ಭಾವ ಭೈರಾಗಿ
ಕವಯಿತ್ರಿ ಅರುಂಧತಿ ರಮೇಶ್ ರವರ ಕಣ್ಣಲ್ಲಿ ಜಿ ಎಸ್ ಸುಶೀಲಾದೇವಿ ಆರ್ ರಾವ್ ಮತ್ತು ಅವರ ಸಾಹಿತ್ಯ
- ಶ್ರೀಮತಿ ಅರುಂಧತಿ ರಮೇಶ್, ಕವಯಿತ್ರಿ, ದಾವಣಗೆರೆ
ಸ್ತ್ರೀ ವರ್ಗದ ಭಾವನೆ, ತುಮುಲ, ಸಂಕಷ್ಟ ಮತ್ತು ಸ್ವಾಭಿಮಾನ ಕುರಿತಾದ ಸಾಹಿತ್ಯವನ್ನು ಓದುಗರಿಗೆ ದಶಕಗಳಿಂದ ನೀಡಿದ ಲೇಖಕಿಯರಲ್ಲಿ ಶ್ರೀಮತಿ ಜಿ. ಎಸ್. ಸುಶೀಲಾದೇವಿ ಆರ್. ರಾವ್ ಪ್ರಮುಖರು. ಅವರು ‘ಗಟ್ಟಿ ಕಥೆಗಳನ್ನು ಬರೆದೂ ಪ್ರಧಾನ ವಾಹಿನಿಯಲ್ಲಿ ಚರ್ಚೆಗೆ ಬಾರದೇ ಹೋದ ಕಥೆಗಾರ್ತಿ’. ಎಂಬ ನೋವು, ‘ಅಕ್ಯಾಡೆಮಿಕ್ ಅಳತೆ ಪಟ್ಟಿಗೆ ಅರ್ಥವೆ ಅಗಲಾರದ ಬದುಕಿನ ಸೂಕ್ಷ್ಮ ಗಳು ಅವರ ಕಥೆಗಳಲ್ಲಿವೆ’ ಎಂಬ ಮೆಚ್ಚುಗೆ ವಿಮರ್ಶಕ ಶ್ರೀ ಎನ್ ಎಸ್ ಶ್ರೀಧರಮೂರ್ತಿಯವರದು.
1952 ರಲ್ಲಿ ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿ ಗುಂಜಿಗನೂರಿನಲ್ಲಿ ಶ್ಯಾನುಭೋಗ್ ಶ್ರೀನಿವಾಸಯ್ಯ ಮತ್ತು ಜಾನಕಮ್ಮ ದಂಪತಿಗಳ. ಏಳು ಮಕ್ಕಳಲ್ಲಿ ಕಿರಿಯ ಮಗಳು. ತಂದೆ ಓದುತ್ತಿದ್ದ ಕುಮಾರವ್ಯಾಸ ಭಾರತ, ಜೈಮಿನಿ ಭಾರತಗಳು ಸಾಹಿತ್ಯದ ಆರಂಭಿಕ ಪ್ರೇರಣೆಗಳು. ಬಾಲ್ಯದಲ್ಲಿಯೇ ಟೈಫಾಯಿಡ್‌ನಿಂದ ನರಳುತ್ತ ಕೋಮಾ ಆವರಿಸಿ ‘ಬದುಕಿಲ್ಲ’ ಎಂಬ ಧೃಢವಾದ ನಂಬಿಕೆಯೊಂದಿಗೆ ಅಂತ್ಯ ಸಂಸ್ಕಾರಕ್ಕೇ ಸಿದ್ಧರಾದಾಗ ಒಬ್ಬ ಅಜ್ಜಿ ‘ಇಲ್ರಪಾ ಮಕದಾಗೆ ಜೀವದ ಕಳೆ ಐತೆ ತಡೀರಿ’ ಎಂದು ಬುಡ್ಡಿ ಹಚ್ಚಿ ದಪ್ಪ ಬಳೇಚೂರು ಕಾಸಿ ಚುಟುಕಿ ಇಟ್ಟಾಗ ಅದರ ಬಿಸಿಗೆ ಮೈ ಮಿಸುಕಾಡಿತಂತೆ.
ರಾತ್ರಿ ಇಡೀ ಮಗ್ಗುಲಲ್ಲಿ ಕಾದು ಕೂತ ಅಜ್ಜಿಯ ನಂಬಿಕೆಯಂತೆ ಬೆಳಿಗ್ಗೆ ಕಣ್ತೆರೆದು “ಅಮ್ಮ” ಎಂದು ದನಿ ಹೊರಡಿಸಿದ್ದಾರೆ. ಇದರಿಂದಾದ ಶ್ರವಣ ಸಮಸ್ಯೆಯಿಂದಾಗಿ ಹೊರಗಿನ ಶಬ್ದಲೋಕ ಅವರ ಪಾಲಿಗೆ ಕ್ಷೀಣಿಸಿದರೂ ಸಾಹಿತ್ಯ ಕೃಷಿ ಸಮೃದ್ಧವಾಗುತ್ತ ಬೆಳೆದಿದೆ. ಅವರ ಓದು, ಅನುಭವ, ನೋಟಗಳಿಗೆ ಸಿಕ್ಕಿದ, ದಕ್ಕಿದ ಸಂಭವನೀಯತೆಗಳ ವಿಸ್ತಾರ ಅಪಾರ.
ಇವರು ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕಥೆಗಾರ ಎನ್ ಎಸ್ ಚಿದಂಬರರಾವ್‌ರ ಪ್ರೋತ್ಸಾಹ. ಸುಶೀಲಾರು ತಮ್ಮ ಬರಹವನ್ನು ಪತ್ರಿಕೆಗಳಿಗೆ ಕಳಿಸಲು ಉತ್ಸಾಹ ತುಂಬಿತು. ಹಾಗೆಂದು ಪ್ರಚಾರದ ವ್ಯಾಮೋಹಕ್ಕೆ ಸಿಕ್ಕದೆ, ಮಾಗಿದ ಅನುಭವಕ್ಕೆ ನಿಲುಕಿದ ನಂತರವೇ ಕಥೆಯಾಗಿಸುವ ಬದ್ಧತೆ ಇವರದು. ಹಾಗಾಗಿ ನಲವತ್ತು ದಶಕಗಳನ್ನು ದಾಟಿದ ಸಾಹಿತ್ಯ ಯಾತ್ರೆಯಲ್ಲಿ ನೂರಾರು ಕಥೆಗಳನ್ನು ಬರೆದರು. ತಮ್ಮಲ್ಲೆ ಇದ್ದ ಒಬ್ಬ ಜಾಗೃತ ವಿಮರ್ಶಕಿಯಿಂದ ಯಾವುದೇ ವಿಷಯಕ್ಕೂ ನ್ಯಾಯ ಒದಗಿಸುವ ಸ್ವತಃ ಪ್ರೇರೇಪಣೆ ಹೊಂದಿದ್ದರು.
ಆರೋಗ್ಯ ಇಲಾಖೆಯ ಪದೇ ಪದೇ ವರ್ಗವಾಗುವ ಸರ್ಕಾರಿ ಹುದ್ದೆಯಲ್ಲಿದ್ದ ಶ್ರೀ ರಾಘವೇಂದ್ರ ರಾವ್ ಅವರೊಂದಿಗೆ ಹದಿನೆಂಟನೇ ವಯಸ್ಸಿಗೆ ವಿವಾಹವಾಯಿತು. ಬಳ್ಳಾರಿಯ ಬಿರು ಬಿಸಿಲು, ಬೆಳೆಯುತ್ತಿದ್ದ ಸಂಸಾರ, ಕುಟುಂಬದ ಸಾಕಷ್ಟು ಜವಾಬ್ದಾರಿ, ಇಂತಹ ಸಮಸ್ಯೆಗಳ ನಡುವೆಯೂ ಅವರ ಕಥಾ ಲೋಕ ಶ್ರೀಮಂತವಾಗುತ್ತಲೇ ಇತ್ತು. ‘ಸ್ವಾಭಿಮಾನಿ’, ‘ಬೆಂಕಿಯ ಒಡಲಲ್ಲಿ ‘ಸಂಬಂಧದ ಸಂಕೋಲೆಗಳು’.. ಇತ್ಯಾದಿ ಕಾದಂಬರಿಗಳು ‘ಕಿಟ್ಟು ಪುಟ್ಟಿಯರ ಸಾಹಸಗಳು’ ಮಕ್ಕಳ ಕಾದಂಬರಿ, ‘ಷೋಕೇಸಿನ ಗೊಂಬೆ’ ಕಥಾ ಸಂಕಲನ ಪ್ರಕಟವಾದವು.
ಪತಿಯ ಅನಿರೀಕ್ಷಿತ ಸಾವು ಅಘಾತಕಾರಿಯಾಗಿ ಸಂಪೂರ್ಣ ಹೊಣೆಗಾರಿಕೆ ಸುಶೀಲಾರವರ ಹೆಗಲೇರಿತು. ಮಗ ಅನಂದ್, ಮಗಳು ಲತಾ ಇವರ ವಿದ್ಯಾಭ್ಯಾಸ ಮತ್ತು ಏಳ್ಗೆ ಸುಶೀಲಾರ ಅತ್ಯಂತ ಜಾಗರೂಕ ಸಮತೂಕದ ನಿರ್ವಹಣೆಯಲ್ಲಿ ನಡೆಯಿತು. ಬಹುಷಃ ಬೆಂಕಿಯ ಮಡಿಲಲ್ಲಿದ್ದೂ ಸ್ವಾಭಿಮಾನಿಯಾಗಿ ಕುಟುಂಬವನ್ನು ಕಾಪಾಡಿ ಒಂದು ನೆಲೆಗೆ ನಿಲ್ಲಿಸಿದ ಹಿರಿಮೆ ಸಾರ್ಥಕತೆ ಸುಶೀಲಾವರದ್ದು.
ಬದುಕಿನಿಂದ ಬರಹ ಬದುಕಿಗಾಗಿ ಬರಹ ಎಂಬ ಸಿದ್ದಾಂತದಿಂದ ಸಾಹಿತ್ಯಕ್ಕೆ ಬದ್ಧರಾದವರು. ಗ್ರಾಮೀಣ ಬದುಕನ್ನು, ಸುತ್ತಣ ಜಗತ್ತನ್ನು ಕಂಡ ಬೆರಗು, ಜನರ ನೋವು, ನಲಿವು, ದ್ವೇಷ, ತುಮುಲಗಳು ಶೋಷಣೆ ಇವುಗಳನ್ನು ಎದುರಿಸುತ್ತ ಬದುಕನ್ನು ಕಟ್ಟಿಕೊಂಡ ಸ್ತ್ರೀಯರು, ಬದುಕಿನ ಬಗ್ಗೆ ಅಪಾರ ಪ್ರೀತಿ ಭರವಸೆ ಇರಿಸಿಕೊಂಡವರು, ವೈವಿಧ್ಯಮಯ ವ್ಯಕ್ತಿತ್ವಗಳ ಕಂಡ ಉಂಡ ಬದುಕೆಲ್ಲ ಕಥೆಯಾಗಿ ಹರಿದು ಬಂದಿದೆ ಎಂಬುದು ಅವರದೇ ಮಾತು.
ಅವರ ತವರಾದ – ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ – ಗುಂಜಿಗನೂರು ಗ್ರಾಮದಲ್ಲಿನ ಕೊಪ್ಪದಮ್ಮನ ಗುಡಿ ದೆವ್ವ ಬಿಡಿಸಲು ಪ್ರಖ್ಯಾತವಾಗಿತ್ತು. ಇದನ್ನು ಕಣ್ಣಾರೆ ಕಂಡ ಲೇಖಕಿ, ದೆವ್ಬದ ನಂಬಿಕೆಯನ್ನು ಬಿಟ್ಟು ಇರಬಹುದಾದ ಮನೋರೋಗಗಳ ಬಗ್ಗೆ ಮನೋವೈಜ್ಞಾನಿಕ ಗ್ರಂಥಗಳನ್ನು ಅಧ್ಯಯನ ಮಾಡಿ ಬರೆದ ಕಥೆಯೇ “ಮನಮಂದಿರ”. ಶಾಲಾ ವಾರ್ಷಿಕೋತ್ಸವದ ದಿನ ಊರ ಹೊರಗಿನ ಹುಣಿಸೇ ಮರದ ಕೆಳಗೆ ಬಕ್ಕತಲೆಯ ವ್ಯಕ್ತಿಯೊಬ್ಬ ಕಥಾ ನಾಯಕಿ ಉಮಾಳ ಮೇಲೆ ಅತ್ಯಾಚಾರ ಕೃತ್ಯವೆಸಗಿದ ಪರಿಣಾಮ ಮನೋವ್ಯಾಧಿಗೆ ಒಳಗಾಗುತ್ತಾಳೆ.
ಹಗಲಿನ ಅವಳ ಚಟುವಟಿಕೆ ರಾತ್ರಿಯ ಮಂಕು ಮುಸುಕಿಗೆ ಬದಲಾಗುತ್ತಿತ್ತು.ಒಂದೊಂದಾಗಿ ಸುಮಿತ್ರಾ ಎಂಬಾಕೆ ಮನೆಯವರ ಕಟ್ಟು ಪಾಡು, ದೌರ್ಜನ್ಯಗಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು ಅವಳ ಕಾಟದಿಂದಲೇ ಉಮಾ ತಲೆ ತಿರುಗಿ ಬೀಳುವ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆಂಬ ನಂಬಿಕೆ ಬಲವಾಗಿ ಬೇರೂರಿತ್ತು. ಮನೋವೈದ್ಯರ ಚಿಕಿತ್ಸೆಯಿಂದಾಗಿ ಕಾರಣ ತಿಳಿಯುವುದು ಮಾತ್ರವಲ್ಲದೆ ವ್ಯಾಧಿಯೂ ಗುಣಮುಖವಾಗುತ್ತದೆ. ಬಾಲ್ಯಸ್ನೇಹಿತ ಆನಂದ್ ವಿಷಯ ತಿಳಿದೂ ಅವಳನ್ನು ಪ್ರೀತಿಯಿಂದ ಒಪ್ಪಿಕೊಂಡು ಸಂಸಾರಿಯಾಗಿರುತ್ತಾನೆ. ಯಾವುದೇ ಅನುಮಾನ ಆತಂಕಗಳಿಲ್ಲದೆ ಬಂಧ ಬೆಸುಗೆಯಾದ ಸುಖಾಂತ.
ಬಲವಂತದ ಮದುವೆಯಿಂದಾಗಿ ಗಂಡನಿಂದ ತಿರಸ್ಕೃತಳಾದರೂ ಸ್ವಾಭಿಮಾನದಿಂದ ಬದುಕನ್ನು ಎದುರಿಸುವ ಕತೆ “ಸ್ವಾಭಿಮಾನಿ”. ಜನಪ್ರಿಯವಾದ ಈ ಕಾದಂಬರಿಯ ವಿಶೇಷವೆಂದರೆ, ಮಾಸಪತ್ರಿಕೆಯಲ್ಲಿ ಈ ಧಾರಾವಾಹಿ ಪ್ರಕಟವಾಗುತ್ತಿದ್ದಾಗ ಕುಮಟಾದ ನರಸಿಂಹ ಗೋವಿಂದ ಶಾನುಭಾಗರು ತುಂಬ ಆಸಕ್ತಿಯಿಂದ ಓದುತ್ತಿದ್ದರು. ಹಠಾತ್ತನೆ ಅವರ ಆರೋಗ್ಯ ಬಿಗಡಾಯಿಸಿ ಮೃತ್ಯುಶಯ್ಯೆಯಲ್ಲಿದ್ದಾಗ, ಧಾರಾವಾಹಿಯ ಸುಮಿತ್ರಳ ಮುಂದಿನ ಬದುಕಿನ ಬಗ್ಗೆ ಹಂಬಲಿಸಿ, ಸಂಪಾದಕರ ಅನುಮತಿ ಪಡೆದು ಮುಂದಿನ ಕಂತುಗಳನ್ನು ತರಿಸಿಕೊಂಡು ಓದಿಸಿಕೊಂಡು ಕೇಳಿದ್ದಾರೆ. ನಂತರ ನಿಧನರಾಗಿದ್ದಾರೆ. ಇದಲ್ಲವೆ ನಿಜವಾದ ಜನಪ್ರಿಯತೆ ಅಂದರೆ?
ಹೆತ್ತವರ ಪ್ರೀತಿ ಕಾಣದೆ ತಿರಸ್ಕೃತಳಾದರೂ ವಿಧವೆ ಅತ್ತೆಯ ಮಡಿಲಲ್ಲಿ ಬೆಳೆದ ವಿಚಾರವಂತ ಹೆಣ್ಣುಮಗಳಾದ ಇಂದಿರಾಳ ಮನೋರಂಗದ ತಲ್ಲಣಗಳ ಸ್ಪಷ್ಟವಾಗಿ ಬಿಂಬಿಸಿದ ಮನೋ ವೈಜ್ಞಾನಿಕ. ಕಾದಂಬರಿ ” ಬೆಂಕಿಯ ಒಡಲಲ್ಲಿ”. ಅಕ್ಕಂದಿರ ಶೋಷಣೆ, ತನ್ನ ಮೇಲಿನ ಅತ್ಯಾಚಾರದ ಪ್ರಯತ್ನ, ಸುತ್ತಲೂ ಆವರಿಸಿದ್ದ ದೇವದಾಸಿ ಪದ್ಧತಿಯ ಆಚರಣೆಗಳು, ಇವೆಲ್ಲ ಹೆಣ್ಣನ್ನು ತುಳಿದು ವಿಜೃಂಭಿಸುವಂತೆ ಕಂಡು ಪುರುಷ ದ್ವೇಷಿಯಾಗುತ್ತಾಳೆ. ಒತ್ತಾಯದಿಂದ ತನ್ನನ್ನು ಮದುವೆಯಾದ ವಿಶ್ವನಾಥ ಈ ಮೊದಲು ಅಮಾಯಕ ಹೆಣ್ಣನ್ನು ವಿಚ್ಛೇದನದಿಂದ ದೂರಮಾಡಿದ್ದು ತಿಳಿದು ತೀವ್ರ ಮನೋರೋಗಕ್ಕೆ ತುತ್ತಾಗುತ್ತಾಳೆ.
ವೈದ್ಯರ ಚಿಕಿತ್ಸೆಯ ಮೂಲಕ ಮನಸಿನ ಒಳಪದರಗಳು ಒಂದೊAದಾಗಿ ಬಿಚ್ಚಿಕೊಳ್ಳುತ್ತ ವೇದನೆಗಳ ಮೂಲಗಳು ಒಂದೊAದಾಗಿ ಹೊರಬರುತ್ತವೆ. ಗರ್ಭ ಕೋಶವಿಲ್ಲದೆ ದಾಂಪತ್ಯ ಅಸಫಲವೆನಿಸಿ ತಾನೆ ಸ್ವಇಚ್ಛೆಯಿಂದ ವಿಚ್ಛೇದನ ನೀಡಿ, ತನ್ನನ್ನು ವಿವಾಹವಾಗಲು ಅವಕಾಶ ಮಾಡಿಕೊಟ್ಟ ಮೊದಲ ಹೆಂಡತಿಯ ಬಗ್ಗೆ ತಿಳಿದಾಗ ಮನೋರೋಗದ ಚಿಕಿತ್ಸೆ ಫಲಪ್ರದವಾಗಿ ಸುಖಾಂತ್ಯವಾಗುವ ಕಾದಂಬರಿ.
ಅಲ್ಪ ವಿದ್ಯಾವಂತ ಹೆಣ್ಣುಮಗಳು ಸಾಂದರ್ಭಿಕ ಬಿಕ್ಕಟ್ಟಿನಲ್ಲಿ ಕೌಟುಂಬಿಕ ವ್ಯವಹಾರಗಳಲ್ಲೇ ಮುಳುಗಿ ತನ್ನ ಓದಿನ ಬಳಕೆಯೇ ಆಗದ ಪರಿಸ್ಥಿತಿ. ಮಗಳು ಅಜ್ಜಿಯ ಮನೆಯಲ್ಲಿ ಸುಂದರ ಯುವತಿಯಾಗಿ ಬೆಳೆಯುತ್ತಾಳೆ. ಅವಳ ತಂದೆಯಿAದ ಪಡೆದ ಋಣಭಾರದ ಕೃತಜ್ಞತೆಯಿಂದಾಗಿ ಡಾ ಸುದರ್ಶನ್ ಅವಳನ್ನೆ ಮದುವೆಯಾಗುತ್ತಾನೆ, ಮಗನನ್ನೂ ಪಡೆಯುತ್ತಾರೆ.
ಆದರೆ ಡಾಕ್ಟರ್ ಶರ್ಮಿಳಾಳ ಭೇಟಿ, ಹೋಲಿಕೆ ಮತ್ತು ಆಕರ್ಷಣೆ ಇವರ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ಮುಂದೆ ಶರ್ಮಿಳಾಳ ಆಕ್ರಮಣಕಾರಿ ಸ್ವಭಾವ ಆತನ ಕನಿಷ್ಠ ಸ್ವಾತಂತ್ರ‍್ಯವನ್ನೂ ಕಸಿದು ಪ್ರತಿ ಹೆಜ್ಜೆ ನಿರ್ಬಂಧಿತವಾಗುತ್ತದೆ. ಮೊದಲ ಮಗನನ್ನು ಜೊತೆಗೇ ಉಳಿಸಿಕೊಂಡರೂ, ಅವನ ದುಶ್ಚಟಗಳನ್ನು ದೂರ ಮಾಡುವ ಪ್ರಯತ್ನ ಫಲಿಸದ ಪರಿಸ್ಥಿತಿ. ಸುದರ್ಶನ್ ಅವರ ನಿರ್ಗಮನದ ಸಂದಭದಲ್ಲಿ ಇನ್ನೂ ಗರ್ಭಸ್ಥವಾಗಿದ್ದ ಶಿಶು ದೃಷ್ಟಿ ಸಮಸ್ಯೆ ಪಡೆದೇ ಹುಟ್ಟುತ್ತದೆ.
ಯಾವುದೇ ಆಸ್ತಿ ಅಧಾರವಿಲ್ಲದೆಯೂ ವಸುಮತಿ ಅತ್ಯಂತ ಕಷ್ಟಪಟ್ಟರೂ ಮಗನ ಸಂಗೀತಾಭ್ಯಾಸಕ್ಕೆ ಪುಷ್ಠಿ ಕೊಡುತ್ತಾಳೆ. ತನ್ನ ಮಕ್ಕಳೇ ನಿರ್ಲಕ್ಷಿಸಿದಾಗ, ದೂರವಿಟ್ಟ ಹೆಂಡತಿ ಶರ್ಮಿಳ, ಡಾ|| ಸುದರ್ಶನ್ ಅವರಿಗೆ ಸಂಬಂಧಗಳು ತಿರುಚಿಕೊಂಡು ಸಂಕೋಲೆಗಳಾಗಿ ಅವರು ಸೋತು ಬಳಲಿ ಬಂದಾಗ ವಸುಮತಿಯ ನಿರ್ಧಾರ ಅವಳ ಮಟ್ಟಿಗೆ ಸೂಕ್ತ. ಶ್ರೀಮಂತಿಕೆಗಿಂತ ಪ್ರೀತಿ, ವಿಶ್ವಾಸ, ನಂಬಿಕೆ, ಅನ್ಯೋನ್ಯತೆಗಳು ಸಂಬಂಧಗಳ ಬೆಸುಗೆಗೆ ಅತ್ಯವಶ್ಯ, ಇಲ್ಲವಾದರೆ ಬದುಕಿನ ಸಂಕೋಲೆಗಳಾಗುವುದನ್ನು ಕಾದಂಬರಿ ನೇರವಾಗಿ ಯಾರನ್ನೂ ಕೆಟ್ಟವರನ್ನಾಗಿ ಚಿತ್ರಿಸದೇ ತಿಳಿಸುತ್ತದೆ. ಅನುವಂಶೀಯತೆ ಪ್ರಕಟಗೊಳ್ಳುವ ಸಾಕ್ಷಿಯಾಗಿರುವ ಕಾದಂಬರಿ ಬದುಕಿನ ಮೌಲ್ಯಗಳನ್ನು ಅರ್ಥೈಸುತ್ತದೆ.
ಮಕ್ಕಳಿಗೆ ಖುಷಿ ಕೊಡುವ “ಕಿಟ್ಟು-ಪುಟ್ಟಿಯರ ಸಾಹಸಗಳು” ಮಕ್ಕಳ ಕಾದಂಬರಿ. ನಗರ ಪರಿಸರದಲ್ಲಿ ಬೆಳೆದ ಮಕ್ಕಳು ರಜೆಯಲ್ಲಿ ಅಜ್ಜಿತಾತನ ಊರಿನ ಸ್ವಚ್ಛಂದ ವಿಹಾರದಲ್ಲಿ ಅವರ ಒಳಗಿನ ಶೌರ್ಯ ಸಾಹಸಗಳು ಗರಿಗೆದರಿದಾಗಿನ ತಿಳಿ ಹೊಳೆಯ ಓಟ ನೋಟ. ಹಳ್ಳಿಯ ಮುಗ್ಧ ಜನರೊಂದಿಗೆ ಬೆರೆತು ಕೊಲೆ, ಕಳ್ಳತನ ಕಿಡ್ನಾಪ್ ಕೇಸುಗಳನ್ನು ಪತ್ತೆ ಹಚ್ಚುವ ಪುಟ್ಟ ಪತ್ತೇದಾರರಾಗುತ್ತಾರೆ. ಬಸುರಿ ಹೆಂಗಸನ್ನು ಬದುಕಿಸುವ ಭಾಗ್ಯವಂತರಾಗುತ್ತಾರೆ.
ಪುರಾತನ ದೇವಾಲಯದ ವಿಗ್ರಹ ಚೋರರ ಬಂಧನಕ್ಕೆ ಕಾರಣರಾಗುತ್ತಾರೆ. ಮನೆತನದ ಮರೆಯಾದ ಗ್ರಂಥಗಳನ್ನು ಬೆಳಕಿಗೆ ತರುವ ಕುಲದೀಪಕರಾಗುತ್ತಾರೆ. ಪವಾಡ ಸದೃಶ ಸಾಹಸಗಳನ್ನು ಕೈಗೊಳ್ಳುತ್ತಾರೆ. ಮಕ್ಕಳಿಗಾಗಿಯೇ ಬರೆದ ಈ ಕಾದಂಬರಿ ಅನೇಕ ಆವೃತ್ತಿಗಳನ್ನು ಕಂಡಿದೆ. ತಮ್ಮ ಸ್ವಂತ ಹುಟ್ಟೂರಿನ ಅನೇಕ ವಿಷಯಗಳನ್ನು ಕಲ್ಪನೆಯಲ್ಲಿ ಹೊಸೆದು ಈ ಮೂಲಕ ಕಾದಂಬರಿ ನಮ್ಮೊಳಗೇ ಇರುವ, ಹೊರಬರುವ ಪಾತ್ರ, ಘಟನೆಗಳಾಗಿ ಸಂಭ್ರಮಿಸುತ್ತವೆ.
ಕಥೆಗೆ ಸಂಬಂಧಿಸಿದ, ಕಥೆಯ ಬೆಳವಣಿಗೆಗೆ ಅಗತ್ಯವಾದ ಕಾನೂನು, ವೈದ್ಯಕೀಯ, ಮನೋವೈಜ್ಞಾನಿಕ, ಭೌಗೋಳಿಕ ಕಾರಣ ಪರಿಣಾಮಗಳ ಅಧ್ಯಯನದಿಂದ ಸುಶೀಲಾರ ಕಥೆ, ಕಾದಂಬರಿಗಳು ಗಟ್ಟಿಯಾಗಿ, ನೈಜತೆಯ ಸ್ಪರ್ಶವನ್ನು ಪಡೆಯುತ್ತವೆ. ಸಹಜ ಮತ್ತು ಸರಾಗವಾಗಿ ಮುಂದುವರಿಸುವ ಸಂಭಾಷಣಾ ಪ್ರಕ್ರಿಯೆಯೇ ಪ್ರಧಾನ ಆಕರ್ಷಣೆ. ಯಾವುದೇ ಆಳವಾದ ಚಿಂತನೆಯೂ ಈ ಪರಿಕ್ರಮದಲ್ಲಿ ಹಿಗ್ಗುತ್ತದೆ.
ಒಗ್ಗುತ್ತದೆ ಕೂಡಾ. ಅಪಾರ ಓದು, ಅಧ್ಯಯನ, ಅಗಾಧವಾದ ಜೀವನೋತ್ಸಾಹದ ಹರವು ಮತ್ತು ಹರಿವು ಇವರ ಕಥೆ, ಕಾದಂಬರಿ, ನಾಟಕಗಳು ಎಲ್ಲ ಪ್ರಕಾರಗಳಿಗೂ ಅಮೂಲ್ಯವಾದ ಸ್ಥಿರತೆಯೊಂದಿಗೆ ಪ್ರಾಮಾಣಿಕ ನೆಲೆಯನ್ನು ಕಟ್ಟಿ ಕೊಡುತ್ತದೆ. ಪ್ರತಿ ಪಾತ್ರಗಳು, ಆಯಾ ಸಂಬಂಧಗಳು, ಅವರವರ ಸ್ವಯಂ ಸ್ವಭಾವಗಳೊಂದಿಗೆ ರೂಪಿಸಿ ಬೆಳೆಸಿದ ಬಳಸಿದ ಮೂರ್ತ ಮಾದರಿಗಳು.
ಬಳ್ಳಾರಿಯ ಹತ್ತು ಹಲವು ಊರುಗಳು, ಭಾಷೆ, ಪರಿಭಾಷೆ, ಜನಪದ, ಆಚಾರ ವಿಚಾರಗಳಿಂದ ಪ್ರಭಾವಿತರಾದ ಅವರ ಬರಹ “ಅಡುಗೆ ಮನೆ ಸಾಹಿತ್ಯ” ಎಂಬ ಪರಿಮಿತಿಯನ್ನು ಮೀರಿ ಬೆಳೆದದ್ದು. ಸಾವಿನ ಹಾಸಿಗೆಯ ಮೇಲೆ ಮಲಗಿದ್ದ ತಾಯಿಯ ಎದುರು ತಮ್ಮ ಸ್ವಾರ್ಥ ದುರಾಸೆ ಸಣ್ಣತನಗಳ ಪ್ರದರ್ಶನ ಮಾಡಿದ ಮಕ್ಕಳ ಕಥೆ “ಅವ್ವ”. ಅವರ ಅತ್ಯುತ್ತಮ ಕಥೆಗಳಲ್ಲಿ ಒಂದು. ಗೌಡರ ಚನ್ನವ್ವ, ದಾಕ್ಷಾಯಣಿ, ತುಂಗ… ಇತ್ಯಾದಿ ಕಥೆಗಳು ಜನಪ್ರಿಯವಾದವು.
ಸ್ತ್ರೀಯರ ಹಲವಾರು ವರ್ತನೆಗಳಿಗೆ, ಸಂವೇದನೆಗಳಿಗೆ ಮನೋವೈಜ್ಞಾನಿಕ ನೆಲೆಯನ್ನು ವಿಶಿಷ್ಟ ಆಯಾಮವನ್ನು ಪರಿಚಯಿಸಿದ ತ್ರಿವೇಣಿಯವರಂತೆ ಸುಶೀಲಾದೇವಿಯವರೂ ಕೂಡಾ ಮನೋವೈಜ್ಞಾನಿಕ ನೆಲೆಯಲ್ಲಿಯೇ ಉತ್ತರಗಳನ್ನು ಕಂಡುಕೊಂಡವರು. ‘ಮನಮಂದಿರ’, ‘ಬೆಂಕಿಯ ಒಡಲಲ್ಲಿ, ‘ಸ್ವಾಭಿಮಾನಿ’ ಕಾದಂಬರಿಗಳು ಈ ಹಿನ್ನೆಲೆಯನ್ನು ಹೊಂದಿದ್ದರೆ, ‘ಸೇಡು’, ‘ನಿನ್ನ ದಾರಿಯಲ್ಲೀಗ ನನ್ನ ಹೆಜ್ಜೆಗಳು ತಮ್ಮ ಸ್ವಸಾಮರ್ಥ್ಯದಿಂದಲೇ ಜಿಗಿದೆದ್ದು ನಿಂತು ಧೈರ್ಯವಾಗಿ ಹೋರಾಡುವ ಸ್ತ್ರೀಶಕ್ತಿಯ ಜೀವಂತಿಕೆ ಇದೆ.
‘ಮುಗ್ಧಮನ’, ‘ತುಂಗ-ಉತ್ತುಂಗ’, ‘ತಿರುಗುಬಾಣ’ಗಳಂತಹ ಶ್ರವ್ಯನಾಟಕಗಳು ರಾಷ್ಟ್ರೀಯ ರೇಡಿಯೋ ನಾಟಕಗಳಾಗಿ ನಾಡಿನಾದ್ಯಂತ ಬಿತ್ತರಗೊಂಡಿವೆ. ಪುಸ್ತಕಗಳಾಗಿ ಪ್ರಕಟವಾಗದೇ ಇದ್ದರೂ ಆಕಾಶವಾಣಿಯಿಂದ ಪ್ರಸಾರವಾದ ನಾಲ್ಕಾರು ನಾಟಕಗಳು, ಸಾಂದರ್ಭಿಕವಾಗಿ ಬರೆದ ನೂರಾರು ಬಿಡಿ ಲೇಖನಗಳು ಅವರ ಬರಹದ ವಿಸ್ತಾರ, ವಿಪುಲತೆ ಮತ್ತು ಸಮೃದ್ಧತೆಯನ್ನು ಮುಂದಿಡುತ್ತದೆ.
ಸಾಹಿತ್ಯ ವಲಯದ ಜಂಜಾಟ ಚಳುವಳಿಗಳ ಮುಂದಾಳತ್ವ – ಹಿಂಬಾಲಿಕೆಗಳ ಮೀರಿ, ತಾವು ನಂಬಿದ ನಿಲುವು, ಬದುಕಿನ ಬದ್ಧತೆಯನ್ನು ಬರಹದಲ್ಲಿ ನಿರಂತರವಾಗಿ ಕಟ್ಟಿ ಕೊಡುತ್ತಿದ್ದಾರೆ. ಸಹಜ ಸಂಭಾಷಣೆ ಹೊರ ಆಕರ್ಷಣೆ, ಸೂಕ್ಷö್ಮ ಸಂವೇದನೆ ಅವರ ಒಳ ಹರಿವು. ಓದುಗರ ಪ್ರತಿಕ್ರಿಯೆಯೇ ಬರಹಕ್ಕೆ ಸಲ್ಲುವ ಸನ್ಮಾನ ಎಂಬ ನಿಷ್ಠೆಗೆ ಸಂದವರು.
ಕಥಾದ್ವನಿಯಲ್ಲಿ ಅನುಭವ ಮತ್ತು ಅನುಭೂತಿಗಳನ್ನು ತೆರೆದಿಡುತ್ತ ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದ ಸದ್ದಿಲ್ಲದ ಕಥೆಗಾರ್ತಿ ಪ್ರಮುಖ ಸೃಜನಶೀಲ ಮನಸ್ಸುಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟು ಗೌರವಿಸಲ್ಪಟ್ಟಿದ್ದಾರೆ. ಹಾಗಾಗಿಯೇ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕನ್ನಡ ಹಿತರಕ್ಷಣಾ ಸಮಿತಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ’, ಚಳ್ಳಕೆರೆಯ ಕರುನಾಡು ಸಾಹಿತ್ಯ ಕಲಾವೇದಿಕೆಯ ‘ಮಾಸ್ತಿ ಕಥಾ ಪ್ತಶಸ್ತಿ’. ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ ‘ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿಗಳು ಲಭಿಸಿವೆ. ಪ್ರಚಾರಕ್ಕಾಗಿ ಪ್ರಶಸ್ತಿಗಾಗಿ ಎಂದೂ ಆಶಿಸದ ಈ ಕಥೆಗಾರ್ತಿಗೆ ಹೊಸತು ಪತ್ರಿಕೆಯವರು ಪ್ರತಿ ವರ್ಷ ಶ್ರೇಷ್ಠ ಮಹಿಳಾ ಬರಹಕ್ಕೆ ಕೊಡಮಾಡುವ ಬಹುಮಾನ ಸುಶೀಲಾರ “ನಡೆವುದೊಂದೇ ಭೂಮಿ” ಮತ್ತು “ಅಪರಿಮಿತ ಕತ್ತಲೊಳಗೆ” ಈ ಎರಡೂ ಕಥೆಗಳಿಗೆ ಸಂದಿದೆ.
‘ಮನೆ ಮನೆಯ ಕಥೆಗಳು’ ಸರಣಿಯ ಹಂದರ ಮತ್ತು ವ್ಯಾಪ್ತಿಯ ಬಹುಮುಖ ಫೇಸ್ ಬುಕ್ ಓದುಗರಿಗೂ ಮನಮುಟ್ಟಿದೆ. ಮಲ್ಲಿಗೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಕೇಳಿದ್ರಾ ಸಮಾಚಾರ’ ಒಂದು ಬಗೆಯ ನ್ಯೂಸ್ ಚಾನಲ್‌ನಂತೆ. ನವಿರು ಹಾಸ್ಯ ನೋವು ರಹಿತ ವಿಡಂಬನೆಯ ಮಾದರಿಗಳು. ಹೇಳಿಯೂ ಹೇಳದಂತೆ ದಾಟಿಸುವ, ಹೇಳದೆಯೂ ಹೇಳಿದಂತೆ ಮುಟ್ಟಿಸುವ ನಯಗಾರಿಕೆ ಇವರ ನ್ಯಾನೊ ಕಥೆಗಳ ಸ್ವಾರಸ್ಯಕರ ಅಂತ್ಯ.
ಮೃದು ಸ್ವಭಾವದ, ನೇರ ಮತ್ತು ದಿಟ್ಟ ನುಡಿಯ ಮುಗ್ಧ ಮನಸ್ಸಿನ ನನ್ನ ಗೆಳತಿಯದು ನಿಷ್ಕಲ್ಮಶ ಪ್ರೀತಿ. ಉಳಿದವರ ಭಾವನೆಗಳಿಗೆ ಸ್ಪಂದಿಸುವ ಸ್ಫಟಿಕ ತರಂಗಿಣಿ. ವಾಸ್ತವದ ನೆಲೆಗಟ್ಟನ್ನು ಶೋಧಿಸಿ ಸುಸ್ಪಷ್ಟಗೊಳಿಸುವ ಪ್ರಯೋಗಶೀಲೆ. ಹೆಣ್ಣು ಮಕ್ಕಳು ತಮ್ಮ ಬದುಕಿನ ಸಮಸ್ಯೆಗಳ ಆಳದ ಸುಳಿಯ ಕತ್ತಲಿನಿಂದ ಹೊರಬರುವ ಬೆಳಕಿನ ದಾರಿಗಳು, ತಲುಪುವ ಹೊಳಪಿನ ಗುರಿಗಳು, ಬದುಕಿನ ಸಿರಿ ಸಂಪತ್ತು ಇವರ ಬರಹದ ಮೂಲ ದ್ರವ್ಯಗಳು.
ಬಿಚ್ಚುಗಣ್ಣಿನ ನೋಟ, ಮುಚ್ಚುಗಣ್ಣಿನ ಧ್ಯಾನ, ನಡುವಣ ಎಚ್ಚರ ಇವರ ಕಥಾ ಸಮನ್ವಯದ ಮುಖ್ಯ ಅಂಶಗಳು. ಕಥೆಯ ಪ್ರವೇಶ- ನಿರ್ಗಮನಗಳ ನಡುವಿನ ಪಯಣದ ಸಮಯ, ನಿರ್ದಿಷ್ಟತೆ ಇದೆಲ್ಲದರ ಇತಿಮಿತಿಯನ್ನು ತಮ್ಮದೇ ಶೈಲಿಯಾಗಿಸಿಕೊಂಡು ಕಥಾಲೋಕವನ್ನು ಪ್ರೀತಿಸಿ ಗೌರವಿಸಿದ್ದಾರೆ. ಭೇದ ಭಾವವಿಲ್ಲದ ನಿಷ್ಪಕ್ಷಪಾತವಾಗಿ ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ತುಂಬು ಹೃದಯದಿಂದ ಒಪ್ಪಿಕೊಳ್ಳುತ್ತಾರೆ, ಪ್ರೀತಿಯಿಂದ ಸ್ಪಂದಿಸುತ್ತಾರೆ.
ಕಥಾ ಜಗತ್ತು ಸುಶೀಲಾರಿಂದ ಮತ್ತಷ್ಟು ಹೊಸದಾರಿ, ಮಾದರಿ, ಸುಳಿವು-ಹೊಳಹುಗಳನ್ನು ಕಾಣಲಿ ಹಾಗೆಯೇ ಕಥಾಲೋಕ ಅವರ ಗೌರವವನ್ನು ಮತ್ತಷ್ಟು ಎತ್ತರಿಸಲಿ ಎಂಬ ಆಶಯದೊಂದಿಗೆ ನನ್ನ ಸಹೋದರಿ, ಆತ್ಮೀಯ ಗೆಳತಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವ ಶುಭ ಸಂದರ್ಭದಲ್ಲಿ ಪರಿಚಯ ಮಾಡುವ ಅವಕಾಶ ದೊರೆತದ್ದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ ಸವಿನಯ ವಂದನೆಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮುರುಕುಂಬಿ
- ಡಾ.ಗಿರೀಶ್ ಮೂಗ್ತಿಹಳ್ಳಿ
ನಮ್ಮ ಒಳಗೆ ಬಿಡಲೆ ಇಲ್ಲ
ಚೌರ ಚಹಾ ಮಾಡಲೆ ಇಲ್ಲ
ಎದೆಗೆ ಒದ್ದರು; ಬದಿ ಬದಿಗು ನಕ್ಕರು
ಜಾತಿಪಂಚೆ ಉಟ್ಟುಕೊಂಡು
ನೀತಿನಂಜು ಇಟ್ಟುಕೊಂಡು
ದ್ವೇಷ ಮೆರೆದರು; ಕಟುಸತ್ಯ ಮರೆತರು
ನೂರ ಒಂದು ಕೂಡಿಕೊಂಡು
ಹಟ್ಟಿತನಕ ಅಟ್ಟಿಬಂದು
ಬೆಂಕಿ ಇಟ್ಟರು ; ಕಣ್ಣೀರು ಕೊಟ್ಟರು
ಮುರುಕುಂಬಿ ಮುರುಕರೆಲ್ಲ
ಕಂಬಿ ಹಿಂದೆ ಬಿದ್ದರಲ್ಲ
ಕೆಟ್ಟ ಮನಗಳು; ಕಡುಕೆಟ್ಟ ಜನಗಳು
ಜಾತಿಗೀತಿ ಏನು ಇಲ್ಲ
ಪ್ರೀತಿ ಪ್ರೇಮ ಇರಲಿ ಎಲ್ಲ
ಬಾಳ್ಮೆ ಮಾಡಲು; ಸಹಬಾಳ್ಮೆ ಮಾಡಲು
ಶಾಂತಿಬೆಳಕು ಬುದ್ಧನಿರಲು
ಕ್ರಾಂತಿಕಹಳೆ ಬಸವನಿರಲು
ಅಳಲುಬಾರದು;’ವಿಧಿದಾತ’ನಿರಲು
ಅಳುಕುಬಾರದು. (ಕವಿತೆ-ಡಾ. ಗಿರೀಶ್ ಮೂಗ್ತಿಹಳ್ಳಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!
- ನವೀನ್ ಸಾಗರ್, ಬೆಂಗಳೂರು
ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!
ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.
ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.
ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.
ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ
ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.
ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.
ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ. ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.
ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..
ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”
ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.
ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.
ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.
ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.
ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.
ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.
ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.
ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.
ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.
ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.
“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.
ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು
ಆ ಸಾಂಗ್ ಇರೋದು ಹೀಗೆ…
”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”
ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ
ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ
ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರೇಮಿಗಳ ಹೆಸರು!
ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!
ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!
ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಉಸಿರು
ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ
ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ
ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ
ನೆಲದಿಂದುದ್ಭವಿಸಲಿಲ್ಲ, ಸಹಜ ಸೃಷ್ಟಿಯಲ್ಲ, ದೈವಿಕವಲ್ಲ ಪಂಚಭೂತಗಳಿಂದಾದವನಲ್ಲ, ನಾ ಎಂಬುದೇ ಇಲ್ಲ
ಇಹದಲೂ ಪರದಲ್ಲೂ ನನ್ನ ಕುರುಹಿಲ್ಲ ಆಡಂ ಈವರ ವಂಶದ ಕುಡಿಯಲ್ಲ
ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ಕಾಯವಲ್ಲ, ಆತ್ಮವೂ ಅಲ್ಲ, ನಿಶ್ಲೇಷದ ಶೇಷ
ನಾ ಪ್ರೇಮಿಯವ, ಲೋಕವೆರೆಡನೊಂದೇ ಆಗಿ ಕಂಡವ ಕರೆವುದು ಪ್ರೇಮ ನನ್ನ, ಅರಿತುಕೊಳುವುದು ತನ್ನ ತಾ..
ಮೊದಲ, ಕೊನೆಯ, ಹೊರ, ಒಳ
ಎಲ್ಲವೂ ಪ್ರೇಮ, ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು.
ಉಸಿರಾಡು ಮನುಜ.
(ಈ ಕವಿತೆಯನ್ನು ಲಡಾಯಿ ಪ್ರಕಾಶನ ಗದಗ ಇವರು ಪ್ರಕಟಿಸಿರುವ ‘ಉರಿಯ ಕುಡಿಯ ನಟ್ಟ ನಡುವೆ‘ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಜಲಾಲುದ್ದೀನ್ ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಡಾ.ಎಚ್.ಎಸ್. ಅನುಪಮ ಅವರು ಅನುವಾದಿಸಿರುವ ಕೃತಿ ಇದಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243