Connect with us

ರಾಜಕೀಯ

ರಾಜಕೀಯ ಪ್ರಜ್ಞೆ : ಭಾರತೀಯ ವಾಸ್ತವಿಕತೆ

Published

on

ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳನ್ನು ಆಕರ್ಷಿಸುವವರು ಸಿನಿಮಾ ನಟ-ನಟಿಯರು. ಸ್ಟಾರ್ ನಟರುಗಳ ಫೈಟ್‍ಗಳನ್ನೇ ನೋಡಿ ಬಣಗಳನ್ನು ಕಟ್ಟಿಕೊಂಡು ‘ನಮ್ಮ ಹೀರೋ ಹೀಗೆ, ಹಾಗೆ’ ಅಂತೆಲ್ಲಾ ಅವರು ಮಾತನಾಡಿಕೊಳ್ಳುತ್ತಾರೆ. ಹಿಂದಿನ ದಿನ ಸಿನಿಮಾ ನೋಡಿದ ನಂತರ ಮರುದಿನ ಆ ಬಗ್ಗೆ ಹೇಳಿಕೊಳ್ಳುವುದೆಂದರೆ ಅವರಿಗೆ ಪ್ರತಿಷ್ಠೆ. ಕಥೆಗಿಂತ ಫೈಟ್‍ಗಳ ವರ್ಣನೆಗೇ ಉತ್ಸಾಹ ಮೀಸಲು. ಒಬ್ಬ ಹೀರೋ ಫೈಟ್ ಬಗ್ಗೆ ಹೇಳಿಕೊಳ್ಳುವಾಗಲೇ ಇನ್ನೊಬ್ಬ ಹೀರೋನ ಅಭಿಮಾನಿ ಸ್ನೇಹಿತ ತಕರಾರು ಎತ್ತಿ ‘ನಮ್ಮ ಹೀರೋ ಮುಂದೆ ನಿಮ್ಮ ಹೀರೋ ಜೀರೋ’ ಎಂದ ಕೂಡಲೇ ಜಗಳ ತಾರಕಕ್ಕೇರುತ್ತದೆ. ಮಾತು ಬಿಡುವುದು, ಎಷ್ಟೋ ದಿವಸಗಳ ನಂತರ ಮತ್ತೆ ಮಾತನಾಡುವುದು, ಒಂದಷ್ಟು ಮುನಿಸು, ದ್ವೇಷ, ಸ್ನೇಹಗಳ ಮೂಲಗಳಾಗಿ ಆ ದಿನಗಳು ಕಳೆದುಹೋಗುತ್ತವೆ. ಅವರೊಳಗಿನ ಮುಗ್ಧತೆಯ ಕಾರಣಕ್ಕಾಗಿಯೇ ಅವರು ಮತ್ತೆ ಮಾತನಾಡಿಕೊಳ್ಳುತ್ತಾರೆ. ಸ್ನೇಹವನ್ನು ಉಳಿಸಿಕೊಳ್ಳುತ್ತಾರೆ. ಆ ಮುಗ್ಧತೆಯೊಂದಿಗೇ ಬೆಳವಣಿಗೆಯ ವಿವಿಧ ಹಂತಗಳು ದಾಟಿಕೊಂಡರೆ ಅವರು ಸರಿಯಾಗಿ ಆಲೋಚಿಸುವುದರ ಕಡೆಗೆ ವಾಲಿಕೊಳ್ಳುತ್ತಾರೆ. ಹಾಗಿದ್ದಾಗಲೇ ಪ್ರಶ್ನಿಸುವ ಸಹಜ ಪ್ರವೃತ್ತಿ ಜೀವಂತವಾಗಿರುತ್ತದೆ. ಮುಕ್ತಚಿಂತನೆಯ ಕಡೆಗಿನ ಹಾದಿ ತೆರೆದುಕೊಳ್ಳುತ್ತದೆ. ಆದರೆ, ಸಿನಿಮಾದೊಂದಿಗಿನ ಭಾವುಕ ನಂಟು ಕ್ರಮೇಣ ಅವರೊಳಗೆ ಅಂಧಾಭಿಮಾನ ಸೃಷ್ಟಿಸಿಬಿಡುತ್ತದೆ.

ಕಟೌಟ್, ಅದರ ಮೇಲೆ ಕ್ಷೀರಧಾರೆ ಎರೆಯುವ ಆರಾಧನಾ ಮನಸ್ಥಿತಿಯೂ ಹೀಗೆಯೇ ರೂಪುಗೊಳ್ಳುತ್ತದೆ. ಸಿನಿಮಾಭಿಮಾನ ಮತ್ತು ಸ್ಟಾರ್ ನಟರುಗಳನ್ನು ಆರಾಧಿಸುವ ಅಂಧಾಭಿಮಾನದ ಈ ಬಗೆಯ ಅತಿರೇಕದ ಮನೋಭಾವವನ್ನೇ ಜನಸಮೂಹದ ಆದ್ಯಗುಣಲಕ್ಷಣವಾಗಿಸಿಬಿಡುವ ಚಾಣಾಕ್ಷ ತಂತ್ರಗಾರಿಕೆಯನ್ನು ಭಾರತದ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ಪ್ರಯೋಗಿಸುತ್ತಿದೆ. ಮುಗ್ಧತೆ ಮತ್ತು ಸ್ನೇಹದ ವೈಶಾಲ್ಯತೆಯನ್ನು ಮೊಟಕುಗೊಳಿಸಿ ದೊಡ್ಡವರನ್ನು ಸಂಕುಚಿತರನ್ನಾಗಿಸುವ ರಾಜಕೀಯ ಸನ್ನಿವೇಶವನ್ನು ಅದು ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿದೆ. ಸರಿಯಾದ ರಾಜಕೀಯ ಪ್ರಜ್ಞೆಯನ್ನು ಆವಾಹಿಸಿಕೊಳ್ಳುವ ತುಡಿತವನ್ನೇ ಇಲ್ಲವಾಗಿಸಿಬಿಡುತ್ತಿದೆ. ತಮ್ಮ ಪ್ರಭಾವದ ಭರಾಟೆಯ ಅಲೆಯೊಂದಿಗೆ ಇಡೀ ಸಮಾಜದೊಳಗಿನ ಜನರ ಮನೋಶಿಲ್ಪವನ್ನು ಸಡಿಲಗೊಳಿಸಿ ದುರ್ಬಲಗೊಳಿಸುತ್ತಿರುವ ಮೂರು ಜನಪ್ರಿಯ ಕ್ಷೇತ್ರಗಳೆಂದರೆ ಸಿನಿಮಾ, ರಾಜಕಾರಣ ಮತ್ತು ಕ್ರಿಕೆಟ್. ಜನಪ್ರಿಯ ಸಿನಿಮಾಗಳು ಮತ್ತು ಕ್ರಿಕೆಟ್ ಉದ್ಯಮ ಇವೆರಡೂ ಉಂಟುಮಾಡುವ ಪ್ರಭಾವದ ಆವರಣದ ನಡುವೆಯೇ ರಾಜಕಾರಣ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುವ ತಂತ್ರಗಳನ್ನು ಹೆಣೆದುಕೊಳ್ಳುತ್ತದೆ. ಆ ತಂತ್ರಗಳು ಯಶಸ್ವಿಯಾಗಲೇಬೇಕು ಎಂಬ ಹಠದೊಂದಿಗೇ ಹೆಜ್ಜೆಯಿರಿಸುತ್ತದೆ. ಎದುರುಗೊಳ್ಳುವವರನ್ನು ಹಣಿಯುವ ನಿಗೂಢ ಕಾರ್ಯಸೂಚಿಗಳನ್ನು ಸಂದರ್ಭಕ್ಕೆ ಅನುಗುಣವಾಗಿ ರೂಪಿಸಿಕೊಂಡುಬಿಡುತ್ತದೆ. ಪರ್ಯಾಯ ನಾಯಕತ್ವದ ಉದಾತ್ತ ಅವಕಾಶಗಳನ್ನು ಹೊಸಕಿಹಾಕಿ ಜನರಿಂದ ಆಯ್ಕೆಯ ಐಚ್ಛಿಕತೆಯನ್ನೇ ಕಿತ್ತುಕೊಂಡುಬಿಡುತ್ತದೆ. ‘ಇವರಿಲ್ಲದಿದ್ದರೆ ಮತ್ತಿನ್ಯಾರು ಆಳುವವರು’ ಎಂಬ ಅವಲಂಬನಾ ದೃಷ್ಟಿಕೋನವನ್ನು ಅದೇ ಜನವಲಯದಲ್ಲಿಯೇ ನೆಲೆಗೊಳಿಸಿಬಿಡುತ್ತದೆ. ನಾಯಕರಲ್ಲದ ನಾಯಕರೆನ್ನಿಸಿಕೊಂಡವರನ್ನು ಆರಾಧಿಸುವವರ ಸಂಖ್ಯಾಬಾಹುಳ್ಯ ಹೆಚ್ಚಿಸಿಕೊಳ್ಳುತ್ತಲೇ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿರುತ್ತದೆ. ಆಗಲೇ ಜನರು ಮುಗ್ಧವಾಗಿ ನಂಬುತ್ತಲೇ ತಮ್ಮ ಯೋಚನೆಯ ಶಕ್ತಿಯನ್ನೇ ತ್ಯಜಿಸಿಬಿಡುತ್ತಾರೆ.

ತಾರ್ಕಿಕವೆನ್ನಿಸುವ ಪ್ರಜಾಸತ್ತಾತ್ಮಕ ವೈಚಾರಿಕ ಎಚ್ಚರದಲ್ಲಿ ರಾಜಕಾರಣವನ್ನು ಗ್ರಹಿಸುವ ಬದಲು ಹೊಗಳಿಕೆಗಳ ಅಭಿಪ್ರಾಯಗಳನ್ನು ಹೇಳಿಕೊಳ್ಳುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.
ಉನ್ನತ ಹುದ್ದೆಯಲ್ಲಿರುವ ಇಬ್ಬರು ಸ್ನೇಹಿತರ ನಡುವೆ ರಾಜಕಾರಣದ ಬಗ್ಗೆ ಚರ್ಚೆ ಶುರುವಾಗುತ್ತದೆ. ಒಬ್ಬರು ಸರ್ಕಾರವನ್ನು ಆರಾಧಿಸಿ ಮಾತನಾಡಿದರೆ ಮತ್ತೊಬ್ಬರು ಪ್ರಶ್ನೆಗಳನ್ನೆತ್ತಿ ಪ್ರತಿರೋಧದ ಮಾತುಗಳನ್ನಾಡುತ್ತಾರೆ.ಪ್ರತಿರೋಧವನ್ನೊಡ್ಡಿದವರು ಯಾರೇ ಅಧಿಕಾರಕ್ಕೆ ಬರಲಿ, ಅವರನ್ನು ಪ್ರಶ್ನಿಸುವ ಹಕ್ಕನ್ನು ನಾವೆಲ್ಲರೂ ಉಳಿಸಿಕೊಳ್ಳಲೇಬೇಕು ಎಂಬ ಅನಿವಾರ್ಯತೆಯನ್ನು ಮನಗಾಣಿಸಲು ಪ್ರಯತ್ನಿಸುತ್ತಾರೆ. ಆದರೆ, ಸರ್ಕಾರದ ಬಗ್ಗೆ ಆರಾಧನಾ ಮನೋಭಾವವಿರುವ ಸ್ನೇಹಿತ ಮಾತನಾಡುತ್ತಾ ಆಡುತ್ತಾ ಭಾವುಕ ವ್ಯಗ್ರತೆಯನ್ನು ಪ್ರದರ್ಶಿಸಲಾರಂಭಿಸುತ್ತಾನೆ. ಪ್ರತಿರೋಧಧ ವಿಚಾರಗಳನ್ನು ಪ್ರಸ್ತಾಪಿಸಿದ ಮಿತ್ರನ ಸಂಯಮದ ಸಂವಾದಕ್ಕೆ ಪ್ರತಿಯಾಗಿ ವಿತಂಡವಾದ ಮುಂದಿಡಲಾರಂಭಿಸುತ್ತಾನೆ. ತಾರ್ಕಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೇ ವ್ಯಕ್ತಿಗತ ಆರೋಪಗಳನ್ನು ಹೊರಿಸುವ ತಂತ್ರ ಅನುಸರಿಸುತ್ತಾನೆ. ಆ ಮೂಲಕ ತಾರ್ಕಿಕ ವೈಚಾರಿಕತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾನೆ. ಆ ಹೊತ್ತಿಗೆ ಇಬ್ಬರ ನಡುವೆ ಸೃಷ್ಟಿಯಾದ ಭಿನ್ನಾಭಿಪ್ರಾಯ ದ್ವೇಷಕ್ಕೆ ತಿರುಗುತ್ತದೆ. ಆ ದ್ವೇಷವು ಮುಂದುವರೆದು ಸ್ನೇಹ ಕೊನೆಗೊಳ್ಳುತ್ತದೆ. ರಾಜಕೀಯ ಪಕ್ಷಗಳು ತಮ್ಮೊಳಗಿನ ಅಧಿಕಾರದ ಹಸಿವನ್ನು ನೀಗಿಸಿಕೊಳ್ಳಲು ಇಂಥದ್ದೇ ಆದ ಮನೋವೈಕಲ್ಯವನ್ನು ನಿರೀಕ್ಷಿಸುತ್ತವೆ. ಇದನ್ನು ಸಾಮೂಹಿಕ ಗುಣಲಕ್ಷಣವಾಗಿಸಿ ತಮ್ಮ ಅಧಿಕಾರದ ಫಸಲು ತೆಗೆಯುವ ಉದ್ದೇಶ ಈಡೇರಿಸಿಕೊಳ್ಳುತ್ತವೆ. ನಿಜವಾದ ರಾಜಕೀಯ ಪ್ರಜ್ಞೆಯನ್ನು ಕೊಲೆಗೈದು ತಮ್ಮನ್ನು ವಿಜೃಂಭಿಸಿಕೊಳ್ಳುತ್ತವೆ.

ಪ್ರಸಕ್ತ ರಾಜಕೀಯ ವ್ಯವಸ್ಥೆಯ ಎಲ್ಲ ಮಿತಿಗಳನ್ನು ರಂಜನೀಯ ನೆಲೆಯಲ್ಲಿ ಸ್ವೀಕರಿಸುವ ವಿಚಿತ್ರವಾದ ಸಮೂಹಕೇಂದ್ರಿತ ಊನ ( Mass Syndrome)ಈಗಾಗಲೇ ವ್ಯಾಪಕವಾಗಿಬಿಟ್ಟಿದೆ. ನಮ್ಮಲ್ಲಿ ಅಧಿಕಾರ ರಾಜಕಾರಣದ ಕುರಿತಾದ ಚರ್ಚೆಗಳು ಇದರ ಸಂಕುಚಿತ ಜಾಲದ ಪರಿಧಿಯನ್ನು ದಾಟಿಕೊಳ್ಳುವುದೇ ಇಲ್ಲ. ಹಾಗೆ ದಾಟಿಕೊಳ್ಳದ ಹಾಗೆ ವಿತಂಡವಾದಿ ದೃಷ್ಟಿಕೋನಗಳು ಕಡಿವಾಣ ಬಿಗಿದುಬಿಡುತ್ತವೆ. ರಾಜಕಾರಣದೊಳಗಿನ ಊನಗಳೊಂದಿಗಿನ ಸಾಂಪ್ರದಾಯಿಕತೆಯನ್ನೇ ಮೌಲ್ಯವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಬೇರೂರಿಸಿಬಿಡುತ್ತವೆ. ದೇಶವೊಂದರೊಳಗೆ ಸಾಮಾಜಿಕ ವ್ಯವಸ್ಥೆಯೊಂದಿರುತ್ತದೆ. ಆಡಳಿತಾರೂಢ ಸರ್ಕಾರವು ಜಪಿಸುವ ಅಭಿವೃದ್ಧಿಯ ಮಂತ್ರದೊಂದಿಗೆ ತಳುಕು ಹಾಕಿಕೊಂಡ ಆರ್ಥಿಕತೆಯು ಈ ಸಾಮಾಜಿಕ ವ್ಯವಸ್ಥೆಯ ರೂಪು-ರೇಷೆಗಳಿಗೆ ಅನುಗುಣವಾಗಿರಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನು ಆಧರಿಸಿಯೇ ಇರುವುದಿಲ್ಲ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಹೆಚ್ಚಿಸುವಂತೆಯೇ ಆ ಆರ್ಥಿಕ ವ್ಯವಸ್ಥೆ ಬಲಿಷ್ಠವಾಗುತ್ತ ಸಾಗುತ್ತದೆ.
ಉಳ್ಳವರ ಪರವಾದ ಅರ್ಥವ್ಯವಸ್ಥೆಯ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸುವುದರ ಕಡೆಗೆ ರಾಜಕಾರಣ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಇಲ್ಲಿ ವ್ಯಕ್ತಿಗತ ಮಾನವ ಸಂಪನ್ಮೂಲದ ಸಮಗ್ರ ಅನ್ವಯಿಸುವಿಕೆಯ ಪರಿಕಲ್ಪನೆಗಳಿಗೆ ಆದ್ಯತೆ ಇರುವುದೇ ಇಲ್ಲ. ಸಾಮಾಜಿಕ ವ್ಯವಸ್ಥೆಯೊಳಗಿನ ಧಾರ್ಮಿಕತೆ ಮತ್ತು ಅದಕ್ಕನುಗುಣವಾಗಿಯೇ ಬೇರೂರಿಬಿಟ್ಟಿರುವ ಜಾತಿ-ಪಂಗಡಗಳ ಸಂಕೀರ್ಣ ಆವೃತ್ತಿಗಳು ಸಾಮಾಜಿಕ ಉದ್ಯಮಗಳಾಗಿಯೇ ಬೆಳೆಯುತ್ತಿರುತ್ತವೆ. ಅವುಗಳ ಸಮಾಜೋ-ಧಾರ್ಮಿಕ ಔದ್ಯಮಿಕತೆಯು ಮಠೀಯತೆ, ಮಠಾಧೀಶ ಮುಂದಾಳತ್ವ, ನಮ್ಮ ಜಾತಿಯವರಿಷ್ಟಿದ್ದೇವೆ ಎಂದು ತೋರಿಸಿಕೊಳ್ಳುವ ಬೃಹತ್ ಸಮಾವೇಶಗಳು, ಅವುಗಳಲ್ಲಿ ಭಾಗವಹಿಸಿ ತಮ್ಮ ಟೊಳ್ಳು ಮುಖಂಡತ್ವವನ್ನು ಮತ್ತೊಮ್ಮೆ ನವೀಕರಿಸಿಕೊಳ್ಳುವವರ ಉತ್ಸಾಹ ಮತ್ತು ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ಸದಾ ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಘೋಷಿಸುವ ಜನಪ್ರಿಯ ವಾಂಛೆಗಳ ಮೂಲಕ ದೃಢಪಡುತ್ತದೆ. ಆ ಮೂಲಕ ಧಾರ್ಮಿಕ ಜಡತ್ವ ಮತ್ತು ಜಾತಿ ವ್ಯವಸ್ಥೆ ಮತ್ತಷ್ಟು ನಿಚ್ಛಳವಾಗುತ್ತದೆ. ದಾರ್ಶನಿಕರ ವೈಚಾರಿಕ ಆಂದೋಲನಗಳು ಹರಡಿದ ಮನುಷ್ಯತ್ವದ ಪ್ರಭೆಯನ್ನು ತಡೆದು ವಿಚಿತ್ರ ಹಠದೊಂದಿಗೆ ರಾಜಕಾರಣವು ಕತ್ತಲನ್ನೇ ಶಾಶ್ವತವಾಗಿ ಪಸರಿಸಿಬಿಡುತ್ತದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗಿಬಿಡುತ್ತದೆ. ಆದರೆ ಹೀಗೆ ಸ್ಪಷ್ಟಪಡಿಸಿಕೊಳ್ಳುವ ಸಾಮೂಹಿಕ ಸಂಯಮ ಈಗ ಕಾಣೆಯಾಗಿದೆ.

ಆ ಸಾಮೂಹಿಕ ಸಂಯಮವಿಲ್ಲದಿದ್ದರೆ ಪ್ರಜೆಗಳೆನ್ನಿಸಿಕೊಂಡವರು ಬೆಲೆ ತೆರಲೇಬೇಕಾಗುತ್ತದೆ. ಸಮಸ್ಯೆಗಳನ್ನು ಸಹಿಸಿಕೊಳ್ಳುವುದಷ್ಟೇ ಅಲ್ಲದೇ ಅವುಗಳ ವರ್ತುಲದೊಳಗೆ ಸಿಲುಕಿಕೊಳ್ಳುವ ಅನಿವಾರ್ಯತೆಯ ಅಸಹಾಯಕತೆಯನ್ನೇ ಸಹಜಗುಣವಾಗಿಸಿಕೊಳ್ಳುವ ಉಮೇದಿನೊಂದಿಗೆ ಗುರುತಿಸಿಕೊಳ್ಳುವ ಒತ್ತಡವೂ ಸೃಷ್ಟಿಯಾಗುತ್ತದೆ. ಈ ಅಸಹಾಯಕತೆ ಎಷ್ಟು ಅಂತಸ್ಥವಾಗುತ್ತದೆ ಎಂದರೆ ಹೊಸದಾದ ಯಾವ ಚಿಂತನೆಯೂ ಒಪ್ಪಿತವೆನ್ನಿಸುವುದಿಲ್ಲ. ದೇಶೋದ್ಧಾರದ ಸಮಗ್ರ ಹೊಣೆಗಾರಿಕೆ ನಿಭಾಯಿಸಬೇಕಾದ ರಾಜಕೀಯ ಪಕ್ಷಗಳು ಜನರನ್ನು ಮತ್ತೆ ಅಸಹಾಯಕತೆಯ ಸಂಕುಚಿತ ಬಾವಿಯೊಳಗೆ ಬಂಧಿಸಿಡುವ ನಡೆಗಳೊಂದಿಗೆ ಇದ್ದುಬಿಡುವುದರ ಕಡೆಗೇ ಒಲವು ತೋರುತ್ತವೆ. ಈ ಕುರಿತ ಸುಳಿವುಗಳನ್ನು ಪಕ್ಷಗಳ ಮುಖಂಡರ ಹೇಳಿಕೆಗಳು, ಪ್ರತಿಹೇಳಿಕೆಗಳು, ಚುನಾವಣಾ ರಣತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಗೊತ್ತುಮಾಡಿಕೊಳ್ಳಬಹುದು.
ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತಾರೂಢ ಪಕ್ಷ ತಂತ್ರ ಹೆಣೆಯುವುದರ ಕಡೆಗೆ ಆದ್ಯತೆ ನೀಡುತ್ತಿರುವ ವಿವರಗಳು ಗಮನಕ್ಕೆ ಬರುತ್ತಲೇ ಇವೆ. ರಾಷ್ಟ್ರಾದ್ಯಂತ ಪ್ರತಿರೋಧದ ಅಲೆಯನ್ನು ಎಬ್ಬಿಸಬೇಕು ಎಂಬ ಉದ್ದೇಶದೊಂದಿಗೆ ಅಖಾಡಕ್ಕಿಳಿದಿರುವ ವಿರೋಧ ಪಕ್ಷ ಅಸ್ಪಷ್ಟ, ದ್ವಂದ್ವ ನಿಲುವುಗಳೊಂದಿಗೇ ಹೆಜ್ಜೆಯಿರಿಸುತ್ತಿರುವ ಸಂಗತಿಯೂ ಗೊತ್ತಾಗುತ್ತಿದೆ. ವಿರೋಧ ಪಕ್ಷದ ಯುವನೇತಾರನಿಗೆ ಸಂಬಂಧಿಸಿದಂತಹ ವಾಟ್ಸ್ಯಾಪ್ ವೀಡಿಯೋವೊಂದು ಹಲವರಿಗೆ ರಂಜನೆ ನೀಡುತ್ತಿದೆ. ಆ ನೇತಾರನ ಬಿಂಬವು ರೈತನೊಬ್ಬನೊಂದಿಗೆ ಸಂಭಾಷಿಸುತ್ತದೆ. ಗದ್ದೆಯಲ್ಲೆಲ್ಲ ಕೆಸರು ಎಂಬ ರೈತನುಡಿಗೆ ಪ್ರತಿಯಾಗಿ ಆ ನೇತಾರಬಿಂಬವು ‘ನಾವು ಅಧಿಕಾರಕ್ಕೆ ಬಂದರೆ ಗದ್ದೆಯಲ್ಲಿ ಟೈಲ್ಸ್ ಹಾಕಿಸುತ್ತೇವೆ’ ಎನ್ನುತ್ತದೆ. ತಮಾಷೆಯೆನ್ನಿಸಿ ಆ ಕ್ಷಣಕ್ಕೆ ಖುಷಿ ಪಡಬಹುದಾದ ಈ ತರಹದ ವಿಡಿಯೋಗಳ ವೀಕ್ಷಿಸುವಿಕೆ ಮತ್ತು ಇನ್ನೊಬ್ಬರಿಗೆ ರವಾನಿಸುವಿಕೆಯ ಕಾರ್ಯಗಳಲ್ಲಿಯೇ ಜನರು ನಿರತರಾಗಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಅಧಿಕಾರದಲ್ಲಿರುವವರು ಮತ್ತು ಅಧಿಕಾರದಲ್ಲಿರದೇ ಇರುವವರು ಪರಸ್ಪರರನ್ನು ಹೀಗೆ ರಂಜನೀಯವಾಗಿ ಕಾಲೆಳೆಯುತ್ತಾ ಜನರಿಗೆ ಖುಷಿ ನೀಡುತ್ತಾ ಈ ದೇಶದ ಬೆಳವಣಿಗೆಗೆ ಅಗತ್ಯವಾಗಿ ಆಗಬೇಕಾಗಿರುವುದು ಏನು ಎಂಬುದರ ಕುರಿತಾದ ತಾತ್ವಿಕ ಚರ್ಚೆಗಳ ಸಾಧ್ಯತೆಯನ್ನು ಉದ್ದೇಶಪೂರ್ವಕವಾಗಿ ತಡೆದುಬಿಡುತ್ತಿದ್ದಾರೆ. ಹೊಸ ಮಾಧ್ಯಮಗಳ ಪ್ರಭಾವ ಅವರ ಈ ಉದ್ದೇಶವನ್ನು ಈಡೇರಿಸಿಬಿಡುತ್ತಿದೆ. ಈ ಹಂತದಲ್ಲಿಯೇ ‘ನೀವ್ಯಾರ ಪರ’ ಎಂಬ ಪ್ರಶ್ನೆ ತಾರ್ಕಿಕತೆಯನ್ನು ಮುನ್ನೆಲೆಗೆ ತರುವ ಬದಲು ಆರಾಧನಾರೂಪದ ನಿಷ್ಠೆಯನ್ನು ನಿರೀಕ್ಷಿಸುತ್ತಿದೆ. ಆಡಳಿತಾರೂಢರ ಪರ ಎಂದರೆ ಸೇಫ್. ಇಲ್ಲದಿದ್ದರೆ ಗುಮಾನಿಗಳೇಳುತ್ತವೆ. ಮುಕ್ತವಾಗಿ ಸಮಸ್ಯೆ ಹೇಳಿಕೊಂಡಾಗಲೂ ಇಂಥವೇ ಗುಮಾನಿಗಳ ದಾಳಿಗೊಳಗಾಗುವ ಅಸಹಾಯಕತೆಗೆ ಪಕ್ಕಾಗಬೇಕಾಗುತ್ತದೆ. ಸಂವಿಧಾನದೊಳಗಿನ ಅಕ್ಷರಗಳು ಮತ್ತು ಅವುಗಳು ದಾಟಿಸುವ ಉದಾತ್ತ ಆಶಯಗಳು ಉಸಿರುಗಟ್ಟಿಸಿಕೊಳ್ಳುತ್ತವೆ. ಶಾಲಾ-ಕಾಲೇಜು ಹಂತಗಳಲ್ಲಿನ ಅಭಿಮಾನಿ ಮನೋಧರ್ಮ ದೊಡ್ಡವರಾದಾಗಲೂ ಉಳಿದುಕೊಂಡು ದೇಶವನ್ನೂ ಮತ್ತೆ ಮತ್ತೆ ಉಸಿರುಗಟ್ಟಿಸುತ್ತಿರುತ್ತದೆ.

(ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ
ಇ-ಮೇಲ್ ವಿಳಾಸ:
nkpadmanabh@gmail.com)

ದಿನದ ಸುದ್ದಿ

ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.

ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನೆರವು ಬರಬೇಕಿದೆ ಎಂದು ಹೇಳಿದರು. ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿದ್ದು, ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ 34 ಸಾವಿರ ಕೋಟಿ ರೂಪಾಯಿ ಮೀಸಲು : ಸಚಿವ ಡಾ.ಎಚ್.ಸಿ.ಮಹದೇವಪ್ಪ

Published

on

ಸುದ್ದಿದಿನ, ಹುಬ್ಬಳ್ಳಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ ಒಟ್ಟು 34ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಪರಿಶಿಷ್ಟ ಜಾತಿಗೆ 24 ಸಾವಿರ ಕೋಟಿ ರೂಪಾಯಿ, ಪಂಗಡಕ್ಕೆ 8ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. 40 ಇಲಾಖೆಗಳಿಗೆ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ವಿಶೇಷ ಘಟಕ ಯೋಜನೆಯ ಹಣವನ್ನು ಇತರೆ ಯಾವುದೇ ವಿಭಾಗಕ್ಕೂ ಬಳಕೆ ಮಾಡುವುದಿಲ್ಲ. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣವನ್ನು ವಿನಿಯೋಗಿಸಲಾಗುವುದು ಎಂದು ಡಾ.ಮಹದೇವಪ್ಪ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್‌ಟಿ ಮೊತ್ತ ಎಷ್ಟು ಗೊತ್ತಾ?!

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಒಟ್ಟು 1 ಲಕ್ಷ 59 ಸಾವಿರದ 69 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ.

35 ಸಾವಿರದ 794ಕೋಟಿ ರೂಪಾಯಿ ಕೇಂದ್ರೀಯ ಜಿಎಸ್‌ಟಿ, 83ಸಾವಿರದ 251 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಇದು ಒಳಗೊಂಡಿದೆ. 37 ಸಾವಿರದ 581 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆಗೆ ಹಾಗೂ 31 ಸಾವಿರದ 408ಕೋಟಿ ರೂಪಾಯಿಗಳನ್ನು ಸಮಗ್ರ ಸರಕು ಮತ್ತು ಸೇವಾ ತೆರಿಗೆ ಯಿಂದ ರಾಜ್ಯ ಸರಕು ಮತ್ತು ಸೇವಾ ತೆರಿಗೆಗೆ ಸರ್ಕಾರ ಇತ್ಯರ್ಥ ಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ5 days ago

ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ...

ದಿನದ ಸುದ್ದಿ6 days ago

ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ...

ದಿನದ ಸುದ್ದಿ6 days ago

ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ...

ದಿನದ ಸುದ್ದಿ7 days ago

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್

ಸುದ್ದಿದಿನ, ಬೆಂಗಳೂರು : ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡ ಹಾಗೂ ವಿವಿಧ ರೈತಪರ ಸಂಘಟನೆಗಳು ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಬಂದ್‌ಗೆ ಕರೆಕೊಟ್ಟಿವೆ....

ದಿನದ ಸುದ್ದಿ2 weeks ago

ಪರಿಸರ ಗಣೇಶ ಚತುರ್ಥಿ ಆಚರಣೆ | ಪಿಓಪಿ ಮೂರ್ತಿ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಡಾ. ವೆಂಕಟೇಶ್

ಸುದ್ದಿದಿನ,ದಾವಣಗೆರೆ : ಗಣೇಶ ಚತುರ್ಥಿಯಲ್ಲಿ ಪಿಓಪಿ ಗಣೇಶ ಮೂರ್ತಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಮಣ್ಣಿನಲ್ಲಿ ಮಾಡಿದ ಹಾಗೂ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವ ಮೂಲಕ ಪರಿಸರ...

ದಿನದ ಸುದ್ದಿ3 weeks ago

ಸೆ. 14 ರಿಂದ 21 ರವರೆಗೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿನ ಜಿಲ್ಲೆಯ ಆರು ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲ್ಲೂಕುವಾರು ಆಯೋಜಿಸಲಾಗಿದೆ. ಸೆಪ್ಟೆಂಬರ್ 14 ರಂದು ಹರಿಹರ ತಾಲ್ಲೂಕಿಗೆ ಸಂಬಂಧಿಸಿದಂತೆ ರಾಜನಹಳ್ಳಿಯ ಶ್ರೀ...

ದಿನದ ಸುದ್ದಿ3 weeks ago

ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ...

ದಿನದ ಸುದ್ದಿ3 weeks ago

ರೈತರಿಗೆ ಬಾಕಿ ಇದ್ದ ಪರಿಹಾರ ಹಣ ಬಿಡುಗಡೆ

ಸುದ್ದಿದಿನ, ಉ.ಕ: ಉತ್ತರ ಕರ್ನಾಟಕದ ಕಲ್ಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಕಳೆದ ಸಾಲಿನಲ್ಲಿ ತೊಗರಿ ಬೆಳೆ ಹಾನಿಯಿಂದ ನಷ್ಟ ಅನುಭವಿಸಿದ್ದ ರೈತರಿಗೆ ಬಾಕಿ...

ದಿನದ ಸುದ್ದಿ4 weeks ago

ನಾಡಿನ ಹಲವು ಕ್ಷೇತ್ರಗಳಿಗೆ ತರಳಬಾಳು ಹಿರಿಯ ಶ್ರೀಗಳ ಕೊಡುಗೆ ಅಪಾರ: ಡಾ. ನಾ ಲೋಕೇಶ ಒಡೆಯರ್

ಸುದ್ದಿದಿನ,ದಾವಣಗೆರೆ : ಹಿರಿಯ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳುವರು ಕಟ್ಟಿ ಬೆಳಸಿದ ಸಂಸ್ಥೆ ಮತ್ತು ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ಪೂಜ್ಯರು ಇಂದಿಗೂ ಎಂದೆಂದಿಗೂ...

ದಿನದ ಸುದ್ದಿ4 weeks ago

ಪರಿಶಿಷ್ಟ ಸಮುದಾಯಗಳ ಮೇಲೆ ಜಾತಿ ದೌರ್ಜನ್ಯ ಪ್ರಕರಣ; ಇಲಾಖೆಗಳ ನಡುವೆ ಸಮನ್ವಯದಿಂದ ಕಾರ್ಯನಿರ್ವಹಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಸುದ್ದಿದಿನ,ಬೆಂಗಳೂರು : ಪರಿಶಿಷ್ಟ ಸಮುದಾಯಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ತಗ್ಗಿಸುವುದರ ಜೊತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್, ಕಾನೂನು, ಸಮಾಜ ಕಲ್ಯಾಣ ಸೇರಿದಂತೆ...

Trending