Connect with us

ನೆಲದನಿ

ನುಡಿಯ ಒಡಲು – 22 | ವಚನ ಸಾಹಿತ್ಯ : ನುಡಿಯೊಳಗಾಗಿ ನಡೆ

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ವಚನ ಸಾಹಿತ್ಯ ಕುರಿತು ಎಷ್ಟೋ ಸಾವಿರ ಪುಟಗಳ ಬರಹ ಈಗಾಗಲೇ ಬಂದಿದೆ. ಆ ಎಲ್ಲ ಬರಹವನ್ನು ಈಗ ಯಾವುದೇ ಬಗೆಯಲ್ಲಿ ಮತ್ತೆ ಇಲ್ಲಿ ಚರ್ಚಿಸುವ ಇರಾದೆ ನನ್ನದಲ್ಲ. ಇನ್ನೂ ಅದಕ್ಕೆ ಬದಲಾಗಿ ಏನೆಲ್ಲ ಬರೆಯಲು ಇಲ್ಲಿ ಅವಕಾಶವಿದೆ ಎಂಬುದನ್ನು ಮಾತ್ರ ಸೂಚಿಸಲು ಈ ಮಾತನ್ನು ಹೇಳಲಾಗಿದೆ. ಅಂದರೆ ಸಂಸ್ಕೃತಿಯೊಂದನ್ನು ಕುರಿತ ಇಲ್ಲವೇ ಆಯಾ ಸಂಸ್ಕೃತಿಯೊಳಗೆ ನಡೆದು ಹೋಗಿರುವ ಚಳವಳಿ, ಹೋರಾಟ, ಸಂಘರ್ಷಗಳನ್ನು ಕುರಿತು ಮತ್ತೆ ಮತ್ತೆ ಚಿಂತಿಸುವ ಜರೂರಿನ ಬಗೆಗೆ ವಾದಗಳು ಮುಂಚೂಣೆಗೆ ಬರುತ್ತವೆ.

ಇದಕ್ಕೆ ಬಲವಾದ ಕಾರಣಗಳಿರುತ್ತವೆ. ಅವುಗಳೆಂದರೆ, ಇಂತಹ ಚಳವಳಿಗಳು ಆಯಾ ಸಮುದಾಯಗಳ ಮೇಲೆ ಬೀರಿರುವ ಪರಿಣಾಮ, ಅದಕ್ಕೆ ಸಿಕ್ಕಿರುವ ಸಾಂಸ್ಕೃತಿಕ ಮಹತ್ವ, ಅದರಿಂದ ರೂಪುಗೊಳ್ಳುವ ಯಜಮಾನಿಕೆಯ ಪರ ಹಾಗೂ ವಿರೋಧ ನೆಲೆಗಳು ಎಂತಹವು ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಬೇಕಾಗುತ್ತದೆ. ಆದರೆ ಇಂತಹ ಚರ್ಚೆಗೆ ಯಾವುದೇ ರೀತಿಯ ಕೊನೆಯಿರುವುದಿಲ್ಲ ಎಂಬುದು ಮಾತ್ರ ಗಮನಾರ್ಹ. ಆದರೆ ಯಾವ ನೆಲೆಯಿಂದ? ಏನನ್ನು? ಯಾರಿಗಾಗಿ? ಇಂತಹ ಚರ್ಚೆಗಳನ್ನು ಬೆಳಸಬೇಕು ಎಂಬ ಕೇಳ್ವಿಯನ್ನು ಎದುರಿಗಿಟ್ಟುಕೊಂಡೇ ಈ ವಚನ ಸಾಹಿತ್ಯದ ಬಗೆಗೆ ಯೋಚಿಸಬೇಕಾಗಿದೆ. ಆದರೆ ಇದೇ ಸನ್ನಿವೇಶದಲ್ಲಿ ಈ ವಚನ ಚಳವಳಿಯು ಮಂಡಿಸುತ್ತಿರುವ ತಿಳಿವು ಎಂತಹದು ಎಂಬುದನ್ನು ಅರಿಯಲು ನಾವು ಅನುಸರಿಸುವ ವಿಧಾನಗಳು ಯಾವವು ಎಂಬುದನ್ನೂ ಈಗಲೇ ತೀರ್ಮಾನಿಸುವ ಅಗತ್ಯವಿದೆ.

ಇಂತಹ ವಿಧಾನಗಳು ಅನುಭವ ಹಾಗೂ ನುಡಿಯೊಳಗಿನ ನಡೆಗಳ ನಡುವಣ ನಂಟನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ನೆಮ್ಮಿಕೊಂಡಿರುತ್ತವೆ.
ನುಡಿಯೊಳಗೆಯೇ ಸಂಸ್ಕೃತಿಗಳ ಚಹರೆಗಳು ಹೇಗೆ ಮೈಪಡೆದಿರುತ್ತವೆ. ಹಾಗೂ ಅವುಗಳು ನುಡಿಯ ಯಾವ ಆಯಾಮದಿಂದ ಇಂತಹವೊಂದು ನೆಲೆಯನ್ನು ತಲುಪಿರುತ್ತವೆ.

ಸಂಸ್ಕೃತಿಗಳು ಈಗಾಗಲೇ ಮೈಗೂಡಿಸಿಕೊಂಡಿರುವ ನಿಗದಿತ ಆಲೋಚನೆಯ ಮಾದರಿಗಳನ್ನು ಒಡೆದು ಕಟ್ಟಲು ಮತ್ತು ಅಂತಹ ಮಾದರಿಗಳಲ್ಲಿ ಸಾಂಸ್ಕೃತಿಕ ಪಲ್ಲಟವನ್ನುಂಟು ಮಾಡಲು, ಆಯಾ ಸಾಂಸ್ಕೃತಿಕ ಸಮೂಹಗಳನ್ನು ಪ್ರತಿನಿಧಿಸುವ ನುಡಿಯೊಂದು ತನ್ನೊಳಗೆಯೇ ಏನೆಲ್ಲ ನಡೆಗಳನ್ನು ನೆಲೆಗೊಳಿಸಬೇಕಾಗುತ್ತದೆ ಎಂಬುದನ್ನು ಅರಿಯಬೇಕಾಗಿರುವುದು ಇವತ್ತು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಇಂತಹ ನಡೆಗಳು ಆಯಾ ಸಮುದಾಯಗಳ ಮೂಲ ತತ್ವಗಳನ್ನೇ ಬದಲಾಯಿಸುವ ಬಗೆಗಳಾಗಿರುತ್ತವೋ? ಇಲ್ಲವೇ ಅಂತಹ ಮೂಲತತ್ವಗಳಿಗೆ ಬದಲಿಯಾದ ತತ್ವಗಳನ್ನು ರೂಪಿಸುವ ಇರಾದೆಯನ್ನು ಹೊಂದಿರುತ್ತವೋ? ಎಂಬ ಮೆಥಾಡಾಲಜಿಯ ಇಕ್ಕಟ್ಟುಗಳನ್ನು ಕುರಿತು ಚರ್ಚಿಸಬೇಕಾಗುತ್ತದೆ. ಏಕೆಂದರೆ ಈ ಬದಲಾವಣೆ ಕೇವಲ ನುಡಿ ನಿರೂಪಣೆಗಳಲ್ಲಿ ಉಂಟಾಗುವ ಬದಲಾವಣೆ ಮಾತ್ರವಾಗದೇ, ಆಯಾ ಸಮೂಹಗಳ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ಮಾದರಿಗಳನ್ನು ಹೊಸದಾಗಿ ಕಟ್ಟುವ ನಿಲುವುಗಳೇ ಆಗಿರುತ್ತವೆಂದು ಹೇಳಬೇಕಾಗುತ್ತದೆ.

ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ಒಂದು ಹಿರಿಮೆಯ ಜಾಗವನ್ನು ಕೊಡಲಾಗಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಇಂತಹ ಕಾರಣಗಳನ್ನು ಕೇವಲ ಜಾತಿ, ಧರ್ಮ, ಸಾಮಾಜಿಕ ಸಮಾನತೆ, ಮಾತಿನ ಸ್ವಾತಂತ್ರ್ಯ, ಲಿಂಗ ಸಮಾನತೆಗೆ ಪೂರಕವಾದ ಭಾಷಿಕ ನಿರೂಪಣೆಗಳ ಆಧಾರದ ಮೇಲೆ ಇಲ್ಲವೇ ಎಷ್ಟು ಪ್ರತಿಶತದಲ್ಲಿ ಇಂತಹ ಸಂಗತಿಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ ಅನ್ನುವ ಕಾರಣಕ್ಕೆ ಮಾತ್ರ ಇವತ್ತಿನ ಚರ್ಚೆಗಳನ್ನು ಸೀಮಿತಗೊಳಿ ನೋಡಲು ಸಾಧ್ಯವಿಲ್ಲ. ವಚನ ಸಾಹಿತ್ಯ ಆಂದೋಲನದ ಒಟ್ಟು ಕ್ರಿಯಾವರ್ತುಲದಲ್ಲಿ ಏನೆಲ್ಲ ಅಜೆಂಡಗಳು ಅಡಕವಾಗಿದ್ದವು ಅನ್ನುವ ಸಂಗತಿಯನ್ನೇ ಈ ಚರ್ಚೆಗಳು ಮರೆಮಾಚುತ್ತವೆ. ಹಾಗೂ ವಚನ ಚಳವಳಿ ಎಷ್ಟರಮಟ್ಟಿಗೆ ಸೋಲು ಇಲ್ಲವೇ ಗೆಲವು ಕಂಡಿದೆ ಎನ್ನುವ ಕಾರಣಕ್ಕಾಗಿಯೂ ವಚನ ಚಳವಳಿಗೆ ಈಗಾಗಲೇ ಕನ್ನಡ ಪರಂಪರೆಯಲ್ಲಿ ಸಿಕ್ಕಿರುವ ಈ ಜಾಗವನ್ನು ಯಾರಿಂದಲೂ ಕದಲಿಸಲು ಆಗುವುದಿಲ್ಲ.

ಏಕೆಂದರೆ ವಚನ ಸಾಹಿತ್ಯ ಪರಂಪರೆ ಪೂರ್ವವಾಸನೆಯ ಜಾಡನ್ನು ಬದಲಿಸಿಕೊಂಡು, ನಡೆ-ನುಡಿಗಳ ನಡುವಣ ನೈತಿಕತೆಯ ಹೊಂದಾಣಿಕೆಯನ್ನು ಮರುಮಂಡಿಸುವ ಅಭಿವ್ಯಕ್ತಿಯೇ ಈ ವಚನ ಸಾಹಿತ್ಯದ ಉದ್ದೇಶವಾಗಿದೆ.

ವಚನ, ಮಾತು ಹಾಗೂ ಭಾಷೆ ಈ ಮೂರು ಅರಿಮೆ ಪದಗಳು ಕನ್ನಡ ಸಂಸ್ಕೃತಿಯೊಳಗೆ ಒಂದು ಹೆಚ್ಚುಗಾರಿಕೆಯನ್ನು ಪಡೆದಿವೆ. ಅಂದರೆ ಈ ಮೂರು ಪದಗಳು ವ್ಯಕ್ತಿಗಳಿಗೆ ಇರುವ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಯನ್ನು ಸೂಚಿಸುತ್ತವೆ. ಪ್ರತಿ ಸಮುದಾಯದ ತಳಹದಿಯಾಗಿರುವುದು ಮಾತು. ಮಾತಿನ ನಂಬಿಕೆಗೆ ಮತ್ತು ಹೊಣೆಗಾರಿಕೆಗೆ ಬಿಕ್ಕಟ್ಟು ಎದುರಾದರೆ, ಇಡೀ ಸಾಮಾಜಿಕತೆ, ನೈತಿಕತೆ ಹಾಗೂ ತಾತ್ವಿಕತೆಗಳ ವಿನ್ಯಾಸಗಳ ಬಗೆಗೆ ಅಪನಂಬಿಕೆ ಮೂಡುತ್ತದೆ.

ಮಾತುಗಳು ಅಪಾರ್ಥದ ಮೂಲಗಳಾದರೆ ಇಡೀ ಬದುಕಿನ ಮುನ್ನೋಟವೇ ದಾರಿ ತಪ್ಪುತ್ತದೆ. ಹಾಗಾಗಿ ಮಾತನ್ನು ಒಂದು ಅಸ್ತ್ರವನ್ನಾಗಿ, ತಿಳಿವಿನ ನೆಲೆಯಾಗಿ ಮತ್ತು ಸಾಮಾಜಿಕ-ರಾಜಕೀಯ ಮೇಲಾಟದ ಮಾಧ್ಯಮವನ್ನಾಗಿ ರೂಪಿಸಲಾಗಿದೆ. ಮಾತನ್ನು ಶಾಪವನ್ನಾಗಿಯೂ, ಮಂತ್ರವನ್ನಾಗಿಯೂ ಬಳಸುತ್ತಲೇ ಬಂದಿದ್ದೇವೆ. ಹಾಗೂ ತಿಳುವಳಿಕೆಯ ಅನುಭವ ಮತ್ತು ಅನುಭವದ ತಿಳುವಳಿಕೆ ನಮಗೆ ದೊರಕುವುದು ಕೂಡ ಮಾತಿನ ಮೂಲಕವೇ.

ಅನುಭವ ಮತ್ತು ತಿಳಿವು ಎರಡೂ ಒಟ್ಟಿಗೆ ಮೂಡುವುದಿಲ್ಲ. ಒಂದು ಇನ್ನೊಂದನ್ನು ಅರಿಯುವುದಕ್ಕೆ ಭಾಷೆ ಹೇಗೆ ಪೂರಕವಾಗಿ ಕೆಲಸ ಮಾಡುತ್ತದೆ ಎನ್ನುವುದು ವಿಶೇಷ. ಆಲೋಚನೆಯ ಇಡೀ ಸ್ವರೂಪವು ಒಡಮೂಡುವುದು ಕೂಡ ನುಡಿಯೊಳಗೆ ಮಾತ್ರ. ಪ್ರತಿಯೊಂದು ಸಂಸ್ಕೃತಿಯು ವಿಕಾಸಗೊಳ್ಳುವಾಗ ತನ್ನದೇ ನುಡಿಯೊಂದನ್ನು ಗುರುತಿಸಿಕೊಳ್ಳುತ್ತದೆ. ಈ ನುಡಿಯ ಮೂಲಕವೇ ತನ್ನ ಬದುಕಿನ ಅಂತಸತ್ವವನ್ನು, ಬದುಕಿನ ಸಾಕ್ಷಾತ್ಕಾರವನ್ನು ಕಂಡರಿಸುವ ದಾರಿಗಳನ್ನು ಕಂಡುಕೊಳ್ಳುತ್ತದೆ.

ಪರಂಪರೆ ರೂಪುಗೊಳ್ಳುವಾಗ ಸಾಂಸ್ಕೃತಿಕ ಚಹರೆಗಳು ಮೈದಾಳುತ್ತವೆ. ಈ ಚಹರೆಗಳು ಬೇರೆ ಬೇರೆ ಸ್ವರೂಪದಲ್ಲಿ ಗೋಚರಿಸುತ್ತವೆ. ವಚನ ಸಾಹಿತ್ಯ ಕನ್ನಡನುಡಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಚಹರೆಯಾಗಿದೆ. ಬದುಕಿನ ಎಲ್ಲ ವಿದ್ಯಮಾನಗಳು ನುಡಿಯೊಳಗೆ ಏರ್ಪಡುವ ಅರ್ಥಗಳ ಮೂಲಕ ನಮ್ಮೊಂದಿಗೆ ನಂಟನ್ನು ಪಡೆದುಕೊಳ್ಳುತ್ತವೆ. ವಾಸ್ತವವನ್ನು ನಿರ್ವಚಿಸುವ ನೆಲೆಗಳಿಗೂ ನಾವು ನುಡಿಯನ್ನು ಬಳಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ನುಡಿಯ ಮೂಲಕವೇ ಬದುಕಿನ ಸತ್ಯವನ್ನು ಕಾಣುತ್ತೇವೆ ಎನ್ನುವ ನಂಬಿಕೆ ಬಲವಾಗಿದೆ.

ಈ ನಂಬಿಕೆಯನ್ನು ಸಾಬೀತುಪಡಿಸುವ ಪರಿಕರವಾಗಿ ವಚನಗಳನ್ನು ಪರಿಗಣಿಸಲಾಗಿದೆ. ಬದುಕಿನ ಸತ್ಯ ಮತ್ತು ಶಾಬ್ದಿಕ ಸತ್ಯಗಳ ನಡುವಣ ಹೊಂದಾಣಿಕೆಯನ್ನು ವಚನ ಸಾಹಿತ್ಯ ಗಟ್ಟಿಗೊಳಿಸಿದೆ. ಆದ್ದರಿಂದ ಮಾತು ಇಲ್ಲವೇ ನುಡಿಯನ್ನು ಕುರಿತ ವಚನಗಳನ್ನು ಮಾತ್ರವಷ್ಟೇ ಅಲ್ಲದೇ ಬದುಕಿನ ನಂಬಿಕೆ ಮತ್ತು ಅಪನಂಬಿಕೆಗಳ ಸ್ವರೂಪವನ್ನು ವಿವರಿಸುವುದಕ್ಕೂ ವಚನಗಳನ್ನು ಉಲ್ಲೇಖ ಮಾಡಲಾಗುತ್ತದೆ. ಬದುಕಿನ ಅರ್ಥಗಳನ್ನು ವಚನಗಳ ಭಾಷೆಯ ಮೂಲಕ ಸಾಕ್ಷಾತ್ಕಾರಗೊಳಿಸುವ ಬಗೆಯಂತೆ, ಭಾಷೆಯ ಸಾಕ್ಷಾತ್ಕಾರವನ್ನು ವಚನಗಳಲ್ಲಿ ಕಾಣುವುದನ್ನು ನೋಡುತ್ತೇವೆ. ಭಾಷೆಯನ್ನೇ ಇಲ್ಲಿ ಪ್ರಮಾಣವಾಗಿ ಗ್ರಹಿಸಲಾಗಿದೆ.

ಈ ಇಡೀ ತಾತ್ವಿಕ ವಿನ್ಯಾಸವನ್ನು ಭಾಷಾಶಾಸ್ತ್ರೀಯ ನೆಲೆಯಿಂದ ಅರಿಯಲು ನಮಗೆ ಸಾಕಷ್ಟು ಗೊಂದಲಗಳು ಎದುರಾಗುತ್ತವೆ. ಆದರೆ ಸಂಸ್ಕ್ರುತಿಯೊಳಗೆಯೇ ನೆಲೆಪಡೆಯುವ ವಿಚಾರ ಸ್ವರೂಪದ ಬಗೆಗಿನ ಚರ್ಚೆಗಳನ್ನು ತೀರಾ ಭಿನ್ನವಾಗಿ ನಿರ್ವಚಿಸಲಾಗಿದೆ. ಇದೊಂದು ರೀತಿಯಲ್ಲಿ ದೀಪ ಮತ್ತು ಬೆಳಕಿನ ಸಂಬಂಧವನ್ನು ಸೂಚಿಸುವಂತಿದೆ. ಅಂದರೆ ದೀಪದ ಬೆಳಕಿನಲ್ಲಿಯೇ ದೀಪವೂ ಕಾಣುವಂತೆ (ಕೆವಿಎನ್ ಅವರ ಮಾತು) ಭಾಷೆಯ ಬೆಳಕಿನಲ್ಲಿ ಸಂಸ್ಕ್ರುತಿ ಗೋಚರಿಸುತ್ತದೆ. ವಚನ ಮತ್ತು ಭಾಷೆಯ ಸಂಬಂಧವನ್ನು ಈ ರೂಪಕದ ಮೂಲಕ ನೋಡಿದರೆ ಸ್ಪಷ್ಟವಾಗುತ್ತದೆ.

ಆದ್ದರಿಂದ ವಚನ ಸಾಹಿತ್ಯ ಕೇವಲ ಸಾಹಿತ್ಯವಾಗಿ ಮಾತ್ರ ಕಾಣದೇ, ಅದೊಂದು ಸಮೂಹಗಳ ಬದುಕಿನ ಪ್ರಮಾಣ ಭಾಷೆಯಾಗಿ ಒಪ್ಪಿಗೆಯನ್ನು ಪಡೆದಿದೆ. ಜಾತಿ, ಲಿಂಗ ಹಾಗೂ ಆಹಾರಭೇದದ ವಿಷಮತೆಯ ತೀವ್ರತೆಯನ್ನು ಟೀಕಿಸುವ ವಚನಗಳು ನಮ್ಮ ಆತ್ಮವಿಶ್ವಾದ ಮಾತುಗಳಾಗಿ ಹಾಗೂ ಬದುಕಿನ ಸ್ಥಿರತೆಯನ್ನು ಕಲ್ಪಿಸುವ ಭರವಸೆಯ ಪ್ರಮಾಣದ ‘ಭಾಷೆಯಾಗಿಯೂ ಒಡಮೂಡಿವೆ. ವಚನ ಭಾಷೆಯಾಗುವಂತೆ, ಭಾಷೆಯೂ ವಚನವಾಗುತ್ತದೆ. ಈ ಆಗುವಿಕೆಯಲ್ಲಿ ವೈಚಾರಿಕ ನಿಲುಗಳನ್ನು ವಚನ ಸಾಹಿತ್ಯ ಹೇಗೆ ಅನುಸಂಧಾನಗೊಳ್ಳುತ್ತದೆ ಅನ್ನುವುದನ್ನು ಕಾಣಬಹುದು.

ನೈತಿಕ ವ್ಯಕ್ತಿತ್ವವನ್ನು ವಚನಗಳು ಪ್ರತಿನಿಧಿಸುತ್ತವೆ. ಧರ್ಮ ಮತ್ತು ನೀತಿ, ವ್ಯಕ್ತಿ ಮತ್ತು ನೈತಿಕತೆ, ಸಮೂಹ ಮತ್ತು ಲೋಕಾನುಭವ ಇವುಗಳು ಒಂದರಿಂದೊಂದು ಬೇರೆಯಲ್ಲ. ಈ ನಿಲುವು ವಚನಗಳಿಂದ ಒಡಮೂಡುವ ದಾರ್ಶಿನಿಕತೆಯಾಗಿದೆ. ಮಾತು ಬದುಕಿನ ಯಾವ ಆಯಾಮವನ್ನು ಶಾಶ್ವತಗೊಳಿಸುತ್ತದೆ ಎಂಬ ವಾಸ್ತವವನ್ನು ವಚನಗಳಲ್ಲಿ ಕಾಣುತ್ತೇವೆ. ಮಾತು ಮಾಣಿಕ್ಯ, ಮಾತು ಜೋತಿರ್ಲಿಂಗ, ಮಾತು ಸ್ಫಟಿಕವಾಗುವ ಪ್ರಕ್ರಿಯೆ ಶಬ್ದ ಮತ್ತು ಅರ್ಥಗಳ ನಡುವಣ ನಂಟನ್ನು ಬೆಸೆಯುವ ನೆಲೆ ಮಾತ್ರವಲ್ಲ. ಬದಲಾಗಿ ನಡೆ ಮತ್ತು ನುಡಿಗಳ ನಡುವೆ ಏರ್ಪಡುವ ಸತ್ಯದ ಸಾಕ್ಷಾತ್ಕಾರವಾಗಿದೆ.

ಅದಕ್ಕೆ ಅಲ್ಲಮನ ನಡೆಯಿಂದ ನುಡಿಗೆಟ್ಟು, ನುಡಿಯಿಂದ ನಡೆಗೆಟ್ಟು ಎಂಬೀ ಮಾತು ಜೋತಿರ್ಲಿಂಗವಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ವಚನಗಳಲ್ಲಿ ಮಾತು ಮತ್ತು ಅರ್ಥಗಳ ಗುರಿ ನಿಜಾನುಭವದ ದರ್ಶನವಾಗಿದೆ. ಅದಕ್ಕಾಗಿಯೇ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ಶರಣ ನಡೆದರೆ ನಿರ್ಗಮನಿ, ನುಡಿದರೆ ನಿಶ್ಯಬ್ದ ಎಂಬೆಲ್ಲ ಮಾತುಗಳ ಪರಿಣಾಮವಾಗಿ ಭಾಷೆಯನ್ನು ಅರಿವಿನ ವಾಸ್ತವವನ್ನಾಗಿ ಪರಿವರ್ತಿಸುವ ಇರಾದೆಯನ್ನು ವಚನಗಳಲ್ಲಿ ಕಾಣುತ್ತೇವೆ.

ಹಾಗಾಗಿ ಅರಿವೇ ಗುರು ಎಂಬ ಮಾತು ಭಾಷೆಯ ಪರಧಿಯನ್ನು ಮೀರಿದ ನೆಲೆಯನ್ನು ಸೂಚಿಸುತ್ತದೆ. ಭಾಷೆಯ ಪರಧಿಯನ್ನು ಮೀರುವುದೆಂದರೆ, ಭಾಷೆಯನ್ನೇ ಮೀರುವುದೆಂದಲ್ಲ ಬದಲಾಗಿ ಮಾತನ್ನು ನಡೆಯಾಗಿ, ಆಲೋಚನೆಯಾಗಿ, ನೈತಿಕ ನೆಲೆಯನ್ನಾಗಿ ಅರಿಯುವ ಬಗೆಯಾಗಿದೆ. ಅಂದರೆ ವ್ಯಾಕರಣದ ಸಾಂಪ್ರದಾಯಿಕ ನಿಯಮಗಳ ಚೌಕಟ್ಟನ್ನು ಮೀರುವ ಬಗೆಯಾಗಿ ಇದನ್ನು ನೋಡಬೇಕು. ಅದಕ್ಕಾಗಿಯೇ ಶಬ್ದಸಂದಣಿಯ ಮಾತು ಸಯವಲ್ಲ ನೋಡಾ ಪ್ರಭು ಎಂಬ ಮಾತನ್ನು ಮುಕ್ತಾಯಕ್ಕ ಅಲ್ಲಮನಿಗೆ ಹೇಳುತ್ತಾಳೆ.

ಮಾತುಗಳು ಕೇವಲ ಭಾಷಿಕ ಸೂಚಕಗಳಾಗುವ ಅಪಾಯದ ಎಚ್ಚರವನ್ನು ಮುಕ್ತಾಯಕ್ಕನ ಈ ಮಾತುಗಳಲ್ಲಿ ಕಾಣುತ್ತೇವೆ. ಅಲ್ಲಮ, ಬಸವ, ಮುಕ್ತಾಯಕ್ಕ, ಅಕ್ಕ ಮೊದಲಾದವರ ವಚನಗಳನ್ನು ತಲಸ್ಪರ್ಶಿಯಾಗಿ ಓದಿದರೆ, ನುಡಿಯೊಳಗಣ ನಿಶ್ಯಬ್ದ ಹಾಗೂ ನುಡಿಯೊಳಗಣ ಅರ್ಥ ಇವುಗಳ ನಡುವಿನ ವ್ಯತ್ಯಾಸ ಭಾಷಿಕ ಸೂಕ್ಷ್ಮಗಳನ್ನೇ ಪ್ರತಿನಿಧಿಸುತ್ತವೆ ಎಂಬುದು ಗಮನಾರ್ಹ.

ಅನುಭಾವದ ಅಮೂರ್ತತೆಯನ್ನು ಮೀರಿ ಅನುಭವದ ವಿನ್ಯಾಸಗಳನ್ನು ಆಧರಿಸಿಕೊಂಡು ಸಮೂಹಗಳ ನಡೆ-ನುಡಿಗಳ ನಡುವಣ ನೈತಿಕತೆಯನ್ನು ನಿರೂಪಿಸುವ ಈ ವಚನ ಸಾಹಿತ್ಯ ವಿಮೋಚನೆಯ ಭಾಷೆಯಾಗಿದೆ. ಈ ವಿಮೋಚನೆ ಎನ್ನುವುದು ಭಾವ ಬಂಧನಗಳನ್ನು ಮಾತ್ರ ಮೀರುವುದಲ್ಲ. ವೇದ ಮತ್ತು ಆಗಮಗಳು ಸಾಮಾಜಿಕ-ಸಾಂಸ್ಕೃತಿಕವಾಗಿ ಹೇರಿದ ನಿರ್ಬಂಧಗಳನ್ನೂ ಮೀರುವ ಬಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

Trending