Connect with us

ಅಂತರಂಗ

ನಿಂತಾಗ ಬುಗುರಿಯ ಆಟ..!

Published

on

  • ಹಿರಿಯೂರು ಪ್ರಕಾಶ್

ಹೇ..ಸಾವೇ ನೀನೆಂತಹಾ ಕ್ರೂರಿ ! ನೀನು‌ ಕ್ರೂರ, ಘೋರ ಎನ್ನುವುದು ಗೊತ್ತಿತ್ತು. ಆದರೆ‌ ನೀನಿಂಥ ಸ್ವಾರ್ಥಪೂರಿತ ಕ್ರೂರಿಯೆನ್ನುವುದು , ಕಿಂಚಿತ್ತೂ ಕರುಣೆಯಿಲ್ಲದ ಮಾರಿಯೆನ್ನುವುದು ಗೊತ್ತಿರಲಿಲ್ಲ !. ಈ ಪ್ರಪಂಚದಲ್ಲಿ ಜನಿಸಿದ ಪ್ರತೀ ಜೀವಿಯೂ ಅಸುನೀಗಲೇ ಬೇಕು ನಿಜ. ಅದಕ್ಕೆ ಭೇಧ ಭಾವವಿಲ್ಲ.

ಆದರೆ ಈ ನಾಡಿನ ಸಂಗೀತಪ್ರಿಯರೆಲ್ಲರೂ ನಿರ್ವಿವಾದವಾಗಿ, ನಿರುಮ್ಮಳವಾಗಿ, ನಿಷ್ಕಲ್ಮಶವಾಗಿ , ನಿತ್ಯ ನಿರಂತರವಾಗಿ ಪ್ರೀತಿಸುತ್ತಿದ್ದ ಒಂದು ಅಮೂಲ್ಯ ಹಿರಿಯ ಜೀವವನ್ನು ಇನ್ನಷ್ಟು ಕಾಲ ಹೀಗೆ ಪ್ರೀತಿಸುವ ಹೃದಯಗಳ ಎದೆಚಿಪ್ಪಿನಲ್ಲಿ ಉಳಿಸುವ ಒಂದು ಔದಾರ್ಯತೆಯ ಧಾರಾಳತೆ ತೋರಬಹುದಿತ್ತು. ಆದರೆ ಈ ಜಗತ್ತಿನ ಎಲ್ಲಾ ಒಳ್ಳೆಯದನ್ನು, ಒಳ್ಳೆಯ ವ್ಯಕ್ತಿಗಳನ್ನು ಆತುರಾತುರವಾಗಿ‌ ನಿನ್ನಲ್ಲಿ ಲೀನವಾಗಿಸಿಕೊಳ್ಳುವ ನಿನ್ನ ನಿರಂತರ ಕೆಟ್ಟ ಬುದ್ದಿಗೆ ‌ಇಂದು ಗಾನಲೋಕದ ಗಾರುಡಿಗ, ಸ್ವರ ಸಾಮ್ರಾಟ, ಅಜಾತಶತ್ರು, ಕೋಟಿ ಕೋಟಿ ಸಂಗೀತಪ್ರಿಯರ ಮನಸುಗಳಲ್ಲಿ ಸ್ಥಿರವಾಗಿ ನೆಲೆಯೂರಿರುವ , ಭಾಷಾತೀತ, ಸೀಮಾತೀತ ಸಹೃದಯಿ, ಸ್ನೇಹಮಯೊ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರನ್ನೂ ಬಲಿಯಾಗಿಸಿ ರುವುದು ಮಾತ್ರ ಕೋಟಿ ಕೋಟಿ ಸುಮಧುರ ಮನಸುಗಳ ಹೃದಯಕ್ಕೆ ಕೊಳ್ಳಿಯಿಟ್ಟಂತಾಗಿದೆ.

ಶುಕ್ರವಾರ ಮಧ್ಯಾಹ್ನ‌ ಬಂದೆರಗಿದ ಅರಗಿಸಿಕೊಳ್ಳಲಾಗದ‌ ಈ ಸುದ್ದಿ ಅವರನ್ನು ಮೆಚ್ಚುವವರ ಮನಸಿನಾಳದಲ್ಲಿದ್ದ ದುಃಖದ ಮಡುವನ್ನು‌ ಛಿದ್ರಗೊಳಿಸಿ ನೋವಿನಲೆಗಳ ತರಂಗಗಳು ಒತ್ತರಿಸಿ ಹೊರ ಬರುವಂತೆ ಮಾಡಿದೆ. ಹೃದಯಗಳು ಭಾರವೆನಿಸಿ ಕಣ್ಣುಗಳು ಕಂಬನಿಯ ಬಿಂದುಗಳಿಂದ ಅರಳುಗಟ್ಟಿ ಆರ್ದ್ರವಾಗುತ್ತಿವೆ. ಬಾಲುರವರ ನಿರ್ಗಮನದಿಂದ ಉಂಟಾಗಿರುವ ಸಂಗೀತಲೋಕದ ಶೂನ್ಯತೆಯನ್ನು ವರ್ಣಿಸಲು ಈ ಸಂಗೀತದ ನಿರಕ್ಷರಕುಕ್ಷಿಗೆ ಪದಗಳೇ ಹೊಳೆಯುತ್ತಿಲ್ಲ.

ಮನದ‌ ವೇದನೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಾಗದಂತೆ ಭಾವನೆಗಳ ಜೊತೆಗೆ ಬೆರಳುಗಳೂ ಮುಷ್ಕರ ಹೂಡಿದಂತಿವೆ. ಹೀಗಾಗಿ ಜಗತ್ತಿನಲ್ಲಿ ಅತಿಯಾಗಿ ಸಂಭ್ರಮಿಸುವ ಘಟನೆಗಳಿಗೆ ಅಥವಾ ಅತಿಯಾಗಿ ದುಃಖಪಡುವ ಸನ್ನಿವೇಶಗಳಿಗೆ ತುತ್ತಾದಾಗ ಮನದಲ್ಲಿ ಉಲ್ಬಣಿಸುವ ಭಾವನೆಗಳಿಗೆ ಅಕ್ಷರರೂಪ ಕೊಡಲಾಗದೇ ಒದ್ದಾಡುತ್ತೇವೆ. ಅಂತಹಾ ವೇದನೆ ತುಂಬಿದ ಶೂನ್ಯತೆಯ ಭಾವದ ವಾತಾವರಣದಲ್ಲಿಂದು ಬಾಲುರವರನ್ನು ಕಳೆದುಕೊಂಡ ಕೋಟಿ ಕೋಟಿ ಸಂಗೀತ ಪ್ರೇಮಿಗಳು ತೊಳಲಾಡುತ್ತಿದ್ದಾರೆ.

ಕಳೆದ ತಿಂಗಳ ಐದನೇ ತಾರೀಖಿನಂದು ಕೋವಿಡ್ ಪಾಸಿಟೀವ್ ಬಂದಿರುವುದರಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆಂದು, ತಮಗೆ ಕೇವಲ ಶೀತ ಮತ್ತು ಜ್ವರವಿರುವುದರಿಂದ ಆದಷ್ಟು ಶೀಘ್ರವಾಗಿ ಗುಣಮುಖರಾಗಿ ಬರುತ್ತೇನೆಂದು ಫೇಸ್ ಬುಕ್ ನಲ್ಲಿ ಅವರೇ ಹೇಳಿಕೊಂಡು‌ ಚೆನ್ನೈನ‌ ಎಮ್‌ಜಿ ಎಮ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹಾಗೆ ಹೇಳುವಾಗ ಅವರ‌ ಮಾತುಗಳಲ್ಲಿ ಮತ್ತೇ ನಮ್ಮನ್ನೆಲ್ಲಾ ಕಾಣುವ ಅದಮ್ಯ ಆತ್ಮವಿಶ್ವಾಸವಿತ್ತು.

ತಾವು ಕೊರೊನಾಗೆ ತುತ್ತಾಗುವ ಮುನ್ನ ಕೊರೋನಾ ಪೀಡಿತರಿಗಾಗಿ ಒಂದೊಂದು ಹಾಡನ್ನು ಹಾಡುವ ಮೂಲಕ ಹಣ ಸಂಗ್ರಹಿಸಿ ಕೊಟ್ಟಿದ್ದ ಹೃದಯವಂತ. ಆಸ್ಪತ್ರೆಗೆ ಸೇರಿದ ಆರಂಭದಲ್ಲಿ ಅವರ ಸ್ಥಿತಿ ತೀರಾ ಬಿಗಡಾಯಿಸಿ ಅವರನ್ನು ICU ಗೆ ಶಿಫ಼್ಟ್ ಮಾಡಿ ಜೀವ ರಕ್ಷಕ ಉಪಕರಣಗಳನ್ನು ಅಳವಡಿಸಿದ್ದರು. ಅಂದಿನಿಂದಲೂ ಅವರ ಆರೋಗ್ಯದ ಕುರಿತಾದ ಅಭೂತಪೂರ್ವ ಕಾಳಜಿ ದೇಶದ ಎಲ್ಲೆಡೆಯಿಂದ ವ್ಯಕ್ತವಾಗಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಲಕ್ಷಾಂತರ ಮಂದಿ ಪ್ರಾರ್ಥಿಸುತ್ತಲೇ ಬಂದಿದ್ದರು.

ಎಲ್ಲ ಸಹೃದಯರ ಪ್ರಾರ್ಥನೆ ಪಲಿಸಿತೋ ಎಂಬಂತೆ ಕಳೆದ ವಾರವಷ್ಟೇ ಬಾಲು ರವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆಯೆಂಬ ಸುದ್ದಿ ನೋಡಿ ಮನಸ್ಸು ಹಗುರವಾಗಿತ್ತು. ಅವರಿಗೆ ಕೊರೋನಾ ನೆಗೆಟೀವ್ ಎಂಬ‌ ಸುದ್ದಿ ನಮ್ಮೆಲ್ಲರ ಮನದಲ್ಲಿ ಮತ್ತಷ್ಟು ಸ್ಪಷ್ಟ ಭರವಸೆಯನ್ನೂ ಮೂಡಿಸಿ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಯನ್ನು ಭಗವಂತ ಈಡೇರಿಸಿಬಿಟ್ಟ ಎಂಬ‌ ತೃಪ್ತಿಯ ಸೆಲೆಯಲ್ಲೇ ಇದ್ದವರಿಗೆ ಇಂದು ಅವರಿಲ್ಲ ಎಂಬ ಕೆಟ್ಟ ಸುದ್ದಿ ಅರಗಿಸಿಕೊಳ್ಳಲು ಕಷ್ಟವಾಗುತ್ತಿರುವುದಷ್ಟೇ ಅಲ್ಲ, ಅದರಿಂದ ಹೊರಬರಲಿಕ್ಕೂ ಆಗುತ್ತಿಲ್ಲ..!

ಹೌದು… ಈ‌ ವ್ಯಕ್ತಿಯನ್ನು ಜನ ಯಾಕಿಷ್ಟು ಅನ್ ಕಂಡೀಷನಲ್ ಆಗಿ ಪ್ರೀತಿಸುತ್ತಾರೆ ? ತನ್ನ ಬಗೆಗೆ ಒಂದಿನಿತೂ ಅಪಸ್ವರ ಕೇಳದ ಹಾಗೆ ಬಾಳಿ ಬದುಕಿದ ಅವರ ಯಶಸ್ಸಿನ ಗುಟ್ಟಾದರೂ ಏನು ? ಹುಟ್ಟಿದ್ದು ಆಂಧ್ರದ ಚಿತ್ತೂರು, ಮಾತೃಭಾಷೆ ತೆಲುಗಾದರೂ ಭಾಷಾತೀತವಾಗಿ ಇವರ ಸ್ವರ ಮಾಂತ್ರಿಕತೆಯ‌ ಮೋಡಿಗೆ , ಅವರ ವ್ಯಕ್ತಿತ್ವದ ಸಮ್ಮೋಹನಕ್ಕೆ ಕೋಟ್ಯಾಂತರ ಮಂದಿ ಒಳಗಾಗಬೇಕಾದರೆ ಅದೆಂತಹಾ ದಿವ್ಯ ತಪಸ್ಸಿನ ಫಲ ಇವರದು ?

ತಾನು ಹುಟ್ಟಿದ್ದು ತೆಲುಗು ನೆಲದಲ್ಲಾದರೂ ತನಗೆ ಅನ್ನ‌ ನೀಡಿ ” ಕೈ ಹಿಡಿದವರು ಕೈ ಬಿಡದವರು ಕನ್ನಡಿಗರು ” ಎಂದು ಕರುನಾಡನ್ನು ಕನ್ನಡಿಗರನ್ನು ಸದಾ ಎದೆ ತುಂಬುವಂತೆ ಹಾಡಿ ಹೊಗಳಿ ರಂಜಿಸುತ್ತಿದ್ದ ಇವರನ್ನು ಕನ್ನಡಿಗರಲ್ಲ ಎನ್ನಲು ಸಾಧ್ಯವೇ ? ದಕ್ಷಿಣ ಭಾರತದ ಅನೇಕ ಹೀರೋಗಳ ಶರೀರಕ್ಕೆ ಎಸ್.ಪಿ.ಯವರ ಶಾರೀರವೇ ಬೇಕು ! ಅವರಿಲ್ಲದೇ ನಟನೆಯೇ ಇಲ್ಲವೆಂದ ಅನೇಕ ಹೀರೋಗಳೂ ಇದ್ದರು.

ತಾನು ದೇಶವೇ ಮೆಚ್ಚುವ ಪ್ರಸಿದ್ಧಿಯಾದ ಗಾಯಕನಾದರೂ , ಹತ್ತಿರ ಹತ್ತಿರ ಅರ್ಧ ಲಕ್ಷದಷ್ಟು ಹಾಡುಗಳನ್ನು ಎಲ್ಲಾ ಭಾಷೆಗಳಲ್ಲಿ ಹಾಡಿದ್ದ ಸಂಗೀತ ಲೋಕದ ನಿಬ್ಬೆರಗಿನ ಪ್ರತಿಭೆಯ ಕಣಜವಾದರೂ ತಾನು ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡಿಲ್ಲವೆಂದು ವಿನಯಪೂರ್ವಕವಾಗಿಯೇ ಎಲ್ಲರೆದುರು ಒಪ್ಪಿಕೊಳ್ಳುತ್ತಿದ್ದ ಇವರ ಹೃದಯ ವೈಶಾಲ್ಯತೆ ಯಾರಿಗಿರಲು ಸಾಧ್ಯ ?

1979 ರಲ್ಲಿ ಎಸ್ ಪಿ.ಬಿ ಯವರಿಗೆ ಬಾರಿಗೆ ಸಂಗೀತಮಯ ಶಂಕರಾಭರಣಂ ತೆಲುಗು ಚಿತ್ರಕ್ಕಾಗಿ ಮೊಟ್ಟಮೊದಲ ರಾಷ್ಟ್ರ ಪ್ರಶಸ್ತಿ ಬಂದಾಗ ” ತನಗೆ ಕರ್ನಾಟಕ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲವೆಂದೇ ಮುಕ್ತವಾಗಿ ಹೇಳಿದ್ದರು.

ನಂತರ 1981 ರಲ್ಲಿ ಹಿಂದಿಯ ” ಏಕ್ ದೂಜೆಕೆ ಲಿಯೇ” ಚಿತ್ರಕ್ಕಾಗಿ ಎರಡನೇ ಬಾರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗ ” ತನಗೆ ಹಿಂದಿ ಭಾಷೆ ಬರುವುದಿಲ್ಲ ಎಂದೇ ವಿನಯ ಹಾಗೂ ಸರಳತೆಯನ್ನು‌ ಮೆರೆದಿದ್ದರು. ಈ ಮಾತುಗಳಲ್ಲಿ ಅವರ ವಿನಯ‌, ವಿಧೇಯತೆಯನ್ನು ಗುರುತಿಸಬಹುದಾಗಿತ್ತು.

ಬಾಲುರವರು ಚಿಕ್ಕ ಮಕ್ಕಳೊಂದಿಗೆ ತಾನೂ ಮಗುವಾಗಿ, ಹೊಸ ಗಾಯಕರ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಗುರುವಾಗಿ, ವಾದ್ಯವೃಂದದ ನೆಚ್ಚಿನ ಗಾಯಕನಾಗಿ, ಸಹ ಗಾಯಕ ಗಾಯಕಿಯರಿಗೆ ಸ್ಪೂರ್ತಿಯ ಚಿಲುಮೆಯಾಗಿ, ತನ್ನ ಮಕ್ಕಳ ವಯಸ್ಸಿನ ಗಾಯಕರೂ ನಾಚುವಂತಹಾ ಸಿರಿಕಂಠವನ್ನು ಹೊಂದಿ, ಹಿರಿಯರಲ್ಲಿ ಗೌರವ , ಕಿರಿಯರಲ್ಲಿ ಸ್ನೇಹ ಪ್ರೀತಿ ತೋರುತ್ತಿದ್ದ ಸಹೃದಯಿಯಾಗಿ, ಕುಟುಂಬದ ಕಣ್ಮಣಿಯಾಗಿ, ಗುರುವಾಗಿ, ಮಾರ್ಗದರ್ಶಿಯಾಗಿ, ಹಿತೈಷಿಯಾಗಿ, ಸಭ್ಯ ನಾಗರಿಕನಾಗಿ, ಮಾನವೀಯ ಅಂತಃಕರಣ ವುಳ್ಳ ವ್ಯಕ್ತಿಯಾಗಿ, ಸಂಗೀತ ಜ್ಞಾನವಿಲ್ಲದ ನನ್ನಂತಹ ಲಕ್ಷಾಂತರ ಮಂದಿಗೂ ಸಂಗೀತದ ಬಗೆಗೆ ಒಲವು, ಭಾವುಕತೆ ಮೂಡಿಸಿ, ಇಡೀ ಸಂಗೀತ ಬದುಕಿನ ” ಸರಿಗಮಪದನಿಸ” ವನ್ನೇ ರಾಗ ತಾಳ ಪಲ್ಲವಿಯ ಕ್ರಮಬದ್ದತೆಯಿಂದ ಹಾಗೂ ನಾದ ಲಯಗಳ ಲಾಸ್ಯದಿಂದ ಶ್ರುತಿ ಬದ್ಧವಾಗಿ ನುಡಿಸಿ, ನಮಿಸಿ, ಮೆರೆಸಿ- ಹರಸಿದ್ದು ಸಾಮಾನ್ಯವಲ್ಲ.! ಇದು ಸಾಧಾರಣ ವ್ಯಕ್ತಿಯ ಪರಿಧಿಗೆ ನಿಲುಕುವಂತಹದ್ದಲ್ಲ.

ಪ್ರಪಂಚದ ಶ್ರೇಷ್ಠ ಗಾಯಕರಲ್ಲೊಬ್ಬರಾದ
” ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ “….. ನಮ್ಮ ನಿಮ್ಮೆಲ್ಲರ ನೆಚ್ಚಿನ SPB, ಅಥವಾ ಪ್ರೀತಿಯ ಬಾಲು ಸರ್ ರವರ ಸಾಧನೆ‌ ಕುರಿತುಬರೆಯಲು ಹೊರಟರೆ ಅದೇ ಒಂದು ಗ್ರಂಥದಂತೆ !

ಅವರು ಹುಟ್ಟಿದ್ದು 04.06.1946 ರಲ್ಲಿ . 74 ವರ್ಷದ ಬದುಕಿನಲ್ಲಿ ಅವರು ಹಾಡಲು ಶುರು ಮಾಡಿದ್ದು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ! ಬಹುಭಾಷಾ ಗಾಯಕ , 40000 ಕ್ಕೂ ಹೆಚ್ಚು ಹಾಡುಗಳ ಒಡೆಯ ! ಅತಿ ಹೆಚ್ಚು ಸಂಗೀತ ನಿರ್ದೇಶಕರೊಡನೆ ಕೆಲಸ ಮಾಡಿದ ದಾಖಲೆ ! ಪದ್ಮಶ್ರೀ- ಪದ್ಮ ವಿಭೂಷಣ, ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಏಕೈಕ ಗಾಯಕ ! ಒಂದೇ ದಿನದಲ್ಲಿ ಇಪ್ಪತ್ತೊಂದು ಗೀತೆಗಳನ್ನು ಹಾಡಿ ರೆಕಾರ್ಡ್ ಮಾಡಿದ ಗಾನ ಗಾರುಡಿಗ ! ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಆಂಧ್ರದ ನಂದಿ ಅವಾರ್ಡ್ ಪಡೆದ ಏಕೈಕ ಗಾನ ದಿಗ್ಗಜ.

ಕರ್ನಾಟಕ ಶಾಸ್ತ್ರೀಯ, ಹಿಂದುಸ್ತಾನಿ, ಘಜ಼ಲ್,ಪಾಶ್ಚಾತ್ಯ, ಮೆಲೋಡಿ, ಅಬ್ಬರದ ಸ್ಥಾಯಿಯ ಹಾಡುಗಳು, ಬೇರೆ ಬೇರೇ ನಟರಿಗೆ ಅವರ ಧ್ವನಿಗನುಸಾರವಾಗಿ ಹಾಡುವ ಅಪರೂಪದ Voice Modulation , ಕೇವಲ ಗಾಯನವಲ್ಲದೇ ಅಭಿನಯ, ಸಂಗೀತ ನಿರ್ದೇಶನ, ವಾಯ್ಸ್ ಡಬ್ಬಿಂಗ್, ಚಿತ್ರ ನಿರ್ಮಾಣ, ನಿರ್ದೇಶನ, ಅನೇಕ ರಿಯಾಲಿಟಿ ಷೋ ಗಳಿಗೆ ತೀರ್ಪುಗಾರ, ಗಿನ್ನೆಸ್ ದಾಖಲೆ ನಿರ್ಮಿಸಿದ ಏಕೈಕ ಗಾಯಕ…….. ಮುಖ್ಯವಾಗಿ ಸಮಾಜಮುಖಿ ಚಿಂತಕ….. ಹೀಗೆ ಅವರ ಬಗ್ಗೆ ಹೇಳಲು ಹೊರಟರೆ ಅದಕ್ಕೆ ಆದಿ- ಅಂತ್ಯವೆಂಬುದೇ ಇರುವುದಿಲ್ಲ..!

ಇಂತಹಾ ಒಬ್ಬ ಸಂಗೀತ ಕ್ಷೇತ್ರದ ಯುಗಪುರುಷನ ಗಾಯನವನ್ನೂ ಮೀರಿದ ದೊಡ್ಡತನವೆಂದರೆ ಅದು ಅವರಲ್ಲಿನ ಸಂಸ್ಕಾರ, ಸರಳತೆ, ಸದ್ಗುಣ, ವಿಧೇಯತೆಗಳ ಅದ್ಭುತವಾದ ಮೇರು ವ್ಯಕ್ತಿತ್ವ…. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಮೇಲಿನ ಅವರ ಅತೀವ ಪ್ರೇಮ ಹಾಗೂ ಕನ್ನಡಿಗರ ಬಗೆಗಿನ ಅವರ ಸಾಟಿಯಿಲ್ಲದ ನಿಷ್ಕಲ್ಮಶವಾದ ಪ್ರೀತಿ. ಬಾಲು ಸಾರ್ ಹಿಮಾಲಯದೆತ್ತರದಷ್ಟು ಮೇರು ಪ್ರತಿಭೆಯಾದರೂ ಅವರದು ” ನನಗೇನೂ ಗೊತ್ತಿಲ್ಲ, ನಾನೇನೂ ಕಲಿತಿಲ್ಲ” ಎಂಬ ವಿನೀತ ಭಾವ.

ಅವರ ಇಳಿ ವಯಸ್ಸಿನಲ್ಲೂ ಅವರ ಕಂಚಿನ ಕಂಠದ ಶಕ್ತಿ, ಮುಕ್ಕಾಗದ ಮಾಧುರ್ಯ, ಶ್ರುತಿ ತಪ್ಪದ ಶಾರೀರ, ಶಾರೀರದಂತೆಯೇ ಆಕರ್ಷಕ ಶರೀರ , ಇನ್ನೂ ಇಪ್ಪತ್ತರ ಅವರ ಬತ್ತದ , ಬಾಡದ ಉತ್ಸಾಹ. ಇವೆಲ್ಲವೂ ಎಸ್.ಪಿ.ಬಿ ಯವರನ್ನು ಸಂಗೀತಲೋಕದ ದೇವರಂತೆಯೇ ಭಾಸವಾಗುವಂತೆ ಮಾಡುತ್ತಿದ್ದವು !! ಒಂದೇ ಮಾತಿನಲ್ಲಿ ಹೇಳುವುದಾದರೆ ಬಾಲು ಸರ್, ಸಂಗೀತ ಸರಸ್ವತಿಯ ವರಪುತ್ರ ! ಇಂತಹಾ ಗಾನ ಸಾಮ್ರಾಟನ ಅವಸಾನ ಸಂಗೀತ ಲೋಕಕ್ಕೆ ನಿಜಾರ್ಥದ ಭರಿಸಲಾಗದ ನಷ್ಟ !

ಮರೆಯುವ ಮುನ್ನ

ಬಾಲು ರವರಿಗಿಂತ ಒಳ್ಳೆಯ ಸಂಗೀತಗಾರ, ಹಿನ್ನಲೆ ಗಾಯಕ ನಮ್ಮ ನಡುವೆ ಇದ್ದಿರಬಹುದೇನೋ ಗೊತ್ತಿಲ್ಲ ! ಆದರೆ ಅವರಂತಹ ಸರಳ, ಸದ್ವೀನೀತ,ಸದ್ಗುಣ ಸಂಪನ್ನ, ಸಜ್ಜನ, ಸಂಯಮಿ, ಸಂಗೀತ ಸಾಕಾರ ಮೂರ್ತಿ, ಸಾತ್ವಿಕ. ಮತ್ತೊಬ್ಬರಿರಲು ಖಂಡಿತಾ ಸಾಧ್ಯವಿಲ್ಲವೆಂದರೆ ಅದು ಅತಿಶಯವಲ್ಲ. ಎಸ್.ಪಿ.ಬಿ ಯವರ ಸಂಗೀತ ಬದುಕಿನ ಬಣ್ಣದ ಬುಗುರಿಯ ಆಟ ಇಂದು ನಿಂತಿದೆ. ಆದರೆ ನೆನಪಿರಲಿ , ಇದು ಕೇವಲ ಭೌತಿಕವಾಗಿ ನಿಂತ ಆಟವಷ್ಟೇ !

ತಮ್ಮ ಅಪೂರ್ವವಾದ ಸ್ವರ ಸಂಪತ್ತಿನಿಂದ , ಆಕರ್ಷಕ ವ್ಯಕ್ತಿತ್ವದಿಂದ, ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುತ್ತಿದ್ದ ಅವರ ಸಹೃದಯ ಸವಿ ಸ್ನೇಹದ ಸಿಂಚನದಿಂದ, ಸಂಗೀತಲೋಕಕ್ಕೆ ನೀಡಿದ ಬೆಲೆಕಟ್ಟಲಾಗದ ಕೊಡುಗೆಯಿಂದ ,ಎಲ್ಲಕ್ಕಿಂತ ಹೆಚ್ಚಾಗಿ ಜನ್ಮ ಜನ್ಮಗಳು ಅಳಿದರೂ ಕಳೆದರೂ ಸದಾ ಉಳಿಯುವಂತಹಾ ಹಾಡುಗಳನ್ನು ಎಲ್ಲಾ ಭಾಷೆಯಲ್ಲೂ ಕಟ್ಟಿಕೊಟ್ಟ ಅಸಾಧಾರಣ ಸೇವೆಯಿಂದ , ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂಬ ಧೀಮಂತ ವ್ಯಕ್ತಿ, ಸಂಗೀತ ಲೋಕದ ಶಕ್ತಿ ನಮ್ಮೆಲ್ಲರ ಹೃನ್ಮನಗಳಲ್ಲಿ ಸದಾ ಅಮರರಾಗಿಯೇ ಇರುತ್ತಾರೆ.

ಹೇ….ವಿಧಿಯೇ… ಬಾಲುವಿನ ದೇಹವನ್ನು ಮಾತ್ರ ನೀನು ಮಣ್ಣಾಗಿಸಬಹುದು, ಕಣ್ಮರೆಯಾಗಿಸಬಹುದು..! ಆದರೆ ಅವರ ಕಂಚಿನ ಕಂಠದಿಂದ ಹೊರಬಂದ ಸಾವಿರ ಸಾವಿರ ಹಾಡುಗಳನ್ನಾಗಲೀ ಅವರ ವ್ಯಕ್ತಿತ್ವವನಾಗಲೀ ಅಥವಾ ಅವರನ್ನು ತಮ್ಮ ಉಸಿರಿರುವತನಕವೂ ಪ್ರೀತಿಸುವ, ಆರಾಧಿಸುವ, ಮೆಚ್ಚುವ ಕೋಟಿ ಕೋಟಿ ಸಂಗೀತ ಪ್ರೇಮಿಗಳ ಹೃದಯದಲ್ಲಿ ಹುದುಗಿರುವ ಅವರ ಬಗೆಗಿನ ಪ್ರೀತ್ಯಾಭಿಮಾನದ, ಎಂದೂ ಬಾಡದ ಭಾವನೆಗಳನ್ನು ಮಣ್ಣಾಗಿಸಲಿಕ್ಕೆ.

ನಿನಗೆ ಸಾಧ್ಯವೇ..? ನೆವರ್….!

ಹೋಗಿ ಬನ್ನಿ ಬಾಲು ಸಾರ್ ! ಮರುಜನ್ಮದಲ್ಲಿ ಕನ್ನಡ ಮಣ್ಣಿನಲ್ಲಿಯೇ ಹುಟ್ಟಬೇಕೆನ್ನುವ ನಿಮ್ಮ ಅದಮ್ಯ ಆಸೆಗೆ ಆರುಕೋಟಿ ಕನ್ನಡಿಗರ ಒತ್ತಾಸೆಯಿದೆ, ಪ್ರಾರ್ಥನೆಯಿದೆ ಹಾಗೂ ಸಹೃದಯರ ಮನದಾಳದ ಆಲಾಪನೆಯ ಆರಾಧನೆಯಿದೆ.

ಅಕ್ಷರಗಳ ಅಶ್ರುತರ್ಪಣದೊಂದಿಗೆ..

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending