ಅಂತರಂಗ
ಉದ್ಯೋಗಕ್ಕಾಗಿ ರೈಲ್ವೆ ಟ್ರ್ಯಾಕ್ ಮೇಲೆ 25 ಕಿ.ಮೀ ನಡೆದ ಆ ದಿನಗಳು : ರಘೋತ್ತಮ ಹೊ.ಬ
- ರಘೋತ್ತಮ ಹೊ.ಬ
ಅದೊಂದು ದಿನ, 20 ವರ್ಷಗಳ
ಹಿಂದೆ ಇರಬಹುದು, ಶಿಕ್ಷಣದಲ್ಲಿ ಸ್ವಲ್ಪ ಡಿಸ್ಟರ್ಬ್ ಆಗಿದ್ದ ದಿನಗಳವು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಗೆಳೆಯರೊಬ್ಬರ ಕೊಠಡಿಯಲ್ಲಿ ಉಳಿದುಕೊಂಡಿದ್ದೆ. ಮೆಸ್ ಹಾಗೂ ಬೇರೆ ಬೇರೆ ವ್ಯವಸ್ಥೆ ಇದ್ದದ್ದರಿಂದ ಊಟಕ್ಕೆ ಕೊರತೆ ಇರಲಿಲ್ಲ. ಆದರೆ ದುಡ್ಡು, ಕಾಸಿಗೆ? ಓಹ್, ಉದ್ಯೋಗ ಮಾಡಿದರಾಯಿತು ಎಂದು ಉದ್ಯೋಗ ಹುಡುಕಲು ಹೊರಟೇ ಬಿಟ್ಟೆ!
ಉದ್ಯೋಗ, ಅರೆ ಎಲ್ಲಿ ಹುಡುಕುವುದು? ಹೊಟೆಲ್ ಕೆಲಸ, ಅಂಗಡಿ ಕೆಲಸ… ಇತ್ಯಾದಿ ನೆನಪಿಗೆ ಬಂದವಾದರೂ ಸ್ವಾಭಿಮಾನ ಒಪ್ಪಲಿಲ್ಲ. ಗೌರವಯುತ ಉದ್ಯೋಗ ಸರಿ ಎಂದು ಯಾವುದಾದರೂ factory ಸೇರುವುದೇ ಲೇಸು ಎಂದು ಕೈಗಾರಿಕಾ ಪ್ರದೇಶಗಳತ್ತ ಹೋಗುವುದು ಎಂದು ತೀರ್ಮಾನಿಸಿದೆ.
ಕೈಗಾರಿಕಾ ಪ್ರದೇಶ, ಯಾವುದು? ತಕ್ಷಣ ನನ್ನ ನೆನಪಿಗೆ ಬಂದದ್ದು ನಂಜನಗೂಡು ಬಳಿಯ ತಾಂಡವಪುರ ಕೈಗಾರಿಕಾ ಪ್ರದೇಶ. ಮೈಸೂರು ಮತ್ತು ನಂಜನಗೂಡು ಮಧ್ಯೆ ಬರುವ ಕೈಗಾರಿಕಾ ಪ್ರದೇಶ ಅದು. ಚಾಮರಾಜನಗರದಿಂದ ಟ್ರೈನ್ ನಲ್ಲಿ ಮೈಸೂರಿಗೆ ಬರುವಾಗ ರೈಲ್ವೆ ಹಾದಿಯಲ್ಲಿ ಅದನ್ನು ಕಂಡಿದ್ದೆನಾದ್ದರಿಂದ ಅಲ್ಲಿ ನೂರಾರು ಕೈಗಾರಿಕೆಗಳಿರುತ್ತವೆ, ಆದ್ದರಿಂದ ಅಲ್ಲಿಗೇ ಹೋಗುವುದು ಸರಿ ಎಂದು ನಿರ್ಧರಿಸಿದೆ. ಹೊರಡಲು ಅನುವಾದೆ.
ಹಾಗೆ ಹೊರಡುವಾಗ ಜೇಬಿನಲ್ಲಿ ದುಡ್ಡಿದೆಯಾ ಎಂದು ನೋಡಲು ಕೈಹಾಕಿದೆ. ಇದ್ದದ್ದು ಐದೇ ರೂಪಾಯಿ! ಏನು ಮಾಡುವುದು? ಬಸ್ ಚಾರ್ಜ್ ಗೆ ಕೂಡ ಕಾಸಿಲ್ಲ. ಹಾಗಂತ ಕೆಲಸ ಹುಡುಕದೆ ಇರಲು ಸಾಧ್ಯವಿಲ್ಲ. ಹುಡುಕದಿದ್ದರೆ ನಾಳೆಯಿಂದ ಜೇಬಲ್ಲಿ ಆ ಐದು ರೂಪಾಯಿ ಕೂಡ ಇರೋಲ್ಲ! ಏನು ಮಾಡುವುದು? ಮನಸ್ಸು ಜೋರಾಗಿ ಓಡಲು ಶುರು ಮಾಡಿತು. ಒಂದು ಐಡಿಯಾ ಹೊಳೆಯಿತು. ಹೇಗಿದ್ದರೂ ಆ ಕೈಗಾರಿಕಾ ಪ್ರದೇಶ ರೈಲು ಹಾದಿಯ ಪಕ್ಕ ಬರುತ್ತದೆ. ಆದ್ದರಿಂದ ರೈಲು ಹಾದಿಗುಂಟ ನಡೆದುಕೊಂಡು ಹೋದರೆ…?
ಅದೇ ಸರಿ ಅನಿಸಿತು. ಮೈಸೂರಿನಿಂದ ರೈಲ್ವೆ ಟ್ರ್ಯಾಕ್ ಹಾದಿ ಹಿಡಿದು ನಡೆಯಲು ಪ್ರಾರಂಭಿಸಿದೆ. ಆಘಾತದ ವಿಚಾರವೆಂದರೆ, ನೇರ ಹಾದಿ ಒಂದ್ಹತ್ತು ಕಿಲೋಮೀಟರ್ ಆಗಬಹುದು ಎಂದುಕೊಂಡರೆ ಮಧ್ಯೆ ಸೇತುವೆ, ಹೊಲ- ಗದ್ದೆ, ಕೆಲವು ಕಡೆ ದುರ್ಗಮ ಹಾದಿ… ಒಂದರೆಕ್ಷಣ ವಾಪಸ್ ಹೋಗೋಣ ಅನಿಸಿತ್ತು. ತಕ್ಷಣ, ಮತ್ತೆ ಉದ್ಯೋಗದ ನೆನಪಾಗಿ ಮುಂದೆ ಹೆಜ್ಜೆ ಇಡಲಾರಂಭಿಸಿದ್ದೆ. ಏರು ಬಿಸಿಲು, ಸುಸ್ತು, ಆದರೂ ತಲೆ ಕೆಡಿಸಿಕೊಳ್ಳದೆ ಉದ್ಯೋಗದ ಬೆನ್ನತ್ತಿ ಮುಂದೆ ಸಾಗಿದೆ.
ರೈಲ್ವೆ ಟ್ರ್ಯಾಕ್ ಹಾದಿಗುಂಟ ನಡೆಯುವಾಗ ಕೆಲವೊಮ್ಮೆ ಟ್ರೈನ್ ಹತ್ತಿರವೇ ಸಾಗುತ್ತಿತ್ತು. ಹಾಗೆಯೇ ಟ್ರೈನ್ ಇಲ್ಲದಾಗ ರೈಲ್ವೆ ಟ್ರ್ಯಾಕ್ ಮೇಲೆಯೇ ನಡೆದಿದ್ದೆ! ಅಂತು ಇಂತೆಲ್ಲ ಸಾಹಸದ ಬಳಿಕ ಬೆಳಿಗ್ಗೆ 11 ಗಂಟೆಗೆ ಮೈಸೂರು ಬಿಟ್ಟವನು ಮಧ್ಯಾಹ್ನ 2 ಅಥವಾ 2-30 ಇರಬೇಕು ತಾಂಡವಪುರ ಕೈಗಾರಿಕಾ ಪ್ರದೇಶ ತಲುಪಿದೆ. ಹೆಚ್ಚು ಕಮ್ಮಿ 25 ಕಿ.ಮೀ ನಡೆದೆ. ಆದರೂ ಬೇಸರ ಇಲ್ಲ. ಉದ್ಯೋಗ ಬೇಕಲ್ಲವೆ?
ಹಾಗೆಯೇ ತತಕ್ಷಣ ತಡ ಮಾಡಬಾರದು ಎಂದು ಒಂದಷ್ಟು ಕೈಗಾರಿಕೆ ಘಟಕಗಳಲ್ಲಿ ವಿಚಾರಿಸಿದೆ. ನೋಡಿದರೆ ಎಲ್ಲೆಲ್ಲೂ ಕೆಲಸ ಖಾಲಿ ಇಲ್ಲ ಎಂದು ಸೂಚಿಸುವ No Vacancy ಬೋರ್ಡ್ ಗಳು! ಕೆಲವು ಕಡೆ ವಿಚಾರಿಸಿದಾಗ ಪೇಪರ್ ನಲ್ಲಿ ಜಾಹೀರಾತು ನೀಡುತ್ತೇವೆ. ಆಮೇಲೆ apply ಮಾಡಿ ಬನ್ನಿ ಎಂಬ ಉತ್ತರ. ಇನ್ನೊಂದೆರಡು ಫ್ಯಾಕ್ಟರಿ ನೋಡಿದೆ. ಅಲ್ಲಿ ಆ ಕೆಲಸಗಾರರು ಕೆಲಸ ಮಾಡುವ ಪರಿ ನೋಡಿಯೇ ಅದೆಷ್ಟು ಕಷ್ಟ ಎಂದು ಅರಿತು ವಿಚಾರಿಸಲೇ ಹೋಗಲಿಲ್ಲ.
ಈ ನಡುವೆ ಸಮಯ ಮಧ್ಯಾಹ್ನ 3 ನ್ನು ಮೀರಿತ್ತು. ಹೊಟ್ಟೆ ಬೇರೆ ತುಂಬಾ ಹಸಿದಿತ್ತು. ಸಮೀಪದಲ್ಲೇ ಇದ್ದ ಫುಟ್ ಪಾತ್ ಹೊಟೆಲ್ ಒಂದಕ್ಕೆ ಹೋದೆ. ಅನ್ನ ಸಾಂಬಾರ್ ಒಂದು ಪ್ಲೇಟ್ ಎಷ್ಟು ಎಂದು ಕೇಳಿದೆ. ಪ್ಲೇಟ್ 10 ರೂ ಅಂದರು. ಹಾಫ್ ಕೊಡ್ತೀರ ಅಂದೆ. ಹೌದು, 5 ರೂಪಾಯಿ ಅಂದರು. ಅರ್ಧ ಅನ್ನ ಸಾಂಬಾರ್ ತಿಂದೆ. ಹೊಟ್ಟೆ ತುಂಬ ನೀರು ಕುಡಿದೆ. ಸಂಜೆ ಮೈಸೂರಿಗೆ ಟ್ರೈನ್ 6 ಗಂಟೆಗೆ ಎಂದು ತಿಳಿಯಿತು. ಜೇಬಲ್ಲಿ ಒಂದು ಪೈಸೆ ಇರಲಿಲ್ಲ. ಜನರಲ್ ಬೋಗಿಯಲ್ಲಿ ಹತ್ತಿ ಟಿಕೆಟ್ ರಹಿತ ಪ್ರಯಾಣ ಮಾಡಿದರಾಯಿತು ಎಂದು ಸುಮ್ಮನಾದೆ ಮತ್ತು ರೈಲು ಬರುವ ತನಕ ನಿಲ್ದಾಣದಲ್ಲಿ ಒಂದಷ್ಟು ಕವನ, ಕತೆ ಗೀಚಿದೆ.
ನಡುವೆ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದ ಒಂದಷ್ಟು ಅಂಕಪಟ್ಟಿಗಳು, ಮಾಡಿಸಿಟ್ಟುಕೊಂಡಿದ್ದ ಎಂಪ್ಲಾಯ್ ಮೆಂಟ್ ಕಾರ್ಡ್ ನನ್ನನ್ನು ಅಣಕಿಸಿದವು. ನಾನು ಅವುಗಳನ್ನು ನೋಡಿ ಅಣಕಿಸಿದೆ. ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ ಅಂಕ 600ಕ್ಕೆ 475 ಎಂದಿತ್ತು, ಗಣಿತ ವಿಷಯದಲ್ಲಿ 100ಕ್ಕೆ 91 ಎಂದಿತ್ತು! ಆದರೆ ಅವ್ಯಾವುದಕ್ಕೂ ಆ ದಿನ ನಾನು ಉದ್ಯೋಗಕ್ಕಾಗಿ ರೈಲ್ವೆ ಟ್ರ್ಯಾಕ್ ಮೇಲೆ ನಡೆಯುವುದನ್ನು ತಪ್ಪಿಸಲಿಕ್ಕೆ ಆಗಲಿಲ್ಲ!
ಸಂಜೆ 5-30ಕ್ಕೆ ಟ್ರೈನ್ ಬಂತು ಯೋಜನೆಯಂತೆ ಜನರಲ್ ಬೋಗಿಯಲ್ಲಿ ಹತ್ತಿ ಕುಳಿತು ಮೈಸೂರು ತಲುಪಿದೆ. ಗೆಳೆಯನಿಗೆ ಈ ಕತೆ ಹೇಳಲಿಲ್ಲ. ಯಾಕೆಂದರೆ ಆತ ಸಂಬಂಧಿ ಕೂಡ ಹೌದು. ಹಾಗಿದ್ದರೂ ಈಗ ಎಲ್ಲರ ಮುಂದೆ ಹೇಳುತ್ತಿದ್ದೇನೆ. ಯಾಕೆಂದರೆ ಮಿತ್ರರೊಬ್ಬರು ನಿನ್ನೆ ಶಾಲೆಯೊಂದರಲ್ಲಿ ಗೌರವ ಶಿಕ್ಷಕರಾಗಿ ಎಂಟು ತಿಂಗಳು ದುಡಿದು ಸಂಬಳವಿಲ್ಲದೆ ಬಿಡುಗಡೆಗೊಂಡಿದ್ದರು. ಸಂಬಳ ಇನ್ನೂ ಆಗದ್ದಕ್ಕೆ ಇನ್ನೂ ಬಿಲ್ ಆಗಿಲ್ವಂತೆ ಸರ್
ಎಂಬುದು ಕಾರಣವಾಗಿತ್ತು.
ಹಾಗಿದ್ದರೂ ಅವರು ಸ್ಕೂಟರ್ ಸ್ಟಾರ್ಟ್ ಮಾಡಿ “ಸರ್, ಬನ್ನಿ ಡ್ರಾಪ್ ಮಾಡುತ್ತೇನೆ” ಎಂದರು! ಗಾಡಿಗೆ ಪೆಟ್ರೋಲ್ ಹೇಗೆ ಬರುತ್ತದೆ, ಮನೆಗೆ ಏನು ಕೊಡುತ್ತಾರೆ, ಮದುವೆಯಾದರೆ ಇವರ ಗತಿ ಏನು…. ಹೀಗೆ ನೂರಾರು ಪ್ರಶ್ನೆಗಳು ಹಾದು ಹೋದವು. ಹಾಗೆ ಸ್ಮೃತಿಪಟಲದಲ್ಲಿ ನಾನು ಉದ್ಯೋಗ ಹುಡುಕಿ ರೈಲ್ವೆ ಟ್ರ್ಯಾಕ್ ಮೇಲೆ 25 ಕಿ.ಮೀ ನಡೆದ ಘಟನೆಯೂ ಹಾದುಹೋಯಿತು.
“ನಿರುದ್ಯೋಗ ಮಹಾರೋಗ“. ಈ ರೋಗದಿಂದ ಪ್ರತಿಯೊಬ್ಬ ಯುವಕ-ಯುವತಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮುಂದಡಿ ಇಡಬೇಕಿದೆ. ಇಲ್ಲದಿದ್ದರೆ ನಾನು ಅಂದು ರೈಲ್ವೆ ಟ್ರ್ಯಾಕ್ ಮೇಲೆ ನಡೆದಾಡಿದೆ. ಆದರೆ ಇಂದು ನಮ್ಮ ಯುವಕ – ಯುವತಿಯರು ಅದೇ ಟ್ರ್ಯಾಕ್ ಗೆ ತಲೆ ಕೊಡಲಿದ್ದಾರೆ ಅಷ್ಟೇ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೇವನಗರಿ ಸುದ್ದಿದಿನ ಕನ್ನಡ ದಿನಪತ್ರಿಕೆ, ಏಕಾಂತಗಿರಿ ಟ್ರಸ್ಟ್, ದಾವಣಗೆರೆ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ‘ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿ–2026’ ಘೋಷಿಸಲಾಗಿದ್ದು, ಅರ್ಹ ಬರಹಗಾರರಿಂದ ಕಾದಂಬರಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ, ಸೃಜನಶೀಲತೆ ಹಾಗೂ ವಿಭಿನ್ನ ಕಥನ ಸಾಧ್ಯತೆಗಳನ್ನು ಹೊಂದಿರುವ ಕಾದಂಬರಿಕಾರರನ್ನು ಪರಿಚಯಿಸುವ ಆಶಯದೊಂದಿಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದುವರೆಗೆ ಯಾವುದೇ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದ ಬರಹಗಾರರಿಗೆ ತಮ್ಮ ಸೃಜನಶೀಲತೆಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲು ಇದು ಉತ್ತಮ ವೇದಿಕೆಯಾಗಲಿದೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿರುವ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗೆ ಸಲ್ಲಿಸುವ ಕಾದಂಬರಿಯು ಸಂಪೂರ್ಣ ಸ್ವತಂತ್ರ ಹಾಗೂ ಲೇಖಕರ ಸ್ವಂತ ರಚನೆಯಾಗಿರಬೇಕು. ಕಾದಂಬರಿಯ ಯಾವುದೇ ಭಾಗವು ಈ ಮೊದಲು ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು ಅಥವಾ ಪ್ರಸಾರವಾಗಿರಬಾರದು. ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಕಾದಂಬರಿಗಳನ್ನು ಪರಿಗಣಿಸಲಾಗುವುದಿಲ್ಲ. ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ.
ಹಸ್ತಪ್ರತಿಯನ್ನು A4 ಅಳತೆಯ ಹಾಳೆಯಲ್ಲಿ ನುಡಿ ಅಥವಾ ಯುನಿಕೋಡ್ ಕನ್ನಡ ಫಾಂಟ್ ಬಳಸಿ, 12 ಪಾಯಿಂಟ್ ಅಕ್ಷರ ಗಾತ್ರದಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿರಬೇಕು. ಕಾದಂಬರಿಯು ಕನಿಷ್ಠ 120 ಪುಟಗಳಿಗಿಂತ ಕಡಿಮೆ ಇರಬಾರದು. ಹಸ್ತಪ್ರತಿಯ ಮೊದಲ ಪುಟದಲ್ಲಿ ಕಾದಂಬರಿಯ ಶೀರ್ಷಿಕೆಯನ್ನು ಮಾತ್ರ ನಮೂದಿಸಬೇಕು. ಲೇಖಕರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಹಾಗೂ ಕಾದಂಬರಿಯ ಸಂಕ್ಷಿಪ್ತ ಪರಿಚಯವನ್ನು ಪ್ರತ್ಯೇಕ ಲಕೋಟೆಯಲ್ಲಿ ಕಳುಹಿಸಬೇಕು. ಕೃತಿಯು ಸ್ವತಂತ್ರ ರಚನೆಯಾಗಿದ್ದು, ಈ ಮೊದಲು ಪ್ರಕಟವಾಗಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರವನ್ನೂ ಲಗತ್ತಿಸುವುದು ಕಡ್ಡಾಯವಾಗಿದೆ.
ಕೃತಿಗಳ ಆಯ್ಕೆಯಲ್ಲಿ ಸಾಹಿತ್ಯಕ ಗುಣಮಟ್ಟ, ಭಾಷಾ ಸೊಗಸು, ಕಥನ ತಂತ್ರ, ಸೃಜನಶೀಲತೆ, ವೈಚಾರಿಕತೆ ಹಾಗೂ ಸಾಮಾಜಿಕ ಪ್ರಸ್ತುತತೆಗೆ ಆದ್ಯತೆ ನೀಡಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಸಲ್ಲಿಸಿದ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆಯಾಗುವ ಕಾದಂಬರಿಗೆ ₹10,000 ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಆಸಕ್ತರು ತಮ್ಮ ಹಸ್ತಪ್ರತಿಗಳನ್ನು ಡಿಸೆಂಬರ್ 30, 2026ರೊಳಗೆ ಕಳುಹಿಸಬೇಕು.
ಹಸ್ತಪ್ರತಿಗಳನ್ನು ‘ಸಂಪಾದಕರು, ದೇವನಗರಿ ಸುದ್ದಿದಿನ–ಕನ್ನಡ ದಿನಪತ್ರಿಕೆ, #3231/01, ಸಂಜೀವ ಸದನ, 11ನೇ ಮುಖ್ಯ ರಸ್ತೆ, 4ನೇ ಅಡ್ಡರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್, ದಾವಣಗೆರೆ–577004’ ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9980346243 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಅಂತರಂಗ
ಸಂತೆಬೆನ್ನೂರು ಫೈಜ್ನಟ್ರಾಜ್ ಗೆ ಮುದ್ದಣ ಕಾವ್ಯ ಪ್ರಶಸ್ತಿ
ಸುದ್ದಿದಿನ,ದಾವಣಗೆರೆ:ಮೂಡುಬಿದರೆಯ ಕಾಂತಾವರ ಕನ್ನಡ ಸಂಘ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ವತಿಯಿಂದ ಪ್ರತಿವರ್ಷ’ ಮುದ್ದಣ ಕಾವ್ಯ ಪ್ರಶಸ್ತಿ ಗಾಗಿ’ ಏರ್ಪಡಿಸುವ ಕವನ ಸಂಕಲನಗಳ ಹಸ್ತಪ್ರತಿ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ” ಅಂಗುಲಿಮಾಲನ ಎದುರು ಕೂತ ಬುದ್ಧ ನೀನಲ್ಲ” ಎಂಬ ಹಸ್ತಪ್ರತಿಗೆ 2026 ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ನಾ. ಮೊಗಸಾಲೆ ಘೋಷಣೆ ಮಾಡಿದ್ದಾರೆ.
ನಾಡಿನ ಪ್ರತಿಷ್ಠಿತ ಕವಿ ಉಡುಪಿಯ ನಂದಳಿಕೆ ಲಕ್ಷ್ಮೀ ನಾರಾಯಣ ಅಥವಾ ನಂದಳಿಕೆಯ ಮುದ್ದಣ ಹೆಸರಿನಲ್ಲಿ ಕೊಡಲ್ಪಡುವ ಈ ಪ್ರಶಸ್ತಿ ಗೆ 1979 ರಿಂದಲೂ ಈ ಸ್ಪರ್ಧೆ ನಡೆಯುತ್ತಾ ಬಂದಿದೆ.
ಇದುವರೆಗೂ ಕರ್ನಾಟಕದ ಗಮನಾರ್ಹ ಕವಿಗಳು ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ನಾಡಿನಾದ್ಯಂತ ಕಥೆ, ಕವಿತೆ, ಪ್ರಬಂಧಗಳ ಮೂಲಕ ಮನೆಮಾತಾಗಿರುವ ಮತ್ತು ಹದಿನೈದು ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಫೈಜ್ನಟ್ರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಅಲ್ಲದೇ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಂಘ ( ಶಿವಮೊಗ್ಗ) ನೀಡುವ ಪಿ.ಲಂಕೇಶ್ ಪ್ರಶಸ್ತಿ, ಕಸಾಪದಿಂದ ಸಿಸು ಸಂಗಮೇಶ ಪ್ರಶಸ್ತಿ,, ರಾಜ್ಯಮಟ್ಟದ ಅನೇಕ ಕಥಾ ಪ್ರಶಸ್ತಿ, ವಿಭಾ ಕಾವ್ಯ ಪುರಸ್ಕಾರ ಇನ್ನೂ ಮುಂತಾದ ಪ್ರಶಸ್ತಿ ಪಡೆದಿದ್ದಾರೆ.
ವಿ.ವಿಗಳಲ್ಲೂ ಇವರ ಕತೆ, ಕವಿತೆ ಪಠ್ಯ ಆಗಿವೆ.
ಪ್ರಸ್ತುತ ಪ್ರಶಸ್ತಿಯೂ ಹತ್ತು ಸಾವಿರ ನಗದು,ತಾಮ್ರಪತ್ರ ಮತ್ತು ಸನ್ಮಾನ ಒಳಗೊಂಡಿದ್ದು 2027 ಮಾರ್ಚ್ ನಲ್ಲಿ ನಡೆಯುತ್ತದೆ.ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ಸಮಾರಂಭ ನೆರವೇರುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸದಾನಂದ ನಾರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



