ನೆಲದನಿ
ಕೋರೆಗಾವ ವಿಜಯ : ದಲಿತ ಸ್ವಾಭಿಮಾನ ದಿನ
- ಡಾ.ಸಿದ್ರಾಮ ಕಾರಣಿಕ, ಧಾರವಾಡ, ಮೊ:9035343031
ಜನೇವರಿ 1…
ಇದು ದಲಿತ ಸ್ವಾಭಿಮಾನದ ದಿನ ! ದಲಿತರಾದವರೆಲ್ಲ ಮರೆಯದೇ ನೆನಪಿಡಬೇಕಾದ ದಿನ. ಇಡೀ ದೇಶದಲ್ಲಿಯೇ ವರ್ಣಧರ್ಮವನ್ನು ಪಾಲಿಸಿ, ದಲಿತರನ್ನು ನಿರಂತರವಾಗಿ ಶೋಷಣೆ ಮಾಡುತ್ತ, ಅವರ ಮೇಲೆ ದಿನನಿತ್ಯ ಅನ್ಯಾಯವೆಸಗುತ್ತ ಬಂದಿದ್ದ ಮಹಾರಾಷ್ಟ್ರದ ಪೇಶ್ವೆಗಳ ಸೊಕ್ಕಡಗಿಸಿ ಪೇಶ್ವಾಯಿ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಮಾಡಿದ ಐತಿಹಾಸಿಕ ದಿನವಿದು. ಸುಮಾರು ನಲವತ್ತು ಸಾವಿರದಷ್ಟಿದ್ದ ಪೇಶ್ವೆ ಸೈನಿಕರನ್ನು ಕೇವಲ ಐದು ನೂರು ವೀರ ಯೋಧರು ಮಣ್ಣುಮುಕ್ಕಿಸಿದ ದಿನವಿದು.
ಹೌದು !
ಹಿಂದೂ ಧರ್ಮದ ಅನಾಚಾರಗಳನ್ನೆಲ್ಲ ದಲಿತರ ಮೇಲೆ ಹೇರಿ, ನಿರ್ದಯಿಯಾಗಿ ವರ್ತಿಸಿದ್ದ ಪೇಶ್ವೆಗಳಿಗೆ ಇಂಥದ್ದೊಂದು ಅಂತ್ಯ ತೋರಿಸುವ ಅವಶ್ಯಕತೆ ಇತ್ತು. ಅದನ್ನು ಸಾಧ್ಯ ಮಾಡಿ ತೋರಿಸಿದವರು ಬ್ರಿಟಿಷ್ ಸೇನೆಯಲ್ಲಿದ್ದ ದಲಿತ ಯೋಧರು.
ಪುಣೆ-ಅಹಮದಾನಗರ ಮಾರ್ಗದಲ್ಲಿ ಭೀಮಾನದಿಯ ತೀರದಲ್ಲಿ ಕೋರೆಗಾವ ಹೆಸರಿನ ಒಂದು ಸಣ್ಣ ಹಳ್ಳಿಯಿದೆ. ಹಳ್ಳಿ ಸಣ್ಣದಿದ್ದರೂ ಭೀಮಾ ತೀರದ ಆ ಹಳ್ಳಿಯಲ್ಲಿ ಅಡಗಿರುವ ಇತಿಹಾಸ ತುಂಬ ದೊಡ್ಡದು. ಅಷ್ಟೇ ಅಲ್ಲ ಅದು ಸ್ಫೂರ್ತಿದಾಯಕವಾದುದ್ದೂ ಹೌದು ! ಅದೊಂದು ನಮ್ಮನ್ನು ಹುರಿದುಂಬಿಸುವ ಮತ್ತು ಅಭಿಮಾನ ಪಡುವಂತೆ ಮಾಡುವ ಇತಿಹಾಸವೇ ಸರಿ.
ದಲಿತ ವರ್ಗದಿಂದ ಬಂದವರು ಯಾವುದೇ ಕೆಲಸದಲ್ಲಿದ್ದರೂ ನಿಷ್ಠೆಗೆ ಹೆಸರಾದವರು. ವರ್ಣವ್ಯವಸ್ಥೆಯಿಂದ ವ್ಯತಿತರಾಗಿ ನಲುಗಿ ಹೋದ ಅವರು, ಸೇನೆ ಸೇರಿ ಸಾಧಿಸಿದ ಸಿದ್ಧಿಗಳು ಒಂದೆರಡರಲ್ಲ. ಅವುಗಳನ್ನು ಒಂದೊಂದಾಗಿ ಮೆಲುಕು ಹಾಕಿದಾಗ ಮುಚ್ಚಿಟ್ಟ ಅಥವಾ ಮರೆತು ಹೋದ ಇತಿಹಾಸದ ದೊಡ್ಡದೊಂದು ಅಧ್ಯಾಯ ತೆರೆದುಕೊಳ್ಳುತ್ತದೆ.
ಅಸಹ್ಯವೆನ್ನಿಸುವಂತಹ ಅಸ್ಪøಶ್ಯತೆಯನ್ನು ಹೇರಿ ಪ್ರತಿಕ್ಷಣವೂ ಸಂಶಯಿತ ದೃಷ್ಟಿಯಿಂದ ನೋಡುವ ಪೇಶ್ವೆಗಳ ನಡೆಯನ್ನು ವಿರೋಧಿಸಿ, ಅದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ತಮಗಾದ ಅವಮಾನವನ್ನು ಹೊಟ್ಟೆಯೊಳಗಿಟ್ಟುಕೊಂಡಿದ್ದ ಮಹಾರರು ಸ್ವಾಭಿಮಾನದಿಂದ ಪುಟಿದೆದ್ದು ಗೆಲುವು ಸಾಧಿಸುವುದಕ್ಕೆ ಐತಿಹಾಸಿಕವಾದ ಕೋರೆಗಾವ ಕದನ ಅವಕಾಶ ನೀಡಿತು.
ಬ್ರಿಟಿಷರು ಅಸ್ಪøಶ್ಯತೆಯ ವಿಚಾರದಿಂದ ದೂರವುಳಿದು ಕೇವಲ ವೀರತನವನ್ನೇ ಮುಖ್ಯವಾಗಿಟ್ಟುಕೊಂಡು ತಮ್ಮ ಸೇನೆಯಲ್ಲಿ ಮಹಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ನೀಡಿ, ಅವರಿಗೆ ಸೇನಾ ಶಿಕ್ಷಣ ನೀಡಿದರು. ಈ ಮಹಾರರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾವ ಕದನವನ್ನು ಗೆಲ್ಲಲು ಸಾಧ್ಯವಾಯಿತು. ಇತಿಹಾಸದ ಯಾವುದೇ ಪ್ರಸಂಗಗಳು ಮಹಾರರ ಈ ಕಲಿತನಕ್ಕೆ ಸರಿಸಾಟಿಯಾಗಿ ನಿಲ್ಲಲಾರವು.
ಕೋರೆಗಾವದಲ್ಲಿ ಅಖಂಡವಾಗಿ ನಿಂತಿರುವ ವಿಜಯಸ್ತಂಭ ಇಂದಿಗೂ ಆ ವೀರ ಮಹಾರರ ನೆನಪನ್ನು ಹಚ್ಚ ಹಸಿರಾಗಿಟ್ಟಿದೆ.ಢೋಂಗಿ, ಪಾಖಂಡಿ, ಸಮಯಸಾಧಕತನ ಮತ್ತು ದೇವರು-ಧರ್ಮದ ಹೆಸರಿನಲ್ಲಿ ಮಹಾರರ ಬದುಕನ್ನೇ ಹರಾಮ ಮಾಡಿದ, ಸೂತ್ರದ ಗೊಂಬೆಯನ್ನಾಗಿಸಿದ ಈ ಸಮಾಜಕ್ಕೆ ಮಹಾರ ರಕ್ತದಲ್ಲಿರುವ ಉಮೇದಿನ ಝಲಕ್ ತೋರಿಸುವ ಸಂಧಿ ಸಿಕ್ಕಿತೆಂಬ ಒಂದೇ ಒಂದು ಕಾರಣದಿಂದ ಕೋರೆಗಾವ ಕದನ ನಡೆಯಿತು.
ಮಹಾರರ ಸ್ವಾಭಿಮಾನವನ್ನೇ ಹಾಳು ಮಾಡಿದ ಪೇಶ್ವೆಗಳ ವಿರುದ್ಧ ಹೋರಾಟ ಮಾಡಿದ ಕೋರೆಗಾವ ಕದನದಲ್ಲಿ ಬ್ರಿಟಿಷ್ ಸರಕಾರ ಜಯ ಗಳಿಸಲು ಮಹಾರ ವೀರರ ಪರಾಕ್ರಮವೇ ಕಾರಣ ಎಂಬುದನ್ನು ಮರೆಯಬಾರದು.
ಯಾರಿಗೆ ಮನುಷ್ಯರೆಂದು ಬದುಕಲು ಅವಕಾಶವನ್ನೇ ನೀಡಿರಲಿಲ್ಲವೋ, ಯಾರಿಗೆ ಒಳ್ಳೆಯ ಬಟ್ಟೆ ಅಥವಾ ಪಾತ್ರೆ ಬಳಸುವುದಕ್ಕೆ ನಿರ್ಬಂಧವಿತ್ತೋ, ಯಾರಿಗೆ ಬೀದಿಗಳಲ್ಲಿ ಅಡ್ಡಾಡಲೂ ಅವಕಾಶವಿರಲಿಲ್ಲವೋ, ಯಾರ ವೀರತ್ವ ಮತ್ತು ಶೌರ್ಯತ್ವಕ್ಕೆ ಅವಕಾಶ ದೊರೆಯುತ್ತಿರಲಿಲ್ಲವೋ, ಯಾರಿಗೆ ಅವಮಾನಿತರಾಗಿ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸಲಾಗಿತ್ತೋ ಅವರು ಅಂಥವುಗಳನ್ನೆಲ್ಲ ವಿರೋಧಿಸುವುದಕ್ಕಾಗಿಯೇ ಬ್ರಿಟಿಷ್ ಸೇನೆಯನ್ನು ಸೇರಿ ತಮ್ಮ ಪರಾಕ್ರಮದ ಒಂದು ಝಲಕ್‍ನ್ನು ತೋರಿಸುವುದಕ್ಕೆ ಸಾಧ್ಯವಾಯಿತು.
ಶಿರೂರದಿಂದ 27 ಮೈಲುಗಳ ಸತತ ಕಾಲ್ನಡಿಗೆ ಮತ್ತು ಹಸಿವು-ನೀರಡಿಕೆಗಳಿಂದ ವ್ಯಾಕುಲಗೊಂಡಿದ್ದರೂ ಬೆರಳೆಣಿಕೆಯಷ್ಟಿದ್ದ ಸ್ವಾಭಿಮಾನಿ ಮಹಾರ ಯೋಧರು ತಮಗಿಂತ 40 ಪಟ್ಟು ಹೆಚ್ಚಿದ್ದ ಸರ್ವಶಸ್ತ್ರಸಜ್ಜಿತ ಪೇಶ್ವೆ ಸೇನೆಯನ್ನು 12 ಗಂಟೆಗಳ ಕಾಲದ ಕದನದಲ್ಲಿ ದಾರುಣವಾಗಿ ಪರಾಭವಗೊಳಿಸಿ ಪೇಶ್ವೆಯ ಶಾಹಿತನವನ್ನು ಧೂಳಿಪಟ ಮಾಡಿದರು.
ಈ ಕದನದಲ್ಲಿ ಮೊದಲನೇ ಹಾಗೂ ಎರಡನೇ ರೆಜಿಮೆಂಟಿನ ಒಟ್ಟು 50 ಯೋಧರು ವೀರ ಮರಣವನ್ನಪ್ಪಿದರು. 205 ಯೋಧರು ಗಾಯಾಳುಗಳಾದರು. ಹುತಾತ್ಮರಾದವರಲ್ಲಿ 22 ಮಹಾರರು, 16 ಮರಾಠರು, 8 ರಜಪೂತರು ಇಬ್ಬರು ಹಿಂದೂಗಳು ಹಾಗೂ ತಲಾ ಒಬ್ಬೊಬ್ಬ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯೋಧರು ಸೇರಿದ್ದಾರೆ.
ಇದಕ್ಕೆಲ್ಲ ಪೂರ್ವಿಕರು ಸ್ಫೂರ್ತಿಯೂ ಕಾರಣವಾಗಿತ್ತು. ಹಿಂದೆ ಶಿವಾಜಿ ಕಾಲದಿಂದಲೂ ಮಹಾರರು ತಮ್ಮ ವೀರ-ಶೌರ್ಯ-ಸಾಹಸಗಳಿಂದ ಪ್ರಖ್ಯಾತರಗಿದ್ದಾರೆ. ಪಾಚಗಡದ ರಾಯನಾಕ, ಸುಭನಾಕ ವಾಘನಾಕ, ಮದನಾಕ ಏಸನಾಕ, ಧೋಂಡನಾಕ ಪುಂಡನಾಕ, ಮೊದಲು ಸಾತಾರಕ್ಕೆ ಸೇರಿದ್ದ ಸಾಂಗ್ಲಿ ಜಿಲ್ಲೆಯ ತಾಸಗಾವ ತಾಲೂಕಿನ ಕಾಳಂಬಿ ಗ್ರಾಮದ ಜಾಗೀರದಾರನಾಗಿದ್ದ ಶೂರ ಮೊದಲನೆ ಶಿದನಾಕ, ರಾಯನಾಕ ಮಹಾರ ಮೊದಲಾದವರ ಪಟ್ಟಿಯೇ ಇದೆ. ಇದರ ಮುಂದುವರಿಕೆಯಾಗಿ ಕೋರೆಗಾವ ಕದನ ಕಲಿಗಳಾದ ಮಹಾರ ಯೋಧರು ಕಾಣಿಸಿಕೊಳ್ಳುತ್ತಾರೆ.
1822 ರಲ್ಲಿ ಕೋರೆಗಾವದಲ್ಲಿ ಭೀಮಾ ನದಿಯ ದಂಡೆಯ ಮೇಲೆ ವಿಜಯಸ್ತಂಭವನ್ನು ನಿರ್ಮಿಸಲಾಗಿದೆ. ವಿಜಯಸ್ತಂಭದ ಮೇಲೆ “One of the proudest triumphs of the British Army in the East” ಎಂದು ಬರೆಯಲಾಗಿದೆ. ಅಂದರೆ ಭಾರತದ ಪೂರ್ವ ಪ್ರದೇಶಗಳಲ್ಲಿ ತನ್ನದಾಗಿಸಿಕೊಂಡಿರುವ ಹಲವಾರು ವಿಜಯಗಳಲ್ಲಿಯೇ ಈ ವಿಜಯವು ಬ್ರಿಟಿಷ ಸೇನೆ ಹೆಮ್ಮೆ ಪಡುವಂತಿದೆ ಎಂಬುದು ಅಲ್ಲಿ ಉಲ್ಲೇಖಿತವಾಗಿದೆ.
ಸ್ತಂಭದ ಬದಿಗಳಲ್ಲಿ ಇಂಗ್ಲೀಷ್ ಮತ್ತು ದೇವನಾಗರಿ ಲಿಪಿಯಲ್ಲಿ ಹುತಾತ್ಮರದ ವೀರಯೋಧರ ಹೆಸರುಗಳು ಕೆತ್ತಲ್ಪಟ್ಟಿವೆ. ಸೀನನಾಕ ಕಮಲನಾಕ, ರಾಮನಾಕ ಏಸನಾಕ, ಗೋಂದನಾಕ ಕೋಢೆನಾಕ, ರಾಮನಾಕ ಏಸನಾಕ, ಭಾಗನಾಕ ಹರನಾಕ, ಅಂಬರನಾಕ ಕಾನನಾಕ, ರೂಪನಾಕ ಲಖನಾಕ, ಗಣನಾಕ ಬಾಳನಾಕ, ಕಾಳನಾಕ ಕೋಂಡನಾಕ, ವಪನಾಕ ರಾಮನಾಕ, ವಿಟನಾಕ ಧಾಮನಾಕ, ರಾಜನಾಕ ಗಣನಾಕ, ವಪನಾಕ ಹರನಾಕ, ರೈನಾಕ ವಾನನಾಕ, ಗಣನಾಕ ಧರಮನಾಕ, ದೇವನಾಕ ಆನನಾಕ, ಗೋಪಾಳನಾಕ ಬಾಳನಾಕ, ಹರನಾಕ ಹೀರನಾಕ, ಜೇಠನಾಕ ದೈನಾಕ, ಗಣನಾಕ ಲಖನಾಕ ಎಂಬ ಅಲ್ಲಿಯ ಹೆಸರುಗಳೇ ನಮ್ಮ ಮೈ ಮನಗಳನ್ನು ರೋಮಾಂಚಿತಗೊಳಿಸುತ್ತವೆ. ಮರೆತು ಹೋದ ಇತಿಹಾಸವನ್ನು ಕಣ್ಮುಂದೆ ಕಟ್ಟಿ ಕೊಡುತ್ತವೆ.
ಬಹುಶಃ ಇಂತಹ ಮಹಾರ ವೀರರನ್ನು ಕಂಡೇ ಸಂತ ತುಕಾರಾಮರು, “ಮಹಾರಾಸಿ ಶಿವೆ / ಕೋಪೆ ತೋ ಬ್ರಾಹ್ಮಣ ನವ್ಹೆ/” ಎಂದು ತಮ್ಮ ಅಭಂಗದಲ್ಲಿ ಹೇಳಿದ್ದಾರೆ. ಅಂದರೆ ಬ್ರಾಹ್ಮಣರಿಗಿಂತ ಮಹಾರರು ಮಹಾಮಹಿಮರು ಎಂಬುದೇ ಇಲ್ಲಿಯ ಭಾವ.
ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಅನುಯಾಯಿಗಳೊಂದಿಗೆ ಶಿರೂರ ಸಮೀಪದ ಭೀಮಾ-ಕೋರೆಗಾವಕ್ಕೆ ಬಂದು ವೀರ-ಪರಾಕ್ರಮದದ ಗತ ಸಾಹಸವನ್ನು ಸಾರುವ ವಿಜಯ ಸ್ತಂಭಕ್ಕೆ 1ನೇ ಜನೇವರಿ 1927 ರಂದು ಗೌರವ ವಂದನೆ ಸಲ್ಲಿಸಿದರು. ಆ ದಿನವನ್ನು ಕೋರೆಗಾವ ಕದನದ ಮಹಾರ ಕಲಿಗಳ ಸ್ಮøತಿದಿನವನ್ನಾಗಿ ಆಚರಿಸಿದರು. ಇದಕ್ಕಿಂತ ಮೊದಲು ಇತಿಹಾಸದಲ್ಲಿ ಮುಚ್ಚಿಹೋಗಿದ್ದ ಅಥವಾ ಮುಚ್ಚಿ ಹಾಕಲ್ಪಟ್ಟ ವಿಜಯ ಸ್ತಂಭದತ್ತ ಯಾರೂ ಹಾಯುತ್ತಿರಲಿಲ್ಲ ಕೂಡ.
ಆದರೆ ಯಾವಾಗ ಡಾ. ಬಾಬಾಸಾಹೇಬ ಅಂಬೇಡ್ಕರರು ಸ್ಮøತಿದಿನವನ್ನು ಆಚರಿಸಿದರೋ ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ಜನೇವರಿ 1 ರಂದು ದೇಶದ ವಿವಿಧ ಭಾಗಗಳಿಂದ ಬರುವ ಅಸಂಖ್ಯಾತ ಜನ ಸಮೂಹ ಸ್ಮøತಿ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.. ಡಾ. ಬಾಬಾಸಾಹೇಬ ಅಂಬೇಡ್ಕರರು ಯಾವುದೇ ಮಹತ್ವದ ಕೆಲಸವಿದ್ದರೂ ಅದನ್ನೆಲ್ಲ ಬದಿಗೊತ್ತಿ ಜನೇವರಿ ಒಂದರಂದು ಕೋರೆಗಾವಕ್ಕೆ ಬಂದು ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಿದ್ದರು.
ಹೀಗೆಲ್ಲ ಇದ್ದರೂ ಕೂಡ ಕೆಲವು ಸಮಯಸಾಧಕರು ಕೋರೆಗಾವ ಕದನದ ಬಗ್ಗೆ ಹೇಳುವುದೇನೆಂದರೆ `ಈ ಕದನ ನಮ್ಮದೇ ದೇಶದಲ್ಲಿಯ ನಮ್ಮದೇ ಬಂಧುಗಳ ವಿರುದ್ಧವಾಗಿತ್ತು ! ಆ ಕದನದ ಫಲವಾದರೂ ಏನು ?’ ಹೀಗೆ ಹೇಳುವವರಿಗೆ ಒಂದು ಸವಾಲನ್ನು ಈ ಸಂದರ್ಭದಲ್ಲಿ ಹಾಕಲೇಬೇಕೆನಿಸುತ್ತದೆ ; ಅಲ್ಲ ಸ್ವಾಮಿ, ತಮ್ಮ ಬಂಧುಗಳನ್ನು ಯಾರಾದರೂ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆಯೇ ? ತಮ್ಮ ಬಂಧುವಿನ ಹೆಣ್ಣುಮಗಳೊಬ್ಬಳ ಮಾನವನ್ನು ಕಳೆಯುತ್ತಾರೆಯೇ ? ತಮ್ಮ ಬಂಧುಗಳನ್ನು ಯಾರಾದರೂ ಅನ್ನ-ನೀರಿಗಾಗಿ ಚಡಪಡಿಸುವಂತೆ ಮಾಡುತ್ತಾರೆಯೇ ? ಸಾರ್ವಜನಿಕ ಜಾಗದಲ್ಲಿ ಅಡ್ಡಾಡಲು ನಿರ್ಬಂಧ ವಿಧಿಸಬಹುದೇ ? ತಮ್ಮ ಬಾಂಧವರನ್ನು ಯಾರಾದರೂ ಹೇಳಹೆಸರಿಲ್ಲದಂತೆ ನಾಶ ಮಾಡುವ ಕುತಂತ್ರ ಮಾಡಬಹುದೇ ? ತಾವೇ ಕೆಸರು ಎರಚಿ, ಅಪಹಾಸ್ಯ ಮಾಡಿ ನಗಬಹುದೇ ? ಈ ಪ್ರಕರಣಗಳು ನಡೆಯುತ್ತಲೇ ಇವೆ ಎಂದಾದರೆ ಅವರು ನಮ್ಮ ಬಂಧುಗಳು ಹೇಗಾಗುತ್ತಾರೆ ?
ಕೇವಲ ಬೆರಳೆಣಿಕೆಯಷ್ಟಿದ್ದ ಮಹಾರ ವೀರ ಯೋಧರು, ಪೇಶ್ವೆಗಳ ಬಲಾಢ್ಯ ಸೇನೆಯನ್ನು ಈ ಕೋರೆಗಾವ ಕದನದಲ್ಲಿ ಹೀನಾಯವಾಗಿ ಸೋಲಿಸಿದ್ದು ಸೋಜಿಗವಲ್ಲ. ಪೇಶ್ವೆಗಳಿಂದ ಉಂಟಾದ ಸಾಮಾಜಿಕ ಅನಿಷ್ಟ, ಅನ್ಯಾಯ ಮತ್ತು ಅಸ್ಪøಶ್ಯತೆಗಳಿಂದ ತಮಗಾದ ಶೋಷಣೆಗೆ ಪ್ರತಿಯಾಗಿ ಪ್ರತಿಕಾರ ಸಾಧಿಸಿದ ಈ ನಡೆ ಮಹಾರರ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ. ಕೋರೆಗಾವ ಕದನದ ಗೆಲುವು ಎಂದರೆ ಅನ್ಯಾಯದ ವಿರುದ್ಧ ಪಡೆದ ಗೆಲುವೇ ಆಗಿದೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಿಸುತ್ತಾರೆ. “ಬ್ರಿಟಿಷರ ಪರವಾಗಿ ಮಹಾರ ಯೋಧರು ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಮಹಾರ ಯೋಧರು ಬ್ರಿಟಿಷರ ಪರ ಯಾಕೆ ಹೋದರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜವೇ ಆಗಿದೆ. ಮಹಾರರು ಮತ್ತೇನು ಮಾಡಲು ಸಾಧ್ಯವಿತ್ತು ? ಹಿಂದುಗಳೆನಿಸಿಕೊಂಡವರು ಅವರನ್ನು ಕೀಳು ಎಂದು ಪರಿಗಣಿಸಿ ನಾಯಿ-ನರಿಗಳಿಗಿಂತಲೂ ಕಡೆಯಾಗಿ ವರ್ತಿಸಿದಾಗ ಆ ಅವಮಾನವನ್ನು ಸಹಿಸಿಕೊಂಡು ಎಷ್ಟು ದಿನ ಬದುಕುವುದು ? ಸ್ವಾಭಿಮಾನದ ನೆಲೆಯಲ್ಲಿ ಮತ್ತು ಹೊಟ್ಟೆಗೆ ಹಿಟ್ಟು ದೊರಕಿಸಿಕೊಳ್ಳಲು ಅವರು ಅನಿವಾರ್ಯವಾಗಿ ಬ್ರಿಟಿಷರ ಸೇನೆ ಸೇರಿದರೆಂಬುದನ್ನು ಪ್ರತಿಯೊಬ್ಬರು ಲಕ್ಷ್ಯದಲ್ಲಿಡಬೇಕು” ಎಂಬ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಮಹಾರ ಯೋಧರು ಮುಂಚಿನಿಂದಲೂ ಅಂದರೆ ಶಿವಾಜಿಯ ಕಾಲದಿಂದಲೂ ಮರಾಠಾ ಸೇನೆಯಲ್ಲಿ ಪ್ರಾಮಾಣಿಕತೆಯಿಂದ, ಪರಾಕ್ರಮದಿಂದ ದುಡಿದವರು. ಆದರೆ ಎರಡನೇ ಬಾಜಿರಾವ ಗದ್ದುಗೆ ಏರಿದಾಗ ಅನುಭವಿಸಿದ ಜಾತಿಯತೆಯ ತಾರತಮ್ಯತೆ ದಲಿತರನ್ನು ಸಹಜವಾಗಿಯೇ ಕೆರಳಿಸಿತ್ತು. ಆ ಸಂದರ್ಭದಲ್ಲಿ ಅದನ್ನು ಹೇಳಲಾಗಿತ್ತು ಕೂಡ.
ಎರಡನೇ ಬಾಜಿರಾವನ ಬದಲಿಗೆ ಬೇರೆಯವರು ಯಾರಾದರೂ ಸಮರ್ಥರು ಪೇಶ್ವೆಗಳಾದರೆ ಮಾತ್ರ ತಾವು ತಮ್ಮ ತಾಯ್ನೆಲವನ್ನು ಪ್ರಾಣವನ್ನೇ ಬಲಿ ಕೊಟ್ಟಾದರೂ ಕೂಡ ಕಾಪಾಡಲು ಸಿದ್ಧವಿರುವುದಾಗಿ ಪರಾಕ್ರಮಿ ಶಿದನಾಕ ಮನವಿ ಮೂಲಕ ಪ್ರಕಟಿಸಿದ್ದ. ಪೇಶ್ವೆ ಈ ವಿನಂತಿಯನ್ನು ಅತ್ಯಂತ ತಿರಸ್ಕಾರದಿಂದ ತಳ್ಳಿ ಹಾಕಿದ.
ಆದ್ದರಿಂದಲೇ ಮಹಾರ ಯೋಧರು ಬ್ರಿಟಿಷ ಪಡೆ ಸೇರಿ ಪೇಶ್ವೆಯನ್ನು ಮುಗಿಸಲು ಮುಂದಾದರು. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ ಯೋಧರು, ತಮ್ಮ ಮೇಲೆ ಅಮಾನವೀಯವಾದ ಬಂಧನಕಾರಿ ನಿಯಮಗಳಿಂದ ಅಸ್ಪøಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಕದನದಲ್ಲಿ ಮಣ್ಣು ಮುಕ್ಕಿಸಿದರು.
ಪ್ರತಿ ವರ್ಷ ಜನೇವರಿ ಒಂದರಂದು ದೇಶದ ಮೂಲೆ ಮೂಲೆಗಳಿಂದ ಬೃಹತ್ ಪ್ರಮಾಣದಲ್ಲಿ ಆಗಮಿಸುವ ದಲಿತರು ಮೊದಲು ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಾರೆ. ನಂತರ ಮೈದಾನದ ಆಟಗಳು ಆರಂಭಗೊಳ್ಳುತ್ತವೆ. ಮಧ್ಯಾಹ್ನ ಸಹಭೋಜನ ಕೂಡ ಇರುತ್ತದೆ. ಭೋಜನದ ನಂತರ ಒಂದಿಷ್ಟು ವಿಶ್ರಾಂತಿ ಪಡೆದುಕೊಂಡು ಸಂಜೆಯ ಇಳಿ ಹೊತ್ತಿನ ಸಮಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆಯಾಗುತ್ತದೆ. ಈ ಸಂದರ್ಭದಲ್ಲಿ ಸಭೆಯೂ ನಡೆಯುತ್ತದೆ.
ನಾವು ಆ ವೀರ ವಿಜಯಸ್ತಂಭದ ಹತ್ತಿರ ಹೋಗಿ ಗಂಟಲು ಹರಿಯುವಂತೆ ಘೋಷಣೆ ಕೂಗುತ್ತೇವೆ. ಇದನ್ನು ತಪ್ಪೆಂದು ನಾನು ಹೇಳುತ್ತಿಲ್ಲ. ಒಳ್ಳೆಯ ಸಂಗತಿಯೇ ಸರಿ ! ಆದರೆ ಅದೇ ಛಲದಿಂದ ; ಅದೇ ಮನಸ್ಸಿನಿಂದ ನಾವು ನಮ್ಮ ಪೂರ್ವಿಕರ ಪರಾಕ್ರಮವನ್ನು ಉಳಿಸಿಕೊಂಡು ಬರಬೇಕು ಎಂದು ಕೂಡ ನಮಗೆ ಆಗ ಅನ್ನಿಸಬೇಕಲ್ಲವೇ ? ಅನ್ನಿಸಿದರೂ ಆ ಪರಾಕ್ರಮ ಶಕ್ತಿ ಇಂದು ನಮ್ಮಲ್ಲಿ ಉಳಿದಿದೆಯೇ ? ಉಳಿಯದಿದ್ದರೆ ಅದಕ್ಕಾಗಿ ಚಿಂತಿಸುವ ಕನಿಷ್ಟ ಸೌಜನ್ಯವಾದರೂ ನಮಗೆ ಇರಬೇಡವೇ ? ಜೀವದ ಹಂಗು ತೊರೆದು ಅವರು ಅಂದರೆ ನಮ್ಮ ಪೂರ್ವಿಕರು ತಲಾ ನಲವತ್ತು ಸೈನಿಕರಿಗೆ ಒಬ್ಬ ಮಹಾರ ಯೋಧರಾಗಿ ಘನಘೋರ ಕದನದಲ್ಲಿ ವಿಜಯಿಯಾಗುತ್ತಾರೆ !
ಹಾಗಾದರೆ ಇಂದು ನಮ್ಮ ಯುದ್ಧ ಎಲ್ಲಿ ಆಗಬೇಕಿದೆ ? ಯಾರೊಂದಿಗೆ ಆಗಬೇಕಿದೆ ? 500 ಮಹಾರರು ಒಂದೇ ಜೀವವಾಗಿ ಹೋರಾಟ ಮಾಡಿದ್ದರಿಂದಲೇ ವಿಜಯಶ್ರೀ ಅವರಿಗೆ ಒಲಿದಳು. ಹಾಗಾದರೆ ಅಂಥ ಶಕ್ತಿ ಇಂದು ನಮ್ಮಲ್ಲಿ ಉಳಿದಿದೆಯೇ ? ನಾವು ಸ್ವಾರ್ಥಿ ಮತ್ತು ಢೋಂಗಿ ಮಂದಿಯಲ್ಲ ಅಲ್ಲವೇ ?
ನಮ್ಮ ಒಗ್ಗಟ್ಟಿನ (ಏಕತೆಯ) ಇತಿಹಾಸವನ್ನು ನಾವು ಮರೆತಿದ್ದೇವೆ ಅಲ್ಲವೇ ? ಇದರಿಂದಲೇ ಶೋಷಣೆ ಮಿತಿ ಮೀರುತ್ತದೆಯಲ್ಲವೇ ? ನಾವು ನಮ್ಮ ನಮ್ಮಲ್ಲಿಯೇ ಜಗಳವಾಡುತ್ತ ಕುಳಿತ್ತಿದ್ದೇವೆ ಎಂಬುದನ್ನು ಕಂಡಾಗ ಅನಿಸುತ್ತದೆ ; ಯಾರ್ಯಾರು ಕಲಿತರೋ ಅವರಲ್ಲಿಯ ಕೆಲವರು ತಮ್ಮ ಹೊಟ್ಟೆಯನ್ನಷ್ಟೇ ದೊಡ್ಡದಾಗಿಸಿಕೊಂಡರು ! ತಮ್ಮ ಸಮಾಜಕ್ಕೆ ತಾವೇನಾದರೂ ಋಣ ಸಂದಾಯ ಮಾಡಬೇಕಿದೆಯೇ ಎಂಬ ಅರಿವು ಅವರಲ್ಲಿ ಮಕಾಡೆ ಮಲಗಿ ಬಿಟ್ಟಿದೆ !
ನಾವು ನಮ್ಮ ಶೌರ್ಯದ ಇತಿಹಾಸವನ್ನೇ ಮರೆತಿದ್ದೇವೆ ; ಹತ್ತು ಜನ ಹತ್ತು ಕಡೆ ಮುಖ ಮಾಡಿ ನಿಂತಿದ್ದೇವೆ ! ಒಂದುಗೂಡುವ ; ಒಗ್ಗಟ್ಟು ಪ್ರದರ್ಶಿಸುವ ಮಾತೇ ಇಲ್ಲ ! ಅದರ ಪರಿಣಾಮವನ್ನೇ ನಾವು ಅನುಭವಿಸುತ್ತಿದ್ದೇವೆ. ಸಾಮಾನ್ಯನಾದ ನನ್ನನ್ನೂ ಸೇರಿಸಿ ನಮ್ಮವರೇ ಆಗಿರುವ ಮುಖಂಡರೂ ಇದಕ್ಕೆ ಹೊಣೆಗಾರರಾಗಿದ್ದಾರೆ ಎನಿಸುವುದಿಲ್ಲವೇ ?`ಅಸಹಾಯಕವಾಗಿ ಬದುಕುವುದಕ್ಕಿಂತ ಅವ್ವನ ಹೊಟ್ಟೆಯಲ್ಲಿಯೇ ಸತ್ತು ಹೋಗುವುದು ಮೇಲು’ ಎಂದು ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಹೇಳಿದ್ದರು.
ಇಂಥ ಮರ್ಮಭೇದಕ ಮಾತುಗಳೇನಾದರೂ ನಿಮಗೆ ತಟ್ಟಿದ್ದಾವೆಯೇ ? ಇಲ್ಲ ! ನಾವೆಲ್ಲ ತಟಸ್ಥರಾಗಿ ಸಂಬಳ ಪಡೆದು ಬೆಚ್ಚಗೆ ಹೊದ್ದುಕೊಂಡು ಮಲಗಿದ್ದೇವೆ ; ಎಚ್ಚರಾಗಿದ್ದೇವೆ ಎನ್ನುವ ಕೆಲವರು ವಿನಾಕರಣ ತಮ್ಮ ತಮ್ಮಲ್ಲಿ ಜಗಳ ಮಾಡಿಕೊಳ್ಳುತ್ತಿದ್ದಾರೆ ; ಇನ್ನೂ ಕೆಲವರು ಮತ್ಸರದಿಂದ ಪರಸ್ಪರ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ.
ಬಂಧುಗಳೇ,
ಈ ಸಂದರ್ಭದಲ್ಲಿ ನಾನು ವಿಶ್ವವಿದ್ಯಾಲಯ ಮಟ್ಟದಲ್ಲಿ ನಿಂತು ಒಂದು ಮಾತು ಹೇಳುತ್ತಿದ್ದೇನೆ. ನೀವೆಲ್ಲ ಸ್ವಾಭಿಮಾನಿ ದಲಿತರೇ ಆಗಿದ್ದರೆ, ಕಿಂಚಿತ್ತಾದರೂ ಪಡೆದುಕೊಂಡಿದ್ದರ ಋಣ ತೀರಿಸುವ ಕಾರ್ಯವನ್ನು ಯಾಕೆ ಮಾಡಬಾರದು ? ಶಿಕ್ಷಕೇತರ ಸಿಬ್ಬಂದಿಯನ್ನು ಬಿಡಿ ; ಯುಜಿಸಿ ಸಂಬಳ ಪಡೆಯುತ್ತಿರುವ ದಲಿತ ಪ್ರಾಧ್ಯಾಪಕರು ತಿಂಗಳಿಗೆ ಕೇವಲ ನೂರು ರುಪಾಯಿ ನೀಡಿ ಒಂದು ನಿಧಿಯನ್ನು ಆರಂಭಿಸಬೇಕು ; ಅಲ್ಲಿ ಸೇರುವ ಹಣ ದಲಿತ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸದುಪಯೋಗವಾಗಬೇಕು ಎನಿಸುವುದಿಲ್ಲವೆ ? ಒಳಜಾತಿಗಳನ್ನೇ ಮುಂದು ಮಾಡಿಕೊಂಡು ಪರಸ್ಪರ ದ್ವೇಷ-ಜಗಳ ಮರೆಯಬೇಕು ಎನಿಸುವುದಿಲ್ಲವೇ ? ವಿದ್ಯಾರ್ಥಿಗಳನ್ನೂ ಹಾದಿ ತಪ್ಪಿಸುವ ಚಾಳಿಯನ್ನು ಬಿಟ್ಟು ಕೂಡಿ ಬಾಳುವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲವೇ ? ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ.
ದಯವಿಟ್ಟು ಒಂದು ಮಾತನ್ನು ಮಾತ್ರ ನಾನು ಇಲ್ಲಿ ಹೇಳಬಯಸುತ್ತೇನೆ ; ಮೊಟ್ಟಮೊದಲು ನೀವು ನಿಮ್ಮ ನಿಮ್ಮ ಗೂಡುಗಳನ್ನು ಬಿಟ್ಟು ಹೊರಬನ್ನಿ ; ಪೊರೆಯನ್ನು ಹರಿದೊಗೆಯಿರಿ ಸೋದರ ಸಂಬಂಧಗಳನ್ನು ಬೆಸೆಯಲು ಮುಂದಾಗಿ ! ನಮ್ಮ ಪೂರ್ವಿಕರ ಇತಿಹಾಸದ ಅರಿವು ಇದ್ದುದ್ದೇ ಆದಲ್ಲಿ ಇದು ಅಸಾಧ್ಯವೇನೂ ಅಲ್ಲ ಎಂಬುದು ನನ್ನ ಅಚಲ ವಿಶ್ವಾಸವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
- ರುದ್ರಪ್ಪ ಹನಗವಾಡಿ
ನಾನು ಮದುವೆಯಾದ ಮೇಲೆ ನಮ್ಮೂರಿನಲ್ಲಿಯೇ 3-4 ಅಂತರ್ಜಾತಿ ಮದುವೆಗಳಾದವು. ಮೈಸೂರಿನಲ್ಲಿ ನಮ್ಮ ಜೊತೆಗಿದ್ದ ಪ್ರೊ. ಗೊಟ್ಟಿಗೆರೆ ಶಿವರಾಜು ಚನ್ನರಾಯ ಪಟ್ಟಣದಲ್ಲಿ ರಾಜ್ಯಶಾಸ್ತçದ ಅಧ್ಯಾಪಕನಾಗಿದ್ದ. ಅವನ ಸಹೋದ್ಯೋಗಿಗಳಾಗಿದ್ದ ನರಸಿಂಹಾಚಾರ್ ಇಂಗ್ಲಿಷ್ ಅಧ್ಯಾಪಕ ಮತ್ತು ಪ್ರೊ. ಸುಮತಿ ಎನ್. ಗೌಡ ಅಧ್ಯಾಪಕರಾಗಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು.
ಅವರನ್ನು ನೇರ ಬಿಆರ್‌ಪಿಗೆ ಕರೆತಂದು, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದನು. ನಾನು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೃಷ್ಣಪ್ಪನವರಿಗೆ ಸುದ್ದಿ ಮುಟ್ಟಿಸಿ, ಮದುವೆಯ ಏರ್ಪಾಡು ಮಾಡಿದೆ. ಹುಡುಗಿ ಒಕ್ಕಲಿಗ ಜಾತಿ, ಹುಡುಗ ಬ್ರಾಹ್ಮಣನಾಗಿದ್ದ. ಸಹೋದ್ಯೋಗಿಗಳ ಪ್ರೀತಿಯ ಮದುವೆ ಮಾಡಿದ ಪ್ರೊ. ಜಿ.ಬಿ. ಶಿವರಾಜು ನಂತರ ದಿನಗಳಲ್ಲಿ ಗೌಡ ಜಾತಿಗೆ ಸೇರಿದ ಸಂಬಂಧಿಕರಿಂದ ಅನೇಕ ರೀತಿಯ ಕಿರುಕುಳಕ್ಕೂ ಒಳಗಾಗಬೇಕಾಯಿತು. ಆದರೆ ಈ ದಂಪತಿಗಳು ಶಿವರಾಜು ಪರ ಇರಬೇಕಾದವರು ನಂತರದ ದಿನಗಳಲ್ಲಿ ಇವರುಗಳಿಂದಲೇ ಕಿರುಕುಳ ಅನುಭವಿಸುವಂತೆ ಆದುದು ವಿಪರ್ಯಾಸವೇ ಸರಿ. ಮಾಡಿದ ಉಪಕಾರ ಸ್ಮರಣೆ ನಮ್ಮ ವ್ಯಕ್ತಿತ್ವದಲ್ಲಿ ಇರದಿದ್ದರೆ, ಮನುಷ್ಯನಿಂದ ಮತ್ತಿನ್ನೇನನ್ನು ಮಾಡಲು ಸಾಧ್ಯ?
ಈ ಸರಣಿಯಲ್ಲಿ ಇಲ್ಲಿಯೇ ಇನ್ನೊಬ್ಬನ ಕಥೆ ಹೇಳಿ ಮುಗಿಸುವೆ. ಬಳ್ಳಾರಿ ಮೂಲದ ಒಬ್ಬ ಡಾಕ್ಟರ್ ಮತ್ತು ಅವರ ಕೈಕೆಳಗೆ ಇದ್ದ ನರ್ಸ್ ಇಬ್ಬರೂ ಪ್ರೀತಿಸಿದ್ದು, ಮದುವೆಯಾಗುವ ತಯಾರಿಯಲ್ಲಿದ್ದರು. ಶಿವಮೊಗ್ಗದ ಕಡೆಯ ಗೆಳೆಯರೊಬ್ಬರ ಮೂಲಕ ನನ್ನಲ್ಲಿಗೆ ಬಂದರು. ಇಬ್ಬರೂ ಮದುವೆಗೆ ಅರ್ಹ ವಯಸ್ಸಿನವರಾಗಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ, ಹುಡುಗಿಗೆ ನನ್ನದೇ ಮನೆ ವಿಳಾಸಕೊಟ್ಟು ಮದುವೆ ಮಾಡಿಸಿ ಕಳಿಸಿಕೊಟ್ಟೆವು. ನಾನಾಗ ಪ್ರೊಬೆಷನರಿ ತಹಸೀಲ್ದಾರ್‌ನಾಗಿ ತರೀಕೆರೆಯಲ್ಲಿದ್ದೆ. ಅಲ್ಲಿನ ಸಬ್ ರಿಜಿಸ್ಟ್ರಾರ್ ಚಳಗೇರಿ ಎನ್ನುವವರ ಜೊತೆ ಮಾತಾಡಿ ರಿಜಿಸ್ಟ್ರೇಷನ್ ಮುಗಿಸಿ ಕಳಿಸಿದೆ.
ಇದೆಲ್ಲ ಆಗಿ ಒಂದು ವಾರದಲ್ಲಿ ಹುಡುಗನ ಕಡೆಯ ನಿವೃತ್ತ ಸೇನಾ ಅಧಿಕಾರಿ ಬಂದು ಗಾಯತ್ರಿಯೊಬ್ಬಳೇ ಮನೆಯಲ್ಲಿದ್ದಾಗ ನನ್ನ ಬಗ್ಗೆ ಆಕ್ಷೇಪಿಸಿ ನಾನು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸಂಬಂಧಿ, ನಿನ್ನ ಗಂಡನ ಕೆಲಸ ಕೂಡ ಕಳೆದುಕೊಳ್ಳುವಂತೆ ಮಾಡುತ್ತೇನೆ’ ಎಂದೆಲ್ಲ ಕೂಗಾಡಿ ಹೋಗಿದ್ದ. ನಾನು ತರೀಕೆರೆಯಿಂದ ಬಂದಾಕ್ಷಣ ಇವಳು ಆತಂಕದಿAದ `ನಾವೇನೋ ಮದುವೆಯಾಗಿದ್ದೇವೆ. ಬೇರೆಯವರ ಮದುವೆ ಮಾಡಲು ಹೋಗಿ ಯಾಕೆ ತೊಂದರೆಗೊಳಗಾಗಬೇಕೆಂದು’ ಅಲವತ್ತುಕೊಂಡಳು.
ನಾನು ಈ ರೀತಿ ಮದುವೆಗಳ ಬಗ್ಗೆ ಖಚಿತ ತಿಳುವಳಿಕೆಯುಳ್ಳವನಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ನಡೆದಿದ್ದ ಶಿವರಾಮ ಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಕೃಷ್ಣಪ್ಪ, ಪ್ರೊ. ಎಂ. ನಂಜುಂಡಸ್ವಾಮಿ, ಪ್ರೊ. ರವಿವರ್ಮಕುಮಾರ್, ಹೀಗೆ ಮದುವೆಯಾದವರ ಬಗ್ಗೆ ಸಾಲು ಸಾಲು ಹೆಸರುಗಳನ್ನು ತಿಳಿಸಿ ಗಾಯತ್ರಿಗೆ ಸಮಾಧಾನ ಮಾಡುತ್ತಿದ್ದೆ.
ನಾವು ಮದುವೆಯಾಗಿ ಆರು ತಿಂಗಳು ಆಗಿರಲಿಲ್ಲ, ನಮ್ಮ ವಿದ್ಯಾರ್ಥಿಯೊಬ್ಬರ ಅಕ್ಕ ಪ್ಲಾರಿ ಬಿಆರ್‌ಪಿ ಹತ್ತಿರವಿರುವ ಜಂಕ್ಷನ್‌ನಿಂದ ಭದ್ರಾವತಿಗೆ ಸ್ಟೆಫೆಂಡಿಯರಿ ಗ್ರಾಜ್ಯುಯೇಟ್ ಸ್ಕೀಂನಲ್ಲಿ ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಸಿದ್ದಯ್ಯ ಭದ್ರಾವತಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಬಿಆರ್‌ಪಿ ಹತ್ತಿರದ ಶಾಂತಿನಗರದಿಂದ ದಿನವೂ ಬಸ್‌ನಲ್ಲಿ ಓಡಾಡುತ್ತಿರುವಾಗ ಪರಿಚಯವಾಗಿ ಪ್ರೀತಿಯ ಸೆಳೆತದಲ್ಲಿದ್ದರು. ಒಂದು ದಿನ ಬೆಳಗಿನ ಜಾವ ಹುಡುಗನ ಅಣ್ಣ ಬಂದು ಅವರಿಬ್ಬರ ಪ್ರೀತಿಗೆ ತಮ್ಮ ಒಪ್ಪಿಗೆ ಇದ್ದು ಹುಡುಗಿ ಕಡೆಯವರು ಒಪ್ಪುವುದಿಲ್ಲ, ಮದುವೆ ಮಾಡಿಸಬೇಕಾಗಿ ಕೋರಿದ.
ಹುಡುಗಿಯ ತಮ್ಮ ನನ್ನ ವಿಭಾಗದಲ್ಲಿಯೇ ನೇರ ವಿದ್ಯಾರ್ಥಿಯಾಗಿದ್ದ. ಈಗಾಗಲೇ ನಮ್ಮ ವಿಭಾಗದಲ್ಲಿ ಇವರು ಬರೀ ಇಂತದೇ ಕೆಲಸ ಮಾಡುತ್ತಿರುತ್ತಾನೆಂದು ಅಪಪ್ರಚಾರ ಬೇರೆ ಮಾಡುತ್ತಿದ್ದರು. ಆದರೂ ಎಲ್ಲ ಸೇರಿಕೊಂಡು ಇಂದಿರಾ ಕೃಷ್ಣಪ್ಪನವರಿಗೆ ತಿಳಿಸಿ ಭದ್ರಾವತಿಯಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ನಂತರ ಹೆಣ್ಣಿನ ಕಡೆಯವರು ನನ್ನನ್ನು ಹೊಡೆಯಲು ಜಂಕ್ಷನ್ ಎಂಬಲ್ಲಿ ಕಾಯುತ್ತಿದ್ದಾರೆ, ಇಲ್ಲಿ ಕಾಯುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದರು. ಆದರೆ ದಿನಗಳೆದಂತೆ ಹುಡುಗ-ಹುಡುಗಿಯ ಮದುವೆಯನ್ನು ಈರ್ವರ ಕಡೆಯವರು ಒಪ್ಪಿ ನಂತರ ನಮ್ಮ ಕಡೆಗೆ ದೂರುವುದನ್ನು ನಿಲ್ಲಿಸಿದರು. ಈಗ ಇಬ್ಬರೂ ತಮ್ಮ ವೃತ್ತಿಯಲ್ಲಿ ಮುಂದುವರಿದು ಮಕ್ಕಳೊಂದಿಗೆ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.
ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಕೃಷ್ಣಪ್ಪನವರು ಪ್ರಾರಂಭಿಸಿದ ಒಲವಿನ ಸರಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಾ, ಡಿ.ಎಸ್.ಎಸ್. ಮತ್ತು ರೈತ ಸಂಘದ ಅನೇಕ ಕಾರ್ಯಕರ್ತರು ತಮ್ಮ ಕಾರ್ಯಸೂಚಿಯಲ್ಲಿ ಕಾರ್ಯಗತ ಮಾಡಬೇಕಾದ ಜವಾಬ್ದಾರಿ ಎಂಬಂತೆ ಸರಳ ಅಂತರ್‌ಜಾತಿ ಮದುವೆಗಳನ್ನು ನಡೆಸುವಂತಾಯಿತು. ಅದು ಇಂದಿಗೂ ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ನಮ್ಮ ಬಿಆರ್‌ಪಿ ಸ್ನಾತಕೋತ್ತರ ಕೇಂದ್ರ
- ರುದ್ರಪ್ಪ ಹನಗವಾಡಿ
ದಟ್ಟ ಮಲೆನಾಡಲ್ಲದಿದ್ದರೂ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದು ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಶಾಖೆಗಳಾಗಲೀ, ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗುವ ಯಾವ ತಯಾರಿಯೂ ಕಾಣುತ್ತಿರಲಿಲ್ಲ.
ಪ್ರಾರಂಭದಿಂದ ಇದ್ದ, ನಾಲ್ಕು ವಿಭಾಗಗಳು ಮತ್ತು 15-16ಜನ ಅಧ್ಯಾಪಕರುಗಳಾಗಿದ್ದನ್ನು ಬಿಟ್ಟರೆ ವಿಕಾಸದ ಯಾವ ಲಕ್ಷಣಗಳೂ ಇರಲಿಲ್ಲ. ನಾನು ಬಂದು ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಮದುವೆ ಮತ್ತು ನಮಗೆ ಮಗುವಾದುದ್ದನ್ನು ಬಿಟ್ಟರೆ ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಯಲ್ಲಿ ಮತ್ತೇನೂ ಬೆಳವಣಿಗೆಗಳು ನಡೆಯಲಿಲ್ಲ.
ಸ್ವಂತ ವಿಷಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದಿದ್ದೆ. ಮದುವೆಯಾಗುವ ಯಾವ ಪೂರ್ವಭಾವಿ ತಯಾರಿ ಇಲ್ಲದೆ ತಕ್ಷಣ ಆಗಬೇಕಾದ ಕಾರಣ ಸುಮಾರು 15 ಸಾವಿರದಷ್ಟು ವಿಶ್ವಾಸಿಕ ಸ್ನೇಹಿತರಿಂದ ಸಾಲ ಮಾಡಿದ್ದೆ. ಹೊಸ ಸಂಸಾರ ಹೂಡಿಕೆಗೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇದ್ದರೂ ಸದ್ಯ ಪಿಡಬ್ಲೂಡಿ ಕ್ವಾಟ್ರಸ್ ಒಂದನ್ನು ಅಲಾಟ್‌ಮೆಂಟ್ ಮಾಡಿಸಿಕೊಂಡಿದ್ದೆ. ಹಾಗಾಗಿ ಮದುವೆಯಾದಾಕ್ಷಣ ಉಳಿದುಕೊಳ್ಳಲು ಅದು ಅನುಕೂಲವಾಗಿತ್ತು. ಪ್ರಭು ಮತ್ತು ರೈತಸಂಘದ ಮಂಜಪ್ಪ, ಸ್ಟೀಲ್ ಅಂಗಡಿ ಶಾಂತು ಎಲ್ಲ ಶಿವಮೊಗ್ಗದಲ್ಲಿ ಪ್ರಭುವಿನ ಸ್ನೇಹಿತರಾಗಿದ್ದರು. ಬೇಕಾದ ಕನಿಷ್ಠ ಪಾತ್ರೆಗಳನ್ನು ಅವನ ಸ್ನೇಹಿತನಿಂದಲೇ ಸಾಲವಾಗಿ ತಂದಿದ್ದೆ. ಉಳಿದಂತೆ ಅವಶ್ಯ ಬಿದ್ದಾಗ ನನ್ನ ಸ್ನೇಹಿತರಾಗಿದ್ದ ಪ್ರಭು, ಜಿಎನ್‌ಕೆ ಜೊತೆ ಸಾಲ ಮಾಡಿ ತೀರಿಸೋ ವ್ಯವಸ್ಥೆಯಲ್ಲಿ ದಿನಗಳು ಕಳೆಯುತ್ತಿದ್ದವು.
ಆರ್ಥಿಕ ಸಂಕಷ್ಟ ಬಿಟ್ಟರೆ ನಮ್ಮಿಬ್ಬರ ಹೊಂದಾಣಿಕೆ ಅನನ್ಯವಾಗಿತ್ತು. ಬೇಂದ್ರೆಯವರ ಕವನದ ಸಾಲಿನಂತೆ
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’ ಎಂಬಂತೆ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆವು.
ರಜಾ ದಿನಗಳಲ್ಲಿ ಬಿಆರ್‌ಪಿಯಲ್ಲಿ ಇದ್ದ ಟೆಂಟ್ ಸಿನಿಮಾಕ್ಕೆ ಇಲ್ಲವೇ ಶಿವಮೊಗ್ಗಕ್ಕೆ ರಾಜಕುಮಾರ್ ಅವರ ಹೊಸ ಸಿನಿಮಾಗಳಿಗೆ ಹೋಗಿ ಬರುತ್ತಿದ್ದೆವು. ಇಂದಿರಾ ಕೃಷ್ಣಪ್ಪನವರ ಭದ್ರಾವತಿ ಮನೆಗೆ ರಜಾ ದಿನಗಳಲ್ಲಿ ಹೋಗಿ ಬರುತ್ತಿದ್ದೆವು. ಮದುವೆಯಾದಾಕ್ಷಣ ಎಲ್ಲೂ ‘ಹನಿಮೂನ್’ಗೆಂದು ತಿರುಗಾಡಲು ಹೋಗಲಿಲ್ಲ. ಇದ್ದ ಸ್ನೇಹಿತರ ಮನೆ ಕಡೆಗೆ ಹೋಗಿ ಕಾಲ ಕಳೆದು ಬರುತ್ತಿದ್ದೆವು. ಕುಮ್ಮೂರ ಬಸವಣ್ಯಪ್ಪ, ಉಮಾ ಚಿತ್ರದುರ್ಗದಲ್ಲಿ ಇಬ್ಬರೂ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಮನೆಯಲ್ಲಿ ಉಳಿದು ಚಿತ್ರದುರ್ಗದ ಕೋಟೆಯನ್ನು ಇಬ್ಬರೇ ಸುತ್ತಿಕೊಂಡು ಬಂದು ಮಾರನೆ ದಿನ ಚಳ್ಳಕೆರೆಗೆ ಹೋಗಿದ್ದೆವು.
ಚಳ್ಳಕೆರೆಯಲ್ಲಿ ಗಾಯತ್ರಿಯ ಸೀನಿಯರ್ ಮತ್ತು ನನ್ನ ಹಳೇ ವಿದ್ಯಾರ್ಥಿನಿ ಶಾರದಾ, ಡಾ. ಚಂದ್ರಶೇಖರ್ ಎಂಬ ಅವರ ಸೋದರ ಮಾವನನ್ನು ಮದುವೆಯಾಗಿ ಅಲ್ಲಿನ ಪಿಹೆಚ್‌ಸಿಯಲ್ಲಿ ಡಾಕ್ಟರ್ ಆಗಿ ಕೆಲಸದಲ್ಲಿದ್ದರು. ನಾವಿದ್ದ ಎರಡೂ ದಿನಗಳಲ್ಲ್ಲಿ ಅಕ್ಕರೆಯಿಂದ ವಿಶೇಷ ಅಡುಗೆ ಮಾಡಿ ತುಂಬ ವಾತ್ಸಲ್ಯದಿಂದ ನಮ್ಮನ್ನು ಸತ್ಕರಿಸಿದ್ದಳು. ಅವರಿಬ್ಬರ ಅಕ್ಕರೆಯ ಆತಿಥ್ಯ ನಾವಿಬ್ಬರೂ ಎಂದೂ ಮರೆಯಲಾಗದ ನೆನಪಾಗಿ ಉಳಿದಿದೆ. ಆ ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಶಾರದ ಎಲ್ಲಿದ್ದಾರೆ ಎಂಬುದು ತಿಳಿಯದೆ 40 ವರ್ಷಗಳೇ ಕಳೆದು ಹೋಗಿದ್ದವು.
ಈಗ್ಗೆ ಎರಡು ವರ್ಷಗಳಲ್ಲಿ ಯರ‍್ಯಾರನ್ನೋ ಕೇಳಿ, ಅವರ ವಿಳಾಸ ಪಡೆದು ನಾವಿಬ್ಬರು ನೆನಪು ಮಾಡಿ ಮಾತಾಡಿದೆವು. ಮನೆಗೆ ಆಹ್ವಾನಿಸಿದ ಮೇರೆಗೆ ಇತ್ತೀಚೆಗಷ್ಟೆ ಬಂದು ಹೋಗಿದ್ದಳು. ಹೀಗೆ ಬಂದು ಹೋಗಿ 3 ತಿಂಗಳಲ್ಲಿ ಹೃದಯಾಘಾತದಿಂದ ಶಾರದಾ ತೀರಿಕೊಂಡಳು. ಇಷ್ಟು ದೀರ್ಘ ಕಾಲದ ಅಜ್ಞಾತವಾಸದ ಕಾರಣ ತಿಳಿದು ಬೇಸರವಾಗಿತ್ತು. ಶಾರದಾ-ಚಂದ್ರಶೇಖರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಅಕಾಲಿಕ ಮರಣ ಹೊಂದಿದ್ದಳು.
ಇನ್ನೊಬ್ಬಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗಂಡ ಡಾಕ್ಟರ್ ಆಗಿದ್ದರೂ ಮನೆಯಲ್ಲಿ ಒಂದು ಎಮ್ಮೆ ಸಾಕಿಕೊಂಡು ಮೇಯಿಸುತ್ತಾ ಗಂಡ ಮಕ್ಕಳಿಗೆ ಹಾಲು, ಮಜ್ಜಿಗೆ ಮಾಡಿ ಉಣಿಸುತ್ತಿದ್ದ ಶಾರದಾ ಅವರಿಗೆ ಬದುಕಿನಲ್ಲಿ ನೆಮ್ಮದಿಗಿಂತ ನೋವೇ ಜಾಸ್ತಿಯಾಗಿದ್ದೊಂದು ವಿಷಾದದ ಸಂಗತಿ. ಒಳ್ಳೆಯ ಮನಸ್ಸುಗಳಿಗೆ ನೋವುಗಳೇ ಹೆಚ್ಚೆಂಬುದು ಅವಳ ವಿಚಾರದಲ್ಲಿ ನಿಜವಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
- ರುದ್ರಪ್ಪ ಹನಗವಾಡಿ
ಇದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.
ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.
ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)
-
ದಿನದ ಸುದ್ದಿ5 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ4 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ5 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ3 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ4 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು