ಬಹಿರಂಗ
‘ಬಲಿ ಚಕ್ರವರ್ತಿ’ ಈ ನೆಲದ ಹೆಮ್ಮಯ ಸಾಂಸ್ಕ್ರತಿಕ ನಾಯಕ

ಬಲಿ ಚಕ್ರವರ್ತಿ ಈ ನೆಲದ ಮೂಲನಿವಾಸಿಗಳ ಹೆಮ್ಮೆಯ ರಾಜ . ಬಲಿ ಚಕ್ರವರ್ತಿಯ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಮತ್ತು ಸಮ್ರದ್ದಿಯಿಂದ ಕೊಡಿದ ಸಾಮ್ರಾಜ್ಯವಾಗಿತ್ತು. ಬಲಿರಾಜ ಸಾಮ್ರಾಜ್ಯದ ವಿಸ್ತರಣೆ ಕೇಳಿದರೆ ವಿಸ್ಮಯ ಎನಿಸುತ್ತದೆ . ಇಂದಿನ ಶ್ರಿಲಂಕಾದಲ್ಲಿನ ಕೆಲವು ದ್ವೀಪಗಳು ಸಹ ಇವನ ಆಳ್ವಿಕೆಯಲ್ಲಿ ಸೇರಿದ್ದವು. ಮಲೇಷಿಯಾದಲ್ಲಿ ಸಹ ಇವನ ಆಳ್ವಿಕೆಗೆ ಒಳಪಟ್ಟ ಒಂದು ದ್ವೀಪ ಇತ್ತು ಇಂದಿಗೂ ಅದನ್ನು ‘ಬಾಲಿ’ ದ್ವೀಪ ಎಂದು ಕರೆಯುವರು.ಕರಾವಳಿ ಪ್ರದೇಶದಿಂದ ಹಿಡಿದು ದೂರದ ಪಶ್ಚಿಮ ಕೊಲ್ಲಾಪುರದವರಗೆ ಹರಡಿದ ಪ್ರದೇಶವೂ ಬಲಿರಾಜನ ಆಳ್ವಿಕೆಗೆ ಒಳಪಟ್ಟಿತ್ತು. ಇತನ ಆಡಳಿತ ಕೇಂದ್ರ ರತ್ನಗಿರಿ ಆಗಿತ್ತು. ಇಷ್ಟೆ ಅಲ್ಲ ಬಲಿರಾಜನು ದಕ್ಷಿಣ ಮಹಾರಾಷ್ಟ್ರದಲ್ಲಿ ಆಳ್ವಿಕೆ ನೆಡೆಸುತ್ತಿದ್ದ.ಇಲ್ಲಿನ ಮೂಲನಿವಾಸಿಗಳನ್ನು ಮಹಾರಾಷ್ಟ್ರೀಯರು ಎಂದು ಮುಂದೆ ಅವರನ್ನು ಮರಾಠರು ಎಂದು ಕರೆದರು.
ಬಲಿ ಚಕ್ರವರ್ತಿ ತುಳಿತಕೊಳ್ಳಗಾದ ಮತ್ತು ದಮನಿತರ ಧ್ವನಿಯಾಗಿದ್ದ .ಈತ ಅಪ್ಪಟ ಸಂಗೀತ ಪ್ರೇಮಿಯಾಗಿದ್ದ ಮತ್ತು ‘ಮಲ್ಲಾರ’ ಎಂಬ ಹೊಸರಾಗ ಒಂದನ್ನು ಸಂಯೋಜಿಸಿದ್ದ ಮಿಯಾನ್ ಎಂಬ ಇನ್ನೊಬ್ಬ ಸಂಗೀತಕಾರ ಈ ಮಲ್ಲಾರ್ ರಾಗವನ್ನು ಲಯಬದ್ದವಾಗಿ ಸಂಯೋಜಿಸಿದ್ದ ಅದಕ್ಕೆ ‘ ಮಿಯಾನ್ ಮಲ್ಲಾರ್’ ರಾಗವಾಗಿ ಪ್ರಸಿದ್ದಿಗೆ ಬಂತು . ಅದರಂತೆ ಬಲಿಚಕ್ರವರ್ತಿ ತನ್ನ ವಿಶ್ರಾಂತಿ ಸಮಯವನ್ನು ಕಾಶಿಯಲ್ಲಿ ಕಳೆಯುತ್ತಿದ್ದ ಅಂತಹ ಸಂಧರ್ಭದಲ್ಲಿ ಮತ್ತೊಂದು ರಾಗವನ್ನು ಸಂಯೋಜಿಸಿದ್ದ ಅದು ಮುಂದೆ ಭೈರವ ರಾಗವೆಂದು ಪ್ರಸಿದ್ದಿಗೆ ಬಂತು. ತಾನ್ ಸೇನ್ ನಂತಹ ಸಂಗೀತ ದಿಗ್ಗಜಯ ಮನಸೂರೆಗೊಂಡ ರಾಗ ಭೈರವದ ಜನಕ ಬಲ ಚಕ್ರವರ್ತಿ. ಜೊತೆಗೆ “ಡಾರ್” ಎಂಬ ಸಂಗೀತದ ಉಪಕಣವನ್ನು ಕಂಡುಹಿಡಿದಿದ್ದು ಇದೆ ಬಲಿಮಹಾರಾಜ.
ಬಲಿ ಚಕ್ರವರ್ತಿ ಈ ದೇಶದ ಮೂದಲ ಕ್ರಷಿಕ ಚಕ್ರವರ್ತಿ . ರೈತರ ಬಗ್ಗೆ ಅಪಾರ ಕಾಳಿಜಿ ಇದ್ದ ಈ ರಾಜ ರೈತರ ಕಷ್ಟ ,ಸುಖ, ದುಃಖಗಳನ್ನು ಆಲಿಸಲೆಂದೆ ಇಬ್ಬರು ಅಧಿಕಾರಿಗಳನ್ನು ನೇಮಿಸಿರುತ್ತಾನೆ ಅವರೆ ” ಮಹಾ -ಸುಭಾ” ಇವರು ತುಂಬಾ ಪ್ರಮಾಣಿಕರಾಗಿದ್ದು ರೈತಾಪಿ ವರ್ಗದ ಏಳಿಗೆಗಾಗಿ ತಮ್ನನ್ನೆ ತಾವು ಸಮರ್ಪಿಸಿಕೊಂಡಿದ್ದರು . ರೈತರು ಬೆಳೆದ ಬೆಳಗೆ ನೀಡಬಹುದಾದ ಎಲ್ಲ ಸೌಲಭ್ಯಗಳನ್ನು ಈ ಅಧಿಕಾರಿಗಳ ಮೂಲಕ ಬಲಿಚಕ್ರವರ್ತಿ ಅದನ್ನು ಪೂರೈಸುತ್ತಿದ್ದ. ಆ ಅಧಿಕಾರಿಗಳುರೈತರ ಬಗೆಗಿನ ಕಾಳಜಿಯಿಂದಾಗಿ ರೈತವರ್ಗ ಅವರನ್ನು ಸ್ಮರಿಸದೆ ಇರಲಾರದು. ಇಂದಿಗೂ ಯಾವುದೆ ಕ್ರಷಿ ಚಟುವಟಿಕೆ ಇರಲಿ ಅದನ್ನು ಆರಂಭಿಸುವಾಗ ,ಕಣ( ರಾಶಿ) ಮಾಡುವಾಗ ಸಸಿ ನೆಡುವುವಾಗ ಹೊಲದ ಬದುವಿನ ಮೇಲೆ ಮತ್ತು ರಾಶಿಯ ಮುಂದೆ ಎರಡು ಕಲ್ಲುಗಳನ್ನು ಇಟ್ಟು ಅದಕ್ಕೆ ಸುಣ್ಣ ಬಳಿದ ಪೂಜಿಸುವುದು ಇಂದಿಗೂ ವಾಡಿಕೆ ಇದೆ ಆ ಎರಡು ಕಲ್ಲುಗಳೆ “ಮಹಾ- ಸುಭಾ” ಪ್ರತೀಕವೆಂದು ತಿಳಿದು ಇಂದಿಗೂ ಪೂಜೆ ಸಲ್ಲಿಸುವುದು ರೈತಾಪಿವರ್ಗಗಳಲ್ಲಿ ಕಂಡು ಬರುತ್ತೆ. ಹಾಗಾಗಿ ರೈತವರ್ಗವು ಬಲಿಚಕ್ರವರ್ತಿ ಕಾಲದಲ್ಲಿ ನೆಮ್ಮದಿಯಿಂದ ಇತ್ತು. ಇಷ್ಟೆ ಅಲ್ಲದೆ ಅನೇಕ ವಿದ್ವಾಂಸರು ಬಲಿರಾಜನ ರಾಜ್ಯಕ್ಕೆ ಬಂದು ಅಧ್ಯಯನ ನೆಡೆಸಿದರು. ದಶರಥನ ತಂದೆ ಅಜಪಾಲನಿಗಿಂತಲೂ ಮತ್ತು ಆ ಕಾಲದ ಎಲ್ಲಾ ರಾಜರುಗಳಿಗಿಂತ ವಿಸ್ತಾರ ಮತ್ತು ಸಮ್ರದ್ದಿಯಾದ ಸಾಮ್ರಾಜ್ಯ ಬಲಿ ಚಕ್ರವರ್ತಿಯದು ಆಗಿತ್ತು.
ಹೀಗೆ ಸಮ್ರದ್ದಿಯಿಂದ ಸುಖದಿಂದ ಆ ಸಾಮ್ರಜ್ಯದ ಆಡಳಿತವನ್ನು ಸಹಿಸದ ವಿಪ್ರ ವಾಮನ ತನ್ನ ಸೈನ್ಯದೊಂದಿಗೆ ಬಲಿಯ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ . ಆಗ ವಾಮನ ಸೈನ್ಯವನ್ನು ಹಿಮ್ಮೆಟ್ಟಿಸುವುದು ಅನಿವಾರ್ಯವೆ ಆಯಿತು . ಬಲಿ ಚಕ್ರವರ್ತಿಯ ಸೈನ್ಯ ಪ್ರತಿದಿನವು ವಾಮನ ಸೈನ್ಯದೊಂದಿಗೆ ಸೆಣಸಾಡಿತು.’ಭಾದ್ರಪದ ದ್ವೀತಿಯ ಪಕ್ಷದಂದು ಸೂರ್ಯಾಸ್ತದ ನಂತರ ಯುದ್ದ ನಿಲ್ಲಿಸಿ ಎರಡು ಪಾಳೆಯ ಸೈನ್ಯಗಳೂ ವಿಶ್ರಾಂತಿಗೆಂದು ತಮ್ಮ ಡೇರೆಗಳಿಗೆ ತರೆಳಿದರು . ತಮ್ಮ ಪಾಳೆಯಗಳಲ್ಲಿ ಯುದ್ದದಲ್ಲಿ ಮಡಿದವರ ತ್ಯಾಗ ಬಲಿದಾನಗಳನ್ನು ಸ್ಮರೀಸಲಾಯಿತು.ಅದನ್ನು ಇಂದಿಗೂ ಭಾದೃಪದ ದ್ವೀತಿಯ ಪಕ್ಷದಂದು ಮನೆಯಲ್ಲಿ ತೀರಿಹೋದ ಹಿರಿಯರ ಸ್ಮರಣಗೆ ವಾರ್ಷಿಕ ತಿಥಿ ಅಥವಾ ವರ್ಷಾಂತಿಕ ಶ್ರಾದ್ದ ಮಾಡುವುದು ಇಂದಿಗೂ ವಾಡಿಕೆಯಲ್ಲಿದೆ.ಹೀಗೆ ಸತತ ಎಂಟು ದಿನಗಳಕಾಲ ಯುದ್ದದಲ್ಲಿ ವೀರಬಾಹುವಿನಂತೆ ಹೋರಾಡಿದ ಬಲಿ ಎಂಟನೆ ದಿನಕ್ಕೆ ಯುದ್ದ ಭೂಮಿಯಲ್ಲಿಯೆ ವೀರಮರಣವನ್ನುಪ್ಪುತ್ತಾನೆ .
ಹೀಗೆ ವೀರ ಮರಣವನ್ನು ಅಪ್ಪಿದ ಬಲಿಯ ಬರುವಿಕೆಗಾಗಿ ಮತ್ತು ಯುದ್ದದಲ್ಲಿ ಅಳಿದುಳಿದ ಬಾಣಸುರನ ಸೈನ್ಯವು ಅಶ್ವಿನಿ ಮಾಸದ ಹತ್ತನೆ ದಿನದಂದು ತಾಯಿನಾಡಿಗೆ ಮರಳಿತು. ಜನರಿಂದ ಜನರಿಗೆ ಹ್ರದಯದಿಂದ ಹ್ರದಯಕ್ಕೆ ಸುಖ ಸಮ್ರದ್ದಿಯನ್ನು ತರಲಿಕಕ್ಕೆಗೋಸ್ಕರ ಬಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸಿ ಸ್ತ್ರಿಯರು ಆರತಿ ಎತ್ತಿ ಶುಭಹಾರೈಸುತ್ತಾರೆ. ಇಂದಿಗೂ ಬಲಿಪಾಡ್ಯದಂದು ಸ್ತ್ರಿಯರು ತಟ್ಟೆಯಲ್ಲಿ ಎರಡು ದೀಪಗಳ ಬೆಳಕಿನಲ್ಲಿ ಆರತಿ ಎತ್ತಿ ಮನು ಆಡಳಿತಕೊನೆಗೊಂಡು ಬಲಿ ಆಡಳಿತ ಮತ್ತೊಮ್ಮೆ ಬರಲಿ ಎನ್ನುವ ಉದ್ದೇಶಕ್ಕಾಗಿ ದೀಪಾವಳಿಯ ಬಲಿಪಾಡ್ಯದಂದು ಆರತಿ ಎತ್ತಿ ಶುಭಹಾರೈಸುತ್ತಾರೆ. ಆದರೆ ಮುಂದೆ ಪುರೋಹಿತ ಶಾಹಿಗಳು ಇದರ ಆಚರಣೆಯ ಅರ್ಥವನ್ನೆ ಬದಲಾಯಿಸಿ ಬಿಟ್ಟರು.
ದಿನದ ಸುದ್ದಿ
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?

- ರಘೋತ್ತಮ ಹೊ.ಬ
ಮೊನ್ನೆ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಶೋಷಿತ ಸಮುದಾಯದ ಒಬ್ಬ ಕಾದಂಬರಿ ಕಾರರ ಕಾದಂಬರಿ ಬಿಡುಗಡೆ ಸಮಾರಂಭ ಅದು. ಪ್ರೇಕ್ಷಕನಾಗಿ ಭಾಷಣ ಕೇಳುತ್ತ ಕುಳಿತಿದ್ದೆ. ಹಾಗೆ ಕುಳಿತು ಭಾಷಣ ಕೇಳಿ ಕಲಿಯುವುದು ಸಾಹಿತ್ಯಾಸಕ್ತನಾಗಿ ನನ್ನ ಹವ್ಯಾಸ. ಅಂದಹಾಗೆ ಅತಿಥಿಗಳೊಬ್ಬರು ಭಾಷಣ ಮಾಡುತ್ತ ದಲಿತರು ಪರ್ಯಾಯ ಸಂಸ್ಕೃತಿ ಕಟ್ಟಿಕೊಳ್ಳುವ ಅಗತ್ಯವಿದೆ ಅಂದರು.
ನನಗೆ ಆಶ್ಚರ್ಯ! ಯಾಕೆಂದರೆ ಆಗಷ್ಟೇ ನಾನು ಬೌದ್ಧ ವಿಹಾರ ಕ್ಕೆ ಹೋಗಿ ವಾರದ ಪ್ರಾರ್ಥನೆ ಮುಗಿಸಿ ಬಂದಿದ್ದೆ. ಈ ನಡುವೆ ಇವರ್ಯಾರು ಪರ್ಯಾಯ ಸಂಸ್ಕೃತಿ ಎಂದು ಹೇಳುತ್ತಿದ್ದಾರಲ್ಲ! ಅಂದಹಾಗೆ ಆ ಭಾಷಣಕಾರರು ತಾವು ಅದ್ಯಾವುದೋ (ಶತಮಾನ) ದಲ್ಲಿ ಮನುವಾದದಿಂದ ಅದೇನೋ ಬರೆದು ವಿಮೋಚನೆ ಗೊಂಡಿದ್ದೇವೆ ಎಂದರು.
ಪಾಪ, ಅವರು ಸನಾತನ ಎಂಬ ಈಚಿನ ಜಾಹೀರಾತೊಂದನ್ನು ನೋಡಿದ ಹಾಗೆ ಕಂಡಿರಲಿಲ್ಲ! ಆದರೂ ದಲಿತರಿಗೆ ಪರ್ಯಾಯ ಸಂಸ್ಕೃತಿ ಎಂದು ಹೇಳುತ್ತಿದ್ದಾರಲ್ಲ? ಹಾಗಿದ್ದರೆ ಲೌಕಿಕ ವಾಗಿ ಇವರು ಗಮನಿಸಿರುವುದಾಸರೂ ಏನು ಎಂದು ಪ್ರಶ್ನೆ ಹಿಡಿದು ಕುಳಿತೆ.
ಹೌದು, ನಾನು ಅಲ್ಲೇ ಹೇಳಿಬಿಡಬಹುದಿತ್ತು. ಆದರೆ ಕಾದಂಬರಿಕಾರರಿಗೆ ಮುಜುಗರ ಆಗಬಹುದು ಎಂದು ಸುಮ್ಮನಾದೆ. ಏಕೆಂದರೆ ದಲಿತರ ಪರ್ಯಾಯ ಸಂಸ್ಕೃತಿ ಅದು ಬೌದ್ಧ ಸಂಸ್ಕೃತಿ ಅಲ್ಲವೆ? ದಲಿತ ಕೇರಿಗಳು ಇಂದು ಬುದ್ಧರ ಹಬ್ಬಗಳು, ಬೌದ್ಧ ಧಾರ್ಮಿಕ ಆಚರಣೆಗಳ ಆಗರವಾಗುತ್ತಿರುವುದನ್ನು ಸದರಿ ಭಾಷಣಕಾರರು ಗಮನಿಸಿಲ್ಲವೆ ಎನಿಸಿತು.
ಸದರಿ ಭಾಷಣಕಾರರು 70 ರ ದಶಕದ ದಲಿತ ಚಳುವಳಿಯ ಸಂದರ್ಭಗಳನ್ನು, ಆ ಸಂದರ್ಭದಲ್ಲಿ ತಿಂದದ್ದು, ಕುಡಿದದ್ದು, ಇಸ್ಪೀಟು ಆಡಿದ್ದು ಎಲ್ಲವನ್ನೂ ಹೇಳಿದರು! ಅರೆ, ಅದು 50 ವರ್ಷಗಳ ಹಿಂದಿನ ಕತೆ. ಮನುಷ್ಯ ಬದಲಾಗಲೇ ಬೇಕಲ್ಲವೆ? ಆ ಬದಲಾದ ಸಂದರ್ಭದಲ್ಲಿ ಈಚಿನ ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳನ್ನು ಆ ಸಾಹಿತಿ ಅಥವಾ ಅವರಂತಹವರು ಯಾಕೆ ಹೇಳುತ್ತಿಲ್ಲ? ಅಥವಾ ಹೇಳಲಿಲ್ಲ?
ಉದಾಹರಣೆಗೆ ಮೊನ್ನೆ ಮೈಸೂರು ಮತ್ತು ಚಾಮರಾಜನಗರಗಳಲ್ಲಿ ನಮ್ಮ ಮಹಿಳೆಯರು ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಿದರು. ಆಗ ಆ ಸಮಾರಂಭಗಳಲ್ಲಿ ಮೈದುಂಬಿಕೊಂಡಿದ್ದು ಬುದ್ಧ ಸಂಸ್ಕೃತಿ. ಸಾವಿತ್ರಿಬಾಯಿ ಫುಲೆಯವರೇನು ದಲಿತರಲ್ಲ. ಕಾನ್ಷೀರಾಮ್ ರವರು ಹೆಕ್ಕಿ ತೆಗೆದ ಬಹುಜನ ಚಳುವಳಿಯಲ್ಲಿ ಬರುವ ಹಿಂದುಳಿದ ವರ್ಗದ ಸಾಧಕಿ ಮಹಿಳೆಯವರು.
ಈ ಕಾರ್ಯಕ್ರಮಗಳ ವರದಿ ಎಲ್ಲಾ ಪತ್ರಿಕೆಗಳಲ್ಲೂ, ಸಾಮಾಜಿಕ ಮಾಧ್ಯಮಗಳಲ್ಲು ರಾರಾಜಿಸಿದೆ. ಪ್ರಶ್ನೆ ಎಂದರೆ ಇದನ್ನೂ ಸದರಿ ಸಾಹಿತಿ ಕಂ ಭಾಷಣಕಾರರು ಗಮನಿಸಿಲ್ಲವೆಂದರೆ..? ದಲಿತರಿಗೆ ಪರ್ಯಾಯ ಸಂಸ್ಕೃತಿ ಹುಡುಕಿಕೊಳ್ಳುವ ಸಲಹೆ ನೀಡುತ್ತಾರೆಂದರೆ..?
ಒಂದು ಸಲಹೆಯೆಂದರೆ, ಯಾರೇ ಆಗಲಿ ಕಾಲದ ಸುತ್ತಾ ಅದಕ್ಕೆ ತಕ್ಕಂತೆ ಹೇಗೆ ಬದಲಾವಣೆ ಆಗುತ್ತಿದೆ, ಏನು ಬದಲಾವಣೆ ಆಗುತ್ತಿದೆ ಎಂಬುದನ್ನು ಗಮನಿಸಬೇಕು. ಹಾಗೆಯೇ ಆ ಬದಲಾವಣೆಗೆ ತಕ್ಕಂತೆ ಅದನ್ನು ಗಮನಿಸಿ ಮಾತನಾಡಬೇಕು, ಬರೆಯಬೇಕು. ಇದರ ಬದಲು ಹಳೆಯ 50 ವರ್ಷ, 60 ವರ್ಷ ಹಿಂದಿನ ಪರಿಸ್ಥಿತಿ ನೆನಪಿಸಿಕೊಂಡು ಮಾತನಾಡಿದರೆ ಅಂತಹವರು update ಆಗಿಲ್ಲ ಎಂದು ಕೊಳ್ಳಬೇಕಾಗುತ್ತದೆ. ದಲಿತರಂತು update ಆಗಿದ್ದಾರೆ, ಆಗುತ್ತಿದ್ದಾರೆ ಅದು ಬೌದ್ಧ ಸಂಸ್ಕೃತಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಆಂದೋಲನ-ಈ ಜೀವ ಈ ಜೀವನ | ಅಂಗನವಾಡಿ ಕಾರ್ಯಕರ್ತೆಯ ಅಸಾಮಾನ್ಯ ಕರ್ತವ್ಯಪ್ರಜ್ಞೆ..!

- ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು, ಮುಂಬೈ
28 ವರ್ಷ ಪ್ರಾಯದ ರೆಲು ವಸಾವೆ ಮಹಾರಾಷ್ಟ್ರದ ನಂದೂಬರ್ಾರ್ ಜಿಲ್ಲೆಯ ಆದಿವಾಸಿ ಪ್ರದೇಶದ, ಚಿಮಲ್ಖೇಡಿ ಎಂಬ ಹಳ್ಳಿಯ ಒಬ್ಬರು ಅಂಗನವಾಡಿ ಕಾರ್ಯ್ಯಕರ್ತೆ. ಈ ಹಳ್ಳಿಗೆ ರಸ್ತೆಗಳಿಲ್ಲ. ಹಾಗಾಗಿ, ಆ ಪ್ರದೇಶದ ಜನ ಎಲ್ಲಿಗೇ ಹೋಗಬೇಕಿದ್ದರೂ ದೋಣಿಯಲ್ಲಿ ಕುಳಿತು, ನರ್ಮದಾ ನದಿಯನ್ನು ದಾಟಬೇಕು.
ಚಿಮಲ್ಖೇಡಿಯೂ ಸೇರಿ ಏಳು ಹಳ್ಳಿಗಳ ಗರ್ಭಿಣಿಯರು ಮತ್ತು ಆರು ವರ್ಷದೊಳಗಿನ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವುದು, ಅವರಿಗೆ ಸರ್ಕಾರ ನಿಗದಿಪಡಿಸಿದ ಔಷಧಿ, ಹಾಲು, ಮೊಟ್ಟೆ ಮೊದಲಾದ ಪೋಷಕಾಂಶಯುಕ್ತ ಆಹಾರ ಒದಗಿಸುವುದು. ಸಾಮಾನ್ಯ ಸಂದರ್ಭಗಳಲ್ಲಿ ಮಕ್ಕಳು, ಮಹಿಳೆಯರು ದೋಣಿಯಲ್ಲಿ ಕುಳಿತು ತಾವೇ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ.
ಆದರೆ, ಕೆಲವು ವಿಶೇಷ ಅಥವಾ ತುರ್ತು ಸಂದರ್ಭಗಳಲ್ಲಿ, ರೆಲು ವಸಾವೆ ತಾವೇ ದೋಣಿಯಲ್ಲಿ ಅವರ ಮನೆಗಳಿಗೆ ಹೋಗಿ, ಲಸಿಕೆ ಹಾಕುವುದು, ಔಷಧಿನೀಡುವುದು ಮಾಡಬೇಕಾಗುತ್ತದೆ. ಬೆಳಗಿನ ಏಳುವರೆಗೆ ತನ್ನ ಅಂಗನವಾಡಿ ಕೇಂದ್ರಕ್ಕೆ ಹೋಗಿ, ಮಧ್ಯಾಹ್ನದ ತನಕ ಅಲ್ಲಿ ಕೆಲಸ ಮಾಡುತ್ತಾರೆ. ನಂತರ, ಔಷಧಿ, ಆಹಾರವಸ್ತು ಮತ್ತು ಮಕ್ಕಳನ್ನು ತೂಗುವ ತಕ್ಕಡಿ ಮೊದಲಾದವುಗಳನ್ನು ಹಿಡಿದುಕೊಂಡು, ದೋಣಿಯಲ್ಲಿ ಕುಳಿತು, ತನ್ನ ಕ್ಷೇತ್ರಮಿತಿಯಲ್ಲಿ ಬರುವ ಹಳ್ಳಿಗಳ ಮಕ್ಕಳು, ಗರ್ಭಿಣಿ ಯರ ಮನೆಗಳ `ಕ್ಷೇತ್ರ ಭೇಟಿ(ಫೀಲ್ಡ್ ವಿಸಿಟ್)’ಗಳಿಗೆ ಹೋಗುವುದು ಇವರು ಪ್ರತಿದಿನ ಮಾಡಬೇಕಾದ ಕೆಲಸ.
ಹೀಗೇ ನಡೆಯುತ್ತಿದ್ದ ರೆಲು ವಸಾವೆಯೆ ದಿನಚರಿಗೆ ಕೋವಿಡ್ ದಾಳಿಯ ಹಿನ್ನೆಲೆಯಲ್ಲಿ ಹೇರಲಾದ ಲಾಕ್ ಡೌನ್ ಭಾರೀ ಹೊಡೆತ ನೀಡಿತು. ಮಕ್ಕಳು ಮತ್ತು ಗಭರ್ಿಣಿಯರು ಅಂಗನವಾಡಿ ಕೇಂದ್ರಗಳಿಗೆ ಬರುವುದು ಸಂಪೂರ್ಣವಾಗಿ ನಿಂತಿತು. ರೆಲು ಸ್ವತಃ ಅವರುಗಳ ಮನೆಗೆ ಹೋಗಲಾಗದಂತಹ ಪರಿಸ್ಥಿತಿ. ಏಕೆಂದರೆ, ಹೊಳೆ ದಾಟಲು ದೋಣಿ ನಡೆಸಲು ಯಾರೂ ಮುಂದೆ ಬಾರರು. ಬಂದರೂ, ಅವರ ಸಮಯಕ್ಕೆ ಅನುಗುಣವಾಗಿ ರೆಲು ತನ್ನ ದಿನಚರಿಯನ್ನು ಹೊಂದಿಸಕೊಳ್ಳಬೇಕಾಗಿತ್ತಾದುದರಿಂದ, ಅವರ ಸಾಮಾನ್ಯ ದಿನಚರಿ ಅಸ್ತವ್ಯಸ್ತವಾಗುತ್ತಿತ್ತು. ಆದರೆ, ರೆಲು ಅಷ್ಟು ಬೇಗನೆ ತನ್ನ ಕರ್ತವ್ಯ ಪಾಲನೆಯಿಂದ ಹಿಮ್ಮಖರಾಗಲು ತಯಾರಿರಲಿಲ್ಲ. ಆಗ ಸ್ವತಃ ಅವರೇ ದೋಣಿ ನಡೆಸಿ, ತನ್ನ ಕರ್ತವ್ಯವನ್ನು ಪಾಲಿಸಲು ಮುಂದಾದರು!
ಏಪ್ರಿಲ್ ತಿಂಗಳಲ್ಲಿ ಅವರು ಸ್ಥಳೀಯ ಮೀನುಗಾರರೊಬ್ಬರಿಂದ ಒಂದು ಚಿಕ್ಕ ದೋಣಿಯನ್ನು ಕೇಳಿ ಪಡೆದರು. ಹೋಗುವ ಮತ್ತು ಬರುವ ಒಟ್ಟು ದೂರ 14 ಕಿಮಿ. ಎರಡೂ ಕೈಗಳಿಂದ ಹುಟ್ಟು ಹಾಕಿ, ಅಷ್ಟು ದೂರ ದೋಣಿ ನಡೆಸಲು ಅಪಾರ ದೈಹಿಕ ಶ್ರಮದ ಜೊತೆ ಅಷ್ಟೇ ಧೈರ್ಯ, ಆತ್ಮವಿಶ್ವಾಸವೂ ಬೇಕು. ಅದೂ ಅಲ್ಲದೆ, ರೆಲು ಚಿಕ್ಕಂದಿನಿಂದಲೂ ಹೊಳೆಯನ್ನು ನೋಡಿ ಬೆಳೆದವರಾದರೂ, ಹೀಗೆ ದೋಣಿ ನಡೆಸುವುದು ಅವರಿಗೆ ಮೊದಲ ಅನುಭವ. ಆದರೆ, ಕರ್ತವ್ಯಪ್ರಜ್ಞೆ ಅವರಿಗೆ ಇವೆಲ್ಲವನ್ನು ಹಿಮ್ಮೆಟ್ಟುವ ಅಪಾರ ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥೈರ್ಯವನ್ನು ನೀಡಿತು.
14 ಕಿಮಿ. ದೋಣಿ ನಡೆಸಿದ ನಂತರ, ಆದಿವಾಸಿಗಳ ಮನೆಗಳಿಗೆ ಹೋಗಲು ಸಾಮಾನುಗಳನ್ನು ಹೊತ್ತುಕೊಂಡು, ಗುಡ್ಡಗಳನ್ನು ಹತ್ತಿ ಇಳಿದು, ಕಾಲ್ನಡಿಗೆಯಲ್ಲಿ ಹೋಗಬೇಕು. ಮಳೆಗಾಲದ ತಿಂಗಳುಗಳಲ್ಲಿ ಮಳೆಯ ಜೊತೆ ನದಿಯಲ್ಲಿ ನೀರು ತುಂಬಿ ಹರಿಯುವಾಗ ರೆಲು ಗಾಬರಿಯಾಗುತ್ತಿದ್ದರೂ, ಕರ್ತವ್ಯಪ್ರಜ್ಞೆ ಅವರನ್ನು ಸೆಟೆದು ನಿಲ್ಲಿಸುತ್ತಿತ್ತು. ಹುಟ್ಟು ಹಾಕಿ ದೋಣಿ ನಡೆಸಿ, ಗುಡ್ಡಗಳನ್ನು ಹತ್ತಿಳಿದು, ಸಂಜೆ ಹೊತ್ತು ಮನೆ ತಲುಪಿದಾಗ, ಕೈಗಳಿಗೆ ಜೋಮು ಹಿಡಿದು, ಇಡೀ ಶರೀರ ಸುಸ್ತಾಗಿದ್ದರೂ, ಗಂಡ ಮತ್ತು ಇಬ್ಬರು ಚಿಕ್ಕ ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು. ಅವರ ಗಂಡ ರಮೇಶ್ ಕೂಡಾ ಹೆಂಡತಿಯ ಕರ್ತವ್ಯಪ್ರಜ್ಞೆಯನ್ನು ಮನಸಾ ಕೊಂಡಾಡುತ್ತಾರೆ.
ಬಿಗಿ ಲಾಕ್ ಡೌನ್ನ ದುರಿತ ಕಾಲದಲ್ಲೂ ರೆಲು ವಸಾವೆ ತನ್ನ ಕರ್ತವ್ಯವನ್ನು ಪಾಲಿಸಲು ಹಿಂಜರಿಯದ ಕಾರಣ, 7 ಜನ ಗರ್ಭಿಣಿಯರು, 25 ನವಜಾತ ಶಿಶುಗಳು ಮತ್ತು ಸುಮಾರು 138 ಮಕ್ಕಳು, ನಿಯಮಿತವಾಗಿ ಮೂಲಭೂತ ಸೌಲಭ್ಯಗಳಾದ ಔಷಧಿ ಮತ್ತು ಪೋಷಕಾಂಶಯುಕ್ತ ಆಹಾರ ಪಡೆಯಲು ಸಾಧ್ಯವಾಯಿತು. ರೆಲು ವಸಾವೆಯ ಈ ಅಸಾಮಾನ್ಯ ಕರ್ತವ್ಯಪ್ರಜ್ಞೆಯನ್ನು ಗುರುತಿಸಿ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಪರಿಷತ್ ಅವರನ್ನು ಕೊಂಡಾಡಿ, ಸನ್ಮಾನಿಸಿದರೂ, ಆ ಏಳು ಹಳ್ಳಿಗಳ ಜನತೆ ಇವರ ಋಣವನ್ನು ಅಷ್ಟು ಸುಲಭದಲ್ಲಿ ತೀರಿಸಲಾರರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ಬೌದ್ಧಿಕ ಕ್ರೌರ್ಯವೂ ಮನದ ಮಾತಿನ ಮೌನವೂ

- ನಾ ದಿವಾಕರ
ತಣ್ಣನೆಯ ಮೌನ ಎಂತಹ ಭೀಭತ್ಸ ಕ್ರೌರ್ಯವನ್ನೂ ಮೀರಿಸುವಂತಹ ಬರ್ಬರ ಮನಸ್ಥಿತಿಯ ಸಂಕೇತ. ಭಾರತ ಮೂಲತಃ ಹಿಂಸೆಯ ನಾಡು. ಇಲ್ಲಿ ಹಿಂಸೆಯ ಪರಿಭಾಷೆ ಅಗೋಚರ ತಂತುಗಳಲ್ಲಿ ಅಡಗಿರುತ್ತದೆ. ಇತಿಹಾಸ ಕಾಲದಿಂದಲೂ ಭಾರತದ ಒಡಲಲ್ಲಿ ಈ ತಂತುಗಳು ನೆಲೆ ಕಂಡುಕೊಂಡಿವೆ.
ಪ್ರತ್ಯಕ್ಷವಾಗಿ ನಡೆಯುವ ಹಿಂಸೆಯನ್ನೂ ಸಾಪೇಕ್ಷ ನೆಲೆಯಲ್ಲಿ ನೋಡುವ ಮೂಲಕ ನಾವು ನಮ್ಮ ನಡುವಿನ ಅಹಿಂಸಾತ್ಮಕ ಧೋರಣೆಯನ್ನು ಮುನ್ನೆಲೆಗೆ ತರುತ್ತೇವೆ. ನಾವು ತೊಟ್ಟ ಅಥವಾ ತೊಡುವ ಮಸೂರಗಳು ಹಿಂಸೆ ಮತ್ತು ಅಹಿಂಸೆಯನ್ನು ನಿರ್ಧರಿಸುತ್ತವೆ. ಜಾತಿ ಶ್ರೇಣೀಕರಣದ ನೆಲೆಯಲ್ಲೇ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಗಳೂ ಮೌಲ್ಯಯುತವಾಗಿಬಿಡುತ್ತವೆ.
ಭಾರತದ ಇತಿಹಾಸದಲ್ಲಿ ಅಹಿಂಸಾ ಬೋಧಕರು ಹೇರಳವಾಗಿ ಕಂಡುಬರುತ್ತಾರೆ. ಅಹಿಂಸೆಯನ್ನೇ ಮೂಲತತ್ವವನ್ನಾಗಿ ಬೋಧಿಸುವ ಜೈನ ಧರ್ಮವೂ ಭಾರತದಲ್ಲಿ ಹುಟ್ಟಿದೆ. ಇತರ ಯಾವುದೇ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅಹಿಂಸೆಯ ಬೋಧನೆ ಹೆಚ್ಚು ಪರಿಣಾಮಕಾರಿಯಾಗಿದೆ. ಏಕೆಂದರೆ ಇಲ್ಲಿ ಹಿಂಸೆ ಸಮಾಜದ ಅಂತರ್ಗತ ಭಾಗವಾಗಿದೆ.
ಒಂದು ಸಂಸ್ಕøತಿಯಾಗಿದೆ. ಒಂದು ಒಪ್ಪಿತ ನಾಗರಿಕತೆಯೂ ಆಗಿದೆ. ಇಲ್ಲಿ ಹಿಂಸೆಯ ವ್ಯಾಖ್ಯಾನ, ಹಿಂಸೆಗೊಳಗಾದ ವ್ಯಕ್ತಿ, ಸಮುದಾಯ ಅಥವಾ ಅಸ್ಮಿತೆಗಳನ್ನಾಧರಿಸಿರುತ್ತದೆ. ಹಾಗಾಗಿಯೇ ಸಾರ್ವಜನಿಕ ಸಂಕಥನಗಳಲ್ಲಿ ಕೆಲವು ಹಿಂಸೆಗಳು ಸ್ವೀಕಾರಾರ್ಹ ಸಹಜ ಘಟನೆಗಳಾಗಿಬಿಡುತ್ತವೆ. ಅಥವಾ ಅನಿವಾರ್ಯ ಎನಿಸಿಬಿಡುತ್ತವೆ. ಕಾರಣ ಇಷ್ಟೆ, ಹಿಂಸೆಗೊಳಗಾದವರು ಒಂದು ಪ್ರಬಲ ವರ್ಗದ ದೃಷ್ಟಿಯಲ್ಲಿ ಅರ್ಹರೂ ಆಗಿಬಿಡುತ್ತಾರೆ. ಈ ಪ್ರಬಲ ವರ್ಗವೇ ದೇಶದ ಸಾರ್ವಜನಿಕ ಅಭಿಪ್ರಾಯದ ಜನಕ ಆಗಿರುತ್ತದೆ.
ಹಾಗಾಗಿಯೇ ಶತಮಾನಗಳ ನಂತರವೂ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಕ್ಕೆ ಒಂದು ಮಾನವೀಯ ಸಂವೇದನೆಯ ಸ್ಪರ್ಶ ಇರಲೇ ಇಲ್ಲ. ದೇಶದ ಬಹುಸಂಖ್ಯಾತ ಜನರನ್ನು , ಮೂಲ ನಿವಾಸಿಗಳನ್ನು ಶೋಷಿತರಾಗಿಯೇ ಮುಂದುವರೆಸಿ ಶಿಕ್ಷಣ ಮತ್ತು ಸಾಮಾಜಿಕ ಘನತೆಯಿಂದ ವಂಚಿತರನ್ನಾಗಿ ಮಾಡಿದ್ದು ನಮ್ಮ ಲಿಖಿತ ಇತಿಹಾಸದಲ್ಲಿ ಹಿಂಸೆಯ ಚೌಕಟ್ಟಿನಲ್ಲಿ ಚರ್ಚೆಗೊಳಗಾಗಿಲ್ಲ.
ಪೇಶ್ವೆಯರ ಆಡಳಿತದಲ್ಲಿ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳು ಇಂದಿಗೂ ಸಹ ಹಿಂಸೆಯ ಪರಿಕಲ್ಪನೆಯಲ್ಲಿ ವ್ಯಾಖ್ಯಾನಕ್ಕೊಳಗಾಗಿಲ್ಲ. ಈ ಅಮಾನುಷ ಪದ್ಧತಿಗಳನ್ನು ಭಾರತೀಯ ಸಮಾಜದ ನ್ಯೂನತೆ ಎಂದಷ್ಟೇ ಗುರುತಿಸಲಾಗುತ್ತಿದೆಯೇ ಹೊರತು, ಇದು ಭಾರತೀಯ ಶ್ರೇಣೀಕೃತ ಸಮಾಜದಲ್ಲಿ ಅಂತರ್ಗತವಾಗಿದ್ದ ಬೌದ್ಧಿಕ ಕ್ರೌರ್ಯ ಮತ್ತು ಹಿಂಸಾತ್ಮಕ ಧೋರಣೆಯ ಒಂದು ಆಯಾಮ ಎನ್ನುವ ವಿಶ್ಲೇಷಣೆಗಳು ಅಪರೂಪ.
ಈ ಬೌದ್ಧಿಕ ದಾರಿದ್ರ್ಯಕ್ಕೆ ಮೂಲ ಕಾರಣ ಎಂದರೆ ನಾವು ನಮ್ಮ ಸಮಾಜದಲ್ಲಿನ ಬೌದ್ಧಿಕ ಹಿಂಸೆ ಮತ್ತು ಕ್ರೌರ್ಯವನ್ನು ವ್ಯವಸ್ಥೆಯ ಒಂದು ಲೋಪ ಎಂದೇ ಭಾವಿಸಿದ್ದೇವೆಯೇ ಹೊರತು, ಇದು ಒಂದು ಸಮಾಜೋ ಸಾಂಸ್ಕೃತಿಕ ವ್ಯಸನ ಎಂದು ಭಾವಿಸಿಯೇ ಇಲ್ಲ.
ಹಾಗಾಗಿ ಸಮಕಾಲೀನ ಸಂದರ್ಭದಲ್ಲಿ ನಡೆದಿರುವ ಮತ್ತು ಈ ಹೊತ್ತಿನಲ್ಲೂ ಕಂಡುಬರುತ್ತಿರುವ ಕ್ರೌರ್ಯ ಮತ್ತು ಹಿಂಸೆ ಆಳುವ ವರ್ಗಗಳ ದೃಷ್ಟಿಯಲ್ಲಿ ಕಾನೂನು ಸಮಸ್ಯೆಯಾಗಿ ಕಂಡುಬಂದರೆ, ಸಮಾಜದ ದೃಷ್ಟಿಯಲ್ಲಿ ಸಹಜ ಸ್ವಾಭಾವಿಕ ಘಟನೆಗಳಾಗಿ ಕಂಡುಬರುತ್ತವೆ. ಹಥ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ, ಊನ ಗ್ರಾಮದಲ್ಲಿ ವ್ಯವಸ್ಥಿತ ಹಲ್ಲೆಗೊಳಗಾದ ಅಸ್ಪøಶ್ಯರು, ಒಂದು ಮಾಂಸದ ತುಂಡಿಗೆ ಬಲಿಯಾದ ಅಕ್ಲಾಖ್ ಮತ್ತು ಮಲಗುಂಡಿಯಲ್ಲಿ ಬಿದ್ದು ಅಸುನೀಗುತ್ತಿರುವ ಸ್ವಚ್ಚತಾ ಕಾರ್ಮಿಕರು ಹಿಂಸೆಯ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ.
21ನೆಯ ಶತಮಾನದ ಮೂರನೆಯ ದಶಕದಲ್ಲೂ ಅಸ್ಪೃಶ್ಯ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಭಾರತೀಯ ಸಮಾಜದ ಅಭಿಪ್ರಾಯ ಜನಕರಿಗೆ ಹಿಂಸೆ ಎನಿಸುವುದಿಲ್ಲ. ಕೇವಲ ಒಂದು ಬಗೆಹರಿಸಬಹುದಾದ ಸಮಸ್ಯೆ ಎನಿಸುತ್ತದೆ. ಕಾಶ್ಮೀರದ ಉಗ್ರಗಾಮಿಗಳಿಂದ ನಡೆಯುವ ಹತ್ಯೆಗಳು ಹಿಂಸೆಯ ಪರಾಕಾಷ್ಠೆ ಎನಿಸುತ್ತದೆ.
ಕಂಬಾಲಪಲ್ಲಿ, ಕರಂಚೇಡು, ಖೈರ್ಲಾಂಜಿ, ಲಕ್ಷ್ಮಣಪುರಬಾತೆ, ಬತಾನಿತೊಲ, ತ್ಸೆಂಡೂರು ಇವಾವುದೂ ಹಿಂಸಾಕಾಂಡ ಎನಿಸುವುದಿಲ್ಲ. ಹತ್ತಾರು ಜನರನ್ನು ಬಲಿತೆಗೆದುಕೊಂಡ ಮುಂಬೈ ಭಯೋತ್ಪಾದಕ ದಾಳಿ ಶತಮಾನಗಳ ಕಾಲ ಭಾರತದ ಭೂಪಟದಲ್ಲಿ ಕಪ್ಪುಚುಕ್ಕೆಯಾಗುವಂತಹ ಹಿಂಸಾಕಾಂಡದಂತೆ ಕಾಣುತ್ತದೆ. ಸಾವಿರಾರು ಅಮಾಯಕರನ್ನು ಬಲಿಪಡೆದ ಗುಜರಾತ್ ಹಿಂಸಾಕಾಂಡ ರಾಜಧರ್ಮದ ವೈಫಲ್ಯದಂತೆ ಮಾತ್ರವೇ ಕಾಣುತ್ತದೆ.
ಹಿಂಸೆಯನ್ನು ನಾವು ಹೇಗೇ ಸಾಪೇಕ್ಷಗೊಳಿಸಿಬಿಟ್ಟಿದ್ದೇವೆ ಎನ್ನಲು ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ. ಹಿಂಸೆಗೊಳಗಾಗುವವರು ಯಾರು ಮತ್ತು ಹಿಂಸೆಯ ಜನಕರು ಯಾರು ಎನ್ನುವ ಪ್ರಶ್ನೆಗಳೇ ನಮ್ಮ ದೇಶದಲ್ಲಿ ಕ್ರೌರ್ಯ ಮತ್ತು ಹಿಂಸೆಯ ಸಂಕಥನವನ್ನು ರೂಪಿಸುತ್ತದೆ. ಇದು ಮನುವಾದಿ ಬ್ರಾಹ್ಮಣ್ಯದ ಒಂದು ಚಾರಿತ್ರಿಕ ಕೊಡುಗೆಯಾದರೆ ಮತ್ತೊಂದೆಡೆ ಭಾರತೀಯ ಸಮಾಜದಲ್ಲಿ ಬೇರೂರಿರುವ ಊಳಿಗಮಾನ್ಯ ಧೋರಣೆಯ ಕೊಡುಗೆಯೂ ಹೌದು. ಕೋವಿದ್ ಸಂದರ್ಭದಲ್ಲಿ ಮೂರು ತಿಂಗಳ ಲಾಕ್ ಡೌನ್ ಬಂಧನದಿಂದ ಕಂಗೆಟ್ಟು ವಿಚಲಿತವಾದ ಒಂದು ಸಮಾಜಕ್ಕೆ ಕಾಶ್ಮೀರದ ಜನತೆ ಒಂದು ವರ್ಷದ ಕಾಲ ದಿಗ್ಬಂಧನಕ್ಕೆ ಒಳಗಾಗಿದ್ದುದು ಹಿಂಸೆ ಎನಿಸಲೇ ಇಲ್ಲ.
ಕಾರಣ ಏನೆಂದರೆ ದೈಹಿಕ ಹಿಂಸೆಯನ್ನಷ್ಟೇ ನಾವು ಹಿಂಸೆಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತೇವೆ. ಬೌದ್ಧಿಕ ಹಿಂಸೆಯನ್ನು ಮಾನವ ಸಹಜ ಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ಭಾರತದ ಶ್ರೇಣೀಕೃತ ಸಮಾಜದಲ್ಲಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ನರನಾಡಿಗಳಲ್ಲಿ ಹರಿಯುತ್ತಿರುವುದು ಬೌದ್ಧಿಕ ಕ್ರೌರ್ಯ ಮತ್ತು ಮಿದುಳಿನಲ್ಲಿ ಸದಾ ಜಾಗೃತವಾಗಿರುವುದು ಬೌದ್ಧಿಕ ಹಿಂಸೆ.
ಹಾಗಾಗಿಯೇ ತಲೆಯ ಮೇಲೆ ಮಲ ಹೊರುವುದು ನಮಗೆ ಕಸುಬು ಎನಿಸುತ್ತದೆ, ಹಿಂಸೆ ಎನಿಸುವುದಿಲ್ಲ. ಈ ಧೋರಣೆಯ ಒಂದು ಆಯಾಮವನ್ನು ನಾವು ಇಂದಿನ ರೈತ ಹೋರಾಟದ ನಡುವೆ ಕಾಣುತ್ತಿದ್ದೇವೆ. ಒಂದು ಪ್ರಜಾಸತ್ತಾತ್ಮಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಬೌದ್ಧಿಕ ಕ್ರೌರ್ಯ ನೆಲೆ ಮಾಡಿರುವುದನ್ನು ಭಾರತ ಸರ್ಕಾರದ ಧೋರಣೆಯಲ್ಲಿ ಕಾಣುತ್ತಿದ್ದೇವೆ.
ನವಂಬರ್ 26 , 2020ರಂದು ಆರಂಭವಾದ ರೈತರ ಪ್ರತಿಭಟನೆಗೆ ಇಂದಿಗೆ 40 ದಿನಗಳಾಗುತ್ತದೆ. ಒಂದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸಾರ್ವಭೌಮ ಪ್ರಜೆಗಳ ನಡುವೆ ಉಗ್ರಗಾಮಿಗಳನ್ನು, ಭಯೋತ್ಪಾದಕರನ್ನು ಹೆಕ್ಕಿ ತೆಗೆಯುವಷ್ಟು ಕ್ರೌರ್ಯ ಭಾರತದ ಮಣ್ಣಲ್ಲಿ ಇರಲು ಸಾಧ್ಯವೇ ? ಹೌದು ಎಂದೇ ಹೇಳಬೇಕಾಗುತ್ತದೆ.
ಏಕೆಂದರೆ ಇದೇ ಆಡಳಿತ ವ್ಯವಸ್ಥೆಯಲ್ಲಿ ಹತ್ತು, ಹದಿನೈದರ ಹರೆಯದ ಮಕ್ಕಳೂ ಉಗ್ರಗಾಮಿಗಳ ಪಟ್ಟಿಗೆ ಸೇರಿ ಗುಂಡೇಟಿಗೆ ಬಲಿಯಾಗಿದ್ದಾರೆ. ಇದೇ ಆಡಳಿತ ವ್ಯವಸ್ಥೆಯಲ್ಲಿ ಸಜೀವ ದಹನಕ್ಕೊಳಗಾದ ಅಮಾಯಕ ಜೀವಗಳು ನ್ಯಾಯವಂಚಿತವಾಗುತ್ತವೆ. ತಮ್ಮ ಸಾಂವಿಧಾನಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾರ್ಥಿ ಯುವಜನರಲ್ಲಿ “ ನಗರ ನಕ್ಸಲರನ್ನು ತುಕಡೆ ತುಕಡೆ ಗುಂಪನ್ನು ” ಗುರುತಿಸಲಾಗುತ್ತದೆ.
ಇದೇ ಮಣ್ಣಲ್ಲಿ, ತಮ್ಮ ಅರಣ್ಯ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ ಹೋರಾಡುವ ಆದಿವಾಸಿಗಳನ್ನು ಉಗ್ರಗಾಮಿಗಳಂತೆ ಕಾಣಲಾಗುತ್ತದೆ. ನಿಷ್ಕಾರುಣ್ಯವಾಗಿ ಅವರ ಶತಮಾನಗಳ ಮೂಲ ನೆಲೆಗಳನ್ನು ಧ್ವಂಸ ಮಾಡಲಾಗುತ್ತದೆ. ಇದೇ ಮಣ್ಣಿನಲ್ಲಿ ಒಂದು ಪ್ರಾಣಿಯ ಪಾವಿತ್ರ್ಯತೆಗಾಗಿ ನೂರಾರು ಮನುಜ ಜೀವಗಳನ್ನು ಬಲಿ ಕೊಡಲಾಗುತ್ತದೆ.
ಇದೇ ಮಣ್ಣಿನಲ್ಲಿ ಜಾತಿ, ಮತಧರ್ಮ ಮತ್ತು ಸಂಸ್ಕೃತಿ ರಕ್ಷಣೆಗಾಗಿ ನರಬಲಿ ನೀಡುವುದನ್ನು ಸಹಜ ಪ್ರಕ್ರಿಯೆಯಂತೆ ಸ್ವೀಕರಿಸಲಾಗಿದೆ. ಒಂದು ಪೂಜಾ ಸ್ಥಳ, ಒಂದು ಮಂದಿರ, ಒಂದು ಮಸೀದಿ ಅಥವಾ ಇಗರ್ಜಿ ಹಲವು ಜೀವಗಳಿಗೆ ಪ್ರಾಣಾಂತಿಕವಾಗುವ ಒಂದು ಸಮಾಜೋ ಸಾಂಸ್ಕøತಿಕ ವ್ಯವಸ್ಥೆಯನ್ನೂ ನಾವು ಕಂಡಿದ್ದೇವೆ. ಈ ವಿದ್ಯಮಾನಗಳಲ್ಲಿ ಕಂಡುಬರುವ ದೈಹಿಕ ಹಿಂಸೆಗಿಂತಲೂ ನಮ್ಮನ್ನು, ಅಂದರೆ ನಾಗರಿಕ ಪ್ರಜ್ಞೆ ಇರುವ ಜನರನ್ನು, ಹೆಚ್ಚು ಕಾಡಬೇಕಿರುವುದು ಈ ಮನಸುಗಳಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ.
ಈ ಬೌದ್ಧಿಕ ಕ್ರೌರ್ಯವನ್ನು ನಾವಿಂದು ಸಂಸದೀಯ ಪ್ರಜಾತಂತ್ರದ ಕಟಕಟೆಯಲ್ಲಿ ಕಾಣುತ್ತಿದ್ದೇವೆ. ಭಾರತದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯ ಆವರಣದಲ್ಲಿ ಕಾಣುತ್ತಿದ್ದೇವೆ. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ಈಗಾಗಲೇ ನಮ್ಮ ಆಡಳಿತ ವ್ಯವಸ್ಥೆಯ ನಿರ್ವೀರ್ಯತೆ, ನಿರ್ಲಜ್ಜತೆ ಮತ್ತು ಕ್ರೂರ ಮುಖವಾಡವನ್ನು ಕಳಚಿಹಾಕಿದೆ.
ರಾಜಧಾನಿಯ ನಾಲ್ಕೂ ಕಡೆ ನೆರೆದಿರುವ ಲಕ್ಷಾಂತರ ರೈತಾಪಿಯ ನಡುವೆ ಖಲಿಸ್ತಾನಿಗಳು, ಭಯೋತ್ಪಾದಕರು, ಉಗ್ರಗಾಮಿಗಳು, ನಗರ ನಕ್ಸಲರು, ದೇಶದ್ರೋಹಿಗಳು ಅಥವಾ ‘ ತುಕಡೆ ತುಕಡೆ ಗುಂಪುಗಳು’ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಈ ಹೋರಾಟಗಾರರೊಡನೆ ಕೇಂದ್ರ ಸಚಿವರು ಭೋಜನದ ಸವಿ ಉಂಡಿದ್ದಾರೆ. ಆದರೂ ಈ ನೊಂದ ಜೀವಗಳಿಗೆ ಒಂದು ಮಾನವೀಯ ಸ್ಪಂದನೆ, ಅವರ ಸಮಸ್ಯೆಗಳಿಗೆ ಸಂವೇದನಾಶೀಲ ಸ್ಪರ್ಶ ದೊರೆಯುತ್ತಿಲ್ಲ.
ಈ ಹೋರಾಟ ತಡೆಯಲಸಾಧ್ಯವಾದ ಚಳಿಯಲ್ಲಿ ನಡೆಯುತ್ತಿದೆ, ಕಳೆದ ಹಲವು ದಿನಗಳಿಂದ ಮಳೆಯ ಪ್ರಮಾಣ, ಶೀತಲ ಗಾಳಿ ಹೆಚ್ಚಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ರೈತರು ಅಸುನೀಗಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿ ಒಂದು ಸರ್ವಾಧಿಕಾರಿ ಆಡಳಿತವೇ ಇದ್ದಿದ್ದರೂ ಬಹುಶಃ, ಮೂರು ಕೃಷಿ ಮಸೂದೆಗಳನ್ನು ಭಿನ್ನಾಭಿಪ್ರಾಯಗಳು ಬಗೆಹರಿಯುವವರೆಗೂ ಅಮಾನತಿನಲ್ಲಿರಿಸುವ ಆಶ್ವಾಸನೆ ನೀಡಿ ಮುಷ್ಕರ ಕೊನೆಗೊಳಿಸಲು ಯತ್ನಿಸುತ್ತಿತ್ತು.
ಆದರೆ ಒಂದು ಚುನಾಯಿತ ಸರ್ಕಾರ ಈ ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಂಡಿದೆ. ಮುಷ್ಕರ ನಿರತ ರೈತರ ಬಳಿಗೆ ಖುದ್ದಾಗಿ ಒಮ್ಮೆ ಭೇಟಿ ನೀಡುವ ಸಂಯಮವೂ ಇಲ್ಲದ ಪ್ರಧಾನಮಂತ್ರಿ, ಕನಿಷ್ಟ ಮಡಿದ ರೈತರಿಗೆ ಅನುಕಂಪ ಸೂಚಿಸುವ ಮಾತುಗಳನ್ನೂ ಆಡದಿರುವುದು ಈ ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯವನ್ನು ಸೂಚಿಸುತ್ತದೆ.
ದೆಹಲಿ ಗಡಿಯಲ್ಲಿ ಸಂಭವಿಸಿರುವ ಸಾವುಗಳು ವ್ಯವಸ್ಥೆಯ ನಿಷ್ಕ್ರಿಯತೆಯ ಫಲ ಎಂದರೂ ತಪ್ಪೇನಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಠಮಾರಿ ಧೋರಣೆ ಸಲ್ಲದು ಎನ್ನುವ ಕನಿಷ್ಟ ನಾಗರಿಕ ಪ್ರಜ್ಞೆ ಆಡಳಿತ ನಿರ್ವಹಣೆ ಮಾಡುವವರಲ್ಲಿ ಇರಬೇಕಲ್ಲವೇ ? ಹೆಂಗಸರು, ಮಕ್ಕಳು, ವೃದ್ಧರು, ಯುವಕರು, ನಿವೃತ್ತ ಯೋಧರು ಹೀಗೆ ವಯೋಮಾನ, ಲಿಂಗ, ಜಾತಿ, ಧರ್ಮ ಯಾವುದೇ ಬೇಧವಿಲ್ಲದೆ ರೈತರು ತಮ್ಮ ಹೋರಾಟ ಮುಂದುವರೆಸಿದ್ದಾರೆ.
ಕೊರೆವ ಚಳಿಯಲ್ಲಿ, ಸುರಿವ ಮಳೆಯ ನಡುವೆ ತಮ್ಮವರನ್ನು ಕಳೆದುಕೊಳ್ಳುತ್ತಿರುವ ರೈತರನ್ನು ಕುರಿತು “ ನೀವು ಮುಷ್ಕರ ಹಿಂಪಡೆಯಿರಿ, ನಿಮ್ಮ ಅನುಮಾನಗಳನ್ನು ಪರಿಶೀಲಿಸುತ್ತೇವೆ, ಅಲ್ಲಿಯವರೆಗೂ ಮೂರು ಕೃಷಿ ಮಸೂದೆಗಳ ಅನುಷ್ಟಾನವನ್ನು ತಡೆಹಿಡಿಯುತ್ತೇವೆ ” ಎಂದು ಹೇಳಿದ್ದರೂ ಸಾಕಿತ್ತು, ಈ ಸರ್ಕಾರಕ್ಕೆ ಮತ್ತು ಸರ್ಕಾರವನ್ನು ನಿರ್ವಹಿಸುವವರಿಗೆ ಮನುಷ್ಯತ್ವ ಇದೆ ಎಂದು ಹೇಳಬಹುದಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ಮಡಿದ 25ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಪರಿಹಾರ ನೀಡಲೂ ಒಪ್ಪದ ಕೇಂದ್ರ ಸರ್ಕಾರ, ಈ ಕುರಿತ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಕೈತೊಳೆದುಕೊಂಡಿತ್ತು. ಈಗ ರಾಜಧಾನಿಯ ಪಕ್ಕದಲ್ಲೇ ರೈತರು ಸಾಯುತ್ತಿದ್ದಾರೆ, ನಮ್ಮ ಪ್ರಧಾನಮಂತ್ರಿಯವರು ತಮ್ಮ ಮನದ ಮಾತಿನಲ್ಲಿ ಮಾರುಕಟ್ಟೆಗೆ ಸಾಂತ್ವನದ ಮಾತುಗಳನ್ನಾಡುತ್ತಿದ್ದಾರೆ.
25 ವರ್ಷಗಳಲ್ಲಿ ಆತ್ಮಹತ್ಯೆಗೆ ಬಲಿಯಾದ ಮೂರೂವರೆ ಲಕ್ಷ ರೈತರಿಗೆ ಅನುಕಂಪ ತೋರದ ಆಡಳಿತ ವ್ಯವಸ್ಥೆಯಿಂದ ಇಲ್ಲಿ ಸತ್ತ 50 ರೈತರಿಗೆ ಸಾಂತ್ವನ ಬಯಸುವುದೂ ಸಹ ತಪ್ಪೇನೋ ಎನಿಸುತ್ತದೆ. ಅಸಂಖ್ಯಾತ ಜನರ ಮಾರಣಹೋಮಗಳನ್ನು ಸಂಭ್ರಮಿಸುತ್ತಾ, ಅಮಾಯಕರ ಸಮಾಧಿಗಳ ಮೇಲೆ ನುಣುಪಾದ ಹಾಸುಗಲ್ಲುಗಳನ್ನು ಹರಡಿ ಅಧಿಕಾರದ ಜಗನ್ನಾಥ ರಥಚಕ್ರಗಳನ್ನು ಉರುಳಿಸಿದ ಒಂದು ಪರಂಪರೆಯಿಂದ ಮಾನವೀಯ ಸ್ಪಂದನೆ, ಸಂವೇದನೆ ಮತ್ತು ಅನುಕಂಪ ನಿರೀಕ್ಷಿಸುವುದಾದರೂ ಹೇಗೆ ? ಅನ್ಯರ ನೋವಿನಿಂದ ವಿಚಲಿತಗೊಳ್ಳದ, ಮತ್ತೊಬ್ಬರ ಸಾವನ್ನು ಸಂಭ್ರಮಿಸುವ ಮನಸ್ಸುಗಳಷ್ಟೇ ಹೀಗಿರಲು ಸಾಧ್ಯ .
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯ ಎಂದು ಪರಿಗಣಿಸಲಾಗುವ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವ ತನ್ನ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿತ್ತು, ಹಕ್ಕುಗಳನ್ನು ಕಸಿದುಕೊಂಡಿತ್ತು. ಆದರೆ ಅಂದೂ ಸಹ ಈ ರೀತಿಯ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ ಕಂಡುಬಂದಿರಲಿಲ್ಲ. ಕಣ್ಣೆದುರಿನಲ್ಲೇ ನಡೆಯುವ ಸಾವು ನೋವುಗಳಿಗೂ ಸ್ಪಂದಿಸದಿರುವಷ್ಟು ಕ್ರೌರ್ಯ ಭಾರತದ ಪ್ರಜೆಗಳು ಕಂಡಿರಲೂ ಇಲ್ಲ.
ಇಡೀ ದೇಶದ ಪ್ರಜ್ಞಾವಂತ ಮನಸುಗಳನ್ನು ವಿಚಲಿತಗೊಳಿಸುತ್ತಿರುವ ಸಾವು ನೋವಿನ ಚಿತ್ರಣಗಳು ಮನದ ಕದವ ಬಡಿಯದೆ ಇದ್ದರೆ ಆ ಮನದಿಂದ ಸಾಂತ್ವನದ, ಸಂವೇದನೆಯ ಮಾತುಗಳು ಬರುವುದಾದರೂ ಹೇಗೆ ? ಮೌನವೇ ಸಾಕು ಕ್ರೌರ್ಯದ ಛಾಯೆ ಕವಿಯಲು.
ದೆಹಲಿಯ ಗಡಿಯಲ್ಲಿ ಕವಿದಿರುವ ಕಾರ್ಮೋಡಗಳಲ್ಲಿ ತುಂಬಿರುವುದು ಜಲಬಿಂದುಗಳಲ್ಲ, ಈ ದೇಶದ ಆಡಳಿತ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನುಷ ಧೋರಣೆಯ ಜಲಾಗಾರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ಲೈಫ್ ಸ್ಟೈಲ್7 days ago
ಪಕ್ಷಿ ಪರಿಚಯ | ಬೆಳ್ಗಣ್ಣ
-
ದಿನದ ಸುದ್ದಿ7 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್7 days ago
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!
-
ದಿನದ ಸುದ್ದಿ7 days ago
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?
-
ದಿನದ ಸುದ್ದಿ3 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ
-
ದಿನದ ಸುದ್ದಿ4 days ago
ದಾವಣಗೆರೆ | ಜ.18 ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣದ ಉದ್ಘಾಟನೆ
-
ದಿನದ ಸುದ್ದಿ6 days ago
ಅಪಘಾತ | ಗೋವಾಕ್ಕೆ ಹೊರಟಿದ್ದ ದಾವಣಗೆರೆ ಲೇಡಿಸ್ ಕ್ಲಬ್ ನ 13 ಮಂದಿ ದುರ್ಮರಣ