ದಿನದ ಸುದ್ದಿ
ಕೋವಿದ್ 19 – ಇನ್ನೆಷ್ಟು ಎಡವಲು ಸಾಧ್ಯ..?
- ನಾ ದಿವಾಕರ
ಭಾರತದಲ್ಲಿ ಕೊರೋನಾ ಈಗ ಸರಕಾರದ ಕಚೇರಿಯ ಕಡತಗಳಲ್ಲೇ ಏರಿಳಿತ ಕಾಣುತ್ತಿದೆ. ಸರ್ಕಾರಿ ಪ್ರೇರಿತ ತಜ್ಞರ ತಂಡಗಳು ಕೊರೋನಾ ವ್ಯಾಪಿಸುತ್ತಿದೆ, ಇನ್ನೂ ಹೆಚ್ಚಾಗುತ್ತದೆ, ದೇಶ ಶೇ 50ರಷ್ಟು ಜನರನ್ನು ಬಾಧಿಸುತ್ತದೆ ಎಂದು ಹೇಳುತ್ತಲೇ, ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ, ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುವ ಮೂಲಕ ಕೊರೋನಾ ಸೃಷ್ಟಿಸಿದ ಗೊಂದಲ ಮತ್ತು ಆತಂಕಕ್ಕಿಂತಲೂ ಹೆಚ್ಚಿನ ಗೊಂದಲ ಸೃಷ್ಟಿಸಲಾಗುತ್ತಿದೆ. ಸಮಸ್ತ ಭಾರತೀಯರನ್ನು ಅತಂಕಕ್ಕೆ ಸಿಲುಕಿಸಿರುವ ಒಂದು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಯಾವ ಸಂಸ್ಥೆ ಅಧಿಕೃತವಾದ, ವೈಜ್ಞಾನಿಕ ನೆಲೆಗಟ್ಟಿನ, ವಿಶ್ವಾಸಾರ್ಹ ಮಾಹಿತಿ ಒದಗಿಸಬೇಕು ಎಂಬುದನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಈವರೆಗೂ ನಿರ್ಧರಿಸಿಲ್ಲ.
ಪ್ರತಿಯೊಂದು ಬಾರಿ ಕೇಂದ್ರ ಸರ್ಕಾರದ ತಜ್ಞರ ಸಮಿತಿ ಒಂದು ವರದಿ ಸಲ್ಲಿಸಿದ ಕೂಡಲೇ ವಿಜ್ಞಾನಿಗಳು ಅಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಆಕ್ಷೇಪದ ನೆಲೆ ಮತ್ತು ಹಿನ್ನೆಲೆ ಎರಡೂ ಜನಸಾಮಾನ್ಯರಿಗೆ ನಿಲುಕದಂತೆಯೇ ಇರುತ್ತದೆ. 2021ರ ಫೆಬ್ರವರಿ ವೇಳೆಗೆ ಭಾರತದಲ್ಲಿ ಶೇ 50ರಷ್ಟು ಜನರು ಕೊರೋನಾ ಸೋಂಕಿತರಾಗಿರುತ್ತಾರೆ ಎಂದು ಹೇಳುವ ತಜ್ಞರೇ ಫೆಬ್ರವರಿ ಅಂತ್ಯದ ವೇಳೆಗೆ ಕೊರೋನಾ ನಿಯಂತ್ರಣಕ್ಕೆ ಬರಲಿದೆ ಎಂದೂ ಹೇಳಿದ್ದಾರೆ. (ಮಂಗಳವಾರದ ಪ್ರಜಾವಾಣಿ ವರದಿ ಓದಿ). ಈಗ ಭಾರತದಲ್ಲಿ ಸೋಂಕಿತರ ಸಂಖ್ಯೆ 76 ಲಕ್ಷ ತಲುಪಿದೆ. ಜನವರಿ 2021ರ ವೇಳೆಗೆ ಇದೇ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋದರೆ ಒಂದು ಕೋಟಿ ತಲುಪುತ್ತದೆ.
ಕೇಂದ್ರ ಸರ್ಕಾರದ ಆರೋಗ್ಯ ಸಚಿವರ ಹೇಳಿಕೆಯ ಪ್ರಕಾರ ಕಳೆದ ಕೆಲವು ದಿನಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದು ಚಳಿಗಾಲ ಮತ್ತು ಹಬ್ಬದ ದಿನಗಳು ಎದುರಾಗುವುದರಿಂದ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ತಜ್ಞರ ಸಮಿತಿ ಹೇಳುವಂತೆ ಫೆಬ್ರವರಿ 2021ರ ವೇಳೆಗೆ ದೇಶದ ಶೇ 50ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಎಂದರೆ ಕನಿಷ್ಟ 65 ಕೋಟಿ ಸೋಂಕಿತರು ಇರುತ್ತಾರೆ. ಅದೇ ತಿಂಗಳ ಅಂತ್ಯಕ್ಕೆ ಕೊರೋನಾ ನಿಯಂತ್ರಣಕ್ಕೆ ಬರಲಿದೆ ಎಂದೂ ಹೇಳಲಾಗಿದೆ. ಈನಡುವೆ ಕೆಲವು ರಾಜ್ಯಗಳಲ್ಲಿ ಕೊರೋನಾ ಸಮುದಾಯ ಪ್ರಸರಣ ಇದೆ ಎಂದು ಕೊನೆಗೂ ಕೇಂದ್ರ ಆರೋಗ್ಯ ಸಚಿವರು ಒಪ್ಪಿಕೊಂಡಿದ್ದಾರೆ. ಇದು ಅರ್ಧಸತ್ಯ ಎನ್ನುವುದು ಅವರಿಗೂ ತಿಳಿದಿದೆ.
ಏಪ್ರಿಲ್ ತಿಂಗಳಲ್ಲೇ ಸಮುದಾಯ ಪ್ರಸರಣ ಆರಂಭವಾಗಿತ್ತು ಎಂದು ತಜ್ಞರು, ವಿಜ್ಞಾನಿಗಳು ಮತ್ತು ವೈದ್ಯರು ಎಚ್ಚರಿಕೆ ನೀಡಿದ್ದರು. ಆದರೆ ಲಾಕ್ ಡೌನ್ ಇದ್ದುದರಿಂದ ಇದು ಸಾಧ್ಯವಿಲ್ಲ ಎಂದು ನಿರೂಪಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಹಾಗಾಗಿ ತಜ್ಞರ ಅಭಿಪ್ರಾಯಗಳನ್ನು ತಿರಸ್ಕರಿಸಲಾಗಿತ್ತು. ಇತ್ತೀಚೆಗೆ ತಜ್ಞರ ಸಮಿತಿ ನೀಡಿರುವ ವರದಿ ವೈಜ್ಞಾನಿಕವಾಗಿಲ್ಲ ಎಂದೂ, ವಿಸ್ತೃತವಾದ ಗಣಿತೀಯ ಮಾದರಿಗಳ ಮೂಲಕ ನೀಡುವ ಅಂದಾಜುಗಳು ವಿಶ್ವಸನೀಯವಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ಸಾಂಕ್ರಾಮಿಕ ಪಿಡುಗು ಇಡೀ ದೇಶದ ಜನಸಾಮಾನ್ಯರನ್ನು ಕಂಗೆಡಿಸುತ್ತಿರುವಾಗ ಈ ರೀತಿಯ ವ್ಯತಿರಿಕ್ತ ಹೇಳಿಕೆಗಳು ಬರುವುದೇ ದೇಶ ಅಸ್ವಸ್ಥವಾಗಿದೆ ಎನ್ನುವುದಕ್ಕೆ ಸಾಕ್ಷಿ.
ಇನ್ನು ಈ ಸರ್ಕಾರ ನೇಮಿಸಿರುವ ತಜ್ಞರ ವರದಿಯನ್ನು ತಿರಸ್ಕರಿಸಿರುವ ವಿಜ್ಞಾನಿಗಳು ತಮ್ಮ ಹೆಸರು ಹೇಳುವುದಕ್ಕೂ ಹಿಂಜರಿಯುವುದನ್ನು ನೋಡಿದರೆ, ಕೊರೋನಾ ಸಹ ಹಥ್ರಾಸ್ ಸಂತ್ರಸ್ತೆಯಂತೆ ಪೊಲೀಸ್ ನಿಯಂತ್ರಣಕ್ಕೆ ಒಳಪಟ್ಟಿದೆ ಎನಿಸುತ್ತದೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೇ ಮಧ್ಯ ರಾತ್ರಿ ಸುಟ್ಟುಹಾಕುವ ವ್ಯವಸ್ಥೆಯಲ್ಲಿ ಕೊರೋನಾ ಸಂಬಂಧಿತ ಮಾಹಿತಿಯನ್ನು ಹೂತು ಹಾಕುವುದು ಕಷ್ಟವೇನಲ್ಲ ಅಲ್ಲವೇ ?
ಜನರ ನ್ನು ಸಾವಿನಂಚಿಗೆ ದೂಡುತ್ತಿರುವ, ಬದುಕುವವರನ್ನು ದೀವಾಳಿ ಮಾಡುತ್ತಿರುವ, ಖಾಸಗಿ ಆಸ್ಪತ್ರೆಗಳ ಲೂಟಿಗೆ ಮುಕ್ತ ಅವಕಾಶ ಮಾಡಿಕೊಡುತ್ತಿರುವ ಒಂದು ಸಾರ್ವತ್ರಿಕ ಸಮಸ್ಯೆಯ ಬಗ್ಗೆ ದೇಶದ ಪ್ರತಿಷ್ಠಿತ ವಿಜ್ಞಾನಿಗಳು ತಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಹೆದರುತ್ತಾರೆ ಎಂದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಗೂ ಪೊಲೀಸ್ ವ್ಯವಸ್ಥೆಗೂ ಹೆಚ್ಚೇನೂ ವ್ಯತ್ಯಾಸ ಇಲ್ಲ ಎಂದೇ ಅರ್ಥ ಅಲ್ಲವೇ ?
ಪ್ರಜೆಗಳ ಆರೋಗ್ಯ ರಕ್ಷಣೆಯ ವಿಚಾರದಲ್ಲಿಯಾದರೂ ಆಡಳಿತ ವ್ಯವಸ್ಥೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕಲ್ಲವೇ ? ಇದು ಕನಿಷ್ಟ ವ್ಯವಧಾನ , ಸಾಮಾಜಿಕ ಪ್ರಜ್ಞೆ ಮತ್ತು ನಾಗರಿಕ ಕಾಳಜಿ ಇರುವ ಯಾವುದೇ ಸರ್ಕಾರ ಕ್ಕೆ ತಿಳಿದಿರಬೇಕು. ಗೊಂದಲಮಯ ವರದಿಗಳನ್ನು ನೀಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ತನ್ನ ತಪ್ಪುಗಳನ್ನು ಮರೆಮಾಚುವುದು ಜಗತ್ತಿನ ಕಣ್ಣಿಗೆ ಮಾಸ್ಕ್ ಹಾಕಿದಂತೆ ಅಲ್ಲವೇ ? ಮೋದಿ ಸರ್ಕಾರ ಮಾಡುತ್ತಿರುವುದು ಇದನ್ನೇ. ಇಡೀ ವಿಶ್ವವೇ ಭಾರತದಲ್ಲಿ ವಿಧಿಸಿದ ಅವೈಜ್ಞಾನಿಕ ಲಾಕ್ ಡೌನ್ ನಿಂದ ಉಂಟಾದ ದುಷ್ಪರಿಣಾಮಗಳ ಬಗ್ಗೆ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವಾಗಲೂ ಇಂದಿಗೂ ಲಾಕ್ ಡೌನ್ ಮಾಡಿದ್ದರಿಂದಲೇ ಕೊರೋನಾ ಪ್ರಸರಣ ಕಡಿಮೆಯಾಗಿದೆ ಎಂದು ಹೇಳುತ್ತಿರುವುದೇ ಇದಕ್ಕೆ ಸಾಕ್ಷಿ.
ಒಂದು ನಿತ್ಯ ಜೀವನದ ಉದಾಹರಣೆಯನ್ನು ನೋಡೋಣ. ಮೂರು ನಾಲ್ಕು ದಶಕಗಳ ಹಿಂದೆ ಹಸುಗೂಸು ಇರುವ ಮನೆಯಲ್ಲಿ ಮುಂಬಾಗಿಲಿಗೆ ಒಂದು ಮೂರಡಿಯ ಮರದ ತಾತ್ಕಾಲಿಕ ಗೇಟ್ ಇಡುತ್ತಿದ್ದರು. ಎರಡೂ ಬದಿಯ ಫ್ರೇಂನೊಳಗೆ ಕುಳಿತುಕೊಳ್ಳುವಂತೆ ಅದನ್ನು ಇಡಲಾಗುತ್ತಿತ್ತು. ಮಗು ಅಂಬೆಗಾಲಿನ ಹಂತ ದಾಟಿ ನಡೆಯುವಂತಾದ ಮೇಲೆ ಇದನ್ನು ಬಳಸಲಾಗುತ್ತಿತ್ತು.
ಹೊಸ್ತಿಲು ದಾಟಿ ಓಡಿಬಿಡುತ್ತದೆ ಎನ್ನುವ ಭಯದಿಂದ. ಭಾರತ ಸರ್ಕಾರದ ಲಾಕ್ ಡೌನ್ ನೀತಿ ಇದನ್ನು ನೆನಪಿಸುತ್ತದೆ. ಕೊರೋನಾ ತೊಟ್ಟಿಲಿನಲ್ಲಿದ್ದಾಗ ಬಾಗಿಲಿಗೆ ಅಡ್ಡಲಾಗಿ ಒಂದು ಸಣ್ಣ ಗೇಟ್ ಇಟ್ಟಿದ್ದರು. ನಡೆಯುವಂತಾದ ಮೇಲೆ ತೆಗೆದುಬಿಟ್ಟರು. ಈಗ ಸರ್ಕಾರ ಹೇಳುತ್ತಿದೆ ಆಗ ಗೇಟ್ ಇಡದೆ ಇದ್ದಿದ್ದರೆ ಮಗು ಊರೆಲ್ಲಾ ಸುತ್ತಾಡಿಬಿಡುತ್ತಿತ್ತು ಎಂದು. ಈಗೇನು ಗೂಡಿನಲ್ಲಿ ಸೇರಿಕೊಂಡಿದೆಯೇ ? ಸರ್ಕಾರವೇ ಉತ್ತರಿಸಬೇಕು.
ಈಗ ಕಳೆದ ನಾಲ್ಕು ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಇದೇ ವೇಳೆ ದೇಶವ್ಯಾಪಿ ಪರೀಕ್ಷೆಯ ಪ್ರಮಾಣವೂ ಪ್ರತಿದಿನ 10 ಲಕ್ಷಕ್ಕಿಂತಲೂ ಕಡಿಮೆ ಇದೆ. ಇಷ್ಟೇ ಸೂತ್ರ. ನವಂಬರ್ ತಿಂಗಳ ಅಂತ್ಯದೊಳಗೆ ಕೊರೋನಾ ತಗ್ಗುತ್ತಿದೆ ಎಂದು ವಿಶ್ವ ಮಾರುಕಟ್ಟೆಗೆ ಮನದಟ್ಟುಮಾಡಿ, ಆರ್ಥಿಕತೆ ಸುಧಾರಿಸಿದೆ ಎಂದು ತೋರಿಸದಿದ್ದರೆ ಜಿಡಿಪಿ ಮತ್ತೊಮ್ಮೆ ಕುಸಿದು ದೇಶ ಕಂಗಾಲಾಗುತ್ತದೆ.
ಅದಕ್ಕಾಗಿ ಇತ್ತೀಚೆಗೆ ವಿತ್ತ ಸಚಿವರ ಮತ್ತೊಂದು ಪ್ಯಾಕೇಜ್ ಘೋಷಣೆ, ರಾಜ್ಯ ಸರ್ಕಾರಗಳ ಪರವಾಗಿ ಒಂದು ಲಕ್ಷ ಕೋಟಿ ರೂಗಳ ಸಾಲ, ಕೇಂದ್ರ ನೌಕರರಿಗೆ ಮುಂಗಡ ಹಣ ಇತ್ಯಾದಿ. ಈಗ ಕೊರೋನಾ ಪರೀಕ್ಷೆಗಳನ್ನು ಕಡಿಮೆ ಮಾಡುವ ಮೂಲಕ , ಗುಣಮುಖರಾದವರ ಸಂಖ್ಯೆಯನ್ನೇ ಪ್ರಧಾನವಾಗಿ ಬಿಂಬಿಸುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ. ಹಾಗಾದರೆ ಫೆಬ್ರವರಿ 2021ರ ವೇಳೆಗೆ ದೇಶದ ಶೇ 50ರಷ್ಟು ಜನರು ಹೇಗೆ ಸೋಂಕಿತರಾಗುತ್ತಾರೆ ? ಅಲ್ಲಾದೀನನ ದೀಪದಲ್ಲಿ ಅಡಗಿದ್ದು ಹಠಾತ್ತನೆ ಎರಗಿಬಿಡುತ್ತದೆಯೇ ?
ಹಬ್ಬ ಹರಿದಿನಗಳು ಎದುರಾಗುತ್ತಿವೆ. ನವರಾತ್ರಿ ಸಂಭ್ರಮ ಆರಂಭವಾಗಿದೆ, ಮದುವೆ ಸಮಾರಂಭಗಳು ಹೆಚ್ಚಾಗುತ್ತವೆ, ದೀಪಾವಳಿಯ ಸಂಭ್ರಮ ಬರಲಿದೆ, ದಸರಾ ಈಗಾಗಲೇ ಜನದಟ್ಟಣೆಯಿಂದ ಅಪಾಯದ ಮುನ್ಸೂಚನೆ ನೀಡುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಸೂಚನೆ ಏನು ? “ ಕೊರೋನಾದಿಂದ ಪಾರಾಗಲು, ಮಹಾಜನರೇ, ನಿಮ್ಮ ಮುಂದಿರುವ ಆಯ್ಕೆಗಳು ಮೂರೇ ಮೂರು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿ ಕೈ ತೊಳೆಯುವುದು, ಆರು ಅಡಿ ದೈಹಿಕ ಅಂತರ ಕಾಪಾಡಿಕೊಂಡು ಜನಸಂದಣಿಯಿಂದ ದೂರ ಇರುವುದು.” ನಿಜ ವೈದ್ಯರು, ತಜ್ಞರು ಇದನ್ನು ಲಾಕ್ ಡೌನ್ ಅವಧಿಯಿಂದಲೂ ಹೇಳುತ್ತಲೇ ಇದ್ದಾರೆ. ಆದರೆ ಕರ್ನಾಟಕದಲ್ಲೇ ಸರ್ಕಾರ ಮಾಡಿರುವುದೇನು ?
ಪ್ರವಾಸೋದ್ಯಮದ ಆದಾಯ ಕುಸಿಯುತ್ತದೆ ಎಂಬ ನೆಪವೊಡ್ಡಿ ಮೈಸೂರಿನ ಮತ್ತು ಕರ್ನಾಟಕದ ಎಲ್ಲ ಪ್ರವಾಸಿ ಕೇಂದ್ರಗಳನ್ನೂ, ದೇವಾಲಯಗಳನ್ನೂ ಜನರಿಗೆ ಮುಕ್ತವಾಗಿ ತೆರೆದಿಟ್ಟಿದೆ. ಈ ಜನದಟ್ಟಣೆಯಲ್ಲಿ ಆರು ಅಡಿ ಅಂತರ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಮೈಗೆ ಮೈ ತಾಕದೆ ಇದ್ದರೆ ಆರು ಅಡಿ ಎಂದುಕೊಳ್ಳಬಹುದು, ನಮ್ಮ ಅನುಕೂಲಕ್ಕೆ. ಇನ್ನು ಮಿಸುಕಾಡಲು ಜಾಗವಿರದಷ್ಟು ಜನರು ಒಂದೆಡೆ ಸೇರುವಾಗ ಮಾಸ್ಕ್ ಧರಿಸಿದರೆ ಉಸಿರುಕಟ್ಟಿದಂತಾಗುತ್ತದೆ, ವಾತಾವರಣದಲ್ಲೇ ಆ ರೀತಿಯ ಉಸಿರುಕಟ್ಟುವ ಪರಿಸ್ಥಿತಿ ಉಂಟಾಗುತ್ತದೆ. ಇನ್ನು ಸ್ಯಾನಿಟೈಸರ್ ಬದಲು ಎಲ್ಲ ಅಂಗಡಿಗಳಲ್ಲಿ ರಂಗುರಂಗಿನ ನೀರನ್ನು ಇಟ್ಟಿರುತ್ತಾರೆ (ಈಗಾಗಲೇ ಹಲವು ಅಂಗಡಿ ಮುಗ್ಗಟ್ಟುಗಳಲ್ಲಿ ಇದು ನಡೆಯುತ್ತಿದೆ, ಕೇಳುವವರಿಲ್ಲ ಅಷ್ಟೇ).
ಮಾರುಕಟ್ಟೆ ಮತ್ತು ಜನತೆಯ ಆರೋಗ್ಯ ರಕ್ಷಣೆ ಈ ಎರಡು ಆಯ್ಕೆಗಳ ನಡುವೆ ಸರ್ಕಾರಕ್ಕೆ ಎರಡನೆಯದು ನಿರ್ಲಕ್ಷಿಸಬಹುದಾದ ಆಯ್ಕೆಯಾಗಿದೆ ಏಕೆಂದರೆ ಸಾವಿನ ಪ್ರಮಾಣ ಕಡಿಮೆ ಇದೆ. ಸಂಖ್ಯೆ ಲೆಕ್ಕಕ್ಕಿಲ್ಲ. ಪ್ರಮಾಣ ಮುಖ್ಯ. ಇದು ಸಾಂಖ್ಯಿಕ ಕಸರತ್ತು ಸರ್ಕಾರಿ ಕಚೇರಿಗಳಲ್ಲಿ ನಡೆಯುವಂತಹುದು. ಕೋವಿದ್ 19 ಸಂದರ್ಭದಲ್ಲಿ ಇಂದು ಏಳನೆಯ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯಾದರೂ ಖಾಸಗಿ ವೈದ್ಯಕೀಯ ಕ್ಷೇತ್ರದ ಹೊಣೆಗಾರಿಕೆಯ ಬಗ್ಗೆ ಮಾತನಾಡಿದ್ದಾರೆಯೇ ?
ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ, ಚಿಕಿತ್ಸಾ ವೆಚ್ಚವನ್ನು ನಿಯಂತ್ರಿಸುವ ಬಗ್ಗೆ ಉಲ್ಲೇಖಿಸಿದ್ದಾರೆಯೇ ? ಪ್ರಾಥಮಿಕ ಆರೋಗ್ಯ ಸೇವೆಯ ಬಗ್ಗೆ ಪ್ರಸ್ತಾಪಿಸಿದ್ದಾರೆಯೇ ? ದುಬಾರಿ ಚಿಕಿತ್ಸಾ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಒಂದಾದರೂ ಎಫ್ ಐ ಆರ್ ದಾಖಲಾಗಿದೆಯೇ ? ವಿರೋಧಿಗಳು ಕೆಮ್ಮಿದರೆ ಎಫ್ ಐ ಆರ್ ದಾಖಲಿಸುವ ಸರ್ಕಾರಕ್ಕೆ ಖಾಸಗಿ ಲೋಕದ ಈ ಲೂಟಿ ಕಾಣುತ್ತಿಲ್ಲವೇ ? ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಈ ಕುರಿತು ಒಂದಾದರೂ ಹೇಳಿಕೆ ನೀಡಿದ್ದಾರೆಯೇ ?
ಹಬ್ಬಗಳ ಸಾಲು ದಿನಗಳು ಎದುರಾಗುತ್ತಿವೆ, ಕೊರೋನಾ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿದಿದ್ದರೂ ಬಿಹಾರದಲ್ಲಿ ಮಹಾ ಚುನಾವಣೆ, ಉತ್ತರ ಪ್ರದೇಶದಲ್ಲಿ, ಕರ್ನಾಟಕದಲ್ಲಿ ಉಪ ಚುನಾವಣೆ ನಡೆಸಲೇಬೇಕೆಂಬ ತುರ್ತು ಏನಿತ್ತು ? ಕರ್ನಾಟಕದಲ್ಲಿ ಸರಳ ದಸರಾ ಹೆಸರಿನಲ್ಲೇ ನಗರದಾದ್ಯಂತ ಚೀನಾ ದೀಪಗಳನ್ನು ಬೆಳಗಿಸಿ, ಜನರನ್ನು ಮಾರುಕಟ್ಟೆಗೆ ಆಕರ್ಷಿಸುವ ಅನಿವಾರ್ಯತೆ ಏನಿತ್ತು ? ಕಳೆದ ಹಲವು ದಿನಗಳಿಂದ ಮೈಸೂರಿನ ಸ್ಥಳೀಯ ಪತ್ರಿಕೆಗಳಲ್ಲಿ ಕೊರೋನಾ ಸುದ್ದಿಯೇ ಪ್ರಕಟವಾಗುತ್ತಿಲ್ಲ.
ಬಹುಶಃ ದಸರಾಗೆ ಬಾಧೆಯಾಗುತ್ತದೆ ಎನ್ನುವ ಕಾರಣ ಇರಬಹುದು. ಯಾವ ಬಡಾವಣೆಯಲ್ಲಿ ಸೋಂಕು ಹೆಚ್ಚಾಗಿದೆ ಎನ್ನುವ ಮಾಹಿತಿ ನೀಡುವುದಕ್ಕೆ ಎಂದೋ ತಿಲಾಂಜಲಿ ನೀಡಲಾಯಿತು. ದಿನಕ್ಕೆ ಎಷ್ಟು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಈವರೆಗೂ ಮಾಹಿತಿ ನೀಡಲಾಗಿಲ್ಲ. ಮಾರುಕಟ್ಟೆಗೆ ನೆರವಾಗಲು ಇಷ್ಟೆಲ್ಲಾ ಕಸರತ್ತು ಮಾಡುವುದು ಅರ್ಥವ್ಯವಸ್ಥೆಯ ದೃಷ್ಟಿಯಿಂದ ಅನಿವಾರ್ಯವೇ ಇರಬಹುದು. ಆದರೆ ಜನರಿಂದ ಮಾಹಿತಿ ಮುಚ್ಚಿಡುವುದರ ಅರ್ಥವೇನು ? ಮಾಧ್ಯಮಗಳೂ ಸರ್ಕಾರಗಳ ಈ ಕುತಂತ್ರಗಳಿಗೆ ಸಹಕಾರ ನೀಡುತ್ತಿರುವುದೇ ಇವತ್ತಿನ ದುರಂತ.
ಭಾರತದ ಆರೋಗ್ಯ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಕೊರೋನಾ ಸೋಂಕಿತರ ಸಂದರ್ಶನ ಅಥವಾ ಸಮೀಕ್ಷೆಯ ಮೂಲಕ ಮಾತ್ರವೇ ತಿಳಿಯಲು ಸಾಧ್ಯ. ಯಾವ ಸುದ್ದಿಮನೆಗಳೂ, ಪತ್ರಿಕೆಗಳೂ ಈ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ. ಕೋವಿದ್ 19 ನಿಯಮಗಳನ್ನು ಉಲ್ಲಂಘಿಸಿ ಜನಸಾಮಾನ್ಯರ ಲೂಟಿ ಮಾಡುವ ಖಾಸಗಿ ಆಸ್ಪತ್ರೆಯ ಹೆಸರು ಪ್ರಕಟಿಸಲೂ ಹೆದರುವಷ್ಟು ಮಟ್ಟಿಗೆ ಸರ್ಕಾರ ಮತ್ತು ಮಾಧ್ಯಮಗಳು ಕಾರ್ಪೋರೇಟ್ ಗುಲಾಮರಾಗಿವೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಎಷ್ಟಿದೆ, ಜನರು ಎಷ್ಟು ಸುರಕ್ಷಿತವಾಗಿದ್ದಾರೆ. ಆರೋಗ್ಯ ಸೇವೆ, ಸವಲತ್ತು ಹೇಗಿದೆ ಈ ವಿಚಾರಗಳನ್ನು ಸರ್ಕಾರವಂತೂ ಲೆಕ್ಕಿಸುತ್ತಿಲ್ಲ, ಮಾಧ್ಯಮಗಳು ಮರೆತೇ ಹೋದಂತಿದೆ.
ಕೊರೋನಾ ಲಸಿಕೆಯ ಬಗ್ಗೆಯೂ ಇಲ್ಲಸಲ್ಲದ ಊಹಾಪೋಹಗಳಿಗೆ ಅವಕಾಶ ನೀಡುವ ಮೂಲಕ, ಅಂದಾಜುಗಳನ್ನು ನೀಡುವ ಮೂಲಕ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸಲಾಗುತ್ತಿದೆ. ಲಸಿಕೆ ಇನ್ನೂ ಅಂತಿಮವಾಗಿ ಹೊರಬರುವ ಮುನ್ನವೇ ಕೇಂದ್ರ ಆರೋಗ್ಯ ಸಚಿವರು ಭಾರತಕ್ಕೆ 25 ಕೋಟಿ ಲಸಿಕೆಗಳು ಬರಲಿವೆ ಎಂದು ಹೇಳುವುದೇ ಅಲ್ಲದೆ ಅದರ ವಿತರಣೆಯ ಬಗ್ಗೆಯೂ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕ ವಲಯದಲ್ಲಿ ಹೇಗೆ ನಿಯಮ ಪಾಲನೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಗಮನ ಹರಿಸಿದರೆ ಸೋಂಕು ತಡೆಗಟ್ಟಲು ಸಾಧ್ಯವಾಗಬಹುದು.
ನಿರ್ಲಕ್ಷ್ಯ ಆಡಳಿತ ವ್ಯವಸ್ಥೆ, ನಿರ್ಲಜ್ಜ ರಾಜಕಾರಣ, ಅಲಕ್ಷಿತ ಆರೋಗ್ಯ ಸೇವೆ ಮತ್ತು ನಿರ್ದಯಿ ಸರ್ಕಾರ ಈ ನಾಲ್ಕು ಗೋಡೆಗಳ ನಡುವೆ ಕೊರೋನಾ ಪರ್ಯಟನ ಮಾಡುತ್ತಿದೆ, ಜನಸಾಮಾನ್ಯರು ನಲುಗಿಹೋಗುತ್ತಿದ್ದಾರೆ. ಬಡ ಜನತೆಯ ಪಾಡು ಕೇಳದವರೇ ಇಲ್ಲದಂತಾಗಿದೆ. ಕೊರೋನಾ ವಾರಿಯರ್ಸ್ ಎಂದು ಕರೆಯಲ್ಪಡುವ ಆರೋಗ್ಯ ಸೇವೆ ಮತ್ತು ಇತರ ಸೇವೆಗಳ ಕಾರ್ಯಕರ್ತರ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದ್ದು ಈ ಕುರಿತು ಕೇಂದ್ರ ಸರ್ಕಾರ ಬಾಧಿತ ಕುಟುಂಬಗಳಿಗೆ ಸಾಂತ್ವನ ನೀಡುವಂತಹ ಯಾವುದೇ ಯೋಜನೆ ಹಮ್ಮಿಕೊಳ್ಳದಿರುವುದು ದುರಂತ.
ಅಂಕಿ ಅಂಶಗಳು, ಸಾಂಖ್ಯಿಕ ಕಸರತ್ತುಗಳ ಮೂಲಕ ಜನರನ್ನು ಸಮಾಧಾನಪಡಿಸುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ. ಆದರೆ ಇದು ಮಾಸ್ಕ್ ಧರಿಸುವ ಜನರಿಗೆ ಅರ್ಥವಾಗುತ್ತದೆ. ಕೊರೋನಾ ವೈರಾಣುವಿಗೆ ಅರ್ಥವಾಗುವುದಿಲ್ಲ. ಅದು ಹರಡುತ್ತಲೇ ಹೋಗುತ್ತದೆ. ಆದರೆ ಆಡಳಿತ ನಡೆಸುವ ಸರ್ಕಾರಕ್ಕೆ ಅರ್ಥವಾಗಬೇಕಲ್ಲವೇ ? ಆಗ ಮಾತ್ರ ನಾವು ಕೊರೋನಾಗಿಂತಲೂ ಭಿನ್ನ ಎಂದು ಬೆನ್ನು ತಟ್ಟಿಕೊಳ್ಳಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್ ಖರೀದಿಗೂ ಎದುರಾಗುತ್ತಿದೆ ಒತ್ತಡ
ಸುದ್ದಿದಿನ,ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದ ಶಕ್ತಿ ಯೋಜನೆಯ ಮತ್ತೊಂದು ಮುಖ ಇದೀಗ ಚರ್ಚೆಗೆ ಬಂದಿದೆ. ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ನೀಡಿರುವ ಉಚಿತ ಟಿಕೆಟ್ಗಳ ಮೊತ್ತದಲ್ಲಿ ಸರ್ಕಾರವು ನಾಲ್ಕು ಸಾರಿಗೆ ನಿಗಮಗಳಿಗೆ ₹5,651.24 ಕೋಟಿ ಬಾಕಿ ಉಳಿಸಿಕೊಂಡಿರುವುದು ನಿಗಮಗಳ ಆರ್ಥಿಕ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ. ಬಾಕಿ ಮೊತ್ತದ ಮರುಪಾವತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವೇತನ, ಡೀಸೆಲ್, ಬಿಡಿಭಾಗಗಳ ಖರೀದಿ ಸೇರಿದಂತೆ ದೈನಂದಿನ ವೆಚ್ಚಗಳನ್ನು ನಿರ್ವಹಿಸುವ ಒತ್ತಡ ಹೆಚ್ಚಾಗಿದೆ.
ಶಕ್ತಿ ಯೋಜನೆಗೆ ಮೂರು ವರ್ಷಗಳ ಪಯಣ
ಕಾಂಗ್ರೆಸ್ ಸರ್ಕಾರ 2023ರ ಜೂನ್ 11ರಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಾರಿಗೆ ನಿಗಮಗಳ ಮೇಲೆ ಸೇವಾ ಹೊರೆ ಕೂಡ ವಿಸ್ತರಿಸಿದೆ.
2023-24ರಿಂದ 2026ರ ಜುಲೈ ಅಂತ್ಯದವರೆಗೆ ನಾಲ್ಕು ಸಾರಿಗೆ ನಿಗಮಗಳ ಬಸ್ಗಳಲ್ಲಿ ಮಹಿಳೆಯರು 797.16 ಕೋಟಿ ಪ್ರಯಾಣ ಕೈಗೊಂಡಿದ್ದಾರೆ. ಈ ಪ್ರಯಾಣಗಳಿಗೆ ನೀಡಲಾದ ಉಚಿತ ಟಿಕೆಟ್ಗಳ ಒಟ್ಟು ಮೌಲ್ಯ ₹20,955.99 ಕೋಟಿ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.
₹15,304 ಕೋಟಿ ಪಾವತಿ, ಇನ್ನೂ ₹5,651 ಕೋಟಿ ಬಾಕಿ
ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಮರುಪಾವತಿ ಮಾಡಬೇಕಿದೆ. ಇದುವರೆಗೆ ₹15,304.76 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ₹5,651.24 ಕೋಟಿ ಪಾವತಿಯಾಗಬೇಕಿದೆ.
ಈ ಬಾಕಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಪಾಲುದಾರರಾಗಿವೆ.
ನಿಗಮಗಳಿಗೆ ಆರ್ಥಿಕ ಒತ್ತಡ ಏಕೆ?
ಈಗಾಗಲೇ ಹಲವು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದ ಒತ್ತಡದಲ್ಲಿವೆ. ಶಕ್ತಿ ಯೋಜನೆಯ ಟಿಕೆಟ್ ಮೊತ್ತ ಸಕಾಲದಲ್ಲಿ ಪಾವತಿಯಾಗದಿರುವುದು ನಗದು ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿಯ ವೇತನ, ಡೀಸೆಲ್ ಖರೀದಿ, ಬಸ್ಗಳ ನಿರ್ವಹಣೆ, ಬಿಡಿಭಾಗಗಳ ಪೂರೈಕೆ ಹಾಗೂ ನಿವೃತ್ತ ನೌಕರರ ಬಾಕಿ ಪಾವತಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಗಮಗಳು ನಿರ್ವಹಿಸಬೇಕಿದೆ.
₹18,459 ಕೋಟಿ ನೆರವು ನೀಡಿದರೂ ನಷ್ಟದ ಹೊರೆ
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಿವಿಧ ಕಾರಣಗಳಿಗಾಗಿ ಸಾರಿಗೆ ನಿಗಮಗಳಿಗೆ ₹18,459.37 ಕೋಟಿ ನೆರವು ನೀಡಿದೆ. ಶಕ್ತಿ ಯೋಜನೆ, ವಿದ್ಯಾರ್ಥಿ ಪಾಸ್ಗಳ ಸಹಾಯಧನ, ಸಾಲ ಮತ್ತು ಬಡ್ಡಿ ಮರುಪಾವತಿ, ಬಸ್ ಖರೀದಿ, ವೇತನ, ಡೀಸೆಲ್, ಪಿಎಫ್ ಹಾಗೂ ರಜೆ ನಗದೀಕರಣ ಸೇರಿದಂತೆ ಹಲವು ವೆಚ್ಚಗಳಿಗೆ ಈ ನೆರವು ಬಳಕೆಯಾಗಿದೆ.
ಆದರೂ ನಿಗಮಗಳ ಆರ್ಥಿಕ ಸಂಕಷ್ಟ ಸಂಪೂರ್ಣವಾಗಿ ದೂರವಾಗಿಲ್ಲ. ಡೀಸೆಲ್ ಬಸ್ಗಳ ಜತೆಗೆ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಯಿಂದಲೂ ನಿರೀಕ್ಷಿತ ಮಟ್ಟದ ಆದಾಯ ಬರುತ್ತಿಲ್ಲ ಎಂಬುದು ಮತ್ತೊಂದು ಸವಾಲಾಗಿದೆ.
ಸಕಾಲಿಕ ಪಾವತಿಯೇ ಪರಿಹಾರವೇ?
ಶಕ್ತಿ ಯೋಜನೆಯ ಸಾಮಾಜಿಕ ಮಹತ್ವವನ್ನು ಪ್ರಶ್ನಿಸುವುದಕ್ಕಿಂತ, ಅದರ ಆರ್ಥಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಸರ್ಕಾರದಿಂದ ಬಾಕಿ ಮೊತ್ತ ಸಕಾಲದಲ್ಲಿ ಬಿಡುಗಡೆಯಾದರೆ ನಿಗಮಗಳ ನಗದು ಹರಿವು ಸುಧಾರಿಸಿ, ವೇತನ, ಇಂಧನ ಮತ್ತು ನಿರ್ವಹಣಾ ವೆಚ್ಚಗಳನ್ನು ನಿರ್ವಹಿಸಲು ಹೆಚ್ಚಿನ ಬಲ ದೊರೆಯಬಹುದು.

ದಿನದ ಸುದ್ದಿ
ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!
ಸುದ್ದಿದಿನ,ಶಿವಮೊಗ್ಗ: ಭದ್ರಾ ಜಲಾಶಯ ಎಂದರೆ ಕೇವಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಣೆಕಟ್ಟಲ್ಲ. ಪಶ್ಚಿಮಘಟ್ಟದ ಮಳೆಯನ್ನು ಮಧ್ಯ ಕರ್ನಾಟಕದ ಬರಡು ಭೂಮಿಗೆ ಕೊಂಡೊಯ್ಯುವ ಜೀವನಾಡಿ. ಮಲೆನಾಡಿನ ನದಿಯಿಂದ ಆರಂಭವಾಗುವ ಭದ್ರೆಯ ಪಯಣವು ರೈತರ ಕೃಷಿ, ಜನರ ಕುಡಿಯುವ ನೀರು, ಸ್ಥಳೀಯ ಆರ್ಥಿಕತೆ, ವಿದ್ಯುತ್ ಉತ್ಪಾದನೆ ಹಾಗೂ ಪರಿಸರದೊಂದಿಗೆ ನೇರ ಸಂಬಂಧ ಹೊಂದಿದೆ. ಜಲಾಶಯ ತುಂಬಿದರೆ ಹಲವು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ನೀರಿನ ಕೊರತೆ ಎದುರಾದಾಗ ಇದೇ ಪ್ರದೇಶಗಳಲ್ಲಿ ಆತಂಕ ಹೆಚ್ಚುತ್ತದೆ.
http://Visit : www.suddidina.com
ಪಶ್ಚಿಮಘಟ್ಟದಿಂದ ಬಯಲುಸೀಮೆಯವರೆಗೆ ಭದ್ರೆಯ ಪಯಣ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ–ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಬಳಿಕ ತುಂಗಾಭದ್ರೆಯಾಗಿ ಮುಂದುವರಿದು ಕೃಷ್ಣಾ ನದಿಯನ್ನು ಸೇರುತ್ತದೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿರುವ ಭದ್ರಾ ಜಲಾಶಯ 1,708 ಮೀಟರ್ ಉದ್ದ ಹಾಗೂ 59.14 ಮೀಟರ್ ಎತ್ತರ ಹೊಂದಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.50 ಟಿಎಂಸಿ. 1,968.40 ಚದರ ಕಿಲೋಮೀಟರ್ ಜಲಾನಯನ ಪ್ರದೇಶ ಹೊಂದಿರುವ ಈ ಯೋಜನೆಗೆ ಸ್ವಾತಂತ್ರ್ಯಾನಂತರ 1947ರಲ್ಲಿ ಚಾಲನೆ ದೊರೆತಿದ್ದು, ಅಣೆಕಟ್ಟು ಕಾಮಗಾರಿ 1959ರಲ್ಲಿ ಹಾಗೂ ನಾಲೆಗಳ ಕಾಮಗಾರಿ 1966ರಲ್ಲಿ ಪೂರ್ಣಗೊಂಡಿತು.
ಒಣಭೂಮಿಗೆ ಹಸಿರು ಹೊದಿಸಿದ ನೀರು
ಭದ್ರಾ ನೀರಾವರಿ ಯೋಜನೆಯು ಮಧ್ಯ ಕರ್ನಾಟಕದ ಕೃಷಿಯ ಚಿತ್ರಣವನ್ನೇ ಬದಲಿಸಿದೆ. ಎಡದಂಡೆ ನಾಲೆ 77.24 ಕಿ.ಮೀ. ಹರಿದು ಸುಮಾರು 8,300 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಿದರೆ, ಬಲದಂಡೆ ನಾಲೆ 366.90 ಕಿ.ಮೀ. ಉದ್ದಕ್ಕೆ ಹರಿದು ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತದೆ.
ಒಂದು ಕಾಲದಲ್ಲಿ ಭತ್ತ ಮತ್ತು ಕಬ್ಬು ಪ್ರಧಾನವಾಗಿದ್ದ ಪ್ರದೇಶಗಳಲ್ಲಿ ಇದೀಗ ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ವಿಸ್ತರಣೆ ಕಂಡುಬಂದಿದೆ. ಹೀಗಾಗಿ ಭದ್ರಾ ನೀರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.
ಕುಡಿಯುವ ನೀರಿಗೂ ಭದ್ರೆಯೇ ಆಸರೆ
ಮಧ್ಯ ಕರ್ನಾಟಕದ ಹಲವು ನಗರಗಳು, ಪಟ್ಟಣಗಳು ಹಾಗೂ ಸಾವಿರಾರು ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಭದ್ರಾ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 8.50 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಪ್ರದೇಶಗಳ ಜನಜೀವನಕ್ಕೆ ಈ ನೀರು ಆಸರೆಯಾಗಿದೆ.
ಹೂಳು, ಮೇಲ್ದಂಡೆ ಯೋಜನೆ: ಭವಿಷ್ಯದ ಸವಾಲು
ಜಲಾಶಯದ ಸಂಗ್ರಹ ಸಾಮರ್ಥ್ಯದ ಮೇಲೆ ಹೂಳು ಕೂಡ ಪರಿಣಾಮ ಬೀರುತ್ತಿದೆ. ಮೂಲ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 95.74 ಮಿಲಿಯನ್ ಘನ ಮೀಟರ್ ಹೂಳು ಸೇರಿಕೊಂಡಿದೆ ಎನ್ನಲಾಗುತ್ತದೆ. ಸದ್ಯ ಡೆಡ್ ಸ್ಟೋರೇಜ್ ಇರುವುದರಿಂದ ತಕ್ಷಣದ ಬಳಕೆಗೆ ದೊಡ್ಡ ತೊಂದರೆ ಇಲ್ಲವಾದರೂ, ಭವಿಷ್ಯದ ಜಲಭದ್ರತೆ ದೃಷ್ಟಿಯಿಂದ ಹೂಳು ನಿರ್ವಹಣೆ ಮಹತ್ವದ್ದಾಗಿದೆ.
ಇದರ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ನಾಲೆಗಳ ಮೂಲಕ 37.2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ. ಮೀನು ಮರಿ ಸಾಕಣೆ ಕೇಂದ್ರವೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.
ಭದ್ರೆಯ ಅಂಕಿ-ಅಂಶಗಳು
- ಜಲಾನಯನ ಪ್ರದೇಶ: 1,968.40 ಚ.ಕಿ.ಮೀ.
- ಅಣೆಕಟ್ಟು ಎತ್ತರ: 59.14 ಮೀಟರ್
- ಅಣೆಕಟ್ಟು ಉದ್ದ: 1,708 ಮೀಟರ್
- ನೀರು ಸಂಗ್ರಹ ಸಾಮರ್ಥ್ಯ: 71.50 ಟಿಎಂಸಿ
- ಅಚ್ಚುಕಟ್ಟು ಪ್ರದೇಶ: 1,05,570 ಹೆಕ್ಟೇರ್
- ನಾಲೆಗಳ ಒಟ್ಟು ಉದ್ದ: 444.14 ಕಿ.ಮೀ.

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

-
ದಿನದ ಸುದ್ದಿ7 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ7 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ5 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ5 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ5 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ5 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ5 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ5 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ


