ದಿನದ ಸುದ್ದಿ
ಇಂದು ರಾತ್ರಿ ನರೇಂದ್ರ ಮೋದಿ ಪ್ರಮಾಣವಚನ; ರಾಷ್ಟ್ರಪತಿ ಭವನ ಸಜ್ಜು : ದೆಹಲಿಗೆ ಬಂದಿಳಿದ ವಿದೇಶಿ ಗಣ್ಯರು; ಎಲ್ಲೆಡೆ ಬಿಗಿ ಭದ್ರತೆ
ಸುದ್ದಿದಿನಡೆಸ್ಕ್: ಎನ್ಡಿಎ ಮೈತ್ರಿಕೂಟದ ನಾಯಕ ನರೇಂದ್ರ ಮೋದಿ ಇಂದು ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹೊಸ ಸರ್ಕಾರದ ಸಚಿವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಮತ್ತು ಅಧಿಕಾರದ ಗೌಪ್ಯತೆ ಬೋಧಿಸಲಿದ್ದಾರೆ. ಇದೇ 7 ರಂದು ನರೇಂದ್ರ ಮೋದಿ ಅವರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.
ಸಮಾರಂಭಕ್ಕೆ ನೆರೆಹೊರೆ ರಾಷ್ಟ್ರಗಳ ಹಲವು ನಾಯಕರನ್ನು ಆಹ್ವಾನಿಸಲಾಗಿದೆ. ಶ್ರೀಲಂಕಾದ ಅಧ್ಯಕ್ಷ ರಾಣಿಲ್ ವಿಕ್ರಮ ಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಡಾ.ಮೊಹಮ್ಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನ, ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನೌತ್, ನೇಪಾಳದ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ, ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ ಮತ್ತು ಪೂರ್ವ ಆಫ್ರಿಕಾದ ರಾಷ್ಟ್ರವಾದ ಸೀಶೆಲ್ನ ಉಪರಾಷ್ಟ್ರಪತಿ ಅಹ್ಮದ್ ಅಫೀಫ್ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಾಲ್ಡೀವ್ಸ್ ಅಧ್ಯಕ್ಷ ಡಾ.ಮೊಹಮ್ಮದ್ ಮುಯಿಝು, ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನೌತ್ ಹಾಗೂ ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ ಹಾಗೂ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನ ಮತ್ತು ಸೀಶೆಲ್ನ ಉಪರಾಷ್ಟ್ರಪತಿ ಅಹ್ಮದ್ ಅಫೀಫ್ ನವದೆಹಲಿಗೆ ಆಗಮಿಸಿದ್ದಾರೆ.
ನಿಯೋಜಿತ ಪ್ರಧಾನ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಇಂದು ಚಹಾ ಕೂಟ ಏರ್ಪಡಿಸಿದ್ದರು. ಈ ಸಭೆಯಲ್ಲಿ ಬಿಜೆಪಿ ನಾಯಕರಾದ ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾಧಿತ್ಯ ಸಿಂಧಿಯಾ, ಅರ್ಜುನ್ ಮೇಘವಾಲ್, ಜಿ.ಕಿಶನ್ ರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ, ಇಂದು ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿರುವ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ ಏರ್ಪಡಿಸಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿ ಪೊಲೀಸರು ಬಿಗಿಬಂದೋಬಸ್ತ್ ಮಾಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಸುರಕ್ಷತೆ ಮತ್ತು ಭದ್ರತೆ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ “ಕುಕಿಂಗ್ ವಿಥೌಟ್ ಫೈರ್” ಎಂಬ ಬೆಂಕಿ ರಹಿತ ಆಹಾರ ತಯಾರಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಲವಾರು ತಂಡಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳವೂ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರು ಕಾರಟ್ ಹಲ್ವಾ, ಫ್ರೂಟ್ ಸಲಾಡ್, ಚುರಿ ಮುರಿ, ಮೊಸರು ಅವಲಕ್ಕಿ, ವಿವಿಧ ರುಚಿಯ ಜ್ಯೂಸ್ಗಳು, ಕೊಕೊನೆಟ್ ಬರ್ಫಿ, ಕುಕುಂಬರ್ ಬೋಟ್, ಟೊಮೇಟೊ ಚಾಟ್, ಆಪಲ್ ಪೇಡ ಮತ್ತು ಅವಲಕ್ಕಿ ಚಿತ್ರಾನ್ನ ಸೇರಿದಂತೆ ಹಲವಾರು ಪೌಷ್ಟಿಕ ಹಾಗೂ ರುಚಿಕರ ಆಹಾರಗಳನ್ನು ತಯಾರಿಸಿ ಪ್ರದರ್ಶನೆ ಮತ್ತು ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.
ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.
ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್ಎಚ್ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ನ ನಾಯಕನಾಗಿದ್ದ ಎನ್.ಆರ್.ಎಚ್.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್, 2ನೇ ಮೇನ್ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್ಎಚ್ ರಮೇಶ ನಿಧನಕ್ಕೆ ಎಫ್ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ4 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ7 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ3 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ2 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ಕ್ರೀಡೆ2 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ

