Connect with us

ನೆಲದನಿ

‘ಹಾದಿಗಲ್ಲು’ : ಜನಪರ ಹೆಜ್ಜೆಗಳ ಅನನ್ಯ ಯಾನ

Published

on

  • ಡಾ.ಎನ್.ಕೆ.ಪದ್ಮನಾಭ,ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ಲಾಕ್‌ಡೌನ್‌ನ ಸುಧೀರ್ಘ ಅವಧಿಯ ನಂತರ ತೀರಾ ಇತ್ತೀಚೆಗೆ ನಮ್ಮ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಕ್ಲಾಸ್‌ಗಳು ಶುರುವಾದವು. ಕಳೆದ ವಾರದ ತರಗತಿಯಲ್ಲಿ ಸಾರ್ವಜನಿಕ ಸಂಪರ್ಕದ ಕುರಿತ ವ್ಯಾಖ್ಯಾನ ಆಧರಿಸಿ ಚರ್ಚೆ ಆರಂಭಿಸಿದ್ದೆ.

ಇಡೀ ಸರ್ಕಾರೀ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಲು ಆಡಳಿತದಲ್ಲಿ ಸಾರ್ವಜನಿಕ ಸಂಪರ್ಕ ಅಥವಾ ಪಬ್ಲಿಕ್ ರಿಲೇಷನ್ಸ್ ಎಂಬ ಪ್ರತ್ಯೇಕ ಇಲಾಖೆ ರೂಪಿಸಿ ಅದನ್ನು ಬಲಪಡಿಸುವುದರ ಕಡೆಗೆ ನೀತಿ ನಿರೂಪಕರು ಯೋಚಿಸುವ ಅಗತ್ಯವಿದೆ ಎಂಬ ಪ್ರತಿಪಾದನೆಯೊಂದಿಗೆ ತರಗತಿಯಲ್ಲಿ ನನ್ನ ಉಪನ್ಯಾಸ ಶುರುವಾಗಿತ್ತು.

ರೆಕ್ಸ್ ಹಾರ್ಲೋ ಅವರ ವಿಸ್ತೃತವಾದ ವ್ಯಖ್ಯಾನವನ್ನು ಈ ಕೇಂದ್ರ ಆಶಯ ಆಧರಿಸಿ ವಿವರಿಸಿದ್ದೆ. ಪ್ರತ್ಯೇಕವಾದ ಸ್ವಾಯತ್ತ ಸಂಸ್ಥೆಯಾಗಿ ಸರ್ಕಾರಿ ಆಡಳಿತದ ಉನ್ನತೀಕರಣಕ್ಕೆ ಹೇಗೆ ನೆರವಾಗಬಹುದು ಎಂಬುದನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಣೆಗೊಳಪಡಿಸಲು ಪ್ರಯತ್ನಿಸಿದ್ದೆ.

ಇದಾದ ಮರುದಿನ ನನ್ನ ಓದಿಗೆ ಸಿಕ್ಕಿದ್ದು ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರು ಬರೆದ ‘ಹಾದಿಗಲ್ಲು’ ಕೃತಿ. ‘ಆತ್ಮವೃತ್ತಾಂತದ ಮೊದಲ ಚರಣ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಐದನೇ ಮುದ್ರಣ ಕಂಡಿರುವ ಈ ಕೃತಿಯೊಂದಿಗಿನ ಓದಿನ ಯಾನ ನನ್ನ ತರಗತಿಯ ಚರ್ಚೆಯ ಮುಂದುವರಿದ ಭಾಗದಂತಿತ್ತು. ವ್ಯಕ್ತಿಗತ ಯಶಸ್ಸನ್ನು ಸಮಾಜಪರ-ಜನಪರ ಕೆಲಸಗಳೊಂದಿಗೆ ಸಮೀಕರಿಸಿ ಸಾಧನೆ ಸಾಧ್ಯವಾಗಿಸಿಕೊಂಡ ಹಿಂದಿನ ಮತ್ತು ವರ್ತಮಾನದ ಎಲ್ಲಾ ಸಾಧಕರೊಳಗೆ ಪಬ್ಲಿಕ್ ರಿಲೇಷನ್ಸ್ ತಂತ್ರಜ್ಞ ಕ್ರಿಯಾಶೀಲತೆ ಇರುತ್ತದೆ ಎಂಬ ನನ್ನ ತರಗತಿಯ ಪ್ರತಿಪಾದನೆಗೆ ಪೂರಕವಾದ ಸಮರ್ಥನಾ ಸಾಕ್ಷ್ಯವಾಗಿ ಇಡೀ ಕೃತಿ ಸಹಾಯಕವಾಯಿತು.

ಖಾಸಗೀಕರಣವೊಂದೇ ಸದ್ಯದ ಎಲ್ಲ ಬಗೆಯ ಸಮಸ್ಯೆಗಳಿಗೆ ಪರಿಹಾರೋಪಾಯ ಎಂಬ ಪೂರ್ವಗ್ರಹಪೀಡಿತ-ಅವಸರದ ದೃಷ್ಟಿಕೋನವೇ ವಿಜೃಂಭಿಸುತ್ತಿರುವಾಗ ಸರ್ಕಾರೀ ಆಡಳಿತದ ಪರಿಕಲ್ಪನೆಯೊಳಗೇ ಇರುವ ಸರ್ವೋದಯದ ಪ್ರಾಯೋಗಿಕ ಆಯಾಮವನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಕಾರಾತ್ಮಕ ಒತ್ತಡವನ್ನು ‘ಹಾದಿಗಲ್ಲು’ ಸೃಷ್ಟಿಸುತ್ತದೆ. ಈ ಕೃತಿಯ ಓದು ಶುರುವಾಗುವ ಮುನ್ನಾದಿನದ ನನ್ನ ತರಗತಿಯಲ್ಲಿ ಸರ್ಕಾರಿ ವ್ಯವಸ್ಥೆಯೊಳಗೆ ಪಿಆರ್ ಸ್ವಾಯತ್ತ ಸಂಸ್ಥೆಯಾಗಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾವಾರು ಮಟ್ಟಗಳಲ್ಲಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಪ್ರಸ್ತಾಪಿಸಿದ್ದೆ.

ದಯಾನಂದ ಅವರು ಬರೆದ ಒಂದೊಂದು ಅಧ್ಯಾಯವೂ ನನ್ನ ಪ್ರತಿಪಾದನೆಗೆ ಸಹಾಯಕವಾಗುವ ಬೌದ್ಧಿಕ ಪ್ರಾಯೋಗಿಕ ಸಂಪನ್ಮೂಲವಾಗಿ ಒದಗಿಬಂದಿದ್ದು ಒಂದು ವಿಶೇಷ ಅನುಭವ. ಒಂದು ಅಧ್ಯಾಯದಿಂದ ಮತ್ತೊಂದು ಅಧ್ಯಾಯಕ್ಕೆ ದಾಟಿಕೊಳ್ಳುವಾಗಲೆಲ್ಲಾ ಅವರೊಳಗೆ ಸುಪ್ತವಾದ ಸಾರ್ವಜನಿಕ ಸಂಪರ್ಕ ಕೌಶಲ್ಯದೊಂದಿಗೆ ಬೆರೆತುಹೋದ ಮನುಷ್ಯಪರ ಕಾಳಜಿ ಸರ್ಕಾರಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬಹುದು ಎಂಬ ಆಶಾವಾದ ಗಟ್ಟಿಗೊಳ್ಳುತ್ತಲೇ ಇತ್ತು.

ಉನ್ನತ ಹಂತದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ತಾನು ಪ್ರತಿನಿಧಿಸುವ ಆಡಳಿತಾತ್ಮಕ ವ್ಯವಸ್ಥೆಯೊಳಗೆ ಸಮಗ್ರ ಬದಲಾವಣೆ ತರುವ ಕನಸನ್ನು ಬಿತ್ತಿ ಸಮೃದ್ಧಿಯನ್ನು ನೆಲೆಗೊಳಿಸುವ ಮಾದರಿಗಳನ್ನು ಸೃಷ್ಟಿಸಬಹುದು. ಎಲ್ಲವೂ ಸರಿಯಿಲ್ಲ ಎಂಬ ಹತಾಶೆಗಿಂತಲೂ ಮಿತಿಗಳನ್ನೇ ಗುರುತಿಸಿ ಅವುಗಳನ್ನೇ ಸಮೃದ್ಧಿಯ ಕಡೆಗೆ ಪಯಣಿಸಲು ಒತ್ತಡವನ್ನುಂಟುಮಾಡುವ ಅಪೂರ್ವ ಅವಕಾಶಗಳನ್ನಾಗಿಸಿಕೊಂಡರೆ ಬದಲಾವಣೆ ಸಾಧ್ಯವಾಗುತ್ತದೆ. ಈ ಬಗೆಯ ಮಹತ್ವದ ಬದಲಾವಣೆಗಾಗಿ ಮ್ಯಾನೇಜ್‌ಮೆಂಟಿನ ಅಕ್ಯಾಡೆಮಿಕ್ ಅಧ್ಯಯನದ ಅವಶ್ಯಕತೆ ಇಲ್ಲ.

ಸದಾ ಸಕಾರಾತ್ಮಕ ಮನೋಬಲ, ವ್ಯಕ್ತಿಗತ ಬದುಕಿನ ಅನುಭವಗಳು, ಸ್ವತಃ ಕಂಡುಕೊಂಡ ವಿನೂತನ ಅವಲೋಕನದ ಮಾದರಿ, ಜಗತ್ತನ್ನು, ಸುತ್ತಮುತ್ತಲಿನ ಘಟನೆ- ಮನುಷ್ಯ ವರ್ತನೆಗಳನ್ನು ಸೂಕ್ಷ್ಮವಾಗಿ ನೋಡುವ ಚಿಕಿತ್ಸಕ ದೃಷ್ಟಿಕೋನ, ವೃತ್ತಿಪರ ಯಶಸ್ಸಿನ ಸ್ಪಷ್ಟ ಪ್ರಜ್ಞೆ- ಇವಿಷ್ಟೂ ಇದ್ದರೆ ಬಹುದೊಡ್ಡ ಸಾಮಾಜಿಕ ಪಲ್ಲಟಗಳಿಗೆ ಕಾರಣವಾಗಬಲ್ಲ ಕೊಡುಗೆಗಳನ್ನು ನೀಡಬಹುದು. ‘ಹಾದಿಗಲ್ಲು’ ಇಂಥದ್ದೊಂದು ಒಳನೋಟವನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ.

ಮ್ಯಾನೇಜ್‌ಮೆಂಟ್ ಅಕ್ಯಾಡೆಮಿಕ್ ವಲಯದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುವ ಸ್ವಾಟ್ ಅನಾಲಿಸಿಸ್ (SWOT Analysis – Strengths, Weaknesses, Opportunities and Threats)ಪರಿಕಲ್ಪನೆಯು ಪರಿಣಾಮಕಾರಿಯಾಗಿ ಪ್ರಯೋಗಕ್ಕೊಳಪಡಬೇಕಾಗಿರುವುದು ಸರ್ಕಾರೀ ಆಡಳಿತಾತ್ಮಕ ಹಂತಗಳಲ್ಲಿ. “ಯೋಜನೆಗಳು ರೂಪುಗೊಳ್ಳುತ್ತವೆ, ಹಾಗೆ ರೂಪುಗೊಂಡು ಅನುಷ್ಠಾನಗೊಳ್ಳದೇ ನಿಷ್ಪ್ರಯೋಜಕವೆನ್ನಿಸುತ್ತವೆ” ಎಂಬ ಸಾರ್ವತ್ರಿಕ ಟೀಕೆ ಈಗಲೂ ವ್ಯಕ್ತವಾಗುತ್ತಲೇ ಇರುತ್ತದೆ.

ಯಾರದೋ ಪ್ರಬಂಧಕ್ಕೆ, ಇನ್ಯಾರದೋ ಭಾಷಣಕ್ಕೆ, ಮತ್ತಿನ್ಯಾರದೋ ಭಾವಾವೇಶಭರಿತ ಜನಪ್ರಿಯ ಸ್ವರೂಪದ ವಾಕ್ ವಾಹಕ್ಕೆ ಈ ಟೀಕಾತ್ಮಕ ಹೇಳಿಕೆಯ ಧ್ವನಿ ಪುನರಾವರ್ತಿತವಾಗುತ್ತಲೇ ಇರುತ್ತದೆ. ಆಡಳಿತ ಮತ್ತು ವಿರೋಧ ಪಕ್ಷಗಳವರು ಈ ಹೇಳಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಆ ಕ್ಷಣದ ಲಾಭ ಪಡೆದುಕೊಳ್ಳುವ ತಾತ್ಪೂರ್ತಿಕ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಲೇ ಇರುತ್ತಾರೆ.

ಟಿಆರ್‌ಪಿ ಎಂಬ ಮಹಾಮಾಯೆಯ ಹಿಡಿತಕ್ಕೊಳಗಾದ ಸುದ್ದಿಮಾಧ್ಯಮಗಳೂ ಇವುಗಳನ್ನೇ ವೈಭವೀಕರಿಸುತ್ತವೆ.ಯೋಜನೆಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಸರ್ಕಾರಿ ವ್ಯವಸ್ಥೆಯ ಪುನರುತ್ಥಾನದ ಕುರಿತ ಪರಿಹಾರೋಪಾಯದ ತಾರ್ಕಿಕ ಸಂವಾದ ನಡೆದರೂ ಅದು ಸಂಪೂರ್ಣವಾಗಿ ಆಡಳಿತಾತ್ಮಕ ಪ್ರಾಯೋಗಿಕತೆಯಲ್ಲಿ ಪ್ರತಿಫಲಿತವಾಗದೇ ಉಳಿದುಬಿಟ್ಟಿದೆ.

ಬರೀ ಚರ್ಚೆ, ಸಮಾಲೋಚನೆ, ಚಿಂತನೆಗಳು, ಪ್ರಯತ್ನಗಳು ಬಿಡಿಬಿಡಿಯಾಗಿ ನಡೆದವೇ ಹೊರತು ನಿರೀಕ್ಷಿತ ಆಡಳಿತಾತ್ಮಕ ಪ್ರಯೋಗಶೀಲತೆ ಸಮಗ್ರವಾಗಿ ವ್ಯಕ್ತವಾಗಲಿಲ್ಲ. ಇಂಥದ್ದೊಂದು ಕೊರಗಿನೊಂದಿಗೇ ಹೊಸ ಪೀಳಿಗೆ ಬದುಕಬೇಕಾಗಿಲ್ಲ ಎಂಬುದನ್ನು ‘ಹಾದಿಗಲ್ಲು’ ಸ್ಪಷ್ಟಪಡಿಸುತ್ತದೆ. ಆಡಳಿತಾತ್ಮಕ ಪ್ರಯೋಗಶೀಲತೆ ಯಾವ ಯಾವ ರೀತಿಯಲ್ಲಿ ಅಳವಡಿಸಲ್ಪಡಬಹುದು ಎಂಬ ದಾರಿಗಳನ್ನು ಕಾಣಿಸುತ್ತದೆ.

ಆಡಳಿತದ ವಿವಿಧ ಹುದ್ದೆಗಳ ವಿವಿಧ ಹಂತಗಳ ಕಾರ್ಯನಿರ್ವಹಣೆಯು ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಹೇಗೆ ಪುನರ್‌ಸ್ವರೂಪ ಪಡೆದುಕೊಳ್ಳಬಹುದು ಎಂಬ ಹೊಳಹುಗಳನ್ನು ಹೊಳೆಸುತ್ತದೆ. ‘ಅಧಿಕಾರ’ ಮತ್ತು ‘ಅಧಿಕಾರಿ’ ಈ ಎರಡೂ ಪದಗಳ ಕುರಿತು ಬೇರೂರಿಬಿಟ್ಟಿರುವ ಹತಾಶೆ, ಅಸಮಾಧಾನ ಮತ್ತು ಆಕ್ರೋಶದ ಭಾವಗಳೆಲ್ಲವನ್ನೂ ಇಲ್ಲವಾಗಿಸಿ ಅವುಗಳ ಸ್ಥಾನಗಳಲ್ಲಿ ಆಶಾವಾದ, ಆತ್ಮಸಂತೃಪ್ತಿ ಮತ್ತು ಹೊಂಗನಸುಗಳ ಮಹತ್ವಾಕಾಂಕ್ಷೀ ಮನೋಬಲವನ್ನು ನೆಲೆಗೊಳಿಸಿಕೊಳ್ಳಲು ಈ ಕೃತಿಯು ಪ್ರೇರಣೆ ನೀಡುತ್ತದೆ.

ಐಎಎಸ್, ಕೆಎಎಸ್ ಅಧಿಕಾರಿಗಳ ಬಗ್ಗೆ ಜನರಲ್ಲಿ ತಪ್ಪುಕಲ್ಪನೆಯೊಂದಿದೆ. ಎಲ್ಲರೂ ಹೀಗೆ ಯೋಚಿಸುವುದಿಲ್ಲವಾದರೂ ಇದು ಇಡೀ ಸಾಮುದಾಯಿಕ ದೃಷ್ಟಿಕೋನದ ಮೇಲೆಯೇ ಪ್ರಭಾವ ಬೀರುತ್ತದೆ. ಅದೇನೆಂದರೆ, ಅಷ್ಟೆಲ್ಲಾ ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಅಧಿಕಾರಿಗಳಾಗಿ ನೇಮಕಗೊಂಡು ಏನನ್ನೂ ಓದಿಕೊಳ್ಳದ, ವಿಚಿತ್ರ ಧೋರಣೆಗಳೊಂದಿಗಿನ ಮಂತ್ರಿಗಳು, ರಾಜಕಾರಣಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ, ಅಂಥದ್ದೊಂದು ವಿಚಿತ್ರ ಸ್ಥಿತಿ ಎದುರಿಸಿ ಸ್ವಾಭಿಮಾನ ಬಲಿಕೊಡಬಾರದು ಎನ್ನುವ ಅವಸರದ ಧಾಟಿಯ ಮಾತುಗಳು ಕೇಳಿಬರುತ್ತವೆ.

ಇಂಥ ಅವಸರವಾದಿ ದೃಷ್ಟಿಕೋನಗಳನ್ನು ‘ಹಾದಿಗಲ್ಲು’ ಅಲ್ಲಗಳೆಯುತ್ತದೆ. ಐಎಎಸ್, ಕೆಎಎಸ್ ಅಧಿಕಾರಿ ಹುದ್ದೆಗಳು ಪ್ರತಿಷ್ಠಿತ ಮಂತ್ರಿಮಹೋದಯರ ಗುಲಾಮಗಿರಿಯ ಸಂಕೇತಗಳಲ್ಲ ಎಂಬುದನ್ನು ಅಧಿಕೃತವಾಗಿ ದೃಢಪಡಿಸುತ್ತದೆ. ವ್ಯಕ್ತಿಗತ ವೃತ್ತಿಬದ್ಧತೆ, ಬದಲಾವಣೆಗೆ ತುಡಿಯುವ ಅಂತರ್ಗತ ಶಕ್ತಿ, ಸದ್ಯದ ಕಾಲದ ಸವಾಲುಗಳಿಗೆ ಎದುರುಗೊಂಡು ಹೊಸತಾದ ಮುನ್ನಡೆ ಸಾಧಿಸುವ ಸೌಜನ್ಯಯುತ ಛಲವೊಂದಿದ್ದರೆ ಈ ಹುದ್ದೆಗಳ ನಿರ್ವಹಣೆಯು ಆತ್ಮತೃಪ್ತಿಯನ್ನು ತಂದುಕೊಡುತ್ತದೆ ಎಂಬುದನ್ನು ದಯಾನಂದ ಅವರು ಸ್ವಾನುಭವದ ನಿದರ್ಶನಗಳ ಮೂಲಕ ಸಾಬೀತುಪಡಿಸಿದ್ದಾರೆ.

ತಾವು ವಿವಿಧ ಇಲಾಖೆಗಳ ನೇತೃತ್ವ ವಹಿಸಿದಾಗಲೆಲ್ಲಾ ನಿಯಮಾವಳಿಗಳಿಗೆ ಅನುಗುಣವಾಗಿ ಅನುಷ್ಟಾನಕ್ಕೆ ತಂದ ಯೋಚನೆ, ಯೋಜನೆಗಳು, ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟ ತತ್‌ಕ್ಷಣದ ಕ್ರಮಗಳು, ಇಲಾಖೆಗಳಿಗೆ ಆಧುನಿಕ ತಾಂತ್ರಿಕಸ್ಪರ್ಶ ನೀಡಿದ ಕ್ರಾಂತಿಕಾರಿ ಹೆಜ್ಜೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಉನ್ನತಾಧಿಕಾರಿ ಹುದ್ದೆಯ ವೃತ್ತಿಪರ ಮೌಲ್ಯವನ್ನು ವಿಸ್ತರಿಸಿದ ಅನೇಕ ಅನುಭವಗಳ ಆಪ್ತ ಉಲ್ಲೇಖವು ಇಡೀ ಕೃತಿಯನ್ನು ಬದಲಾವಣೆಯ ಮಹೋನ್ನತ ಸಾಧ್ಯತೆಗಳನ್ನು ಕಂಡರಿಸುವ ಪ್ರಾಯೋಗಿಕ ಜ್ಞಾನಸಂಪನ್ಮೂಲವನ್ನಾಗಿಸಿದೆ.

ಈ ಕೃತಿಯು ಕೇವಲ ಆಡಳಿತಾತ್ಮಕ ಹುದ್ದೆ ನಿರ್ವಹಣೆಯ ಸ್ವಾನುಭವ ವಿವರಗಳ ಸಂಕಲನವಷ್ಟೇ ಅಲ್ಲ. ಈಗಾಗಲೇ ಬಾಳಿಹೋದ ನಮ್ಮ ಹಿರಿಯ ತಲೆಮಾರುಗಳು ಹಾದುಬಂದ ಒಡಲಬೇಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವ ಸೃಜನಶೀಲ ಆಕೃತಿಯನ್ನಾಗಿಯೂ ಇದನ್ನು ಗ್ರಹಿಸಬಹುದು. ಸಾಮಾಜಿಕ ಏಣಿ-ಶ್ರೇಣಿ ವ್ಯವಸ್ಥೆಯೊಳಗೆ ಯಾತನೆ ಅನುಭವಿಸುತ್ತಾ ಬದಲಾವಣೆಯ ಹೊಂಗನಸುಗಳಿಂದ ದೂರ ಉಳಿದು ಅಭಿವೃದ್ಧಿಯ ಮುಖ್ಯವಾಹಿನಿ ಸೇರಿಕೊಳ್ಳುವ ಕನಸುಗಳಿಲ್ಲದೇ ಬದುಕುವ ಅನಿವಾರ್ಯತೆಯ ಗತದ ಕಾಲವನ್ನು ದಯಾನಂದ ಅವರು ಕಾಣಿಸುವ ಪರಿ ಅನನ್ಯ.

ಜಡಗೊಂಡ ಸಾಮಾಜಿಕ ವ್ಯವಸ್ಥೆಯಲ್ಲಿ ಪಲ್ಲಟಗಳನ್ನು ನೆಲೆಗೊಳಿಸುವ ಹೆಜ್ಜೆಗಳ ವಿವರಗಳನ್ನು ಸೌಜನ್ಯದ ಧಾಟಿಯಲ್ಲಿ ಮುಂದಿಡುತ್ತಲೇ ಸಾಂಸ್ಕೃತಿಕ ಪ್ರಜ್ಞೆಯನ್ನು ಕಟ್ಟಿಕೊಳ್ಳಲು ಬೇಕಾದ ಒಳನೋಟಗಳು ಅವರ ಬರಹಕ್ಕೆ ಜೀವಂತಿಕೆಯನ್ನು ತಂದುಕೊಟ್ಟಿವೆ. ಅವರೊಳಗಿನ ಅಪ್ಪಟ ಸಾಹಿತ್ಯಕ ವಿಮರ್ಶಕನನ್ನು ಈ ಕೃತಿ ಪರಿಚಯಿಸಿದೆ.

ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಡಿ.ವಿ.ಜಿ ಅವರಂಥ ಪ್ರತಿಭೆಗಳನ್ನು ದಯಾನಂದ್ ವರ್ತಮಾನದಲ್ಲಿ ನಿಂತು ಗ್ರಹಿಸುವ ಬಗೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಕೆಲವು ಸಿನಿಮಾಗಳ ಪ್ರಸ್ತಾಪದ ಮೂಲಕ ಮೌಲ್ಯಪರ ಆಲೋಚನಾಕ್ರಮಗಳ ವೈಶಿಷ್ಟ್ಯತೆಯನ್ನು ಮನಗಾಣಿಸುತ್ತಾರೆ. ಅಧ್ಯಾಯಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಕೇವಲ ನೆನಪುಗಳ ಯಾನದ ಸಹಭಾಗೀ ಯಾತ್ರಿಕರು ಮಾತ್ರವಲ್ಲ.

ನನಗೆ ತುಂಬಾ ಇಷ್ಟವಾದ ಪಾತ್ರವ್ಯಕ್ತಿತ್ವಗಳೆಂದರೆ ದಯಾನಂದ ಅವರ ತಂದೆ, ತಾಯಿ ಮತ್ತು ಹುಚ್ಚಮ್ಮತ್ತೆ. ಅಪ್ಪನನ್ನು ಅವರು ಆಧ್ಯಾತ್ಮ ಜೀವಿ ಎಂದು ಗುರುತಿಸುತ್ತಾರೆ. ತಾಯಿಯು ಅವರ ದೃಷ್ಟಿಯಲ್ಲಿ ಆರ್ಥಿಕ ತಜ್ಞೆ. ಹುಚ್ಚಮ್ಮ ಅವರ ತಂದೆಯ ತಂಗಿ. ಅವರ ಮನೆದೇವರ ಹೆಸರನ್ನೇ ಅಜ್ಜ ತನ್ನ ಅತ್ತೆಗೆ ಇಟ್ಟದ್ದನ್ನು ನೆನಪಿಸಿಕೊಳ್ಳುತ್ತಲೇ ತಮ್ಮ ಪಾಲಿನ ನಿಜದ ದೇವರಾಗಿ ಪ್ರಭಾವಿಸಿದ್ದನ್ನು ಪ್ರಸ್ತಾಪಿಸಿದ ಬರಹವು ಜನರ ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಹುಚ್ಚಮ್ಮತ್ತೆಯೇ ಪ್ರೇರಣೆಯಾಗಿರುವ ದಿವ್ಯತೆಗೆ ಕನ್ನಡಿ ಹಿಡಿಯುತ್ತದೆ.

‘ಚರ್ಮವನ್ನೇ ಚಪ್ಪಲಿಯಾಗಿಸಿಕೊಂಡ ಅಪ್ಪ’ ಶೀರ್ಷಿಕೆಯ ಬರಹವು ಆ ಕಾಲದ ಆರ್ಥಿಕ ದುಃಸ್ಥಿತಿಯ ಸಾಮಾಜಿಕ ರೂಪವನ್ನು ಅನಾವರಣಗೊಳಿಸುತ್ತದೆ. ಇದನ್ನು ಓದುವಾಗ ಮತ್ತೆ ಮತ್ತೆ ನೆನಪಿಗೆ ಬಂದದ್ದು ಪುನೀತ್ ರಾಜಕುಮಾರ್ ಬಾಲನಟರಾಗಿ ಅಭಿನಯಿಸಿದ ‘ಬೆಟ್ಟದ ಹೂವು’ ಸಿನಿಮಾ. ಅಮ್ಮನ ದುಃಖ ದುಮ್ಮಾನಗಳ ನಡುವೆ ಓದುವ ಕನಸನ್ನು ಜೀವಂತವಾಗಿರಿಸಿಕೊಂಡ ಹುಡುಗ ಕುವೆಂಪು ಅವರ ಕೃತಿಯನ್ನು ಕೊಂಡುಕೊಳ್ಳಲು ದುಡ್ಡು ಹೊಂದಿಸಿಕೊಳ್ಳಲು ಹೆಣಗಾಡುತ್ತಾನೆ.

ಕೊನೆಗೆ ದುಡಿಮೆಯ ದುಡ್ಡನ್ನು ಹೇಗೋ ಹೊಂದಿಸಿಕೊಂಡು ಆ ಕೃತಿಯನ್ನು ಕೊಂಡುಕೊಳ್ಳಬೇಕು ಎನ್ನುವಷ್ಟರಲ್ಲಿ ಚಳಿಗಾಲದ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿಯ ಅಗತ್ಯ ಮನಗಂಡು ಕೃತಿಯನ್ನು ಓದುವ ಕನಸನ್ನು ಬಿಟ್ಟುಕೊಡುತ್ತಾನೆ. ಬಡತನವು ಎಳೆಯರ ಮನಸುಗಳ ಒಡಲಾಳದ ಕನಸುಗಳ ಬಲಿ ಕೇಳುವ ವೈರುಧ್ಯವನ್ನು ಎನ್.ಲಕ್ಷ್ಮೀನಾರಾಯಣ ಅವರು ಮನಮುಟ್ಟುವಂತೆ ಸಿನಿಮಾದಲ್ಲಿ ಬಿಂಬಿಸಿದ್ದರು.

ದಯಾನಂದ ಅವರು ಈ ಬರಹದ ಮೂಲಕ ಆತ್ಮಕಥನಕ್ಕೆ ಕಾವ್ಯಾತ್ಮಕ ಪ್ರತಿಮೆಯ ಆಯಾಮವನ್ನು ಒದಗಿಸಿಕೊಟ್ಟಿದ್ದಾರೆ. ಇದನ್ನು ಶೀರ್ಷಿಕೆಯೇ ಧ್ವನಿಸುತ್ತದೆ. ಮತ್ತೊಂದು ಅಧ್ಯಾಯದಲ್ಲಿ ಇದೇ ಬರಹದ ಧ್ವನಿ ದಾರ್ಶನಿಕ ಪ್ರತಿಪಾದನೆಯ ಎತ್ತರ ಪಡೆದುಕೊಳ್ಳುತ್ತದೆ. ಆಡಿ-ಕೂಡಿ ಬಾಳುವ ನಮ್ಮತನವು ಬಡತನದ ನಿವಾರಣೆಗಾಗಿಯೋ, ಸಂಪತ್ತಿನ ಆಸೆಗಾಗಿಯೋ ಬಲಿಯಾಗುತ್ತಿರುವುದಂತೂ ಕಟು ಸತ್ಯ ಎಂಬ ಅವರ ವ್ಯಾಖ್ಯಾನವು ವರ್ತಮಾನದ ಬದುಕನ್ನು ವಿಭಿನ್ನವಾಗಿ ಅರ್ಥೈಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪುರಾಣ ಮತ್ತು ಇತಿಹಾಸದ ಕುರಿತ ಹೊಸದಾದ ವಿಚಾರ ಲಹರಿಯನ್ನೊಳಗೊಂಡ ಬರಹಗಳು ನಮ್ಮನ್ನು ಹೊಸ ರೀತಿಯಲ್ಲಿ ಆಲೋಚಿಸುವಂತೆ ನೆರವಾಗುತ್ತವೆ. ಪುರಾಣಗಳ ಕಾಲ್ಪನಿಕತೆಯೊಳಗೇ ಇರುವ ವಾಸ್ತವವಾದಿ ನೆಲೆಗಳನ್ನು ಶೋಧಿಸುತ್ತವೆ. ಇಲ್ಲದ ಇತಿಹಾಸವನ್ನು ಸೃಷ್ಟಿಸುವ ವರ್ತಮಾನದ ವಿಚಿತ್ರ ಜಾಯಮಾನವನ್ನು ನಿರಾಕರಿಸಿ ಇಸಿಹಾಸವನ್ನು ನೋಡುವ ಬಗೆ ಹೇಗೆಂಬುದನ್ನು ತಿಳಿಸಿಕೊಡುತ್ತವೆ.

ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಅವುಗಳಿಗೆ ಅನುಗುಣವಾಗಿ ಆಡಳಿತಾತ್ಮಕ ಮಾದರಿಗಳನ್ನು ಮರುರೂಪಿಸಿದ ಪ್ರಯೋಗಶೀಲತೆಯ ಸಾಧ್ಯತೆಯನ್ನು ಈ ಕೃತಿ ಅಂತಃಕರಣದ ಭಾಷೆಯಲ್ಲಿ ಚಿತ್ರಿಸಿದೆ. ಇಡೀ ಕೃತಿಯು ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಆಡಳಿತಾತ್ಮಕ ಮಾದರಿಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶಿಯೂ ಹೌದು. ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಇದನ್ನೊಮ್ಮೆ ಓದಲೇಬೇಕು.

ಅಧಿಕಾರಿಗಳಾಗಿ ಸಾಧನೆಗೈಯ್ಯುವ ಕನಸುಳ್ಳ ಯುವ ಪೀಳಿಗೆ ಈ ಕೃತಿಯ ಪುಟಗಳೊಂದಿಗೆ ಸಂವಾದಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮದೇ ಪ್ರತಿಷ್ಠೆಯ ಗುಂಗಿನಲ್ಲೇ ರಾಜಕಾರಣದ ಮಹತ್ವಪೂರ್ಣ ಅವಧಿಯನ್ನು ಕಳೆಯುವ ಜನಪ್ರತಿನಿಧಿಗಳು ಅತ್ಯಂತ ಶ್ರದ್ಧೆಯಿಂದ ಓದಿಕೊಳ್ಳಬೇಕು. ಮಂತ್ರಿಗಳೆನ್ನಿಸಿಕೊಂಡವರು ‘ತಮ್ಮ ಬಿಡುವಿಲ್ಲದ ಕಾರ್ಯದೊತ್ತಡಗಳ!?’ ಮಧ್ಯೆ ಈ ಕೃತಿಗಾಗಿಯೇ ಸಮಯ ಮೀಸಲಿರಿಸಿ ದೂರದರ್ಶಿತ್ವದ ಗುಣದ ಪಾಠವನ್ನು ಕಲಿತುಕೊಳ್ಳಬೇಕು.

ಈ ಕೃತಿ ಇಂಗ್ಲಿಷ್‌ಗೆ ಅನುವಾದಿತಗೊಂಡು ರಾಷ್ಟ್ರ ದ ವಿವಿಧ ರಾಜ್ಯಗಳವರೂ ಓದುವಂತಾಗಬೇಕು. ಸಾಮಾಜಿಕ ಬದಲಾವಣೆಯ ಕನಸು ಸಂಪೂರ್ಣವಾಗಿ ಈಡೇರುವುದಕ್ಕೆ ಇಡೀ ಆಡಳಿತಾತ್ಮಕ ವ್ಯವಸ್ಥೆಯನ್ನು ಸಿದ್ಧಗೊಳಿಸುವುದಕ್ಕೆ ಈ ಓದು ಸಹಾಯಕವಾಗಬೇಕು. ಹಾಗಾದಾಗ ಮಾತ್ರ ಇಡೀ ಸರ್ಕಾರೀ ಆಡಳಿತ ವ್ಯವಸ್ಥೆಯೊಳಗೆ ಸಮಗ್ರ ಬದಲಾವಣೆ ತರಲು ಪೂರಕವಾಗುವಂಥ ಪಬ್ಲಿಕ್ ರಿಲೇಷನ್ಸ್ ಎಂಬ ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಸ್ಥಾಪಿತವಾಗಬಹುದು.

ಅಂಥ ಸಂಸ್ಥೆಯ ಮುಂಚೂಣಿ ನಾಯಕರಾಗಿ ಕೆ.ಎ.ದಯಾನಂದ ಅವರಂಥ ಅಧಿಕಾರಿಗಳೇ ಕಂಗೊಳಿಸಬಹುದು. ಜನರನ್ನು ನಲುಗಿಸುತ್ತಿರುವ ಎಲ್ಲ ಬಗೆಯ ಸಂಕಟಗಳಿಂದ ಪಾರುಮಾಡುವ ಸರ್ವೋದಯದ ಸಾಧ್ಯತೆಗಳು ಸರ್ಕಾರಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು. ಜನಕಲ್ಯಾಣದ ಆದರ್ಶ ರಾಷ್ಟ್ರವಾಗಿ ಭಾರತ ರೂಪುಗೊಂಡು ಜಗತ್ತನ್ನು ಸೆಳೆಯಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ

ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’

Published

on

ತ್ತರಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ 22 ಫೆಬ್ರವರಿ 1889 ರಂದು ಜನಿಸಿ, ಜೂನ್ 26,1950 ರಂದು ನಿಧನರಾದ ಸಹಜಾನಂದ್ ಸರಸ್ವತಿ ಅವರ ನಿಜವಾದ ಹೆಸರು ನವರಂಗ್ ರೈ. ಹೋರಾಟ ಮನೋಭಾವದ ಸಹಜಾನಂದರು ಬಹುಮುಖ ಪ್ರತಿಭೆ. ಕ್ರಾಂತಿಕಾರಿ ರೈತ ನಾಯಕ, ಇತಿಹಾಸಕಾರ, ದಾರ್ಶನಿಕ, ಬರಹಗಾರ. ಅವರ ಮುಖ್ಯ ಬರಹ-ಕೃತಿ ಬಿಹಾರವನ್ನು ಕೇಂದ್ರೀಕರಿಸಿದೆ. ಅವರು ಬಿಹ್ತಾದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿಂದ ತಮ್ಮ ವೃದ್ದಾಪ್ಯದ ದಿನಗಳಲ್ಲಿ ತಮ್ಮ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಿದರು.

ಸಹಜಾನಂದರು 1929ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭೆಯನ್ನು (ಬಿಪಿಕೆಎಸ್) ರಚಿಸಿದರು. ಜಮೀನ್ದಾರರಿಂದ ಭೂ ಹಿಡುವಳಿ ಕುರಿತಾಗಿ ರೈತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ರೈತರ ಕುಂದುಕೊರತೆಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಸಂಘಟನೆ-ಹೋರಾಟವನ್ನು ಅವರು ಆರಂಭಿಸಿದರು. ಆ ಮೂಲಕ ಭಾರತದಲ್ಲಿ ರೈತರ ಚಳುವಳಿಗಳಿಗೆ ನಾಂದಿ ಹಾಡಿದರು.

ಕ್ರಮೇಣ ರೈತ ಚಳುವಳಿ ತೀವ್ರಗೊಂಡಿತು ಮತ್ತು ಭಾರತದ ಉಳಿದ ಭಾಗಗಳಿಗೆ ಹರಡಿತು. ಇದು 1936 ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಚನೆಗೆ ಕಾರಣವಾಯಿತು, ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕಿಸಾನ್ ಪ್ರಣಾಳಿಕೆ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಆ ಜಮೀನ್ದಾರರನ್ನು ಬ್ರಿಟಿಷ್ ಸರ್ಕಾರ ಆದಾಯ ಸಂಗ್ರಹಕ್ಕಾಗಿ ನೇಮಕ ಮಾಡಿಕೊಂಡಿತ್ತು.

ಇದನ್ನೂ ಓದಿ | ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್

ಭೂ ಮಾಲೀಕತ್ವವನ್ನು ಉಳಿಸಲು ಮತ್ತು ರೈತರ ಉಳುಮೆಯ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆದ ಈ ಚಳುವಳಿ, ಬಿಹಾರ ಮತ್ತು ಯುನೈಟೆಡ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರಗಳೊಂದಿಗೆ ಸಂಘರ್ಷ ಎದುರಿಸಬೇಕಾಗಿತು.

ಸಹಜಾನಂದ ಸರಸ್ವತಿ 1937-1938ರಲ್ಲಿ ಬಿಹಾರದಲ್ಲಿ ಬಕಾಶ್ತ್ ಚಳವಳಿಯನ್ನು ಸಂಘಟಿಸಿ ಮುನ್ನಡೆಸಿದರು. ಬಕಾಶ್ತ್ ಎಂದರೆ ಸ್ವಯಂ-ಕೃಷಿ, ಸ್ವಯಂ ಉಳುಮೆ. ಈ ಆಂದೋಲನವು ಜಮೀನ್ದಾರರ ಬಕಾಶ್ತ್ ಜಮೀನುಗಳಿಂದ ಟೆನೆಂಟ್‌ಗಳನ್ನು ಹೊರಹಾಕುವುದರ ವಿರುದ್ಧವಾಗಿತ್ತು. ಇದು ಬಿಹಾರ ಹಿಡುವಳಿ ಕಾಯ್ದೆ ಮತ್ತು ಬಕಾಶ್ತ್ ಭೂ ತೆರಿಗೆಯನ್ನು ಅಂಗೀಕರಿಸಲು ಕಾರಣವಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸಹಜಾನಂದರನ್ನು ಬಂಧಿಸಲಾಗಿತ್ತು.

(ಕೃಪೆ : Mass Media Foundation)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಸಾರೇಕೊಪ್ಪದ ಬಂಗಾರ ; ಅಕ್ಷರತುಂಗಾವನ್ನು ನೆನೆದು

Published

on

  • ಸುರೇಶ ಎನ್ ಶಿಕಾರಿಪುರ

ನ್ನಮ್ಮ ಅನಕ್ಷರಸ್ತೆ ಆಕೆ ಅಕ್ಷರ ಬರೆಯುವುದು ಕಲಿತದ್ದು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಜಾರಿಗೆ ತಂದಿದ್ದ ‘ಅಕ್ಷರ ತುಂಗಾ’ ಎಂಬ ಯೋಜನೆಯಿಂದ. ಅನಕ್ಷರಸ್ಥ ಹಿಂದುಳಿದ ವರ್ಗಗಳ ಜನ ಸಣ್ಣದಾಗಿ ದಿನಪತ್ರಿಕೆ ಓದಲು ರಾಜಕೀಯ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಸರ್ಕಾರಗಳ ಯೋಜನೆಗಳು ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಲು ಕಲಿತದ್ದು ಬಂಗಾರಪ್ಪನೆಂಬ ಹಿಂದುಳಿದ ವರ್ಗದ ನಾಯಕ ಜಾರಿಗೊಳಿದ್ದ ಆ ಯೋಜನೆಯಿಂದ‌.

ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದೆಂಬ ಪಾರಂಪರಿಕ ದ್ವೇಷ ಮತ್ತು ಹೊಟ್ಟೆಕಿಚ್ಚಿನ ಕಾರಣಕ್ಕೆ ಮೇಲ್ಜಾತಿಗಳು ಇದರ ಮೇಲೆ ಅಪಪ್ರಚಾರ ಶುರುವಿಟ್ಟರು. ಅಕ್ಷರ ತುಂಗಾ ಯೋಜನೆಯ ಕುರಿತ ಅಸಮಧಾನ ಅಪಪ್ರಚಾರದ ಒಂದು ಘೋಷಣೆ ಹೇಗಿತ್ತೆಂದರೆ,

“ಅಕ್ಷರತುಂಗಾ ಮೂರ್ಕೋಟಿ ನುಂಗ” ಇದನ್ನು ಅಂದಿನ ದಲಿತವಿರೋಧೀ ಹಿಂದುಳಿದವರ ವಿರೋಧಿಗಳು ಯಶಸ್ವಿಯಾಗಿ ಪ್ರಚಾರ ಮಾಡಿದರು. ಅಕ್ಷರ ಕಲಿಯುತ್ತಿದ್ದ ಜನ ಕೆಲವರು ಅದನ್ನು ಹೌದೆಂದೇ ನಂಬಿದ್ದರು. ಬಂಗಾರಪ್ಪ ಅಪ್ಪಟ ಜಾನಪದ ನಾಯಕ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಹಳ್ಳಿ ಸೊಗಡು ಸಂಪರ್ಕ ಬಿಟ್ಟುಕೊಡದ ಅಪ್ಪಣ ಹಳ್ಳೀಯ.

ಅವರಿಗೆ ಅಕ್ಷರ ಜ್ಞಾನವಿಲ್ಲದ ಕಾರಣಕ್ಕೇ ದಲಿತರು ಹಿಂದುಳಿದವರು ಹಿಂದೇಯೇ ಉಳಿದಿರುವುದು ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಅದಕ್ಕಾಗೇ ಅಂಬೇಡ್ಕರ್ ಗಾಂಧೀಜಿ ನೆಹರು ದೇವರಾಜ ಅರಸು ಹೋರಾಡಿದ್ದರೆಂಬ ಅರಿವಿತ್ತು ಹಾಗಾಗಿಯೇ ಶಾಲೆ ಕಲಿಯದ ಹಿರಿಯರು ಯುವಕರು ಆ ಯೋಜನೆಯ ಮೂಲಕ ನಾಲಕ್ಕಕ್ಷರ ಕಲಿತು ತಮ್ಮ ಮೇಲಾಗುವ ಅನ್ಯಾಯ ಅಕ್ರಮ ದಬ್ಬಾಳಿಕೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂಬುದೇ ಅವರ ಉದ್ಧೇಶವಾಗಿತ್ತು.

ಏಕೆಂದರೆ ಅನಕ್ಷರಸ್ತ ಬಡ ರೈತನಿಂದ ನಕಲಿ ಸಹಿ ಮಾಡಿಸಿಕೊಂಡು ಅವನ ಹೊಲ ಮನೆ ನುಂಗಿ ನೀರುಕುಡಿದ ಮೇಲ್ಜಾತಿ ಹಣವಂತರ ದೌರ್ಜನ್ಯಗಳ ಬರ್ಬರತೆ ಹೇಗಿರುತ್ತಿತ್ತು ಎಂಬುದನ್ನು ಆ ಕಾಲದ ಹಿರಿಯ ತಲೆಮಾರಿನವರಿಗೆ ಕೇಳಿದರೆ ಗೊತ್ತಾಗುತ್ತದೆ. ಕರಣಿಕ ಗೌಡ ಪಟೇಲ ಎಂಬುವವರೆಲ್ಲಾ ಅಕ್ಷರ ಬಲ ದೊಣ್ಣೆಯ ಬಲ ಖಡ್ಗದ ರಾಜಕೀಯ ಬಲದಿಂದಲೇ ದಮನಿತ ವರ್ಗಗಳನ್ನು ಹತ್ತಿಕ್ಕಿದ ಚರಿತ್ರೆಯೇ ನಮ್ಮ ಬೆನ್ನಿಗಿದೆ‌.

ಇಂತಹಾ ದುರುಳರಿಂದ ದುಡಿಯುವ ಶ್ರಮಜೀವಿ ಜನರನ್ನು ಪಾರು ಮಾಡಲು ಕೊನೆಯಪಕ್ಷ ಒಂದು ಅಗ್ರಿಮೆಂಟ್ ಕಾಪಿಯನ್ನೋ ನೋಂದಣಿ ವ್ಯವಹಾರವನ್ನೋ ಓದಿ ತಿಳಿದುಕೊಳ್ಳುವಂತಾಗಲಿ ಇದರಿಂದ ಸಾಕಷ್ಟು ಶೋಷಣೆಯನ್ನು ತಪ್ಪಿಸಬಹುದೆಂಬುದು ಅವರ ದೂರದೃಷ್ಟಿಯಾಗಿತ್ತು‌. ಇದು ಮೇಲ್ಜಾತಿ ಮನಸುಗಳಿಗೆ ಆಗಿಬರಲಿಲ್ಲ‌ ಅವರು ಹುನ್ನಾರದ ಬೀಜ ಬಿತ್ತಿದರು “ಅಕ್ಷರತುಂಗಾ ಮೂರ್ಕೋಟಿ ನುಂಗಾ” ಎಂದೇ ಕೂಗಿದರು‌‌.

ನನ್ನೂರಿನ ಬಿಜೆಪಿಯ ಈರಾದಿಈರರೆಲ್ಲ ಇದನ್ನು ದನಿ ಎತ್ತರಿಸಿ ಕೂಗಿದ್ದೇ ಕೂಗಿದ್ದು ಹಾಗೆ ಕೂಗುವವರಲ್ಲಿ ಮುಗ್ಧ ಅನಕ್ಷರಸ್ಥ ಜನತೆಯೂ ಇರುತ್ತಿತ್ತು. ಆದರೆ ‘ಅಕ್ಷರತುಂಗಾ’ ಯೋಜನೆಯಲ್ಲಿ ಬಂಗಾರಪ್ಪ ಗಂಟು ಹೊಡೆದರು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಸಾಬೀತಾಗಲೂ ಇಲ್ಲ.

ಹಿಂದುಳಿದವರ್ಗದವನೊಬ್ಬ ಅಧಿಕಾರ ಉನ್ನತಸ್ಥಾನದಲ್ಲಿ ಕೂರುವುದು ಶೋಷಿತ ಸಮುದಾಯಗಳು ಅಕ್ಷರ ಕಲಿಯುವುದು ಈ ದೇಶದ ಮೇಲ್ಜಾತಿಗಳಿಗೆ ಯಾವತ್ತೂ ಆಗದ ವಿಚಾರ.

ದೇವರಾಜ ಅರಸರಿಗೂ ಬಂಗಾರಪ್ಪನವರಿಗೂ ಕಾಡಿದರು ಸಿದ್ದರಾಮಯ್ಯನವರಿಗೂ ಕಾಡಿದರು ಮುಂದೆ ಯಾರೇ ದಲಿತ ಹಿಂದುಳಿದವ ಅಧಿಕಾರಕ್ಕೆ ಬಂದರೂ ಕಾಡುತ್ತಾರೆ ಸಾಧ್ಯವಾದಷ್ಟು ಆ ಸಮುದಾಯಗಳವರು ಅಧಿಕಾರದ ಹಂತಕ್ಕೆ ಬರುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ನುಡಿಯ ಒಡಲು -27 | ನುಡಿಯೆಂಬ ಅಪ್ರಮಾಣದ ಪ್ರಮಾಣೀಕರಣ

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಡಿ, ಪ್ರಾದೇಶಿಕ ನುಡಿ ಇಲ್ಲವೇ ರಾಷ್ಟ್ರೀಯ ನುಡಿ ಯಾವುದಾದರೂ ಇರಬಹುದು ಅಂತಹ ನುಡಿಯ ಚಹರೆಗಳು ಎರಡು ಪ್ರಮುಖ ಆಯಾಮಗಳನ್ನು ಒಳಗೊಂಡಿರುತ್ತವೆ. ಒಂದು ರಚನೆ ಮತ್ತೊಂದು ಕ್ರಿಯೆ. ನಿರಂತರ ಬದಲಾವಣೆಯ ಪ್ರಕ್ರಿಯೆಯಲ್ಲಿ ರೂಪಿಸಿಕೊಂಡ ನುಡಿಯ ರಚನೆ ಮತ್ತು ಕ್ರಿಯೆಯ ವಿಭಿನ್ನ ನೆಲೆಗಳನ್ನು ಸಮಾಜಭಾಷಾಶಾಸ್ತ್ರೀಯ ಮಾದರಿಯಲ್ಲಿ ಬಿಡಿಸಿ ನೋಡಬೇಕಿದೆ.

ಹೀಗೆ ಯಾವುದೇ ನುಡಿಯ ಯಾಜಮಾನಿಕೆ ನೆಲೆಗೊಳ್ಳಲು ಆ ನಾಡಿನ ರಾಜ ಇಲ್ಲವೇ ಅರಸು ಮನೆತನಗಳ ಕೊಡುಗೆಯೂ ಕಾರಣವಾಗಿರದೆ ಇರಲಾರದು. ನುಡಿ ಬಗೆಗಿನ ಇಂತಹ ಬೆಳವಣಿಗೆಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ಈ ವಿದ್ಯಮಾನಗಳು ಹಾಗೂ ಬೆಳವಣಿಗೆಯನ್ನು ಅರಿತುಕೊಳ್ಳುವ ಮೂಲಕ ನುಡಿಯ ಒಡಲಲ್ಲೇ ಹುದುಗಿರುವ ಅಸಮಾನತೆಗಳನ್ನು ಗುರುತಿಸಬಹುದು.

ಡೈಗ್ಲಾಸಿಂ ಎಂಬ ಅರಿಮೆಪದದ ಮೂಲಕ ನುಡಿಯ ಇಂತಹ ಅಸಮಾನ ನೆಲೆಗಳನ್ನು ಬಿಡಿಸಿ ನೋಡಬಹುದು. ಆದರೆ ಡೈಗ್ಲಾಸಿಯ ಕುರಿತ ಫರ್ಗ್ಯೂಸನ್ (1986:219) ಅವರ ವಿಶ್ಲೇಷಣಾ ಮಾದರಿಗೆ ಸಾಕಷ್ಟು ಮಿತಿಗಳಿರುವುದರಿಂದ ಡೈಗ್ಲಾಸಿಯದ ಪೂರ್ಣ ಚಿತ್ರಣ ಸಿಗುವುದಿಲ್ಲ. ಹಾಗಾಗಿ ಇವರ ತಾತ್ವಿಕ ಚೌಕಟ್ಟಿಗೆ ಪರ್ಯಾಯವಾಗಿ ಇನ್ನೊಂದು ಚೌಕಟ್ಟನ್ನು ರೂಪಿಸಿಕೊಂಡು ವಿವರಿಸಬಹುದು.

ಅಂದರೆ ಡೈಗ್ಲಾಸಿಯೆಂಬುದು ಕೇವಲ ಒಂದೇ ನುಡಿಯೊಳಗಣ ಏರುಪೇರುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ನುಡಿಯೊಳಗಿನ ಅಸಮಾನತೆಗೆ ಬೇರೊಂದು ನುಡಿಯೂ ಕಾರಣವಾಗಿರಲೂ ಸಾಧ್ಯವಿದೆ (ಎತ್ತುಗೆಗಾಗಿ ಸಂಸ್ಕೃತ ಕನ್ನಡ ಹಾಗೂ ಸಂಸ್ಕೃತಕ್ಕೆ ಹೊರತಾದ ಕನ್ನಡ ಅಂದರೆ ದೇಶಿ ಕನ್ನಡ). ಆದ್ದರಿಂದ ಯಾವುದೇ ಒಂದು ನುಡಿ ಇಲ್ಲವೇ ಒಳನುಡಿಯು ಬೇರೊಂದು ನುಡಿ ಇಲ್ಲವೇ ಒಳನುಡಿಯ ಪ್ರಾಬಲ್ಯಕ್ಕೆ ಒಳಪಟ್ಟಾಗ ಅಂತಹ ನುಡಿ ರೂಪಾಂತರಗೊಳ್ಳುವ ಬಗೆಗಳು ಯಾವ ಯಾವ ಸ್ವರೂಪದಲ್ಲಿ ರೂಪುಗೊಳ್ಳುತ್ತವೆ ಅನ್ನುವ ಪ್ರಕ್ರಿಯೆಯನ್ನೂ ಕೂಡ ಡೈಗ್ಲಾಸಿಯ ಎಂದು ಗುರುತಿಸಿಬಹುದು.

ಈ ಡೈಗ್ಲಾಸಿಯ ಹುಟ್ಟಿಸುವ ಡೈಕಾಟಮಿಯೂ ಕೂಡ ಒಂದು ನುಡಿ ಹಾಗೂ ಒಳನುಡಿಗಳ ನಡುವೆ ಇರುವ ಅಧಿಕಾರ ಮತ್ತು ಸಾಮಾಜಿಕ ಅಂತಸ್ತನ್ನು ಪ್ರತಿನಿಧಿಸುವ ಬಗೆಯೇ ಹೊರತು ಬೇರೇನು ಇರಲಾರದು. ಕನ್ನಡದ ಪ್ರಮಾಣಭಾಷೆ ಎನ್ನುವುದು ಸಂಸ್ಕೃತ ಭೂಯಿಷ್ಠ ಭಾಷಿಕ ಸ್ವರೂಪ. ಇದನ್ನೇ ಕನ್ನಡದ ಉನ್ನತ (ದಿ ಹೈ ವೆರೈಟಿ) ನುಡಿ ಪ್ರಭೇದವೆಂದು ಪರಿಗಣಿಸಿರುವುದು. ಇಂತಹ ನುಡಿ ಸನ್ನಿವೇಶವು ಕನ್ನಡದ ಇತರೆ ಒಳನುಡಿಗಳನ್ನು ನಿಮ್ನ (ದಿ ಲೋ ವೆರೈಟಿ) ಪ್ರಭೇದಗಳನ್ನಾಗಿ ರೂಪಿಸಿರಲಕ್ಕೂ ಸಾಧ್ಯ.

ಈ ಎರಡೂ ಬಗೆಯ ಪ್ರಭೇಧಗಳ ನಡುವಿನ ವ್ಯತ್ಯಾಸಗಳನ್ನು ಫರ್ಗ್ಯೂಸನ್‌ನು ವಿವರಿಸುವ ಮಾದರಿಯಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಫರ್ಗ್ಯೂಸನ್‌ನ ಪ್ರಕಾರ ಡೈಗ್ಲಾಸಿಯ ಎಂಬುದು ಒಂದೇ ನುಡಿಯ ಬೇರೆ ಬೇರೆ ಪ್ರಭೇದಗಳ ನಡುವಣ ಅಂತರಗಳು. ಈ ಅಂತರಗಳನ್ನೇ ಇವನು ಹೈ ಮತ್ತು ಲೋ ಪ್ರಭೇದಗಳೆಂದು ಗುರುತಿಸಿದ್ದಾನೆ. ಇವುಗಳಲ್ಲಿ ಹೈ ವೆರೈಟಿಯೇ ಈ ಮುಂದಿನ ಎಲ್ಲ ವಲಯಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಈ ವಲಯಗಳನ್ನು ನಿಯೋಗ.

ಪ್ರತಿಷ್ಠೆ, ಸಾಹಿತ್ಯ ಪರಂಪರೆ, ಗ್ರಹಿಕೆ, ಪ್ರಮಾಣೀಕರಣ, ನೆಲೆಗೊಳಿಸುವಿಕೆ, ವ್ಯಾಕರಣ, ಶಬ್ದಕೋಶ ಎಂದು ವರ್ಗೀಕರಿಸಿದ್ದಾನೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯನ್ನು ಪರಿಶೀಲಿಸಿದಾಗ ಈ ಎರಡೂ ಪ್ರಭೇದಗಳ ನಡುವಿನ ಕಂದರ ಮೇಲೆ ಪಟ್ಟಿ ಮಾಡಿದ ಎಲ್ಲ ನಿಯೋಗಗಳಲ್ಲಿಯೂ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ ದಿಟ. ಆದರೆ ಫರ್ಗ್ಯೂಸನ್‌ನ ಮಾದರಿಗೆ ಹೊರತಾದ ಕನ್ನಡದ ಡೈಗ್ಲಾಸಿಯ ಮಾದರಿಯನ್ನು ಇಲ್ಲಿ ಕಾಣಬಹುದು.

ಈಗಾಗಲೇ ಚರ್ಚಿಸಿದಂತೆ ಕನ್ನಡ ಸನ್ನಿವೇಶದಲ್ಲಿ ಹೈ ವೆರೈಟಿ ಅಂದರೆ ಅದು ಸಂಸ್ಕೃತ ಕನ್ನಡವೇ ಆಗಿರುತ್ತದೆ ಹಾಗೂ ಲೋ ವೆರೈಟಿ ಎಂಬುದು ಅದು ದೇಶಿ ಕನ್ನಡವೇ ಆಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಇಂತಹ ಕನ್ನಡವನ್ನೇ ಮಾರ್ಗ ಹಾಗೂ ದೇಶಿ ಎಂದೂ ವಿಂಗಡಿಸಿರಬಹುದು. ಹೀಗೆ ರೂಪುಗೊಂಡ ಈ ಆಯಾಮಗಳು ಸಾಂಸ್ಕೃತಿಕ, ರಾಜಕೀಯ ಪಲ್ಲಟಕ್ಕೂ ಕಾರಣವಾಗಿವೆ ಎಂಬುದು ಗಮನಾರ್ಹ. ಫರ್ಗ್ಯೂಸನ್‌ನ ಪ್ರಕಾರ ಹೈ ಹಾಗೂ ಲೋ ವೆರೈಟಿಗಳ ನಡುವಣ ಅಂತರ ಯಾವಾಗಲೂ ಅದು ಸ್ಥಿರವಾಗಿರುತ್ತದೆ.

ಅಂದರೆ ಇವನ ಪ್ರಕಾರ ಡೈಗ್ಲಾಸಿಯವನ್ನು ಕುರಿತು ಚರ್ಚಿಸುವುದೆಂದರೆ ಪ್ರಮಾಣ ನುಡಿಯೊಂದರ ಬೆಳವಣಿಗೆ ಹಾಗೂ ಲಕ್ಷಣಗಳನ್ನು ಕುರಿತು ಚರ್ಚಿಸುವುದೇ ಆಗಿದೆ. ಆದರೆ ಬಕ್ತಿನ್‌ನ ಹೆಟ್ರೋಗ್ಲಾಸಿಯ ಪರಿಕಲ್ಪನೆಯೊಟ್ಟಿಗೆ ಡೈಗ್ಲಾಸಿಯವನ್ನು ಹೋಲಿಸಿ ನೋಡಿದರೆ ದಿಟವಾಗಿಯೂ ನುಡಿಯ ಒಡಲ ಉರಿ ಎಂತಹದು ಎಂಬುದು ನಿಚ್ಚಳವಾಗುತ್ತದೆ.

ಬಕ್ತಿನ್‌ನ ಪ್ರಕಾರ ಹೆಟ್ರೋಗ್ಲಾಸಿಯ ಎನ್ನುವುದು ಲೋ ವೆರೈಟಿಯ ಬಹುಳತೆಯನ್ನು ಕುರಿತಾಗಿದೆ ಅಂದರೆ ಹೆಟ್ರೋಗ್ಲಾಸಿಯ ಎಂಬುದು ಅಂಕೆಯಲ್ಲಿಟ್ಟ ನುಡಿ (ಒವರ್‌ರ‍್ಚಿಂಗ್) ಹಾಗೂ ಸಾಹಿತ್ಯಕ ಇಲ್ಲವೇ ಮೇಲ್ಮಟ್ಟದ ನುಡಿ (ಲಿಟರರಿ ಆರ್‌ಎನ್‌ನೋಬೆಲ್ಡ್)ಗಳ ನಡುವಣ ತಿಕ್ಕಾಟವೇ ಆಗಿರುತ್ತದೆ. ಇದನ್ನು ಹೀಗೂ ಹೇಳಬಹುದು, ನುಡಿಯ ಏಕೀಕರಣ ಹಾಗೂ ವಿಕೇಂದ್ರಿಕರಣದ ನಡುವಿನ ತಿಕ್ಕಾಟವೂ ಆಗಿರುತ್ತದೆ. ಸಂವಿಧಾನಬದ್ಧ ಮಾನ್ಯತೆಯನ್ನು ಪಡೆದಿರುವ ಈ ಕೆಳಗಿನ ವಿಂಗಡನೆಯನ್ನು ಗಮನಿಸಿದರೆ ಬಕ್ತಿನ್‌ನ ಈ ಪರಿಕಲ್ಪನೆಯ ಮಹತ್ವದ ಆಯಾಮಗಳು ಯಾವವು ಎಂಬುದು ಎದ್ದುಕಾಣುತ್ತವೆ.

1. ಪ್ರಮುಖ ನುಡಿಗಳು / ರಾಷ್ಟ್ರೀಯ ನುಡಿಗಳು
2. ಪ್ರಾದೇಶಿಕ ನುಡಿಗಳು / ಮೈನಾರಿಟಿ ನುಡಿಗಳು
3. ಶಾಸ್ತ್ರೀಯ / ವಿಶೇಷ ಮಾನ್ಯತೆ ಪಡೆದ ನುಡಿಗಳು

ಸ್ಟೀವರ್ಟ್ (ಲ್ಯಾಂಗ್ವೇಜ್ ಆಪ್ ಟೈಪಾಲಜಿ:1962: ಇಂಟರ್‌ನೆಟ್)ನ ಮಾದರಿಯೂ ಫರ್ಗ್ಯೂಸನ್‌ ನ ಮಾದರಿಯನ್ನು ಮತ್ತಷ್ಟೂ ಸುಧಾಹರಿಸಿ ನುಡಿ ಸನ್ನಿವೇಶದ ಮತ್ತೊಂದು ಬಗೆಯ ನುಡಿಯ ಅಸಮಾನತೆಯನ್ನು ತೋರಿಸುತ್ತದೆ.

ನುಡಿ ಪ್ರಕಾರಗಳು,ಟೈಪ್ಸ್
ವಿಶೇಷತೆಗಳು, ಆ್ಯಟ್ರಿಬ್ಯೂಟ್ಸ್

1. ಪ್ರಮಾಣ ನುಡಿ
2. ದೇಶಿ ನುಡಿ
3. ಒಳನುಡಿ

ವಿಶೇಷತೆಯ ವಿವರಗಳು

1. ಪ್ರಮಾಣ, 2. ಸ್ವಾಯತ್ತತೆ, 3. ಚಾರಿತ್ರಿಕತೆ, 4. ಚೈತನ್ಯಶೀಲತೆ

ಈ ಮಾದರಿಯು ನುಡಿ ಹಾಗೂ ಒಳನುಡಿಗಳ ನಡುವಣ ಅಸಮಾನ ನೆಲೆಗಳನ್ನು ಸೂಚಿಸುತ್ತದೆ. ಕನ್ನಡ ಇಲ್ಲವೇ ಭಾರತದ ಯಾವುದೇ ಒಂದು ನುಡಿಯ ಒಳನುಡಿಗಳಲ್ಲಿಯೇ ತಾರತಮ್ಯದ ನೆಲೆಗಳನ್ನು ಕಾಣಬಹುದು. ಆದ್ದರಿಂದ ಕ್ಲಾಸಿಕಲ್ ನುಡಿಗೆ ಇನ್ನೂ ಹೆಚ್ಚಿನ ಪಾವಿತ್ರö್ಯತೆಯನ್ನು ಆರೋಪಿಸುವ ಹುನ್ನಾರಗಳು ನಡೆಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜೋಶ್ವಾ ಫಿಶ್‌ಮನ್ (1980: ಇಂಟರ್‌ನೆಟ್) ಡೈಗ್ಲಾಸಿಯವನ್ನು ಇನ್ನೊಂದು ಬಗೆಯಲ್ಲಿ ವಿಸ್ತರಿಸುತ್ತಾನೆ. ಇವನ ಪ್ರಕಾರ ಡೈಗ್ಲಾಸಿಯ ಎಂಬುದು ಕೇವಲ ಒಂದೇ ನುಡಿಯ ಪ್ರಭೇದಗಳ ನಡುವಿನ ಸನ್ನಿವೇಶ ಮಾತ್ರವಾಗದೇ ಅದು ಬೇರೆ ಬೇರೆ ನುಡಿಗಳ ನಡುವಣ ನುಡಿ ಸನ್ನಿವೇಶವೂ ಆಗಿರುತ್ತದೆ.

ಬಹುಭಾಷಿಕ ಸನ್ನಿವೇಶದಲ್ಲಂತೂ ಹೈ ಹಾಗೂ ಲೋ ವೆರೈಟಿಗಳು ಯಾವುದೇ ಜೈವಿಕ ನಂಟಸ್ತಿಕೆಯನ್ನು ಹೊಂದದ ನುಡಿ ಪ್ರಭೇದಗಳೂ ಆಗಿರುತ್ತವೆ, ಎತ್ತುಗೆಗಾಗಿ ಸಂಸ್ಕೃತ ಇಲ್ಲವೇ ಸಂಸ್ಕೃತ ಕನ್ನಡ (ಹೈ ವೆರೈಟಿ) ಹಾಗೂ ಕನ್ನಡ (ಲೋ ವೆರೈಟಿ) ಆಗಿರುತ್ತವೆ. ಫಿಶ್‌ಮನ್‌ನ ಈ ವಿಶ್ಲೇಷಣೆಯನ್ನು ವಿಸ್ತೃತ ಡೈಗ್ಲಾಸಿಯ ಓದು ಎಂದು ಗುರುತಿಸಲಾಗಿದೆ. ದ್ವಿಭಾಷಿಕ, ಬಹುಭಾಷಿಕ ಸನ್ನಿವೇಶದಲ್ಲಿಯ ಡೈಗ್ಲಾಸಿಯ ಕುರಿತು ಇವನ ಓದುಗಳು ಹೊಸ ಬಗೆಯ ದಾರಿಗಳನ್ನು ತೋರಿಸಿವೆ ಎಂದೇ ಹೇಳಬೇಕಾಗುತ್ತದೆ.

ಒಂದು ಕಡೆಗೆ, ಸಾರ್ವತ್ರಿಕ ನುಡಿಗಟ್ಟೊಂದನ್ನು ರೂಪಿಸುವ ಮತ್ತು ಇನ್ನೊಂದು ಕಡೆಗೆ ಕನ್ನಡದ ಗುರುತನ್ನು ನೆಲೆಗೊಳಿಸುವ ಹಂಬಲದಲ್ಲಿ ಹೊರಟ ಕವಿರಾಜಮಾರ್ಗಕಾರನಿಗೆ ಬೇಕಾದಷ್ಟು ಸಾಂಸ್ಕೃತಿಕ ರಾಜಕೀಯ ಗುರಿಗಳೂ ಇದ್ದಿರಬಹುದು. ಈ ಗುಂಗಿನಿಂದ ಮಾರ್ಗಕಾರನು ಕನ್ನಡದ ರಾಚನಿಕ ಸ್ವರೂಪವನ್ನು ಪುರ‍್ರಚಿಸುವ ಮಹತ್ತರ ಉದ್ದೇಶವನ್ನು ಇಟ್ಟಿಕೊಂಡಿದ್ದರಬಹುದು. ಆದರೆ ಈ ಬಗೆಯ ನುಡಿಯ ಧೋರಣೆಯನ್ನು ಕೂಡ ಸಂಸ್ಕೃತ ವಿದ್ವಾಂಸರು ಲೆಕ್ಕಿಸದೆ ಮಾರ್ಗಕಾರನನ್ನು ಕೇವಲ ಅನ್ಯಭಾಷೆಗಳಿಂದ ಪಡೆಯುವ ಜಾಗದಲ್ಲಿ ನಿಲ್ಲಿಸಿದ್ದಾದರೆ.

ಈ ಮಾತುಗಳನ್ನು ಗಮನಿಸಿದರೇ ಇದು ಇನ್ನೂ ನಿಚ್ಚಳಗೊಳ್ಳುತ್ತದೆ. “ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತಿçಯ ಮನ್ನಣೆ ದೊರಕದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲಿಲ್ಲ” (ಶೆಲ್ಡನ್ ಪೊಲಾಕ್: 2000: ಪುಟ:11). ಎಂದೂ ವಿಶ್ಲೇಷಿಸಿದ ಬಗೆ ಸಂಸ್ಕೃತ ತನ್ನೆಲ್ಲ ನುಡಿಯ ಕಸುವನ್ನು ಕನ್ನಡಕ್ಕೆ ದತ್ತಿಯಾಗಿ ಕೊಟ್ಟಿದೆ ಎನ್ನುವಂತಿದೆ. ಇಂತಹ ಭಾಷಿಕ ಅಧಿಕಾರ ಮತ್ತು ಯಜಮಾನಿಕೆಯನ್ನು ಸಂಸ್ಕೃತವು ಚರಿತ್ರೆ ಉದ್ದಕ್ಕೂ ಕನ್ನಡದಂತಹ ನುಡಿಗಳ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದಿದೆ.

ತನ್ನ ಅಧಿಕಾರ ಹಾಗೂ ಯಜಮಾನಿಕೆಯನ್ನು ಸಾಧಿಸಿರುವ ರೀತಿಯನ್ನು ಈ ಮೇಲಿನ ಪೊಲಾಕ್ ಅವರ ಮಾತುಗಳಿಂದ ತಿಳಿದುಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಈ ಧೋರಣೆ ಕನ್ನಡದ ಅನನ್ಯತೆ ಕಟ್ಟುವ ಮಾರ್ಗಕಾರನ ತಾತ್ವಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಹುಸಿಗೊಳಿಸುವ ಸೂಚನೆಯನ್ನೂ ನೀಡುತ್ತದೆ. ಇದು ಕನ್ನಡದಂತಹ ನುಡಿಯ ಜೀವಂತಿಕೆ ಮತ್ತು ಸ್ವಂತಿಕೆಯನ್ನು ನಾಶಮಾಡಿ ತನ್ನ ಭಾಷಿಕ ಅಧಿಕಾರವನ್ನು ಮುಂದುವರಿಸುವ ಅಪಾಯದ ಸೂಚನೆಯೂ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ನಡದ ಅರಸು ಮನೆತನಗಳಾದ ರಾಷ್ಟçಕೂಟ, ಚಾಲುಕ್ಯ, ಹೊಯ್ಸಳ ಇವರು ತಮ್ಮ ರಾಜಕೀಯ-ಸಾಂಸ್ಕೃತಿಕ ಸಂವಹನೆಗಾಗಿ ಕನ್ನಡ ನುಡಿಗೆ ಮನ್ನಣೆ ನೀಡಿದ ಕಾರಣ ಈ ನುಡಿಯು ತನ್ನೆಲ್ಲ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ತನ್ನದೇ ಆದ ಸಾಹಿತ್ಯಿಕ-ರಾಜಕೀಯ ಅನನ್ಯತೆಯನ್ನು ಕಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು ಎಂಬ ನಂಬಿಕೆಗಳೂ ನೆಲೆನಿಂತಿವೆ. ಇರಲಿ ಹೀಗೆ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಂಸ್ಕೃತ ನುಡಿಯ ಗಮನವು ಹೇಗೆ ಒಂದು ನುಡಿಯ ಒಟ್ಟು ಸಾಮಾಜಿಕ ಸಂದರ್ಭದಲ್ಲಿ ತನ್ನ ಗುರುತುಗಳನ್ನು ನೆಲೆಗೊಳಿಸುವ ಹುನ್ನಾರವನ್ನು ಮಾಡಿದೆ ಅನ್ನುವುದನ್ನು ಇಲ್ಲಿ ಕಾಣಬಹುದು. ಅಂದರೆ ಆಯಾ ಭಾಷಿಕ ಸನ್ನಿವೇಶ ಮತ್ತು ಬಳಕೆಯ ನಿಲುವುಗಳನ್ನು ನಿಯಂತ್ರಿಸಿದ ಮಾದರಿಗಳು ನಮ್ಮ ಕನ್ನಡ ವ್ಯಾಕರಣ, ಮೀಮಾಂಸೆ, ಸಂಸ್ಕೃತಿ ಚಿಂತನೆ, ಶೈಕ್ಷಣಿಕ ಪರಂಪರೆಗಳು ರೂಪಗೊಂಡ ಬಗೆಗಳನ್ನು ಸಾಮಾಜಿಕ ನುಡಿಯರಿಮೆಯ ನೆಲೆಗಳಿಂದ ಇನ್ನೂ ನಿಚ್ಚಳವಾಗಿ ಕಾಣಲು ಸಾಧ್ಯವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending