Connect with us

ಲೈಫ್ ಸ್ಟೈಲ್

ಮೊಬೈಲ್ ಜಗತ್ತು ; ಸಹನೆಗೆ‌ ಕುತ್ತು..!

Published

on

  • ಹಿರಿಯೂರು ಪ್ರಕಾಶ್

ನಿಮ್ಮ ಕೈಯ್ಯಲ್ಲಿ ಮೊಬೈಲ್ ಇಲ್ಲದೇ ಅಥವಾ ಅದನ್ನು ಉಪಯೋಗಿಸದೇ ಎಷ್ಟು ಸಮಯ ಹಾಗೇ ಸುಮ್ಮನೇ ಇರಬಲ್ಲಿರಿ ? ಎಲ್ಲಾದರೂ ಹೊರಗೆ ಹೋದಾಗ, ಯಾರಿಗಾದರೂ ಕಾಯುತ್ತಾ ಕುಳಿತಾಗ, ಪ್ರಯಾಣಿಸುವಾಗ ಅಥವಾ ಸ್ವಲ್ಪ ಬಿಡುವಿನ ಸಮಯದಲ್ಲಿ ಮೊಬೈಲ್ ಗೆ ಕೈ ಹಾಕದೇ ಇರಲು ಸಾಧ್ಯವೇ ?

ಬಹುಶಃ ಯಾರನ್ನು ಬಿಟ್ಟಿರಬಹುದಿದ್ದರೂ ಇದನ್ನು ಬಿಡಲು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇದು ನಮ್ಮ ಮೈ ಮನವನ್ನಾವರಿಸಿಕೊಂಡು ಬಿಟ್ಟಿದೆ. ಹೀಗಾಗಿ ಮೊಬೈಲ್ ಅನ್ನೋದು ನಮ್ಮ‌ ಜೀವನಕ್ಕೆ ಒಂದು “Some ಗತಿ ” ಕಾಣಿಸುವವರೆಗೂ ಅದು ನಮ್ಮ “ಸಂಗಾತಿ” ಯೇ ! ನೋ ಡೌಟ್.

ಭೂಗತ ಜಗತ್ತು ಅಂತ ಇದೆಯಂತೆ ! ಆದರೆ ಆ ಬಗ್ಗೆ ಎಲ್ಲರಿಗೂ ಅಷ್ಟು ಗೊತ್ತಿರಲಿಕ್ಕಿಲ್ಲ. ಆದರೆ ಈ ಮೊಬೈಲ್ ಜಗತ್ತು ಮಾತ್ರ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಎಳೆದುಕೊಂಡು ಮನುಷ್ಯನ ಗುಣ, ಸ್ವಭಾವ ,ವರ್ತನೆ ಹಾಗೂ ನಿತ್ಯ ಚಟುವಟಿಕೆಗಳ ಮೇಲೆ ಸಕತ್ ಪ್ರಭಾವ ಬೀರಿ ಅಟ್ಟಹಾಸಗೈಯ್ಯುತ್ತಿರುವುದಂತೂ ದಿಟ.

ಮೊಬೈಲ್ ಬಳಕೆ ಕುರಿತಂತೆ ಅದರ ಉಪಯೋಗ, ದುರುಪಯೋಗ_ ಅನುಕೂಲ- ಅನಾನುಕೂಲ ಇತ್ಯಾದಿಗಳ ಬಗ್ಗೆ ಪ್ರಬಂಧ ಅಥವಾ ಟಿಪ್ಪಣಿ ಬರೆದು ಬೋರ್ ಹೊಡೆಸೊಲ್ಲ. ಅದು ಎಲ್ಲರಿಗೂ ಗೊತ್ತಿರೋದೇ ! ಆದರೆ ಬಹುತೇಕ ಮೊಬೈಲ್ ಬಳಕೆದಾರರಲ್ಲಿ ನಾನು ಕಂಡುಕೊಂಡ ಒಂದು ವಿಷಾದನೀಯ ಸತ್ಯವೆಂದರೆ, ಅತಿಯಾದ ಮೊಬೈಲ್ ಸಹವಾಸದಲ್ಲಿ‌ ಮನುಷ್ಯನ ತಾಳ್ಮೆ, ಸಹನೆ ದಿನೇ ದಿನೇ ಅಧೋಗತಿಗಿಳಿಯುತ್ತಿರುವುದು !.

ಮೊಬೈಲ್ ನಲ್ಲಿ ತನ್ಮಯರಾಗಿ ಬೆರಳಾಡಿಸುವಾಗ , ನೆಟ್ ನಲ್ಲಿ ದೃಷ್ಟಿ ನೆಟ್ಟು ಮುಳುಗಿರುವಾಗ ಯಾರಾದರೂ ಮಾತನಾಡಿಸಿದರೂ ಸಡನ್ನಾಗಿ ನಮ್ಮೊಳಗಿನ‌ ಅಸಹನೆ ಭುಗಿಲೇಳುತ್ತದೆ ; ಇಲ್ಲವೇ ಅತಿಯಾದ ಕರೆಗಳಿಂದ‌ ಸಹನೆಯ ಕಟ್ಟೆಯೊಡೆದು ಮಾತನಾಡುವುದೇ ಬೇಡವೆನಿಸಿ ಒಂಥರಾ Frustrated ಮೂಡ್ ಗೆ ಮನಸು ವಾಲಿಬಿಡುತ್ತೆ. ‌

ಅಷ್ಟೆಲ್ಲಾ ಯಾಕೆ ! ನೀವು ಫೇಸ್ ಬುಕ್ ನಲ್ಲೋ ವಾಟ್ಸಪ್ ನಲ್ಲೋ ಸಿಕ್ಕಾಪಟ್ಟೆ ಬಿಜ಼ಿಯಾಗಿದ್ದಾಗ ನಿಮ್ಮ ಸ್ವಂತದವರೇ ಕರೆ ಮಾಡಿದರೂ ಅದು‌ ನಿಮಗೆ ಆ ಕ್ಷಣಕ್ಕೆ ಸಹ್ಯವೆನಿಸದು ! ಒಂದು ವೇಳೆ ಕರೆ ಸ್ವೀಕರಿಸಿದರೂ ಅದಕ್ಕೆ ಮನಸಿಟ್ಟು ಉತ್ತರಿಸದೇ ಬ್ರೌಸ್ ಮಾಡುತ್ತಲೇ ಮಾತನಾಡುವ ಅಸಡ್ಡೆತನವೂ ಗೊತ್ತಿಲ್ಲದೇ ಬೆಳೆದುಬಂದಿದೆ.

ಯಾರ ಸಹವಾಸವನ್ನೂ ಬೇಡದೇ ಒಬ್ಬನೇ‌ ಕೂತು ಇಡೀ ದಿನ ನೆಟ್ಟಗಿರದೇ ನೆಟ್ಟಿಗನಾಗಿ ಕಾಲ ಕಳೆಯೋದೇ ಹೆಚ್ಚು ಆಪ್ಯಾಯವಾಗಿ ಕಾಣಿಸುತ್ತದೆ. ಅದರಲ್ಲೂ ಈ ಲಾಕ್ ಡೌನ್ ಸಮಯದಲ್ಲಿ ಮೊಬೈಲ್ ನಮ್ಮ ಅತ್ಯಂತ ಆಪ್ತ ಸಂಗಾತಿಯಾಗಿ ಹೊರಹೊಮ್ಮಿದ್ದು ಅದರ ಸೆಳೆತದಿಂದ ಬಿಡಿಸಿಕೊಳ್ಳೋದೇ ಸಮಸ್ಯೆಯಾಗಿ ತೋರುತ್ತಿದೆ. ಸೋ…… ಮನಸಿನ‌ ‘ಉದ್ವೇಗ’ ಕ್ಕೂ ಮೊಬೈಲ್ ನ ‘ವೇಗ’ ಕ್ಕೂ ಒಂಥರಾ ಕೆಮಿಸ್ಟ್ರಿ ಲಾಕ್ ಆಗಿರಲೇಬೇಕಲ್ಲವೇ ?

ನಮ್ಮಲ್ಲಿರಬೇಕಾದ ಅತಿ ಮೌಲ್ಯಯುತವಾದ ಗುಣಗಳಲ್ಲಿ ತಾಳ್ಮೆ ಹಾಗೂ ಸಹನೆ ಬಹು ಮುಖ್ಯ. ನಮ್ಮ‌ ಬಹುತೇಕ ಸಮಸ್ಯೆಗಳನ್ನು ಮನಸಿನ ಮೇಲೆ‌ ಹತೋಟಿ ಇಟ್ಟುಕೊಳ್ಳುವುದರಿಂದ ಸಮರ್ಥವಾಗಿ ಎದುರಿಸಬಹುದು ಎಂಬುದು ಸಾರ್ವಕಾಲಿಕ ಸತ್ಯ. ಆದರೆ ಈ ಮೊಬೈಲ್ ಮೇನಕೆಯೆಂಬ ಮಾಯಾಂಗಿನಿಯ ಮೋಹಪಾಶದಲ್ಲಿ ನಮ್ಮ ವಿಶ್ವಾಮಿತ್ರನಂತಹಾ ಮನಸಿನ ನಿಯಂತ್ರಣ ತಪ್ಪಿ ಅನಾಹುತವಾಗುತ್ತಲೇ ಬಂದಿದೆ .

ಮಾಯೆಯ ಬಗೆಗಿನ ನಿರ್ಮೋಹಿಗಳನ್ನು ಪುರಾಣ ಕಾಲದಿಂದಲೂ ಅಲ್ಲಲ್ಲಿ ಕಂಡಿದ್ದೇವೆಯಾದರೂ, ಮೊಬೈಲ್ ನಿರ್ಮೋಹಿಗಳನ್ನು ಕಾಣುವುದು ದುಸ್ತರವಾಗಿದೆ. ಹೀಗಾಗಿ ನೆಟ್ಟಿಗರಲ್ಲಿನ ಮನಸು ನೆಟ್ಟಗಿರಲು ಸಾಧ್ಯವಾಗದೇ ಸಹನೆ ಎನ್ನುವುದು ನಮ್ಮಿಂದ‌ ನಿಧಾನಕ್ಕೆ ‌ನಿಧನವಾಗುತ್ತಲಿದೆ. ಸಹನೆಯ ಜಾಗದಲ್ಲಿ ಅಸಹನೆ ಒಳಗೊಳಗೇ ಬುಸುಗುಟ್ಟುತ್ತಾ ನಮ್ಮ‌ ವ್ಯಕ್ತಿತ್ವಕ್ಕೇ ಮಾರಕವಾಗಿ ಕಿರಿಕ್ ಜಗತ್ತನ್ನೇ ಸೃಷ್ಟಿಸಿದೆ.

ಕೊನೇಪಕ್ಷ ಹೆಂಡತಿ ಮಕ್ಕಳೊಂದಿಗೂ ಆಪ್ಯಾಯವಾಗಿ, ಆನಂದವಾಗಿ ಸಮಯ ಕಳೆಯಲು, ಬಂಧು ಬಳಗ, ಸ್ನೇಹಿತರೊಂದಿಗೆ ಮುಕ್ತವಾಗಿ ಹರಟಲು ಆಗದಂತಹಾ ವಿಚಿತ್ರ ವಿಷವ್ಯೂಹದ ವಾತಾವರಣವನ್ನು ಮೊಬೈಲ್ ಜಗತ್ತು ಕ್ರಿಯೇಟ್ ಮಾಡಿ ಬದುಕಿನ ಸುಂದರ ಕ್ಷಣಗಳನ್ನು ಆಪೋಷನ ತೆಗೆದುಕೊಂಡಿದೆ. ಈ ವಸ್ತು ಸದಾ ನಮ್ಮೊಂದಿಗಿರುವುದರಿಂದ ಏನೋ ಒಂಥರಾ ತಳಮಳ, ಜುಗುಪ್ಸೆ, ಅಸಹನೆ, ಬೇಸರ, ತಾತ್ಸಾರ, ಒಂಟಿತನ, ಸಿಡುಕುತನ, ಸಿನಿಕತನ….ಈ ಎಲ್ಲದರ ಸಹವಾಸವೂ ಬೋನಸ್ ರೂಪದಲ್ಲಿ ಬಂದು ವಕ್ಕರಿಸಿ ಬಿಟ್ಟಿವೆ.

ನಿಮ್ಮಲ್ಲಿ ಕೆಲವರು ನನ್ನ ಬರಹಕ್ಕೆ ಈ ರೀತಿ ಪ್ರತಿಕ್ರಿಯಿಸಲೂ ಬಹುದು .

” ಯಾವುದಾದರೂ ಅತಿಯಾದರೆ ಹೀಗೇನೇ ಆಗೋದು. ಎಷ್ಟು ಬೇಕೋ ಅಷ್ಟು ಬಳಸಬೇಕು. ಹಗಲೂ ರಾತ್ರಿ ಅದಕ್ಕೆ ದಾಸರಾಗಬಾರದು, ನಮ್ಮ‌ಬುದ್ದಿ ನಮ್ಮ‌ ಕೈಯ್ಯಲ್ಲಿರಬೇಕು . ಆಗ ಯಾವ ತೊಂದರೆಯೂ ಇರೋಲ್ಲ “… ಎಂಬ‌ ಉಪದೇಶದಲ್ಲೋ, ಅಥವಾ ” ಈಗ ನೀವು ಬರೆದ ಬರಹ ಮೊಬೈಲ್ ನಲ್ಲಿ ತಾನೇ ??? ಎಂತಲೋ ಕಾಮೆಂಟಿಸಲೂ ಬಹುದು. ಆದರೆ ಅಂಥವರ ವ್ಯಕ್ತಿತ್ವದಲ್ಲೂ ಅನೇಕ ಬದಲಾವಣೆಗಳು ಅವರಿಗೆ ಗೊತ್ತಿಲ್ಲದಂತೆಯೇ ಈ ಮಾಯಾಂಗಿನಿ ತಂದು ಬಿಟ್ಟಿರುತ್ತದೆ. ಒಮ್ಮೆ ಕೇಳಿನೋಡಿ‌ !

ಈ ಜಂಗಮವಾಣಿ ನಮ್ಮ ವ್ಯಕ್ತಿತ್ವದಲ್ಲಿ ನಕಾರಾತ್ಮಕ ‌ಬದಲಾವಣೆಗಳನ್ನು ತಂದೊಡ್ಡುವ ಮುನ್ನ ಸ್ವಲ್ಪ ಜಾಗರೂಕರಾಗೋದು ಒಳ್ಳೆಯದು. ಯಾಕೋ ಇತ್ತೀಚೆಗೆ ಬಹುತೇಕ ಮಂದಿ ಮಾತನಾಡಿಸಿದರೆ ಸಾಕು ಮೈಮೇಲೆ ಎಗರಿ ಬೀಳುತ್ತಾರೆ, ಶಾರ್ಟ್ ಟೆಂಪರ್ ಗಳ ಬಂಪರ್ ಗಳಂತೆ ರೇಗಿ ಬೀಳುತ್ತಿದ್ದಾರೆ, ಸುಖಾಸುಮ್ಮನೇ ಸಿಡಿದು ಸಿಟ್ಟಿಗೇಳುತ್ತಿದ್ದಾರೆ…!

ಇದಕ್ಕೆಲ್ಲಾ ಅತಿಯಾದ ಅಹರ್ನಿಶಿ ಮೊಬೈಲ್‌ ಬಳಕೆ ಕಾರಣವೆಂದು ಸಾರಾಸಗಟಾಗಿ ಆರೋಪಿಸಲಾಗದಿದ್ದರೂ ಅದರ ಪ್ರಭಾವ ಮಾತ್ರ ಸಾಕಷ್ಟಿದೆ ಎನ್ನಬಹುದು. ಜೀವನದಲ್ಲಿನ ಚಿಕ್ಕ‌ಚಿಕ್ಕ ಸಂತೋಷಗಳನ್ನು ಕಿತ್ತುಕೊಂಡು ನಮ್ಮೆಲ್ಲರನ್ನೂ ಭ್ರಮಾಲೋಕದ ಭಾವನೆಗಳ ಸಾಗರದಲ್ಲಿ ತೇಲಾಡಿಸುತ್ತಾ , ಆಕರ್ಷಕ ‌ಜಗತ್ತಿನಲ್ಲಿ‌ ಅಮಲೇರಿಸುತ್ತಾ ಸಾಗಿರುವ ಮೊಬೈಲ್ ಜಗತ್ತು ಸಂಪರ್ಕ ಕ್ರಾಂತಿಯ ಜೊತೆ ಜೊತೆಗೇ ‘ಸಂ‌ ‘ ಕಿರಿಕ್ ಭ್ರಾಂತಿಯನ್ನೂ ನಮಗೆ ತಗಲು ಹಾಕಿಬಿಟ್ಟಿದೆ.

ಮರೆಯುವ ಮುನ್ನ

ಬರೀ ಮೊಬೈಲ್‌ನ‌ ನೆಗೆಟಿವಿಟಿ ಬಗ್ಗೆ ಹೇಳಿದ ಮಾತ್ರಕ್ಕೇ , ಸಂಪರ್ಕ ಕ್ಷೇತ್ರದಲ್ಲಿ ಅದರ ಮಹೋನ್ನತ ಕೊಡುಗೆಯನ್ನು ಸ್ಮರಿಸದೇ ಇರಲಾಗದು . ಅದರದ್ದು ಪದಗಳಿಗೆ‌ ನಿಲುಕದ ಕೊಡುಗೆ. ಆದರೂ ಮನುಷ್ಯನ ವ್ಯಕ್ತಿತ್ವದಲ್ಲಿ , ಅವನ ಧೋರಣೆಯಲ್ಲಿ, ಮಾನವೀಯ ಮೌಲ್ಯಗಳಲ್ಲಿ, ಮನುಷ್ಯ ಸಂಬಂಧಗಳಲ್ಲಿ , ಗುಣ‌ ವಿಶೇಷಣಗಳಲ್ಲಿ ಮೊಬೈಲ್ ನ ಸುಧೀರ್ಘ ಬಳಕೆ ದುಷ್ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾದದ್ದು ಇಂದಿನ ತುರ್ತು ಅಗತ್ಯವೆಂದು ಅನಿಸುತಿದೆ.

ಆಪ್ತರಿಂದ ಫೋನ್ ಬಂದರೂ ಅದರತ್ತ ವಿಶೇಷ ಲಕ್ಷ್ಯ ಹರಿಸದೇ ಅಂತರ್ಜಾಲದ ಅಂತಃಪುರದಲ್ಲಿಯೇ ಸದಾ ಮುಳುಗಿ ಅಸಡ್ಡೆಯಿಂದ ಉತ್ತರಿಸುವ ಕ್ಯಾರೆಕ್ಟರ್ ಒಂದರ ಕರೆ ಈಗಷ್ಟೇ ಬಂದು ಅವನ ನೆನಪಾಗಿ ಇಷ್ಟೆಲ್ಲಾ ಕೊರೆತಕ್ಕೆ ಕಾರಣವಾಯಿತು ನೋಡಿ !

ನಿರ್ಜೀವ ವಸ್ತುವಿನ ಮುಂದೆ ನಿರ್ಮೋಹಿಯಾಗದಿದ್ದರೂ ಪರವಾಗಿಲ್ಲ ಆದರೆ ಅದಕ್ಕೆ ಶರಣಾಗಿ ಬಾಗದಿರಲಿ ಎನ್ನ‌ ಕಾಯ…. ಶಿವಾ…!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಸುದ್ದಿದಿನ ಕನ್ನಡ ಬೆಳಗಿನ ಪ್ರಮುಖ ಸುದ್ದಿಗಳು

  1. ಇಂದು ಭಾರತದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಹಾರ್‌ಲಾಲ್ ನೆಹರು ಅವರ ಪುಣ್ಯತಿಥಿ. ಸ್ವಾತಂತ್ರ‍್ಯ ನಂತರ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ್ದ ಅವರು, 1964ರ ಮೇ 27 ರಂದು ನಿಧನರಾದರು. 16 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಅವರನ್ನು ಇಂದು ದೇಶ ಸ್ಮರಿಸುತ್ತಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ಪಂಡಿತ್ ಜವಹಾರ್‌ಲಾಲ್ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
  2. ಪರಿಸರ, ಸಾಮಾಜಿಕ ಆಡಳಿತಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಾಗಿದೆ ಎಂದು ವಿಮಾನ ನಿಲ್ದಾಣದ ಪರಿಸರ ಮತ್ತು ಸಾಮಾಜಿಕ ಆಡಳಿತ ವಿಭಾಗದ ಮುಖ್ಯಸ್ಥ ಎಲ್. ಶ್ರೀಧರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ’ದಿ ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ’ ದಿಂದ ಆಯೋಜಿಸಿದ್ದ ಇಎಸ್‌ಜಿ ಸಮಾವೇಶದಲ್ಲಿ ಮಾತನಾಡಿ, ಶೀಘ್ರದಲ್ಲೇ ವಿಮಾನ ನಿಲ್ದಾಣದಲ್ಲಿ ಮಳೆ ನೀರಿನ ಸಂಗ್ರಹದ ಮೂಲಕ ಶೇಖಡ 100ರಷ್ಟು ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು.
  3. ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಇಂದು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಳಗಾವಿಯಲ್ಲಿ ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕೆಎಲ್‌ಇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
  4. ಜಮ್ಮು-ಕಾಶ್ಮೀರದ ಅನಂತ್ ನಾಗ್-ರಾಜೌರಿ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಮಟ್ಟದ ಮತದಾನವಾಗಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜನರನ್ನು ಅಭಿನಂದಿಸಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ಬಲವರ್ಧನೆಗೆ ಜನರ ಪಾಲ್ಗೊಳ್ಳುವಿಕೆ ಪ್ರಮುಖ ಕೊಡುಗೆ ನೀಡಲಿದೆ. ಜಮ್ಮು-ಕಾಶ್ಮೀರದ ನಾಗರಿಕರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂದು ಹೇಳಿದ್ದಾರೆ.
  5. ಉತ್ತರ ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಬೀತಿ ಹಿನ್ನೆಲೆಯಲ್ಲಿ ಸನ್ನದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಹತ್ವದ ಸಭೆ ನಡೆಸಿದರು. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಅಧಿಕಾರಿಗಳು ಚಂಡಮಾರುತ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
  6. ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ 8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಹಾಗೂ ಪರಿಹಾರ ಖಾತೆ ರಾಜ್ಯ ಸಚಿವ ಮಹಿಬೂರ್ ರೆಹಮಾನ್ ಮಾತನಾಡಿ, ಜನರ ಸುರಕ್ಷತೆಗಾಗಿ ವ್ಯಾಪಕ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
  7. ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ತಲಾ 13, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್‌ನ 3 ಮತ್ತು ಚಂಡೀಗಢ್ ಕೇಂದ್ರಾಡಳಿತ ಪ್ರದೇಶದ 1 ಲೋಕಸಭಾ ಕ್ಷೇತ್ರಗಳಲ್ಲಿ ಜೂನ್ 1 ರಂದು ಮತದಾನ ನಡೆಯಲಿದೆ.
  8. ಕೆನರಾ ಬ್ಯಾಂಕ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ಕುರಿತು 45 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ.
  9. ರಾಜ್‌ಕೋಟ್ ಅಗ್ನಿ ದುರಂತದಲ್ಲಿ. ಮೃತಪಟ್ಟವರನ್ನು ಗುರುತು ಹಚ್ಚಲು ಡಿಎನ್‌ಎ ಮಾದರಿಯನ್ನು ಅಗತ್ಯ ಪರಿಕ್ಷೆಗಾಗಿ ಕಳುಹಿಸಲಾಗಿದೆ. ಈ ದುರಂತದ ವಿಚಾರವನ್ನು ಗುಜರಾತ್ ಹೈಕೋರ್ಟ್ ಖುದ್ದಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಈ ಪ್ರಕರಣ ಇಂದು ವಿಚಾರಣೆಗೆ ಬರಲಿದೆ.
  10. ಹಿರಿಯ ಬಿಜೆಪಿ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಿರ್ಜಾಪುರ್‌ದಲ್ಲಿ ನಿನ್ನೆ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿ, ಐಎನ್‌ಡಿಐ ಮೈತ್ರಿಕೂಟ ಜಾತಿವಾದಿ ಹಾಗೂ ಕೋಮುವಾದಿ ಎನ್ನುವುದನ್ನು ದೇಶದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಬಿಜೆಪಿ ಎನ್‌ಡಿಎ ಬಡವರು, ದುರ್ಬಲರು ಮತ್ತು ಹಿಂದುಳಿದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
  11. ಹಿರಿಯ ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಅವರು, ಹಿಮಾಚಲ ಪ್ರದೇಶದ ಶಿಮ್ಲಾ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಚುನಾವಣಾ ರ‍್ಯಾಲಿ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಹೋರಾಡುತ್ತಿರುವ ಚುನಾವಣೆಯಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಫ್ರಾನ್ಸ್‌ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇಬ್ಬರು ನರ್ಸ್‌ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್‌ಗೆ ಪಾತ್ರವಾಯಿತು.

ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.

ಎಫ್‌ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಕ್ರೀಡೆ

ಬೆಳಗಿನ ಸುದ್ದಿ ಮುಖ್ಯಾಂಶಗಳು

Published

on

ಬೆಳಗಿನ ಸುದ್ದಿ ಮುಖ್ಯಾಂಶಗಳು

  1. ರಾಜ್ಯ ವಿಧಾನಪರಿಷತ್ತಿನ 6 ಸ್ಥಾನಗಳಿಗೆ ಮುಂದಿನ ತಿಂಗಳ 3 ರಂದು ಚುನಾವಣೆ ನಡೆಯಲಿದೆ. ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 91ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದೆ.
  2. ದೇಶದ ಉತ್ತರದ ರಾಜ್ಯಗಳಲ್ಲಿ ನಿನ್ನೆ ತೀವ್ರ ಬಿಸಿಗಾಳಿ ವಾತಾವರಣ ಉಂಟಾಗಿತ್ತು. ಮುಂದಿನ 4 ದಿನಗಳಲ್ಲಿ ವಾಯವ್ಯ ಪೂರ್ವ ಹಾಗೂ ಮಧ್ಯಭಾರತದ ಬಯಲು ಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿ ವಾತಾವರಣವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚಿಸಿದೆ.
  3. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಪ್ರದೇಶಾದ್ಯಂತ 40 ರಿಂದ 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರ ಉಕ್ಕೇರಲಿದ್ದು, ಮುಂಜಾಗ್ರತಾ ಕ್ರಮವಾಗಿ ಬುಧವಾರದವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಮೀನುಗಾರರಿಗೆ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದಾರೆ.
  4. ತೈವಾನ್‌ನ ಅಧ್ಯಕ್ಷ ಹುದ್ದೆ ಆಯ್ಕೆಯಾಗಿರುವ ಲೈ ಛಿಂಗ್-ತೆ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಕಳೆದ 4 ವರ್ಷಗಳಿಂದ ದೇಶದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ 64 ವರ್ಷದ ಲೈ ಅವರು, ತೈವಾನ್‌ನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
  5. ಶ್ರೀಲಂಕಾದ ಸೀತಾಮಾತೆ ಮಂದಿರ-ಸೀತಾ ಇಳಿಯಾದಲ್ಲಿ ನಿನ್ನೆ ಕುಂಬಾಭಿಷೇಕ ಶ್ರದ್ಧಾ-ಭಕ್ತಿ ಸಡಗರ ಸಂಭ್ರಮಗಳಿಂದ ಜರುಗಿತು. ಅಯೋಧ್ಯೆಯ ಸರಯೂ ನದಿಯಿಂದ ತರಲಾಗಿದ್ದ ಸುಮಾರು 25ಲೀಟರ್ ಪವಿತ್ರ ಜಲದಿಂದ ಮಂದಿರದ ಗೋಪುರಕ್ಕೆ ಅಭಿಷೇಕ ನೆರವೇರಿಸಲಾಯಿತು. ಭಾರತ-ನೇಪಾಳ, ಶ್ರೀಲಂಕಾ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಈ ದೃಶ್ಯವನ್ನು ಕಣ್ಮನಗಳಲ್ಲಿ ತುಂಬಿಕೊಂಡರು.
  6. ಭಾರತದ ಗ್ರಾಂಡ್ ಮಾಸ್ಟರ್ ಅರವಿಂದ್ ಚಿದಂಬರಂ ಶಾರ್ಜಾ ಮಾಸ್ಟರ್‍ಸ್ ಚೆಸ್ ಪಂದ್ಯಾವಳಿಯಲ್ಲಿ ಅತಿಥೇಯ ಶಾರ್ಜಾದ ಎ.ಆರ್. ಸುಲೆಹ್ ಸಲೀಂ ಅವರನ್ನು ಪರಾಭವಗೊಳಿಸಿ 4.5ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
  7. ಗುವಾಹಾಟಿಯಲ್ಲಿ ನಿನ್ನೆ ರಾತ್ರಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್‍ಸ್ ನಡುವಿನ ಐಪಿಎಲ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಕೆಲಕಾಲ ಮಳೆ ಬಂದು ನಿಂತ ನಂತರ ನಡೆದ ಟಾಸ್ ಗೆದ್ದ ಕೊಲ್ಕತ್ತಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಆದರೆ ಪುನಃ ಮಳೆ ಬಂದ ಹಿನ್ನೆಲೆ ಪಂದ್ಯ ರದ್ದುಗೊಳಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending