Connect with us

ದಿನದ ಸುದ್ದಿ

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Published

on

  • ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ

90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು.

ಜನಸಾಮಾನ್ಯರ ಅರಿವಿನ-ಪರಿಧಿ ತಿಳಿಗೊಳ್ಳುವುದರ ಮೊದಲೇ ಊಹಿಸಲಾರದಷ್ಟು ಮಟ್ಟಿಗೆ ಇಂದು, ಸ್ವಚ್ಛಂದ ಹಳ್ಳಿ-ಸೊಬಗಿನ ಕೂಡು-ಕುಟುಂಬದ, ಮೈ-ಮನಸ್ಸು ತುಂಬಿದ, ಪರಿಶುದ್ಧ ಜೀವನ ಪ್ರೀತಿ, ಉತ್ಸಾಹ, ಮಮತೆಯನ್ನು ಇನ್ನಿಲ್ಲವಾಗಿಸಿದೆ ಎನಿಸುತ್ತದೆಯಲ್ಲವೆ?

ಹೇಗೆಂದರೆ, ಕಲ್ಪಿಸಿಕೊಂಡರೂ ಕಣ್ಣೆದುರಿಗೆ ತೆರೆದಿಡುವ ಅಮೂಲ್ಯ ಬದುಕು, ಅದೆಷ್ಟು ಬೇಗ ದಿಕ್ಕು-ದೆಸೆಯಿಲ್ಲದೆ ಕಣ್ಣು-ಕಟ್ಟಿದ ಸ್ಪರ್ಧೆಗಿಳಿದ ಕುದುರೆಯಂತೆ ಅಲೆಯುವಂತಾಗಿದೆ! ಅರೆಕ್ಷಣ, ಮೈಮನ ಕಸಿವಿಸಿಗೊಳ್ಳುತ್ತೆ! ಜೀವ ಮರುಗುತ್ತೆ. ಮತ್ತೆ ಮತ್ತೆ ಆ ಬಾಲ್ಯ, ಹಳ್ಳಿ ಬದುಕನ್ನ ಅರಸಿ ಬಯಸುತ್ತೆ! ಜನತೆ, ಹಳ್ಳಿಯಲ್ಲಿನ ಗಿಡ-ಮರ, ಪಶು-ಪಕ್ಷಿ, ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ ಮುಂತಾದ ಪರಿಸರದ ಸಕಲ ಜೀವಿಗಳೊಂದಿಗೆ ಒಂದಾಗಿ ನಲ್ಮೆಯಿಂದ ಪರಿಶುದ್ಧ ಮನದಿ, ಭೂ ತಾಯಿ, ತಿಳಿ-ನೀಲಿ ಆಗಸ, ಮಳೆ, ಗಾಳಿ, ಬೆಳಕನ್ನ ಇನ್ನಿಲ್ಲದೆ ಅಪ್ಪಿ, ಅತ್ಯಂತ ಸಂತಸ-ಖುಷಿಯಿಂದ, ಇರುವ ಪರಿಸ್ಥಿತಿಗೆ ಒಗ್ಗಿ , ಬದುಕು ರೂಪಿಸಿಕೊಂಡು ಜೀವನೋತ್ಸಾಹ ತಳೆಯುತ್ತಿದ್ದರು.

ನಿಜ ಹೇಳಬೇಕೆಂದರೆ, ಪರಿಸರವೇ ಪಾಠ; ಭೂ ತಾಯಿಯೇ ಹಾಸಿಗೆ; ಆಗಸವೇ ಹೊದಿಕೆಯಾಗಿ, ದುಡಿದ, ದಣಿವರಿದ ಮನದಿ, ಕಣ್ತುಂಬಿ ನೆಮ್ಮದಿಯ ನಿಟ್ಟುಸಿರುಗೈವ ಕ್ಷಣಗಳು ಅದಾಗಿತ್ತು!

ಹಳ್ಳಿಯಲ್ಲಿನ ಆಟೋಟಗಳು, ತಮಾಷೆಯ ಕ್ಷಣಗಳು, ಆಟಿಕೆಗಳು, ಸಾಮಾನುಗಳು, ಹಬ್ಬ-ಹರಿದಿನಗಳು, ಜಾತ್ರೆ-ಸಂತೆಗಳು, ಒಕ್ಕಲು ಸಮಯದ ಸುಗ್ಗಿಯ ಮಧುರ ಕ್ಷಣಗಳು ಇತ್ಯಾದಿ ಜನತೆಯ ಮುಗ್ಧ -ಮನಸ್ಸು ಮತ್ತು ಹೊಳೆವ ಮುಖದಲ್ಲಿ, ನಿಷ್ಕಲ್ಮಶ ಮಂದಹಾಸ ಮೂಡಿಸಿ, ಬೆಲೆ ಕಟ್ಟಲಾಗದ ಖುಷಿಯ ಕ್ಷಣಗಳನ್ನು ಸದಾ ಅವರಲ್ಲಿ ಕಂಗೊಳಿಸುತ್ತಿದ್ದವು.

ಎಲ್ಲರೂ ದುಡಿವವರು; ಎಲ್ಲರೂ ಭಾಗಿಯಾಗುವವರು; ಎಲ್ಲರೊಳಗೊಂದಾಗಿ ಬಾಳುವವರು; ಎಲ್ಲರಲ್ಲೂ ಧನ್ಯತಾ ಭಾವ; ಆದರಣೀಯತೆ, ಪೂಜ್ಯತಾ-ಭಾವ ತುಂಬಿತ್ತು! ಅಂತಃಕರಣೆ, ಕರುಣೆ, ಪ್ರೀತಿ-ವಿಶ್ವಾಸ, ತಕ್ಕಮಟ್ಟಿಗೆ ಮಾನವೀಯತೆ ಬದುಕ-ಪ್ರೀತಿ ಹೆಚ್ಚಿಸಿತ್ತು!

ಈಗಾಗಲೇ, ನಾವು ಯಾವ ಸ್ಥಿತಿ ತಲುಪಿದ್ದೇವೆಂದರೆ: ಶಾಲಾ ರಜೆಯ ದಿನಗಳಲ್ಲಿ, ಈಗಿನ ಮಕ್ಕಳಿಗೆ ಆ ಕಾಲದ ಹಳ್ಳಿಗಳ ಜೀವನ ಪರಿಚಯಿಸಲು ಗೊಟಗೋಡಿಯ ರಾಕ್ ಗಾರ್ಡನ್ – ಹಾವೇರಿ, ಹೆರಿಟೇಜ್ ವಿಲೇಜ್ – ಮಣಿಪಾಲ, ಅಲ್ಲಲ್ಲಿ ಸಾರ್ವಜನಿಕ ಉದ್ಯಾನವನ, ಹಾಗೂ ಇತರೆ ಕೆಲವು ಮ್ಯೂಸಿಯಮ್ ಗಳತ್ತ ಮುಖ ಮಾಡಿಬೇಕೆ ಹೊರತು ನೈಜ ಚಿತ್ರಣ ಪ್ರಸ್ತುತ ಹಳ್ಳಿಗಾಡಿನಲ್ಲೂ ಕಾಣಸಿಗದು! ಸ್ವತಃ ಹಳ್ಳಿಗರೇ ಪರಿತಪಿಸುವ ಸ್ಥಿತಿ.

ಕಾರಣ ಇಷ್ಟೆ: ತಂತ್ರಜ್ಞಾನದ ಆವಿಷ್ಕಾರ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಹೊಕ್ಕಿರುವ ಅದರ ಗಾಢವಾದ ಛಾಯೆ. ಇಡೀ ‘ಪ್ರಪಂಚವೇ ಒಂದು ಹಳ್ಳಿ’ (Global Village) ಯಾಗಿ ಮಾರ್ಪಟ್ಟಿರುವ ಭಾವನೆ. ವಿಶೇಷವಾಗಿ, ದೂರವಾಣಿ, ಇಂಟರ್ನೆಟ್, ಯುಟ್ಯೂಬ್, ನೇರ ಮೆದುಳಿಗೆ ಕೈ ಹಾಕಿರುವ ಸಾಮಾಜಿಕ ಜಾಲತಾಣಗಳ ಡ್ರಗ್ಸ್ ರೀತಿಯ ಮಾನಸಿಕ ಮೋಹ ಬೆಂಬಿಡದೆ ಇಂದಿನ ಆಧುನಿಕ ಜನತೆಯ ಚಿಂತನಾರ್ಹ ಯೋಚನಾ ಶಕ್ತಿ, ಆರೋಗ್ಯ , ಕೌಟುಂಬಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಒಟ್ಟಾರೆ ಜೀವನ ಶೈಲಿಯನ್ನೇ ಅಕ್ಷರಸಃ ನುಂಗಿಹಾಕಿವೆ! ಅಲ್ಲದೆ, ಇದು ಇಂದಿನ ಅನಿವಾರ್ಯವೆಂಬಂತೆ ಕಠೋರ ಸನ್ನಿವೇಶ ಹುಟ್ಟುಹಾಕಿವೆ.

ಒಂದೆಡೆ, ‘ಅತೀಯಾದ ಅಮೃತವೂ ವಿಷ’ವೆನ್ನುವಂತೆ, ಹಾಗೂ ಊಟದಲ್ಲಿ ‘ರುಚಿಗೆ ತಕ್ಕಷ್ಟು ಉಪ್ಪಿ’ರುವಂತೆ ಹಲವು ಒಳಿತು-ಕೆಡುಕಗಳ ನಡುವೆ ಎಲ್ಲವೂ ಹಿತಮಿತವಾಗಿ ಬಳಕೆಯಲ್ಲಿದ್ದರೆ ಚೆನ್ನ. ಅಲ್ವೇ? ಮೈ ಮನ ಆರೋಗ್ಯಕರವಾಗಿರುತ್ತೆ; ಜೀವನ ಉತ್ಸಾಹದಿಂದ ಕೂಡಿರುತ್ತೆ.
ಜೊತೆಗೆ, ಇತ್ತೀಚೆಗೆ ಜಗತ್ತಿನೆಲ್ಲೆಡೆ ಭಾರೀ ಸಂಚಲನ ಸೃಷ್ಟಿಸಿರುವ ‘ಕೃತಕ ಬುದ್ಧಿಮತ್ತೆ’ (Artificial Intelligence – AI) ಹಾಗೂ ‘ಬಯೋಚಿಪ್’ ತಂತ್ರಜ್ಞಾನಗಳು. ಈ ಎರಡೂ ತಂತ್ರಜ್ಞಾನಗಳು ಬಹುತೇಕ ಮನುಷ್ಯನನ್ನ ಸಹ ಒಂದು ಸರಕಾಗಿ ನೋಡುವ ದೂರದೃಷ್ಟಿ ಹೊಂದಿವೆ ಎಂದರೆ ತಪ್ಪಾಗಲಿಕ್ಕಿಲ್ಲ! ತೀರ ಇತ್ತೀಚೆಗೆ, ತಂತ್ರಜ್ಞಾನ ಜಗತ್ತಿನ ಹೆಸರಾಂತ ಉದ್ಯಮಿ: ಎಲಾನ್ ಮಸ್ಕ್ ತಮ್ಮ ‘ನ್ಯೂರಾಲಿಂಕ್’ (Neuralink) ಸಂಸ್ಥೆಯ ಮೂಲಕ ಪ್ರಪಂಚದ ಮೊಟ್ಟ ಮೊದಲ ಪ್ರಯತ್ನವಾಗಿ ಆರೋಗ್ಯವಂತ ವ್ಯಕ್ತಿಯೊಬ್ಬರ ಮೆದುಳಿನಲ್ಲಿ ಪ್ರಾಯೋಗಿಕ – ‘ಮೊದಲ ಬಯೋಚಿಪ್’ ಅಳವಡಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ! ಇದುವರೆಗೂ, ಮೊಬೈಲ್ ನಲ್ಲಿ ಕೇವಲ ‘ಮೆಮೊರಿ ಕಾರ್ಡ್’ ಬಳಸಿ, ಅದರಲ್ಲಿ ಸಂಗ್ರಹಿಸಿದ ಮಾಹಿತಿ ಬೇಕೆಂದಾಗ ಆಲಿಸುವ, ನೋಡುವ ಪರಿಪಾಠದ ಪರಿಚಯವಿದ್ದ ನಮಗೆ, AI ಹಾಗೂ Biochip ತಂತ್ರಜ್ಞಾನಗಳ ಅವತಾರಗಳು ಊಹೆಗೂ ಮೀರಿದ್ದು ಅನ್ಸುತ್ತೆ ಕೂಡ.

ಆಗ, ಜಗತ್ತು ಹೇಗಿರಬೇಡ? ತಂತ್ರಜ್ಞಾನ ತೊರೆದು ಮನುಷ್ಯ, ಜೀವನ ಕಲ್ಪಿಸಿಕೊಳ್ಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೇವಲ ಮನುಷ್ಯನ ಅವಶ್ಯಕತೆಗಳಿಗೆ ಪೂರಕವಾಗಿರಬೇಕೆ ಹೊರತು; ಆತನನ್ನ ಆಳುವ ಸ್ಥಿತಿ ತಲುಪಬಾರದು! ಮುಂದಿನ ದಿನಗಳಲ್ಲಿ, ಮನುಷ್ಯ ಎದುರಿಸಬಹುದಾದ ಭಯಾನಕ ತಂತ್ರಜ್ಞಾನ ಸಂಕೋಲೆಗಳನ್ನು ಕುರಿತು ಚರ್ಚಿಸುವ ಅಗತ್ಯ ಇಂದಿನ ತುರ್ತು ಅನಿವಾರ್ಯ. ಆದರೆ, ಎಲ್ಲವೂ ಸಲೀಸಾಗಿ ಕೈಗೆಟುಕುವ ಇಂದಿನ ದಿನಗಳಲಿ, ಅತಿಯಾಗಿ ಮಿತಿಮೀರಿರುವ ಅನುಕೂಲಗಳು ಅಮೂಲ್ಯ ಖುಷಿಯ ಕ್ಷಣಗಳನ್ನು ಎಂದಿಗೂ ನೀಡಲಾರವು.

ಬದಲಿಗೆ, ಪ್ರತಿಷ್ಠೆಯ ಹೆಮ್ಮರಗಳಾಗಿ, ಜನತೆ ನಾಲ್ಕು ದಿನದ ಈ ಬಾಳಲಿ ಏನೋ ಬಹುದೊಡ್ಡ ಸಾಧನೆಗೈದವರಂತೆ, ಯಂತ್ರಮಾನವರಂತೆ ಬೀಗುವವರೆ!!? ಮೂಲಭೂತವಾಗಿ, ಮಾನವ ಸಹಿತ ಸಕಲ ಜೀವ-ಸಂಕುಲವೂ ವಾಸಯೋಗ್ಯ ಸ್ವಚ್ಛಂದ ಭೂಮಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿಯಲ್ಲಿ, ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಿಸದೆ; ಗಿಡ-ಮರ ಬೆಳೆಸದೆ; ಹಸಿರು ಹೆಚ್ಚಿಸದೆ, ಮತ್ತು ಪರಿಸರ ಸಮತೋಲನ ಕಾಪಾಡದೆ; ಕೇವಲ ತಂತ್ರಜ್ಞಾನ ತಲೆಯಲಿ ಹೊತ್ತು, ಮನುಷ್ಯ ಉತ್ತಮ ಆಹಾರ, ಆರೋಗ್ಯ ಮತ್ತು ಜೀವನ ಕಟ್ಟಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಸಮರೋಪಾದಿಯಲ್ಲಿ, ಜನತೆ ಸ್ವ ಇಚ್ಛೆಯಿಂದ ಹಳ್ಳಿ-ಹಳ್ಳಿಗಳಿಂದ, ನಗರಗಳು, ಬೆಟ್ಟ-ಗುಡ್ಡಗಳಲ್ಲೆಡೆ ಬೃಹತ್ ಸಂಖ್ಯೆಯಲ್ಲಿ ಸಸಿಗಳನ್ನ ನೆಟ್ಟು, ಪಾಲನೆ-ಪೋಷಣೆಗೈಯ್ಯುವ ಚಳುವಳಿ ರೂಪದ ಆಂದೋಲನ ದೇಶಾದ್ಯಂತ ಅತ್ಯಂತ ತ್ವರಿತವಾಗಿ ಕೈಗೂಡಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ಕೈಜೋಡಿಸಬೇಕು.

(ಲೇಖಕರು : ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !

Published

on

ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !

ಹಿರಿಯೂರು/ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ದಾವಣಗೆರೆಗೆ ಪ್ರಯಾಣಿಸುತ್ತಿದ್ದ ವೇಳೆ, ಕೆ.ಆರ್. ಹಳ್ಳಿ ಗೇಟ್ ಸಮೀಪ ದಿಢೀರನೆ ಮತ್ತೊಂದು ಕಾರು ಅಡ್ಡ ಬಂದಿದೆ. ಅಡ್ಡ ಬಂದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿದ ಶಾಸಕರ ಕಾರು ರಸ್ತೆ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿಯಾಗಿದೆ.

http://Visit : www.suddidina.com

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆಯಾದರೂ, ಕಾರಿನಲ್ಲಿದ್ದ ಶಾಸಕ ಸಮರ್ಥ್ ಶಾಮನೂರು ಹಾಗೂ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

ದಿನದ ಸುದ್ದಿ

ಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ

Published

on

ಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ

ದಾವಣಗೆರೆ: ಭದ್ರಾ ಡ್ಯಾಂ ನೀರು ಹರಿಸಬೇಕು ಎಂದು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ ಎಂದಿನಂತೆ ಇತ್ತು. ವಾಹನಗಳ ಓಡಾಟವೂ ಯಥಾಸ್ಥಿತಿ ಇತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಲಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ನಡೆದವು.

ನಗರದ ಜಯದೇವ ವೃತ್ತದಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ನೇತೃತ್ವದಲ್ಲಿ ಲೋಕಿಕೆರೆ ನಾಗರಾಜ್, ಲಿಂಗರಾಜ್ ಶಾಮನೂರು, ಕೊಳೇನಹಳ್ಳಿ ಸತೀಶ್ ಸೇರಿದಂತೆ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಹೆದ್ದಾರಿ ಬಂದ್ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಸಂಜೆ ಹೊತ್ತಿಗೆ ಬಿಡುಗಡೆ ಮಾಡಿದರು.

http://Visit : www.suddidina.com

ದಾವಣಗೆರೆ ಬಂದ್ ಯಶಸ್ವಿ ಆಗಲಿಲ್ಲ. ಬಂದ್ ಎಂಬಂತ ವಾತಾವರಣವೂ ನಿರ್ಮಾಣ ಆಗಿರಲಿಲ್ಲ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಮಳೆ ಆರಂಭವಾದ ಕಾರಣ ಕಡಿಮೆ ಪ್ರಮಾಣದಲ್ಲಿ ಸೇರಿದ್ದ ರೈತ ಮುಖಂಡರು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಘೋಷಣೆ ಹಾಕಿದರು. ಕೂಡಲೇ ಭದ್ರಾ ಡ್ಯಾಂ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿದರು.

Continue Reading

ದಿನದ ಸುದ್ದಿ

ಅಂತರ್ಜಾತಿ ವಿವಾಹದ ಬೆನ್ನಲ್ಲೇ ದೇವಸ್ಥಾನ ನೌಕರ ಅಮಾನತು? ಜಾತಿ ತಾರತಮ್ಯದ ಆರೋಪ!

Published

on

ಅಂತರ್ಜಾತಿ ವಿವಾಹದ ಬೆನ್ನಲ್ಲೇ ದೇವಸ್ಥಾನ ನೌಕರ ಅಮಾನತು? ಜಾತಿ ತಾರತಮ್ಯದ ಆರೋಪ!

ಕಣ್ಣೂರು: ಮಗಳು ಬೇರೆ ಜಾತಿಯ ಯುವಕನನ್ನು ವಿವಾಹವಾದ ಬಳಿಕ ತಮ್ಮನ್ನು ದೇವಸ್ಥಾನದ ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಕಣ್ಣೂರಿನ ಮುಚ್ಚಿಲೋಟ್ ಭಗವತಿ ದೇವಸ್ಥಾನದ ಉಪಕರ್ಮಿ ಸಿ.ವಿ. ರಾಜನ್ ಆರೋಪಿಸಿದ್ದಾರೆ. ಈ ಆರೋಪವು ದೇವಸ್ಥಾನದ ಆಚರಣೆಗಳು, ಜಾತಿ ವ್ಯವಸ್ಥೆ ಹಾಗೂ ವೈಯಕ್ತಿಕ ಆಯ್ಕೆಯ ಹಕ್ಕಿನ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾರ್ಚ್ 15, 2026ರಂದು ವಾಣಿ ಸಮುದಾಯಕ್ಕೆ ಸೇರಿದ ರಾಜನ್ ಅವರ ಮಗಳು ಪೊದುವಾಲ್ ಸಮುದಾಯದ ಯುವಕನನ್ನು ವಿವಾಹವಾಗಿದ್ದರು. ಮದುವೆಗೂ ಮುನ್ನವೇ, 2025ರ ಆಗಸ್ಟ್‌ನಲ್ಲಿ ನಡೆದ ನಿಶ್ಚಿತಾರ್ಥದ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ರಾಜನ್ ಅವರನ್ನು ಕೆಲಸದಿಂದ ದೂರವಿರಲು ಸೂಚಿಸಿತ್ತು ಎಂದು ಅವರು ಹೇಳಿದ್ದಾರೆ.

ಸುಮಾರು 30 ವರ್ಷಗಳಿಂದ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜನ್, ದೇವಸ್ವಂ ಮಂಡಳಿಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಹಿಂದೆ ಕೆಲಸ ಮುಂದುವರಿಸಲು ಅವಕಾಶ ದೊರೆತಿತ್ತು. ಆದರೆ ಇದೀಗ ಹೊರಡಿಸಿರುವ ಅಮಾನತು ಆದೇಶದಲ್ಲಿ, ಸಮಿತಿ ಸದಸ್ಯರು ಹಾಗೂ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಮತ್ತು ಪೂರ್ವಜರಿಂದ ಬಂದ ಸಾಂಪ್ರದಾಯಿಕ ಆಚರಣೆಗಳನ್ನು ಉಲ್ಲಂಘಿಸಿರುವುದು ಕಾರಣವೆಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

http://Visit : www.suddidina.com

ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯ ನೀಡಲಾಗಿಲ್ಲ. ಹಾಗೂ ತಮ್ಮ ಮಗಳ ಅಂತರ್ಜಾತಿ ವಿವಾಹವೇ ತಮ್ಮ ವಿರುದ್ಧದ ಕ್ರಮಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಿದ್ದು, ನನ್ನ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ನೀಡಿದ್ದಲ್ಲಿ ಅಥವಾ ತಪ್ಪು ಸಾಬೀತಾದಲ್ಲಿ ಕೆಲಸ ತೊರೆಯಲು ನಾನು ಸಿದ್ಧನಿದ್ದೇನೆ ಎಂದು ರಾಜನ್ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಸಮಿತಿ ಕಾರ್ಯದರ್ಶಿಗಳಾದ ಹರೀಂದ್ರನ್ ಅವರು, ರಾಜನ್ ಮುಂದುವರಿಯುವುದಕ್ಕೆ ಸಮಿತಿಗೆ ಯಾವುದೇ ಆಕ್ಷೇಪವಿಲ್ಲ ಮತ್ತು ಅಂತಿಮ ನಿರ್ಧಾರವನ್ನು ವ್ಯವಸ್ಥಾಪಕ ಟ್ರಸ್ಟಿ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ ರಾಜನ್ ಅವರು ತಮಗೆ ಆದ ಅನ್ಯಾಯದ ಕುರಿತು ಮಲಬಾರ್ ದೇವಸ್ವಂ ಮಂಡಳಿ, ಮಾನವ ಹಕ್ಕುಗಳ ಆಯೋಗ ಹಾಗೂ ಸ್ಥಳೀಯ ಶಾಸಕರಾದ ವಿ ಕುಂಞಕೃಷ್ಣನ್ ಅವರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದಿನ ತಿಂಗಳು ದೇವಸ್ವಂ ಮಂಡಳಿಯಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಒಬ್ಬ ವಯಸ್ಕ ವ್ಯಕ್ತಿಯ ವಿವಾಹದ ಆಯ್ಕೆಗೆ ಆತನ ಪೋಷಕರೇ ಬೆಲೆ ತೆರಬೇಕೇ? ಎಂಬ ಪ್ರಶ್ನೆಯನ್ನು ಈ ಪ್ರಕರಣ ಮತ್ತೆ ಮುನ್ನೆಲೆಗೆ ತಂದಿದೆ.

Continue Reading

Trending