ರಾಜಕೀಯ
ನೆಹರೂ ಕುರಿತು ಅಟಲ ಬಿಹಾರಿ ವಾಜಪೇಯಿ ಅವರು ಏನು ಹೇಳಿದ್ದರು ಗೊತ್ತಾ..?

- ಮೂಲ : ಅಟಲ್ ಬಿಹಾರಿ ವಾಜಪೇಯಿ, ಕನ್ನಡಕ್ಕೆ: ಗಿರೀಶ್ ತಾಳಿಕಟ್ಟೆ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಆಧುನಿಕ ಭಾರತದ ನಿರ್ಮಾತೃ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಶ್ರೀ ಪಂಡಿತ್ ಜವಾಹರಲಾಲ್ ನೆಹರೂ ಅವರು 27 ಮೇ 1964ರಲ್ಲಿ ನಮ್ಮನ್ನು ಅಗಲಿದಾಗ, ಅಂದಿನ ರಾಜ್ಯಸಭಾ ಸದಸ್ಯರಾಗಿದ್ದ ಭಾರತೀಯ ಜನಸಂಘದ (ಇಂದಿನ ಬಿಜೆಪಿಯ ಪೂರ್ವರೂಪ) ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ರಾಜ್ಯಸಭೆಯಲ್ಲಿ ಮಾಡಿದ್ದ ಭಾಷಣ ಹೀಗಿದೆ.
ಶ್ರೀಯುತರೇ, ಇವತ್ತು ಕನಸೊಂದು ಛಿದ್ರವಾಗಿದೆ; ಗಾನವೊಂದು ಮೌನವಾಗಿದೆ; ಜ್ಯೋತಿಯೊಂದು ಅನಂತದೊಳಗೆ ಲೀನವಾಗಿದೆ. ಹಸಿವುಮುಕ್ತ ಮತ್ತು ಭಯರಹಿತ ಜಗತ್ತನ್ನು ಸೃಷ್ಟಿಸಬೇಕೆಂಬ ಕನಸಾಗಿತ್ತು ಅದು. ಗೀತೆಯ ಸಾರವನ್ನು ಧ್ವನಿಸುತ್ತಿದ್ದ, ಗುಲಾಬಿಯ ಸುಗಂಧವನ್ನು ಪಸರಿಸುತ್ತಿದ್ದ ಗಾನವಾಗಿತ್ತು ಅದು. ರಾತ್ರಿಯಿಡೀ ನಿರಂತರವಾಗಿ ಜ್ವಲಿಸುತ್ತಾ, ಪ್ರತಿ ಅಂಧಕಾರದೊಂದಿಗೆ ಹೋರಾಡಿ ನಮಗೆ ದಾರಿತೋರಿ, ಇವತ್ತು ಬೆಳಗಿನ ಜಾವ ನಿರ್ವಾಣಹೊಂದಿದ ಜ್ಯೋತಿ ಅದು.
ಹೌದು, ಸಾವು ನಿಶ್ಚಿತ; ದೇಹ ನಶ್ವರ. ಶ್ರೀಗಂಧದ ಚಿತೆಯ ಜ್ವಾಲೆಗೆ ನಿನ್ನೆ ನಾವು ಅರ್ಪಿಸಿದ ಆ ಸ್ವರ್ಣ ದೇಹ ಕೂಡಾ ಕೊನೆ ಉಳ್ಳಂತದ್ದೆ. ಆದರೆ ಸಾವು ಇಷ್ಟೊಂದು ಕದೀಮನಾಗಬಹುದೇ? ನಾವು ಸ್ನೇಹಿತರೆಲ್ಲ ನಿದ್ರಿಸುತ್ತಿದ್ದಾಗ, ಅಂಗರಕ್ಷಕರೆಲ್ಲ ಮೈಮರೆತಿದ್ದಾಗ, ಸಟ್ಟನೆ ದಾಳಿ ಮಾಡಿ ನಮ್ಮ ಜೀವನದಲ್ಲಿ ನಮಗೆ ಸಿಕ್ಕಿದ್ದ ಒಂದು ಬೆಲೆಕಟ್ಟಲಾಗದ ಉಡುಗೊರೆಯನ್ನು ಕದ್ದೊಯ್ದಿದೆಯಲ್ಲ.
ಇವತ್ತು ಭಾರತಮಾತೆ ಅತೀವ ದುಃಖಿತಳಾಗಿದ್ದಾಳೆ – ಆಕೆ ತನ್ನ ಮುದ್ದಿನ ಕುವರನನ್ನು ಕಳೆದುಕೊಂಡಿದ್ದಾಳೆ. ಇವತ್ತು ಮಾನವೀಯತೆ ಸಂಕಟದಲಿ ಮಿಂದಿದೆ – ಅದು ತನ್ನ ಆರಾಧಕನನ್ನು ಕಳೆದುಕೊಂಡಿದೆ. ಇವತ್ತು ಶಾಂತಿ ನಿತ್ರಾಣಗೊಂಡಿದೆ – ಅದರ ರಕ್ಷಕ ಇನ್ನಿಲ್ಲ. ದಮನಿತರು ತಮ್ಮ ಆಸರೆಯನ್ನು ಕಳೆದುಕೊಂಡಿದ್ದಾರೆ. ಸಾಮಾನ್ಯ ಭಾರತೀಯ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಎಲ್ಲದಕ್ಕೂ ತೆರೆ ಬಿದ್ದಿದೆ. ನಾಟಕದ ಕಥಾನಾಯಕ ತನ್ನ ಪಾಲಿನ ಕೊನೇ ಅಂಕವನ್ನು ಮುಗಿಸಿ, ಜಗತ್ತಿನ ಮುಂದೆ ಶಿರಬಾಗಿ ನಿರ್ಗಮಿಸಿದ್ದಾನೆ.
ಶ್ರೀರಾಮನ ಬದುಕಿನ ಕುರಿತ ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಯು ತಾನು ಅಸಾಧ್ಯವಾದದ್ದನ್ನೆಲ್ಲ ಒಂದುಗೂಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪಂಡಿತ್‌ಜಿ (ನೆಹರೂ) ಅವರ ಬದುಕಿನಲ್ಲೂ ನಾವು ಆ ಮಹಾಕವಿಯ ಉಲ್ಲೇಖದ ಮಿನುಗುಗಳನ್ನು ಕಾಣಬಹುದು. ಅವರು ಶಾಂತಿಯ ಆರಾಧಕರಾಗಿದ್ದರು; ಆದಾಗ್ಯೂ ಕ್ರಾಂತಿಯ ಮುಂಗಾಮಿಯಾಗಿದ್ದರು. ಅವರು ಅಹಿಂಸೆಯ ರೂವಾರಿಯಾಗಿದ್ದರು; ಆದಾಗ್ಯೂ, ಸ್ವಾತಂತ್ರ್ಯ ಮತ್ತು ದೇಶದ ಆತ್ಮಗೌರವದ ರಕ್ಷಣೆಗಾಗಿ ಯಾವುದೇ ಅಸ್ತ್ರವನ್ನು ಬಳಸುವುದಕ್ಕು ಸಿದ್ದವಿದ್ದರು.
ಅವರು ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು; ಆದಾಗ್ಯೂ, ಆರ್ಥಿಕ ಸಮಾನತೆಯ ಕನಸಿಗೆ ಬದ್ಧರಾಗಿದ್ದರು. ಪ್ರಗತಿಗಾಗಿ ಅವರು ಯಾರ ಜೊತೆ ಬೇಕಾದರೂ ರಾಜಿಗೆ ಸಿದ್ದವಿದ್ದರು, ಆದರೆ ಯಾರಿಗೋ ಅಂಜಿ ಅವರು ರಾಜಿಗೆ ಮುಂದಾದವರಲ್ಲ. ಪಾಕಿಸ್ತಾನ ಮತ್ತು ಚೀನಾ ದೇಶಗಳ ಕುರಿತಂತೆ ಅವರ ನೀತಿಗಳು ಈ ಗುಣಮಿಶ್ರಣದ ಪ್ರತೀಕವಾಗಿದ್ದವು. ಅದು ಅವರ ಉದಾರತೆಯೂ ಹೌದು, ಬದ್ಧತೆಯೂ ಹೌದು. ಆದರೆ ಕೆಲವರು ಅವರ ಉದಾರತೆಯನ್ನು ಬಲಹೀನತೆಯೆಂತಲೂ, ಅದರ ಬದ್ಧತೆಯನ್ನು ಹಠಮಾರಿತನವೆಂತಲೂ ತಪ್ಪಾಗಿ ಅರ್ಥೈಸಿಕೊಂಡಿದ್ದು ವಿಪರ್ಯಾಸವೇ ಸರಿ.
ಅವರು ಕೋಪಿಷ್ಟರಾಗಿದ್ದನ್ನು ನಾನೊಮ್ಮೆ ಕಂಡಿದ್ದು, ಇನ್ನೂ ಚೆನ್ನಾಗಿ ನೆನಪಿದೆ. ಚೀನಾದೊಟ್ಟಿಗೆ ನಮ್ಮ ಸಂಘರ್ಷ ಉತ್ತುಂಗಕ್ಕೇರಿದ್ದ ದಿನಗಳು ಅವು. ಸಂದರ್ಭದ ಲಾಭ ಪಡೆದ ನಮ್ಮ ಪಾಶ್ಚಾತ್ಯ ಮಿತ್ರರಾಷ್ಟ್ರಗಳು ಕಾಶ್ಮೀರ ವಿಚಾರದಲ್ಲಿ ಒಂದಷ್ಟು ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಒತ್ತಡ ತರುತ್ತಿದ್ದರು. ನಾವೀಗ ಒಂದಷ್ಟು ರಾಜಿಗೆ ಸಿದ್ದವಾಗದಿದ್ದರೆ ಏಕಕಾಲಕ್ಕೆ ಎರಡು ಶತ್ರುರಾಷ್ಟ್ರಗಳೊಂದಿಗೆ ಯುದ್ಧ ಮಾಡಬೇಕಾಗಿ ಬಂದೀತು ಎಂಬ ಸಲಹೆ ಬಂದಾಗ, ಅವರು ಕೆಂಡಾಮಂಡಲವಾಗಿ “ಅಗತ್ಯಬಿದ್ದರೆ ನಾವು ಏಕಕಾಲಕ್ಕೆ ಎರಡೂ ಕಡೆ ಯುದ್ಧಕ್ಕೆ ಸಿದ್ಧ” ಎಂದು ಪ್ರತಿಕ್ರಿಯಿಸಿದ್ದರು. ಒತ್ತಡ ತಂದು ಅವರನ್ನು ಮಣಿಸಲು ಸಾಧ್ಯವಿರಲಿಲ್ಲ.
ಶ್ರೀಯುತರೇ, ಅವರ ನೇತೃತ್ವ ಮತ್ತು ಸಂರಕ್ಷಣೆಯಲ್ಲಿ ಪ್ರತಿಷ್ಟಾಪನೆಯಾಗಿದ್ದ ಸ್ವಾತಂತ್ರ್ಯ ಇವತ್ತು ಅಪಾಯಕ್ಕೆ ತುತ್ತಾಗಿದೆ. ನಮ್ಮೆಲ್ಲ ಬಲವನ್ನು ಒಗ್ಗೂಡಿಸಿ ಅದನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಅವರು ಆಳವಾಗಿ ಪ್ರತಿಪಾದಿಸಿದ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಗಳು ಸಹಾ ಅಪಾಯಕ್ಕೆ ಸಿಲುಕಿವೆ. ಯಾವುದೇ ಬೆಲೆ ತೆತ್ತಾದರೂ ಸರಿ, ಅವುಗಳನ್ನು ನಾವು ಸಂರಕ್ಷಿಸಬೇಕಿದೆ. ಅವರು ಅನುಷ್ಠಾನಗೊಳಿಸಿದ ಭಾರತೀಯ ಪ್ರಜಾಪ್ರಭುತ್ವ, ಮತ್ತು ಅದರ ಮೂಲಕ ಅವರು ಸಾಧಿಸಿದ ಯಶಸ್ಸುಗಳು ಸಹಾ ಮಂಕಾದ ಭವಿಷ್ಯವನ್ನು ಎದುರಿಸುತ್ತಿವೆ. ಒಗ್ಗಟ್ಟು, ಶಿಸ್ತು ಮತ್ತು ಆತ್ಮವಿಶ್ವಾದಿಂದ ನಾವು ಈ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಬೇಕಿದೆ.
ನಾಯಕ ನಿರ್ಗಮಿಸಿರಬಹುದು, ಅನುಯಾಯಿಗಳು ಇನ್ನೂ ಇದ್ದಾರೆ. ಸೂರ್ಯ ಅಸ್ತಮಿಸಿರಬಹುದು, ಆಗಸದಲ್ಲಿ ಮೂಡುವ ತಾರೆಗಳ ಬೆಳಕಿನಲ್ಲೇ ನಾವೀಗ ಮುಂದಿನ ದಾರಿ ಹುಡುಕಿಕೊಳ್ಳಬೇಕಿದೆ. ಇದು ನಮ್ಮ ಪರೀಕ್ಷೆಯ ಉತ್ತುಂಗದ ಕಾಲ. ಜಗತ್ತಿನ ಶಾಂತಿಗಾಗಿ ಗೌರವಯುತವಾದ ಕಾಣಿಕೆ ನೀಡಬಹುದಾದ ಮಾದರಿಯುತ ಸದೃಢ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನಾವು ಪರಸ್ಪರ ಒಗ್ಗೂಡಿ ದುಡಿಯುವುದು ಮಾತ್ರವೇ ಆ ನಾಯಕನಿಗೆ ಸಲ್ಲಿಸುವ ನಿಜವಾದ ಗೌರವ.
ಅವರ ಅಗಲಿಕೆ ಸಂಸತ್ತಿಗೆ ತುಂಬಲಾರದ ನಷ್ಟ. ಆ ಸ್ಪಂದನಶೀಲ ವ್ಯಕ್ತಿತ್ವ, ವಿರೋಧಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುವ ಆ ಧೋರಣೆ, ಆ ಸೂಕ್ಷ್ಮ ಸಜ್ಜನಿಕೆ, ಆ ಉದಾತ್ತತೆಗಳನ್ನು ಸದ್ಯೋಭವಿಷ್ಯದಲ್ಲಿ ಮತ್ತೆ ನಾವು ಕಾಣಲು ಸಾಧ್ಯವಿಲ್ಲ. ನಮ್ಮ ನಡುವೆ ವಿಚಾರ ಭೇದಗಳು ಇದ್ದಾಗ್ಯೂ ಕೂಡಾ, ಅವರ ಮಹಾನ್ ಚಿಂತನೆಗಳು, ಅವರ ಸಮಗ್ರತೆ, ಈ ದೇಶದೆಡೆಗೆ ಅವರಿಗಿದ್ದ ಅದ್ವಿತೀಯ ಪ್ರೀತಿ ಮತ್ತು ಅವರ ಆ ಅದಮ್ಯ ಧೈರ್ಯದ ಪ್ರತಿಯಾಗಿ ಅವರ ಬಗ್ಗೆ ನಮ್ಮಲ್ಲಿ ಗೌರವವಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ.
ಈ ನನ್ನ ನುಡಿಗಳ ಮೂಲಕ, ಆ ಮಹಾನ್ ಚೇತನಕ್ಕೆ ನನ್ನ ನಮ್ರ ಗೌರವವನ್ನು ಅರ್ಪಿಸುತ್ತೇನೆ.
– ಅಟಲ್ ಬಿಹಾರಿ ವಾಜಪೇಯಿ
ರಾಜ್ಯಸಭಾ ಸದಸ್ಯರು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ ಕಾರ್ಯನಿರ್ವಹಣಾ ಸಮಿತಿ ರಚನೆ

ಸುದ್ದಿದಿನಡೆಸ್ಕ್:ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, 12 ಜನ ಅಧಿಕಾರಿಗಳನ್ನು ಒಳಗೊಂಡ, ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು, ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ :
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿ ನಿಯಮ, 1993ರ ಪ್ರಕರಣ 199ಕ್ಕೆ ತರಲು ಉದ್ದೇಶಿಸಿರುವ, ತಿದ್ದುಪಡಿಗಳಿಗೆ ಅನುಗುಣವಾಗಿ, ಇ-ಸ್ವತ್ತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಉದ್ಭವಿಸುವ ಸಮಸ್ಯೆ ಹಾಗೂ ಇ-ಸ್ವತ್ತು ಸುಧಾರಣೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವ ಹೊಣೆ ಈ ಸಮಿತಿಗೆ ವಹಿಸಲಾಗಿದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಬೆಂಗಳೂರಿನ ಕೆಂಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಲಿದೇವ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಸಮುದಾಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ನೀಡುವ ಮೊತ್ತವನ್ನು ಒಂದೂವರೆಯಿಂದ ಎರಡು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಮಡಿವಾಳ ಸಮುದಾಯದ ಪ್ರಗತಿ ಸರ್ಕಾರ ಬದ್ಧವಾಗಿದ್ದು, ಈ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಎಲ್ಲ ಪ್ರಯತ್ನ ಮಾಡಲಾಗುವುದು. 12ನೇ ಶತಮಾನದಲ್ಲಿ ಮಡಿವಾಳ ಮಾಚಿದೇವರು, ಬಸವಣ್ಣನವರ ಜೊತೆ ಸೇರಿ ಸಮಾಜದ ಬದಲಾವಣೆಗೆ ಮುಂದಾಗಿದ್ದರು. ಬಸವಾದಿ ಶರಣರು ಜಾತಿಮುಕ್ತ ಮನುಷ್ಯ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದ್ದರು ಎಂದು ಹೇಳಿದರು.
ಈ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಎಸ್.ಟಿ. ಸೋಮಶೇಖರ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಪ್ರತಿಭಾನ್ವಿತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ 6 ನೇ ತರಗತಿಗೆ ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ.3 ರೊಳಗಾಗಿ ವೆಬ್‍ಸೈಟ್ https://swd.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಹಾಗೂ ಸಂಬಂಧಿಸಿದ ತಾಲ್ಲೂಕುಗಳ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರನ್ನು ಸಂಪರ್ಕಿಸಲು ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ನಾಗರಾಜ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ