Connect with us

ದಿನದ ಸುದ್ದಿ

ಕೋರೆಗಾಂವ್ ಗಾಯಗಳನ್ನೂ, ಹರಿದ ಸಂಬಂಧಗಳನ್ನೂ ಹೊಲಿದುಕೊಳ್ಳೋಣ

Published

on

  • ಡಾ. ವಡ್ಡಗೆರೆ ನಾಗರಾಜಯ್ಯ

ಭಾರತ ಹುಣ್ಣಿಮೆಯ ದಿನ ಹೊಸ ಗಡಿಗೆಯ ತಣ್ಣೀರಿನಿಂದ ಹರಿದ ಗಾಯಗಳನ್ನು ತೊಳೆದು, ಹೊಸ ಸೂಜಿ – ಹೊಸ ದಾರಗಳಿಂದ ನೆತ್ತರು ಸೋರುವ ಗಾಯಗಳನ್ನು ಹೊಲಿದುಕೊಂಡ ಗೋಸಂಗಿ ಯುದ್ಧ ವೀರರ ನೆನಪು ನಮ್ಮ ತಾಯಂದಿರ ನಾಲಗೆ ಮೇಲೆ ಇನ್ನೂ ಮಾಸಿಲ್ಲ.

ಗೊಲ್ಲರ ರಾಜ ಕಾಟಮರಾಜನ ತಮ್ಮನಾದ ಚೆನ್ನಯ್ಯಬಾಲುಡು ಸಾರಿದ್ದ ಯುದ್ಧದಲ್ಲಿ ನೆರವಾಗಿ, ವೈರಿಗಳ ವಿರುದ್ಧ ಕಾದಾಡಿ ಚೆನ್ನಯ್ಯಬಾಲುಡುವಿಗೆ ಜಯ ತಂದುಕೊಡಲೆಂದು ಕಾರಂಪೂಡಿಯ ಯುದ್ಧಕ್ಕೆ ಹೋಗಿದ್ದ ಮಾದಿಗರ ಗೋಸಂಗಿ ಯುದ್ಧವೀರರು, ರಣರಂಗದಲ್ಲಿ ವೈರಿಗಳ ವಿರುದ್ಧ ಕಾದಾಡಿ ಕತ್ತಿಗಳಿಂದ ಗಾಯಗೊಂಡು ಇದೇ ಭಾರತ ಹುಣ್ಣಿಮೆಯ ಸಂಜೆ ಊರಿಗೆ ಮರಳಿ ಬರುತ್ತಾರೆ.‌

ಅಂದು ಸಂಜೆ ಊರಿನ ಹೊರಗೆ ಹೊಸ ಗಡಿಗೆಯ ತಣ್ಣೀರಿನಿಂದ ಹರಿದ ಗಾಯಗಳನ್ನು ತೊಳೆದು, ಹೊಸ ಸೂಜಿ – ಹೊಸ ದಾರಗಳಿಂದ ನೆತ್ತರು ಸೋರುವ ಗಾಯಗಳನ್ನು ಹೊಲಿದುಕೊಳ್ಳುತ್ತಾರೆ. ಚೆನ್ನಯ್ಯಬಾಲುಡುವಿಗೆ ಜಯವನ್ನು ತಂದುಕೊಟ್ಟ ಅವರು, ಆ ಗೊಲ್ಲರ ದೊರೆಯಿಂದ ಅನೇಕ ಬಿರುದುಗಳನ್ನೂ ಇನಾಮುಗಳನ್ನೂ ಪಡೆಯುತ್ತಾರೆ.

ಈ ಯುದ್ಧದ ನೆನಪನ್ನು ಮರೆಯಲಾರದ ಮಾದಿಗ ಜನಪದ ತಾಯಂದಿರು ಕಾವ್ಯವನ್ನು ಕಟ್ಟಿ ಹಾಡತೊಡಗಿ, ತಮ್ಮ ಸಮುದಾಯದ ಯುದ್ಧವೀರರ ಕಥನವನ್ನು ಮೌಖಿಕ ಧಾರೆಯಲ್ಲಿ ತಲೆಮಾರುಗಳಿಂದ ಸಾಗಿಸಿಕೊಂಡು ಬಂದಿದ್ದಾರೆ. ಗೋಸಂಗಿ ಯುದ್ಧ ವೀರರ ಈ ಕಥನವು ಗಾರುಡಿ ಗಂಗಭಾರತ ಕಾವ್ಯವಾಗಿ ನರದ ರಕ್ತದಂತೆ ಹರಿಯುತ್ತಿದೆ.

ಅಂತೆಯೇ ಭೀಮಾ ಕೋರೆಗಾಂವ್ ಮಹಾರ್ ವೀರ ಯೋಧರ ನೆನಪೂ ನಮ್ಮಿಂದ ಎಂದಿಗೂ ಮಾಸುವುದಿಲ್ಲ. ಬ್ರಿಟೀಷರಿಗೆ ಜಯ ತಂದುಕೊಡಲು ಪೇಶ್ವೆಗಳ ವಿರುದ್ಧ ಕಾದಾಡಿದ ಕೋರೆಗಾಂವ್ ವೀರಗಾಥೆ (1818 ಜನವರಿ 1) ದಲಿತರ ಪಾಲಿನ ಸ್ವಾಭಿಮಾನದ ಕಥನ. ಮಹಾರ್ ರೆಜಿಮೆಂಟಿನ ಸ್ಥಾಪನೆಯ ಘನತೆಗೂ ಹೊಸ ಪ್ರಸ್ತಾನ ಬರೆದ ಈ ದಲಿತ ದಿಗ್ವಿಜಯವನ್ನು ನಾವು ಪ್ರತಿ ವರ್ಷ ಆಚರಿಸುತ್ತಾ ಬಂದಿದ್ದೇವೆ.

ಸಂವಿಧಾನ ಕತೃ ಡಾ.ಬಿ.ಆರ್.ಅಂಬೇಡ್ಕರ್ ಅವರು, ಪ್ರತಿವರ್ಷ ಜನವರಿ 01 ರಂದು ಕೊರೆಗಾಂವ್ ಹತಾತ್ಮ ಯುದ್ಧವೀರರ ರಣಭೂಮಿಗೆ ಸಕುಟುಂಬ ಸಮೇತರಾಗಿ ಹೋಗಿ ಮಹಾರ್ ಸೈನಿಕರ ವಿಜಯ ಸ್ಥೂಪಕ್ಕೆ ವಂದನೆ ಸಲ್ಲಿಸಿ ಬರುತ್ತಿದ್ದರು. ಪ್ರತಿವರ್ಷ ಜನವರಿ 01 ನೇ ದಿನವನ್ನು ಕೊರೆಗಾಂವ್ ಯುದ್ಧವೀರರ ವಿಜಯ ದಿವಸವನ್ನಾಗಿ ಆಚರಿಸುವುದನ್ನು ಅಂಬೇಡ್ಕರ್ ರೂಢಿಗೆ ತಂದರು.

ಕೋಮುವಾದಿ ಮರಾಠ ಪೇಶ್ವೆಗಳ ವಿರುಧ್ಧ ಹೋರಾಡಿ ಮಡಿದು ಹುತಾತ್ಮರಾದ ಕೊರೆಗಾಂವ್ ವೀರರ ವಿಜಯ ದಿವಸವನ್ನಾಗಿ ನಾವು ಜನವರಿ-02 ರ ದಿನವನ್ನು ಆಚರಿಸುತ್ತಿದ್ದೇವೆ.

2018 ನೇ ಜನವರಿ 02 ರ ಭಾರತ ಹುಣ್ಣಿಮೆಯ ದಿನ ದಲಿತರ ಪಾಲಿಗೊಂದು ಕರಾಳ ನೆನಪನ್ನು ಬೆಸೆದುಬಿಟ್ಟಿದೆ. ಕರುಣಾಮೈತ್ರಿಗಳ ಸಂಕೇತವಾದ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಹಿಡಿದು ಮಹಾರಾಷ್ಟ್ರದ ಕೊರೆಗಾಂವ್ ವೀರಭೂಮಿಗೆ ಕೋರೆಗಾಂವ್ ವಿಜಯ ದಿವಸದ 200 ನೇ ವರ್ಷಾಚರಣೆಯನ್ನು ಆಚರಿಸಲು ಹೋಗಿದ್ದ ನಮ್ಮ ಬಂಧುಗಳ ವಿರುದ್ಧ, ಮತೀಯ ಧ್ವೇಷ ಮತ್ತು ರಕ್ತಪಾತದ ಸಂಕೇತವಾದ ಭಗವಾಧ್ವಜವನ್ನು ಹಿಡಿದುಕೊಂಡು ಬಂದ ಸಂಘಪರಿವಾರದ ಗೂಂಡಾಗಳು ಗುಂಪು ಘರ್ಷಣೆ ನಡೆಸಿ ನಮ್ಮ ಅನೇಕ ಬಂಧುಗಳು ಗಾಯಗೊಂಡರು.

ಸಾರ್ವಜನಿಕ ಆಸ್ತಿ-ಪಾಸ್ತಿಗಳೂ ನಾಶವಾಗಿ ಸಾಮಾನ್ಯ ಜನಜೀವನ ಕದಡಿ ಹೋಯಿತು. ದಲಿತರ ಜೀವಹಾನಿಯೂ ಆಗಿಹೋದ ಅಂತಹ ಹೊತ್ತಿನಲ್ಲಿ ಸಹಜವಾಗಿ ವ್ಯಗ್ರಗೊಳ್ಳಬೇಕಿದ್ದ ದಲಿತರು ತಮ್ಮ ಕೋಪವನ್ನು ಸಾರ್ವಜನಿಕರ ಮೇಲಾಗಲೀ ಸಾರ್ವಜನಿಕ ಆಸ್ತಿ-ಪಾಸ್ತಿಗಳ ಮೇಲಾಗಲೀ ಹರಿಯಬಿಡದೆ ಶಾಂತಿಯನ್ನು ಕಾಪಾಡಿಕೊಂಡರು.

ಗೋಸಂಗಿ ಯುದ್ಧವೀರರ ಮತ್ತು ಕೋರೆಗಾಂವ್ ಯುದ್ಧ ವೀರರ ಅಮರ ಕಾವ್ಯಗಳನ್ನು ಕಟ್ಟಿ ಹಾಡುವ ಮೂಲಕ ದಲಿತರು ತಮಗಾದ ನೋವನ್ನು ಹೊರ ಹಾಕಿದರು. ಹರಿದ ಗಾಯಗಳನ್ನು ಹೊಲೆಯುವಂತೆ ಸಂಬಂಧಗಳನ್ನೂ ಹೊಲೆದುಕೊಳ್ಳುವುದನ್ನು ನಮ್ಮ ಜನಪದರು ಧ್ಯಾನಿಸಿದ್ದರು. ಇಂದು ಕೊರೆಗಾಂವ್ ವಿಜಯ ದಿವಸದ 203 ನೇ ವರ್ಷಾಚರಣೆಯ ಹೊತ್ತಿನಲ್ಲಿ ಇಲ್ಲಿಯತನಕ ‌ಮತೀಯವಾದಿಗಳಿಂದ ‌ನಮಗಾಗಿರುವ ಗಾಯಗಳನ್ನೂ, ಹರಿದ ಸಂಬಂಧಗಳನ್ನೂ ಹೊಲಿದುಕೊಳ್ಳೋಣ.

ಕರುಣಾಮೈತ್ರಿಗಳ ಸಂಕೇತವಾದ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಎಲ್ಲೆಡೆ ಎತ್ತಿ ಹಿಡಿಯೋಣ.

(ಡಾ. ವಡ್ಡಗೆರೆ ನಾಗರಾಜಯ್ಯ
8722724174)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending