Connect with us

ನೆಲದನಿ

ರಂಗಭೂಮಿ ಕ್ಷೇತ್ರದ ಯುವ ಕಲಾವಿದ : ನಾಗರಾಜ್ ಅವರ ಕಲಾ ನಂಟಿನ ಕಥನ

Published

on

ಭಾರತವು ವಿವಿಧ ಸಂಸ್ಕøತಿ ಮತ್ತು ಕಲೆಗಳ ತೊಟ್ಟಿಲು ಎಂಬುದು ಈಗಾಗಲೆ ಮನೆ ಮಾತಾಗಿದೆ. ಇಂತಹ ಸಾಂಸ್ಕøತಿಕ ಸೊಬಗುಗಳಲ್ಲಿ ರಂಗಭೂಮಿ ಕ್ಷೇತ್ರವು ಒಂದು. ಇಂದಿನ ಆಧುನಿಕ ಸಂದರ್ಭದ ಟಿ.ವಿ ಹಾಗೂ ಇತರ ಮಾಧ್ಯಮ ಲೋಕದ ಮೂಲನೆಲೆ ರಂಗಭೂಮಿ ಎಂದರೆ ತಪ್ಪಾಗಲಾರದೇನೊ. ಆದರೆ ಆಧುನಿಕತೆಯ ಸಿನಿಮಾ, ಧಾರವಾಹಿ ಹಾಗೂ ಇತರ ಪ್ರಕಾರಗಳೆದುರು ರಂಗಭೂಮಿ ಮತ್ತು ರಂಗಕಲಾವಿದರು ಸಮಾಜದ ಮುಂಚೂಣಿಯಿಂದ ದೂರಸರಿಯುತ್ತಿದ್ದು, ರಂಗಭೂಮಿ ಹಾಗೂ ರಂಗಕಲಾವಿದರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ಇಂತಹ ರಂಗಭೂಮಿ ಕ್ಷೇತ್ರದಲ್ಲಿಯೇ ಸಾಧಿಸಬೇಕೆಂಬ ಹಂಬಲವೊತ್ತು, ಆ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಹಲವು ರಂಗಾಸಕ್ತರು ನಮ್ಮ ಮುಂದಿದ್ದಾರೆ. ಅಂತಹ ಯುವ ರಂಗಕಲಾವಿದರಲ್ಲಿ ಮಾಡ್ಲಾಕನಹಳ್ಳಿ ನಾಗರಾಜ್ ಅವರು ಒಬ್ಬರಾಗಿದ್ದಾರೆ. ಕಾಡುವ ಬಡತನವನ್ನು ಮೆಟ್ಟಿನಿಂತು, ರಂಗಕಲೆಗಾಗಿ ತನ್ನನ್ನು ಸಮರ್ಪಿಸಿಕೊಂಡು ಮುನ್ನಡೆಯುತ್ತಿರುವ ಶ್ರೀಯುತ ನಾಗರಾಜ್ ಅವರ ಬದುಕು ಹಾಗೂ ಅವರ ಕಲಾ ಸಾಧನೆಯನ್ನು ಪರಿಚಯಿಸುವುದು ಇಂದಿನ ನೆಲದನಿಯ ಮೂಲ ಆಶಯವಾಗಿದೆ.

ಶ್ರೀಯುತ ನಾಗರಾಜ್ ಅವರು ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಮಾಡ್ಲಾಕನಹಳ್ಳಿ ಗ್ರಾಮದಲ್ಲಿ ಶ್ರೀ ತಿಪ್ಪಣ್ಣ, ಶ್ರೀಮತಿ ಕಾಳಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಶ್ರೀಯುತರ ಕುಟುಂಬವು ವ್ಯವಸಾಯವನ್ನೆ ಆಶ್ರಯಿಸಿದ ಕಾರಣ ಬಾಲ್ಯದ ದಿನಗಳಿಂದಲೂ ಬಡತನದೊಳಗೆ ಬೆಳೆದು ಬಂದ ಇವರು, ನಾಟಕದ ಮೇಲೆ ವಿಶೇಷವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ತಮ್ಮ ಸುತ್ತಮುತ್ತಲಿನ ಯಾವುದೇ ಗ್ರಾಮದಲ್ಲಿ ನಾಟಕಗಳು ನಡೆಯುತ್ತಿದ್ದರೂ ತಪ್ಪದೆ ಹಾಜರಾಗಿ ಬೆಳಗಿನ ತನಕ ನಾಟಕವನ್ನು ವೀಕ್ಷಿಸುತ್ತಿದ್ದರು. ನಾಗರಾಜ್ ಅವರು ಮೂರನೇ ತರಗತಿಯನ್ನು ಓದುತ್ತಿರುವ ಸಮಯದಲ್ಲಿ ತಮ್ಮ ಊರಿಗೆ ‘ಸತ್ಯಹರಿಶ್ಚಂದ್ರ’ ನಾಟಕ ಪ್ರದರ್ಶನ ಮಾಡಲು ನಾಟಕ ಕಂಪನಿಯೊಂದು ಬಂದು ತಂಗಿತ್ತು. ಆಗ ವಯಸ್ಕರರಿಗೆ ಮೂರು ರೂಪಾಯಿ ಹಾಗೂ ಮಕ್ಕಳಿಗೆ ಎರಡು ರೂಪಾಯಿ ಟಿಕೇಟ್ ನಿಗದಿ ಮಾಡಿದ್ದರು. ಆದರೆ ಇವರ ಬಳಿ ಎರಡು ರೂಪಾಯಿಗಳು ಇಲ್ಲದೆ ಸುಮಾರು ಮೂರರಿಂದ ನಾಲ್ಕು ದಿನಗಳ ಕಾಲ ಟೆಂಟಿನ ಹೊರಗಡೆಯೇ ನಿಂತು ನಾಟಕವನ್ನು ವೀಕ್ಷಿಸಿದರು. ಹೇಗಾದರು ಮಾಡಿ ನಾಟಕವನ್ನು ನೋಡಬೇಕು ಎಂಬ ಕಾತುರ ಹೆಚ್ಚಾಗಿ ಸತ್ಯಹರಿಶ್ಚಂದ್ರನ ಹೆಂಡತಿಯ ಪಾತ್ರ ನಿರ್ವಹಿಸುತಿದ್ದ ಮಹಿಳೆಗೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಹಜವಾಗಿಯೇ ಬೆಳೆದಿರುವಂತಹ ಸೀತಾಫಲ (ಪುಟಲೇಸಿ) ಹಣ್ಣುಗಳನ್ನು ನೀಡುವ ಮೂಲಕ ಅವರ ಆಪ್ತತೆಯನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಿದರು. ಹಣ್ಣು ತಿಂದ ಆ ಹೆಣ್ಣು ಮಗಳು ಕೂಡ ಇವರಿಗೆ ನಾಟಕದ ಪ್ರದರ್ಶನ ಭಾಗ್ಯವನ್ನು ನೀಡಲಿಲ್ಲ. ಕೊನೆಗೆ ಹೇಗಾದರು ಮಾಡಿ ಈ ನಾಟಕವನ್ನು ನೋಡಲೇಬೇಕೆಂಬ ಉತ್ಕಟತೆಯಿಂದ ಬ್ಲೇಡಿನಿಂದ ಪರದೆಯನ್ನು ಕತ್ತರಿಸಿ ನುಸುಳಿಕೊಂಡು ಪ್ರವೇಶ ಮಾಡಿದರು. ಈ ವಿಷಯ ತಿಳಿದು ಇವರನ್ನು ಹಿಡಿದು ಹೊಡೆಯುವ ಪ್ರಯತ್ನ ಮಾಡಿದರು. ಆದರೆ ಇಲ್ಲಿಂದ ತಪ್ಪಸಿಕೊಂಡ ನಾಗರಾಜ್ ಅವರು ಸುಮಾರು ಒಂದು ವಾರದ ತನಕ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡಿದ್ದರು. ಹೀಗಾದರೂ ನಾಟಕವನ್ನು ನೋಡುವ ಹುಚ್ಚು ಇವರ ತಲೆಯಿಂದ ದೂರವಾಗಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಊಟಕ್ಕೆಂದು ಇಟ್ಟುಕೊಂಡಿದ್ದ ಜೋಳವನ್ನು ಅಂಗಡಿಗೆ ಹಾಕಿ ನಾಟಕವನ್ನು ನೋಡಿಬಂದು ಬಂದಿದ್ದರು. ಇದು ತಿಳಿದು ಮತ್ತೂ ಮನೆಯವರಿಂದ ಹೊಡೆತ ತಿಂದಿದ್ದರು.

ನಟ ಮಂಡ್ಯರಮೇಶ್ ಜೊತೆ ಕಲಾವಿದ ನಾಗರಾಜ್

ನಾಟಕದ ಹುಚ್ಚನ್ನು ಬಾಲ್ಯದ ದಿನಗಳಿಂದಲೂ ಮೈಗೂಡಿಸಿಕೊಂಡು ಬಂದಿದ್ದ ನಾಗರಾಜ್ ಅವರಿಗೆ ತಾನು ಒಬ್ಬ ನಾಟಕ ಕಲಾವಿದನಾಗಬೇಕೆಂಬ ಉತ್ಕಟತೆಯೂ ಒಡಮೂಡಿತ್ತು. ನಾಗರಾಜ್ ಅವರು ನಾಲ್ಕನೇ ತರಗತಿ ಓದುತ್ತಿರುವಾಗ ಆ ಗ್ರಾಮದ ಹಿರಿಯ ಕಲಾವಿದರಾದ ವೀರೇಶ್ ಎಂಬುವವರು ಆ ಗ್ರಾಮದ ಯುವಕರನ್ನು ಸೇರಿಸಿಕೊಂಡು ‘ಜಯಗೌರಿ’ ಎಂಬ ನಾಟಕಕ್ಕೆ ಸಿದ್ಧತೆಯನ್ನು ನಡೆಸಿದ್ದರು. ಈ ನಾಟಕದಲ್ಲಿ ಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಂಡ ಇವರು ಜನರಿಂದ ಉತ್ತಮವಾದ ಪ್ರಶಂಗೆಗೂ ಪಾತ್ರರಾಗಿದ್ದರು. ಹೀಗೆ ಬಣ್ಣದ ಲೋಕದ ಜೊತೆಗೆ ನಿರಂತರವಾದ ನಂಟನ್ನು ಬೆಳೆಸಿಕೊಂಡು ಬಂದರು. ಇವರು ಎಂಟನೇ ತರಗತಿಯನ್ನು ಓದುತ್ತಿರುವಾಗ ‘ಮಲತಾಯಿ’ ಎಂಬ ನಾಟಕವನ್ನು ಪ್ರದರ್ಶನ ಮಾಡಲು ಹೆಸರಾಂತ ರಂಗಕಲಾವಿದೆಯರಾದ ಕೂಡ್ಲಗಿಯ ಶಿವಕುಮಾರಿ ಹಾಗೂ ಇತರೆ ಹಿರಿಯ ಕಲಾವಿದರು ಇವರ ಗ್ರಾಮಕ್ಕೆ ತೆರಳಿದ್ದರು. ಈ ಕಲಾವಿದರನ್ನು ಪರಿಚಯ ಮಾಡಿಕೊಳ್ಳಬೇಕೆಂಬ ಹಂಬಲದಿಂದಾಗಿ ಈ ಕಲಾವಿದರಿಗೆ ಟೀ, ತಿಂಡಿ, ಹಣ್ಣು ಹಂಪಲು ತಂದುಕೊಡುವ ಮೂಲಕ ಅವರ ಸ್ನೇಹ ಹಾಗೂ ವಿಶ್ವಾಸವನ್ನು ಗಳಿಸಿದರು. ಹೀಗೆ ಪರಿಚಯವಾದ ಶಿವಕುಮಾರಿ ಹಾಗೂ ನಾಗರಾಜ್ ಅವರ ಸಂಬಂಧವು ಇಂದಿಗೂ ಸ್ವಂತ ಅಕ್ಕ ತಮ್ಮನಾಗಿ ತಮ್ಮ ಬಂಧವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಶ್ರೀಯುತ ನಾಗರಾಜ್ ಅವರು ಒಂದರಿಂದ ನಾಲ್ಕನೇ ತರಗತಿಯನ್ನು ತಮ್ಮ ಸ್ವಾಗ್ರಾಮದಲ್ಲಿ ಪೂರೈಸಿ, ಐದರಿಂದ ಏಳನೇ ತರಗತಿಯನ್ನು ಪಕ್ಕದ ಬಣವಿಕಲ್ಲು ಗ್ರಾಮದಲ್ಲಿ ಪೂರೈಸಿದರು. ನಂತರ ಪ್ರೌಢ ಶಿಕ್ಷಣವನ್ನು ಕೊಟ್ಟೂರಿನಲ್ಲಿ ಮುಂದುವರೆಸಿದರು. ಕೊಟ್ಟೂರು ಸಾಂಸ್ಕøತಿಕ ಕಲೆಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿರುವಂತದ್ದು. ಇಲ್ಲಿ ಹಲವಾರು ನಾಟಕ ಕಂಪನಿಗಳು ಜಾತ್ರೆಯ ಸಮಯದಲ್ಲಿ ತಿಂಗಳುಗಟ್ಟಲೆ ಪ್ರದರ್ಶನ ನಡೆಸುತಿದ್ದವು. ಈ ಸಂದರ್ಭವು ನಾಗರಾಜ್ ಅವರಲ್ಲಿ ಮತ್ತಷ್ಟು ಕಲಾಸಕ್ತಿಗೆ ಪ್ರಚೋದಕ ಶಕ್ತಿಯಾಗಿ ಕಾರ್ಯನಿರ್ವಹಿಸಿತು. ಇವರು ಎಸ್.ಎಸ್.ಎಲ್.ಸಿ ಓದುತ್ತಿರುವ ಸಮಯದಲ್ಲಿ ಇವರ ಊರಿನಲ್ಲಿ ‘ಸರ್ಪ ಸಾಮ್ರಾಜ್ಯ’ ಎಂಬ ನಾಟಕದ ಸಿದ್ಧತೆಯು ನಡೆದಿತ್ತು. ಈ ನಾಟಕದಲ್ಲಿ ಹೇಗಾದರೂ ಮಾಡಿ ಕಥಾ ನಾಯಕನ ಪಾತ್ರ ಮಾಡಬೇಕೆಂದು ಮನೆಯಲ್ಲಿ ಹಠ ಹಿಡಿದು ಕೂತರು. ಮನೆಯಲ್ಲಿ ಇದಕ್ಕೆ ಯಾರೂ ಸಹಮತವನ್ನು ಸೂಚಿಸಲಿಲ್ಲ. ಈ ನಾಟಕದಲ್ಲಿ ಪಾತ್ರ ಮಾಡುವುದಕ್ಕೆ ಆರ್ಥಿಕ ಸಹಕಾರವು ಯಾರಿಂದಲೂ ಸಿಗುವ ನಿರೀಕ್ಷೆಗಳು ಕಾಣದೆ ಹೋದಾಗ ಶನಿವಾರ ಮತ್ತು ಭಾನುವಾರದಂದು ಕೂಲಿ ಕೆಲಸ ಮಾಡುವ ಮೂಲಕ ನಾಟಕಕ್ಕೆ ಬೇಕಾದ ಹಣವನ್ನು ಸಂಗ್ರಹಿಸಿಕೊಂಡು ‘ಸರ್ಪ ಸಾಮ್ರಾಜ್ಯ’ ನಾಟಕದಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿ ಜನರಿಂದ ಉತ್ತಮ ಪ್ರಶಂಸೆ ಹಾಗೂ ಮೆಚ್ಚಿಗೆಗೂ ಪಾತ್ರರಾಗಿದ್ದರು.

ಹೀಗೆ ಮುಂದುವರೆದ ಇವರ ನಾಟಕ ಯಾತ್ರೆಯು ಪಿ.ಯು.ಸಿ ಶಿಕ್ಷಣದ ಹಂತಕ್ಕೆ ಬರುವ ವೇಳೆಗೆ ಹಲವಾರು ಕಡೆಗಳಲ್ಲಿ ಗುರುತಿಸಿಕೊಂಡು, ತಮ್ಮ ಭಾಗದಲ್ಲಿ ಎಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತದೆಯೋ ಅಲ್ಲಿ ನಾಟಕ ಕಲಾವಿದರಿಗೆ ಹಿನ್ನೆಲೆಯಲ್ಲಿ ಮಾತುಗಳನ್ನು ಹೇಳಿಕೊಡುವ ಹಾಗೂ ನಾಟಕಗಳಲ್ಲಿ ಗಂಡು ಮತು ಹೆಣ್ಣಿನ ದನಿಯಲ್ಲಿ ಹಾಡುಗಳನ್ನು ಹಾಡುತ್ತ ತಮ್ಮ ರಂಗಭೂಮಿಯ ನಂಟನ್ನು ಸುದೀರ್ಘವಾಗಿ ಮುಂದುವರೆಸಿಕೊಂಡು ಬಂದರು. ಪಿ.ಯು.ಸಿ ಶಿಕ್ಷಣ ಮುಕ್ತಾಯವಾದ ತರುವಾಯದಲ್ಲಿ ಜೀವನ ನಡೆಸುವುದಕ್ಕೆ ಕೆಲಸ ಅನಿವಾರ್ಯವಾದಾಗ ತಮಗೆ ದೊರಕಿದ ನರ್ಸಿಂಗ್ ಕೋರ್ಸನ್ನು ಬಿಟ್ಟು, ಆರ್.ಎಂ.ಪಿ ವೈದ್ಯ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ತರಬೇತಿಯನ್ನು ಪಡೆದ ತರುವಾಯದಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿ 2010 ರಲ್ಲಿ ಮರಿಯಮ್ಮನಹಳ್ಳಿ ಸಮೀಪದ ‘ಗೊಲ್ಲರಹಳ್ಳಿ’ ಗ್ರಾಮದಲ್ಲಿ ಒಂದು ನೆಲೆಸುತ್ತಾರೆ. ಇಲ್ಲಿಯೂ ಕೂಡ ವೈದ್ಯ ವೃತ್ತಿಯ ಜೊತೆಯಲ್ಲಿ ನಾಟಕ ಕಲೆಯನ್ನು ಯಥಾ ಪ್ರಕಾರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಶ್ರೀಯುತರ ನಾಗರಾಜ್ ಅವರು ಈವರೆಗೂ ಕೇವಲ ಸಾಮಾಜಿಕ ನಾಟಕಗಳಲ್ಲಿ ಮಾತ್ರ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸಿಕೊಂಡು ಬಂದಿದ್ದರು. ಆದರೆ ಪೌರಾಣಿಕ ನಾಟಕಗಳಲ್ಲಿ ಪ್ರದರ್ಶಸಬೇಕೆಂಬ ಇವರ ಕನಸು ಕನಸಾಗಿಯೇ ಉಳಿದುಕೊಂಡಿತ್ತು. ಆದರೆ ನಾನು ಕೂಡ ಪೌರಾಣಿಕ ಪಾತ್ರಗಳಲ್ಲಿ ಪ್ರದರ್ಶಿಸಬೇಕೆಂದು ಹಿರಿಯ ಕಲಾವಿದರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದಾಗ ಕೆಲವರು ಇದಕ್ಕೆ ಪ್ರೋತ್ಸಾಹ ನೀಡಿರಲಿಲ್ಲ. ಹಲವಾರು ಪೌರಾಣಿಕ ನಾಟಕಗಳನ್ನು ನೋಡುವ ಮೂಲಕ ಪಾತ್ರ ಹಾಗೂ ಸಂಭಾಷಣೆಗಳನ್ನು ಮನನ ಮಾಡಿಕೊಂಡಿದ್ದ ಶ್ರೀಯುತರು ಉಜ್ಜಯಿನಿ ನಾಗರಾಜ್ ಅವರ ಆಶಿರ್ವಾದ ಪಡೆದು ಗುರುವಿಲ್ಲದೆ ವಿದ್ಯೆ ಪಡೆದು ಉಜ್ಜಯಿನಿಯ ಮರುಳಸಿದ್ಧನ ಸನ್ನಿದಿಯಲ್ಲಿ ದಿನಾಂಕ 18 ಡಿಸೆಂಬರ್ 2010 ರಂದು ಪ್ರಥಮ ಬಾರಿಗೆ ‘ರಕ್ತರಾತ್ರಿ’ ನಾಟಕದಲ್ಲಿ ಧರ್ಮರಾಯನ ಪಾತ್ರವನ್ನು ಪ್ರದರ್ಶಿಸುತ್ತಾರೆ. ಇಲ್ಲಿ ಪ್ರಥಮ ಪ್ರಯೋಗವಾದ ಕಾರಣದಿಂದ ಅಂಜಿಕೆ ಮತ್ತು ಅಳುಕಿನಿಂದ ಕೆಲವು ತಪ್ಪುಗಳ ನಡೆವೆಯೂ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಹೀಗೆ ಮುಂದುವರೆದ ಈ ಪ್ರಯತ್ನವು ಹಲವಾರು ಪೌರಾಣಿಕ ನಾಟಕಗಳಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ನೂರಾರು ಪ್ರದರ್ಶನಗಳನ್ನು ನಡೆಸಿಕೊಟ್ಟಿರುತ್ತಾರೆ. ಈ ರಕ್ತರಾತ್ರಿ ನಾಟಕವೊಂದರಲ್ಲಿಯೇ ಸುಮಾರು 93 ಪ್ರದರ್ಶನಗಳನ್ನು ಧರ್ಮರಾಯನ ಪಾತ್ರದಲ್ಲಿ, ಕಲಿಶಿವನ ಪಾತ್ರದಲ್ಲಿ 10 ಪ್ರದರ್ಶನ, ಕರ್ಣನ ಪಾತ್ರದಲ್ಲಿ 4, ಅರ್ಜುನ ಪಾತ್ರದಲ್ಲಿ 10 ಪ್ರದರ್ಶನಗಳನ್ನು ನೆರವೇರಿಸಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಇಷ್ಟೆ ಅಲ್ಲದೆ ನಿನಾಸಂ ನಾಟಕ ತಂಡದೊಂದಿಗೆ ‘ಸಾಹೇಬ್ರು ಬರ್ತಾರಂತೆ’ ಹಾಗೂ ರಂಗಕರ್ಮಿಗಳಾದ ಕೆ.ಶಿವರುದ್ರಪ್ಪ ಅವರ ನಿರ್ದೇಶನದ ‘ಬೆಳ್ಳಕ್ಕಿ ಹಿಂಡು ಬೆದರ್ಯಾವೊ’ ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿಯು ಇವರದಾಗಿದೆ. ಒಂದು ಕಾಲದಲ್ಲಿ ಮನೆಯವರಿಂದ ನಿಂದನೆಗೆ ಒಳಗಾಗಿದ್ದ ಇವರ ಈ ಕಾರ್ಯವನ್ನು ಇಂದು ಮನೆಯವರೆಲ್ಲ ಘನತೆಯಿಂದ ಹೇಳಿಕೊಳ್ಳುವಂತಹ ಹಂತವನ್ನು ತಲುಪಿದ್ದಾರೆ. ಕೂಡ್ಲಿಗಿಯಲ್ಲಿ ಧರ್ಮರಾಯನ ಪಾತ್ರ ಮಾಡುವ ಸಮಯದಲ್ಲಿ ಇವರ ತಂದೆ ತಾಯಿಗಳು ಇವರಿಗೆ ಗೊತ್ತಿಲ್ಲದಂತೆ ಬಂದು ಮಗನ ಪಾತ್ರಾಭಿನಯವನ್ನು ನೋಡಿ ಕೊಂಡಾಡಿದ್ದಾರೆ. ನಾಟಕಾಭಿನಯದ ಇವರ ಈ ಆಸಕ್ತಿಗೆ ಇವರ ಶ್ರೀಮತಿಯವರು ಕೂಡ ಸಂಪೂರ್ಣವಾದ ಬೆಂಬಲವನ್ನು ಸೂಚಿಸಿದ್ದಾರೆ.

ಶ್ರೀಯುತ ನಾಗರಾಜ್ ಅವರು ನಾಟಕ ಮತ್ತು ರಂಗಭೂಮಿಯ ಸೇವೆಯ ಜೊತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮರಿಯಮ್ಮನಹಳ್ಳಿ ಹೋಬಳಿ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದು, ಸಾಹಿತ್ಯ ಸೇವೆಯೊಂದಿಗೆ ಸಾಧಕರ ಸಾಧನೆಯನ್ನು ಬೀದಿ ಬೀದಿಗೂ ತಲುಪಿಸುವ ಕಾರ್ಯವನ್ನು ನಡೆಸಿಕೊಂಡು ಬಂದಿರುತ್ತಾರೆ. ಶ್ರೀ ಪುಟ್ಟರಾಜ ಗವಾಯಿ ಸಾಂಸ್ಕøತಿಕ ಸಂಘದ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ರಂಗಭೂಮಿ ಹಾಗೂ ಸಾಹಿತ್ಯ ಸೇವೆಯಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಇವರ ಈ ಸಾಧನೆಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಗಳನ್ನು ಮಾತ್ರವಲ್ಲದೆ ‘ಸಂಗೀತ ಭಾರತಿ’ಯಂತಹ ಪ್ರಶಸ್ತಿಗಳನ್ನು ನೀಡಿ ಇವರ ಸಾಧನೆಯನ್ನು ಗೌರವಿಸಲಾಗಿದೆ. ಇವರ ಈ ಸಾಧನೆಯು ರಂಗಭೂಮಿಯನ್ನು ಉಳಿಸಿ, ಬೆಳೆಸುವತ್ತ ಸಾಗಲಿ. ಕಣ್ಮರೆಯಾಗುತ್ತಿರುವ ರಂಗಕಲೆಗಳು ಇಂತಹ ಸಾಧಕರಿಂದ ಮುಂದಿನ ಪೀಳಿಗೆಗೆ ಉಳಿಯುವಂತಾಗಲಿ ಎಂಬುದು ನಮ್ಮ ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ...

ದಿನದ ಸುದ್ದಿ5 days ago

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ...

ದಿನದ ಸುದ್ದಿ1 week ago

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499...

ದಿನದ ಸುದ್ದಿ1 week ago

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ...

ದಿನದ ಸುದ್ದಿ2 weeks ago

ಇಂದು ಚುನಾವಣಾ ಆಯೋಗ ಸಮಾವೇಶ

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ...

ದಿನದ ಸುದ್ದಿ2 weeks ago

ತಂತ್ರಜ್ಞಾನ ಮೋಡಿ : ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ಡಾ. ಚಂದ್ರಪ್ಪ ಎಚ್, ಸಹಾಯಕ ಪ್ರಾಧ್ಯಾಪಕರು, ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ 90ರ ದಶಕದಿಂದೀಚೆಗೆ, ಎಲ್ಲೆಡೆ ಸದ್ದಿಲ್ಲದೇ ಕ್ರಮೇಣ ಒಕ್ಕರಿಸತೊಡಗಿದೆ ಆಧುನಿಕ ಯಾಂತ್ರಿಕೃತ ಬದುಕು....

ದಿನದ ಸುದ್ದಿ2 weeks ago

ಔಷಧಗಳ ದರ ಗಣನೀಯ ಏರಿಕೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ; ಕೇಂದ್ರ ಸರ್ಕಾರ ಸ್ಪಷ್ಟನೆ

ಸುದ್ದಿದಿನ ಡೆಸ್ಕ್ : ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ವಿವಿಧ ಔಷಧಿಗಳ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ಜನರನ್ನು...

ದಿನದ ಸುದ್ದಿ2 weeks ago

ರಾಜ್ಯದಲ್ಲಿ ಬಿಸಿಲ ತಾಪ ಇನ್ನೂ ಹೆಚ್ಚಾಗಲಿದೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ 7 ದಿನಗಳಲ್ಲಿ ಬಿಸಿಲ ತಾಪ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಜನರುಕೆಲವು ಮುನ್ನೆಚ್ಚರಿಕೆ...

ದಿನದ ಸುದ್ದಿ2 weeks ago

ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ...

ದಿನದ ಸುದ್ದಿ2 weeks ago

ಲೋಕಸಭೆ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ

ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ, ದೇಶಾದ್ಯಂತ ಎರಡನೇ ಹಂತದ 89 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೊದಲ...

Trending