Connect with us

ದಿನದ ಸುದ್ದಿ

ಕೋವಿಡ್-19 ಕೋಲಾಹಲ

Published

on

  • ಡಾ.ಎಚ್.ಎಸ್.ಅನುಪಮಾ

ಬೆಳಗಾವಿ ಹತ್ತಿರದ ಹಳ್ಳಿಗೆ ಚೀನಾದಿಂದ ಟೆಕ್ಕಿ ದಂಪತಿಗಳು ಬಂದಿಳಿದರು. ಮೊದಲಾಗಿದ್ದರೆ ತಮ್ಮೂರಿಗೆ ವಿದೇಶದಿಂದ ಬಂದವರ ಕಾಣಲು ಹಳ್ಳಿಯ ಅಬಾಲವೃದ್ಧ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿರುತ್ತಿದ್ದರು. ಕರೆಕರೆದು ಮಾತಾಡಿಸುತ್ತಿದ್ದರು. ಇಣುಕಿ ನೋಡುತ್ತಿದ್ದರು. ಆದರೆ ಈಗ ಬಂದವರು ತಾವು ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಇದ್ದೇವೆಂದು ಪ್ರಮಾಣಪತ್ರ ತೋರಿಸಿದರೂ ಕೇಳದೇ ಆ ಜೋಡಿಯನ್ನು ಅಟ್ಟಾಡಿಸಿ ಬೈದು, ಪೊಲೀಸರ ಕರೆದು, ಆಂಬುಲೆನ್ಸಿನಲ್ಲಿ ಕೂಡಿ ಹಾಕಿ ಊರು ಬಿಟ್ಟೋಡಿಸಿದರು. ಅಷ್ಟೇ ಅಲ್ಲ, ವಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಆ ಜೋಡಿಯ ಭಾವಚಿತ್ರ ಹಂಚಿಕೊಂಡು ಅವರನ್ನು ಯಾರೂ ನಿಮ್ಮ ಊರುಗಳೊಳಗೆ ಬಿಟ್ಟುಕೊಳ್ಳಬೇಡಿ ಎಂದು ಪ್ರಚಾರ ಮಾಡಿದರು.

ಮಂಡ್ಯದ ಹೊರಭಾಗದಲ್ಲಿ ನಾರುಬೇರುಗಳ ಔಷಧಿ ಮತ್ತು ಮಸಾಲೆ ಪದಾರ್ಥಗಳನ್ನು ಹೊತ್ತು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರ ಮಾಡಿಬಂದ ಹಕ್ಕಿಪಿಕ್ಕಿ ಸಮುದಾಯದ ಅಲೆಮಾರಿಗಳು ತಮ್ಮ ನೆಲೆಗೆ ವಾಪಸಾದದ್ದೇ ಉಳಿದವರು ಭಯಭೀತರಾದರು. ಹಕ್ಕಿಪಿಕ್ಕಿಟೆಂಟುಗಳೊಳಗೆಅಲ್ಲೋಲಕಲ್ಲೋಲವಾಯಿತು.ಕೊನೆಗೆ ವಿದೇಶದಿಂದ ಹಿಂದಿರುಗಿದವರಿಗೆ ಬೇರೆ ವ್ಯವಸ್ಥೆ ಮಾಡುವಂತಾಯಿತು.

ಮತ್ತೊಂದೆಡೆ ಭಾರತದ ಹಳ್ಳಿ, ನಗರ, ಕೇರಿಗಳಲ್ಲಿ ಟಿವಿ, ಜಾಲತಾಣಗಳಿಂದ ಕರೋನಾ ಅತಿಸುದ್ದಿಯಿಂದ ಭಯದ ವ್ಯಾಧಿ ಹರಡತೊಡಗಿದೆ. ಹೊರಗೆ ಹೋಗಬೇಡಿ. ಮುಟ್ಟಬೇಡಿ. ಮನೆಗೆ ಕರೆಯಬೇಡಿ. ಕೆಮ್ಮುವವರ ಬಳಿ ನಿಲ್ಲಬೇಡಿ ಎಂಬಿತ್ಯಾದಿ ಬೇಡಗಳ ನಡುವೆ ಆಗಲೇ ವ್ಯಕ್ತಿಗಳ ನಡುವಿರುವ ದೂರ ವಿಸ್ತಾರವಾಗತೊಡಗಿದೆ.

‘ಅಯ್ಯೋ, ತಂಡಿಕೆಮ್ಮ ಅಂತ ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಅಲ್ಲಿ ರಕ್ತ ಟೆಸ್ಟ್ ಮಾಡಿ ಕಡೆಗೆ 14 ದಿನ ಕ್ವಾಣೇಲಿ ಕೂಡಿ ಹಾಕ್ತಾರಂತೆ’ ಎಂಬ ಹೆದರಿಕೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಲು ಕೆಲವರು ಹೆದರಿದರೆ; ತಂತಮ್ಮ ಮನೆಯ ಮದುವೆ, ತೀರ್ಥಯಾತ್ರೆ, ಧಾರ್ಮಿಕ ಕಾರ್ಯಗಳೆಲ್ಲವನ್ನು ರದ್ದು ಮಾಡಿದ್ದಾರೆ ಮತ್ತೆ ಕೆಲವರು. ಶಾಲೆಯೂ ಇಲ್ಲದೆ, ಪರೀಕ್ಷೆಯೂ ಇಲ್ಲದೇ ಪಾಸಾಗಿ ಮುಂದಿನ ತರಗತಿಗೆ ಹೋದ ಮಕ್ಕಳು ಸಮಯ ಕಳೆಯಲು ಹೊಸಹೊಸ ಯೋಜನೆಗಳನ್ನು ಹಾಕತೊಡಗಿವೆ.

‘ಅರೆ, ಎಲ್ಲಾದರೂ ಸಾಧ್ಯವೇ? ಸಾಧ್ಯವೇ ಇಲ್ಲ’ ಎನ್ನುವಂತಹುದೆಲ್ಲ ತಂತಾನೇ ಅನಿವಾರ್ಯವಾಗಿ, ಸಾಧ್ಯವೂ ಆಗಿ ಏರ್‌ಪೋರ್ಟುಗಳು, ಮಾಲುಗಳು, ದೇವಳ-ಆಶ್ರಮ-ಮಠಗಳು, ಹೋಟೆಲು ಬೀಚುಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಗುಡಿಸಲು-ಟೆಂಟು-ಸ್ಲಮ್ಮುವಾಸಿಗಳು, ಕೂಲಿಗಳು, ಮನೆದೇವಿಯರು ತಂತಮ್ಮ ದಿನನಿತ್ಯದ ಹೊಟ್ಟೆಪಾಡಿನ ಕೆಲಸಗಳಲ್ಲಿ ಮುಳುಗಿ ಹೋಗಿದ್ದಾರೆ.

ಇಷ್ಟೆಲ್ಲ ಉಲ್ಟಾಪಲ್ಟಾ, ಕೋಲಾಹಲ, ಅಸಂಭವ ಸಂಭವ ಆಗುತ್ತಿರುವುದಾದರೂ ಏತಕ್ಕೆ? ಭಯಕ್ಕೆ, ಪ್ರಾಣಭಯಕ್ಕೆ. ನಿಜ. ಜೀವಿಗಳ ಚಟುವಟಿಕೆಯನ್ನೆಲ್ಲ ನಿಯಂತ್ರಿಸುವ ಮುಖ್ಯ ಚಾಲನಾ ಶಕ್ತಿ ಭಯ ಎನ್ನುವುದು ಮತ್ತೆ ಸಾಬೀತಾಗಿದೆ. ಅದರಲ್ಲೂ ಪ್ರಾಣಭಯ ಆವರಿಸಿಕೊಂಡಿತೆಂದರೆ ಯಮನಿಯಮಗಳು ಮರೆತು ಹೋಗುತ್ತವೆ. ಸಂಬಂಧಗಳು ಕಾಣೆಯಾಗುತ್ತವೆ. ಎತ್ತ, ಏನುಗಳು ಸತ್ತು ಹೋಗುತ್ತವೆ.

ನಾವೆಳೆದ ಗಡಿಗಳೆಂಬ ಹುಸಿರೇಖೆಗಳು ತಂತಾವೇ ಅಳಿಸಿ ಹೋಗುತ್ತವೆ. ಜೈಲುಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ. ತಮ್ಮ ಮೇಲೆ ತಾವೇ ಆರೋಪಿಸಿಕೊಂಡ ಹುಸಿ ಶಕ್ತಿಗಳೆಲ್ಲ ಕರಗಿಹೋಗಿ ಸುಮ್ಮಸುಮ್ಮನೆ ‘ಮಹಾನ್’ ಆದವರು ಬೆತ್ತಲಾಗಿ ನಿಜಸ್ವರೂಪ ಬಯಲಾಗುತ್ತದೆ. ಸರ್ವಾಧಿಕಾರಿಯಿಂದ ಹಿಡಿದು ಬೀದಿ ಬದಿಯ ಭಿಕಾರಿಯವರೆಗೂ; ಪರಮಾಣು ಶಸ್ತ್ರಾಸ್ತ್ರ ಹೊಂದಿದವರಿಂದ ಹಿಡಿದು ಚಿಂದಿ ಆಯುವವರವರೆಗೆ ಪ್ರಾಣಭಯ ಆವರಿಸಿದಾಗ ಎಲ್ಲರಿಗೂ ಬದುಕುಳಿವ ಹಂಬಲದ ಹೊರತು ಮತ್ತೆಲ್ಲ ಮರೆತುಹೋಗುತ್ತದೆ.

ಹೌದು. ಕೋವಿಡ್-19 ವೈರಸ್‌ನಿಂದ ಹರಡುತ್ತಿರುವ ಕಾಯಿಲೆ ಮತ್ತು ಮರಣ ಭೀತಿ ಇಡಿಯ ವಿಶ್ವವನ್ನೇ ಆವರಿಸಿದ ೨೦೨೦ರ ಮಾರ್ಚ್ ಹೊತ್ತಿಗೆ ಗಡಿ, ಮೂರ್ತಿ, ಸ್ಮಾರಕ, ಮಾಲು, ಮಹಲು, ಫ್ಯಾಷನ್, ಯುದ್ಧ, ದಂಗೆಗಳೇ ಮೊದಲಾದ ಮನುಷ್ಯ ಅಹಂಕಾರದ ನಿರ್ಮಿತಿಗಳೆಲ್ಲಾ ತಾತ್ಕಾಲಿಕವಾಗಿಯಾದರೂ ಪೊಳ್ಳು ಎಂದೆನಿಸುವಂತೆ ಅಣುರೇಣುತೃಣವೊಂದು ನಿವಾಳಿಸಿ ಬಿಸಾಡಿದೆ. ಲಕ್ಷ ಕೋಟಿ ರೂಪಾಯಿಗಳನ್ನು ಗಾಳಿಯಲ್ಲೇ ಸೃಷ್ಟಿಸುವ ಷೇರು ಮಾರುಕಟ್ಟೆ ಎಂಬ ಮಾಯಾನಗರಿ ಮೇಣದರಮನೆಯಂತೆ ಕರಗಿ ಹೋಗುತ್ತಿದೆ.

ಯಾವುದೂ ಬೇಡ, ಯಾರಿಗೂ ಬೇಡವೆನುವಂತಹ ತಾತ್ಕಾಲಿಕ ಸ್ಮಶಾನ ವೈರಾಗ್ಯ ಆವರಿಸಿದಂತಿದೆ. ಧರ್ಮಗುರುಗಳ ಸಾಕ್ಷಿಯಿಲ್ಲದೆ ಎಲ್ಲ ಶವಗಳನ್ನೂ ಮಿಲಿಟರಿ-ಮುನ್ಸಿಪಾಲಿಟಿ ಲಾರಿಗಳು ಹೊತ್ತೊಯ್ದು ವಿದ್ಯುತ್ ಚಿತಾಗಾರದಲ್ಲಿ ಸುಟ್ಟುಬಿಡುತ್ತಿವೆ. ಧರ್ಮ-ಜಾತಿ ಭೇದವಿಲ್ಲದೆ ಬದುಕಿರುವವರನ್ನೂ, ಮರಣಿಸಿದವರನ್ನೂ ವೈರಸ್ ಆವರಿಸಿಕೊಂಡಿದೆ. ಎರಡು ಕಾಲಿನವರ ಸಾಧನೆ ಏನೇ ಇರಲಿ, ಪ್ರಕೃತಿಯೆದುರು ಎಲ್ಲವೂ ತೃಣವೇ, ನಿಜ ದೈವ ಪ್ರಕೃತಿಯೇ ಎಂಬ ಪಾಠ ಮತ್ತೆಮತ್ತೆ ಕಲಿಯಬೇಕಾಗಿದೆ.

ವೈರಸ್ ಎಂಬ ವಿಸ್ಮಯ-ಅಪಾಯ

ಆನೆ, ತಿಮಿಂಗಿಲಗಳಿಂದ ಹಿಡಿದು ಬ್ಯಾಕ್ಟೀರಿಯಾಗಳಂತಹ ಏಕಕೋಶ ಜೀವಿಗಳ ತನಕ ಜೀವಿಗಳಿಗೆ ನಾನಾ ಕಾಯಿಲೆಗಳನ್ನುಂಟುಮಾಡುವ; ಏಡ್ಸ್, ಪೋಲಿಯೋ, ದಡಾರ, ಸಿಡುಬು, ಮೈಲಿಬೇನೆ, ಕಾಮಾಲೆ, ವಾಂತಿಭೇದಿ, ರುಬೆಲ್ಲಾ, ಇನ್‌ಫ್ಲುಯೆಂಜಾ, ಹಂದಿಗೋಡು ಕಾಯಿಲೆ, ಮಂಗನ ಕಾಯಿಲೆ, ಮಂಗನಬಾವು ಮತ್ತಿತರ ನೂರಾರು ಕಾಯಿಲೆಗಳಿಗೆ ಕಾರಣವಾದ ವೈರಸ್‌ಗಳು ಬಲು ವಿಚಿತ್ರ, ವಿಶಿಷ್ಟ ಅಪಾಯಕಾರಿ ಕಣಗಳು. ಪಕ್ಷಿ, ಪ್ರಾಣಿ, ಗಿಡ, ಶಿಲೀಂಧ್ರ, ಬ್ಯಾಕ್ಟೀರಿಯಾ ಇತ್ಯಾದಿ ಬೇರೊಂದು ಜೀವಿಯ ಜೀವಕೋಶದೊಳಗೆ ಮಾತ್ರ ಬದುಕಬಲ್ಲ ಸೂಕ್ಷ್ಮಾಣುಗಳು ಅವು. ಇತ್ತ ‘ಜೀವಿ’ಯೂ ಅಲ್ಲ. ಅತ್ತ ‘ಅಜೀವಿ’ಗಳೂ ಅಲ್ಲ. ಜೀವಿ ಅಜೀವಿಗಳ ನಡುವಿರುವ ಅತ್ಯಂತ ಸರಳ, ಅತಿ ಸಣ್ಣ ಕಣ ವೈರಸ್ ಸಂಪೂರ್ಣ ಬೇರೆ ಜೀವಕೋಶವನ್ನು ಅವಲಂಬಿಸಿರುವಂಥವು.

ವೈರಸ್ಸುಗಳ ಗಾತ್ರ ಬಲು ಕಿರಿದು. ಎಲ್ಲೋ ಕೆಲವನ್ನು ಹೊರತುಪಡಿಸಿದರೆ ಎಲ್ಲವೂ ಬ್ಯಾಕ್ಟೀರಿಯಾಗಿಂತ ಸಣ್ಣವು. ಪೋಲಿಯೋ ವೈರಸ್ ಉಪ್ಪಿನ ಒಂದು ಕಣದ 10 ಸಾವಿರದಲ್ಲಿ ಒಂದನೇ ಭಾಗದಷ್ಟು ಗಾತ್ರದ್ದು; ಕೋವಿಡ್ ಐದು ಸಾವಿರದ ಒಂದು ಭಾಗದಷ್ಟು ದೊಡ್ಡದು. ವೈರಸ್ಸುಗಳಿಗಿಂತ ಬ್ಯಾಕ್ಟೀರಿಯಾಗಳು 8-10 ಪಟ್ಟು ದೊಡ್ಡದಿರುತ್ತವೆ. 1931ರಲ್ಲಿ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಕಂಡುಹಿಡಿದ ಮೇಲೆಯೇ ನಾವು ವೈರಸ್ಸುಗಳನ್ನು, ಅವುಗಳ ರೂಪರಚನೆಯನ್ನು ಕಂಡದ್ದು.

ಪ್ರಾಣಿಗಳ ದೇಹದಲ್ಲಷ್ಟೇ ಇರುವ ಕೆಲವು ವೈರಸ್‌ಗಳು ಮನುಷ್ಯರನ್ನು ತಲುಪಿ ಹೊಸಹೊಸ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹೀಗೆ ಏಡ್ಸ್ ಕಾಯಿಲೆ ದಕ್ಷಿಣ ಆಫ್ರಿಕಾದ ಚಿಂಪಾಂಜಿಗಳಿಂದ; ಸಾರ‍್ಸ್ ಕಾಯಿಲೆ ಸಿವೆಟ್ ಬೆಕ್ಕುಗಳಿಂದ; ಕೆಎಫ್‌ಡಿ ಮಂಗಗಳಿಂದ; ಮರ‍್ಸ್-2019 ಒಂಟೆಗಳಿಂದ; ಈಗ ಕೋವಿಡ್-19 ಬಾವಲಿಗಳಿಂದ ಬಂದಂಥವು. ಶ್ವಾಸನಾಳ, ಬಾಯಿ, ಗಂಟಲು, ಚರ್ಮ, ಲೈಂಗಿಕ ಅಂಗಾಂಗಗಳು, ಕೀಟದ ಕಡಿತ ಮುಂತಾದ ಮಾರ್ಗಗಳಿಂದ ಮಾನವ ದೇಹದೊಳಗೆ ಪ್ರಾಣಿ ವೈರಸ್‌ಗಳು ಹೊಕ್ಕಿಬಿಡುತ್ತವೆ. ಮುಖ ನೆಕ್ಕಿದ ಒಂಟೆ, ತಲೆಮೇಲೆ ಹತ್ತಿದ ಮಂಗ, ಕಾಲಸಂದಿ ತೂರಿಕೊಳುವ ಬೆಕ್ಕು, ರೋಗವಾಹಕ ಜೀವಿಯ ಅರೆಬೆಂದ ಮಾಂಸದಡುಗೆ, ತರಕಾರಿ-ಮಾಂಸದ ಮಾರುಕಟ್ಟೆಗಳಲ್ಲಾಗುವ ಮನುಷ್ಯ-ಪ್ರಾಣಿ ಸಂಪರ್ಕ – ಇವೇ ಮೊದಲಾದ ಕಾರಣಗಳಿಗೆ ಮನುಷ್ಯರಲ್ಲಿ ಪ್ರಾಣಿಯ ವೈರಸ್ ಸೇರಿಬಿಡಬಹುದು. ಹಾಗೆಯೇ ಇಕೋ ಟೂರಿಸಂ, ಅತಿಕ್ರಮಣ, ಒತ್ತುವರಿ, ವಲಸೆಗಳಿಂದ ಪ್ರಾಣಿಗಳಿಗೆ ನಮ್ಮ ವೈರಸ್‌ಗಳನ್ನು ನಾವೂ ದಾಟಿಸುತ್ತಿರಬಹುದು.

ನವೆಂಬರ್ 2019ರಿಂದ ಇದುವರೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನರನ್ನು ಕೊಂದಿರುವ ಮರ‍್ಸ್ ತಾನು ಅಂಟಿದ 30% ಜನರನ್ನು ಕೊಂದು ಹಾಕುವಷ್ಟು ಅಪಾಯಕಾರಿ. ಈಗ ಬಂದೆರಗಿರುವ ಕೋವಿಡ್-19ರ ಸ್ವಭಾವ ನಮಗಿನ್ನೂ ತಿಳಿದಿಲ್ಲ. ಈ ಬರಹ ಬರೆಯುತ್ತಿರುವ 22-3-20ರ ಮಧ್ಯಾಹ್ನದವರೆಗೆ ಕೋವಿಡ್-19 ನಿಂದ 3,12,500 ರೋಗಿಗಳು ಬಾಧಿತರಾಗಿದ್ದರೆ 13,424 ಜನ ಮರಣ ಹೊಂದಿದ್ದಾರೆ. ಮೂರು ತಿಂಗಳಲ್ಲಿ ಅಂಟಾರ್ಕ್ಟಿಕಾ ಬಿಟ್ಟು ಎಲ್ಲ ಖಂಡಗಳಿಗೂ ಅದು ಹರಡಿದೆ. 167ಕ್ಕಿಂತ ಹೆಚ್ಚು ದೇಶಗಳಲ್ಲಿ ಕೋವಿಡ್‌ನ ಸೋಂಕಿದೆ. ಈಗದು ಯೂರೋಪ್ ಕೇಂದ್ರಿತ. ಇಟಲಿ, ಇರಾನ್, ಸ್ಪೇನ್‌ನಲ್ಲಿ ವೇಗವಾಗಿ ಹರಡುತ್ತಿದೆ. ಮರಣ ಪ್ರಮಾಣ 3.4 % ಇದೆ.

ಏನಿದು ಕರೋನಾ, ಕೋವಿಡ್?

ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಉಸಿರಾಟದ ತೀವ್ರ ತೊಂದರೆಯನ್ನುಂಟುಮಾಡುವ ಹಲವು ರೋಗಿಗಳು ಆಸ್ಪತ್ರೆಗೆ ದಾಖಲಾದರು. ಹೊಸವರ್ಷ ಕೊಡುತ್ತಿರುವ ಕೊಡುಗೆಯೋ ಎಂಬಂತೆ ರೋಗಕಾರಣವಾದ ‘ಹೊಸ ಕರೋನಾ ವೈರಸ್’ ಪತ್ತೆಯಾಯಿತು. ವುಹಾನ್‌ನ ಕಡಲ ಆಹಾರಪದಾರ್ಥಗಳ ಸಗಟು ಮಾರುಕಟ್ಟೆಯಿಂದ ಅದು ಹರಡಿದೆ ಎನ್ನಲಾಯಿತು.

ಬಾವಲಿಗಳ ದೇಹಲ್ಲಿರುವ ಕರೋನಾ ವೈರಸ್‌ಗೆ 96% ಸಾಮ್ಯತೆ ಇರುವ ವೈರಾಣು ರೋಗಿಗಳಲ್ಲಿ ಪತ್ತೆಯಾಯಿತು. ಆದರೆ ಮಾರುಕಟ್ಟೆಯಲ್ಲಿ ಬಾವಲಿಯ ಮಾರಾಟ ಇಲ್ಲದಿದ್ದ ಕಾರಣ ಪ್ಯಾಂಗೊಲಿನ್‌ನಂತಹ ಮಧ್ಯವರ್ತಿ ಪ್ರಾಣಿಯಿಂದ ಅಥವಾ ಮಾರುಕಟ್ಟೆಯಲ್ಲಿದ್ದ ಹಾವಿನ ಮಾಂಸದಿಂದ ಅದು ಬಂದಿರಬಹುದೆಂದು ಶಂಕಿಸಲಾಯಿತು. ಕೊನೆಗೆ ಅದಕ್ಕೆ ಕೋವಿಡ್-19 ಎಂಬ ನಾಮಕರಣ ಮಾಡಿದರು. ಇಲ್ಲಿಯವರೆಗೆ ಗೊತ್ತಿರದ ಹೊಸ ವೈರಸ್ ಆಗಿದ್ದರಿಂದ ‘ನೊವೆಲ್’ ವೈರಸ್ ಎಂದು ಕರೆಸಿಕೊಂಡಿತು.

ಸೂರ್ಯನ ಚಿತ್ರ ಬರೆವಾಗ ಉರೂಟು ಸೊನ್ನೆಯ ಸುತ್ತ ಪ್ರಭೆ ಬರೆಯುತ್ತಿದ್ದೆವು, ನೆನಪಿದೆಯೆ? ಅದು ಸೌರ ಕರೋನಾ. ಅಂಥದೇ ರಚನೆಯನ್ನು ಮೈತುಂಬ ಹೊದ್ದಿರುವಂಥವು ಕರೋನಾ ವೈರಸ್‌ಗಳು. ಎಲ್ಲ ರೀತಿಯ ಕರೋನಾ ವೈರಸ್ಸುಗಳೂ ಮಾರಣಾಂತಿಕವಲ್ಲ. ಕೆಲವು ನೆಗಡಿ, ಕೆಮ್ಮು, ಸಣ್ಣ ಜ್ವರಕ್ಕೆ ಮುಗಿದುಹೋಗುತ್ತವೆ. ಹೊಸಋತುವಿನ ಆರಂಭದ ದಿನಗಳ ತಂಡಿ, ಸಣ್ಣಜ್ವರ, ಗಂಟಲುರಿ ಕರೋನಾದಿಂದ ಆಗಿರುವ ಸಾಧ್ಯತೆಯೂ ಇದೆ. ಎಲ್ಲೋ ಕೆಲವೊಮ್ಮೆ ದುಷ್ಟತನವನ್ನೆಲ್ಲ ಆವಾಹಿಸಿಕೊಂಡುಬರುವ ಕೇಡಿಗ ತಳಿಗಳು ಹುಟ್ಟಿಬಿಡುತ್ತವೆ. ಈಗ ಚಾಲ್ತಿಯಲ್ಲಿರುವ ಮರ‍್ಸ್-2019 ಕೋವಿಡ್-19ಅಂತಹವು.

10 ಸಾವಿರ ವರ್ಷಗಳ ಹಿಂದೆ ಭೂಮಿಗೆ ಬಂದ ಕರೋನಾ ವೈರಸ್ ಬಿಸಿರಕ್ತದ ಬೆನ್ನೆಲುಬಿರುವ ಪ್ರಾಣಿಗಳು, ಹಕ್ಕಿ, ಬಾವಲಿಗಳಿಂದ ಮನುಷ್ಯರಿಗೆ ಬಂದಿದ್ದು. ಹಂದಿ, ದನ, ಕೋಳಿ, ನಾಯಿ, ಫೆರೆಟ್, ಕುದುರೆ, ಟರ್ಕಿ, ಬೆಕ್ಕು, ಮೊಲಗಳಲ್ಲಿ ಶೀತ, ಭೇದಿ, ಕರುಳಿನ ತೊಂದರೆಯುಂಟುಮಾಡುವ ಈ ವೈರಸ್ ಮನುಷ್ಯರನ್ನು ಬಾಧಿಸತೊಡಗಿದ್ದು ಇತ್ತೀಚಿನ ಶತಮಾನಗಳಲ್ಲಿ. ನೂರಿನ್ನೂರು ವರ್ಷಗಳ ಹಿಂದೆ ಪ್ರಾಣಿಗಳ ಶ್ವಾಸಕ್ರಿಯೆಯನ್ನು ಬಾಧಿಸುವ ಕರೋನಾ ವೈರಸ್ ಬಂದರೆ, ಇತ್ತೀಚೆಗೆ ಮನುಷ್ಯರನ್ನು ಬಾಧಿಸುವ ಸಾರ‍್ಸ್, ಮರ‍್ಸ್ ಕಾಯಿಲೆಯ ವೈರಸ್ ಉತ್ಪತ್ತಿಯಾಗಿವೆ.

ಕೋವಿಡ್ 19 ಬಂದರೆ ಏನಾಗುವುದು?

  • ಏನೂ ಆಗದೇ ಇರಬಹುದು. ಈ ಸಾಧ್ಯತೆಯೇ ಹೆಚ್ಚು.
  • ಕೆಲವರಿಗೆ ವೈರಸ್ ಸೋಂಕುಂಟಾದ ಹದಿನಾಲ್ಕು ದಿನಗಳೊಳಗೆ ತಂಡಿ, ಗಂಟಲುರಿ, ಸಣ್ಣ ಜ್ವರ, ಭೇದಿ ಶುರುವಾಗುತ್ತದೆ.
  • ನಂತರ ಮೂಗು, ಗಂಟಲ ಮೂಲಕ ಶ್ವಾಸಕೋಶ ಪ್ರವೇಶಿಸುವ ವೈರಸ್ ಕೆಲವರಲ್ಲಿ ತೀವ್ರತರದ ನ್ಯುಮೋನಿಯಾ ಉಂಟುಮಾಡುತ್ತದೆ. ಅತಿಜ್ವರ, ಕೆಮ್ಮು, ದಮ್ಮು, ವಾಂತಿ, ತಲೆನೋವು, ಉಸಿರಾಟದ ತೊಂದರೆ ಹೆಚ್ಚುತ್ತದೆ.
  • ಅತಿ ತೀವ್ರತರವಾಗುವ ಕೆಲವು ಪ್ರಕರಣಗಳಲ್ಲಿ ವಿವಿಧ ಅಂಗಾಂಗಗಳ ವೈಫಲ್ಯತೆಯಾಗಿ ಮರಣವುಂಟಾಗುತ್ತದೆ.
  • ಇದುವರೆಗೆ ರೋಗ ಬಾಧಿಸಿದವರಲ್ಲಿ 60 ವರ್ಷ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕುಂಠಿತಗೊಂಡವರು, ಎಳೆಯ ಮಕ್ಕಳೇ ಹೆಚ್ಚಿದ್ದಾರೆ. ಬಡದೇಶಗಳಿಗಿಂತ ಮುಂದುವರೆದ ದೇಶಗಳನ್ನು ಹೆಚ್ಚು ಬಾಧಿಸಿದೆ. ಇಂದು ವಿಶ್ವಪಿಡುಗು (ಪ್ಯಾಂಡೆಮಿಕ್) ಎಂದು ಘೋಷಿಸಲ್ಪಟ್ಟಿದೆ. ಯಾಕೆಂದರೆ ಅದು ಸುಲಭದಲ್ಲಿ ಹರಡುವಂಥದು. ಆದರೆ ಇದರಿಂದಾಗುವ ಸಾವುನೋವುಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಸರ್ಕಾರಗಳು, ಸಂಸ್ಥೆಗಳು, ಸಮಾಜಗಳು ನಾನಾ ಸಲಹೆ, ಸೂಚನೆಯಿತ್ತಿವೆ.

ಹರಡುವಿಕೆ ತಡೆಯಲು ಇರುವ ಕೆಲವು ಸುಲಭ ತಂತ್ರಗಳಿವು

  1. ಅತಿ ಅನಿವಾರ್ಯವಲ್ಲದ ಎಲ್ಲ ಪ್ರಯಾಣ ರದ್ದುಗೊಳಿಸಿ ಇದ್ದಲ್ಲೇ ಇರುವುದು.
  2. ಬಟ್ಟೆ ಮೇಲೆ ವೈರಸ್ 6 ರಿಂದ 12 ಗಂಟೆ ಕಾಲ ಬದುಕಬಹುದು. ಈ ವೈರಸ್ ಉಷ್ಣಸೂಕ್ಷ್ಮ. 30-35 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಗೆ ಹಾಗೂ ಸೋಪಿಗೆ ಸತ್ತು ಹೋಗುತ್ತದೆ. ಹಾಗಾಗಿ ಪದೇಪದೇ ಸೋಪು ನೀರಿನಲ್ಲಿ ಕೈ ತೊಳೆಯಬೇಕು. ಸೋಪು ಹಚ್ಚಿ ಬಟ್ಟೆ ತೊಳೆದು ಬಿಸಿಲಲ್ಲಿ ಒಣಗಿಸಬೇಕು.
  3. ಕೆಮ್ಮುವಾಗ ಸೀನುವಾಗ ಮುಖಗವಸಿನಿಂದ ಅಥವಾ ವಸ್ತ್ರದಿಂದ ಮೂಗುಬಾಯಿ ಮುಚ್ಚಿಕೊಂಡಿರಬೇಕು. ಯಾಕೆಂದರೆ ಒಮ್ಮೆ ಸೀನಿದರೆ ಅಥವಾ ಕೆಮ್ಮಿದರೆ 20,000 ಕಿರುಹನಿಗಳು ವಾತಾವರಣಕ್ಕೆ ಸೇರುತ್ತವೆ. ಪ್ರತಿ ಕಿರುಹನಿಯೂ ನೂರಾರು ವೈರಸ್ ಕಣಗಳನ್ನು ಹೊಂದಿದ್ದು ಎದುರಿರುವವರನ್ನು ಬೇರೆಬೇರೆ ರೀತಿ ತಲುಪುತ್ತವೆ. ಹಾಗಾಗಿ ಜನರ ನಡುವೆ ಇರುವಾಗಲೆಲ್ಲ ಮುಖಗವಸು ತೊಡಬೇಕು.
  4. ಕೆಮ್ಮುವವರು, ಸೀನುವವರಿಂದ ಮೂರು ಮೀಟರ್ ದೂರ ಇದ್ದರೆ ಒಳ್ಳೆಯದು. ಮೂರು ಮೀಟರ್ (10 ಅಡಿ) ಅಂತರ ಸಿಕ್ಕರಷ್ಟೇ ಕೆಮ್ಮು, ಸೀನಿನ ಹನಿಗಳು ನೆಲ ಮುಟ್ಟುತ್ತವೆ.
  5. ಬಂದವರನ್ನು ಸ್ವಾಗತಿಸುತ್ತ ಅಪ್ಪಿಕೊಳ್ಳುವುದು, ಕೈಕುಲುಕುವುದು, ಮುತ್ತಿಕ್ಕುವುದು ಮಾಡಬಾರದು. ಸಾಮಾಜಿಕ ಅಂತರವಿಟ್ಟುಕೊಂಡು ದೂರದಿಂದಲೇ ಹಾರೈಸಬೇಕು.
  6. ಲೋಹದ ಮೇಲ್ಮೈ ಮೇಲೆ ವೈರಸ್ 12 ಗಂಟೆ ಕಾಲ ಜೀವಂತ ಇರಬಲ್ಲದು. ಹಾಗಾಗಿ ಅಂತಹ ಮೇಲ್ಮೈಗಳನ್ನು ಮುಟ್ಟುತ್ತ ಇರುವವರು ಪದೇಪದೇ ಸೋಪು ಹಚ್ಚಿ (ಸ್ಯಾನಿಟೈಸರ್ ಹಚ್ಚಿ ಅಲ್ಲ) ಕೈ ತೊಳೆಯಬೇಕು. ಅಂತಹ ಮೇಲ್ಮೈಗಳನ್ನೂ ಶುಚಿಗೊಳಿಸಬೇಕು.
  7. ನಮ್ಮ ಮೈಕೈಮೇಲೆ 5-10 ನಿಮಿಷ ವೈರಸ್ ಜೀವಂತ ಉಳಿಯಬಹುದು. ಆದರೆ ಆ 5-10 ನಿಮಿಷದಲ್ಲಿ ನಾವು ಅಪ್ರಜ್ಞಾಪೂರ್ವಕವಾಗಿ ಕಣ್ಣು, ಮೂಗು, ಬಾಯಿ, ಕಿವಿ ಮುಟ್ಟಿ ಅಲ್ಲೆಲ್ಲ ಸೇರಿಸಿರುತ್ತೇವೆ. ಹಾಗಾಗಿ ನಮ್ಮ ಮೈ ಮುಖ ಮುಟ್ಟಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು.

2018ರಲ್ಲಿ ಮಲೇರಿಯಾದಿಂದ ವಿಶ್ವಾದ್ಯಂತ 4 ಲಕ್ಷ ಜನ ಸತ್ತಿದ್ದಾರೆ. ಏಡ್ಸ್‌ನಿಂದ 7.7 ಲಕ್ಷ ಜನ ಅಸು ನೀಗಿದ್ದಾರೆ. ಪ್ರತಿ ವರ್ಷ 22 ಸಾವಿರ ಜನ ಡೆಂಗಿಗೆ ಬಲಿಯಾಗುತ್ತಾರೆ. ಹುಚ್ಚುನಾಯಿ ಕಡಿತದ ರೇಬಿಸ್‌ನಿಂದ ವಾರ್ಷಿಕ 55 ಸಾವಿರ ಜನ ಸಾಯುತ್ತಾರೆ. ಒಂದೂವರೆ ಲಕ್ಷ ಜನ ಟೈಫಾಯ್ಡ್‌ನಿಂದ ಸಾಯುತ್ತಾರೆ. 40 ಸಾವಿರ ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ. ಹಾಗಿರುವಾಗ ಇದುವರೆಗೆ 13000 ಜನರನ್ನು ಕೊಂದ ಕೋವಿಡ್ ಬಗೆಗೇಕೆ ಇಷ್ಟು ಭೀತಿ?

ಭೀತಿ ಏಕೆಂದರೆ ನಮಗೆ ಅದರ ಬಗ್ಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು. ಅದರ ಕಾರಣ, ನಿಯಂತ್ರಣ, ಚಿಕಿತ್ಸೆ, ಪರಿಣಾಮ, ಲಸಿಕೆ, ಹರಡುವಿಕೆ ಬಗೆಗೆ ಹೆಚ್ಚು ಗೊತ್ತಿಲ್ಲ. ಇನ್ನೂ ಲಸಿಕೆ, ಚುಚ್ಚುಮದ್ದು ಕಂಡುಹಿಡಿದಿಲ್ಲ. ಮನುಷ್ಯರ ಮೇಲೆ ಪ್ರಯೋಗಿಸಬಹುದಾದ ಲಸಿಕೆ ಕಂಡುಹಿಡಿಯಲು ತಿಂಗಳುಗಳೇ ಬೇಕಾಗಬಹುದು. ಬೃಹತ್ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ವರುಷಗಳೇ ಬೇಕಾಗಬಹುದು. ಹಾಗಾಗಿ ಇದರ ಬಗೆಗೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತವಾಗಿದೆ.

14ನೇ ಶತಮಾನದ ಬ್ಯುಬೋನಿಕ್ ಪ್ಲೇಗ್ ವಿಶ್ವದ ಕಾಲುಭಾಗ ಜನಸಂಖ್ಯೆಯನ್ನು ಕೊಂದು ಹಾಕಿತ್ತು. 102 ವರ್ಷ ಕೆಳಗೆ, 1918ರಲ್ಲಿ ಬಂದ ಎಚ್೧ಎನ್೧ ಇನ್‌ಫ್ಲುಯೆಂಜಾ ಕಾಯಿಲೆ ವಿಶ್ವಾದ್ಯಂತ ಮಿಂಚಿನಂತೆ ಹರಡಿ 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. (ವಿಶ್ವದ ಮೂರನೆ ಒಂದು ಭಾಗ ಜನರಿಗೆ ಸೋಕಿದ ಆ ವೈರಸ್ ಹಕ್ಕಿಗಳಿಂದ ಮನುಷ್ಯರಿಗೆ ಬಂದಿತ್ತು.) 2009ರ ಇನ್‌ಫ್ಲುಯೆಂಜಾ ಎಚ್1ಎನ್1 ಕನಿಷ್ಟ 2 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತು. (ಅದು ಹಂದಿಗಳಿಂದ ಮನುಷ್ಯರಿಗೆ ರವಾನೆಯಾಗಿತ್ತು.) ಇದೂ ಅಂತಹ ಒಂದು ವಿಶ್ವವ್ಯಾಧಿಯಾಗದಿರಲಿ ಎನ್ನುವುದೇ ಈ ಎಲ್ಲ ಮುನ್ನೆಚ್ಚರಿಕೆಗಳ ಉದ್ದೇಶವಾಗಿದೆ.

ಆದ್ದರಿಂದ ಕೋವಿದಕ್ಕೆ ಅಂಜದೇ, ಆತಂಕದಿಂದ ದಿನ ದೂಡದೇ, ಸಮಯ ವ್ಯಯವಾಯಿತೆಂದು ದುಃಖಿಸದೇ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳೋಣ. ಅನಿವಾರ್ಯವಲ್ಲದ, ತುರ್ತು ಅಲ್ಲ ಎಲ್ಲ ತಿರುಗಾಟ, ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸೋಣ. ಚಿಕಿತ್ಸೆಯ ಹುಸಿ ಭರವಸೆಗಳಿಗೆ, ಗಾಳಿಸುದ್ದಿಗಳಿಗೆ ಕಿವಿಗೊಡದಿರೋಣ. ಅನಾಯಾಸವಾಗಿ ಸಿಕ್ಕ ಈ ವಿರಾಮ-ರಜೆಯ ಅಮೂಲ್ಯ ಸಮಯವನ್ನು ಕುಟುಂಬದೊಂದಿಗೆ ಕಳೆಯಲಿಕ್ಕೆ, ಆತ್ಮಾವಲೋಕನ ಮಾಡಿಕೊಳ್ಳಲಿಕ್ಕೆ, ನಾಳಿನ ನಡೆಗಳ ಬಗೆಗೆ ಯೋಚಿಸಲಿಕ್ಕೆ ವಿನಿಯೋಗಿಸೋಣ. ನಮ್ಮ ಮುಂದಿನ ತಲೆಮಾರಿಗೆ ಆರೋಗ್ಯವಂತ ನೆಲ, ಸಮಾಜ ಬಿಟ್ಟು ಹೋಗುವುದು ಹೇಗೆಂಬ ಬಗೆಗೆ ಚಿಂತಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ ಖಾಲಿ ಇದ್ದ 40 ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೆಪ್ಟೆಂಬರ್.12 ರಂದು ಜಿಲ್ಲಾ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಆಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ಬಂದು ಪರಿಶೀಲಿಸಬಹುದಾಗಿದೆ. ಅಥವಾ www.davangerepolice.karnataka.gov.in ವೆಬ್‍ಸೈಟ್ ಮೂಲಕ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರಗದಲ್ಲಿ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ

Published

on

ಸುದ್ದಿದಿನ,ಶಿವಮೊಗ್ಗ:ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಂಪಿಯ ನಿರ್ದೇಶಕರಾದ(ಪುರಾತತ್ತ್ವ )(ಪ) ಡಾ.ಆರ್.ಶೇಜೇಶ್ವರ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ತೀರ್ಥಹಳ್ಳಿ ತಾಲ್ಲೂಕಿನ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಸುಮಾರು ಎರಡು ಮೀಟರ್ ಉದ್ದದ ಗ್ರಾನೈಟ್ ಶಿಲೆಯ “ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ”.

ಶಿರ ಛೇದನ ಸ್ಮಾರಕ ಶಿಲ್ಪವು ಎರಡು ಪಟ್ಟಿಕೆಗಳಿಂದ ಕೂಡಿದ್ದು ಕೆಳಗಿನ ಪಟ್ಟಿಕೆಯಲ್ಲಿ ವೇಳಾವಳಿ/ ಗರುಡ ಹೋಗುವ ವೀರ ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದಿದ್ದಾನೆ, ಇವನಿಗೆ ಹಿಂಭಾಗದಲ್ಲಿ ಸೇವಕ ಛತ್ರಿಯನ್ನು ಹಿಡಿದಿದ್ದಾನೆ, ಆದ್ದರಿಂದ ಇವನನ್ನು ರಾಜ ಪ್ರಮುಖನೆಂದು ತಿಳಿಯಬಹುದಾಗಿದೆ. ಹಿಂಭಾಗದಲ್ಲಿ ಮಹಿಳೆಯು ಕತ್ತಿಯನ್ನು ಹಿಡಿದು ನಿಂತಿದ್ದಾಳೆ.

ಎರಡನೇ ಪಟ್ಟಕೆಯಲ್ಲಿ ಗರುಡ ಹೊಂದತಹ ವೀರನು ವೀರಾಸನದಲ್ಲಿ ನಿಂತಿದ್ದು ರುಂಡವನ್ನು ಕತ್ತರಿಸಲಾಗಿದ್ದು, ಬಲಗೈಯಲ್ಲಿ ಕತ್ತಿಯನ್ನು ಹಿಡಿದು ಮುಂಡದ ಮೇಲೆ ಹಲಗೆಯ ರೀತಿಯನ್ನು ಹೊತ್ತುಕೊಂಡಿದ್ದು ಇದನ್ನು ಕೈಯಲ್ಲಿ ಹಿಡಿದಿರುವಂತಿದೆ. ಈ ಶಿರ ಛೇದನ ಶಿಲ್ಪದ ಪಕ್ಕದಲ್ಲಿ ಮಹಿಳೆಯು ಶಿರ ಛೇದನವಾದ ರುಂಡವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ.

ಮೂರನೇ ಪಟ್ಟಿಕೆಯಲ್ಲಿ ಪಟ್ಟಿಕೆಯ ಶಿಲ್ಪಗಳ ಬದಲು ಲಿಂಗದ ರೀತಿಯಲ್ಲಿ ಇರುವ ಕಂಬವಿದ್ದು ಇದರಲ್ಲಿ ಲಿಂಗದ ಉಬ್ಬು ಶಿಲ್ಪವಿದೆ. ಈ ಲಿಂಗದ/ಕAಬದ ಮೇಲೆ ಸಮತಟ್ಟಾಗಿದೆ.
ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪದ ಮಹತ್ವ: ಆತ್ಮಬಲಿದಾನವು ಹಿಂದೂಗಳ ದೃಷ್ಟಿಯಲ್ಲಿ ಮಹತ್ವಪೂರ್ಣವಾಗಿದ್ದು, ಆತ್ಮ ಬಲಿದಾನ ಮಾಡಿಕೊಳ್ಳಲು ಶುಭ ತಿಥಿಗಳು ಒಳ್ಳೆಯವು ಎಂಬ ನಂಬಿಕೆಯಿದ್ದು, ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂತಹದ್ದು ಆತ್ಮ ಬಲಿದಾನ(ದೇಹತ್ಯಾಗ) ಎನ್ನಬಹುದಾಗಿದೆ.

ಆತ್ಮಬಲಿದಾನವು ಆತ್ಮಹತ್ಯೆಗಿಂತ ವಿಶೇಷವಾಗಿದ್ದು ಇದು ಸಮಾಜದ ಒಳತಿಗೋಸ್ಕರ ಆಗಿರುವಂತಹದ್ದು ಹಾಗೂ ಪೂರ್ವ ನಿಯೋಜಿತವಾಗಿರುವಂತಹದ್ದು. ಈ ಆತ್ಮ ಬಲಿದಾನದಲ್ಲಿ ಹಲವು ಬಗೆಗಳಿವೆ. ಆತ್ಮಬಲಿದಾನವನ್ನು ಮಾಡಿಕೊಂಡ ವೀರರು ಯಾವುದೇ ಹೋರಾಟದಲ್ಲಿ ಹೋರಾಡಿ ಮಡಿದವರಾಗಿರುವುದಿಲ್ಲ. ಆದರೆ ಇವರು ಯಾವುದೇ ಹೋರಾಟದಲ್ಲಿ ಮಡಿದ ವೀರರಿಗಿಂತ ಕಡಿಮೆಯಿರುವುದಿಲ್ಲ.

ಆತ್ಮ ಬಲಿದಾನದಲ್ಲಿ ಚಿತಾಪ್ರವೇಶ, ಜಲಪ್ರವೇಶ, ಊರ್ಧ್ವಪತನದ ಬಗೆಗಳಿವೆ. ಚಿತಾ ಪ್ರವೇಶ ಎಂದರೆ ಬೆಂಕಿಗೆ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು, ಜಲಪ್ರವೇಶ ಎಂದರೆ ಗಂಗೆ, ವಾರಾಣಾಸಿ, ಪ್ರಯಾಗ, ತುಂಗಭದ್ರೆ ಮೊದಲಾದೆಡೆ ನೀರಿನಲ್ಲಿ ಮುಳುಗಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಹಾಗೂ ಊರ್ಧ್ವ ಬಲಿದಾನವೆಂದರೆ ಬೆಟ್ಟ, ಮರ ಹಾಗೂ ದೇವಾಲಯಗಳ ಶಿಖರಗಳಿಂದ ಕೆಳಗೆ ಬಿದ್ದು ಅಥವಾ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಎನ್ನಬಹುದು.

ಈ ಆತ್ಮಬಲಿದಾನದಲ್ಲಿ ಸಹಗಮನ ಪದ್ಧತಿ, ನಿಸಿಧಿ ಶಾಸನ ಶಿಲ್ಪಗಳು, ಸೂರ್ಯಗ್ರಹಣ ಶಾಸನ ಶಿಲ್ಪಗಳು ಇದರಲ್ಲಿ ಉರಿ ಉಯ್ಯಲೆ ಶಿಲ್ಪಗಳು, ಶೂಲ ಬಲಿ, ಶಿರ ಛೇದನ(ಬಲಿ) ಶಿಲ್ಪ, ಸಿಡಿದಲೆ ಶಾಸನ ಶಿಲ್ಪಗಳು, ಇರಿತ ಬಲಿ, ಬೆಂಕಿಬಲಿ ಶಿಲ್ಪ, ಕಿಳ್ಗುಂಟೆ, ಗರುಡ ಪದ್ಧತಿ ಹಾಗೂ ವಿಶೇಷವಾಗಿ ಚಾಟಿ ವಿಟನಿಂದ ಆತ್ಮಬಲಿದಾನ ಮಾಡಿಕೊಂಡಿದ್ದು, ಇವನ ಜೊತೆಯಲ್ಲಿ ಇವನ ಹೆಂಡತಿಯು ಸಹಗಮನ ಮಾಡಿಕೊಂಡಿರುವ ಆತ್ಮಬಲಿದಾನದ ಸ್ಮಾರಕ ಶಿಲ್ಪಮೊದಲಾದ ಆತ್ಮ ಬಲಿದಾನದ ಸ್ಮಾರಕ ಶಾಸನ ಶಿಲ್ಪಗಳು ಕರ್ನಾಟಕಲ್ಲಿ ಕಂಡುಬರುತ್ತವೆ.

ಈ ಸ್ಮಾರಕ ಶಿಲ್ಪವು ಇದುವರೆಗೂ ದೊರೆತಿರುವ ಶಿರ ಛೇದನ ಶಿಲ್ಪಗಳಲ್ಲಿ ತುಂಬಾ ಅಪರೂಪದ್ದು, ಈ ಸ್ಮಾರಕ ಶಿಲ್ಪವನ್ನು ಗರುಡ ಸ್ತಂಭವೆAದು ಕರೆಯಬಹುದು. ಕರ್ನಾಟಕದಲ್ಲಿ ಇದುವರೆಗೂ ಗರುಡರಾಗಿರುವಂತಹ ಎರಡು ಸ್ತಂಭಗಳು ಹಳೇಬೀಡು ಮತ್ತು ಅಗ್ರಹಾರ ಬಾಚಿಹಳ್ಳಿಯಲ್ಲಿ ಮಾತ್ರ ಕಂಡುಬAದಿವೆ. ಇವು ಹೊಯ್ಸಳರ ಕಾಲದ್ದಾಗಿವೆ.

ಆರಗದಲ್ಲಿ ದೊರೆತಿರುವ ಈ ಶಿರ ಛೇದನ ಸ್ಮಾರಕ ಶಿಲ್ಪವು ಶಾಸನರಹಿತವಾಗಿದ್ದು, ಮೇಲ್ಬಾಗದಲ್ಲಿ ಲಿಂಗದ ಆಕೃತಿಯನ್ನು ಹೊಂದಿದ್ದರೂ ಹಳೇಬೀಡಿನಲ್ಲಿ ಕಂಡುಬರುವ ಸ್ತಂಭದ ರೀತಿಯಲ್ಲಿದೆ. ಕೆಳಭಾಗದಲ್ಲಿ ಚೌಕಾಕರಾವಾಗಿದ್ದು ಶಿಲ್ಪಗಳಿಂದ ಕೂಡಿದೆ.

ಲಿಂಗದ ರೀತಿಯ ಸ್ತಂಬದ ಮೇಲ್ಬಾಗದಲ್ಲಿ ಚಪ್ಪಟೆಯಾಗಿದೆ. ಆದ್ದರಿಂದ ಇದನ್ನು ಶಿವಲಿಂಗ ಎಂದು ಹೇಳುವುದು ಕಷ್ಟವಾಗಿದೆ. ಈ ಭಾಗವು ಹಳೆಬೀಡಿನ ಗರುಡಸ್ತಂಭದ ವೃತ್ತಾಕಾರದ ರೀತಿಯಲ್ಲಿದೆ. ಆರಗ ಶಿಲ್ಪದ ವೃತ್ತಾಕಾರದ ಸ್ತಂಭದ ಬುಡದಲ್ಲಿ ಯಾವುದೇ ಚಿಕಣಿ ಶಿಲ್ಪಗಳಿಲ್ಲ ಆದರೆ ಲಿಂಗದ ಉಬ್ಬು ಶಿಲ್ಪವನ್ನು ಕಂಡರಿಸಲಾಗಿದೆ.

ಕೆಳಭಾಗದ ಚೌಕಾಕಾರದ ಭಾಗದಲ್ಲಿ ಕೈಯಲ್ಲಿ ಹಿಡಿದಿರುವ ರುಂಡವನ್ನು ಮಹಿಳೆಯು ದೇವರಿಗೆ ಅರ್ಪಿಸಿ ಸತಿ ಹೊಗಿರಬಹುದು. ಗರುಡ ಹೋಗಿರುವಂತವರು ಶೈವರಾದಕಾರಾಗಿದ್ದು ರುಂಡವನ್ನು ಉಬ್ಬು ಶಿಲ್ಪದ ಲಿಂಗಕ್ಕೆ ಅರ್ಪಿಸಿದ್ದಾರೆ.

ಹೊಯ್ಸಳರ ಕಾಲದವರೆಗೆ ಇದ್ದಂತಹ ಗರುಡ ಪದ್ಧತಿ ವಿಜಯನಗರ ಅರಸರ ಕಾಲದಲ್ಲಿಯೂ ಮುಂದುವರೆಯಿತು ಎಂದು ಈ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆಯಿಂದ ತಿಳಿಯಬಹುದಾಗಿದೆ. ಹಳೇಬೀಡು ಮತ್ತು ಆರಗದ ಸ್ಥಂಬಗಳನ್ನು ಗಮನಿಸಿದಾಗ ಒಟ್ಟಾರೆಯಾಗಿ ಗರುಡ ಪದ್ಧತಿಯಲ್ಲಿ ಇದೇ ರೀತಿಯ ಸ್ತಂಭಳನ್ನು ಸ್ಥಾಪಿಸಿತಿದ್ದಿರಬೇಕು ಎಂಬುದನ್ನು ಊಹಿಸಬಹುದಾಗಿದೆ.

ಈ ಗರುಡ ಪದ್ಧತಿಯ ಸ್ಮಾರಕ ಶಿಲ್ಪದ ಬಗ್ಗೆ ಮಾಹಿತಿಯನ್ನು ಒದಗಿಸಿದ ಡಾ.ದೇವರಾಜಸ್ವಾಮಿ, ಡಾ. ಜಗದೀಶ, ಟಿ.ಎಂ.ಕೇಶವ, ಡಾ.ಗಂಗಾಂಬಿಕೆ ಗೋವರ್ಧನ, ರಮೇಶ ಹಿರೇಜಂಬೂರು, ಶಶಿಧರ ಹಾಗೂ ಮೋಹನ್ ಇವರುಗಳಿಗೆ ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಬಳ್ಳಾರಿ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ

Published

on

ಸುದ್ದಿದಿನ,ದಾವಣಗೆರೆ:ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ನಕಲಿ ವೈದ್ಯ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಿ ತಲಾ ಲಕ್ಷ ರೂ.ಗಳ ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ 57 ವರ್ಷದ ಶ್ರೀನಿವಾಸ್ ತಂದೆ ತಿಮ್ಮಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ಶೀನಪ್ಪಗೌಡ ಎಂಬುವರ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಶ್ರೀ ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಎಂದು ಪರವಾನಗಿ ಪಡೆದು ಜೊತೆಗೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಇವರು ಪಡೆದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಪಡಿಸಿ ಒಂದು ಲಕ್ಷ ದಂಡ ವಿಧಿಸಲಾಗಿದೆ.

ಮತ್ತೊಬ್ಬ ನಕಲಿ ವೈದ್ಯ ಹಿರೇಕೇರೂರು ತಾಲ್ಲೂಕಿನ ಹಿರೇ ಮರಬ ಗ್ರಾಮದ 45 ವರ್ಷದ ಲಕ್ಷ್ಮಣ ಬಿನ್ ಫಕ್ಕೀರಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ದೇವಸ್ಥಾನದ ಹತ್ತಿರ ಬಸವನಗೌಡ ಎಂಬುವರಿಂದ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು. ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.

ಈ ನಕಲಿ ಕ್ಲಿನಿಕ್ ಗಳ ಬಗ್ಗೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಾಜರು ಮಾಡಿ ಸಮಗ್ರ ವರದಿ ನೀಡಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿಯೊಂದಿಗೆ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending