ಲೈಫ್ ಸ್ಟೈಲ್
ಟ್ರೆಂಡ್ ಆಗುತ್ತಿದೆ ಫಂಕೀ ಫೇಸ್ ಮಾಸ್ಕ್ ಫ್ಯಾಷನ್..!
- ಚಿತ್ರಶ್ರೀ ಹರ್ಷ
ಜಗತ್ತಿನಲ್ಲಿ ಕರೋನ ಭೀತಿ ಮನೆ ಮಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿರುವುದು ಒಂದೆಡೆ ಆದರೆ, ಜನರ ದಿನನಿತ್ಯದ ಜೀವನೋಪಾಯಕ್ಕೆ ಪೆಟ್ಟು ಬಿದ್ದಿರುವುದೂ ಅಷ್ಟೇ ನಿಜ.ಕಾಲೇಜು-ಕಛೇರಿಗಳಿಗೆ ತೆರಳುವವರಂತೂ ಕರೋನ ಭೀತಿಗೆ ತತ್ತರಿಸುತ್ತಿರುವುದು ಸುಳ್ಳಲ್ಲ. ಇನ್ನು ಕೆಲವರು , ಆಗಿದ್ದು ಆಗಲೇ ಅಂತ ಕೆಲಸಕ್ಕೆಂದು ಹೊರ ಬರುವುದು ತಪ್ಪಿಲ್ಲ. ಈ ಎಲ್ಲದರ ನಡುವೆ ಸದ್ಯ ಅಧಿಕ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಫೇಸ್ ಮಾಸ್ಕ್ ತಯಾರಕರು. ಮಾಲಿನ್ಯ ಮತ್ತು ವೈರಸ್-ಬ್ಯಾಕ್ಟೀರಿಯಾ ಗಳಿಂದ ಸಂರಕ್ಷಿಸಿಕೊಳ್ಳಲು ಜನರು ಫೇಸ್ ಮಾಸ್ಕ್ ಮೊರೆ ಹೋಗುತ್ತಿದ್ದಾರೆ. ಎಲ್ಲದರಲ್ಲೂ ಫ್ಯಾಷನ್ ಹುಡುಕುವ ಫ್ಯಾಷನ್ ಪ್ರಿಯರು,ಫ್ಯಾನ್ಸೀ ಮತ್ತು ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಅರಸಿ ಹೊರಟಿದ್ದು , ಮಾರುಕಟ್ಟೆಯಲ್ಲಿ ಸದ್ಯ ಫಂಕೀ ಫೇಸ್ ಮಾಸ್ಕ್ ಭಾರೀ ಸದ್ದು ಮಾಡುತ್ತಿದೆ.
ಫ್ಯಾಷನ್ ಲೋಕಕ್ಕೂ ಕರೋನ ಬಿಸಿ ತಟ್ಟಿರುವುದು ಸುಳ್ಳಲ್ಲ. ಜನಸಂದಣಿ ನಿಷೇಧಿಸಿರುವ ಬೆನ್ನಲ್ಲೇ, ಫ್ಯಾಷನ್ ಫೇಸ್ ಮಾಸ್ಕ್ ಧರಿಸಿ ರಾಂಪ್ ಮೇಲೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ ಲಲನೆಯರು. ಸದ್ಯ ಫ್ಯಾಷನ್ ಶೋಗಳಲ್ಲಿ ಉಡುಪಿಗೆ ಮ್ಯಾಚ್ ಆಗುವ ಸ್ಟೈಲಿಶ್ ಹಾಗೂ ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಬೇರೂರಿದೆ .
ಕಲರ್ಫುಲ್ ಫೇಸ್ ಮಾಸ್ಕ್ ಟ್ರೆಂಡ್ ..!
ಹೆಚ್ಚುತ್ತಿರುವ ಕರೋನ , ಹೆಚ್1ಎನ್1 , ಫ್ಲೂ, ಮಾಲಿನ್ಯ ಭೀತಿಯಿಂದ ಫೇಸ್ ಮಾಸ್ಕ್ ಧರಿಸುವುದೂ ಇಂದಿನ ಜಗತ್ತಿನಲ್ಲಿ ಅನಿವಾರ್ಯ ವಾಗಿದೆ. ಎಲ್ಲದರಲ್ಲೂ ವಿಭಿನ್ನತೆ ಹಾಗೂ ಫ್ಯಾಷನ್ ಹುಡುಕುವ ಫ್ಯಾಷನ್ ಪ್ರಿಯರು, ಸಾಧಾರಣ ಫೇಸ್ ಮಾಸ್ಕ್ ಗಳನ್ನು ಒಲ್ಲೆ ಅಂದಿದ್ದು , ನೂತನ ಟ್ರೆಂಡೀ ಫೇಸ್ ಮಾಸ್ಕ್ಗಳಿಗೆ ನಾಂದಿ ಹಾಡಿದೆ. ಬಣ್ಣ ಬಣ್ಣದ, ವಿವಿಧ ಪ್ರಿಂಟ್ ಇರುವ , ಕಾರ್ಟೂನ್, ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಆವರಿಸಿಕೊಂಡಿದೆ.
ಕಾರ್ಟೂನ್ ಫೇಸ್ ಮಾಸ್ಕ್
ಚಿಕ್ಕ ಮಕ್ಕಳು ಫೇಸ್ ಮಾಸ್ಕ್ ಧರಿಸಲು ಇಷ್ಟ ಪಡದಿದ್ದರೆ ಕಾರಣ , ಅವರಲ್ಲಿ ಫೇಸ್ ಮಾಸ್ಕ್ ಕ್ರೇಜ್ ಹುಟ್ಟಿಸುವ ಕಾರ್ಟೂನ್ ಪ್ರಿಂಟ್ ನ ಫೇಸ್ ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಡೋರೇಮಾನ್, ಬಾರ್ಬೀ, ಮಿಕ್ಕಿ ಮೌಸ್, ಪೋಕೇಮಾನ್, ಅನಿಮಲ್ ಕಾರ್ಟೂನ್ ಪ್ರಿಂಟ್ ನ ಫೇಸ್ ಮಾಸ್ಕ್ ಮಕ್ಕಳನ್ನು ಆಕರ್ಷಿಸುತ್ತಿದೆ.
ಎಂಬ್ಲಿಷ್ಡ್ ಫೇಸ್ ಮಾಸ್ಕ್
ಇನ್ನು ಮುತ್ತು- ರತ್ನ, ಮಣಿಗಳಿಂದ ಕೂಡಿದ ಫೇಸ್ ಮಾಸ್ಕ್ ಫ್ಯಾಷನ್ ರಾಂಪ್ ಗಳಲ್ಲಿ ಹೆಚ್ಚು ಹೆಚ್ಚು ಸ್ಟೈಲಿಶ್ ಲುಕ್ ನೀಡುತ್ತದೆ. ಇತ್ತೀಚಿನ ಫ್ಯಾಷನ್ ಶೋಗಳಲ್ಲಂತೂ ಎಂಬ್ಲಿಷ್ಡ್ ಫೇಸ್ ಮಾಸ್ಕ್ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದ್ದು, ಯುವಪೀಳಿಗೆ ಯಲ್ಲಿ ಈ ಫೇಸ್ ಮಾಸ್ಕ್ ಗಳಿಗೆ ಭಾರೀ ಕ್ರೇಜ್ ಹುಟ್ಟಿ ಹಾಕಿದೆ.
ಗ್ಲಿಟರ್ ಪಾರ್ಟಿ ವೇರ್ ಫೇಸ್ ಮಾಸ್ಕ್
ವೈರಸ್-ಬ್ಯಾಕ್ಟೀರಿಯಾ ಗಳಿಗೆ ಹೆದರಿ ಪಾರ್ಟಿ ಮಾಡುವುದನ್ನು ನಿಲ್ಲಿಸಿದ್ದ ಪಾರ್ಟಿ ಪ್ರಿಯರು , ಈಗ ಮಾರುಕಟ್ಟೆ ಗೆ ಲಗ್ಗೆ ಇಟ್ಟಿರುವ ಗ್ಲಿಟರ್ ಫೇಸ್ ಮಾಸ್ಕ್ ಧರಿಸಿ ಪಾರ್ಟಿ ಫೀವರ್ ನ ಟೆಂಪರೇಚರ್ ಹೆಚ್ಚಿಸುತ್ತಿವೆ ಈ ಗ್ಲಿಟರ್ ಸೀಕ್ವೀನ್ ಫೇಸ್ ಮಾಸ್ಕ್ ಫ್ಯಾಷನ್!
ಫ್ಲೋರಲ್ ಪ್ರಿಂಟ್ ಫೇಸ್ ಮಾಸ್ಕ್
ಇನ್ನು ಸ್ಪ್ರಿಂಗ್ ಸೀಸನ್ ಶುರುವಾಗಿದ್ದು, ಸ್ಪ್ರಿಂಗ್ ಸ್ಪೆಷಲ್ ಔಟ್ಫಿಟ್ ಮಾರುಕಟ್ಟೆ ಗೆ ಲಗ್ಗೆ ಇಟ್ಟಿರುವ ಬೆನ್ನಲ್ಲೇ , ಫ್ಲೋರಲ್ ಪ್ರಿಂಟ್ ಫೇಸ್ ಮಾಸ್ಕ್ ಕೂಡಾ ಬೇಡಿಕೆ ಗಿಟ್ಟಿಸಿದಕೊಂಡಿದೆ. ಫ್ಲೋರಲ್ ಪ್ರಿಂಟ್ ಸ್ಪ್ರಿಂಗ್ ನ ಬಹು ಮುಖ್ಯ ಫ್ಯಾಷನ್ ಆಗಿದ್ದು, ಇದಕ್ಕೆ ಹೊಂದುವ ಫೇಸ್ ಮಾಸ್ಕ್ ಗಳೂ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.
ಫಂಕೀ ಫೇಸ್ ಮಾಸ್ಕ್ ಫ್ಯಾಷನ್
ಇನ್ನು ಟೀನೇಜ್ ಹುಡುಗಿಯರಿಗೆ ಫೇವರಿಟ್ ಅನಿಸಿದೆ ಫಂಕೀ ಫೇಸ್ ಮಾಸ್ಕ್ ಫ್ಯಾಷನ್. ಚಿತ್ರ ವಿಚಿತ್ರ, ತರಲೆ ಶೈಲಿಯ ಎಂಬೋಜ್ಡ್ ಫಂಕೀ ಫೇಸ್ ಮಾಸ್ಕ್ ಫ್ಯಾಷನ್ ಟ್ರೆಂಡ್ ಯುವಪೀಳಿಗೆ ಯಲ್ಲಿ ಹೆಚ್ಚಿದೆ .
ಸೈ-ಫೈ ಫೇಸ್ ಮಾಸ್ಕ್
ಇನ್ನೂ ಹೈ -ಫೈ ಸ್ಟೈಲಿಶ್ ಲುಕ್ ನೀಡುವ ದುಬಾರಿ ಬೆಲೆಯ ಸೈ-ಫೈ ಕ್ಲಾಸಿಕ್ ಫೇಸ್ ಮಾಸ್ಕ್ ಗಳು ಬಹಳ ಅದ್ದೂರಿ ಅವತರಣಿಕೆ ಗೆ ಸಾಕ್ಷಿ ಆಗಿದ್ದು, “ಕಾಸಿಗೆ ತಕ್ಕ ಕಜ್ಜಾಯ” , ಎಂಬಂತೆ ಬೆಲೆಗೆ ತಕ್ಕಂತೆ ಫೇಸ್ ಮಾಸ್ಕ್ ದೊರೆಯುತ್ತದೆ.
ಟಿಪ್ಸ್..!
ಮಾರುಕಟ್ಟೆಯಲ್ಲಿ ಡಿಸ್ಪೋಸಬಲ್ ಕಾರ್ಟೂನ್ ಹಾಗೂ ಪ್ರಿಂಟ್ ಫೇಸ್ ಮಾಸ್ಕ್ ದೊರೆಯುತ್ತಿದ್ದು , ಕೇವಲ ಒಂದು ಬಾರಿ ಅಷ್ಟೆ ಇದನ್ನು ಬಳಸಿ ಬಹುದಾಗಿದೆ. ಒಂದು ಬಾರಿ ಬಳಸಿದ ಮಾಸ್ಕ್ ಅನ್ನು ಮತ್ತೆ ಬಳಸಬೇಡಿ. ಮರುಬಳಕೆ ಮಾಡುವ ಬಹುದಾದ ಮಾಸ್ಕ್ ಅನ್ನು ಡೆಟಾಲ್ ಅಥವಾ ಡಿಸ್ ಇಂಫೆಕ್ಟಂಟ್ ಬಳಸಿ ಸ್ಟೆರಿಲೈಸ್ ಮಾಡಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
- ರುದ್ರಪ್ಪ ಹನಗವಾಡಿ
ನಾನು ಮದುವೆಯಾದ ಮೇಲೆ ನಮ್ಮೂರಿನಲ್ಲಿಯೇ 3-4 ಅಂತರ್ಜಾತಿ ಮದುವೆಗಳಾದವು. ಮೈಸೂರಿನಲ್ಲಿ ನಮ್ಮ ಜೊತೆಗಿದ್ದ ಪ್ರೊ. ಗೊಟ್ಟಿಗೆರೆ ಶಿವರಾಜು ಚನ್ನರಾಯ ಪಟ್ಟಣದಲ್ಲಿ ರಾಜ್ಯಶಾಸ್ತçದ ಅಧ್ಯಾಪಕನಾಗಿದ್ದ. ಅವನ ಸಹೋದ್ಯೋಗಿಗಳಾಗಿದ್ದ ನರಸಿಂಹಾಚಾರ್ ಇಂಗ್ಲಿಷ್ ಅಧ್ಯಾಪಕ ಮತ್ತು ಪ್ರೊ. ಸುಮತಿ ಎನ್. ಗೌಡ ಅಧ್ಯಾಪಕರಾಗಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು.
ಅವರನ್ನು ನೇರ ಬಿಆರ್‌ಪಿಗೆ ಕರೆತಂದು, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದನು. ನಾನು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೃಷ್ಣಪ್ಪನವರಿಗೆ ಸುದ್ದಿ ಮುಟ್ಟಿಸಿ, ಮದುವೆಯ ಏರ್ಪಾಡು ಮಾಡಿದೆ. ಹುಡುಗಿ ಒಕ್ಕಲಿಗ ಜಾತಿ, ಹುಡುಗ ಬ್ರಾಹ್ಮಣನಾಗಿದ್ದ. ಸಹೋದ್ಯೋಗಿಗಳ ಪ್ರೀತಿಯ ಮದುವೆ ಮಾಡಿದ ಪ್ರೊ. ಜಿ.ಬಿ. ಶಿವರಾಜು ನಂತರ ದಿನಗಳಲ್ಲಿ ಗೌಡ ಜಾತಿಗೆ ಸೇರಿದ ಸಂಬಂಧಿಕರಿಂದ ಅನೇಕ ರೀತಿಯ ಕಿರುಕುಳಕ್ಕೂ ಒಳಗಾಗಬೇಕಾಯಿತು. ಆದರೆ ಈ ದಂಪತಿಗಳು ಶಿವರಾಜು ಪರ ಇರಬೇಕಾದವರು ನಂತರದ ದಿನಗಳಲ್ಲಿ ಇವರುಗಳಿಂದಲೇ ಕಿರುಕುಳ ಅನುಭವಿಸುವಂತೆ ಆದುದು ವಿಪರ್ಯಾಸವೇ ಸರಿ. ಮಾಡಿದ ಉಪಕಾರ ಸ್ಮರಣೆ ನಮ್ಮ ವ್ಯಕ್ತಿತ್ವದಲ್ಲಿ ಇರದಿದ್ದರೆ, ಮನುಷ್ಯನಿಂದ ಮತ್ತಿನ್ನೇನನ್ನು ಮಾಡಲು ಸಾಧ್ಯ?
ಈ ಸರಣಿಯಲ್ಲಿ ಇಲ್ಲಿಯೇ ಇನ್ನೊಬ್ಬನ ಕಥೆ ಹೇಳಿ ಮುಗಿಸುವೆ. ಬಳ್ಳಾರಿ ಮೂಲದ ಒಬ್ಬ ಡಾಕ್ಟರ್ ಮತ್ತು ಅವರ ಕೈಕೆಳಗೆ ಇದ್ದ ನರ್ಸ್ ಇಬ್ಬರೂ ಪ್ರೀತಿಸಿದ್ದು, ಮದುವೆಯಾಗುವ ತಯಾರಿಯಲ್ಲಿದ್ದರು. ಶಿವಮೊಗ್ಗದ ಕಡೆಯ ಗೆಳೆಯರೊಬ್ಬರ ಮೂಲಕ ನನ್ನಲ್ಲಿಗೆ ಬಂದರು. ಇಬ್ಬರೂ ಮದುವೆಗೆ ಅರ್ಹ ವಯಸ್ಸಿನವರಾಗಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ, ಹುಡುಗಿಗೆ ನನ್ನದೇ ಮನೆ ವಿಳಾಸಕೊಟ್ಟು ಮದುವೆ ಮಾಡಿಸಿ ಕಳಿಸಿಕೊಟ್ಟೆವು. ನಾನಾಗ ಪ್ರೊಬೆಷನರಿ ತಹಸೀಲ್ದಾರ್‌ನಾಗಿ ತರೀಕೆರೆಯಲ್ಲಿದ್ದೆ. ಅಲ್ಲಿನ ಸಬ್ ರಿಜಿಸ್ಟ್ರಾರ್ ಚಳಗೇರಿ ಎನ್ನುವವರ ಜೊತೆ ಮಾತಾಡಿ ರಿಜಿಸ್ಟ್ರೇಷನ್ ಮುಗಿಸಿ ಕಳಿಸಿದೆ.
ಇದೆಲ್ಲ ಆಗಿ ಒಂದು ವಾರದಲ್ಲಿ ಹುಡುಗನ ಕಡೆಯ ನಿವೃತ್ತ ಸೇನಾ ಅಧಿಕಾರಿ ಬಂದು ಗಾಯತ್ರಿಯೊಬ್ಬಳೇ ಮನೆಯಲ್ಲಿದ್ದಾಗ ನನ್ನ ಬಗ್ಗೆ ಆಕ್ಷೇಪಿಸಿ ನಾನು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸಂಬಂಧಿ, ನಿನ್ನ ಗಂಡನ ಕೆಲಸ ಕೂಡ ಕಳೆದುಕೊಳ್ಳುವಂತೆ ಮಾಡುತ್ತೇನೆ’ ಎಂದೆಲ್ಲ ಕೂಗಾಡಿ ಹೋಗಿದ್ದ. ನಾನು ತರೀಕೆರೆಯಿಂದ ಬಂದಾಕ್ಷಣ ಇವಳು ಆತಂಕದಿAದ `ನಾವೇನೋ ಮದುವೆಯಾಗಿದ್ದೇವೆ. ಬೇರೆಯವರ ಮದುವೆ ಮಾಡಲು ಹೋಗಿ ಯಾಕೆ ತೊಂದರೆಗೊಳಗಾಗಬೇಕೆಂದು’ ಅಲವತ್ತುಕೊಂಡಳು.
ನಾನು ಈ ರೀತಿ ಮದುವೆಗಳ ಬಗ್ಗೆ ಖಚಿತ ತಿಳುವಳಿಕೆಯುಳ್ಳವನಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ನಡೆದಿದ್ದ ಶಿವರಾಮ ಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಕೃಷ್ಣಪ್ಪ, ಪ್ರೊ. ಎಂ. ನಂಜುಂಡಸ್ವಾಮಿ, ಪ್ರೊ. ರವಿವರ್ಮಕುಮಾರ್, ಹೀಗೆ ಮದುವೆಯಾದವರ ಬಗ್ಗೆ ಸಾಲು ಸಾಲು ಹೆಸರುಗಳನ್ನು ತಿಳಿಸಿ ಗಾಯತ್ರಿಗೆ ಸಮಾಧಾನ ಮಾಡುತ್ತಿದ್ದೆ.
ನಾವು ಮದುವೆಯಾಗಿ ಆರು ತಿಂಗಳು ಆಗಿರಲಿಲ್ಲ, ನಮ್ಮ ವಿದ್ಯಾರ್ಥಿಯೊಬ್ಬರ ಅಕ್ಕ ಪ್ಲಾರಿ ಬಿಆರ್‌ಪಿ ಹತ್ತಿರವಿರುವ ಜಂಕ್ಷನ್‌ನಿಂದ ಭದ್ರಾವತಿಗೆ ಸ್ಟೆಫೆಂಡಿಯರಿ ಗ್ರಾಜ್ಯುಯೇಟ್ ಸ್ಕೀಂನಲ್ಲಿ ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಸಿದ್ದಯ್ಯ ಭದ್ರಾವತಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಬಿಆರ್‌ಪಿ ಹತ್ತಿರದ ಶಾಂತಿನಗರದಿಂದ ದಿನವೂ ಬಸ್‌ನಲ್ಲಿ ಓಡಾಡುತ್ತಿರುವಾಗ ಪರಿಚಯವಾಗಿ ಪ್ರೀತಿಯ ಸೆಳೆತದಲ್ಲಿದ್ದರು. ಒಂದು ದಿನ ಬೆಳಗಿನ ಜಾವ ಹುಡುಗನ ಅಣ್ಣ ಬಂದು ಅವರಿಬ್ಬರ ಪ್ರೀತಿಗೆ ತಮ್ಮ ಒಪ್ಪಿಗೆ ಇದ್ದು ಹುಡುಗಿ ಕಡೆಯವರು ಒಪ್ಪುವುದಿಲ್ಲ, ಮದುವೆ ಮಾಡಿಸಬೇಕಾಗಿ ಕೋರಿದ.
ಹುಡುಗಿಯ ತಮ್ಮ ನನ್ನ ವಿಭಾಗದಲ್ಲಿಯೇ ನೇರ ವಿದ್ಯಾರ್ಥಿಯಾಗಿದ್ದ. ಈಗಾಗಲೇ ನಮ್ಮ ವಿಭಾಗದಲ್ಲಿ ಇವರು ಬರೀ ಇಂತದೇ ಕೆಲಸ ಮಾಡುತ್ತಿರುತ್ತಾನೆಂದು ಅಪಪ್ರಚಾರ ಬೇರೆ ಮಾಡುತ್ತಿದ್ದರು. ಆದರೂ ಎಲ್ಲ ಸೇರಿಕೊಂಡು ಇಂದಿರಾ ಕೃಷ್ಣಪ್ಪನವರಿಗೆ ತಿಳಿಸಿ ಭದ್ರಾವತಿಯಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ನಂತರ ಹೆಣ್ಣಿನ ಕಡೆಯವರು ನನ್ನನ್ನು ಹೊಡೆಯಲು ಜಂಕ್ಷನ್ ಎಂಬಲ್ಲಿ ಕಾಯುತ್ತಿದ್ದಾರೆ, ಇಲ್ಲಿ ಕಾಯುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದರು. ಆದರೆ ದಿನಗಳೆದಂತೆ ಹುಡುಗ-ಹುಡುಗಿಯ ಮದುವೆಯನ್ನು ಈರ್ವರ ಕಡೆಯವರು ಒಪ್ಪಿ ನಂತರ ನಮ್ಮ ಕಡೆಗೆ ದೂರುವುದನ್ನು ನಿಲ್ಲಿಸಿದರು. ಈಗ ಇಬ್ಬರೂ ತಮ್ಮ ವೃತ್ತಿಯಲ್ಲಿ ಮುಂದುವರಿದು ಮಕ್ಕಳೊಂದಿಗೆ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.
ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಕೃಷ್ಣಪ್ಪನವರು ಪ್ರಾರಂಭಿಸಿದ ಒಲವಿನ ಸರಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಾ, ಡಿ.ಎಸ್.ಎಸ್. ಮತ್ತು ರೈತ ಸಂಘದ ಅನೇಕ ಕಾರ್ಯಕರ್ತರು ತಮ್ಮ ಕಾರ್ಯಸೂಚಿಯಲ್ಲಿ ಕಾರ್ಯಗತ ಮಾಡಬೇಕಾದ ಜವಾಬ್ದಾರಿ ಎಂಬಂತೆ ಸರಳ ಅಂತರ್‌ಜಾತಿ ಮದುವೆಗಳನ್ನು ನಡೆಸುವಂತಾಯಿತು. ಅದು ಇಂದಿಗೂ ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.
ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ
ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ.ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಇದು ಅರ್ಧ ಸತ್ಯ; ಏಕೆಂದರೆ ನಾವು ಮನಸ್ಸು ಮಾಡಿದರೆ ಇದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿದೆ. ಯಾವ ಕಾರಣದಿಂದ ಅಸ್ತಮಾ ಸಮಸ್ಯೆ ಬಂದಿದ್ದರೂ ನಮ್ಮ ಜೀವನ ಶೈಲಿ ಮತ್ತು ದಿನಚರಿಯ ಕ್ರಿಯೆಗಳು ಸರಿಯಾಗಿದ್ದರೆ ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ. ಅತ್ಯುತ್ತಮ ಉದಾಹರಣೆ ಎಂದರೆ ಪ್ರಾಣಾಯಾಮ.
ಭಸ್ತ್ರಿಕಾ, ಕಪಾಲಭಾತಿ, ನಾಡಿಶೋಧನ, ಉಜ್ಜಾಯಿ, ಬಂಧಗಳಂತಹ ಪ್ರಾಣಾಯಾಮದ ಕ್ರಿಯೆಗಳನ್ನು ನಿತ್ಯವೂ ತಪ್ಪದೇ ಅಭ್ಯಾಸ ಮಾಡಿದರೆ ನಮ್ಮ ಶ್ವಾಸಾಂಗವ್ಯೂಹದ ಶಕ್ತಿ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ ಸುಲಭಕ್ಕೆ ಅಸ್ತಮಾ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ಅಸ್ತಮಾ ಖಾಯಿಲೆಯಲ್ಲಿ ಸೂಕ್ಷ್ಮ ಶ್ವಾಸನಾಳಗಳಲ್ಲಿ ಹೆಚ್ಚಾದ ಲೋಳೆಯ ಸ್ರವಿಸುವಿಕೆಯ ಕಾರಣ ನಾಳಗಳು ಕಿರಿದಾಗಿ ಉಸಿರಾಟಕ್ಕೆ ಕಷ್ಟವಾಗುತ್ತದೆ.
ಇದರಿಂದ ಹೃದಯ, ಶ್ವಾಸಕೋಶ, ಮೆದುಳು ಮತ್ತು ಇಡೀ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ತಕ್ಷಣ ಸಮಸ್ಯೆ ಶಮನವಾಗಲು ಆಧುನಿಕ ವೈದ್ಯ ಪದ್ಧತಿಯಲ್ಲಿ ಹೇಳಿದ ಔಷಧಗಳನ್ನು ಅಥವಾ ಇನ್ಹೇಲರ್ ಗಳನ್ನು ಬಳಸುವುದು ಒಳ್ಳೆಯದೇ. ಆದರೆ ಶಾಶ್ವತ ಪರಿಹಾರಕ್ಕಾಗಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವಿವರಿಸಿರುವ ಚಿಕಿತ್ಸೆಗಳ ಮೊರೆ ಹೋಗಲೇಬೇಕು.
ಆಸನ, ಪ್ರಾಣಾಯಾಮ, ಜಲನೇತಿ, ಸೂತ್ರನೇತಿಯಂತಹ ಕ್ರಿಯೆಗಳನ್ನು ನಿಯಮಿತವಾಗಿ ಅಭ್ಯಾಸದಲ್ಲಿ ಇಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಆಯುರ್ವೇದ ಹೇಳಿದ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಸ್ತಮಾ ಹತೋಟಿಗೆ ಬರುತ್ತದೆ ಮತ್ತು ಆನುವಂಶಿಕವಾಗಿ ಬರುವ ಸಾಧ್ಯತೆ ಇದ್ದರೂ ಅದನ್ನು ತಡೆಗಟ್ಟುತ್ತದೆ. ಅಪರೂಪಕ್ಕೆ ಮಾತ್ರ ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳನ್ನು ಅಂದರೆ ಕರಿದ ಪದಾರ್ಥಗಳು ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕೇ ಹೊರತು ಸಾಮಾನ್ಯವಾಗಿ ನಿತ್ಯವೂ ಲಘು ಭೋಜನವನ್ನೇ ಮಾಡಬೇಕು.
ಇದರಿಂದ ನಮ್ಮ ಶ್ವಾಸಕೋಶದ ಸೂಕ್ಷ್ಮನಾಳಗಳಲ್ಲಿ ವ್ಯತಿರಿಕ್ತ ಬದಲಾವಣೆ ಆಗುವುದನ್ನು ತಡೆಯಬಹುದು. ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲುನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಮಾಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ತುಪ್ಪ, ಕರಿದ ಪದಾರ್ಥಗಳು, ಮಾಂಸಾಹಾರಗಳನ್ನು ತ್ಯಜಿಸಲೇಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದೂವರೆ ಘಂಟೆ ಬಿಟ್ಟು ಮಲಗಬೇಕು.
ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸ್ಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ಪ್ರತಿ ಬಾರಿ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಕೂಡಾ ಹತೋಟಿಯಲ್ಲಿರುತ್ತದೆ.
ದೀರ್ಘಾವಧಿಯಿಂದ ಇರುವ ಅಸ್ತಮಾ ರೋಗಿಗಳಿಗೆ ಕೆಲವೊಮ್ಮೆ ಒಳರೋಗಿಯಾಗಿದ್ದು ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗಳನ್ನು ಪಡೆದು ಗುಣಪಡಿಸಿಕೊಳ್ಳಬೇಕಾಗುತ್ತದೆ. ಅಸ್ತಮಾ ಸಂಪೂರ್ಣವಾಗಿ ಗುಣವಾದ ಮೇಲೆಯೂ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ ಕೆಲವು ಕಾಲದ ನಂತರ ಮರುಕಳಿಸುವ ಸಾಧ್ಯತೆ ಇರುತ್ತದೆ. ಅಸ್ತಮಾ ತೀವ್ರಾವಸ್ಥೆಯಲ್ಲಿದ್ದಾಗ ಸಾಧ್ಯವಾದಷ್ಟೂ ಬೇಗ ಆಸ್ಪತ್ರೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆ ತೆಗೆದುಕೂಳ್ಳಬೇಕು. ಉಸಿರಾಟದ ತೊಂದರೆಗಳೆಲ್ಲವೂ ಅಸ್ತಮಾ ಅಲ್ಲ. ಹಾಗಾಗಿ ವೈದ್ಯರ ಭೇಟಿ ಮಾಡದೇ ಅಸ್ತಮಾ ಎಂದು ತೀರ್ಮಾನಿಸಿ ಮನೆಮದ್ದುಗಳನ್ನಾಗಲೀ ಔಷಧ ಸೇವನೆಯನ್ನಾಗಲೀ ಮಾಡಬಾರದು.(ಬರಹ-ಡಾ ವೆಂಕಟ್ರಮಣ ಹೆಗಡೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ5 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ6 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ4 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ5 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು
-
ದಿನದ ಸುದ್ದಿ5 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ