ಲೈಫ್ ಸ್ಟೈಲ್
ನಿಫಾ; ತುಸು ನಿಗಾ ಇರಲಿ..!
ಎಲ್ಲರೂ ತಂತಮ್ಮ ಜೀವನದಲ್ಲಿ ತಲ್ಲೀನರಾಗಿ ಜೀವಿಸುತ್ತಿದ್ದರೆ ಒಮ್ಮೊಮ್ಮೆ ತಮ್ಮ ಪಾಡಿಗೆ ತಮ್ಮನ್ನು ಬಿಡದೇ ಗೊತ್ತಿಲ್ಲದೇ ಆಕ್ರಮಿಸಿಕೊಂಡು, ಕಾಡಿ, ನರಳಿಸಿ, ಜೀವವನ್ನೂ ತೆಗೆಯುವ ರೋಗಗಳು ಈಗಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮರುಕಳಿಸುತ್ತಿವೆಯೆಂದರೆ ನಂಬಲೇಬೇಕಾಗುತ್ತದೆ. ಪ್ರಕೃತಿಯೇ ಹಾಗೆ, ಒಂದು ಸಣ್ಣ ಸೂಕ್ಷ್ಮಾಣುಜೀವಿಯು ಇದ್ದಕ್ಕಿದ್ದಂತೆ ಅದರ ಶಕ್ತಿಮೀರಿಅದು ನಮ್ಮನ್ನು ಸಾಮೂಹಿಕವಾಗಿ ನರಳುವಂತೆ ಮಾಡಬಲ್ಲದು. ಹಾಗಾದರೆ ನಾವು ಎಷ್ಟು ಎತ್ತರಕ್ಕೆ ಬೆಳೆದು ನಿಂತರೂ ಅಂತಹ ಮಾರಕ ಸೂಕ್ಷ್ಮಾಣುಜೀವಿಗೆ ನಾವು ಆಹಾರವೇ.
ಹೌದು, ಎಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ಮೂರು ವಾರಗಳಲ್ಲಿ ಬಹುತೇಕ ಜನರಲ್ಲಿ ಆತಂಕ ಮೂಡಿಸಿದ್ದ ವೈರಸ್ ಅದು. ‘ನಿಫಾ’(Nipah) ಎಂದುಕರೆಯಲ್ಪಡುವ ಆ ವೈರಸ್, ಮೊಟ್ಟಮೊದಲು ಕಂಡುಬಂದದ್ದು 1998 ನೇ ಇಸವಿಯಲ್ಲಿ ಮಲೇಶಿಯಾದ ನಿಫಾ ಎಂಬ ಗ್ರಾಮದ ಮನೆಗಳಲ್ಲಿ ಸಾಕಲ್ಪಡುತ್ತಿದ್ದ ಹಂದಿಗಳಲ್ಲಿ. ನಂತರ 1999 ರಲ್ಲಿ ಸಿಂಗಪೂರ್, 2001 ರಲ್ಲಿ ಪಶ್ಚಿಮ ಬಂಗಾಳ, 2003ರಿಂದ 2008 ರವರೆಗೆ ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡಿರುತ್ತದೆ. ಹಂದಿಗಳಲ್ಲಿ ಅಷ್ಟೇ ಅಲ್ಲದೆ, ನಾಯಿ, ಬೆಕ್ಕು, ಮೇಕೆ, ಕುದುರೆ, ಕುರಿಗಳನ್ನೂ ಈ ವೈರಸ್ ಆಕ್ರಮಣ ಮಾಡಬಲ್ಲದು. ಇತ್ತೀಚೆಗೆ ಕೇರಳದಲ್ಲಿ ನಿಫಾ ವೈರಸ್ನಿಂದ ಸೋಂಕಿತ ಒಟ್ಟು 14 ಮರಣಗಳು ಸಂಭವಿಸಿವೆಯೆಂದು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ದೃಢೀಕರಿಸಿರುತ್ತದೆ.
ಸದ್ಯದ ದಿನಗಳಲ್ಲಿ ದಿನವಿಡೀ ನಾವು ಅಲ್ಲಲ್ಲಿ ಕಾಣುವ ಸಣ್ಣಜ್ವರ ಪ್ರಕರಣವೂ ನಿಫಾಜ್ವರವಾಗಿರಬಹುದು, ಹಾಗೂ ಸಮಾಜದ ಆರೋಗ್ಯ ಹದಗೆಡಲು ಕೇವಲ ಆ ಒಂದು ಪ್ರಕರಣವೇ ಸಾಕು.
ರೋಗ ಹರಡುವಿಕೆ
- ನಿಫಾ ಸೋಂಕಿತ ಬಾವಲಿಗಳು ಮತ್ತು ಪ್ರಾಣಿಗಳಿಂದ ಸ್ರವಿಸುವ ದ್ರವಗಳ ನೇರ ಸಂಪರ್ಕದಿಂದ ಹರಡುತ್ತದೆ.
- ಬಾವಲಿಗಳಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಮತ್ತು ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ.
- ಸೋಂಕಿತ ಬಾವಲಿಗಳು ಮತ್ತು ಪ್ರಾಣಿಗಳ ಸಂಪರ್ಕ ಹೊಂದಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹರಡುತ್ತದೆ
ಸೋಂಕಿತ ವ್ಯಕ್ತಿಗಳ ನೇರಸಂಪರ್ಕದಿಂದ ಹರಡುತ್ತದೆ.
ರೋಗ ಲಕ್ಷಣಗಳು
- ಜ್ವರ, ತಲೆನೋವು, ವಾಂತಿ, ತಲೆ ಸುತ್ತುವುದು.
- ತೀವ್ರವಾದ ಜ್ವರಮಿದುಳಿಗೆಆವರಿಸುವುದು.( Nipah Encephalitis )ಮಾತುಗಳಲ್ಲಿ ತೊದಲುವಿಕೆ.
- ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಕೋಮಾ ಹಂತಕ್ಕೆ ತಲುಪಿ, ಸಾವು ಸಂಭವಿಸಬಹುದು.
ರೋಗ ನಿರ್ಣಯ
- ವ್ಯಕ್ತಿಯ ಗಂಟಲಿನ ಮತ್ತು ಮೂಗಿನ ದ್ರವಗಳ ಮಾದರಿಯಿಂದ ಪ್ರಯೋಗಾಲಯದಲ್ಲಿ ದೃಢಪಡಿಸಬಹುದು.
- ನರಮಂಡಲದ ದ್ರವ, ಮೂತ್ರ ಮತ್ತು ರಕ್ತಪರೀಕ್ಷೆಯ ಮಾದರಿಗಳಿಂದಲೂ ಈ ರೋಗವನ್ನು ದೃಢೀಕರಿಸಬಹುದು.
ಸದ್ಯಕ್ಕೆ, ರಾಷ್ಟ್ರೀಯ ವೈರಾಣು ಸಂಸ್ಥೆ, ಪುಣೆಯಲ್ಲಿ ಈ ರೋಗ ನಿರ್ಣಯ ಮಾಡಲಾಗುತ್ತದೆ.ರೋಗ ಇತಿಹಾಸದ ಪ್ರಕಾರ, ಈ ರೋಗವು ಶೇ.40 ರಿಂದ ಶೇ.74 ರಷ್ಟು ಮಾರಣಾಂತಿಕವಾಗಿರುತ್ತದೆ ಎಂದು ಹೇಳಲಾಗಿದೆ.
ಚಿಕಿತ್ಸೆ
- ಈ ಮಾರಣಾಂತಿಕ ವೈರಸ್ ಅನ್ನು ತಡೆಯಲು ಯಾವುದೇ ಚುಚ್ಚುಮದ್ದು ಅಥವಾ ಇದರ ಚಿಕಿತ್ಸೆಗಾಗಿ ಯಾವುದೇ ಔಷಧಿಗಳನ್ನು ಇದುವರೆಗೆ ಕಂಡು ಹಿಡಿದಿರುವುದಿಲ್ಲ. ಇದರ ಚಿಕಿತ್ಸೆ ಕೇವಲ ರೋಗ ಲಕ್ಷಣಗಳನ್ನಷ್ಟೇ ಗುರಿಯಾಗಿಸಿಕೊಂಡು ನೀಡಲಾಗುತ್ತದೆ.
ಮುಂಜಾಗ್ರತಾ ಕ್ರಮಗಳು
- ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಅಥವಾ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು.
- ರಸ್ತೆಬದಿಗಳಲ್ಲಿ ಕತ್ತರಿಸಿ ಇಟ್ಟುಕೊಂಡು ಮಾರುವ ಹಣ್ಣುಗಳನ್ನು ಸೇವಿಸಬಾರದು.
- ಆಹಾರ ಪದಾರ್ಥ ಸೇವಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು, ಹಾಗೂ ತೊಳೆದ ನಂತರಕಣ್ಣು ಮೂಗು ಅಥವಾ ಯಾವುದೇ ಇತರ ವಸ್ತುಗಳನ್ನು ಮುಟ್ಟುವುದನ್ನು ಮಾಡಬಾರದು.
- ಮನೆ ಸುತ್ತ ಸೋಂಕಿತ ಹಂದಿಗಳು, ಅಥವಾ ಇತರ ಪ್ರಾಣಿಗಳ ಸಂಪರ್ಕದಿಂದ ದೂರವಿರುವುದು.
- ಮನೆಯಲ್ಲೇ ಇರುವ ಸಾಕುಪ್ರಾಣಿಗಳನ್ನು ಹೊರಗೆ ಹೋಗದಂತೆ, ಅಥವಾ ಇತರ ಪ್ರಾಣಿಗಳ ಸಂಪರ್ಕವಿಲ್ಲದಂತೆ ಎಚ್ಚರವಹಿಸುವುದು.
- ಸಾರ್ವಜನಿಕ ಸ್ಥಳಗಳಲ್ಲಿ ಹಣ್ಣಿನಜ್ಯೂಸ್ ಸೇವನೆಗಿಂತ, ಮನೆಗೆ ಒಳ್ಳೆಯ ಹಣ್ಣುಗಳನ್ನು ತಂದು ತಾವೇ ತಯಾರಿಸಿದ ಜ್ಯೂಸ್ ಸೇವಿಸುವುದು ಸೂಕ್ತ.
- ಬಾವಲಿಗಳು ಹೆಚ್ಚಿರುವ ಸ್ಥಳಗಳಲ್ಲಿ ವಾಸಿಸುವವರು ನೀರನ್ನು ಶುದ್ಧೀಕರಿಸಿ, ಕಾದಾರಿಸಿ ಕುಡಿಯುವುದು ಹಾಗೂ ಆಹಾರ ಪದ್ಧತಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು.
- ಯಾವುದೇ ರೀತಿಯ ಜ್ವರ ಅಥವಾ ಮೇಲ್ಕಂಡ ಯಾವುದೇ ಲಕ್ಷಣ ಕಂಡುಬಂದಲ್ಲಿ, ತಕ್ಷಣವೇ ವೈದ್ಯರ ಸಮಾಲೋಚನೆ ಪಡೆಯುವುದು.
- ಇನ್ನು ಈಗಾಗಲೇ ಈ ಮೇಲಿನ ಯಾವುದೇ ರೋಗ ಲಕ್ಷಣಗಳು ಇದ್ದಲ್ಲಿ, ಮೂಗು ಹಾಗೂ ಬಾಯಿ ಎರಡೂ ಆವರಿಸಿಕೊಳ್ಳುವಂತಹ ಮಾಸ್ಕ್ಗಳನ್ನು ಬಳಸುವುದು ಮತ್ತು ಇತರರಿಗೂ ಹರಡದಂತೆ ಎಚ್ಚರವಹಿಸುವುದು.
- ಇನ್ನು, ಹಂದಿ, ಕುರಿ, ಅಥವಾ ಇನ್ಯಾವುದೇ ಪ್ರಾಣಿಗಳ ಸಾಕಾಣಿಕೆ ಕೇಂದ್ರಗಳಲ್ಲಿ ಕೆಲಸ ಮಾಡುವವರು, ಅತೀ ಎಚ್ಚರದಿಂದ ಕೆಲಸ ಮಾಡುವುದು.
- ಕೈಕಾಲುಗಳಲ್ಲಿ ಗಾಯ ಅಥವಾ ಸೋಂಕು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರ ಸಮಾಲೋಚನೆ ಪಡೆಯುವುದು.
ಸುದ್ದಿದಿನ.ಕಾಂ|ವಾಟ್ಸಾಪ್| 9986715401
ಲೈಫ್ ಸ್ಟೈಲ್
ಇಂದಿನ ಕರುವೇ ನಾಳಿನ ಹಸು..!

- ಡಾ.ಎನ್.ಬಿ.ಶ್ರೀಧರ,ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
“ನಮ್ಮನೇ ಕರುಗಳಿಗೆಲ್ಲಾ ಗಡಿಗೆ ಹೊಟ್ಟೆ ಸಾರ್.. ಏನೂ ಮಾಡಿದ್ರೂ ಸುಧಾರಿಸ್ತಿಲ್ಲ.. ಜಂತಿನ ಔಷಧಿ 10 ಸಲ ಹಾಕಿದ್ದೇನೆ. ಆದರೂ ಸರಿಯಾಗ್ತಿಲ್ಲ.. ಗಂಡು ಕರುಗಳೆಂತೂ ಬಿಡಿ.. ಇದೇ ಅವಸ್ಥೆ.. ಒಳ್ಳೆಯ ಟಾನಿಕ್ ಬರೆದು ಕೊಡಿ ಡಾಕ್ಟ್ರೇ !! ಇದು ಅನೇಕ ಹೈನುಗಾರರ ಕೊರಗು.
“ನಮ್ಮನೇ ಮಣಕ ಹತ್ತು ಸಲ ಇನ್ಸೆಮಿನೇಷನ್ ಆಯ್ತು. ಕಟ್ತಾನೇ ಇಲ್ಲ.. ಎಲ್ಲಾ ಔಷಧ ಆಯ್ತು.. ಏನ್ಮಾಡೋದೋ ಗೊತ್ತಾಗ್ತಾ ಇಲ್ಲ” .. ಇದೂ ಸಹ ಅನೇಕರ ಅಳಲು.!!.
ನಾವು ಗೋವು ದೇವರು, ಮೂವತ್ಮೂರು ಕೋಟಿ ದೇವರುಗಳ ಆಗರ.. ಅದು ಪೂಜ್ಯ ಗೋಮಾತೆ. ಎಂದರೂ ಸಹ ಗೋಸಂಗೋಪನೆ ಮನುಷ್ಯನ ಸ್ವಾರ್ಥಕ್ಕಾಗಿ ಮಾತ್ರ ಎಂಬುದನ್ನು ಮರೆಯಲೇಬಾರದು. “ಆಕಳನ್ನು ಸಾಕುವುದು ಅದರ ಸಂತತಿ ಅಭಿವೃದ್ಧಿಗಾಗಿ ಮತ್ತು ಅದರ ಹಾಲು ಅದರ ಕರುವಿಗಾಗಿ ಮಾತ್ರ” ಎಂದು ಆಕಳನ್ನು ಸಾಕುವವರು ಬಹಳ ವಿರಳ. ಆಕಳ ಹಾಲು ನಮಗಾಗಿ ಅಲ್ಲ.
ಅದರ ಮೇಲಿನ ನೈಸರ್ಗಿಕ ಹಕ್ಕು ಕರುವಿನದು ಮಾತ್ರ. ಯಾರೇನೇ ಹೇಳಿದರೂ ಸಹ ಕರುವಿನ ಹಾಲನ್ನು ನಾವು ಕಸಿದುಕೊಳ್ಳುತ್ತಿರುವುದು ಸತ್ಯ. ಇದನ್ನು ಪೂರ್ಣ ಪ್ರಮಾಣದಲ್ಲಿ ಕಸಿದುಕೊಂಡು ಅದಕ್ಕೆ ತಕ್ಕದಲ್ಲದ ಅಪೌಷ್ಟಿಕ ಹಿಂಡಿಯನ್ನು ಹಾಕಿದಾಗ ಆಗುವ ಅನಾಹುತವೇ ಈ ಗಡಿಗೆ ಹೊಟ್ಟೆ ಅಥವಾ ಜೋಲು ಹೊಟ್ಟೆ.
ಪುರಾತನ ಕಾಲದಲ್ಲಿ ಋಷಿ ಮುನಿಗಳು ಆಕಳನ್ನು ಸಾಕಿದಾಗ ಅದು ಮತ್ತು ಅದರ ಕರು ನೈಸರ್ಗಿಕವಾದ ಕಾಡಿನಲ್ಲಿ ಓಡಾಡಿಕೊಂಡಿದ್ದಾಗ ಅದರ ಕರು ಅದರ ಹಾಲನ್ನು ಹೊಟ್ಟೆ ತುಂಬಾ ಕುಡಿದು ಅದರ ಕಟವಾಯಿಯಿಂದ ಹಾಲು ಸಂತೃಪ್ತಿಯಿಂದ ಸುರಿದರೆ ಮಾತ್ರ ಉಳಿದ ಹಾಲನ್ನು ಕೆಚ್ಚಲಿನಿಂದ ಕರೆದುಕೊಳ್ಳುತ್ತಿದ್ದರು ಎಂಬುದನ್ನು ಹಳೆಯ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷಯ.
ಗಂಡು ಕರುಗಳಿರಲಿ ಅಥವಾ ಹೆಣ್ಣು ಕರುಗಳಿರಲಿ, ಹುಟ್ಟಿದಾಗ ಒಂದು ತಿಂಗಳವರೆಗೂ ಮೈಕೈ ತುಂಬಿಕೊಂಡು ದಷ್ಟ ಪುಷ್ಟವಾಗಿರುವ ಕರುಗಳು ನಂತರ ಕ್ರಮೇಣವಾಗಿ ಗಡಿಗೆ ಹೊಟ್ಟೆ ಅಥವಾ ಜೋಲು ಹೊಟ್ಟೆ ಹೊತ್ತುಕೊಂಡು ಓಡಾಡುವ ಪರಿಸ್ಥಿತಿಯನ್ನು ತಲುಪುತ್ತವೆ. ಹಲವಾರು ಕೃಷಿಕರು ಇಂತಹ ಕರುಗಳಿಗೆ ಜಂತುನಾಶಕವನ್ನು ಮೇಲಿಂದ ಮೇಲೆ ನೀಡುವುದರಿಂದ ಗುಣಮುಖವಾಗುತ್ತವೆ ಎಂದು ಭಾವಿಸುತ್ತಾರೆ. ಅಥವಾ ಅದು ಕೂಡಲೇ ಬೆಳವಣಿಗೆ ಆಗಲು ಔಷಧಿಯನ್ನು ಬರೆದುಕೊಡಲು ಕೋರುತ್ತಾರೆ. ಇದು ಸರಿಯೇ? ಇದಕ್ಕೆ ಏನು ಕಾರಣ ಅಂತ ತಿಳಿಯೋಣ.
“ಇಂದಿನ ಮಗುವೇ ನಾಳಿನ ನಾಗರೀಕ” ಎನ್ನುವುದು ಗಾದೆ. ಇದನ್ನು ಜಾನುವಾರುಗಳಿಗೆ ಅನ್ವಯಿಸಿದರೆ ‘ಇಂದಿನ ಕರುವೇ ನಾಳಿನ ಹಸು’ ಎನ್ನಬಹುದು. ಸಾಮಾನ್ಯವಾಗಿ ಕರುಗಳಿಗೆ ಆಕಳಿನ ಹಾಲೇ ಸರ್ವಶ್ರೇಷ್ಠವಾದ ಅಹಾರ. ಹುಟ್ಟಿದ ದಿನದಿಂದಲೂ ಕನೀಷ್ಠ 3-4 ತಿಂಗಳುಗಳವರೆಗೆ ಕರುಗಳಿಗೆ ಅದರ ಶರೀರದ ತೂಕದ ಶೇ 10 ರಷ್ಟು ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40 ಕೆಜಿ ತೂಕವನ್ನು ಹೊಂದಿದ್ದು ಅದಕ್ಕೆ 4 ಲೀಟರ್ನಷ್ಟು ಹಾಲನ್ನು ನೀಡಬೇಕು.
ಪ್ರತಿ ದಿನ ಕರು ಸುಮಾರು 100-500 ಗ್ರಾಂನಷ್ಟು ತೂಕದಲ್ಲಿ ವರ್ಧನೆಯನ್ನು ಹೊಂದುತ್ತದೆ. ಇದಕ್ಕೆ ತಕ್ಕಂತೆ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸುವುದು ಸಹ ಬಹಳ ಮುಖ್ಯ. ಆದರೆ ಹಲವಾರು ಬಾರಿ ಹೆಚ್ಚಿನ ಹೈನುಗಾರರು ಕರುವಿಗೆ ನೀಡುವುದನ್ನು ಕಡಿಮೆ ಮಾಡಿ ಬಿಡುತ್ತಾರೆ. ಇಷ್ಟು ಹಾಲನ್ನು ನೀಡಿದರೆ ಕರುವಿಗೆ ಅಜೀರ್ಣವಾಗಿ ಬೇಧಿಯುಂಟಾಗುತ್ತದೆ ಎಂದು ಹೆದರುತ್ತಾರೆ. ಆದರೆ ಈ ರೀತಿಯ ಬೇದಿಯಾಗುವುದು ಕರುವಿಗೆ ವಿವಿಧ ಕಾರಣಗಳಿಂದ ಅಜೀರ್ಣವಾದಾಗ ಮತ್ತು ಸೂಕ್ಷ್ಮಾಣು ಜೀವಿಗಳಿಂದ ಮಲೀನವಾದ ಹಾಲನ್ನು ಕೊಟ್ಟಾಗ ಅದಕ್ಕೆ ಬಿಳಿ ಬೇದಿಯಾಗಬಹುದು.
ಅಲ್ಲದೇ ಹಾಲು ಉತ್ಪಾದಕರ ಸಂಘಕ್ಕೆ ಹಾಲನ್ನು ಮಾರಿ ಹೆಚ್ಚಿನ ಲಾಭ ಪಡೆಯುವ ಆಸೆಯೂ (ದುರಾಸೆ ??) ಸಹ ಒಂದು ಕಾರಣ. ಆದರೆ ಇದು ತಾತ್ಕಾಲಿಕ ಲಾಭ ಮಾತ್ರ. ದೂರಗಾಮಿ ದೃಷ್ಠಿಯಲ್ಲಿ ನೋಡಿದಾಗ ಕರುವಿಗೆ ಅದರ ತಾಯಿಯ ಹಾಲನ್ನು ನಿಗದಿತ ಪ್ರಮಾಣದಲ್ಲಿ ನಿಗದಿತ ದಿನಗಳವರೆಗೆ ನೀಡಿದರೆ ಮಾತ್ರ ಉತ್ತಮ ಮಣಕ ಅಥವಾ ಪಡ್ಡೆಯನ್ನು ಪಡೆಯಲು ಸಾಧ್ಯ.
ಕರುಗಳಿಗೆ ಜೋಲು ಹೊಟ್ಟೆ ಬರಲು ಮುಖ್ಯವಾದ ಕಾರಣ ಅದಕ್ಕೆ ಬೆಳವಣಿಗೆಯ ಹಂತದಲ್ಲಿ ಹಾಲನ್ನು ಮತ್ತು ಪೌಷ್ಠಿಕ ಅಹಾರವನ್ಮ್ನ ಸೂಕ್ತ ಪ್ರಮಾಣದಲ್ಲಿ ನೀಡದಿರುವುದು. ಮತ್ತೊಂದು ಕಾರಣವೆಂದರೆ ಎಳೆ ಕರುಗಳಿಗೆ ಜಾನುವಾರುಗಳಿಗೆ ನೀಡುವ ಕಡಿಮೆ ಪೌಷ್ಟಿಕಾಂಶಗಳನ್ನು ಹೊಂದಿದ ಪಶು ಅಹಾರವನ್ನು ನೀಡುವುದು. ಬಹಳಷ್ಟು ಕರುಗಳು ತುಂಬಾ ಆಸ್ಥೆಯಿಂದ ಅದರ ತಾಯಿಗೆ ನೀಡಿದ ಅಹಾರವನ್ನು ತಿನ್ನುತ್ತವೆ.
ಇದನ್ನು ಗಮನಿಸಿದ ರೈತರು ಅದಕ್ಕೆ ಹಾಲನ್ನು ಕಡಿಮೆ ಮಾಡಿ ಪಶು ಅಹಾರವನ್ನು ಏಕಾಏಕಿ ನೀಡಲು ಪ್ರಾರಂಭಿಸುತ್ತಾರೆ. ಇದೇ ಸಮಯದಲ್ಲಿ ಕರು ಹುಲ್ಲನ್ನು ತಿನ್ನಲು ಪ್ರಾರಂಭಿಸುತ್ತದೆ. ಈ ಹುಲ್ಲು ಮತ್ತು ಕಡಿಮೆ ಗುಣಮಟ್ಟದ ಅಹಾರವನ್ನು ಪಚನ ಮಾಡಲು ಅನುವಾಗುವಂತೆ ಕರುವಿನ ಹೊಟ್ಟೆ, ಕರುಳು ಮತ್ತು ಜೀರ್ಣಾಂಗದ ವಿವಿಧ ಭಾಗಗಳು ಜಾಸ್ತಿ ಬೆಳವಣಿಗೆ ಹೊಂದುತ್ತವೆ. ಅದರಲ್ಲೂ ದೊಡ್ಡ ಹೊಟ್ಟೆ ಬೇಗ “ಗುಡಾಣ” ದಂತೆ ಬೆಳೆಯುತ್ತದೆ. ಆದರೆ ಹಾಲಿನಿಂದ ಲಭ್ಯವಾಗುವ ಕ್ಯಾಲ್ಸಿಯಂ ಮತ್ತು ರಂಜಕ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗದೇ ಅಸ್ಥಿವ್ಯೂಹದ ಸರಿಯಾದ ಬೆಳವಣಿಗೆಯಾಗುವುದಿಲ್ಲ.
ಎಲುಬುಗಳು ಅದರಲ್ಲೂ ಹಿಂಬಾಗದ ಎಲುಬುಗಳು ಉತ್ತಮ ಬೆಳವಣಿಗೆ ಹೊಂದದೇ ಇರುವುದರಿಂದ ಕರುವನ್ನು ಹಿಂಬಾಗದಿಂದ ಗಮನಿಸಿದಾಗ ಜೋಲು ಹೊಟ್ಟೆ ಗುಡಾಣದಂತೆ ಎದ್ದು ಕಾಣುತ್ತದೆ. ಇದನ್ನು ಹಳ್ಳಿಯ ಭಾಷೆಯಲ್ಲಿ ‘ಹೊಟ್ಟೆ ಡುಮ್ಮಣ್ಣ ; ಕೈಕಾಲು ಸಣ್ಣಣ್ಣ’ ಎಂದು ಕರೆಯುತ್ತಾರೆ. ಪೌಷ್ಟಿಕಾಂಶದ ತೀವ್ರವಾದ ಕೊರತೆಯಿಂದ ಉದ್ದುದ್ದ ಕೂದಲುಗಳು ಬೆಳೆದು, ತೀವ್ರವಾದ ರಕ್ತಹೀನತೆಯಾಗಿ, ಕರು ನಿಸ್ತೇಜಗೊಳ್ಳುತ್ತದೆ.
ನವಜಾತ ಕರುಗಳಲ್ಲಿ ಕರುಹಾಕಿದ ತಕ್ಷಣ ಅರ್ಧಗಂಟೆಯೊಳಗೆ ಗಿಣ್ಣದ ಹಾಲನ್ನು ನೀಡಲೇ ಬೇಕು. ಕರುಗಳಿಗೆ ದೇಹ ತೂಕಕ್ಕೆ ತಕ್ಕಂತೆ ಸುಮಾರು 3 ಲೀಟರ್ ಹಾಲನ್ನು ದಿನಕ್ಕೆ 2–3 ಬಾರಿ ವಿಭಾಗಿಸಿ ನೀಡಬೇಕು. ಗಿಣ್ಣದ ಹಾಲಿನಲ್ಲಿ ಅತ್ಯಧಿಕ ಪ್ರಮಾಣದ ಸಸಾರಜನಕ, ಖನಿಜಾಂಶ, ವಿಟಮಿನ್ಗಳು ಮತ್ತು ರೋಗನಿರೋಧಕ ಶಕ್ತಿ ಅಡಕವಾಗಿರುವುದರಿಂದ ಕರುವಿಗೆ ಇವುಗಳ ಕೊರತೆಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ. ಮೂರು ತಿಂಗಳ ತನಕ ಕರುವಿಗೆ ತಾಯಿಯ ಹಾಲು ಅಗತ್ಯ. ಏಕಾಏಕಿ ಹಾಲು ನಿಲ್ಲಿಸಿ ಪಶು ಅಹಾರ ನೀಡುವುದು ಒಳ್ಳೆಯದಲ್ಲ.
ತಾಯಿಯ ಪಶು ಅಹಾರ ಕರುವಿಗೆ ಹಾಕುವುದು ಸಲ್ಲ. ಇದರಲ್ಲಿ ಪ್ರೊಟೀನ್ ಅಂಶ ಕಡಿಮೆ. ಕರುಗಳಿಗೆಂದೇ ಇರುವ ಪಶುಅಹಾರವನ್ನೇ ಬಳಸಿದರೆ ಈ ಸಮಸ್ಯೆ ಬರುವುದಿಲ್ಲ. ತಯಾರಕರ ನಿರ್ದೇಶನ ದಂತೆ ಮೊದಲಿಗೆ ದಿನಕ್ಕೆ 100 ಗ್ರಾಂ, 35 ದಿನದಿಂದ 2 ತಿಂಗಳವರೆಗೆ ಪ್ರತಿ ದಿನ 250 ಗ್ರಾಂ, 2 ರಿಂದ 3 ತಿಂಗಳವರೆಗೆ 500 ಗ್ರಾಂ ಕರುಗಳ ನೀಡಬೇಕು. ಕರುಗಳ ಹಿಂಡಿ ಸಿಗದಿದ್ದರೆ ಉತ್ತಮ ಗುಣಮಟ್ಟದ ನೆಲಗಡಲೆ ಹಿಂಡಿಯನ್ನು ಮೇಲೆ ಹೇಳಿದ ಅರ್ಧದಷ್ಟನ್ನಾದರೂ ಕೊಟ್ಟರೆ ಉತ್ತಮ. ಕರುವಿನ ದೇಹ ತೂಕದ ಆಧಾರದ ಮೇಲೆ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಪ್ರತಿದಿನ ಒಂದು ಕಿ.ಗ್ರಾಂ ಹಾಗೂ ಒಂದು ವರ್ಷದಿಂದ ಬೆದೆಗೆ ಬರುವ ತನಕ ಎರಡು ಕಿ.ಗ್ರಾಂ ಪಶು ಆಹಾರ ನೀಡಬೇಕು. ಉತ್ತಮ ಖನಿಜ ಮಿಶ್ರಣವನ್ನು ಸೂಕ್ತ ಪ್ರಮಾಣದಲ್ಲಿ ನೀಡುವುದೂ ಸಹ ಅಗತ್ಯ
ಹಾಗಿದ್ದರೆ ಕರುವಿನ ಆಹಾರವನ್ನು ಹೇಗೆ ತಯಾರಿಸಬೇಕು ? ಎನ್ನುವುದು ನಿಮ್ಮ ಪ್ರಶ್ನೆಯಲ್ಲವೇ? ನಿಜ. ಕರುಗಳಿಗೆ ಪ್ರತ್ಯೇಕವಾದ ಆಹಾರ ಬೇಕು. ಇದಕ್ಕೆ ಕಾಫ್ ಸ್ಟಾರ್ಟರ್ ಮತ್ತು ಕಾಫ್ ಫಿನಿಶರ್ ಎಂದು ಕರೆಯುತ್ತಾರೆ. ಮೂರು ತಿಂಗಳವರೆಗೂ ಹಾಲನ್ನೇ ನೀಡಿ ನಂತರ ಕರುವಿಗಾಗಿಯೇ ತಯಾರಿಸಿದ ವಿಶೇಷ ಆಹಾರ ತಯಾರಿಸಬಹುದು ಅಥವಾ ಮಾರುಕಟ್ಟೆಯಲ್ಲಿ ಸಿದ್ಧ ರೂಪದಲ್ಲಿ ಲಭ್ಯವಿರುವ ಕರುವಿನ ಆಹಾರವನ್ನು ನೀಡಬಹುದು. ಕರುವಿನ ಸಮತೋಲ ಆಹಾರವನ್ನು ಈ ಕೆಳಗಿನ ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಬಹುದು;
- ಆಹಾರದ ಅಂಶ ಪ್ರಮಾಣ (ಕೆಜಿ)
- ಮುಸುಕಿನ ಜೋಳದ ಪುಡಿ 40
- ಕಡಲೆ ಕಾಯಿ ಹಿಂಡಿ 40
- ರವೆ ಬೂಸಾ 10
- ಹಾಲಿನ ಪುಡಿ 7
- ಖನಿಜಾಂಶ ಮಿಶ್ರಣ 2
- ಉಪ್ಪು 1
- ಜೀವಸತ್ವ(ಎ.ಡಿ.ಈ.) 50 ಗ್ರಾಂ
- ಜೀವನಿರೋಧಕಗಳು (ಅವಶ್ಯಕತೆಗೆ ತಕ್ಕಷ್ಟು) 30 ಗ್ರಾಂ
ಹಾಗಿದ್ದರೆ ಈ ಹಿಂಡಿಯನ್ನು ಹೇಗೆ ನೀಡಬೇಕು ಅನ್ನುವುದು ಒಂದು ಪ್ರಶ್ನೆ. ಇದನ್ನು ಬೆಳೆಯುವ ಕರುಗಳು ದಿನಕ್ಕೆ ಸರಾಸರಿ 250-500ಗ್ರಾಂ ನಷ್ಟು ತೂಕ ಜಾಸ್ತಿ ಹೊಂದುವುದರಿಂದ ಶರೀರ ತೂಕದ ಶೇ: 5%ರಷ್ಟು ಅಂದರೆ ಮೂರನೇ ತಿಂಗಳಿಗೆ ಕರು 50 ಕಿಲೋ ತೂಗುತ್ತಿದ್ದರೆ ದಿನಕ್ಕೆ 2.5 ಕಿಲೋವನ್ನು ಬೆಳಿಗ್ಗೆ1.25 ಕಿಲೋ ಮತ್ತು ಸಾಯಂಕಾಲ 1.25 ಕಿಲೋ ರಷ್ಟು ಹಾಕಬೇಕು. ಪ್ರತಿ ದಿನವೂ ಸಹ ಇದನ್ನು 26-50ಗ್ರಾಮಿನಷ್ಟು 3-12 ತಿಂಗಳ ವರೆಗೆ ಹೆಚ್ಚಿಸುತ್ತಾ ಹೋಗಬೇಕು.
ಕರು ಪ್ರೌಢಾವಸ್ತೆಗೆ ಬಂದ ನಂತರ ಸಾಕಷ್ಟು ಉತ್ತಮ ಗುಣಮಟ್ಟದ ರಾಗಿ ಹುಲ್ಲು, ಜೋಳದ ಸಿಪ್ಪೆ ಇತ್ಯಾದಿಗಳ ಜೊತೆ ಪ್ರತಿ ದಿನ 3 ಕೆಜಿ ಹಿಂಡಿಯನ್ನು ನೀಡಲೇಬೇಕು. ಅಂದರೆ ಮಾತ್ರ ಕರು ಉತ್ತಮ ಮಣಕವಾಗಿ ಬೆಳೆದು ನಿಗದಿತ ಸಮಯದಲ್ಲಿ ಬೆದೆಗೆ ಬಂದು ಗರ್ಭಧರಿಸಿ ಕರು ಹಾಕುತ್ತದೆ.
ಇದಕ್ಕೆಲ್ಲಾ ಸಿಕ್ಕಾಪಟ್ಟೆ ಖರ್ಚು ಬರುತ್ತದಲ್ಲಾ ಎಂದು ಗೊಣಗಬೇಡಿ. ಏಕೆಂದರೆ ಇಂದಿನ ಕರುವೇ ನಾಳಿನ ಹಸು. ತೆಂಗಿನ ಸಸಿಗೆ ಹೇಗೆ ಉತ್ತಮ ಗೊಬ್ಬರ, ಮಣ್ಣು, ನೀರು ನೀಡಿದಲ್ಲಿ ಹೇಗೆ ದೊಡ್ಡ ದೊಡ್ಡ ರುಚಿಯಾದ ಎಳೆನೀರನ್ನು ನೆಟ್ಟ ಎರಡು ವರ್ಷಗಳಿಗೆ ನೀಡುತ್ತದೆಯೋ ಹಾಗೆಯೇ ಇದೂ ಸಹ.
ಗೋಮಾತೆಗೆ ಏನೇ ಖರ್ಚು ಮಾಡಿದರೂ ಅದರ ದುಪ್ಪಟ್ಟು ವಾಪಸ್ಸು ಬಂದೇ ಬರುತ್ತದೆ. ಉತ್ತಮ, ನಳನಳಿಸುವ ಹಸುವನ್ನು ಸಿದ್ಧ ಗೊಳಿಸಲು ರೂ: 50 ಸಾವಿರ ಖರ್ಚಾದರೂ ಸಹ ಅದರ ಮಾರಾಟ ಬೆಲೆ 75-80 ಸಾವಿರ ಆಗಿಯೇ ಆಗುತ್ತದೆ. ಕಾರಣ ದನ-ಕರುಗಳಿಗೆ ಹಿಂಡಿ, ಹುಲ್ಲು ಹಾಕುವಲ್ಲಿ ಖಂಡಿತಾ ಜಿಪುಣತನ ಬೇಡ. ಗೋಮಾತೆಗೆ ಬೇಕಾಗಿರುವುದು ಹೊಟ್ಟೆ ತುಂಬಾ ಹುಲ್ಲು, ಹಾಲು ನೀಡಲು ಹಿಂಡಿ ಅಷ್ಟೆ. ಇಷ್ಟು ಒದಗಿಸಿ ಗೋಮಾತೆಯ ಕೃಪೆ ಹಾಗೂ ವರಕ್ಕೆ ಪಾತ್ರರಾಗಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!

- ಸಂಗಮೇಶ ಎನ್ ಜವಾದಿ
ಮನುಷ್ಯ ಆರೋಗ್ಯವಾಗಿ ಇರಬೇಕೆಂದರೆ,ದೇಹದ ಎಲ್ಲಾ ಭಾಗಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರಬೇಕು. ಒಂದು ವೇಳೆ ದೇಹದ ಯಾವುದೋ ಭಾಗದಲ್ಲಿ ವ್ಯತ್ಯಾಸ ಉಂಟಾದರೆ,ಮನಸ್ಸಿಗೆ ಕಸವಿಸಿ ಯಾಗುವುದಂತು ನಿಜ,ಈ ಎಲ್ಲಾ ಕಾರಣಗಳು ಗಮನಿಸಿ ಮನುಷ್ಯನ ಅತಿ ಮುಖ್ಯವಾದ ಹೊಟ್ಟೆ ಗ್ಯಾಸ್ ಸಮಸ್ಯೆಯ ಪರಿಹಾರ ಕುರಿತು ಇಲ್ಲಿ ಬರೆಯಲು ಪ್ರಯತ್ನ ಮಾಡಿರುತ್ತೇವೆ.
ಹಾಗಾಗಿ ಕೆಲವೊಮ್ಮೆ ಮನುಷ್ಯನ ಮುಜುಗರಕ್ಕೆ ಎಡೆಮಾಡುವ ಗ್ಯಾಸ್ ಸಮಸ್ಯೆಯು ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ಉಬ್ಬು, ಹೊಟ್ಟೆ ಭಾರ ಹಾಗೂ ಎದೆ ಉರಿಯಂತಹ ಸಮಸ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಜೀರ್ಣಕ್ರಿಯೆ ಸುಗಮವಾಗಿ ನೆರವೇರದೆ ಅನಿಲವು ಸಂಗ್ರಹವಾಗುವ ಸ್ಥಿತಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ.ಹಾಗು ಇದಲ್ಲದೆ ಮನುಷ್ಯನ ಮನಸ್ಸು ಬಯಸಿದ ಊಟ-ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುತ್ತೇವೆ.
ಆದರೆ ಅದರ ಪರಿಣಾಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆಯನ್ನು ಉಂಟುಮಾಡಬಹುದು. ಪದೇ ಪದೇ ಗಾಸ್ ಬಿಡುಗಡೆಯಾಗುವುದು, ಹೊಟ್ಟೆಯಲ್ಲಿ ನೋವು ಹಾಗೂ ಬಳಲಿಕೆ ಉಂಟಾಗುತ್ತದೆ. ಕೆಲವೊಮ್ಮೆ ಸಭೆ-ಸಮಾರಂಭಗಳ ನಡುವೆ ಇರುವಾಗ ಗ್ಯಾಸ್ ಸಮಸ್ಯೆಯು ಅಧಿಕವಾಗಿ ಕಾಡುವ ಸಾಧ್ಯತೆಗಳು ಇರುತ್ತವೆ. ಆಗ ಸಾಕಷ್ಟು ಇರುಸು-ಮುರಿಸು ಉಂಟಾಗುವುದು ಸಹಜ.
ಹೊಟ್ಟೆಯಲ್ಲಿರುವ ಗ್ಯಾಸ್ ಹೊರಗೆ ಹೋದರೆ ಅಷ್ಟು ಸಮಸ್ಯೆ ಎನಿಸದು. ಅದು ಹೊಟ್ಟೆಯಲ್ಲಿಯೇ ಉಳಿದುಕೊಂಡಾಗ ಸಮಸ್ಯೆ ಅಧಿಕವಾಗುವುದಂತು ಗ್ಯಾರಂಟಿ ಎನ್ನುವುದು ಸುಳ್ಳಲ್ಲ.ಹಾಗಾಗಿ ನಾವು ಸೇವಿಸುವ ದೈನಂದಿನ ಆಹಾರ ಸಮತೋಲನ ಹಾಗೂ ಆರೋಗ್ಯ ಪೂರ್ಣವಾಗಿರಬೇಕು. ಬೀನ್ಸ್, ಎಲೆಕೋಸು, ಕಡಲೆ, ಸಕ್ಕರೆ ಯ ಪದಾರ್ಥಗಳು ಹೆಚ್ಚಿನ ಕಾರ್ಬನ್ಗಳನ್ನು ಒಳಗೊಂಡಿರುತ್ತವೆ.
ಅವು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಅವು ಕೊಲೋನ್ ಮೂಲಕ ಹಾದುಹೋಗುತ್ತವೆ. ಅಲ್ಲದೆ ಬಹಳಷ್ಟು ಬ್ಯಾಕ್ಟೀರಿಯಾಗಳಿಂದಲೂ ಕೂಡಿರುತ್ತದೆ. ಅವು ಹೆಚ್ಚು ಅನಿಲವನ್ನು ಬಿಡುಗಡೆ ಮಾಡುವುದರ ಮೂಲಕ ಅನಾರೋಗ್ಯ ಹಾಗೂ ಗ್ಯಾಸ್ ಸಮಸ್ಯೆಯನ್ನು ಸೃಷ್ಟಿಸುತ್ತವೆ.ಆದ್ದರಿಂದ ಇದನ್ನು ತಡೆಗಟ್ಟಲು ಹಲವಾರು ಕ್ರಮಗಳು ಇಂದಿನ (ಮನೆಗಳಲ್ಲಿ)ದಿನಗಳಲ್ಲಿ ಕಾಣುತ್ತೇವೆ.
ಈ ನಿಟ್ಟಿನಲ್ಲಿ ಗ್ಯಾಸ್ ಸಮಸ್ಯೆಗೆ ಪರಿಹಾರ, ಮನೆಮದ್ದು ಇದನ್ನು ನಾವು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಖಂಡಿತಾ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು.
ಕ್ಯಾರಮ್ ಬೀಜ
ಓಂಕಾಳು ಅಥವಾ ಕ್ಯಾರಮ್ ಬೀಜದಲ್ಲಿ ಥೈಮೋಲ್ ಎಂಬ ಸಂಯುಕ್ತವಿದೆ. ಇದು ಜೀರ್ಣ ಕ್ರಿಯೆಗೆ ಸಹಾಯ ಮಾಡುವುದು. ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ ಸಮಸ್ಯೆಯನ್ನು ನಿವಾರಿಸಲು ಕ್ಯಾರಮ್ ಬೀಜವನ್ನು ಸೇವಿಸಬೇಕು. ನಿತ್ಯವೂ ಒಂದು ಬಾರಿ ಅರ್ಧಟೀ ಚಮಚ ಓಂಕಾಳನ್ನು ಜಗೆದು ನೀರನ್ನು ಕುಡಿಯಬಹುದು. ಇಲ್ಲವೇ ನೀರಿಗೆ ಸೇರಿಸಿ, ಕಷಾಯವನ್ನು ತಯಾರಿಸಿಯೂ ಕುಡಿಯಬಹುದು. ಈ ವಿಧಾನವು ಬಹುಬೇಗ ಆರೈಕೆಯನ್ನು ಮಾಡುವುದು.
ಜೀರಿಗೆ ನೀರು (ಉಗುರು ಬೆಚ್ಚಗಿನ ನೀರು)
ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಸಮಸ್ಯೆಗೆ ಜೀರಿಗೆ ನೀರು ಕುಡಿಯುವುದು ಉತ್ತಮ ಮನೆಮದ್ದು. ಜೀರಾ ಅಥವಾ ಜೀರಿಗೆ ಜೀವಾಣು ಗ್ರಂಥಿಗಳನ್ನು ಉತ್ತೇಜಿಸುವ ಸಾರಭೂತ ತೈಲಗಳನ್ನು ಒಳಗೊಂಡಿರುತ್ತದೆ. ಇದು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಅನಿಲದ ರಚನೆಯನ್ನು ತಡೆಯುತ್ತದೆ ಎಂದು ಎಂದು ತಜ್ಞರು ಹೇಳುತ್ತಾರೆ.
ಎರಡು ಕಪ್ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ, 15-20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಕಾಲ ತಣಿಯಲು ಬಿಡಿ. ಊಟ ಆದ ನಂತರ ಈ ಜೀರಿಗೆ ನೀರನ್ನು ಸೇವಿಸಿ. ಆಗ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಪ್ರಕ್ರಿಯೆಯನ್ನು ಸುಲಭವಾಗಿ ತಡೆಯಬಹುದು.
ಅಸಫೊಯೆಟಿಡಾ / ಇಂಗು
ಗ್ಯಾಸ್ ಸಮಸ್ಯೆಯಿಂದ ಬಳಲುವವರು ಅರ್ಧ ಟೀ ಚಮಚ ಇಂಗ್ ಅನ್ನು ಒಂದು ಲೋಟ ಮಜ್ಜಿಗೆಗೆ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬಹುದು. ಈ ವಿಧಾನದಿಂದ ಬಹುಬೇಗ ಗ್ಯಾಸ್ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು. ಇಂಗು ನಿಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲವನ್ನು ಉತ್ಪಾದಿಸುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.ಇಂಗು ವಾಯು ವಿರೋಧಿ ಆಗಿ ಕಾರ್ಯನಿರ್ವಹಿಸುತ್ತದೆ. ಆಯುರ್ವೇದದ ಪ್ರಕಾರ ದೇಹದ ವಾತ ದೋಶವನ್ನು ಸಮತೋಲನಗೊಳಿಸಲು ಇಂಗು ಸಹಾಯ ಮಾಡುತ್ತದೆ.
ಶುಂಠಿ
ಶುಂಠಿಯು ಆಯುರ್ವೇದದಲ್ಲಿ ಅತ್ಯುತ್ತಮ ಔಷಧಿ ಮೂಲ ಎಂದು ಗುರುತಿಸಲಾಗಿದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವುದು. ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಶುಂಠಿಯ ಪರಿಹಾರ ಕಂಡುಕೊಳ್ಳಬಹುದು. ತಾಜಾ ಶುಂಠಿಯ ತುರಿಯನ್ನು ನಿಂಬೆ ರಸದೊಂದಿಗೆ ಸೇರಿಸಿ, ಸೇವಿಸಬೇಕು.
ಈ ಕ್ರಮವನ್ನು ಊಟದ ನಂತರ ಸೇವಿಸಿದರೆ ಉತ್ತಮ ಪರಿಹಾರ ನೀಡುವುದು. ಊಟದ ನಂತರ ಬೆಚ್ಚಗಿನ ಶುಂಠಿ ಚಹಾ ಸೇವಿಸುವುದರಿಂದಲೂ ಹೊಟ್ಟೆ ಉಬ್ಬರ ಗುಣಮುಖವಾಗುವುದು. ಶುಂಠಿ ನೈಸರ್ಗಿಕ ಕಾರ್ಮಿನೇಟಿವ್ ಆಗಿ ಕಾರ್ಯನಿರ್ವಹಿಸುತ್ತದೆ.
ನಿಂಬೆ ರಸ
ಮಾಂಸಹಾರ, ಸಮಾರಂಭಗಳ ಊಟ-ತಿಂಡಿಯಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಒಂದು ಟೀ ಚಮಚ ನಿಂಬೆ ಸರಕ್ಕೆ ಅರ್ಧ ಟೀ ಚಮಚ ಅಡುಗೆ ಸೋಡವನ್ನು ಸೇರಿಸಿ, ಒಂದು ಕಪ್ ನೀರಿನಲ್ಲಿ ಬೆರೆಸಿ. ನಂತರ ಸೇವಿಸಿ. ಇದರಿಂದ ಗ್ಯಾಸ್ ಸಮಸ್ಯೆ ಬಗೆಹರಿಯುವುದು. ಊಟದ ನಂತರ ಈ ಕ್ರಮ ಅನುಸರಿಸಿದರೆ ಹೊಟ್ಟೆಯಲ್ಲಿ ಉತೊತ್ತಿಯಾಗುವ ಕಾರ್ಬನ್ ಡೈ ಆಕ್ಸೈಡ್ಅನ್ನು ದೇಹದ ಹೊರಗೆ ಹೋಗುವಂತೆ ಉತ್ತೇಜನ ನೀಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುವುದು.
ತ್ರಿಫಲ ಪುಡಿ
ಕುದಿಯುವ ನೀರಿಗೆ ಅರ್ಧ ಟೀ ಚಮಚ ತ್ರಿಫಲ ಪುಡಿಯನ್ನು ಸೇರಿಸಿ, 15 -20 ನಿಮಿಷ ಕುದಿಸಿ. ನಂತರ ಒಂದೆಡೆ ಇಡಿ. ಊಟದ ನಂತರ ತ್ರಿಫಲ ದ್ರಾವಣ ಅಥವಾ ನೀರನ್ನು ಕುಡಿಯಿರಿ. ಇದನ್ನು ಅತಿಯಾಗಿ ಕುಡಿದರೂ ಹೊಟ್ಟೆ ಉಬ್ಬರ ಉಂಟಾಗುವುದು. ಹಾಗಾಗಿ ಮಿತವಾದ ಸೇವನೆ ಮಾಡುವುದು ಉಚಿತ. ಅಲ್ಲದೆ ಸಮಸ್ಯೆಯೂ ನಿವಾರಣೆಯಾಗುವುದು. ಆಗಾಗ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಅನಿಲ ತುಂಬುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಅದು ಸಾಮಾನ್ಯ ಸಂಗತಿಯಾಗಿರುತ್ತದೆ. ಇದು ನಮ್ಮಲ್ಲಿ ಹೆಚ್ಚಿನವರಿಗೆ ಸಂಭವಿಸುತ್ತದೆ. ಅದಕ್ಕಾಗಿ ಮನೆ ಮದ್ದು ಬಳಸಿದರೆ ಬಹುಬೇಗ ಶಮನವಾಗುವುದು.
ಆದರೆ ಈ ಸಮಸ್ಯೆ ನಿಯಮಿತವಾಗಿ ಬರುತ್ತಿದೆ ಅಥವಾ ಬಳಲುತ್ತಿದ್ದೀರಿ ಎಂದಾದರೆ ಇದು ಲ್ಯಾಕ್ಟೋಸ್ ಅಸಹಿಷ್ಣುತೆ, ಹಾರ್ಮೋನುಗಳ ಅಸಮತೋಲನ ಅಥವಾ ಕೆಲವು ರೀತಿಯ ಕರುಳಿನ ಅಡಚಣೆಯಂತಹ ಗಂಭೀರ ಅಸ್ವಸ್ಥತೆಯ ಸಂಕೇತವಾಗಿರ ಬಹುದು. ಮಾತ್ರೆಗಳನ್ನು ಹಾಕುವ ಬದಲು ನೈಸರ್ಗಿಕ ಪರಿಹಾರಗಳನ್ನು ಆಶ್ರಯಿಸುವುದು ಯಾವಾಗಲೂ ಒಳ್ಳೆಯದು. ಆದರೆ ಸಮಸ್ಯೆ ಮುಂದುವರಿದರೆ ನಿಮ್ಮ ವೈದ್ಯರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಪರಿಶೀಲನೆ ಹಾಗೂ ಚಿಕಿತ್ಸೆ ಪಡೆಯುವುದು ಸೂಕ್ತ.
ಕೊನೆಯ ಮಾತು
ಕೊಲೆಸ್ಟ್ರಾಲ್ ಮತ್ತು
ಮಸಾಲೆ ಪದಾರ್ಥಗಳನ್ನು ತಿನ್ನುವುದು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ಜೊತೆಗೆ ವ್ಯಾಯಾಮ ಮಾಡುವುದು ಹಾಗ ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರು ಸೇವಿಸುವುದು ಅತ್ಯುತ್ತಮ ಎನ್ನಬಹುದಾಗಿದೆ.ಹೀಗೆ ನಾವು ನಮ್ಮ ಮನೆಯಲ್ಲಿ ಸೀಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಬೆಳ್ಗಣ್ಣ

- ಭಗವತಿ ಎಂ.ಆರ್, ಛಾಯಾಗ್ರಾಹಕಿ, ಕವಯಿತ್ರಿ
ಸದಾ ಚಟುವಟಿಕೆಯಿಂದ ಪುಟಿಯುವ ಹಳದಿ ಬಣ್ಣದ ಹಕ್ಕಿ ಬೆಳ್ಗಣ್ಣ. ಇದಕ್ಕೆ ಬಿಳಿಗಣ್ಣಿನ (Indian white-eye, Birds) ಚಿಟಗುಬ್ಬಿ ಎಂಬ ಮುದ್ದಾದ ಹೆಸರೂ ಇದೆ. ನೋಡಲು ಸಪೂರವಾಗಿದ್ದು, ಕಣ್ಣಿನ ಸುತ್ತ ಬಿಳಿಯ ಉಂಗುರವೇ ಇದರ ಆಕರ್ಷಣೆ. ಇವು ನೆಲದ ಮೇಲೆ ಕಾಣಿಸಿಕೊಳ್ಳುವುದು ಅಪರೂಪ. ಜೋಡಿಯಾಗಿ ಅಥವಾ ಗುಂಪುಗಳಲ್ಲಿ ಇರುತ್ತವೆ.
ಇವುಗಳ ಮುಖ್ಯ ಆಹಾರ ಕೀಟಗಳು. ಹಣ್ಣು, ಹೂವಿನ ಗಿಡಗಳಿರುವಲ್ಲಿ ಕೊಂಬೆಯಿಂದ ಕೊಂಬೆಗೆ ಹಾರುತ್ತಾ, ನೇತಾಡುತ್ತಾ ಇರುತ್ತವೆ. ಇವು ಗೂಡು ಬಟ್ಟಲಾಕಾರವಾಗಿದ್ದು, ತಿಳಿ ನೀಲಿ ಬಣ್ಣದ ಮೊಟ್ಟೆ ಇಡುತ್ತವೆ. ಸಾಧಾರಣವಾಗಿ ಎರಡರಿಂದ ಮೂರು ಮೊಟ್ಟೆಗಳನ್ನಿಡುತ್ತವೆ.
ಗೂಡು ಕಟ್ಟುವಾಗ ಬೇರೆ ಹಕ್ಕಿಗಳ ಗೂಡಿನ ವಸ್ತುಗಳನ್ನು ಇವು ಕದಿಯುತ್ತವೆ ಎಂದು ಪಕ್ಷಿತಜ್ಞರು ಹೇಳುತ್ತಾರೆ. ಹಸಿರು ಮಿಶ್ರಿತ ಹಳದಿ ಬಣ್ಣದ ಇವು ಗಿಡಗಳ ಮೇಲೆ ಕೂತದ್ದು, ಹಾರಿ ಹೋಗುವುದು ಗೊತ್ತಾಗುವುದೇ ಇಲ್ಲ. ಅಂಥ ಚುರುಕಿನ ಹಕ್ಕಿಗಳು ಇವು. ವಿಪರೀತ ಚಟುವಟಿಕೆಯ (Hyperactive) ಸ್ವಭಾವಕ್ಕೆ ಉತ್ತಮ ಉದಾಹರಣೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ
-
ದಿನದ ಸುದ್ದಿ2 days ago
ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ
-
ಬಹಿರಂಗ2 days ago
ಸಂವಿಧಾನ ದಿನಾಚರಣೆ ಹೇಗೆ ಗಣರಾಜ್ಯೋತ್ಸವವಾಯಿತು..?
-
ಬಹಿರಂಗ4 days ago
ನುಡಿದ ಸತ್ಯವನ್ನು ಬಂಧಿಸಲಾಗದು
-
ದಿನದ ಸುದ್ದಿ3 days ago
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ; ಕಾರಣ ಏನು ಗೊತ್ತಾ..!?
-
ಅಂತರಂಗ2 days ago
ಭಾರತದ ಸಂವಿಧಾನ : ಪ್ರಜೆಗಳ ಓದು
-
ದಿನದ ಸುದ್ದಿ2 days ago
ರೈತ ಹೋರಾಟವೆಂಬ ಸಾಗರ ; ಇದು ಬರೀ ಪಂಜಾಬಿನದ್ದಲ್ಲ, ಇಡೀ ದೇಶದ ಹೋರಾಟ
-
ದಿನದ ಸುದ್ದಿ2 days ago
ಹೊಲಿಗೆ ಯಂತ್ರ ಸೌಲಭ್ಯ ನೀಡುವ ಅರ್ಜಿ ಅವಧಿ ವಿಸ್ತರಣೆ