ದಿನದ ಸುದ್ದಿ
ನಡೆದು ಬರುತ್ತಿರುವ ಸಹೋದರಿಯರೊಂದಿಗೆ ಕೈಜೋಡಿಸುವ ಅಗತ್ಯವಿದೆ

ಆತ್ಮೀಯರೆ, ಕಳೆದ 10 ದಿನಗಳಿಂದ ನಿರಂತರವಾಗಿ ಮದ್ಯ ನಿಷೇಧ ಆಂದೋಲನದ ಪಾದಯಾತ್ರೆಯಲ್ಲಿ ನಡೆದು ಬರುತ್ತಿರುವ ಕೂಲಿ ತಾಯಂದಿರು ಮತ್ತು ಅವರ ಜೊತೆಗೆ ಹೆಜ್ಜೆ ಹಾಕುತ್ತಿರುವ ಸಾಮಾಜಿಕ ಕಾರ್ಯಕರ್ತರು ನಾಡಿದ್ದು ಅಂದರೆ ಜನವರಿ 30ರಂದು ಬೆಂಗಳೂರು ತಲುಪುತ್ತಾರೆ. ನಿನ್ನೆ ಆ ತಂಡದಲ್ಲಿ ಆರಂಭದಿಂದ ನಡೆದು ಬಂದಿದ್ದ ರಾಯಚೂರಿನ ರೇಣುಕಮ್ಮ ಎಂಬ ಮಹಿಳೆ ಸರ್ಕಾರದ ನಿಷ್ಕಾಳಜಿಯ ಪರಿಣಾಮವಾಗಿ ಸಾವಿಗೀಡಾದರು.
ಅಷ್ಟಾದರೂ ಆಕೆಯ ವಯೋವೃದ್ಧ ಅತ್ತೆ (ಗಂಡನ ತಾಯಿ-ಈಕೆಯೂ ಮೊದಲ ದಿನದಿಂದ ನಡೆದು ಬರುತ್ತಿದ್ದಾರೆ) ತನ್ನ ಸೊಸೆ ಯಾವ ಹೋರಾಟಕ್ಕಾಗಿ ಪ್ರಾಣಕೊಟ್ಟಿದ್ದಾಳೋ, ಅದನ್ನು ಗುರಿಮುಟ್ಟಿಸಿಯೇ ಸಿದ್ಧ ಎಂದು ನೋವಿನಲ್ಲೂ ಕೆಚ್ಚೆದೆಯ ಮಾತುಗಳನ್ನಾಡಿದ್ದು ನಿಜಕ್ಕೂ ನಮ್ಮ ಮನಸ್ಸನ್ನು ತಟ್ಟಿ ಆತ್ಮವನ್ನು ಅಲುಗಾಡಿಸಿತು. ಇಷ್ಟು ದಿನಗಳ ಸುದೀರ್ಘ ನಡಿಗೆ, ಆಯಾಸ ಅಷ್ಟು ಸಾಲದೆಂದು ಒಡನಾಡಿಯೊಬ್ಬರ ದುರ್ಮರಣ- ಇವ್ಯಾವುವೂ ಪಾದಯಾತ್ರೆಯ ದಿಟ್ಟ ಮಹಿಳೆಯರ ಮನೋಬಲವನ್ನು ಕುಗ್ಗಿಸಿಲ್ಲ!!! ಅವರ ಚೈತನ್ಯ ನಿಜವಾಗಿಯೂ ಈ ಸಮಾಜಕ್ಕೆ ಚಿಕಿತ್ಸೆ ನೀಡುವಷ್ಟು ಶಕ್ತಿಶಾಲಿಯಾಗಿದೆ ಎಂಬುದು ಅವರ ಹತ್ತಿರ ಸುಳಿದ ಯಾರಿಗಾದರೂ ಅನುಭವಕ್ಕೆ ಬಂದೀತು.
ಆದರೆ, ದುರಂತವೆಂದರೆ ಅವರ ನೋವಿನ ಮಾತುಗಳು ಇನ್ನೂ ಸರ್ಕಾರದ ಚುಕ್ಕಾಣಿ ಹಿಡಿದವರನ್ನು ಅಲುಗಿಸಿಲ್ಲ; ಸರ್ಕಾರದ ಮುಂದಾಳುಗಳಿಗೆ ಇವರ ಬದುಕು-ಬವಣೆಗಳು ಉಡಾಫೆಯ ಸಂಗತಿಗಳಾಗಿವೆ ಎಂಬುದನ್ನು ಇಂದು ಕಣ್ಣಾರೆ ನೋಡಿದೆ.
ಇದೀಗ, ತಮ್ಮ ಮತ್ತು ತಮ್ಮಂತಹ ಅಸಂಖ್ಯಾತ ಹೆಣ್ಮಕ್ಕಳ ಬದುಕು ಹಸನಾಗಬೇಕೆಂಬ ಆಶಯದೊಂದಿಗೆ ಪಾದಯಾತ್ರೆ ಹೊರಟ ಈ ಸಹೋದರಿಯರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಅವರ ಒಡಲ ಸಂಕಟದ ದನಿಗೆ ನಮ್ಮೆಲ್ಲರ ದನಿಗಳು ಸೇರಿದರಾದರೂ ಆ ಕಲ್ಲುಕಟ್ಟಡದ ಭ್ರಷ್ಟ ಕೊಠಡಿಗಳೊಳಗೆ ಸೇರಿ ಮಲಗಿರುವ ಸರ್ಕಾರ ಕಣ್ತೆರೆಯಬಹುದೇ? ಅವರ ಅದಮ್ಯ ಮನೋಬಲಕ್ಕೆ ಬನ್ನಿ ಇನ್ನೊಂದಷ್ಟು ಆಶಾವಾದ ಸೇರಿಸೋಣ.
ಈಗಾಗಲೇ ಕರ್ನಾಟಕದ ಸಂವೇದನಾಶೀಲರು ಅನೇಕ ರೀತಿಗಳಲ್ಲಿ ಆಂದೋಲನಕ್ಕೆ ಸ್ಪಂದಿಸಿದ್ದಾರೆ. ಇದನ್ನು ಇನ್ನಷ್ಟು ಹೆಚ್ಚುಮಾಡಿ, ನಮ್ಮಿಂದಾಗುವ ಎಲ್ಲ ರೀತಿಗಳಲ್ಲಿ ಮದ್ಯನಿಷೇಧ ಆಂದೋಲನದಲ್ಲಿ ಬರುತ್ತಿರುವ ಹೋರಾಟದ ಕಿಡಿಗಳಿಗೆ ನೆರವಾಗೋಣ.
ನಾವು ಮಾಡಬಹುದಾದುದೇನು? ಕೆಲವು ಆಲೋಚನೆಗಳು
- ಸಾಧ್ಯವಿರುವ ಎಲ್ಲರೂ ಜ.30ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖುದ್ದಾಗಿ ಬಂದು ಪಾಲ್ಗೊಳ್ಳುವುದು.
- ಮಾಧ್ಯಮಗಳಲ್ಲಿ ಕೆಲಸ ಮಾಡುವವರು/ ಸಂಪರ್ಕ ಹೊಂದಿರುವವರು ಈ ಆಂದೋಲನಕ್ಕೆ ಸಾಧ್ಯವಾದಷ್ಟು ಹೆಚ್ಚು ಪ್ರಚಾರ ಒದಗಿಸುವುದು- ದೃಶ್ಯ ಮಾಧ್ಯಮಗಳಲ್ಲಿ ಇರುವವರು ಈ ಮಹಿಳೆಯರೊಂದಿಗೆ ಸಣ್ಣ ಮಾತುಕತೆ ಕಾರ್ಯಕ್ರಮ ನಡೆಸಲು ಸಾಧ್ಯವೆ ಪ್ರಯತ್ನಿಸುವುದು
- ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಿರುವ, ನಮ್ಮ ನಮ್ಮ ಸ್ನೇಹಿತರ ಬಳಗದಲ್ಲಿರುವ ಪ್ರಭಾವಿಗಳನ್ನು ಸಂಪರ್ಕಿಸಿ, ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹೆಚ್ಚುವಂತೆ ಮಾಡುವುದು- ಒಂದು ತಪಸ್ಸಿನಂತೆ ನಡೆದು ಬಂದಿರುವ ಈ ತಾಯಂದಿರನ್ನು ಕನಿಷ್ಠ ಸಭೆ ಕರೆದು ಚರ್ಚೆ ನಡೆಸುವಂತೆ ಒಪ್ಪಿಸಲು ಆಗ್ರಹಿಸುವುದು.
- ಸ್ವತಃ ಬರೆಯುವವರು, ಪತ್ರಿಕೆಗಳು, magazineಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲದ ಬರಹಗಳು ಪ್ರಕಟವಾಗುವಂತೆ ಪ್ರಯತ್ನಿಸುವುದು
- ಆಂದೋಲನ ಖರ್ಚಿಗೆ ಹಣಕಾಸಿನ ನೆರವು ನೀಡುವುದು.
- ನಮ್ಮ ಸ್ನೇಹಿತರ ಬಳಗದ ಎಲ್ಲರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಹಿತಿ ರವಾನಿಸುವುದು.
ಇವೇ ಮೊದಲಾದ ಹಲವು ಬಗೆಗಳಲ್ಲಿ ನಾವು ಅವರೊಂದಿಗಿದ್ದೇವೆಂಬುದನ್ನು ತೋರಿಸಲು ಸಾಧ್ಯವಿದೆ. ಬನ್ನಿ, ನಡೆದು ದಣಿದು ಬರುತ್ತಿರುವ ನಮ್ಮ ಸಹೋದರಿಯರಿಗೆ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಹೇಳಲು ಸಜ್ಜಾಗೋಣ.
ಕಾಲ್ನಡಿಗೆ ನಿರತ ಮಹಿಳೆಯರ ಪರವಾಗಿ
-ಮಲ್ಲಿಗೆ ಸಿರಿಮನೆ
ಹೋರಾಟಗಾರ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಫೇಲೋಶಿಪ್ ಅಥವಾ ವಿದ್ಯಾರ್ಥಿವೇತನಕ್ಕೆ ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ ಜುಲೈ 13 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸಮುದಾಯದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲು ಇಲಾಖೆ ವೆಬ್ ಸೈಟ್ dom.karkataka.gov.in ನಲ್ಲಿ ಪರಿಶೀಲಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು, ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಜಿಲ್ಲಾ ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ದೂರವಾಣಿ ಸಂ: 08192-250022, 080192-250066 ಗೆ ಸಂಪರ್ಕಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

ಸುದ್ದಿದಿನ,ದಾವಣಗೆರೆ:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಜುಲೈ 12 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಡಿ.ಕೆ.ವೇಲಾ ತಿಳಿಸಿದರು.
ಅವರು ಬುಧವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಲೋಕ್ ಅದಾಲತ್ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜಿ, ಸಂಧಾನ ನಡೆಸಲು ನ್ಯಾಯಾಂಗ ಇಲಾಖೆ ಮತ್ತು ವಕೀಲರ ಕಡೆಯಿಂದಲೂ ಪ್ರತ್ಯೇಕವಾಗಿ ಮಧ್ಯಸ್ಥಗಾರರು ಇರುವರು. ರಾಜಿ, ಸಂಧಾನ ನಡೆಸುವ ಅಧಿಕಾರವನ್ನು ಕಾನ್ಸಿಲೇಟರ್‍ಗಳಿಗೆ ನೀಡಲಾಗಿರುತ್ತದೆ. ಅದಾಲತ್‍ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದಾಲತ್‍ನಲ್ಲಿ ಇತ್ಯರ್ಥವಾಗುವ ಪ್ರಕರಣಗಳು ನ್ಯಾಯಾಲಯದಲ್ಲಿನ ತೀರ್ಪುಗಳಂತೆ ಇರುತ್ತದೆ. ಅದಾಲತ್‍ನಲ್ಲಿ ಇತ್ಯರ್ಥ ಮಾಡಿಕೊಂಡಲ್ಲಿ ಮತ್ತೆ ಅಪೀಲು ಹೋಗಲು ಅವಕಾಶ ಇರುವುದಿಲ್ಲ ಎಂದರು.
ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ, ಕೌಟುಂಬಿಕ ನ್ಯಾಯಾಲಯ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು ಲೋಕ ಅದಾಲತ್‍ನಲ್ಲಿ ಬಗೆಹರಿಸಲಾಗುವುದು. ಈ ದಿನಾಂಕಗಳ ಹೊರತಾಗಿಯೂ ಸತತವಾಗಿ ನಡೆಯುವ ಲೋಕ ಅದಾಲತ್ ಮುಖಾಂತರ ಕೂಡ ಕಕ್ಷಿದಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ಜುಲೈ 12 ರ ಎರಡನೇ ಶನಿವಾರವಾರ ಬೇರೆ ಯಾವುದೇ ಕಲಾಪಗಳು ನಡೆಯದೇ ಸಂಪೂರ್ಣವಾಗಿ ಲೋಕ ಅದಾಲತ್ ಪ್ರಕರಣಗಳ ರಾಜೀ ಸಂಧಾನ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರು ವಕೀಲರ ಸಹಕಾರದೊಂದಿಗೆ ಕಲಾಪ ನಡೆಸುವರು. ಇದೇ ರೀತಿ ತಾಲ್ಲೂಕು ಮಟ್ಟದಲ್ಲೂ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಶೀಘ್ರ ನ್ಯಾಯ ಪಡೆದುಕೊಳ್ಳಲು ಈ ಲೋಕ ಅದಾಲತ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಹತ್ತು ಸಾವಿರ ಪ್ರಕರಣ ಇತ್ಯರ್ಥದ ಗುರಿ
ಜುಲೈ 12ರಂದು ನಡೆಯುವ ಲೋಕ ಅದಾಲತ್‍ನಲ್ಲಿ ರಾಜೀಯಾಗಬಲ್ಲ ಸುಮಾರು 10 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಕಳೆದ ಮಾರ್ಚ್‍ನಲ್ಲಿ ನಡೆದ ಲೋಕ ಅದಾಲತ್‍ನಲ್ಲಿ 10186 ಬಾಕಿ ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ 187026 ಸೇರಿ ಒಟ್ಟು 197215 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿತ್ತು.
ಈಗ ಪ್ರಸ್ತುತ ಎಲ್ಲಾ ನ್ಯಾಯಾಲಯಗಳಲ್ಲಿ 45508 ಪ್ರಕರಣಗಳು ಬಾಕಿ ಇದ್ದು ರಾಜಿ, ಸಂಧಾನಕ್ಕಾಗಿ 12853 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ ಮಾಡುವ ಗುರಿ ಹೊಂದಲಾಗಿದ್ದು ಇದರೊಂದಿಗೆ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಇನ್ನೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲಿದ್ದು ನಿಖರ ಅಂಕಿ ಅಂಶಗಳು ಶನಿವಾರ ಸಿಗಲಿವೆ ಎಂದರು.
ಲೋಕ್ ಅದಾಲತ್‍ನ್ನು ಜನತಾ ನ್ಯಾಯಾಲಯ ಎಂದು ಕರೆಯಲಾಗುತ್ತದೆ. ಜನತಾ ನ್ಯಾಯಾಲಯದಲ್ಲಿ ಸಮಯ, ಹಣ ಉಳಿತಾಯ, ಕಕ್ಷಿದಾರರು ಮತ್ತು ಎದುರುದಾರರಿಗೆ ಸಮಾಧಾನ ತರುವ ನ್ಯಾಯದಾನ ಸಿಗಲಿದೆ. ಮಾನವ ಸಂಬಂಧಗಳನ್ನು ಬೆಸೆಯಬೇಕು. ಸಣ್ಣ ವಿಷಯವನ್ನು ತೆಗೆದುಕೊಂಡು ಪ್ರತಿಷ್ಟೆಯಾಗಿ ಸ್ವೀಕರಿಸಿ ವರ್ಷಾನುಗಟ್ಟಲೆ ನ್ಯಾಯಾಲಯಕ್ಕೆ ಅಲೆದಾಡುವರು. ಇದಕ್ಕಾಗಿ ಹೆಚ್ಚು ಹೆಚ್ಚು ಜನರು ತಮ್ಮ ಪ್ರಕರಣಗಳ ಇತ್ಯರ್ಥಕ್ಕಾಗಿ ಲೋಕ್ ಅದಾಲತ್‍ನಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಅದಾಲತ್‍ನಲ್ಲಿ ಭಾಗವಹಿಸಲು ದಾವಣಗೆರೆ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದೂ.ಸಂ: 08192-296364, ತಾಲ್ಲೂಕು ಕಾನೂನು ಸೇವಾ ಸಮಿತಿ ಹರಿಹರ ದೂ.ಸಂ: 08192-296885, ಹೊನ್ನಾಳಿ ದೂ.ಸಂ:08188-251732, ಚನ್ನಗಿರಿ ದೂ.ಸ 08189-229195 ಮತ್ತು ಜಗಳೂರು ದೂ.ಸ:08196-227600 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ತಹಶೀಲ್ದಾರ್ ಕೋರ್ಟ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕೋರ್ಟ್‍ನಲ್ಲಿ ಇದ್ದ ಅನೇಕ ಆಸ್ತಿ ಪ್ರಕರಣಗಳನ್ನು ಕಕ್ಷಿದಾರರು ಮತ್ತು ಎದುರುದಾರರಿಗೆ ಕಾನೂನು ಅವಕಾಶ, ದಾಖಲಾತಿಗಳ ಕುರಿತು ಮನವರಿಕೆ ಮಾಡಿಕೊಟ್ಟು ಕಡಿಮೆ ಸಮಯದಲ್ಲಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ರಾಜಿ, ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಜನತೆಗೆ ಹಣ, ಸಮಯ ಮತ್ತು ಮಾನಸಿಕ ಸ್ಥಿಮಿತತೆಯನ್ನು ಕಾಪಾಡಲು ಸಹಾಯಕವಾಗಿಲಿದೆ. ಅಷ್ಟೇ ಅಲ್ಲದೇ ಜನತೆ, ರೈತರು ಆರ್ಥಿಕವಾಗಿ ಸದೃಢವಾಗಲು ಹೆಚ್ಚು ಸಹಾಯವಾಗಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಪ್ರತಿಯೊಬ್ಬ ನಾಗರೀಕನಿಗೂ ತ್ವರಿತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಲೋಕ ಅದಾಲತ್ ಮೂಲಕ ಸರಳ ಮತ್ತು ಬಾಕಿ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಬಹುದಾಗಿದೆ ಎಂದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಾಹಾವೀರ ಮ ಕರೆಣ್ಣವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್, ಕಾರ್ಯದರ್ಶಿ ಬಸವರಾಜ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ

ಸುದ್ದಿದಿನ,ದಾವಣಗೆರೆ:ಇದೇ 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ದೊಡ್ಡಬೂದಿಹಾಳ್ ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‍ನಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಕಾರ್ಮಿಕ ಸಚಿವರಾದ ಸಂತೋಷ್.ಎಸ್.ಲಾಡ್ ಉದ್ಘಾಟಿಸುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಘನುಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದ ಎಂ.ಗೌಡ, ಡಿ.ಎಸ್ ಅರುಣ್, ಕೆ.ಎಸ್.ನವೀನ್, ಕೆ.ಅಬ್ದುಲ್ ಜಬ್ಬಾರ್, ಡಾ.ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಧ ಶಾಮನೂರು.ಟಿ.ಬಸವರಾಜ್, ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ24 hours ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ24 hours ago
ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ24 hours ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್