ಅಂತರಂಗ
ನಿಂತಾಗ ಬುಗುರಿಯ ಆಟ..!
- ಹಿರಿಯೂರು ಪ್ರಕಾಶ್
ಹೇ..ಸಾವೇ ನೀನೆಂತಹಾ ಕ್ರೂರಿ ! ನೀನು ಕ್ರೂರ, ಘೋರ ಎನ್ನುವುದು ಗೊತ್ತಿತ್ತು. ಆದರೆ ನೀನಿಂಥ ಸ್ವಾರ್ಥಪೂರಿತ ಕ್ರೂರಿಯೆನ್ನುವುದು , ಕಿಂಚಿತ್ತೂ ಕರುಣೆಯಿಲ್ಲದ ಮಾರಿಯೆನ್ನುವುದು ಗೊತ್ತಿರಲಿಲ್ಲ !. ಈ ಪ್ರಪಂಚದಲ್ಲಿ ಜನಿಸಿದ ಪ್ರತೀ ಜೀವಿಯೂ ಅಸುನೀಗಲೇ ಬೇಕು ನಿಜ. ಅದಕ್ಕೆ ಭೇಧ ಭಾವವಿಲ್ಲ.
ಆದರೆ ಈ ನಾಡಿನ ಸಂಗೀತಪ್ರಿಯರೆಲ್ಲರೂ ನಿರ್ವಿವಾದವಾಗಿ, ನಿರುಮ್ಮಳವಾಗಿ, ನಿಷ್ಕಲ್ಮಶವಾಗಿ , ನಿತ್ಯ ನಿರಂತರವಾಗಿ ಪ್ರೀತಿಸುತ್ತಿದ್ದ ಒಂದು ಅಮೂಲ್ಯ ಹಿರಿಯ ಜೀವವನ್ನು ಇನ್ನಷ್ಟು ಕಾಲ ಹೀಗೆ ಪ್ರೀತಿಸುವ ಹೃದಯಗಳ ಎದೆಚಿಪ್ಪಿನಲ್ಲಿ ಉಳಿಸುವ ಒಂದು ಔದಾರ್ಯತೆಯ ಧಾರಾಳತೆ ತೋರಬಹುದಿತ್ತು. ಆದರೆ ಈ ಜಗತ್ತಿನ ಎಲ್ಲಾ ಒಳ್ಳೆಯದನ್ನು, ಒಳ್ಳೆಯ ವ್ಯಕ್ತಿಗಳನ್ನು ಆತುರಾತುರವಾಗಿ ನಿನ್ನಲ್ಲಿ ಲೀನವಾಗಿಸಿಕೊಳ್ಳುವ ನಿನ್ನ ನಿರಂತರ ಕೆಟ್ಟ ಬುದ್ದಿಗೆ ಇಂದು ಗಾನಲೋಕದ ಗಾರುಡಿಗ, ಸ್ವರ ಸಾಮ್ರಾಟ, ಅಜಾತಶತ್ರು, ಕೋಟಿ ಕೋಟಿ ಸಂಗೀತಪ್ರಿಯರ ಮನಸುಗಳಲ್ಲಿ ಸ್ಥಿರವಾಗಿ ನೆಲೆಯೂರಿರುವ , ಭಾಷಾತೀತ, ಸೀಮಾತೀತ ಸಹೃದಯಿ, ಸ್ನೇಹಮಯೊ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರನ್ನೂ ಬಲಿಯಾಗಿಸಿ ರುವುದು ಮಾತ್ರ ಕೋಟಿ ಕೋಟಿ ಸುಮಧುರ ಮನಸುಗಳ ಹೃದಯಕ್ಕೆ ಕೊಳ್ಳಿಯಿಟ್ಟಂತಾಗಿದೆ.
ಶುಕ್ರವಾರ ಮಧ್ಯಾಹ್ನ ಬಂದೆರಗಿದ ಅರಗಿಸಿಕೊಳ್ಳಲಾಗದ ಈ ಸುದ್ದಿ ಅವರನ್ನು ಮೆಚ್ಚುವವರ ಮನಸಿನಾಳದಲ್ಲಿದ್ದ ದುಃಖದ ಮಡುವನ್ನು ಛಿದ್ರಗೊಳಿಸಿ ನೋವಿನಲೆಗಳ ತರಂಗಗಳು ಒತ್ತರಿಸಿ ಹೊರ ಬರುವಂತೆ ಮಾಡಿದೆ. ಹೃದಯಗಳು ಭಾರವೆನಿಸಿ ಕಣ್ಣುಗಳು ಕಂಬನಿಯ ಬಿಂದುಗಳಿಂದ ಅರಳುಗಟ್ಟಿ ಆರ್ದ್ರವಾಗುತ್ತಿವೆ. ಬಾಲುರವರ ನಿರ್ಗಮನದಿಂದ ಉಂಟಾಗಿರುವ ಸಂಗೀತಲೋಕದ ಶೂನ್ಯತೆಯನ್ನು ವರ್ಣಿಸಲು ಈ ಸಂಗೀತದ ನಿರಕ್ಷರಕುಕ್ಷಿಗೆ ಪದಗಳೇ ಹೊಳೆಯುತ್ತಿಲ್ಲ.
ಮನದ ವೇದನೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಾಗದಂತೆ ಭಾವನೆಗಳ ಜೊತೆಗೆ ಬೆರಳುಗಳೂ ಮುಷ್ಕರ ಹೂಡಿದಂತಿವೆ. ಹೀಗಾಗಿ ಜಗತ್ತಿನಲ್ಲಿ ಅತಿಯಾಗಿ ಸಂಭ್ರಮಿಸುವ ಘಟನೆಗಳಿಗೆ ಅಥವಾ ಅತಿಯಾಗಿ ದುಃಖಪಡುವ ಸನ್ನಿವೇಶಗಳಿಗೆ ತುತ್ತಾದಾಗ ಮನದಲ್ಲಿ ಉಲ್ಬಣಿಸುವ ಭಾವನೆಗಳಿಗೆ ಅಕ್ಷರರೂಪ ಕೊಡಲಾಗದೇ ಒದ್ದಾಡುತ್ತೇವೆ. ಅಂತಹಾ ವೇದನೆ ತುಂಬಿದ ಶೂನ್ಯತೆಯ ಭಾವದ ವಾತಾವರಣದಲ್ಲಿಂದು ಬಾಲುರವರನ್ನು ಕಳೆದುಕೊಂಡ ಕೋಟಿ ಕೋಟಿ ಸಂಗೀತ ಪ್ರೇಮಿಗಳು ತೊಳಲಾಡುತ್ತಿದ್ದಾರೆ.
ಕಳೆದ ತಿಂಗಳ ಐದನೇ ತಾರೀಖಿನಂದು ಕೋವಿಡ್ ಪಾಸಿಟೀವ್ ಬಂದಿರುವುದರಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆಂದು, ತಮಗೆ ಕೇವಲ ಶೀತ ಮತ್ತು ಜ್ವರವಿರುವುದರಿಂದ ಆದಷ್ಟು ಶೀಘ್ರವಾಗಿ ಗುಣಮುಖರಾಗಿ ಬರುತ್ತೇನೆಂದು ಫೇಸ್ ಬುಕ್ ನಲ್ಲಿ ಅವರೇ ಹೇಳಿಕೊಂಡು ಚೆನ್ನೈನ ಎಮ್‌ಜಿ ಎಮ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹಾಗೆ ಹೇಳುವಾಗ ಅವರ ಮಾತುಗಳಲ್ಲಿ ಮತ್ತೇ ನಮ್ಮನ್ನೆಲ್ಲಾ ಕಾಣುವ ಅದಮ್ಯ ಆತ್ಮವಿಶ್ವಾಸವಿತ್ತು.
ತಾವು ಕೊರೊನಾಗೆ ತುತ್ತಾಗುವ ಮುನ್ನ ಕೊರೋನಾ ಪೀಡಿತರಿಗಾಗಿ ಒಂದೊಂದು ಹಾಡನ್ನು ಹಾಡುವ ಮೂಲಕ ಹಣ ಸಂಗ್ರಹಿಸಿ ಕೊಟ್ಟಿದ್ದ ಹೃದಯವಂತ. ಆಸ್ಪತ್ರೆಗೆ ಸೇರಿದ ಆರಂಭದಲ್ಲಿ ಅವರ ಸ್ಥಿತಿ ತೀರಾ ಬಿಗಡಾಯಿಸಿ ಅವರನ್ನು ICU ಗೆ ಶಿಫ಼್ಟ್ ಮಾಡಿ ಜೀವ ರಕ್ಷಕ ಉಪಕರಣಗಳನ್ನು ಅಳವಡಿಸಿದ್ದರು. ಅಂದಿನಿಂದಲೂ ಅವರ ಆರೋಗ್ಯದ ಕುರಿತಾದ ಅಭೂತಪೂರ್ವ ಕಾಳಜಿ ದೇಶದ ಎಲ್ಲೆಡೆಯಿಂದ ವ್ಯಕ್ತವಾಗಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಲಕ್ಷಾಂತರ ಮಂದಿ ಪ್ರಾರ್ಥಿಸುತ್ತಲೇ ಬಂದಿದ್ದರು.
ಎಲ್ಲ ಸಹೃದಯರ ಪ್ರಾರ್ಥನೆ ಪಲಿಸಿತೋ ಎಂಬಂತೆ ಕಳೆದ ವಾರವಷ್ಟೇ ಬಾಲು ರವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆಯೆಂಬ ಸುದ್ದಿ ನೋಡಿ ಮನಸ್ಸು ಹಗುರವಾಗಿತ್ತು. ಅವರಿಗೆ ಕೊರೋನಾ ನೆಗೆಟೀವ್ ಎಂಬ ಸುದ್ದಿ ನಮ್ಮೆಲ್ಲರ ಮನದಲ್ಲಿ ಮತ್ತಷ್ಟು ಸ್ಪಷ್ಟ ಭರವಸೆಯನ್ನೂ ಮೂಡಿಸಿ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಯನ್ನು ಭಗವಂತ ಈಡೇರಿಸಿಬಿಟ್ಟ ಎಂಬ ತೃಪ್ತಿಯ ಸೆಲೆಯಲ್ಲೇ ಇದ್ದವರಿಗೆ ಇಂದು ಅವರಿಲ್ಲ ಎಂಬ ಕೆಟ್ಟ ಸುದ್ದಿ ಅರಗಿಸಿಕೊಳ್ಳಲು ಕಷ್ಟವಾಗುತ್ತಿರುವುದಷ್ಟೇ ಅಲ್ಲ, ಅದರಿಂದ ಹೊರಬರಲಿಕ್ಕೂ ಆಗುತ್ತಿಲ್ಲ..!
ಹೌದು… ಈ ವ್ಯಕ್ತಿಯನ್ನು ಜನ ಯಾಕಿಷ್ಟು ಅನ್ ಕಂಡೀಷನಲ್ ಆಗಿ ಪ್ರೀತಿಸುತ್ತಾರೆ ? ತನ್ನ ಬಗೆಗೆ ಒಂದಿನಿತೂ ಅಪಸ್ವರ ಕೇಳದ ಹಾಗೆ ಬಾಳಿ ಬದುಕಿದ ಅವರ ಯಶಸ್ಸಿನ ಗುಟ್ಟಾದರೂ ಏನು ? ಹುಟ್ಟಿದ್ದು ಆಂಧ್ರದ ಚಿತ್ತೂರು, ಮಾತೃಭಾಷೆ ತೆಲುಗಾದರೂ ಭಾಷಾತೀತವಾಗಿ ಇವರ ಸ್ವರ ಮಾಂತ್ರಿಕತೆಯ ಮೋಡಿಗೆ , ಅವರ ವ್ಯಕ್ತಿತ್ವದ ಸಮ್ಮೋಹನಕ್ಕೆ ಕೋಟ್ಯಾಂತರ ಮಂದಿ ಒಳಗಾಗಬೇಕಾದರೆ ಅದೆಂತಹಾ ದಿವ್ಯ ತಪಸ್ಸಿನ ಫಲ ಇವರದು ?
ತಾನು ಹುಟ್ಟಿದ್ದು ತೆಲುಗು ನೆಲದಲ್ಲಾದರೂ ತನಗೆ ಅನ್ನ ನೀಡಿ ” ಕೈ ಹಿಡಿದವರು ಕೈ ಬಿಡದವರು ಕನ್ನಡಿಗರು ” ಎಂದು ಕರುನಾಡನ್ನು ಕನ್ನಡಿಗರನ್ನು ಸದಾ ಎದೆ ತುಂಬುವಂತೆ ಹಾಡಿ ಹೊಗಳಿ ರಂಜಿಸುತ್ತಿದ್ದ ಇವರನ್ನು ಕನ್ನಡಿಗರಲ್ಲ ಎನ್ನಲು ಸಾಧ್ಯವೇ ? ದಕ್ಷಿಣ ಭಾರತದ ಅನೇಕ ಹೀರೋಗಳ ಶರೀರಕ್ಕೆ ಎಸ್.ಪಿ.ಯವರ ಶಾರೀರವೇ ಬೇಕು ! ಅವರಿಲ್ಲದೇ ನಟನೆಯೇ ಇಲ್ಲವೆಂದ ಅನೇಕ ಹೀರೋಗಳೂ ಇದ್ದರು.
ತಾನು ದೇಶವೇ ಮೆಚ್ಚುವ ಪ್ರಸಿದ್ಧಿಯಾದ ಗಾಯಕನಾದರೂ , ಹತ್ತಿರ ಹತ್ತಿರ ಅರ್ಧ ಲಕ್ಷದಷ್ಟು ಹಾಡುಗಳನ್ನು ಎಲ್ಲಾ ಭಾಷೆಗಳಲ್ಲಿ ಹಾಡಿದ್ದ ಸಂಗೀತ ಲೋಕದ ನಿಬ್ಬೆರಗಿನ ಪ್ರತಿಭೆಯ ಕಣಜವಾದರೂ ತಾನು ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡಿಲ್ಲವೆಂದು ವಿನಯಪೂರ್ವಕವಾಗಿಯೇ ಎಲ್ಲರೆದುರು ಒಪ್ಪಿಕೊಳ್ಳುತ್ತಿದ್ದ ಇವರ ಹೃದಯ ವೈಶಾಲ್ಯತೆ ಯಾರಿಗಿರಲು ಸಾಧ್ಯ ?
1979 ರಲ್ಲಿ ಎಸ್ ಪಿ.ಬಿ ಯವರಿಗೆ ಬಾರಿಗೆ ಸಂಗೀತಮಯ ಶಂಕರಾಭರಣಂ ತೆಲುಗು ಚಿತ್ರಕ್ಕಾಗಿ ಮೊಟ್ಟಮೊದಲ ರಾಷ್ಟ್ರ ಪ್ರಶಸ್ತಿ ಬಂದಾಗ ” ತನಗೆ ಕರ್ನಾಟಕ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲವೆಂದೇ ಮುಕ್ತವಾಗಿ ಹೇಳಿದ್ದರು.
ನಂತರ 1981 ರಲ್ಲಿ ಹಿಂದಿಯ ” ಏಕ್ ದೂಜೆಕೆ ಲಿಯೇ” ಚಿತ್ರಕ್ಕಾಗಿ ಎರಡನೇ ಬಾರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗ ” ತನಗೆ ಹಿಂದಿ ಭಾಷೆ ಬರುವುದಿಲ್ಲ ಎಂದೇ ವಿನಯ ಹಾಗೂ ಸರಳತೆಯನ್ನು ಮೆರೆದಿದ್ದರು. ಈ ಮಾತುಗಳಲ್ಲಿ ಅವರ ವಿನಯ, ವಿಧೇಯತೆಯನ್ನು ಗುರುತಿಸಬಹುದಾಗಿತ್ತು.
ಬಾಲುರವರು ಚಿಕ್ಕ ಮಕ್ಕಳೊಂದಿಗೆ ತಾನೂ ಮಗುವಾಗಿ, ಹೊಸ ಗಾಯಕರ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಗುರುವಾಗಿ, ವಾದ್ಯವೃಂದದ ನೆಚ್ಚಿನ ಗಾಯಕನಾಗಿ, ಸಹ ಗಾಯಕ ಗಾಯಕಿಯರಿಗೆ ಸ್ಪೂರ್ತಿಯ ಚಿಲುಮೆಯಾಗಿ, ತನ್ನ ಮಕ್ಕಳ ವಯಸ್ಸಿನ ಗಾಯಕರೂ ನಾಚುವಂತಹಾ ಸಿರಿಕಂಠವನ್ನು ಹೊಂದಿ, ಹಿರಿಯರಲ್ಲಿ ಗೌರವ , ಕಿರಿಯರಲ್ಲಿ ಸ್ನೇಹ ಪ್ರೀತಿ ತೋರುತ್ತಿದ್ದ ಸಹೃದಯಿಯಾಗಿ, ಕುಟುಂಬದ ಕಣ್ಮಣಿಯಾಗಿ, ಗುರುವಾಗಿ, ಮಾರ್ಗದರ್ಶಿಯಾಗಿ, ಹಿತೈಷಿಯಾಗಿ, ಸಭ್ಯ ನಾಗರಿಕನಾಗಿ, ಮಾನವೀಯ ಅಂತಃಕರಣ ವುಳ್ಳ ವ್ಯಕ್ತಿಯಾಗಿ, ಸಂಗೀತ ಜ್ಞಾನವಿಲ್ಲದ ನನ್ನಂತಹ ಲಕ್ಷಾಂತರ ಮಂದಿಗೂ ಸಂಗೀತದ ಬಗೆಗೆ ಒಲವು, ಭಾವುಕತೆ ಮೂಡಿಸಿ, ಇಡೀ ಸಂಗೀತ ಬದುಕಿನ ” ಸರಿಗಮಪದನಿಸ” ವನ್ನೇ ರಾಗ ತಾಳ ಪಲ್ಲವಿಯ ಕ್ರಮಬದ್ದತೆಯಿಂದ ಹಾಗೂ ನಾದ ಲಯಗಳ ಲಾಸ್ಯದಿಂದ ಶ್ರುತಿ ಬದ್ಧವಾಗಿ ನುಡಿಸಿ, ನಮಿಸಿ, ಮೆರೆಸಿ- ಹರಸಿದ್ದು ಸಾಮಾನ್ಯವಲ್ಲ.! ಇದು ಸಾಧಾರಣ ವ್ಯಕ್ತಿಯ ಪರಿಧಿಗೆ ನಿಲುಕುವಂತಹದ್ದಲ್ಲ.
ಪ್ರಪಂಚದ ಶ್ರೇಷ್ಠ ಗಾಯಕರಲ್ಲೊಬ್ಬರಾದ
” ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ “….. ನಮ್ಮ ನಿಮ್ಮೆಲ್ಲರ ನೆಚ್ಚಿನ SPB, ಅಥವಾ ಪ್ರೀತಿಯ ಬಾಲು ಸರ್ ರವರ ಸಾಧನೆ ಕುರಿತುಬರೆಯಲು ಹೊರಟರೆ ಅದೇ ಒಂದು ಗ್ರಂಥದಂತೆ !
ಅವರು ಹುಟ್ಟಿದ್ದು 04.06.1946 ರಲ್ಲಿ . 74 ವರ್ಷದ ಬದುಕಿನಲ್ಲಿ ಅವರು ಹಾಡಲು ಶುರು ಮಾಡಿದ್ದು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ! ಬಹುಭಾಷಾ ಗಾಯಕ , 40000 ಕ್ಕೂ ಹೆಚ್ಚು ಹಾಡುಗಳ ಒಡೆಯ ! ಅತಿ ಹೆಚ್ಚು ಸಂಗೀತ ನಿರ್ದೇಶಕರೊಡನೆ ಕೆಲಸ ಮಾಡಿದ ದಾಖಲೆ ! ಪದ್ಮಶ್ರೀ- ಪದ್ಮ ವಿಭೂಷಣ, ಸೇರಿದಂತೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಏಕೈಕ ಗಾಯಕ ! ಒಂದೇ ದಿನದಲ್ಲಿ ಇಪ್ಪತ್ತೊಂದು ಗೀತೆಗಳನ್ನು ಹಾಡಿ ರೆಕಾರ್ಡ್ ಮಾಡಿದ ಗಾನ ಗಾರುಡಿಗ ! ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಆಂಧ್ರದ ನಂದಿ ಅವಾರ್ಡ್ ಪಡೆದ ಏಕೈಕ ಗಾನ ದಿಗ್ಗಜ.
ಕರ್ನಾಟಕ ಶಾಸ್ತ್ರೀಯ, ಹಿಂದುಸ್ತಾನಿ, ಘಜ಼ಲ್,ಪಾಶ್ಚಾತ್ಯ, ಮೆಲೋಡಿ, ಅಬ್ಬರದ ಸ್ಥಾಯಿಯ ಹಾಡುಗಳು, ಬೇರೆ ಬೇರೇ ನಟರಿಗೆ ಅವರ ಧ್ವನಿಗನುಸಾರವಾಗಿ ಹಾಡುವ ಅಪರೂಪದ Voice Modulation , ಕೇವಲ ಗಾಯನವಲ್ಲದೇ ಅಭಿನಯ, ಸಂಗೀತ ನಿರ್ದೇಶನ, ವಾಯ್ಸ್ ಡಬ್ಬಿಂಗ್, ಚಿತ್ರ ನಿರ್ಮಾಣ, ನಿರ್ದೇಶನ, ಅನೇಕ ರಿಯಾಲಿಟಿ ಷೋ ಗಳಿಗೆ ತೀರ್ಪುಗಾರ, ಗಿನ್ನೆಸ್ ದಾಖಲೆ ನಿರ್ಮಿಸಿದ ಏಕೈಕ ಗಾಯಕ…….. ಮುಖ್ಯವಾಗಿ ಸಮಾಜಮುಖಿ ಚಿಂತಕ….. ಹೀಗೆ ಅವರ ಬಗ್ಗೆ ಹೇಳಲು ಹೊರಟರೆ ಅದಕ್ಕೆ ಆದಿ- ಅಂತ್ಯವೆಂಬುದೇ ಇರುವುದಿಲ್ಲ..!
ಇಂತಹಾ ಒಬ್ಬ ಸಂಗೀತ ಕ್ಷೇತ್ರದ ಯುಗಪುರುಷನ ಗಾಯನವನ್ನೂ ಮೀರಿದ ದೊಡ್ಡತನವೆಂದರೆ ಅದು ಅವರಲ್ಲಿನ ಸಂಸ್ಕಾರ, ಸರಳತೆ, ಸದ್ಗುಣ, ವಿಧೇಯತೆಗಳ ಅದ್ಭುತವಾದ ಮೇರು ವ್ಯಕ್ತಿತ್ವ…. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಮೇಲಿನ ಅವರ ಅತೀವ ಪ್ರೇಮ ಹಾಗೂ ಕನ್ನಡಿಗರ ಬಗೆಗಿನ ಅವರ ಸಾಟಿಯಿಲ್ಲದ ನಿಷ್ಕಲ್ಮಶವಾದ ಪ್ರೀತಿ. ಬಾಲು ಸಾರ್ ಹಿಮಾಲಯದೆತ್ತರದಷ್ಟು ಮೇರು ಪ್ರತಿಭೆಯಾದರೂ ಅವರದು ” ನನಗೇನೂ ಗೊತ್ತಿಲ್ಲ, ನಾನೇನೂ ಕಲಿತಿಲ್ಲ” ಎಂಬ ವಿನೀತ ಭಾವ.
ಅವರ ಇಳಿ ವಯಸ್ಸಿನಲ್ಲೂ ಅವರ ಕಂಚಿನ ಕಂಠದ ಶಕ್ತಿ, ಮುಕ್ಕಾಗದ ಮಾಧುರ್ಯ, ಶ್ರುತಿ ತಪ್ಪದ ಶಾರೀರ, ಶಾರೀರದಂತೆಯೇ ಆಕರ್ಷಕ ಶರೀರ , ಇನ್ನೂ ಇಪ್ಪತ್ತರ ಅವರ ಬತ್ತದ , ಬಾಡದ ಉತ್ಸಾಹ. ಇವೆಲ್ಲವೂ ಎಸ್.ಪಿ.ಬಿ ಯವರನ್ನು ಸಂಗೀತಲೋಕದ ದೇವರಂತೆಯೇ ಭಾಸವಾಗುವಂತೆ ಮಾಡುತ್ತಿದ್ದವು !! ಒಂದೇ ಮಾತಿನಲ್ಲಿ ಹೇಳುವುದಾದರೆ ಬಾಲು ಸರ್, ಸಂಗೀತ ಸರಸ್ವತಿಯ ವರಪುತ್ರ ! ಇಂತಹಾ ಗಾನ ಸಾಮ್ರಾಟನ ಅವಸಾನ ಸಂಗೀತ ಲೋಕಕ್ಕೆ ನಿಜಾರ್ಥದ ಭರಿಸಲಾಗದ ನಷ್ಟ !
ಮರೆಯುವ ಮುನ್ನ
ಬಾಲು ರವರಿಗಿಂತ ಒಳ್ಳೆಯ ಸಂಗೀತಗಾರ, ಹಿನ್ನಲೆ ಗಾಯಕ ನಮ್ಮ ನಡುವೆ ಇದ್ದಿರಬಹುದೇನೋ ಗೊತ್ತಿಲ್ಲ ! ಆದರೆ ಅವರಂತಹ ಸರಳ, ಸದ್ವೀನೀತ,ಸದ್ಗುಣ ಸಂಪನ್ನ, ಸಜ್ಜನ, ಸಂಯಮಿ, ಸಂಗೀತ ಸಾಕಾರ ಮೂರ್ತಿ, ಸಾತ್ವಿಕ. ಮತ್ತೊಬ್ಬರಿರಲು ಖಂಡಿತಾ ಸಾಧ್ಯವಿಲ್ಲವೆಂದರೆ ಅದು ಅತಿಶಯವಲ್ಲ. ಎಸ್.ಪಿ.ಬಿ ಯವರ ಸಂಗೀತ ಬದುಕಿನ ಬಣ್ಣದ ಬುಗುರಿಯ ಆಟ ಇಂದು ನಿಂತಿದೆ. ಆದರೆ ನೆನಪಿರಲಿ , ಇದು ಕೇವಲ ಭೌತಿಕವಾಗಿ ನಿಂತ ಆಟವಷ್ಟೇ !
ತಮ್ಮ ಅಪೂರ್ವವಾದ ಸ್ವರ ಸಂಪತ್ತಿನಿಂದ , ಆಕರ್ಷಕ ವ್ಯಕ್ತಿತ್ವದಿಂದ, ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುತ್ತಿದ್ದ ಅವರ ಸಹೃದಯ ಸವಿ ಸ್ನೇಹದ ಸಿಂಚನದಿಂದ, ಸಂಗೀತಲೋಕಕ್ಕೆ ನೀಡಿದ ಬೆಲೆಕಟ್ಟಲಾಗದ ಕೊಡುಗೆಯಿಂದ ,ಎಲ್ಲಕ್ಕಿಂತ ಹೆಚ್ಚಾಗಿ ಜನ್ಮ ಜನ್ಮಗಳು ಅಳಿದರೂ ಕಳೆದರೂ ಸದಾ ಉಳಿಯುವಂತಹಾ ಹಾಡುಗಳನ್ನು ಎಲ್ಲಾ ಭಾಷೆಯಲ್ಲೂ ಕಟ್ಟಿಕೊಟ್ಟ ಅಸಾಧಾರಣ ಸೇವೆಯಿಂದ , ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂಬ ಧೀಮಂತ ವ್ಯಕ್ತಿ, ಸಂಗೀತ ಲೋಕದ ಶಕ್ತಿ ನಮ್ಮೆಲ್ಲರ ಹೃನ್ಮನಗಳಲ್ಲಿ ಸದಾ ಅಮರರಾಗಿಯೇ ಇರುತ್ತಾರೆ.
ಹೇ….ವಿಧಿಯೇ… ಬಾಲುವಿನ ದೇಹವನ್ನು ಮಾತ್ರ ನೀನು ಮಣ್ಣಾಗಿಸಬಹುದು, ಕಣ್ಮರೆಯಾಗಿಸಬಹುದು..! ಆದರೆ ಅವರ ಕಂಚಿನ ಕಂಠದಿಂದ ಹೊರಬಂದ ಸಾವಿರ ಸಾವಿರ ಹಾಡುಗಳನ್ನಾಗಲೀ ಅವರ ವ್ಯಕ್ತಿತ್ವವನಾಗಲೀ ಅಥವಾ ಅವರನ್ನು ತಮ್ಮ ಉಸಿರಿರುವತನಕವೂ ಪ್ರೀತಿಸುವ, ಆರಾಧಿಸುವ, ಮೆಚ್ಚುವ ಕೋಟಿ ಕೋಟಿ ಸಂಗೀತ ಪ್ರೇಮಿಗಳ ಹೃದಯದಲ್ಲಿ ಹುದುಗಿರುವ ಅವರ ಬಗೆಗಿನ ಪ್ರೀತ್ಯಾಭಿಮಾನದ, ಎಂದೂ ಬಾಡದ ಭಾವನೆಗಳನ್ನು ಮಣ್ಣಾಗಿಸಲಿಕ್ಕೆ.
ನಿನಗೆ ಸಾಧ್ಯವೇ..? ನೆವರ್….!
ಹೋಗಿ ಬನ್ನಿ ಬಾಲು ಸಾರ್ ! ಮರುಜನ್ಮದಲ್ಲಿ ಕನ್ನಡ ಮಣ್ಣಿನಲ್ಲಿಯೇ ಹುಟ್ಟಬೇಕೆನ್ನುವ ನಿಮ್ಮ ಅದಮ್ಯ ಆಸೆಗೆ ಆರುಕೋಟಿ ಕನ್ನಡಿಗರ ಒತ್ತಾಸೆಯಿದೆ, ಪ್ರಾರ್ಥನೆಯಿದೆ ಹಾಗೂ ಸಹೃದಯರ ಮನದಾಳದ ಆಲಾಪನೆಯ ಆರಾಧನೆಯಿದೆ.
ಅಕ್ಷರಗಳ ಅಶ್ರುತರ್ಪಣದೊಂದಿಗೆ..
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಆಶ್ರಯ ಯೋಜನೆ – ಆವಧಿ ವಿಸ್ತರಣೆ
-
ದಿನದ ಸುದ್ದಿ5 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ5 days agoಕವಿತೆ | ದೇವರ ಹೂವು
-
ದಿನದ ಸುದ್ದಿ7 days agoಗರಿಕೆ ಹುಲ್ಲಿನ ಜ್ಯೂಸ್ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
-
ದಿನದ ಸುದ್ದಿ3 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ3 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

