Connect with us

ನೆಲದನಿ

ನುಡಿಯ ಒಡಲು – 23 | ಮಾತೃಭಾಷೆ : ಹಾಗಂದರೇನು?

Published

on

  • ಡಾ‌.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

 

Why not let me speak in
Any language I like? The language Ispeak
Becomes mine, its distortions, its queernesses
All mine, mine alone. It is half-English, half
Indian, funny perhaps, but it is honest,
It is as human as I am human, don’t
You see?…

Kamala Das

Language is the key to the heart of culture. (Edwards 1985:36)

Language embodies the world view of a culture and is unique to the culture that created it. It reflects values and concepts that are deemed to be the most important by culture. A language describes the culture it comes from. (Noam Chomsky, www.anacleta.homestead.com)

Globally, language is the dynamite of thought. If you kill or render impotent a people’s language, you can as well kill the people, but if you effectively plan and develop a people’s language, you are laying treasures that affect eternity and providing the people with tools of self identity, self actualization and self promotion. (Adegbija 1993:9)

ಮಾತೃಭಾಷೆ ಅಂದರೇನು ಎಂಬುದರ ವ್ಯಾಖ್ಯೆಗಳನ್ನು ಕೊಡುವುದು ನನ್ನ ಉದ್ದೇಶವಲ್ಲ. ಬದಲಿಗೆ, ಇಂತಹ ಪದಗಳು [ಪರಿಕಲ್ಪನೆ] ಹುಟ್ಟಿಸುವ ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ತಮ್ಮ ಗಮನ ಸೆಳೆಯಲು ಯತ್ನಿಸುತ್ತೇನೆ. ಜನಮಾನಸದಲ್ಲಿ ‘ತಾಯ್ನುಡಿ’ಗೆ ಬದಲಾಗಿ ‘ಮಾತೃಭಾಷೆ’ ಎಂಬ ಪದವೇ ಹೆಚ್ಚು ಬಳಕೆಗೆ ಬಂದಿದೆ. ಆದಾಗ್ಯೂ ನಾನು ಈ ಟಿಪ್ಪಣಿಯಲ್ಲಿ ಇನ್ನೂ ಮುಂದೆ ಮಾತೃಭಾಷೆಗೆ ಬದಲಾಗಿ ‘ತಾಯ್ನುಡಿ’ ಎಂಬ ಪದವನ್ನು ಬಳಸುತ್ತೇನೆ. ಕಾರಣವೇನೆಂದರೆ ಕನ್ನಡದ ನುಡಿಗಟ್ಟುಗಳನ್ನೇ ಸಹಜವಾಗಿ ಬಳಕೆಗೆ ತರುವ ಹೆಬ್ಬಯಕೆ.

ಈ ನಡೆ ಈಗಾಗಲೇ ಬಳಕೆಗೆ ಬಂದಿದೆ. ಈ ಲೇಖನವು ತನ್ನ ಚರ್ಚೆಯ ಮುಖ್ಯ ಭಿತ್ತಿಯನ್ನಾಗಿ ನಾಡು-ನುಡಿ-ಸಂಸ್ಕೃತಿಗಳ ನಡುವಣ ತಿಕ್ಕಾಟ ಹಾಗೂ ಸ್ವನುಡಿ-ಪರನುಡಿಗಳ ನಡುವಣ ಯಾಜಮಾನ್ಯ-ಅಧೀನ ಸಂಬಂಧಗಳನ್ನು ಆಯ್ದುಕೊಂಡಿದೆ. ನಾಗರಿಕತೆಯ ವಿಕಾಸ ಹಾಗೂ ಚರಿತ್ರೆಯ ಚಲನಶೀಲತೆ ಒದಗಿಸುವ ಕುರುಹಗಳ ಆಧಾರದ ಮೇಲೆ, ತಾಯ್ನುಡಿ ಎನ್ನುವುದೇ ಒಂದು ಹುಸಿಕಲ್ಪನೆ [ಮಿಸ್‍ನಾಮರ್] ಎನ್ನುವ ತಿಳುವಳಿಕೆಯೂ ಮುಂಚೂಣೆಗೆ ಬಂದಿದೆ.

ಬೇರೆ ಬೇರೆ ಸಂಸ್ಕೃತಿಗಳು ವಾಸಿಸುವ ಒಂದು ಸಮುದಾಯದಲ್ಲಿ ‘ತಾಯ್ನುಡಿ’ಯನ್ನು ಗುರುತಿಸುವ ತಾತ್ವಿಕ ನೆಲೆಗಳಾವವು? ಅಂತಹದೊಂದು ಸನ್ನಿವೇಶವನ್ನು ಖಚಿತವಾಗಿ ವ್ಯಾಖ್ಯಾನಿಸಬಹುದಾ? ಹೌದಾದರೆ ಹೇಗೆ? ಸಾಹಿತ್ಯಿಕ-ಭಾಷಿಕ ಚರಿತ್ರೆಗಳನ್ನು ಪರಿಶೀಲಿಸಿ ನೋಡಿದರೆ, ಎಲ್ಲಿಯೂ ಕೂಡ ತಾಯ್ನುಡಿಯನ್ನು ಖಚಿತ ಹಾಗೂ ನಿರ್ದಿಷ್ಟವಾಗಿ ವ್ಯಾಖ್ಯಾನಿಸಿದ್ದು ಕಂಡು ಬಂದಿಲ್ಲ. ಹಾಗಾದರೆ, ಇಂತಹ ಒಂದು ಸಾಂಸ್ಕೃತಿಕ-ಭಾಷಿಕ ಸನ್ನಿವೇಶವನ್ನು ವಿವರಿಸುವದು ಹೇಗೆ?

ಇದಕ್ಕಿರುವ ತಾತ್ವಿಕ ಸಮರ್ಥನೆಗಳೇನು? ತಾಯ್ನುಡಿಗೆ ಬದಲಾಗಿ ನಾಡುನುಡಿ, ಪರಿಸರನುಡಿ, ಮೊದಲನುಡಿ ಮುಂತಾದ ಪರಿಕಲ್ಪನೆಗಳು ಬಳಕೆಯಲ್ಲಿವೆ. ಇಂತಹ ರೂಢಿಗಳನ್ನು ಗಮನಿಸಿದಾಗ ಸ್ಪಷ್ಟವಾಗುವುದೇನೆಂದರೆ, ಈ ಪರಿಕಲ್ಪನೆ ಆಕಸ್ಮಿಕವಾಗಿ ಜಾರಿಗೆ ಬಂದಿದೆ ಎಂದು ಅನ್ನಿಸುತ್ತದೆ. ಇತ್ತೀಚಿನ ರಾಷ್ಟ್ರ-ರಾಷ್ಟ್ರೀಯತೆಯ ಕಲ್ಪನೆಯೊಂದಿಗೆ ತಾಯ್ನುಡಿ ಹಾಗೂ ತಾಯ್ನಾಡು ಎನ್ನುವಂತಹ ಮೌಲ್ಯಗಳು ಪ್ರಾಮುಖ್ಯತೆಯನ್ನು ಪಡಕೊಂಡಿರುವುದು ಗಮನಾರ್ಹ.

ರಾಷ್ಟ್ರೀಯತೆಯನ್ನು ಬೆಳಸುವ ಪ್ರಕ್ರಿಯೆಯಲ್ಲಿ ಭಾಷೆಯು ತನ್ನ ಮೂಲಭೂತ ಸ್ವರೂಪಕ್ಕಿಂತ ಬೇರೆಯೇ ರೂಪವನ್ನು ಪಡಕೊಂಡಿದೆ. ಧರ್ಮ, ಜಾತಿಗಳು ಸ್ವರೂಪವನ್ನೇ ಭಾಷೆಯೂ ಪಡಕೊಂಡಿದೆ [ಆರೋಪಿಸಲಾಗಿದೆ]. ಧರ್ಮ ಹಾಗೂ ಜಾತಿಯೊಂದಗಿನ ನಂಟು ಯಾವಾಗಲೂ ಅಂಧಾನುಕರುಣೆಯಿಂದ ಕೂಡಿರುತ್ತದೆ ಎನ್ನುವ ವಾದಗಳಿವೆ. ಭಾಷೆಗೂ ಇದೇ ಸ್ಥಿತಿ ಒದಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇದು ಹುಟ್ಟಿಸುವ ಸಾಂಸ್ಕೃತಿಕ ಅಪಾಯ ಯಾರನ್ನಾದರೂ ಘಾಸಿಗೊಳಿಸುತ್ತದೆ. ಹಾಗಾದರೆ ಭಾಷೆಯ ಮೂಲ ಸ್ವರೂಪವೇನು? ಅದು ಯಾಕೆ? ಧರ್ಮ, ಜಾತಿ ಹಾಗೂ ಪ್ರಾದೇಶಿಕತೆಯಂತಹ ಮೌಲ್ಯಗಳೊಂದಿಗೆ ಸಮೀಕರಣಗೊಂಡಿದೆ. ಇಂತಹ ಸನ್ನಿವೇಶದ ಹಿಂದಿನ ತಾತ್ವಿಕ ಒತ್ತಡಗಳೇನು? ಇಂತಹ ಹಲವು ಪ್ರಶ್ನೆಗಳು ಸೂಕ್ಷ್ಮಮತಿಗಳನ್ನು ಕಾಡದೆ ಇರಲಾರವು. ‘ತಾಯ್ನುಡಿ’ ಹಾಗೂ ‘ತಾಯ್ನಾಡು’ ಮುಂತಾದ ಮೌಲ್ಯಗಳ ಹೊರಚಾಚು ಏನು? ನಾಡು-ನುಡಿಗಳ ನಡುವೆ ನಂಟು ಬೆಸೆಯುವ ನೆಲೆಗಳಾವವು?

ನಾವು ಭಾರತೀಯರು ಅನ್ನುವ ಭಾವನೆ ಹಿಂದಿನ ಪ್ರೇರಣೆಗಳೇನು? ಅದೇ ನಾವು ಕನ್ನಡಿಗರು ಅನ್ನುವ ಭಾವನೆಗಳ ನೆಲೆಗಳಾವವು? ನಾಡು-ನುಡಿ ಎರಡನ್ನೂ ‘ತಾಯಿ’ಗೆ ಸಮೀಕರಸಿಕೊಂಡು ಆರಾಧಿಸುವ ಬಗೆಯೇ ಒಂದು ರಾಜಕೀಯ ಹುನ್ನಾರದಂತೆ ಕಾಣುತ್ತದೆ. ನಾವು ಭಾರತೀಯರು ಎನ್ನುವುದು ಕೇವಲ ರಾಜಕೀಯ ಒಗ್ಗಟ್ಟಿನ ನಂಬಿಕೆಯಾದರೆ, ಅದನ್ನು ‘ತಾಯ್ನಾಡು’ ಎಂದು ಕರೆಯುವ ಜರೂರು ಏನಿತ್ತು? ಇದು ಕೇವಲ ರಾಜಕೀಯ ಪ್ರೇರಿತ ಮೌಲ್ಯವಾದರೆ, ಇದಕ್ಕೆ ಜನಸಾಮಾನ್ಯರು ಇಷ್ಟೊಂದು ಗೌರವ ತೋರಿಸುವ ಅಗತ್ಯವಿರಲಿಲ್ಲ ಎಂದು ಕಾಣುತ್ತದೆ.

ನಾಡು-ನುಡಿಗಳ ನಡುವೆ ಸಾಂಸ್ಕೃತಿಕ ಹೊಂದಾಣಿಕೆಯ ಕೊರತೆ ಇದ್ದೇ ಇರುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಚರಿತ್ರೆಯಲ್ಲಿಯೇ ಸಿಗುತ್ತವೆ. ಕುತೂಹಲದ ಸಂಗತಿ ಏನೆಂದರೆ ನಾಡು ಬಹುತ್ವತೆಯ ಸಂಕೇತವಾದರೆ ನುಡಿ ಏಕತೆಯ ಸಂಕೇತವಾಗಿರುತ್ತದೆ. ವಾಸ್ತವದಲ್ಲಿ ನಾಡು-ನುಡಿಗಳ ನಡುವೆ ನಿರಂತರ ಗುದ್ದಾಟವಿರುತ್ತದೆ. ಇದು ದಿನವೂ ನಮ್ಮ ಕಣ್ಣಿಗೆ ರಾಚುವ ಸತ್ಯ ಉದಾಹರಣೆಗೆ ಮಹಾರಾಷ್ಟ್ರ, ಕರ್ನಾಟಕ, ಗೋವಾ ಮುಂತಾದ ರಾಜ್ಯಗಳಲ್ಲಿ ನಡೆಯುವ ಬೆಳವಣೆಗೆಗಳನ್ನು ನೆನಪಿಸಿಕೊಳ್ಳಬಹುದು.

ಈ ನಾಡು-ನುಡಿಗಳ ನಡುವೆ ಏಕತೆ ಬೆಸೆಯುವ ಕ್ರಮಗಳಲ್ಲೇ ದ್ವಂದ್ವವಿದೆ ಎಂದು ತೋರುತ್ತದೆ. ಕರ್ನಾಟಕ ಅಥವಾ ಮಹಾರಾಷ್ಟ್ರಗಳು ಒಂದೊಂದು ನಾಡಾದರೆ, ಆ ನಾಡುಗಳಲ್ಲಿ ವಾಸಿಸುವ ಎಲ್ಲ ಜನಸಮೂಹದ ತಾಯ್ನುಡಿ ಕನ್ನಡ/ಮರಾಠಿ ಮಾತ್ರವೇ ಅಲ್ಲ ಅನ್ನುವುದು ಗಮನಾರ್ಹ. ಅಂದರೆ ಕನ್ನಡಿಗ-ಕರ್ನಾಟಕ ಹಾಗೂ ಮರಾಠಿಗ- ಮಹಾರಾಷ್ಟ್ರ ಇವರ ನಡುವೆ ಸಾಮರಸ್ಯಕ್ಕಿಂತ ಸಂಘರ್ಷದ ಪರ್ಸಂಟೇಜ್‍ಯೇ ಜಾಸ್ತಿ ಇದೆ.

ತಾಯ್ನುಡಿ ಕುರಿತು ಸಾಕಷ್ಟು ನಂಬಿಕೆಗಳು ಹುಟ್ಟಿಕೊಂಡಿವೆ. ಅವುಗಳೆಂದರೆ, ತಾಯ್ನುಡಿ ಅದು ಜನಾಂಗಗಳ ಸ್ಮೃತಿಕೋಶವಾಗಿದೆ. ಅವರ ಲೋಕಗ್ರಹಿಕೆಯನ್ನು ರೂಪಿಸಿಕೊಳ್ಳುವ ಹಾಗೂ ಅವರ ಸಂವೇದನಾ ಪ್ರಕ್ರಿಯೆಯನ್ನು ಕಟ್ಟಿಕೊಳ್ಳುವ ಕ್ರಮ ಆ ತಾಯ್ನುಡಿಯಿಂದಲೇ ಸಾಧ್ಯ. ಜಗತ್ತಿನ ಎಲ್ಲ ಬಗೆಯ ತಿಳುವಳಿಕೆಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ತಾಯ್ನುಡಿ ಬೆಳಕಿಂಡಿಯಾಗಿದೆ. [ಇಂಗ್ಲಿಶ್ ಹಾಗೂ ಸಂಸ್ಕೃತದಂತಹ ಅಧಿಕಾರಸ್ಥ ಭಾಷೆಗಳು ಮಾತ್ರ ಜ್ಞಾನದ ಬೆಳಕಿಂಡಿಗಳು ಎನ್ನುವ ನಂಬಿಕೆಗಳೇ ನೆಲೆಯೂರಿದ್ದವು. ಅಂತಹ ಸನ್ನಿವೇಶದಲ್ಲಿ ಕನ್ನಡದಂತಹ ದೇಶೀ ಭಾಷೆಗಳು ಗೋಡೆಯಾಗಿ ಪರಿಣಮಿಸಿದ್ದೇ ಹೆಚ್ಚು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು].

ಇದು ಸಮುದಾಯದ ಅನುಭವವನ್ನು ಚಾರಿತ್ರಿಕವಾಗಿ, ಪಾರಪಂರಿಕವಾಗಿ ತನ್ನ ಸ್ಮೃತಿಕೋಶಗಳಲ್ಲಿ ಅಂತಸ್ಥಗೊಳಿಸಿರುತ್ತದೆ. ಆಯಾ ಸಂಸ್ಕೃತಿಯ ರಚನೆಗಳು ಆಯಾ ತಾಯ್ನುಡಿಯೊಂದಿಗೆ ಬೆಸೆದುಕೊಂಡಿರುತ್ತವೆ. ಸಾಂಸ್ಕೃತಿಕ ಹಾಗೂ ಸಂವಹನ ರಚನೆಗಳು ಏಕತ್ರಗೊಂಡಿರುತ್ತವೆ. ಭಾಷೆ ಪ್ರತಿಯೊಂದು ಸಮುದಾಯದ ‘ಅನುಭವ’ವನ್ನು ಚಲನಶೀಲಗೊಳಿಸುತ್ತದೆ ಎನ್ನುವ ತಿಳುವಳಿಕೆ ಬಲವಾಗಿರುವುದೇ ಈ ಎಲ್ಲ ನಂಬಿಕೆಗಳಿಗೆ ಕಾರಣ. ಇದೊಂದು ಹುಸಿ ನಂಬಿಕೆ ಎಂದು ನನ್ನ ವಾದವಲ್ಲ. ಏನಂದರೆ ಭಾಷೆ ಹಾಗೂ ಸಂಸ್ಕೃತಿಗಳ ನಡುವಣ ನಂಟು ಆಕಸ್ಮಿಕ ಮತ್ತು ಅನಕೂಲಾತ್ಮಕವಾದದ್ದು ಎನ್ನುವುದು ಕೂಡ ಸತ್ಯ. ಪ್ರತಿಯೊಂದು ಭಾಷೆಯು ಯಾವುದೇ ಆಶಯವನ್ನು ಕಟ್ಟಿಕೊಡುವ ಶಕ್ತಿಯನ್ನು ಹೊಂದಿರುತ್ತದೆ.

ಯಾವುದು ಮನುಷ್ಯನ ಅನುಭವಕ್ಕೆ ಅಥವಾ ಗ್ರಹಿಕೆಗೆ ದಕ್ಕಲಾರದೋ ಅದು ಭಾಷೆಯಲ್ಲಿ ಪ್ರಕಟಗೊಳ್ಳಲಾರದು. ಇದು ಭಾಷೆಗಿರುವ ಮಿತಿಯಲ್ಲ. ಮನುಷ್ಯನ ಗ್ರಹಿಕೆಗಿರುವ ಮಿತಿಯೆನ್ನುವುದು ಗಮನಾರ್ಹ. ಸಾಮನ್ಯವಾಗಿ ಮನುಷ್ಯನ ಅಭಿವ್ಯಕ್ತಿಗೆ ದಕ್ಕದ ಅನುಭವವನ್ನು ಅವನಾಡುವ ಭಾಷೆಗಿರವ ಮಿತಿಯೆಂದು ಆರೋಪಿಸಲಾಗಿದೆ. ಅದೇನೆಂದರೆ ಭಾಷೆ ಮನುಷ್ಯನ ಪ್ರತಿ ಅನುಭವವನ್ನು ವ್ಯಕ್ತಪಡಿಸಲಾರದು ಎಂಬ ಸರಳ ನಂಬಿಕೆವೊಂದು ಜಾರಿಯಲ್ಲಿದೆ.

ಮನುಷ್ಯ ತಾನು ಏನನ್ನು ತನ್ನ ಅನುಭವದ ಭಾಗವನ್ನಾಗಿ ಪಡೆದುಕೊಳ್ಳುತ್ತಾನೋ, ಅದು ಭಾಷೆಯ ಮುಖಾಂತರ ಅನುವಾದಗೊಂಡು ವ್ಯಕ್ತವಾಗುತ್ತದೆ. ಅಮೂರ್ತತೆ ಹಾಗೂ ಮೂರ್ತತೆ ಅನ್ನುವುದು ಭಾಷೆಗೆ ಇರುವ ಸಹಜ ಹಾಗೂ ಅಂತಸ್ಥ ಗುಣವಲ್ಲ. ಇದೊಂದು ಆರೋಪಿತ ಗುಣಮಾತ್ರ. ಒಂದು ಸಾಮಾಜಿಕ ಸನ್ನಿವೇಶದಲ್ಲಿ ಯಾವ ಭಾಷೆಯೊಂದಿಗೆ ಮಗು/ಮನುಷ್ಯ ತನ್ನ ಅನುಭವವನ್ನು ಒಡ್ಡಿಕೊಳ್ಳುತ್ತಾನೋ ಅದು ಅವಳ/ನ ಅನುಭವದ ಪ್ರತಿ ಆಶಯವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಮಾಧ್ಯಮವಾಗುತ್ತದೆ.

ಇದೆಲ್ಲದಕ್ಕಿಂತಲೂ ಹೆಚ್ಚಾಗಿ ತಾಯ್ನುಡಿಯು ಅವಳ/ನ ಸಾಂಸ್ಕೃತಿಕ ಹಾಗೂ ಸೃಜನಶೀಲ ಸಂವೇದನೆಯನ್ನು ಪ್ರತಿನಿಧಿಸುವ ಮಾಧ್ಯಮವೂ ಆಗಿ ದಕ್ಕುತ್ತದೆ. ಹಾಗಾಗಿ ಭಾಷೆ ಮತ್ತು ಮಾನವ ಸಮುದಾಯಗಳ ನಡುವೆ ಒಂದು ಅವಿನಾಭಾವ ನಂಟು ಏರ್ಪಡುವುದೆಂದು ಅನ್ನಿಸುತ್ತದೆ. ಈ ಅನುಭವವು ಭಾಷೆ ಮತ್ತು ಸಮುದಾಯದ ನಿರಂತರ ಸಾತತ್ಯದ ಫಲವೂ ಆಗಿದೆ ಅನ್ನುವುದು ದಿಟ. ಇಂತಹ ವಾದಗಳು ಮಂಡಿಸುವ ಚಿಂತನೆಗಳಿಂದ ಯಾವ ಪ್ರಯೋಜನವು ಇಲ್ಲವೆಂದರೆ, ಇದು ಸಾಂಸ್ಕೃತಿಕ ಗಾಭರಿತನಕ್ಕೆ ಸಾಕಷ್ಟು ಅವಕಾಶ ನೀಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಲಿಂಗಭೇದ, ವರ್ಗ-ವರ್ಣಭೇದ ಹಾಗೂ ಮುಂತಾದ ತರತಮ ಭೇದಗಳು ಸಾಮಾಜಿಕ ಕಾರಣಗಳಿಂದ ಭಾಷೆಯಲ್ಲಿ ಮಿಳಿತಗೊಂಡಿವೆ. ಭಾಷೆ ಇದೆಲ್ಲವನ್ನೂ ಪ್ರತಿನಿಧಿಸುವ ಕಾರಣ, ಭಾಷೆಗೆ ಇಂತಹದೊಂದು ಗುಣ ಇರುತ್ತದೆ ಎಂಬ ನಂಬಿಕೆ. ಈ ಕಾರಣಗಳಿಂದಲೇ ಸಪೀರ್-ವೂರ್ಫ್ ಅವರು ಮಂಡಿಸುವ “ಭಾಷೆ [ತಾಯ್ನುಡಿ] ಮತ್ತು ಸಂಸ್ಕೃತಿಗಳ ನಡುವೆ ಲೋಕಗ್ರಹಿಕೆ”ಯನ್ನು ರೂಪಿಸುವ ನಂಟಿರುತ್ತದೆ ಎನ್ನುವ ವಾದದಲ್ಲಿ ಮೀತಗಳಿವೆ ಎನ್ನುವುದು ದೃಢಪಟ್ಟಿದೆ.

ಅನುಭಾವ ರೂಪಗೊಳ್ಳುವ ನೆಲೆಗಳು ಕೇವಲ ಭಾಷಿಕ ಸಂವೇದನೆಯಿಂದ ಕೂಡಿದವುಗಳಲ್ಲ. ಅವು ಸಾಮಾಜಿಕ-ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅಂತಸ್ಥವಾಗಿರುತ್ತವೆ. ಅದಕ್ಕಾಗಿ ಯಾವುದೇ ಭಾಷೆಯ ಸಾಹಿತ್ಯವು ಏಕೀಕೃತ ಅನುಭವದ ಮೊತ್ತವಾಗಿರಲಾರದು. ಅದು ಯಾವಗಲೂ ಬಹುತ್ವತೆಯ ಆಗರವಾಗಿರುತ್ತದೆ. ಅದಕ್ಕಾಗಿಯೇ ಕನ್ನಡ ಸಾಹಿತ್ಯದಲ್ಲಿ ಜೈನ್, ವೈದಿಕ, ಶೂದ್ರ-ದಲಿತ, ಮುಸ್ಲಿಮ್ ಮುಂತಾದ ಬಗೆಯಲ್ಲಿ ಸಂವೇದನೆಯನ್ನು ವಿಭಜಿಸಲಾಗಿದೆ ಎಂದು ತೋರುತ್ತದೆ.

ಇದು ಕೇವಲ ಅಧ್ಯಯನದ ಅನಕೂಲಕ್ಕಾಗಿ ಮಾತ್ರವಲ್ಲ ಅದುವೇ ವಾಸ್ತವವೆಂದು ನಂಬಲಾಗಿದೆ. ಆದರೆ ಈ ಎಲ್ಲ ಬಗೆಯ ಸಂವೇದನೆಯನ್ನು ಅಭಿವ್ಯಕ್ತಿಪಡಿಸುವ ಮಾಧ್ಯಮ ಮಾತ್ರ ಕನ್ನಡವಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಬೇರೆ ಸಂಸ್ಕೃತಿಗಳ ಮೂಲದಿಂದ ಬಂದಿರುವ ಸಾಹಿತ್ಯವನ್ನು ಗಮನಿಸದರೆ ಇದು ಸ್ಪಷ್ಟವಾಗುತ್ತದೆ. ಈ ಕಾರಣಗಳ ಪರಿಣಾಮವಾಗಿ, ಪ್ರತಿಯೊಂದು ಭಾಷೆಯಲ್ಲಿ ಭಿನ್ನತೆ, ವೈವಿಧ್ಯತೆ ಹಾಗೂ ಸಾಂಸ್ಕೃತಿಕನಿಷ್ಠ ಪ್ರಜ್ಞೆ ರೂಪಗೊಂಡಿರುತ್ತದೆ. ಒಂದು ಸಮುದಾಯದ ಎಲ್ಲ ಜನ, ಜನಾಂಗ, ವರ್ಗಗಳ ನಡುವೆ ಸಂವಹನ ತೊಡಕು ಉಂಟಾಗಬಾರದು ಎನ್ನುವ ಕಾರಣಕ್ಕೆ ಭಾಷೆಗೆ ಒಂದು ಸಾರ್ವತ್ರಿಕತೆಯನ್ನು ರೂಪಿಸಲಾಗಿದೆ.

ಇದನ್ನೂ ಮೀರಿ ಭಾಷೆಯಲ್ಲಿ ತೊಡಕುಗಳು ಉಳಿದುಕೊಂಡಿರುತ್ತವೆ ಎನ್ನುವುದು ಕುತೂಹಲವನ್ನು ಹುಟ್ಟಿಸುತ್ತದೆ. ಭಾಷೆ ತನ್ನ ವೈವಿಧ್ಯತೆ-ಭಿನ್ನತೆಗಳ ನಡುವೆಯೂ ಸಾರ್ವತ್ರಿಕತೆಯನ್ನು ಕಾಪಾಡುವ ಹಾಗೂ ಸಮನ್ವಯಗೊಳಿಸುವ ಗುದ್ದಾಟಗಳು ನಿರಂತರವಾಗಿರುತ್ತವೆ. ಇಂತಹದೊಂದು ಬೆಳವಣೆಗೆಯೇ ವಿಚಿತ್ರವಾದದ್ದು. ಮತ-ಧರ್ಮಗಳ ಕುರಿತ ಅಂಧಾನುಕರುಣೆ ಸಮಾಜದ ಐಕ್ಯತೆಗೆ ಧಕ್ಕೆ ಉಂಟುಮಾಡಿದಂತೆ, ಭಾಷೆಯೂ ಸಮುದಾಯದ ಒಗ್ಗಟ್ಟಿಗೆ ತೊಡಕಾಗಿದೆ.

ಇದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಚರಿತ್ರೆಯಲ್ಲಿಯೇ ಸಿಗುತ್ತವೆ. ಮನುಷ್ಯನ ಸಾಮಾಜಿಕ ಅಸ್ತಿತ್ವದ ಆಧಾರದ ಮೇಲೆ ಭಾಷೆಯ ಅಸ್ತಿತ್ವ ನಿರ್ಧಾರವಾಗುತ್ತದೆ. ಇಂತಹ ಭಾಷಿಕ-ಸಾಮಾಜಿಕ ಆಕೃತಿಗಳು ಸಮುದಾಯದ ಪ್ರಜ್ಞೆಗೆ ಇಂಬು ಕೊಡದೇ, ಸಮುದಾಯವನ್ನು ವಿಭಜಿಸುವುದಕ್ಕೆ ಪ್ರೇರಣೆಯನ್ನು ನೀಡಿವೆ. ಈ ಬೆಳವಣೆಗೆಗಳು ಕನ್ನಡದಂತಹ ಭಾಷೆಯ ಚಹರೆಗಳೂ ಕೂಡ ಅಂಚಿಗೆ ಸರಿಯುತ್ತವೆ ಎಂಬ ಆತಂಕಕ್ಕೆ ಎಡೆಮಾಡಿ ಕೊಟ್ಟಿವೆ.

ಇಂತಹ ಆತಂಕಗಳಿಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ ಎನ್ನುವುದು ದಿಟ. ಆದರೆ, ಇದು ಕೇವಲ ರಾಜಕೀಯ ಪ್ರೇರಿತ ಸಂಘಟನೆಗಳು ಹುಟ್ಟು ಹಾಕುವ ಹುನ್ನಾರ ಮಾತ್ರ. ಇಂತಹ ಭಾಷಾ ರಾಜಕಾರಣದ ಹಿಂದಿನ ಒತ್ತಡ, ಪ್ರೇರಣೆಗಳನ್ನು ತಾತ್ವಿಕವಾಗಿ ವಿಶ್ಲೇಷಿಸಬೇಕಿದೆ. ಜನಸಾಮಾನ್ಯರು ಭಾಷೆಯನ್ನು ಒಂದು ಸಾಂಸ್ಕೃತಿ-ಸಾಮಾಜಿಕ ಮೌಲ್ಯವಾಗಿ ಪರಿಗಣಿಸಿದ್ದೇ ಇಂತಹ ಭಾಷಿಕ ಬಿಕ್ಕಟ್ಟುಗಳಿಗೆ ಕಾರಣ.

ಭಾಷಿಕ ಅಗತ್ಯಗಳು ಕಾಲ-ದೇಶಕ್ಕೆ ಅನುಗುಣವಾಗಿ ಬೇರೆಯಾಗಿರುವುದರಿಂದ, ಕೆಲವು ಆಸಕ್ತ ವರ್ಗಗಳು ತಮಗೆ ಪೂರಕವಾಗುವ ಆಶಯಗಳನ್ನು ತಾಯ್ನುಡಿ, ದೇವನುಡಿ, ರಾಷ್ಟ್ರನುಡಿ ಎಂಬ ಅಭೀಮಾನವನ್ನು ಮೂಡಿಸಲು ಹವಣಿಸುತ್ತವೆ. ಇಂತಹ ಪ್ರಯತ್ನಗಳಿಗೆ ಸಾಂಸ್ಥಿಕ ಬೆಂಬಲ ದೊರೆಯುವುದರಿಂದ, ನಾಡು-ನುಡಿಯ ಕುರಿತ ಅತೀರೇಕದ ಧೋರಣೆಗಳು ಕೂಡ ಸಮುದಾಯ ಹಾಗೂ ಸಂವಿಧಾನದ ಮನ್ನಣೆಯನ್ನು ಪಡೆದುಕೊಳ್ಳುತ್ತವೆ. ಈ ಬಗೆಯ ಭಾಷಿಕ ಆಕೃತಿಗಳು ಪಟ್ಟಭದ್ರ ಹಿತಾಸಕ್ತಿ ಹಾಗೂ ಶಕ್ತಿ ರಾಜಕಾರಣದ ಗುಂಪುಗಳನ್ನು ಕೂಡ ಮೌಲ್ಯೀಕರಣಗೊಳಿಸುತ್ತವೆ.

ವಿಪರ್ಯಾಸ ಏನಂದರೆ ಇಂತಹ ರಾಜಕೀಯ ಪ್ರೇರಿತ ಧೋರಣೆಗಳು ಅನುಭಾವದ ನೆಲೆಗಳನ್ನೂ ಪಡೆದುಕೊಳ್ಳುತ್ತವೆ. ಮುಂದೊಂದು ದಿನ ಇವೇ ಚಿಂತನೆಗಳು ಭಾಷಿಕ ಕ್ರಾಂತಿ ಅಥವಾ ರಾಷ್ಟ್ರೀಯತೆಯ ಚಿಂತನೆಗಳ ಸ್ವರೂಪವನ್ನು ಪಡೆಯುತ್ತವೆ. ನಾಡು-ನುಡಿ ಕುರಿತ ಚಿಂತನೆಗಳು ತೋರಿಕೆಯ ರಾಷ್ಟ್ರೀಯತೆಯನ್ನು ನಟಿಸುತ್ತವೆ ಎಂದು ಕಾಣುತ್ತದೆ. ಈ ತೋರಿಕೆಯ ಭಾಷಾಭಿಮಾನವು ಬೇರೆ ಭಾಷೆಗಳನ್ನು ಅಸಡ್ಡೆಯಿಂದ ಹಾಗೂ ಉಪೇಕ್ಷೆಯಿಂದ ಕಾಣುತ್ತವೆ. ಇದು ಭಾಷಿಕ-ಸಾಂಸ್ಕೃತಿಕ ಅಸಹನೆಗೆ ಕಾರಣವಾಗುತ್ತದೆ. ಇದು ಎಂತಹ ಸಾಂಸ್ಕೃತಿಕ ಅಪಾಯವನ್ನು ಹುಟ್ಟು ಹಾಕಬಹುದೆಂದು ಯಾರಿಗಾದರೂ ಅಚ್ಚರಿಯಾಗುತ್ತದೆ.

ದ್ರಾವಿಡ ನುಡಿಗಳು ಒಂದೇ ನುಡಿ ಕುಲಕ್ಕೆ ಸೇರಿದವುಗಳಾದರೂ – ಈ ಕುಲದ ಬೇರೆ ಬೇರೆ ನುಡಿಗಳ ನಡುವೆ ಯಾಕೆ? ತರತಮ ಭಾವನೆಯನ್ನು ಹುಟ್ಟಿಸಿಕೊಂಡು, ದಾಯಾದಿ ಮತ್ಸರವನ್ನು ಬೆಳಸುತ್ತಾರೆ. ದಾಯಾದಿ ಮತ್ಸರ ಕೇವಲ ಆಸ್ತಿ ಹಂಚಿಕೆಯ ಕುರಿತದ್ದು ಮಾತ್ರವಲ್ಲ. ಅದು ಅಸ್ತಿತ್ವದ ಪ್ರಶ್ನೆಯೂ ಆಗಿರುತ್ತದೆ. ತಮ್ಮ ತಮ್ಮ ಗುರುತುಗಳನ್ನು ಹೆಚ್ಚು ಹೆಚ್ಚು ಗಟ್ಟಿಗೊಳಿಸುವ ಹಂಬಲದಲ್ಲಿರುತ್ತವೆ ಎನ್ನುವುದು ವಿಶೇಷ. ಇಂತಹ ಸ್ಪರ್ಧಾತ್ಮಕ ಧೋರಣೆಯು ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ.

ಈ ಬೆಳವಣೆಗೆಗಳು ತಮ್ಮ ತಮ್ಮ ಕುಲ ಸಂಬಂಧದ ನೆನಪುಗಳನ್ನು ಕೂಡ ಕಮರಿಸುತ್ತವೆ. ಈ ಬಗೆಯ ಭಾಷಿಕ ಹುನ್ನಾರ ನಿರಂತರವಾಗಿ ದ್ರಾವಿಡ ನುಡಿ ಸಮುದಾಯದಲ್ಲಿ ನಡದಿವೆ. ಇದು ಹೆಚ್ಚು ಕನ್ನಡ ಮತ್ತು ತಮಿಳು ನುಡಿಗಳ ನಡುವೆ ನಡದಿದೆ ಎಂದು ಹೇಳಬಹುದು. ಇವು ಕಲ್ಪಿತ ಗಡಿಗಳ ನಿರ್ಮಾಣಕ್ಕೂ ಕುಮ್ಮಕ್ಕು ನಿಡುತ್ತವೆ. ವಿಚಿತ್ರವೆನಂದರೆ, ಬೇರೆ ಕುಲಕ್ಕೆ ಸೇರಿದ ಭಾಷೆಯನ್ನು ಕನ್ನಡ ತನ್ನ ತಲೆಯ ಮೇಲೆ ಹೊತ್ತುಕೊಂಡು ಪೂಜಿಸಿದ ನಿದರ್ಶನಗಳಿಗೇನು ಕೊರತೆಯಿಲ್ಲ.

ಇದಕ್ಕೆ ಕುಮ್ಮಕ್ಕು ನೀಡಿದ ಶಕ್ತಿಗಳು, ತಮ್ಮ ಭಾಷೆಯನ್ನು ದೈವಭಾಷೆ, ಧರ್ಮಭಾಷೆ ಎಂಬ ಮುಂತಾದ ಭ್ರಮೆಗಳನ್ನುಟ್ಟಿಸಿ ತಮ್ಮ ಪ್ರಾಬಲ್ಯವನ್ನು ಮೆರದಿವೆ. ಹಾಗಾಗಿ ದ್ರಾವಿಡ ಕುಲದ ನುಡಿಗಳು ತಮ್ಮ ದಾಯಾದಿ ಮತ್ಸರದಿಂದ ಸಂಸ್ಕೃತದಂತಹ ಭಾಷೆಗಳನ್ನು ಪೂಜ್ಯಭಾವದಿಂದ ಕಾಣುವ ದಾಸ್ಯಕ್ಕೆ ಶರಣಾಗಿರುವುದು ಚಾರಿತ್ರಿಕ ವಿಪರ್ಯಾಸವೇ ಸರಿ.

ಮುಖ್ಯವಾಗಿ ಅಂದಿನ ಅಗತ್ಯದ ಪ್ರಶ್ನೆ ಸಂಸ್ಕೃತವನ್ನು ಜನಪ್ರಿಯಗೊಳಿಸುವದಾಗಿತ್ತು. ಸಂಸ್ಕೃತ ಅದನ್ನು ಆಡುವ ಜನಾಂಗವಿಲ್ಲದ್ದರಿಂದ, ಇದೊಂದು ‘ಮೃತ ಭಾಷೆ’ ಎಂದೆನಿಸಿಕೊಂಡಿದೆ. ಆದಾಗ್ಯೂ ಸಂಸ್ಕೃತ ಭಾಷೆಯನ್ನು ಎಂದೆಂದಿಗೂ ನಮ್ಮ ದೇಶೀ ಭಾಷೆ ಸಂಸ್ಕೃತಿಗಳಿಗೆ ಉಪಯುಕ್ತವಾದ ಉಪಕಾರಿಯಾದ ಭಾಷೆಯನ್ನಾಗಿ ಬಿಂಬಿಸುವ ಹುನ್ನಾರ ನಡೆಯುತ್ತಲೇ ಬಂದಿದೆ.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಉದ್ಧಾರಕ್ಕೆ ಶ್ರಮಿಸಿದ ಕೆಲ ಧರ್ಮಗಳು ಈಗ ಚರಿತ್ರೆಯ ನೆನಪು ಮಾತ್ರ. ಸಂಸ್ಕೃತ ಭಾಷೆಯು ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಾಮರ್ಥ್ಯವನ್ನು ಸಿದ್ಧಿಸಿದೆ ಎನ್ನುವ ದೃಢ ನಂಬಿಕೆಗಳು ಬೇರು ಬಿಟ್ಟಿವೆ. ಇಂತಹ ನಂಬಿಕೆಗಳನ್ನು ಸಾಬೀತುಪಡಿಸುವ ಅಧ್ಯಯನಗಳು ಶಲ್ಡನ್ ಪೊಲಾಕ್‍ರಂತಹ ‘ಪರ’ದೇಶಿ ವಿದ್ವಾಂಸರಿಂದ ನಡದಿವೆ. ವಿಶೇಷವೇನೆಂದರೆ, ಈ ಅಧ್ಯಯನಗಳು ಸಂಸ್ಕೃತ ಭಾಷೆಯು “ಕನ್ನಡ ನುಡಿಗೆ ವಿಶ್ವಾತ್ಮಕ ಚಹರೆಯನ್ನು ತಂದು ಕೊಟ್ಟಿದೆ” ಇದಕ್ಕಾಗಿಯೇ ಸಂಸ್ಕೃತವು ಸ್ಥಳೀಕರಣಗೊಂಡಿದೆ ಎಂಬ ವಾದಗಳನ್ನು ಮಂಡಿಸುತ್ತವೆ.

ಇಂತಹ ವಿಧೇಯಕ ಮಾತುಗಳ ಹಿಂದಿನ ಮರ್ಮವೇನೆಂದರೆ ಸಂಸ್ಕೃತ ತಾನೊಂದು ಪರೊಪಕಾರಿ ಭಾಷೆಯೆಂದು ಗುರುತಿಸಿಕೊಳ್ಳುವ ಭಾಷಾ ರಾಜಕಾರಣವೆಂದೇ ಹೇಳಬೇಕು. ಜಾಗತೀಕರಣ ಸಂದರ್ಭದಲ್ಲಿ ಸಂಸ್ಕೃತವು ಹೇಗೆ ದಕ್ಷಿಣ ಏಶಿಯಾ ದೇಶಗಳಲ್ಲಿ ಹರಡಿಕೊಂಡಿತ್ತು ಅನ್ನುವುದನ್ನು ವಿವರಿಸುವುದಕ್ಕೆ ಈ ಅಧ್ಯಯನಗಳು ಬೆಳಕಿಗೆ ಬಂದಿವೆ. ಇದೊಂದು ತೋರಿಕೆಯ ನಂಬಿಕೆಯಾಗಿತ್ತು.

ಆದರೆ ಅವುಗಳ ಒಳಉದ್ದೇಶ ಮಾತ್ರ ಈ ಭಾಷೆಯು ತನ್ನ ಯಾಜಮಾನ್ಯ ಹಾಗೂ ಪ್ರಾಬಲ್ಯದ ನೆಲೆಗಳನ್ನು ಗುರುತಿಸುವ ಹುನ್ನಾರವೇ ಆಗಿತ್ತು ಅನ್ನುವುದು ಸ್ಪಷ್ಟ. ಈ ಒಳ ಉದ್ದೇಶಗಳು ಸಂಸ್ಕೃತ ಮತ್ತು ಕನ್ನಡದ ನಡುವೆ ಯಾಜಮಾನ್ಯ-ಅಧೀನ ನೆಲೆಯ ಸಂಬಂಧವಿದೆ ಎಂದು ಜಗತ್ತಿಗೆ ಸಾರಿ ಹೇಳಬೇಕಾಗಿತ್ತು. ಇದು ವೈಧಿಕ ಧರ್ಮದ ನಾಜೂಕಿನ ಸಾಂಸ್ಕೃತಿಕ ರಾಜಕಾರಣದ ಮತ್ತೊಂದು ಮುಖವೆಂದೇ ಹೇಳಬೇಕು. ಕನ್ನಡವು ಪ್ರಾಕೃತ, ಪರ್ಷಿಯನ್ ಮುಂತಾದ ಭಾಷೆಗಳ ಪದಸಂಪನ್ಮೂಲವನ್ನು ತನ್ನ ಒಡಲಲ್ಲಿಯೇ ಅಡಗಿಸಿಕೊಂಡಿದೆ.

ಇಂತಹ ಭಾಷಿಕ-ಪ್ರಕ್ರಿಯೆಯನ್ನು ಮರೆಮಾಚಿ, ಯಾವುದೇ ಒಂದು ಪ್ರತಿಷ್ಠಿತ ಧರ್ಮದ ಕಪಿಮುಷ್ಠಿಯಲ್ಲಿರುವ ಸಂಸ್ಕೃತ ಭಾಷೆ ತನ್ನ ಪ್ರಾಮುಖ್ಯತೆ ಪಡದಿದೆ. ಇದು ಭಾಷಿಕ-ಸಾಂಸ್ಕೃತಿಕ ಬಹುತ್ವತೆಯ ಚರಿತ್ರೆಗೆ ಮಾಡಿದ ಅಪಚಾರವೆಂದೇ ಹೇಳಬೇಕು. ಇಂತಹ ನಿದರ್ಶನಗಳು ಭಾರತದ ಚರಿತ್ರೆ ಏಕಪಕ್ಷವಾಗಿದೆ ಅನ್ನುವುದನ್ನು ಖಚಿತಪಡಿಸುತ್ತವೆ. ಇದರಿಂದ ಯಾರಿಗೆ ಹಾನಿಯಾಗುತ್ತದೆ ಎನ್ನುವ ಪ್ರಶ್ನೆ ಎದುರಾದಾಗ, ಉತ್ತರಿಸುವ ಮನಸ್ಸುಗಳು ಹಲವು ಮೂಲಗಳಲ್ಲಿ ಹರಡಿಕೊಳ್ಳುತ್ತವೆ. ಯಾಕೆಂದರೆ, ಚರಿತ್ರೆಯ ಹುನ್ನಾರಗಳನ್ನು ವಿವರಿಸುವ ಆಕೃತಿಗಳು ಬೇರೆ ಬೇರೆ ನೆಲೆಯಿಂದ ಕೂಡಿರುವುದೇ ಇದಕ್ಕೆ ಕಾರಣ.

ಒಂದು ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಹೊಣೆ ಅವರಾಡುವ ಭಾಷೆ ಮೇಲೆ ಇರುತ್ತದೆ ಅನ್ನುವುದು ರುಜುವಾತುಪಟ್ಟಿದೆ. ಇದಕ್ಕೆ ಅನುಕೂಲ ಮಾಡಬೇಕಾದ ಪ್ರಭುತ್ವ ಅಥವಾ ಅಧಿಕಾರ ವರ್ಗ ಎಷ್ಟರ ಮಟ್ಟಿಗೆ ಜನಪರ ಕಾಳಜಿ ವಹಿಸುತ್ತವೆ ಅನ್ನುವುದು ಮುಖ್ಯ. ಪ್ರಭುತ್ವವು ಸಂಸ್ಕೃತ ಭಾಷೆಯ ಪರವಾಗಿ ತಳೆಯುವ ನಿಲುವುಗಳನ್ನು, ಕೊಂಕಣಿ, ತುಳು, ಕೊಡವ ಹಾಗೂ ಉರ್ದುದಂತಹ ಸಾಮನ್ಯ ಜನರ ಭಾಷೆಗಳ ಪರವಾಗಿ ಯಾಕೆ ತಾಳುವುದಿಲ್ಲ ಅನ್ನುವ ಪ್ರಶ್ನೆಗಳು ಸಹಜವಾಗಿಯೇ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪಿಸುವ ಈ ಹೊತ್ತಲ್ಲಿ ಹುಟ್ಟುತ್ತವೆ.

ಯಾರು ಯಾವ ಭಾಷೆಯನ್ನು ಪ್ರತಿನಿಧಿಸುತ್ತಾರೆ ಅನ್ನುವುದು ಗಮನಾರ್ಹ. ಈ ಸಂಸ್ಕೃತ ಭಾಷೆ ಪ್ರತಿನಿಧಿಸುವ ಸಮುದಾಯವು, ಚರಿತ್ರೆಯ ಉದ್ದಕ್ಕೂ ಶೋಷಣೆ, ದೌರ್ಜನ್ಯ, ಸಾಮಾಜಿಕ ಅಸಮಾನತೆಯಂತಹ ಜೀವ ವಿರೋಧಿ ರೂಢಿಗಳನ್ನು ಬಲಪಡಿಸುತ್ತಾ ಬಂದಿದೆ. ಇಂತಹ ಧೋರಣೆಗಳು ಖಾಯಂ ಆಗಿ ಸಂಸ್ಕೃತ ಭಾಷೆಯಲ್ಲಿ ನೆಲೆಯೂರಿವೆ. ಈ ವಾದವನ್ನು ಯಾರು ಕೂಡ ತಳ್ಳಿ ಹಾಕಲಾರರು, ಸಂಸ್ಕೃತ ಭಾಷೆ ಸಾಹಿತ್ಯಿಕ, ಭಾಷಿಕ ಒಟ್ಟಾರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಎಂಬಿತ್ಯಾದಿ ವಾದಗಳು ಜನಸಾಮಾನ್ಯರಲ್ಲಿ ರೂಢಿಯಲ್ಲಿವೆ.

ಇಂತಹ ವಾದಗಳಿಗೆ ಹೆಚ್ಚು ಹೆಚ್ಚು ಕಸಿ ನೀಡುವ ಅಧ್ಯಯನಗಳನ್ನು ಸಂಸ್ಕೃತ ಪರವಾಗಿರುವ ಪಂಡಿತರು ಮಂಡಿಸುತ್ತಿರುವುದು ಗಮನಾರ್ಹ. ಆದರೆ ಈ ಭಾಷೆ ಯಾರ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪ್ರತಿನೀದಿಸುತ್ತದೆ ಅನ್ನುವುದೇ ಮುಖ್ಯ. ಶೂದ್ರ ಸಮುದಾಯಗಳ ಸಂವೇದನೆ ಮತ್ತು ವಿವೇಕವನ್ನು ಹೊರಗಿಟ್ಟು ಸಂಸ್ಕೃತ ಸಾಹಿತ್ಯ ರೂಪಗೊಂಡಿದೆ. ಅಂದರೆ ಶೂದ್ರರ ಯಾವ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಅದು ಒಳಗೊಂಡಿಲ್ಲ ಎಂದರ್ಥ.

ಇವರು ಇದೇ ಧೋರಣೆಯನ್ನು ಕನ್ನಡ ಸಾಹಿತ್ಯದಲ್ಲಿಯೂ ಪಡಿಮೂಡಿಸಿರುವರು. ಇಂತಹ ಕಣ್ಣಿಗೆ ರಾಚುವ ವಾಸ್ತವಗಳನ್ನು ಮರೆಮಾಚಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರೂಪಿಸಿರುವ/ಹೊರಟಿರುವ ಸಂಸ್ಕೃತ ಮೋಹಿಗಳು ಅದನ್ನೇ ಕನ್ನಡದ ಅನನ್ಯತೆ ಎಂದು ವಾದಿಸುತ್ತಾರೆ. ಅಶೂದ್ರ [ವೈದಿಕ] ಚಿಂತಕರು ಮಂಡಿಸಿರುವ ವಾದಗಳಿಗೆ ಅತೀಯಾದ ಪ್ರಾಮುಖ್ಯತೆ ಸಿಕ್ಕಿರುವುದೇ ಇದಕ್ಕೆ ಕಾರಣ. ಈ ಬಗೆಯ ತಿಳವಳಿಕೆಯು ತಳಸಮುದಾಯ ಹಾಗೂ ಹಿಂದುಳಿದದವರ ಸಾಂಸ್ಕೃತಿಕ ಅರಿವು ಮತ್ತು ಅದರ ಹೆಚ್ಚುಗಾರಿಕೆಯನ್ನು ಅಮಾನ್ಯಗೊಳಿಸಿದೆ.

ಇಂತಹ ಒಲುಮೆಗಳೇ ಕನ್ನಡದ ಗುರುತುಗಳಾಗಿ ಮೈದಾಳಿರುವುದು ಚಾರಿತ್ರಿಕ ವಿಪರ್ಯಾಸ. ಕರ್ನಾಟಕದ ಬಹುಜನರ ಸಂಸ್ಕೃತಿ ಹಾಗೂ ಸಂವೇದನೆ ಒಳಗೊಳ್ಳದ ಕನ್ನಡ ಅದು ಹೇಗೆ ಕನ್ನಡಿಗರ ತಾಯ್ನುಡಿ ಅಥವಾ ಪರಿಸರ ನುಡಿಯಾಗಿರುವುದಕ್ಕೆ ಸಾಧ್ಯ. ಇಂತಹ ಪ್ರಶ್ನೆಗಳಿಂದಲೇ ನಿಜವಾದ ಕನ್ನಡತನ ಅಂದರೇನು ಅನ್ನುವುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಬಹುದು. ಶತ-ಶತಮಾನಗಳಿಂದಲೂ ಸಂಸ್ಕೃತವು ವೈದಿಕ-ಅವೈದಿಕ, ಶುದ್ಧ-ಅಶುದ್ಧ, ಮೇಲು-ಕೀಳು ಎಂಬೀತ್ಯಾದಿ ವೈರುಧ್ಯಗಳನ್ನು ಹುಟ್ಟುಹಾಕಿ ಕುಲಗೇಡಿಸುವ ಬೆಜವಾಬ್ದಾರಿಯನ್ನು ಮೆರದಿದ್ದೆ ಹೆಚ್ಚು.

ಯಾವುದೇ ಭಾಷೆಗೆ ವರ್ಗ, ಜಾತಿ, ಪ್ರದೇಶ ಮುಂತಾದ ಗುಣಗಳು ರಕ್ತಗತವಾಗಿ ಬಂದಿರುವುದಿಲ್ಲ. ಆದರೆ, ಸಮುದಾಯದೊಡನೆ ಭಾಷೆಗೆ ಇರುವ ನಂಟು ಇಂತಹ ಎಲ್ಲ ಗುಣಗಳನ್ನು ಒಗ್ಗಿಸಿಕೊಡುತ್ತದೆ ಅಥವಾ ಅಂತರ್ಗತಗೊಳಿಸುತ್ತೆ. ಇದಕ್ಕಾಗಿಯೇ ಮೂಲಭೂತವಾದ, ಕೋಮುವಾದದಂತಹ ಜೀವವಿರೋಧಿ ಗುಣಗಳು ಯಾಕೆ ಸಂಸ್ಕೃತ ಭಾಷೆಗೆ ಅಂಟಿಕೊಂಡಿವೆ ಅಂದರೆ, ಆ ಭಾಷೆಗಿರುವ ಅಂತಹ ಒಂದು ಸಮುದಾಯದ ನಿರಂತರ ಸಹಯೋಗವೇ ಕಾರಣವಾಗಿದೆ. ಭಾಷೆ ಹಾಗೂ ಸಮುದಾಯದ ನಡುವಣ ನಂಟಸ್ತಿಕೆ ರೂಪಗೊಳ್ಳುವ ಬಗೆನೇ ಹೀಗೆ.

ಈ ಕಾರಣಗಳಿಂದಲೇ ಸಂಸ್ಕೃತ ವೈದಿಕರ, ಉರ್ದು ಮುಸ್ಲಿಂರ, ಪಾಲಿ ಬೌದ್ಧರ ಹಾಗೂ ಪ್ರಾಕೃತ ಜೈನರ ಸೊತ್ತಾಗಿ ಬಿಂಬಿತವಾಗಿದೆ. ಯಾವಾಗ ಒಂದು ಭಾಷೆ ಯಾವುದೇ ಧರ್ಮ ಅಥವಾ ಜಾತೀಯ ಭಾಷೆಯಾಗಿ ಗುರುತಿಸಲ್ಪಡುತ್ತದೆಯೋ ಆವಾಗ ಅದಕ್ಕೆ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಹುಟ್ಟಿಸುವ ಗುಣವು ಮೈಗುಡುತ್ತದೆ. ಪರಿಣಾಮವಾಗಿ, ಸಂಸ್ಕೃತವು ವೈದಿಕ ಧರ್ಮ ಹುಟ್ಟು ಹಾಕಿದ ಎಲ್ಲ ಬಗೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆ, ಪ್ರಾಬಲ್ಯ, ಸಾಮಾಜಿಕ ನಿರಾಕರಣೆ, ಅಸಮಾನತೆ ಮತ್ತು ಕೀಳರಿಮೆ ಅಂತಹ ಅಪಮೌಲ್ಯಗಳನ್ನು ಅಂತರ್ಗತಮಾಡಿಕೊಂಡಿದೆ. ಅದಕ್ಕಾಗಿ ಸಂಸ್ಕೃತ ಇವತ್ತಿಗೂ ಸಾಂಸ್ಕೃತಿಕ ಅಪಾಯದ ರೂಪಕವಾಗಿಯೇ ಗೋಚರಿಸುತ್ತದೆ. ಈ ಭಾಷೆ ತನ್ನಷ್ಟಕ್ಕೆ “ಸ್ವಯಂಭೂ” ಎನ್ನುವ ಅಹಂನಲ್ಲೇ ತನ್ನ ಹೆಚ್ಚುಗಾರಿಕೆಯನ್ನು ಮೆರದಿದೆ.

ಇಂತಹ ಭಾಷೆಯ ವಾರಸುದಾರರು ಯಾವುದನ್ನು ತಮ್ಮ ತಾಯ್ನುಡಿ ಎಂದು ಹೇಳಿಕೊಳ್ಳುತಾರೆ ಅನ್ನುವುದು ಕೂಡ ವಿಶೇಷ. ಸಂಸ್ಕೃತ ಯಾವತ್ತು ಕೂಡ ವ್ಯವಹಾರಿಕ ಹಾಗೂ ಸಾರ್ವಜನಿಕ ಅಗತ್ಯಗಳಿಗೆ ಪ್ರಯೋಜನವೇ ಆಗಿ/ಗಲ್ಲ. ಆದರೂ ಈ ಭಾಷಿಕರು ಕನ್ನಡದಂತಹ ಭಾಷೆಗಳನ್ನೇ ಅಸಡ್ಡೆಯಿಂದ ನೋಡುವ ಪ್ರವೃತ್ತಿಯನ್ನು ಬೆಳೆಸಿದ್ದಾರೆ. ಪ್ರಾದೇಶಿಕ ಭಾಷೆಗಳು ತಮ್ಮ ಒಡಲಲ್ಲಿ ಕಾಫಿಟ್ಟುಕೊಂಡ ಸೃಜನಶೀಲ ಪ್ರತಿಭೆ ಹಾಗೂ ಅದರ ವೈವಿಧ್ಯತೆಯನ್ನು ನಾಶಮಾಡಿ, ಸಂಸ್ಕೃತ ತನ್ನ ಸೃಜನಶೀಲತೆಯ ಪ್ರಾಮುಖ್ಯತೆಯನ್ನು ಮೆರದಿದೆ.

ಇಷ್ಟೆಲ್ಲ ಆವಾಂತರಗಳನ್ನು ಹುಟ್ಟು ಹಾಕಿದ ಸಂಸ್ಕೃತಕ್ಕೆ ಪಾಪಪ್ರಜ್ಞೆಯೇ ಇಲ್ಲವಲ್ಲ ಅನ್ನುವುದು ಆಶ್ಚರ್ಯ. ಇಂತಹ ಕೀಳರಿಮೆಯ ನರಳಿಕೆಯಿಂದ ಪ್ರಾದೇಶಿಕ ಭಾಷೆಗಳು ಎಚ್ಚತ್ತುಕೊಳ್ಳುವ ಈ ಹೊತ್ತಿನಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ತಲೆ ಎತ್ತಿದೆ. ಸಂಸ್ಕೃತ ತನ್ನ ಅಸ್ತಿತ್ವವನ್ನು ಹೆಚ್ಚು ಹೆಚ್ಚು ಗಟ್ಟಿಪಡಿಸಿಕೊಲ್ಳಲು ಸಾಕಷ್ಟು ಸಮೂಹ ಭಾಷೆಗಳನ್ನು ಬಲಿ ತೆಗೆದುಕೊಂಡಿದೆ. ಸಂಸ್ಕೃತ ಭಾಷೆಯ ವಾರಸುದಾರರು ಇವತ್ತು ತಾವು ವೈಜ್ಞಾನಿಕ ಹಾಗೂ ಆಧುನಿಕತೆಯ ಲಾಭವನ್ನು ಪಡೆಯಲು, ತಮ್ಮ ಸನಾತನ ಧರ್ಮದ ಅಸ್ಮಿತೆಯ ರೂಪಕ ಆಗಿದ್ದ ಸಂಸ್ಕೃತವನ್ನು ಶೂದ್ರ ಸಮುದಾಯಗಳಿಗೆ ಕಲಿಸುವ ಮೂಲಕ ಅದನ್ನು ಸಂಗೋಪಿಸುವ ಜವಾಬ್ದಾರಿಯನ್ನು ಇವರಿಗೆ ವರ್ಗಾಯಿಸಿದ್ದಾರೆ.

ಒಂದು ಕಾಲದಲ್ಲಿ ಸಂಸ್ಕೃತಕ್ಕೆ ಅಸ್ಪೃಶ್ಯರಾಗಿದ್ದ ಶೂದ್ರ ಸಮುದಾಯಗಳಿಗೆ ಸಂಸ್ಕೃತ ಕಲಿಸಬೇಕು ಎನ್ನುವ ಈ ಶಿಫ್ಟ್ ಹಿಂದಿನ ಹುನ್ನಾರ ಸ್ಪಷ್ಟವಾಗಿದೆ. ವೈದಿಕ ಧರ್ಮ ಪಾಲಿಸುತ್ತ ಬಂದ ಎಲ್ಲ ಕಂದಾಚರಗಳನ್ನು ಮರುಸ್ಥಾಪಿಸುವದೇ ಹೊರತು ಬೇರೆನೂ ಅಲ್ಲ. ಕನ್ನಡ ಹಾಗೂ ಕನ್ನಡಿಗರನ್ನೂ ಯಾವುದೇ ರೀತಿಯಲ್ಲಿ ಭಾದಿಸದ ಶಾಸ್ತ್ರೀಯ ಭಾಷಾ ಸ್ಥಾನಮಾನ ತಮಿಳುಗೆ ಸಿಕ್ಕಾಗ, ಅದನ್ನು ವಿರೋಧಿಸಿ ಕನ್ನಡಕ್ಕೂ ಬೇಕೆಂದು ಹೋರಾಟ ಮಾಡಿದ ಚಳವಳಿಗಾರರರಿಗೆ ಏನಾಗಿದೆ? ಇವರಾಕೇ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಯನ್ನು ವಿರೋಧಿಸುತ್ತಿಲ್ಲ.

ದೂರದರ್ಶನದಲ್ಲಿ ಪ್ರಸಾರ ಆಗುವ ಉರ್ದು ಕಾರ್ಯಕ್ರಮ/ನ್ಯೂಸ್‍ನ್ನು ವಿರೋಧಿಸಿದ ಮನಸ್ಸುಗಳು ಯಾಕೆ ಈಗ ತೆಪ್ಪಗಿವೆ. ದಲಿತ-ಹಿಂದುಳಿದ ವರ್ಗಗಳ ಏಳ್ಗೆಗೆ ಅನುವಾಗಲೆಂದು ಜಾರಿಗೊಳ್ಳಿಸಿದ್ದ ಒಂದನೇ ತರಗತಯಿಂದ ಇಂಗ್ಲಿಶು ಭಾಷಾ ಕಲಿಕೆಯನ್ನು ವಿರೋಧಿಸಿದ ಅಪ್ಪಟ ಕನ್ನಡ ಅಭಿಮಾನಿಗಳಿಗೆ ಏನಾಗಿದೆ? ಇದೆಲ್ಲವುಕ್ಕಿಂತ ಹೆಚ್ಚಾಗಿ ಸಂಸ್ಕೃತವು ಭಾಷಿಕ-ಸಾಂಸ್ಕೃತಿಕ-ಸಾಮಾಜಿಕ ಅಸಹನೆಯನ್ನು ಹುಟ್ಟು ಹಾಕಿದೆ. ಈ ಎಲ್ಲ ಮನಸ್ಸುಗಳ ಹಿಂದಿನ ಶಕ್ತಿ ಯಾವುದೆಂದು ಕೇಳಿದರೆ, ಅದು ಸಂಸ್ಕೃತವೆಂದೇ ಹೇಳಬಹುದು.

ಸಂಸ್ಕೃತಕ್ಕೂ ಇಂತಹ ಜನವಿರೋಧಿ ಬೆಳವಣೆಗೆಗಳ ನಡುವೆ ಏನಾದರೂ ತಳುಕು ಇದಿಯೇ ಎಂದೂ ಕೇಳಿದರೆ, ಸಂಸ್ಕೃತವನ್ನು ಕೇವಲ ಒಂದು ಭಾಷೆಯಾಗಿ ನೋಡಿದರೆ ಅದಕ್ಕೆ ಯಾವುದೇ ಜೀವವಿರೋಧಿ ಗುಣವಿಲ್ಲ. ಆದರೆ, ಸಂಸ್ಕೃತವನ್ನು ಒಂದು ಸಮೂಹದ ಭಾಷೆಯಾಗಿ ನೋಡಿದರೆ, ಅದಕ್ಕೆ ಎಲ್ಲಾ ಬಗೆಯ ಗುಣಗಳನ್ನು ರೂಢಿಸಿಕೊಳ್ಳಲು ಸಾಧ್ಯ. ಹಾಗಾಗಿ ಸಂಸ್ಕೃತ ಭಾಷೆಯ ಕೆಳ್ಚಲನೆಯ ಮುಖ್ಯ ಉದ್ದೇಶ ವೈದಿಕಕರಣ ಅಥವಾ ಕೇಸರೀಕರಣವನ್ನು ಮತ್ತೇ ನೆಲೆಯೂರಿಸುವ ಹುನ್ನಾರ ಎಂದು ಯಾಕೆ ಕನ್ನಡಪರ ಹೋರಾಟಗಾರರಿಗೆ ಇನ್ನೂ ಅರ್ಥವಾಗಿಲ್ಲ.

ವೈದಿಕ-ಸಂಸ್ಕೃತದ ಗೀಳು ಅಂಟಿಸಿಕೊಂಡ ಭೈರಪ್ಪನಂಥವರು ಕರ್ನಾಟಕ ಸಂಸ್ಕೃತಿ ಪಾಠವನ್ನು ಹೇಳುವ ಹುಂಬತನಕ್ಕೆ ಏನನ್ನಬೇಕು? ಸಂಸ್ಕೃತ ವಿವಿ ಬೇಕು ಬೇಡ ಎನ್ನುವ ಚರ್ಚೆಯನ್ನು ವಿಜಯ ಕರ್ನಾಟಕ ಪತ್ರಿಕೆಯವರು ಆರಂಭಿಸಿದರು ಅದಕ್ಕೆ ‘ನಿಸ್ಪಕ್ಷಪಾತ ಚರ್ಚೆ’ ಎಂಬ ಹಣೆಪಟ್ಟಿಯನ್ನು ಅಂಟಿಸಿದ್ದರೂ. ಈ ಚರ್ಚೆಯ ಉದ್ಘಾಟನೆಯನ್ನು ಭೈರಪ್ಪನವರೇ ಮಾಡಿದರು. ಇದರಲ್ಲಿ ಪಾಲ್ಗೊಂಡ ಹೆಚ್ಚಿನ ವಿದ್ವಾಂಸರು ನಿಲಯದ ಕಲಾವಿದರೇ ಆಗಿದ್ದರು ಅನ್ನುವುದು ವಿಶೇಷ.

ಈ ಚರ್ಚೆಯಲ್ಲಿ ಪಾಲ್ಗೊಂಡು ಸಂಸ್ಕೃತ ವಿವಿ ಏಕೆ ಬೇಡ ಎಂದೂ ಸಮರ್ಥನೆ ನೀಡಿದ ಪ್ರೊ. ಕೆ. ವಿ. ನಾರಾಯಣ ಮತ್ತು ಪ್ರೊ. ಎಮ್. ಎಮ್. ಕಲಬುರ್ಗಿಯಂತಹ ಚಿಂತಕರನ್ನು ಭಿನ್ನಮತಿಯರೆಂದೂ ಬೀಗಿ ಅದೇ ಭೈರಪ್ಪನವರು ಆ ಚರ್ಚೆಗೆ ಮುಕ್ತಾಯ ಹಾಡಿದ್ದು ಇನ್ನೂ ವಿಶೇಷವಾಗಿತ್ತು. ರಾಜ್ಯದ ಇನ್ನಿತರ ಪತ್ರಿಕೆಗಳಾದ ‘ಸಂವಾದ’ ‘ಲಂಕೇಶ್’ [ಈ ಪತ್ರಿಕೆಯಲ್ಲಿಯೂ ಕೂಡ ಪ್ರೊ.ಲಿಂಗದೇವರು ಹಳೆಮನೆಯವರ ಹೊರತಾಗಿ ಬೇರೆ ಯಾರು ಸಂಸ್ಕೃತ ವಿವಿಗೆ ಪ್ರತಿಕ್ರಿಯಿಸಿದ್ದು ನನಗೆ ಗೊತ್ತಿಲ್ಲ] ‘ವಾರ್ತಭಾರತಿ’ ಹಾಗೂ ‘ಹೊಸತು’ ಇವುಗಳು ತಕ್ಕಮಟ್ಟಿಗೆ ಸಂಸ್ಕೃತ ವಿವಿಯನ್ನು ವಿರೋಧಿಸುವುದಕ್ಕೆ ವೇದಿಕೆ ಆಗಿದ್ದು ಗಮನಾರ್ಹ. ಕನ್ನಡ ಸಾರಸತ್ವಕ್ಕೆ ತಮ್ಮನ್ನು ಮುಡುಪಾಗಿಟ್ಟಂತಹ ಎಷ್ಟೋ ಪತ್ರಿಕೆಗಳು ಸಂಸ್ಕೃತ ವಿವಿ ಸ್ಥಾಪನೆ ಕುರಿತು ಚರ್ಚೆಗೆ ಒಂದು ವೇದಿಕೆ ಒದಗಿಸದಿರುವುದು ನೋವಿನ ಸಂಗತಿ.

ಕನ್ನಡ ಮಾತನಾಡುವ ಮತ್ತು ಕನ್ನಡ ನುಡಿಯನ್ನೇ ನೆಚ್ಚಿರುವ ಸಮುದಾಯಗಳ ಆಶೋತ್ತರಗಳನ್ನು ಕಾಪಾಡುವ ಜವಾಬ್ದಾರಿ ಈ ನಾಡಿನ ಎಲ್ಲ ಬಗೆಯ ಸಮೂಹ ಮಾಧ್ಯಮಕ್ಕೆ ಇದೆ ಎಂದು ನನ್ನ ಬಲವಾದ ನಂಬಿಕೆ. ಯಾಕೆಂದರೆ, ಕರ್ನಾಟಕದ ಹೆಚ್ಚಿನ ಸಮುದಾಯಗಳ ಭಾಷೆ ಕನ್ನಡ. ಕನ್ನಡದ ಏಳ್ಗೆಗೆ ಅಗತ್ಯವಿರುವ ಎಲ್ಲ ಬಗೆಯ ನುಡಿಹಮ್ಮುಗೆ [ಭಾಷಾಯೋಜನೆ] ಅನುಷ್ಠಾನಗೊಳ್ಳಬೇಕು. ಇಂತಹ ಭಾಷಾಯೋಜನೆಗಳು ತಾರತಮ್ಯದ ಧೋರಣೆಗಳನ್ನು ಬಿಟ್ಟು ಮುನ್ನಡೆಯಬೇಕು. ಕಾರಣ ಹಲವಾರು ಬೇರೆ ಬೇರೆ ಸಮೂಹ ಭಾಷೆಗಳು ಕರ್ನಾಟಕದಲ್ಲಿವೆ.

ಈ ಭಾಷೆಗಳಿಗೂ ಕನ್ನಡದಷ್ಟೇ ಪ್ರಾಮುಖ್ಯತೆ ಸಿಗಬೇಕು. ಇಂತಹ ಒಂದು ಔದಾರ್ಯದ ಮನುಸ್ಸು ಪ್ರಭುತ್ವ ಹಾಗೂ ಅದನ್ನು ನಿಭಾಯಿಸುವ ವರ್ಗಕ್ಕೂ ಇರಲೇಬೇಕು. ಇಲ್ಲವಾದರೆ, ಸಂಸ್ಕೃತದಿಂದ ಕನ್ನಡದ ಮೇಲೆ ನಡದಿರುವ ಭಾಷಿಕ ಯಾಜಮಾನ್ಯ ಕನ್ನಡದಿಂದ ಕರ್ನಾಟಕದ ಇತರ ಭಾಷೆಗಳ ಮೇಲಿಯೂ ನಡೆಯುತ್ತದೆ. ಈಗ ಇಂತಹ ಯಾವುದೇ ಯಾಜಮಾನ್ಯ ಪ್ರಭಾವವು ಕನ್ನಡದಿಂದ ಕರ್ನಾಟಕದ ಇತರ ಭಾಷೆಗಳ ಮೇಲೆ ಆಗಿಲ್ಲವೆಂದೂ ನನ್ನ ವಾದವಲ್ಲ. ಆದರೆ ಸಂಸ್ಕೃತ ಕನ್ನಡಕ್ಕೆ ಹೋಲಿಸಿ ನೋಡಿದರೆ, ಕನ್ನಡದಿಂದ ಬೇರೆ ಭಾಷೆಗಳ ಮೇಲೆ ನಡದಿರುವ ಶೋಷಣೆಯ ಪ್ರಮಾಣ ಕಮ್ಮಿಯೆಂದೇ ಹೇಳಬಹುದು.

ನೀರು ಕೆಲವರಿಗೆ ಮಾತ್ರ ತೀರ್ಥವಲ್ಲ. ನೀರು ತೀರ್ಥವಾಗಿ ಮಾರ್ಪಡುವ ದ್ರವವಾದರೇ ಅದು ಎಲ್ಲರಿಗೂ ತೀರ್ಥವೇ. ಹಾಗೆನೇ ಆಯಾ ಸಮುದಾಯದ ತಾಯ್ನುಡಿ ಅವರವರ ಅನುಭವವನ್ನು ಕಟ್ಟಿಕೊಡುವ ಮಾಧ್ಯಮವಾಗಬೇಕು. ಇದರಲ್ಲಿ ಯಾವುದೇ ಬಗೆಯ ತರತಮ ಮಾಡುವ ಹುನ್ನಾರಕ್ಕೆ ಅವಕಾಶ ಇರಕೂಡದು.

ಪ್ರಭುತ್ವ ಹಾಗೂ ನುಡಿಹಮ್ಮುಗೆ [ಭಾಷಾಯೋಜನೆ] ನುಡಿನಡೆ [ಭಾಷಾನೀತಿ] ಯನ್ನು ರೂಪಿಸುವವರು ತಾಯ್ನುಡಿಯಂತಹ ಪರಿಕಲ್ಪನೆಗೆ ಇರುವ ಮೌಲ್ಯವನ್ನು ಮನಗಾಣಬೇಕಿದೆ. ಬಹುಭಾಷಿಕ-ಸಾಂಸ್ಕೃತಿಕ ಸನ್ನಿವೇಶಗಳ ಹೆಚ್ಚುಗಾರಿಕೆ ಏನು ಹಾಗೂ ಅವುಗಳನ್ನು ಯಾಕೆ ಕಾಪಾಡಬೇಕು ಎಂಬುದನ್ನು ಇನ್ನಾದರೂ ಮನವರಿಕೆ ಮಾಡಿಕೊಳ್ಳುವ ಜರೂರು ಇದೆ.

(ಇದು ಸಂಚಯ ತ್ರೈಮಾಸಿಕ ಪತ್ರಿಕೆಯಲ್ಲಿ 2009ರಲ್ಲಿ ಪ್ರಕಟವಾಗಿತ್ತು.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ

ಮಾಗಿದ ಕಾಲದಲ್ಲಿ ಸಾಹಿತ್ಯ ಕೃಷಿಗೆ ನಿಂತ ಪ್ರೊ.ಜಿ.ಪರಮೇಶ್ವರಪ್ಪ ಅವರ ಸಾಹಿತ್ಯ ಪಯಣ

Published

on

  • ಡಾ.ಕೆ.ಎ.ಓಬಳೇಶ್

ಭಾರತದಂತಹ ವಿಶಿಷ್ಟ ಸಾಂಸ್ಕೃತಿಕ ನಾಡಿನಲ್ಲಿ ವಿಭಿನ್ನ ಪ್ರಕಾರದ ಕಲೆಗಳು ಜನ್ಮತಳೆದಿವೆ. ಈ ಎಲ್ಲಾ ವಿಭಿನ್ನ ಕಲಾ ಪ್ರಕಾರಗಳು ಈ ನೆಲದ ಬಹುತ್ವವನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿವೆ. ಇಂತಹ ಬಹುತ್ವವೇ ಭಾರತದ ಸೌಹಾರ್ದತೆಗೆ ಸಾಕ್ಷಿಯಾಗಿರುವುದು ಈ ನೆಲದ ಹೆಮ್ಮೆಯ ಪ್ರತೀಕ.

ಇದಕ್ಕೆ ಪೂರಕವೆಂಬಂತೆ ಕನ್ನಡ ನಾಡಿನಲ್ಲಿ ಹಲವಾರು ಸಾಹಿತಿಗಳು ಈ ನೆಲದ ವಿವಿಧತೆಯನ್ನು ಅನಾವರಣಗೊಳಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಂತಹ ದೇಶಿ ಸೊಗಡನ್ನು ಸಾಹಿತ್ಯದ ಮೂಲಕ ಸೆರೆಹಿಡಿಯುತ್ತ ಬಂದಿರುವ ಸಾಹಿತಿಗಳಲ್ಲಿ ಪ್ರೊ.ಜಿ.ಪರಮೇಶ್ವರಪ್ಪನವರು ಒಬ್ಬರಾಗಿದ್ದಾರೆ.

ಮಧ್ಯ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಚಿತ್ರದುರ್ಗ ಪ್ರಾಂತ್ಯವು ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಮತ್ತು ಗರಿಮೆಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಂಸ್ಕೃತಿಕ ಶ್ರೀಮಂತ ನೆಲದಲ್ಲಿ ಹುಟ್ಟಿ ಬೆಳೆದು, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಗತವಾಗಿರುವ ಸಾಹಿತ್ಯದ ದೇಶೀಯತೆ ಹಾಗೂ ಅದರ ವೈಶಿಷ್ಟ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗೆ ತೊಡಗಿಸಿಕೊಂಡ ಜಿ.ಪರಮೇಶ್ವರಪ್ಪನವರ ಬದುಕಿನ ಸುತ್ತ ಒಂದು ಕೀರುನೋಟ ಬೀರುವುದು ಪ್ರಸ್ತುತ ಲೇಖನದ ಆಶಯವಾಗಿದೆ.

ಶ್ರೀಯುತ ಜಿ.ಪರಮೇಶ್ವರಪ್ಪನವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು ಹರ್ತಿಕೋಟೆ ಸಮೀಪದ ಕಪಿಲೆಹಟ್ಟಿ ಗ್ರಾಮದಲ್ಲಿ ದಿನಾಂಕ 15 ನವಂಬರ್1950ರಲ್ಲಿ ಜಡಿಯಪ್ಪ ಹಾಗೂ ಸಕ್ರಮ್ಮ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರ್ತಿಕೋಟೆಯಲ್ಲಿ, ಪ್ರೌಢ ಶಿಕ್ಷಣವನ್ನು ಐಮಂಗಳದಲ್ಲಿ, ಪದವಿಪೂರ್ವ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪಡೆದರು.

ಕನ್ನಡ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ನಂತರದ ದಿನಮಾನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಾದ ಬೀದರ್, ಅಥಣಿ, ಮಾಯಕೊಂಡ, ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ 1980 ರಿಂದ 2020 ರವರೆಗೆ ಸುಮಾರು 30 ವರ್ಷಗಳ ಕಾಲ ಬೋಧಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.

ಬಾಲ್ಯದ ದಿನಗಳಿಂದಲೂ ಗ್ರಾಮೀಣ ಬದುಕಿನೊಂದಿಗೆ ನಂಟನ್ನು ಹೊಂದಿದ್ದ ಇವರಿಗೆ ಜಾನಪದ ಕಲೆ ಹಾಗೂ ಸಾಹಿತ್ಯದೊಂದಿಗೆ ಬೆರೆತು ಹೋಗಿದ್ದರು. ಹಾಗೆಯೇ ಸಾಹಿತ್ಯದ ವಿದ್ಯಾರ್ಥಿಯಾದ ಇವರಿಗೆ ಕನ್ನಡ ಸಾಹಿತ್ಯ ಹಾಗೂ ಹಲವಾರು ಕನ್ನಡ ಸಾಹಿತಿಗಳಿಗೆ ಮಾರುಹೋಗಿದ್ದರು. ಆದರೆ ಸಾಹಿತ್ಯದ ಬರವಣಿಗೆಯ ಬಗ್ಗೆ ಇವರಿಗೆ ಒಂದಷ್ಟು ಭಯವನ್ನು ಕಟ್ಟಿಕೊಂಡ ಕಾರಣ ತಮ್ಮ ಬೋಧನಾ ಅವಧಿಯುದ್ದಕ್ಕೂ ಬರವಣಿಗೆಯಿಂದ ದೂರವೇ ಉಳಿದಿದ್ದರು.

ಶ್ರೀಯುತರು ಬರವಣಿಗೆಯಿಂದ ದೂರ ಉಳಿದಿದ್ದರೂ ಬೋಧನೆಯೊಂದಿಗೆ ಸಾಹಿತ್ಯ ಪ್ರೀತಿಯನ್ನು ಸದಾ ಕಾಪಾಡಿಕೊಂಡಿದ್ದರು. ಪಂಪ, ರನ್ನ, ಕುಮಾರವ್ಯಾಸರಂತಹ ಪ್ರಾಚೀನ ಕವಿಗಳು ಹಾಗೆಯೇ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ್, ಸಿ.ಪಿ.ಕೃಷ್ಣಮೂರ್ತಿ, ಜಿ.ಎಚ್.ನಾಯಕರಂತಹ ಆಧುನಿಕ ಸಾಹಿತಿಗಳ ಬರಹಗಳು ಇವರ ಮೇಲೆ ಸಾಕಷ್ಟು ಪ್ರೇರಣೆ ಮತ್ತು ಪ್ರಭಾವವನ್ನು ಬೀರಿದ್ದವು.

ಇಂತಹ ಸಾಹಿತ್ಯ ಪರಂಪರೆಯಿಂದ ಸಾಹಿತ್ಯಾಭಿರುಚಿಯನ್ನು ಮೈಗೂಡಿಸಿಕೊಂಡಿರುವ ಜಿ.ಪರಮೇಶ್ವರಪ್ಪನವರು ತಮ್ಮ ವಿದ್ಯಾರ್ಥಿಗಳಿಗೂ ಸಾಹಿತ್ಯಾಸಕ್ತಿಯನ್ನು ಮೂಡಿರುವ ಕಾಯಕದಲ್ಲಿ ತಮ್ಮ ಬೋಧನಾ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದವರು. ಹಾಗೆಯೇ ಹಳಗನ್ನಡ, ವ್ಯಾಕರಣ, ಛಂದಸ್ಸಿನಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿದ್ದ ಇವರು, ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಬೋಧನೆ ಮಾಡಿ, ಇವುಗಳನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಕನ್ನಡ ಸಾಹಿತ್ಯದ ಛಂದೋ ಪ್ರಕಾರದ ತಾಳ, ಲಯವನ್ನು ಸ್ಪಷ್ಟವಾಗಿ ಅರಿತವರಾಗಿದ್ದರು. ಇದು ಮುಂದೆ ಶ್ರೀಯುತರ ಸಾಹಿತ್ಯ ಚಟುವಟಿಕೆಗೆ ವರವಾಗಿ ಪರಿಣಮಿಸಿತು.

ಶ್ರೀಯುತ ಜಿ.ಪರಮೇಶ್ವರಪ್ಪನವರು ತಮ್ಮ ವೃತ್ತಿ ಬದುಕಿನ ಅವಧಿಯಲ್ಲಿ ಸಾಹಿತ್ಯ ರಚನೆಗೆ ತೊಡಗಿದ್ದು ತೀರಾ ವಿರಳ. ಕೆಲವು ಸ್ನೇಹಿತರ ಒತ್ತಡ, ಸಭೆ ಸಮಾರಂಭಗಳಲ್ಲಿ ಉಪನ್ಯಾಸ ನೀಡುವುದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು ಹಾಗೂ ವಿಶೇಷ ದಿನಗಳಿಗಾಗಿ ಪತ್ರಿಕೆಗಳಿಗೆ ಕೆಲವೊಂದು ಲೇಖನಗಳನ್ನು ಬರೆದಿರುವುದನ್ನು ಬಿಟ್ಟರೆ ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ತಮ್ಮನ್ನು ಗುರುತಿಸಿಕೊಂಡವರಲ್ಲ. ಈ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ‘ಚದುರಿದ ಚಿಂತನೆಗಳು’ ಎಂಬ ಕೃತಿಯನ್ನು 2020ರಲ್ಲಿ ಹೊರತಂದಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ಜಾನಪದ, ಹಳಗನ್ನಡ ಸಾಹಿತ್ಯ, ವಚನಸಾಹಿತ್ಯ ಹಾಗೂ ವೈಚಾರಿಕ ಚಿಂತನೆಗಳ ಮೇಲೆ ಬೆಳಕು ಚೆಲ್ಲಿರುವುದು ಕಂಡುಬರುತ್ತದೆ. ಈ ಕೃತಿಯು ಅವರ ಓದಿನ ವಿಸ್ತಾರ ಹಾಗೂ ಅವರಿಗಿದ್ದ ಸಾಹಿತ್ಯದ ತುಡಿತವನ್ನು ಅನಾವರಣಗೊಳಿಸುತ್ತದೆ. ಆದರೆ ಪರಮೇಶ್ವರಪ್ಪನವರಿಗೆ ಸವಾಲಾಗಿ ಪರಿಣಮಿಸಿದ್ದು ಮಾತ್ರ ಶಾಸ್ತçಬದ್ಧವಾದ ಸಾಹಿತ್ಯ ರಚನೆಗೆ ಮುಂದಾದ ಸಂದರ್ಭ. ತಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ಪರಿಸರದಲ್ಲಿ ತಲಾತಲಾಂತರದಿಂದ ಬಾಯಿಂದ ಬಾಯಿಗೆ ಹರಿದು ಬಂದು, ಜನಜೀವನದಲ್ಲಿ ಬೆರೆತು ಹೋಗಿದ್ದ ಜಾನಪದೀಯ ಮಹಾಕಾವ್ಯವಾದ ‘ಪಾರ್ಥಲಿಂಗ ಚಾರಿತಾಮೃತ’ ಎಂಬ ಕೃತಿಯನ್ನು ಸಂಪಾದಿಸುವುದಕ್ಕೆ ತೊಡಗಿಸಿಕೊಂಡರು.

ಈ ಸಂದರ್ಭದಲ್ಲಿ ಗದ್ಯ ಪ್ರಕಾರದಲ್ಲಿಯೇ ಸಾಹಿತ್ಯ ರಚನೆಗೆ ಮುಂದಾದರು. ಆಗ ಅಲ್ಲಿನ ವಕ್ತೃ ಹಾಗೂ ಪಾರ್ಥಲಿಂಗ ಭಕ್ತರ ಅಭಿಲಾಷೆಯು ಇದನ್ನು ಭಾಮಿನಿ ಷಟ್ಟದಿಯಲ್ಲಿಯೇ ರಚಿಸಬೇಕು ಎಂಬುದಾಗಿತ್ತು. ಇದಕ್ಕೆ ಕಾರಣ ಗದ್ಯದಲ್ಲಿ ಪಾರ್ಥಲಿಂಗನ ಕಾವ್ಯವನ್ನು ಬರೆದರೆ ಯಾರೋ ಓದು ಬರಹ ಕಲಿತವರು ಓದಿ ಸುಮ್ಮನಾಗುತ್ತಾರೆ. ಆದರೆ ರಾಗ, ತಾಳ, ಲಯಬದ್ಧವಾದ ಭಾಮಿನಿ ಛಂದೋ ಪ್ರಕಾರದಲ್ಲಿ ರಚಿಸಿದರೆ ಯಾರೋ ಒಬ್ಬ ಹಾಡಿದರೆ ಅಕ್ಷರ ಬಲ್ಲವರು ಹಾಗೂ ಅಕ್ಷರ ವಂಚಿತರೆಲ್ಲ ಆಸಕ್ತಿಯಿಂದ ಕುಳಿತು ಕೇಳಿ ಆಸ್ವಾದಿಸುತ್ತಾರೆ ಎಂಬುದು ಅವರ ನಿಲುವಾಗಿತ್ತು.

ಆಗ ಕುಮಾರವ್ಯಾಸ ಮಾಡಿದ ಅಂತಹ ಸಾಧನೆಯು ನನ್ನಿಂದ ಸಾಧ್ಯವೇ ಎಂಬ ಅನುಮಾನ ಲೇಖಕರಲ್ಲಿ ಮೂಡಿತು. ಆಗ ಹಳಗನ್ನಡದ ಜನಪ್ರಿಯ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಷಟ್ಪದಿಯ ಭಾಮಿನಿ ಛಂದೋ ಪ್ರಕಾರದಲ್ಲಿಯೇ ಈ ಕಾವ್ಯವನ್ನು ರಚಿಸಬೇಕು ಎಂದು ಮುಂದಾದ ಸಂದರ್ಭದಲ್ಲಿ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿತು. ಸುಮಾರು ಆರು ತಿಂಗಳ ಕಾಲ ನಿರಂತರವಾದ ಪ್ರಯತ್ನ ಮಾಡುತ್ತ ಬರೆಯುವ, ಹರಿಯುವ ಕಾಯಕದಲ್ಲಿ ನಿರತರಾದರು.

ಆಗ ಇದು ಭಾಮಿನಿ ಷಟ್ಪದಿಯ ಪಾಠ ಮತ್ತು ಪ್ರವಚನದಷ್ಟು ಸುಲಭವಾಗಿ ಛಂದೋ ಪ್ರಕಾರದ ಸಾಹಿತ್ಯ ರಚನೆ ಮಾಡಲಾಗದು ಎಂಬ ಅನುಭವವಾಯಿತು. ಈ ಯೋಜನೆಯಿಂದ ದೂರ ಉಳಿದು, ಇದು ನನ್ನಿಂದ ಸಾಧ್ಯವಾಗದ ಕೆಲಸವೆಂದು ಕೈಚೆಲ್ಲಿ ಕುಳಿತರು. ಇಂತಹ ಸಂದರ್ಭದಲ್ಲಿ ಪಾಥಲಿಂಗ ದೈವದ ಭಕ್ತರು ಹಾಗೂ ಕಾವ್ಯವನ್ನು ಹಾಡುವ ವಕ್ತೃಗಳು ಇದು ನಿಮ್ಮಿಂದ ಮಾತ್ರ ಸಾಧ್ಯ. ಪಾರ್ಥಲಿಂದ ದೈವವು ಕೂಡ ಅದು ನಿಮ್ಮಿಂದ ಮಾತ್ರವೇ ಸಾಧ್ಯವಾಗುವ ಕೆಲಸವೆಂದು ಅಪ್ಪಣೆ ನೀಡಿದೆ ಎಂದು ಒತ್ತಡ ಹಾಕಿದಾಗ, ಅವರ ದೈವಕೇಂದ್ರಿತವಾದ ನಂಬಿಕೆಗೆ ಕಟ್ಟುಬಿದ್ದು ಮತ್ತೇ ಛಂದೋಬದ್ಧ ಸಾಹಿತ್ಯ ಪ್ರಯೋಗದಲ್ಲಿ ತಮ್ಮನ್ನು ದುಡಿಮೆಗಚ್ಚಿದರು.

ಪಾರ್ಥಲಿಂಗನ ಭಕ್ತಾಧಿಗಳ ಒತ್ತಡ ಹಾಗೂ ಅವರ ಪ್ರೀತಿಯ ಹಠಕ್ಕೆ ಮಣಿದು, ಕವಿ ಕುಮಾರವ್ಯಾಸ ಹರಿ ಸ್ಮರಣೆಯಿಂದ ಕಾವ್ಯ ರಚನೆಗೆ ಮುಂದಾದಂತೆ ಶ್ರೀಯುತ ಜಿ.ಪರಮೇಶ್ವರಪ್ಪನವರು ಪಾರ್ಥಲಿಂಗನ ಸ್ಮರಣೆಯೊಂದಿಗೆ ಕಾವ್ಯಾಭ್ಯಾಸದ ಗರಡಿಯಲ್ಲಿ ಗಟ್ಟಿಗರಾಗಿ ನಿಂತರು. ಹೀಗೆ ಸಂಪ್ರದಾಯ ಬದ್ಧವಾಗಿ ಮೂಡಿ ಬಂದ ಛಂದೋ ಪ್ರಕಾರದಲ್ಲಿ ಸಾಹಿತ್ಯ ರಚನೆಗೆ ಮುಂದಾದ ಶ್ರೀಯುತರು ಪ್ರಸ್ತುತ ಕಥೆ ರಚನೆಯ ಕುರಿತಾದ ತಮ್ಮ ನಿಲುವನ್ನು ಕುಮಾರವ್ಯಾಸನಂತೆಯೇ ಹಂಚಿಕೊಂಡಿದ್ದಾರೆ;

ಬಾಯಿ ಮಾತಲಿ ಬಸವ ಹೇಳಿದ ತಾಯಿ ಭೂಮಿಯ ಜನರ ಕಿವಿಯಲಿ ಮಾಯೆಯಿಲ್ಲದ ನಿಗಮ ಗೋಚರನಾ ಪುರಾಣವನು ದಾಯಕನೊಲಿದು ಬರೆಸಿದ ಜನಪದೀಯರಾಡುವ ಪಾರ್ಥಕಥೆಯನು ಶಾಯಿಯಿಂದಲಿ ಕೃತಿ ರಚಿಸಿದೆನು ವಿಮಲ ಮನಸಿನಲಿ

ಇಲ್ಲಿ ಲೇಖಕರು ಕುಮಾರವ್ಯಾಸನಂತೆ ತನ್ನನ್ನು ಕೇವಲ ಲಿಪಿಕಾರ ಎಂಬುದಾಗಿ ಬಿಂಬಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿ ತಾನೊಬ್ಬ ಕವಿಯೆಂಬುದನ್ನು ಕೂಡ ಕುಮಾರವ್ಯಾಸನಂತೆ ಛಂದೋ ನೆಲೆಯಲ್ಲಿ ಅಭಿವ್ಯಕ್ತಿಸಿರುವುದನ್ನು ಕಾಣಬಹುದಾಗಿದೆ.

ವೇದ ಶಾಸ್ತ್ರಾಗಮ ಪುರಾಣಗಳೋದಿ ತಲೆಗಳು ಚಿಟ್ಟು ಹಿಡಿದಿವೆ ವಾದ ಗೈವರಿಗೋದು ಬರದವರಿಗೆಡೆಯಿಲ್ಲಲ್ಲಿ ಓದು ಬರದವರಿಲ್ಲಿ ತಿಳಿವುದು ವಾದ ಮಾಡುವರಿಲ್ಲಿ ಬರಬಹು ದೋದಿ ಕುಣಿಸುವನಿಲ್ಲಿ ಕವಿ ಪರಮೇಶ್ವರೆಂಬುವನು

ಹೀಗೆ ತನ್ನನ್ನು ಪರಮೇಶ್ವರ ಕವಿ ಎಂಬುದಾಗಿ ಗುರುತಿಸಿಕೊಂಡು ಪಾರ್ಥಲಿಂಗ ಸ್ಮರಣೆಯ ಮೂಲಕವೇ ಕಾವ್ಯ ರಚನೆಗೆ ಗಟ್ಟಿಯಾಗಿ ನಿಂತರು. ಇಂತಹ ಗಟ್ಟಿತನದ ಪ್ರತೀಕವಾಗಿ ಆರಂಭಿಕ ದಿನಗಳಲ್ಲಿ ದಿನಕ್ಕೊಂದು ಕಾವ್ಯವನ್ನು ಛಂದೋಬದ್ಧವಾಗಿ ರೂಪಿಸುವಲ್ಲಿ ಯಶಸ್ವಿಯಾದರು.

ಹೀಗೆ ಅಳುಕಿನಿಂದಲೇ ಆರಂಭವಾದ ಛಂದೋಬದ್ಧ ಸಾಹಿತ್ಯ ಕೃಷಿಯನ್ನು ಕರಗತ ಮಾಡಿಕೊಂಡು ಸುಮಾರು 497 ಪದ್ಯಗಳಿಂದ ಕೂಡಿದ ಒಟ್ಟು ಏಳು ಅಧ್ಯಾಯಗಳ ‘ಶ್ರೀ ಪಾರ್ಥಲಿಂಗ ಚರಿತಾಮೃತ’ ಎಂಬ ಭಾಮಿನಿ ಷಟ್ಪದಿ ಕಾವ್ಯ ಕೃತಿಯನ್ನು ಛಂದೋ ವಿನ್ಯಾಸಕ್ಕೆ ಚ್ಯುತಿಯಾಗದಂತೆ ಬರೆದು ಮುಗಿಸಿದ ಕೀರ್ತಿ ಕವಿ ಜಿ.ಪರಮೇಶ್ವರಪ್ಪ ಅವರಿಗೆ ಸಲ್ಲುತ್ತದೆ. ‘ಕನ್ನಡದಲ್ಲಿ ಮಹಾಕಾವ್ಯಗಳ ಕಾಲ ಮುಗಿಯಿತು.

ಛಂದೋಬದ್ಧವಾದ ರಚನೆಗಳ ಕಾಲ ಮುಗಿಯಿತು ಎಂಬ ಮಾತುಗಳು ಹುಸಿಯಾಗಿವೆ’ ಎಂಬ ಡಾ.ಬಿ.ವಿ.ವಸಂತಕುಮಾರ್ ಅವರ ಮಾತುಗಳಿಗೆ ಜಿ.ಪರಮೇಶ್ವರಪ್ಪ ಅವರು ರಚಿಸಿರುವ ಛಂದೋಬದ್ಧ ‘ಪಾರ್ಥಲಿಂಗ ಚರಿತಾಮೃತ’ ಸಾಕ್ಷಿಯಾಗಿ ನಿಲ್ಲುತ್ತದೆ.

ಪ್ರಸ್ತುತ ಕೃತಿಯು ಶ್ರೀಯುತ ಜಿ.ಪರಮೇಶ್ವರಪ್ಪನವರಿಗೆ ಸಾಹಿತಿ ಎಂಬ ಬಿರುದಾವಳಿಯನ್ನು ಮಾತ್ರವಲ್ಲದೆ, ಅವರನ್ನು ಪಾರ್ಥಲಿಂಗ ಚರಿತಾಮೃತದ ಕವಿಯೆಂದು ಗುರುತಿಸುವಷ್ಟು ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.

ಹಾಗೆಯೇ ಈ ಕೃತಿಯು ಸಾಕಷ್ಟು ಜನಮಾನಸದಲ್ಲಿ ಬೆರೆತು ಹೋಗಿದ್ದು, ಈಗಾಗಲೇ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪಠನ ಮಾಡಲಾಗಿದೆ. ಇದು ಕವಿಗಳ ಶ್ರಮಕ್ಕೆ ಸಿಕ್ಕ ನಿಜವಾದ ಪ್ರತಿಫಲ. ಕವಿಯಾದವನು ಇದರಾಚೆ ಏನನ್ನು ನಿರೀಕ್ಷಿಸಲಾರ.

ಅಳುಕಿನಿಂದಲೇ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಜಿ.ಪರಮೇಶ್ವರಪ್ಪನವರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಮೊದಲ ಯಶಸ್ಸು ಗಳಿಸಿದ ತರುವಾಯ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯನ್ನು ಇದೇ ಛಂದೋ ವಿನ್ಯಾಸದಲ್ಲಿ ರಚನೆಗೆ ಮುಂದಾಗಿದ್ದು, ಇದನ್ನು ಒಂದೇ ವರ್ಷದಲ್ಲಿ ಮುಗಿಸುವಷ್ಟು ಛಂದೋಬದ್ಧ ಸಾಹಿತ್ಯ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಕೃತಿಯು ಕೂಡ ದೈವ ಕೇಂದ್ರಿತವಾದ ಪುರಾಣ ನೆಲೆಯಿಂದ ಕೂಡಿದ್ದು, ಜನಪದರ ಬದುಕಿನೊಳಗೆ ಬೆರೆತು ಹೋದ ಮೌಖಿಕ ಕಥನವೊಂದನ್ನು ಛಂದೋಬದ್ಧ ಹಾಡುಗಬ್ಬವಾಗಿ ರೂಪಿಸುವ ಮಹತ್ತರ ಕಾರ್ಯವೊಂದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಶ್ರೀಯುತ ಪರಮೇಶ್ವರಪ್ಪನವರ ಎರಡನೇ ಕೃತಿಯಾಗಿರುವ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯು ಹರಿಹರನ ‘ಶಿವಶರಣರ ರಗಳೆ’ಯ ಕಥನ ಮಾದರಿಯಿಂದ ಪ್ರಭಾವಿತಗೊಂಡಂತಿದೆ.

ಇದನ್ನೂ ಓದಿ |ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

ಈ ಕೃತಿಯು ಒಟ್ಟು 311ಷಟ್ಪದಿ ಪದ್ಯಗಳಿಂದ ಕೂಡಿದೆ. ಇಲ್ಲಿಯೂ ಕೂಡ ಕವಿಗಳು ಪ್ರಾಚೀನ ಕಾವ್ಯ ಪರಂಪರೆಯ ಮುಂದುವರಿಕೆಯ ಭಾಗವೆಂಬಂತೆ ದೈವ ಸ್ತುತಿಯೊಂದಿಗೆ ಕಾವ್ಯಾರಂಭಕ್ಕೆ ಮುಂದಾಗಿರುವುದನ್ನು ಕಾಣಬಹುದಾಗಿದೆ.

ಶುದ್ಧಮನದಲಿ ಖುದ್ದು ಹೇಳುವೆ ಸಿದ್ಧ ಪುರುಷನ ಸಿದ್ಧ ಕಥೆಯನು ಬುದ್ಧ ಜನಗಳು ಮೆಚ್ಚುವಂದದಿ ಹಾಡುಗಬ್ಬದಲಿ ಬಿದ್ದು ಗಂಗೆಯಲೆದ್ದು ಬಂದಂತೆದ್ದು ಹೋಗುವವಿದ್ದ ರುಜಿನಗ ಳೆದ್ದು ಬರುವಾ ಜನ್ಮ ಚಕ್ರವನೊದ್ದು ಹೋಗುವುದು

ಹೀಗೆ ಪ್ರಾಚೀನ ಕಾವ್ಯ ಪರಂಪರೆಯ ತಂತ್ರವನ್ನು ಅನುಸರಿಸುತ್ತಲೇ ಜಾನಪದೀಯ ಕಥನವನ್ನು ಶಿಷ್ಟ ಸಾಹಿತ್ಯದ ಚೌಕಟ್ಟಿಗೆ ಒಳಪಡಿಸುವ ಮೂಲಕ ಛಂದೋಬದ್ಧಗೊಳಿಸುವಲ್ಲಿ ಕವಿ ಜಿ.ಪರಮೇಶ್ವರಪ್ಪನವರ ಪಾತ್ರ ಮಹತ್ವದ್ದಾಗಿದೆ. ಜನಪದರ ಸಾಂಸ್ಕೃತಿಕ ಬದುಕಿನಲ್ಲಿ ಬೆರೆತುಕೊಂಡಿರುವ ಮೌಖಿಕ ಕಥನವನ್ನು ಶಿಷ್ಟ ಪರಂಪರೆಯೊಂದಿಗೆ ಅನುಸಂಧಾನಗೊಳಿಸುವ ಮೂಲಕ ಹಾಡುಗಬ್ಬಗೊಳಿಸಿದ ಕವಿಯ ತಂತ್ರಗಾರಿಕೆಯ ಹಿಂದೆ ನೆಲಮೂಲದ ತುಡಿತ-ಮಿಡಿತವಿದೆ.

ಜನಪದ ಮತ್ತು ಶಿಷ್ಟ ಪರಂಪರೆಯ ನಡುವಿನ ಬೇಲಿ ಹಾಗೂ ಅಂತರವನ್ನು ಕಡಿದು ಹಾಕಿ ಇವೆರಡ ನಡುವೆ ಸಂಕರವನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಇವರು ನಮ್ಮ ಮುಂದಿನ ಅಪರೂಪದ ಸಾಹಿತಿಗಳಲ್ಲಿ ಒಬ್ಬರಾಗಿ ಕಂಡುಬರುತ್ತಾರೆ.
ಶ್ರೀಯುತರ ಈ ಛಂದೋಬದ್ಧ ಕಾವ್ಯದ ದುಡಿಮೆಯ ಹಿಂದೆ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಈ ಪ್ರಯತ್ನ ಕಾಯಕ ಪ್ರಧಾನತೆಯಿಂದ ಕೂಡಿದೆ. ಇಂತಹ ಕಾಯಕ ಪ್ರಧಾನ ಕೃಷಿಯು ಇವರ ಸತತ ಪ್ರಯತ್ನವೆಂಬ ತಪಸ್ಸಿನ ಪ್ರತೀಕವಾಗಿ ಕಂಡುಬರುತ್ತದೆ.

ಇಂತಹ ತಪದ ಪ್ರತೀಕ ಹಾಗೂ ಬಾಲ್ಯದ ದಿನಗಳಿಂದ ಮೈಮನಗಳಲ್ಲಿ ಬೆರತು ಹೋದ ಜನಪದ ಸೊಗಡು, ಅಧ್ಯಯನದೊಂದಿಗೆ ಆಸಕ್ತಿಯಾಗಿ ವಿಷಯವಾಗಿ ಪ್ರಭಾವ ಬೀರಿದ ಸಾಹಿತ್ಯಾಭಿರುಚಿ, ಸುದೀರ್ಘವಾದ ಬೋಧನಾನುಭವ ಹಾಗೂ ನಿವೃತ್ತಿಯ ಸಮಯದಲ್ಲಿನ ಸಾಹಿತ್ಯಾಸಕ್ತ ಸಮಾನ ಮನಸ್ಕರ ಪ್ರೇರಣೆ ಮತ್ತು ಪ್ರೋತ್ಸಾಹದ ಫಲವಾಗಿ ಕನ್ನಡ ಸಾರಸ್ವತ ಲೋಕಕ್ಕೆ ‘ಪಾರ್ಥಲಿಂಗ ಚರಿತಾಮೃತ’, ವದ್ದಿಕೆರೆ ಸಿದ್ಧೇಶ್ವರ ಚರಿತೆ’, ‘ವೀರ ಕರಿಯಣ್ಣ’, ‘ಚಿತ್ತಯ್ಯ-ಕಾಟಯ್ಯ’ ಎಂಬ ಛಂದೋ ವಿನ್ಯಾಸದ ಮೌಲ್ಯಯುತ ಷಟ್ಪದಿ ಕೃತಿಗಳನ್ನು ಹಾಗೂ ‘ಚದುರಿದ ಚಿಂತನೆಗಳು’ ಎಂಬ ವೈಚಾರಿಕ ಕೃತಿಯನ್ನು ನೀಡಿದ ಕವಿ, ಸಾಹಿತಿ, ಚಿಂತಕರಾಗಿರುವ ಶ್ರೀಯುತ ಜಿ.ಪರಮೇಶ್ವರಪ್ಪ ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುದು ನಮ್ಮ ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಪರಿಸರ ವಿಜ್ಞಾನ ಎನ್ನುವುದು ಖಾಯಂ ಆರ್ಥಿಕತೆ

Published

on

ಸುಂದರ್ ಲಾಲ್ ಬಹುಗುಣ
  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ಮೇಲಿನ ಘೋಷಣೆ ಪ್ರಸಿದ್ಧ ಪರಿಸರವಾದಿ ಸುಂದರಲಾಲ್ ಬಹುಗುಣ ಅವರದ್ದು. ತೊಂಬತ್ತ್ನಾಲ್ಕು ವರ್ಷದ ಅವರು ಶುಕ್ರವಾರ ಋಷಿಕೇಶ್ ನ ಎಐಐಎಂಎಸ್ ಆಸ್ಪತ್ರೆಯಲ್ಲಿ ಕೋವಿಡ್ ಗೆ ಬಲಿಯಾದರು.

ಈಗಿನ ಉತ್ತರಖಾಂಡದ ತೆಹರಿಯ ಬಳಿಯ ಮರೋಡ ಎಂಬ ಹಳ್ಳಿಯೊಂದರಲ್ಲಿ 1927ರಲ್ಲಿ ಜನಿಸಿದ ಸುಂದರಲಾಲ್ ಬಹುಗುಣ ಗಾಂಧೀವಾದಿಗಳಾಗಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದರು. ಬ್ರಿಟೀಶರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

ಅವರು ಅಸ್ಪರ್ಶ್ಯತೆ ವಿರುದ್ಧ ಹೋರಾಡುತ್ತಲೇ, 1965-1970ರ ಅವಧಿಯಲ್ಲಿ ಮಹಿಳೆಯರನ್ನು ಸಂಘಟಿಸಿ ಪಾನನಿರೋಧ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಮಲಾರನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡಾಗ ಅವರು ವಿಧಿಸಿದ ಒಂದು ಷರತ್ತು- ಗ್ರಾಮೀಣ ಪ್ರದೇಶದ ಒಂದು ಹಳ್ಳಿಯಲ್ಲಿ ಆಶ್ರಮವನ್ನು ಕಟ್ಟಿ, ಅದರಲ್ಲೇ ನೆಲಸಬೇಕೆಂಬುದಾಗಿತ್ತು!

1970ರಲ್ಲಿ ಗರ್ವಾಲ್ ಹಿಮಾಲಯದ ಅಲಕಾನಂದ ನದಿಯಲ್ಲಿ ಪ್ರವಾಹವಾಗಿ ಅನೇಕ ಹಳ್ಳಿಗಳು, ಸೇತುವೆಗಳು, ರಸ್ತೆಗಳು ಕೊಚ್ಚಿಕೊಂಡು ಹೋದವು. ಆ ಪ್ರದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಅನೇಕ ನಿರ್ಮಾಣ ಕಾರ್ಯಗಳು ಜರಗುತ್ತಿದ್ದವು.

ನಂತರ ಭೂಕುಸಿತಗಳು ಹೆಚ್ಚಿದವು. ಅಲ್ಲದೆ, ದೊಡ್ಡ ಕಂಟ್ರಾಕ್ಟುದಾರರಿಗೆ ಅರಣ್ಯ ಪ್ರದೇಶಗಳಲ್ಲಿ ಮರಮಟ್ಟು(ಚೌಬೀನೆ)ಗಳಿಗಾಗಿ ಮರಗಳನ್ನು ಕಡಿಯುವ ಪರವಾನಗಿಯನ್ನು ನೀಡಲಾಗಿತ್ತು. ಇದರ ವಿರುದ್ಧ ಕ್ರಮೇಣ ಚಂಡಿಪ್ರಸಾದ್ ಭಟ್ಟ್ ಮುಂತಾದ ಪರಿಸರವಾದಿಗಳು ಹೋರಾಟದಲ್ಲಿ ತೊಡಗಿದರು. ಕ್ರಮೇಣ ಈ ಚಳವಳಿ ಕಾವನ್ನು ಪಡೆದುಕೊಂಡಿತು.

ಲೇಖಕ : ಮ ಶ್ರೀ ಮುರಳಿ ಕೃಷ್ಣ

ನಂತರ ಮಾರ್ಚಿ 1974ರಲ್ಲಿ ರೇಣಿ ಹಳ್ಳಿಯಲ್ಲಿ (ಇದರ ಸಮೀಪವೇ ಕಳೆದ ವರ್ಷ ಹಿಮನದಿ(ಗ್ಲೇಷಿಯರ್) ಸ್ಪೋಟಿಸಿದ್ದು), ಕಂಟ್ರಾಕ್ಟುದಾರರ ಕೆಲಸಗಾರರು ಮರಗಳನ್ನು ಕಡಿಯಲು ಶುರುಮಾಡಿದಾಗ, ಒಬ್ಬ ಹುಡುಗಿ ಆ ಗ್ರಾಮದ ಮಹಿಳಾ ದಳದ ಮುಖ್ಯಸ್ಥೆ ಗೌರಾ ದೇವಿಗೆ ಈ ವಿಷಯವನ್ನು ತಿಳಿಸಿದಳು. ಗೌರಾ ದೇವಿ ಸುಮಾರು 25 ಮಹಿಳೆಯರನ್ನು ಸಂಘಟಿಸಿ, ಮರಗಳ ಕಡಿಯುವ ಪ್ರದೇಶಕ್ಕೆ ತೆರಳಿದರು.

ಆಗ ಕೆಲಸಗಾರರು ಬಂದೂಕುಗಳನ್ನು ತಮ್ಮತ್ತ ಗುರಿಮಾಡಿದಾಗ, ಅಲ್ಲಿ ನೆರೆದಿದ್ದ ಮಹಿಳೆಯರು ಮರಗಳನ್ನು ಅಪ್ಪಿಕೊಂಡರು. ‘ ಚಿಪ್ಕೊ ‘ ಎಂದರೆ ‘ ಅಪ್ಪಿಕೊ ‘ ಎಂದರ್ಥ. ತರುವಾಯ ಈ ಚಳವಳಿ ವಿಸ್ತೃತ ರೂಪವನ್ನು ಪಡೆಯಿತು. ಇದರ ಮುಂಚೂಣಿಯಲ್ಲಿದ್ದರು ಸುಂದರಲಾಲ್ ಬಹುಗುಣ, ಚಂಡಿಪ್ರಸಾದ್ ಭಟ್ಟ್, ಗೌರಾ ದೇವಿ, ಸುದೇಶ ದೇವಿ ಮತ್ತಿತರ ಕೆಲವು ಮಹಿಳೆಯರು. ಒಂದರ್ಥದಲ್ಲಿ, ಇದು ಎಕೊ-ಫೆಮನಿಸಂನ ಪ್ರಾರಂಭಿಕ ನಡೆ ಎನ್ನಬಹುದು.

‘ ಚಿಪ್ಕೊ ‘ ಚಳವಳಿಯನ್ನು ವಿಸ್ತರಿಸುತ್ತ 1980ರ ದಶಕದ ಆದಿಯಲ್ಲಿ ಸುಂದರಲಾಲ್ ಬಹುಗುಣರು ಹಿಮಾಲಯದಲ್ಲಿ ಸುಮಾರು 5,000 ಕಿಮಿ ಪಾದಯಾತ್ರೆಯನ್ನು ನಡೆಸಿದರು. ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿದರು. ಇದರ ಪರಿಣಾಮವಾಗಿ, ಪ್ರಧಾನಿಯವರು 15 ವರ್ಷಗಳ ಕಾಲ ಮರ ಕಡಿಯುವುದನ್ನು ನಿಷೇಧಿಸಿದರು.

ಇಂತಹ ಚಳವಳಿಯ ನಡುವೆಯೇ, 1978ರಲ್ಲೇ ತೆಹರಿ ಅಣೆಕಟ್ಟಿನ ಯೋಜನೆಯ ಕಾಮಗಾರಿ ಕೆಲಸಗಳು ಪ್ರಾರಂಭವಾದವು. ಇದರ ವಿರುದ್ಧ ಸುಂದರಲಾಲ್ ಬಹುಗುಣ ಮತ್ತು ಇತರ ಪರಿಸರ ಹೋರಾಟಗಾರರು ತಮ್ಮ ದನಿಯನ್ನು ಎತ್ತಿದರು. ಅಹಿಂಸಾತ್ಮಕ ಹೋರಾಟಗಳನ್ನು ಹಮ್ಮಿಕೊಂಡರು. ಭಾಗೀರಥಿ ನದಿಯ ದಡದಲ್ಲಿ ಸುಂದರಲಾಲ್ ಬಹುಗುಣರು ಅನೇಕ ಬಾರಿ ಉಪವಾಸದ ಸತ್ಯಾಗ್ರಹದಲ್ಲಿ ನಿರತರಾದರು.

1995ರಲ್ಲಿ ಅಂದಿನ ಪ್ರಧಾನಿ ಪಿ ವಿ ನರಸಿಂಹ ರಾವ್ ನೀಡಿದ ಪರಾಮರ್ಶೆ ಸಮಿತಿಯ ರಚನೆಯ ಆಶ್ವಾಸನೆಯ ಮೇರೆಗೆ ಅವರು ತಮ್ಮ 45 ದಿನಗಳ ಉಪವಾಸವನ್ನು ಕೊನೆಗೊಳಿಸಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯ ರಾಜಘಾಟ್ನಲ್ಲಿ 74 ದಿನಗಳ ಕಾಲ ನಿರಶನವನ್ನು ನಡೆಸಿದ್ದರು.

ಕೊನೆಗೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ಕೇಸು ಜರುಗಿತು. ಆದರೂ 2001ರಲ್ಲಿ ಅಣೆಕಟ್ಟಿನ ಕಾರ್ಯ ಮುಂದುವರೆಯಿತು. ಸುಂದರಲಾಲ್ ಬಹುಗುಣರು ದಸ್ತಗಿರಿಗೆ ಒಳಗಾದರು. ತೆಹರಿ ಸಮೀಪವಿದ್ದ ಅವರ ನಿವಾಸವೂ ಮುಳುಗಡೆಯಾಯಿತು.

‘ ಚಿಪ್ಕೊ’ ಆಂದೋಳನದಿಂದ ಪ್ರಭಾವಿತಗೊಂಡ ಪಾಂಡುರಂಗ ಹೆಗಡೆ 1980ರ ದಶಕದಲ್ಲಿ ‘ ಅಪ್ಪಿಕೊ ‘ ಚಳವಳಿಯನ್ನು ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುರುಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಇತರ ಕೆಲವು ಸಂದರ್ಭಗಳಲ್ಲಿ ಸುಂದರಲಾಲ್ ಬಹುಗುಣರು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಅವರು ಪದ್ಮವಿಭೂಷಣ, ರೈಟ್ ಲೈವ್ಲಿಹುಡ್ ಮತ್ತು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ ಅಂತಿಮ ನಮನಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಕವಲೇದುರ್ಗ

Published

on

ಕವಲೇದುರ್ಗ

ತೀರ್ಥಹಳ್ಳಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿದ ನೆಲ. ಇಲ್ಲಿನ ಪ್ರತಿಯೊಂದು ಸ್ಥಳವೂ ತನ್ನದೇ ಆದ ಐತಿಹಾಸಿಕ ಮತ್ತು ಪೌರಾಣಿಕ ಇತಿಹಾಸವನ್ನು ಹೊಂದಿದೆ. ಅವುಗಳಲ್ಲಿ ಕವಲೇದುರ್ಗಾ ಕೂಡಾ ಒಂದು. ಸಹ್ಯಾದ್ರಿ ಶ್ರೇಣಿಯ ಮಡಿಲಿನಲ್ಲಿ ಕಂಡು ಬರುವ ಈ ದುರ್ಗಾ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ತಾಣ.

09ನೇ ಶತಮಾನದಲ್ಲಿ ನಿರ್ಮಾಣವಾದ ಈ ಕೋಟೆ ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಕೆಳದಿ ಸಂಸ್ಥಾನದ ಅನೇಕ ಐತಿಹ್ಯ ಹಾಗೂ ಅಂದಿನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿಗಳಿಗೆ ಈ ಕೋಟೆ ಇಂದೂ ಸಾಕ್ಷಿಯಾಗಿ ನಿಲ್ಲುತ್ತದೆ. ಪಶ್ಚಿಮ ಘಟ್ಟದ ಗಿರಿಕಂದರಗಳಿಂದ ಆವೃತವಾದ ಈ ಪ್ರದೇಶವನ್ನು ಕವಲೇದುರ್ಗ, ಕಪಿಲೇದುರ್ಗ, ಕಾವಲುದುರ್ಗ, ಭುವನಗಿರಿದುರ್ಗ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಕವಲೇದುರ್ಗಾ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾದೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗಾ ಕೋಟೆಯನ್ನು ವಶಕ್ಕೆ ಪಡೆದರು. ನಂತರ ಮಲ್ಲವ ಸಾಮ್ರಾಜ್ಯದ ವೆಂಕಟಪ್ಪ ನಾಯಕ ಇಲ್ಲಿ ಬೃಹತ್ ಕೋಟೆಯನ್ನು ನಿರ್ಮಾಣ ಮಾಡಿ ಭದ್ರ ಬುನಾದಿಯನ್ನು ಹಾಕಿದರು.

ನಂತರ ಶಿವಪ್ಪ ನಾಯಕ, ರಾಣಿ ಚನ್ನಮ್ಮ ಮತ್ತು ರಾಣಿ ವೀರಮ್ಮಾಜಿ ಆಳ್ವಿಕೆ ಮಾಡಿದರು. ಅಲ್ಲದೇ ಛತ್ರಪತಿ ಶಿವಾಜಿಯ ಮಗ ರಾಜಾರಾಮನಿಗೆ ಇಲ್ಲಿ ಆಶ್ರಯ ನೀಡಿದ್ದರು ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೋಂದಿಗೆ ಯುದ್ಧಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಾಮ್ಮಾಜಿಗೆ ಸಂದಿದೆ. 18ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಗೆ ಕವಲೇದುರ್ಗಾ ತುತ್ತಾಯಿತು.

ಮೂರು ಸುತ್ತಿನ ಕೋಟೆ ಇದಾಗಿದ್ದು, ಪಡಸು ಕಲ್ಲುಗಳಿಂದ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ. ಕೋಟೆಯ ಒಳಭಾಗದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವಾಲಯವಿದೆ. ಅಲ್ಲದೇ ಬಯಲು ಬಸವ, ಗದಾತೀರ್ಥ ಶಿಖರೇಶ್ವರ ದೇವಾಲಯ, ತಿಮ್ಮಣ್ಣ ನಾಯಕ ಕೆರೆ, ಬಹು ಸುಂದರ ಕಲ್ಯಾಣ ಮಹಲ್, ಮಾರಿಕಾಂಬ ದೇವಾಲಯ, ಎಣ್ಣೆ ಮತ್ತು ತುಪ್ಪದ ಬಾವಿ, ಹಾಗೂ ಐತಿಹಾಸಿಕ ಕೋಟೆ ಮತ್ತು ಅರಮನೆ ಪ್ರವಾಸಿಗರ ಕಣ್ಗಳಿಗೆ ಹಬ್ಬವನ್ನುಂಟುಮಾಡುತ್ತವೆ.

ಕವಲೇದುರ್ಗಾ ಕೋಟೆಯು ಜಿಲ್ಲಾ ಕೇಂದ್ರದಿಂದ 80 ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ

https://kn.wikipedia.or

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending