್ವ ಪ್ರಸಿದ್ಧವಾಗಿದೆ ಹಾಗಾಗಿ ಇಲ್ಲಿನ ಅದಿರಿಗೆ ವಿಶೇಷ ಬೇಡಿಕೆ.
ಬಳ್ಳಾರಿ ಜಿಲ್ಲೆಯ ಸೊಂಡೂರು ಕೇವಲ ಒಂದು ಊರು,ಪ್ರದೇಶ ಆಗಿರಬಹುದು .ಆದರೆ ಆತ ಊರಿನ ದುರಂತ ಇಡೀ ಪ್ರಪಂಚವನ್ನೇ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಊರಿನ ಅವನತಿಯ ಆರಂಭವಾಯಿತು. ಯಥೇಚ್ಛವಾಗಿ ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡುವಾಗ ಅದರ ಹೆಸರಿನಲ್ಲಿ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುವಾಗಲಂತೂ ಊರು ಆಹುತಿಯಾಗಿ ಬಿಟ್ಟಿತ್ತು. ಮನುಷ್ಯರು ಕೂಲಿಯ ಯಂತ್ರಗಳಾಗಿ ಹೋದರು.
ಮನುಷ್ಯನೇ ಸಂಶೋಧಿಸಿದ ಮೂಲ ಕಸುಬುಗಳಾದ ಕೃಷಿ ,ಬಡಗಿತನ, ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿಹೋದವು.ಎಷ್ಟೋ ದಿನಗಟ್ಟಲೆ,ತಿಂಗಳುಗಟ್ಟಲೆ, ಗಣಿಗಾರಿಕೆ ಬೆಟ್ಟಗಳ ತುತ್ತತುದಿಯಲ್ಲಿ ನಡೆಯುತ್ತಿತ್ತು.ಕೂಲಿಯವರೂ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತಿತ್ತು. ಕೂಲಿಯ ಹೆಣ್ಣು ಗಂಡುಗಳು ಅದಿರಿನ ನಿಕ್ಷೇಪದ ಬಯಲಿನಲ್ಲಿಯೇ ಮೈಥುನಕ್ಕಿಳಿದುಬಿಡುತ್ತಿದ್ದರು.ಮಕ್ಕಳು ಉಣ್ಣುವ ಅನ್ನದಲ್ಲಿ ಕೆಂಪುಧೂಳು ಸೇರಿಸಿಯೇ ಉಣ್ಣಬೇಕಾಗುತ್ತತ್ತು. ಕಂಟೇನರುಗಳಲ್ಲಿಯೇಇವರ ಜೀವನ ಮುಗಿದುಹೋಗಿರುತ್ತಿತ್ತು.ಮನುಷ್ಯ ಹೀಗೂ ಬದುಕಬಲ್ಲ ಎಂಬುದನ್ನು ಯಾರೂ ಕೂಡ ಯೋಚಿಸಲಿಲ್ಲ.
ಗಣಿ ಸಾವ್ಕಾರಗಳು ಸಾಮಾನ್ಯ ಜನರ ಕಣ್ಣಿಗೆ ಇಂದಿಗೂ ವೈಭೋಗದ ತುಣುಕುಗಳ ಹಾಗೆ ಕಾಣಿಸುತ್ತಿದ್ದಾರೆ. ಜನರನ್ನು ,ಅವರ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಷ್ಟು ಪ್ರಯತ್ನಗಳು ನಡೆದಿರುತ್ತವೆ ಎಂದರೆ, ಊರಿನಲ್ಲಿ ಎಲೆಕ್ಷನ್ ಇರಲಿ ,ಇಲ್ಲದಿರಲಿ ,ಧಣಿ- ರಾಜಕಾರಣಿಯ ವಿವಿಧ ರೀತಿಯ ಬಣ್ಣಬಣ್ಣದ ಕಟೌಟುಗಳು ದಾರಿಯುದ್ದಕ್ಕೂ ರಾರಾಜಿಸುತ್ತವೆ. ಪ್ರತಿವಾರವೂ ಕಟೌಟ್ಗಳು ಬದಲಾಗುತ್ತಲೇ ಇರುತ್ತದೆ.
ಇನ್ನು ಕೆಲ ಸಾಹುಕಾರ ಗಳಂತೂ ತಾವೇ ಆಧುನಿಕ ಶ್ರೀ ಕೃಷ್ಣದೇವರಾಯ ಎಂದು ಭಾವಿಸಿ ,ಅವನಂತೆಯೇ ವೇಷಧರಿಸಿ ನಿಂತು ಬೃಹತ್ ಕಟೌಟುಗಳನ್ನು ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಯಿತು.ಬಳ್ಳಾರಿಯ ಗಣಿಧಣಿಗಳದ್ದೂ ಇನ್ನೊಂದು ರೀತಿ.ಮುಂಜಾನೆಯ ಟಿಫನ್ನಿಗೆ ಬೆಂಗಳೂರಿನ ಎಂ.ಟಿ.ಆರ್.ಹೋಟೆಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋದರೆ,ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಹೈದರಾಬಾದ್ ವರೆಗೂ ವಾಕಿಂಗ್ ಹೋಗುವವರಿದ್ದರು.ವಿಮಾನದಲ್ಲಿ ಮಧ್ಯಾನ್ಹದ ಊಟಕ್ಕೆ ಬೊಂಬಾಯಿಗೆ ಹೋಗುತ್ತಿದ್ದರು.ರಾತ್ರಿ ಮತ್ತೆಲ್ಲಿಗೋ…!ಎಷ್ಟೋ ಜನ ಸಿನಿಮಾದವರು ರಾತ್ರೋರಾತ್ರಿ ಬಂದುಹೋಗುವುದನ್ನು ನೋಡಿದವರು ಇದ್ದರು.
ಲೋಲುಪತೆಗೆ ಜನರ ಬದುಕನ್ನೆ ಆಹುತಿ ತೆಗೆದುಕೊಂಡ ಧಣಿಗಳು,ಕೊನೆಗೆ ಜನರು ತಮ್ಮ ಕಡೆಗೆ ದೃಷ್ಟಿ ಹರಿಸಲೆಂದು ಸದಾ ಒಂದಿಲ್ಲೊಂದು ಸುದ್ದಿಯಿಂದ ಜನರನ್ನು ಭ್ರಮಾಲೋಕದಲ್ಲಿ ತಿರುಗುವಂತೆ ನೋಡಿಕೊಂಡರು.”ಸಾಮೂಹಿಕ ಮದುವೆ”ಗಳಂತಹ ಕೃತ್ರಿಮ ಕಾರ್ಯಕ್ರಮಗಳಿಗೆ ಕೈ ಹಾಕಿದರು.ಆ ಮೂಲಕ ಅಲ್ಲಿ ಬಂದ ವಧು-ವರರಿಗೆ ತಾಳಿ- ಬಟ್ಟೆ ಕೊಡುವುದರ ಮೂಲಕ “ದಾನಶೂರ”ರು ಎನಿಸಿಕೊಂಡರು.ಆದರೆ ಇಂತಹ ವಿವಾಹಗಳು ಹೆಸರಿನಲ್ಲಿ ಜನರು ಪ್ರಶ್ನೆ ಕೇಳುವುದನ್ನು,ಆಲೋಚನೆಯನ್ನೆ ಮಾಡದಿರುವ ಹಾಗೆ,ಅರ್ಥಮಾಡಿಕೊಳ್ಳುವ ಅವರು ಗುಣವನ್ನೆ ನಾಶಪಡಿಸಲಾಯಿತು.ಇಂತಹ ಗಣಿಧಣಿಗಳ ಭಿಕ್ಷೆಗೆ ಕೆಲ ಮಠಾಧೀಶರು ಕೈಚಾಚಿದರು.
ಜನರ ಬದುಕು ಕುಸಿಯಲು ಎಷ್ಟೊಂದು ಜನ ಒಂದಾದರು?
ನೆನೆಸಿಕೊಂಡರೆ ರೋಷ ಆವೇಶವೂ ಅಂತಕರುಣೆಯೂ ಒಟ್ಟಿಗೆಉಕ್ಕಿಬರುತ್ತದೆ.
ಜಿಲ್ಲೆಯ ಗಡಿಪ್ರದೇಶದ ಒಂದು ಬಹುಮುಖ್ಯವಾದ ಹಳ್ಳಿ ಕಮ್ಮತ್ತೂರು. ಈ ಊರಿನಲ್ಲಿ ನಡೆದಷ್ಟು ಗಣಿಗಾರಿಕೆ ಮತ್ತು ಡಿಪ್ಪಿಂಗ್ ಬೇರೆಲ್ಲೂ ನಡೆದಿರಲಿಕ್ಕಿಲ್ಲ .ಊರಿನ ಮನೆ ಗಳಿಗಿಂತಲೂ ಅಧಿಕವಾದ ಸ್ಟಾಕ್ ಯಾರ್ಡ್ಗಳು ನಿರ್ಮಾಣವಾದವು. ಧೂಳಿನಿಂದಾಗಿ ಮತ್ತು ವಿಪರೀತ ಶಬ್ದದಿಂದಾಗಿ ಅಸ್ತಮಕ್ಕೆ, ಕಿವುಡುತನಕ್ಕೆ ಬಲಿಯಾದವರಿಗೆ ಲೆಕ್ಕವಿಲ್ಲ. ಅಪರಿಮಿತ ಗಣಿಗಾರಿಕೆಯ ಪ್ರಭಾವದಿಂದಾಗಿ ಆಕ್ಸಿಜನ್ ಪ್ರಮಾಣ ಕುಸಿತ ಕಂಡಿತು. ಇಡೀ ಊರಿಗೆ ಊರೇ ಐಸಿಯುನಲ್ಲಿ ಇರುವಂತೆ ಭಾಸವಾಗುತ್ತಿದೆ.ಇಂತಹ ಎಷ್ಟೋ ಹಳ್ಳಿಗಳು ಉಸಿರಾಡಲು ಕಷ್ಟಪಡುತ್ತಿವೆ.
ಒಂದು ಕಾಲದ ರೈತ ಹೊಲ, ಗದ್ದೆ, ಮಣ್ಣನ್ನು ಪೂಜಿಸುತ್ತಿದ್ದ. ಆರಾಧಿಸುತ್ತಿದ್ದ .ಗುಡ್ಡಬೆಟ್ಟ ಸೂರ್ಯ ಚಂದ್ರ ತಾರೆಯರೇ ಆತನ ದೇವರುಗಳಾಗಿದ್ದವು. ದುಡಿಮೆಯೇ ಆತನ ಸಂಪತ್ತು. ಇಂತಹ ಕುಟುಂಬಗಳು ಇಲ್ಲದ, ಪ್ರಕೃತಿಯೂ ಇಲ್ಲದ ,ಅಭಿಶಾಪದ ಊರುಗಳಲ್ಲಿ ಶಾಪಗ್ರಸ್ತರಂತೆ ಮತ್ತೊಮ್ಮೆ ಯುದ್ಧಕ್ಕೆ ಹೊರಟ ಕೆಂಪು ಸೈನಿಕರಂತೆ ಇಲ್ಲಿನ ಜನ ಕಾಣಿಸುತ್ತಾರೆ.
ಎಲ್ಲಾ ಮುಗಿದ ಮೇಲೆ ಊರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ದಿನಾಂಕ: 6 -10-2016 ರಂದು ಸರ್ಕಾರ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಆದೇಶಿಸಿತು.
ಕಾಲವೀಗ ತಣ್ಣಗೆ ನಿಶ್ಯಬ್ದ..!
ಯಾರದ್ದೋ ಹೆಣವೊಂದು ಸದ್ದಿಲ್ಲದೆ ಬಿದ್ದುಕೊಂಡಿರುವ, ಇನ್ನೂ ಯಾರೋ ಬರುವವರಿದ್ದಾರೆ ಎಂದು ಹೆಣವನ್ನು ಎತ್ತದೆ, ಕಾದು ಕುಳಿತಿರುವಂತೆ ಸೊಂಡೂರಿನ ಬೀದಿಗಳಿವೆ.
ಬಡತನದ ರೇಖೆಗಳನ್ನೆಲ್ಲಾ ಮೈಮೇಲೆ ಹೊದ್ದು ಕುಳಿತವರಂತೆ ಕಾಣುವ ಮುದುಕರು ,ಸಾಯಲಿಕ್ಕೂ ಆಗದೆ ಬದುಕಲೂ ಆಗಿದೆ, ದುಸ್ಥಿತಿಗೆ ಕಾರಣವನ್ನು ಹುಡುಕುತ್ತಿರುವವರ ಹಾಗೆ ಹಣೆಗೆ ಕೈ ಹಚ್ಚಿ ಕುಳಿತ ದೃಶ್ಯಗಳು ಹೃದಯವನ್ನು ಕಲಕುತ್ತದೆ .ಇದು ನಾಗರಿಕ ಸಮಾಜವೊಂದು ತನ್ನದೇ ಊರಿನ ಸಮುದಾಯವನ್ನು ಚಿತ್ರಹಿಂಸೆಗೆ ಒಳಪಡಿಸಿದ ಹಾಗೆ.ನಾನು ಕಂಡು ಮಾತನಾಡಿಸಿದರವಲ್ಲಿ ” ನನ್ನ ಹಣೆಬರಹ…ನೋಡಪಾ, ಅಲಸಂದಿ,ಅವರೆ,ಜ್ವಾಳ,ನವಣಿ,
ಸಜ್ಜಿ ಬೆಳೀತಿದ್ದೆ. ಏಪೆಂಪ್ಸಿಗೆ ಹಾಕಿ ರೊಕ್ಕ ಎಣಿಸ್ಕಂಡು ಬರ್ತಿದ್ದೆ.ಮಕ್ಕಳು ಮೀರಿ ಎಲ್ಲ ಆರಾಮಾಗಿದ್ವಿ…ಮೈನ್ಸು ಮೈನ್ಸೂ ಅಂತಂದು ಮೈಯೆಲ್ಲಾ ತಗಂಬುಡ್ತು ನನ್ನಪ್ಪನೆ” ಎಂದು ವಿಷಾದದಿಂದ ಹೇಳುತ್ತಾರೆ.
ದೂರದ ಊರುಗಳ ಗೆಳೆಯರಿಗೆ ಸೊಂಡೂರು ಎನ್ನುವುದು ಸುಂದರ ಸ್ವಪ್ನದ ಹಾಗೆ, ಕಾಡುತ್ತಲೇ ಇರುತ್ತದೆ. ಗಣಿಗಾರಿಕೆಯಿಂದ ರಾಜ್ಯ,ದೇಶ ವ್ಯಾಪಿ ಸುದ್ದಿಯಾಗಿ, ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿಬಿಟ್ಟಿತು. ಈಗಲೂ ‘ಚುನಾವಣೆ ‘ಎಂಬ ಶಬ್ದ ಕೇಳಿದರೆ ಸಾಕು, ಜನರ ಕಣ್ಣಲ್ಲಿ ಹೊಳಪು ಮೂಡುತ್ತದೆ. ಬಾಯಲ್ಲಿ ನೀರೂರುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ನಾವು ಭಾವಿಸಿದ್ದು ,ಇಲ್ಲಿ ಅಣಕದಂತೆ ಭಾಸವಾಗುತ್ತಿದೆ.
*******
ಆದರೆ ,ಅಭಿವೃದ್ಧಿಯ ದೃಷ್ಟಿಯಿಂದ ಹೊರಗಿನ ಪ್ರಪಂಚಕ್ಕೆ ಸಾಕಷ್ಟು ಶ್ರೀಮಂತ, ಎಲ್ಲಾ ಬ್ರಾಂಡೆಡ್ ಕಂಪನಿಗಳ ಅಂಗಡಿಗಳಿರುವ ಹೊಸಪೇಟೆ-ಬಳ್ಳಾರಿಯಂತಹ ಊರುಗಳಲ್ಲಿ ಸ್ಟಾರ್ ಹೋಟೆಲ್ಗಳು ನಡೆಯುತ್ತಿವೆ. ಸೊಂಡೂರಿನ ಗಾಂಧಿ ಕರಕುಶಲ ಕೈಗಾರಿಕಾ ಕೇಂದ್ರಕ್ಕೂ ಬೀಗ ಬಿದ್ದಿದೆ.
ಹೌದು, ಅಭಿವೃದ್ಧಿಯೆಂದರೆ ಈ ಪ್ರದೇಶಗಳ ಜನತೆ ಹಸಿವಿನಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಲಿಂಗ ಅಸಮಾನತೆಯಿಂದ ಸಾಮಾಜಿಕ ಅಸಮಾನತೆಯ,ಅವಮಾನಳಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಎನ್ನುವ ಅಮರ್ತ್ಯಸೇನರು ಕೇಳುವ ಪ್ರಶ್ನೆಗಳನ್ನು ಕೇಳಿಕೊಂಡರೆ…ಎಲ್ಲಾ ಪ್ರಶ್ನೆಗಳಿಗೂ “ಇಲ್ಲ”ಎಂಬ ರೆಡಿ ಉತ್ತರ ದೊರಕುವುದು.
ಈ ಎಲ್ಲಾ ಸ್ವಾತಂತ್ರ್ಯಗಳನ್ನು ಯಾರೋ ಕೊಡಲು ಸಾಧ್ಯವಿಲ್ಲ.ಅವರು ಪಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.
***
ವಯಸ್ಸಾಗಿ ಮುದುಕರಾದಾಗ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಕುಳಿತು ಅಂತರ್ಮುಖಿಗಳಾಗಿಬಿಡುವುದು ವಯೋಸಹಜ ಗುಣ. ಆದರಿಲ್ಲಿ ಮಕ್ಕಳೂ ಅಂತರ್ಮುಖಿಗಳಾದರೆ… ?ಕಥೆಗಳು ಬೆಂಕಿಯ ಕೆನ್ನಾಲಗೆ ಹಾಗೆ ಸುಡುತ್ತಿವೆ. ಈ ಜನಗಳು ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳನ್ನು ಹಿಡಿದಿಡಲು ಒಂದು ಜೀವನ ಸಾಕಾಗುವುದಿಲ್ಲ ಎನಿಸುತ್ತಿದೆ.
ಇಲ್ಲಿನ ಎಲ್ಲಾ ಅಕ್ಷರಗಳು ವರ್ತಮಾನದ ಒತ್ತಡಗಳಿಂದಲೇ ಬಂದಿರುವುವು ಎಂದೇ ಭಾವಿಸಿದ್ದೇನೆ. ಹಿಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಘಟನೆಗಳು, ನಂತರದಲ್ಲಿ ಗಣಿಗಾರಿಕೆಯೆಂಬ ಪೀಕ್ ಅವಧಿಯಲ್ಲಿನ ಘಟನೆಗಳು ,ಜನರ ಬದುಕು, ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೀದಿಪಾಲಾದ ಕುಟುಂಬಗಳ ರೋದನವನ್ನು ಕೆಲಮಟ್ಟಿಗಾದರೂ ತಿಳಿಸಬೇಕಿತ್ತು.
ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರ್ಥಮಾಡಿಸಿದ್ದು ಈ ಬರಹಗಳೆ.ಎದೆಯ ಮೂಲೆಯಲ್ಲಿ ಅಡಗಿದ್ದ ಭಾವಗಳು ಕಾಡಿದಾಗಲೆಲ್ಲ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು,ಇತ್ತೀಚೆಗೆ ಮೊಬೈಲಿನಲ್ಲಿ ಟೈಪಿಸಿ ಕೊಂಡು ನಿರಾಳವಾಗುತ್ತಿದ್ದೆ.ಬಹಳ ವರ್ಷಗಳ ಹಿಂದಿನಿಂದಲೂ ಹಿಡಿದಿಟ್ಟುಕೊಂಡಿದ್ದ ಕರಾಳ ಸತ್ಯಗಳನ್ನು ಬರೆಯುವಾಗ ಕಣ್ಣು ಮುಂಜಾದದ್ದು,ಎದೆ ಭಾರವಾದದ್ದೂ ಇದೆ.ಸಾಮಾನ್ಯ ಕೃಷಿಕನೋರ್ವ ಕಣ್ಣೆದುರೇ ಹುಚ್ಚನಾಗಿ ತಿರುಗಾಡುವಾಗ ತುಂಬಾ ಡಿಸ್ಟರ್ಬ್ ಆಗಿದ್ದಿದೆ.
ಹೀಗೆ ನನ್ನನ್ನು ,ಡಿಸ್ಟರ್ಬ್ ಮಾಡಿದ ಈ ಭಾವಗಳು ನನ್ನ ಎದೆಯಿಂದ ಹಾರಿ ಹೀಗೆ ಹೊರಬರುವ ತನಕವೂ ಸಮಾಧಾನವಿದ್ದಿಲ್ಲ.ನಾನು ಸಾಮಾಜಿಕ ಜವಾಬ್ದಾರಿಯೊಂದಿಗೆ ನನಗನಿಸಿದ ಭಾವಗಳನ್ನು ಹೊರಹಾಕಿರುವೆ…..ನಿಟ್ಟುಸಿರಿನೊಂದಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ11 hours ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ1 day ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ12 hours ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ
-
ದಿನದ ಸುದ್ದಿ43 mins ago
ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ