Connect with us

ದಿನದ ಸುದ್ದಿ

ಕೋವಿಡ್-19 ಹಿನ್ನೆಲೆ ಸರಳ ಮತ್ತು ಮಾಲಿನ್ಯರಹಿತ ದೀಪಾವಳಿ ಆಚರಣೆಗೆ ಮಾರ್ಗಸೂಚಿಗಳು

Published

on

ಸುದ್ದಿದಿನ,ದಾವಣಗೆರೆ : ನ.14 ರಿಂದ 17 ರವರೆಗೆ ದೀಪಾವಳಿ ಹಬ್ಬ ಆಚರಣೆ ಇದ್ದು, ಪ್ರಸ್ತುತ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಮತ್ತು ಮಾಲಿನ್ಯ ರಹಿತವಾಗಿ ಆಚರಿಸುವ ಸಂಬಂಧ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ಮಾರ್ಗಸೂಚಿ ಬಿಡುಗಡೆಗೊಳಿಸಿ ಎಲ್ಲಾ ಇಲಾಖಾ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕೆಂದು ಆದೇಶಿಸಿದೆ.

ದಿ ಎಕ್ಸ್‍ಪ್ಲೊಸಿವ್ ರೂಲ್ಸ್ 2008 ನಿಯಮ 84 ರ ಪ್ರಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಮಾತ್ರ ಜಿಲ್ಲಾಡಳಿತವು ನಿಗದಿಪಡಿಸುವ ಸ್ಥಳದಲ್ಲಿ ಅಲ್ಪ ಪ್ರಮಾಣದಲ್ಲಿ ಪಟಾಕಿ ಮಾರಾಟ ಮಾಡಲು ನಿಗದಿತ ಅವಧಿಗೆ ಮಾತ್ರ ತಾತ್ಕಾಲಿಕ ಪರವಾನಿಗೆಯನ್ನು ನೀಡಲಾಗುತ್ತಿರುತ್ತದೆ ಮತ್ತು ಸ್ಪೋಟಕ ಇಲಾಖೆ, ಮಂಗಳೂರು ಅವರಿಂದ ಪಡೆದ ಪರವಾನಿಗೆದಾರರು ಸಹ ಹಬ್ಬದ ಸಮಯದಲ್ಲಿ ಜಿಲ್ಲಾಡಳಿತವು ಸೂಚಿಸುವ ಸ್ಥಳದಲ್ಲಿ ಪಟಾಕಿ ಮಾರಾಟವನ್ನು ಮಾಡುತ್ತಿರುತ್ತಾರೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 ಸಾಂಕ್ರಾಮಿಕ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಈ ಸೋಂಕಿನ ಸರಪಳಿಯನ್ನು ಕತ್ತರಿಸಲು ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇರುತ್ತದೆ.

ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ದೀಪಾವಳಿ ಹಬ್ಬ ಆಚರಣೆ ಹಾಗೂ ಹಬ್ಬದಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಮಾರಾಟ ಮಾಡುವುದು ಮತ್ತು ಸಿಡಿಸುವ ಕುರಿತು ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಈ ಕೆಳಕಂಡಂತೆ ಮಾರ್ಗಸೂಚಿ ಹೊರಡಿಸಿದ್ದು ಈ ಮಾರ್ಗಸೂಚಿಗಳು ಹಬ್ಬದ ಆಚರಣೆ ಮುಗಿಯುವವರೆಗೆ ಮಾತ್ರ ಜಾರಿಯಲ್ಲಿರುತ್ತದೆ.

ಈ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ತಾಲ್ಲೂಕು ಆಡಳಿತ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾ.ಪಂ ಮತ್ತು ಸಂಬಂಧಿಸಿದ ಇಲಾಖೆ/ಪ್ರಾಧಿಕಾರಗಳು ಅನುಷ್ಟಾನಗೊಳಿಸಬೇಕೆಂದು ಆದೇಶಿಸಿರುತ್ತಾರೆ.

ಮಾರ್ಗಸೂಚಿಗಳು

  1. ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡತಕ್ಕದ್ದು.
  2. ಪಟಾಕಿ ಮಾರಾಟದ ಮಳಿಗೆಗಳನ್ನು ನ.1 ರಿಂದ 17 ರವರೆಗೆ ಮಾತ್ರ ತೆರೆದಿರತಕ್ಕದ್ದು.
  3. ಪರವಾನಿಗೆದಾರರು ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಗಳನ್ನು ತೆರೆಯಬಾರದು.
  4. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ/ಪ್ರಾಧಿಕಾರಗಳು ಅನುಮತಿಸತಕ್ಕದ್ದು.
  5. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 6 ಮೀಟರ್ ಅಂತರವಿರಬೇಕು.
  6. ಪ್ರತಿಯೊಂದು ಮಳಿಗೆಗಳಲ್ಲಿ ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರದಿಂದ ನೀಡಿರುವ ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು. ಪರವಾನಗಿ ಪತ್ರವನ್ನು ಪಡೆದಂತವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.
  7. ಪಟಾಕಿ/ಸಿಡಿಮದ್ದುಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಕನಿಷ್ಟ 06 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು. ಪಟಾಕಿ ಮಾರುವ ವ್ಯಾಪಾರಸ್ಥರು ಮತ್ತು ಖರೀದಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸತಕ್ಕದ್ದು.
  8. ಪಟಾಕಿ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವುದು.
  9. ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಸಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ/ಕಾರ್ಪೊರೇಷನ್/ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು.
  10. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Published

on

ಸುದ್ದಿದಿನಡೆಸ್ಕ್: 2024-25ನೇ ಸಾಲಿನ ರಾಜ್ಯ ಮುಂಗಡ ಪತ್ರ ಹಿನ್ನೆಲೆಯಲ್ಲಿ ರೈತ ಸಂಘಗಳ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ಸಭೆ ನಡೆಸಿದರು.ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಮುಂಗಡ ಪತ್ರ ಮಂಡನೆ ಹಿನ್ನೆಲೆಯಲ್ಲಿ ರೈತ ನಾಯಕರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಲಾಗಿದೆ. ಬಜೆಟ್‌ನಲ್ಲಿ ಸರ್ಕಾರದ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಗೃಹಲಕ್ಷ್ಮಿ, ಪಡಿತರ ಸಹಾಯಧನದ ಬಾಕಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಈ ಸಂಬಂಧ ಹೈಕೋರ್ಟ್ ನೀಡುವ ಆದೇಶವನ್ನು ಪಾಲಿಸಲಾಗುವುದು ಎಂದು ಪುನರುಚ್ಚರಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ; 7 ರಂದು ಬಜೆಟ್ ಮಂಡನೆಗೆ ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಮಾರ್ಚ್ 7 ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮಾರ್ಚ್ 4 ರಿಂದ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಷ್ಟು ದಿನ ಅಧಿವೇಶನ ನಡೆಸಬೇಕು ಎನ್ನುವುದನ್ನು ಕಲಾಪ ಸಲಹಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ

Published

on

ಸುದ್ದಿದಿನ,ದಾವಣಗೆರೆ: ನಮಗೆ ಇಂದು ಭಕ್ತಿ ಮತ್ತು ಜ್ಞಾನ ಎರಡೂ ಮುಖ್ಯ. ಭಕ್ತಿ ಹೆಚ್ಚಿಸುವ ದೇವಾಲಯಗಳ ಜತೆಯಲ್ಲೇ ಜ್ಞಾನ ವಿಸ್ತರಿಸುವ ವಿದ್ಯಾಲಯಗಳೂ ಹೆಚ್ಚಬೇಕು ಎಂದು ಹೊಸದುರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಹಳೆಕುಂದುವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದಿನ ಮಕ್ಕಳನ್ನು ಐಎಎಎಸ್, ಕೆಎಎಸ್‌ನಂತಹ ಉನ್ನತ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು. ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು. ದುಂದುವೆಚ್ಚ ಕಡಿಮೆ ಮಾಡಬೇಕು ಎಂದೂ ಸಲಹೆ ನೀಡಿದರು.

ಶ್ರೀಕೃಷ್ಣನು ಕನಕನಿಗೆ, ಶ್ರೀರಾಮನು ಶಬರಿಗೆ ಒಲಿದಿದ್ದು ಜಾತಿಯಿಂದಲ್ಲ; ಅವರಲ್ಲಿದ್ದ ಭಕ್ತಿಯಿಂದಾಗಿ. ಭಕ್ತಿ ಮತ್ತು ಭಕ್ತನಿಗೆ ಜಾತಿ ಇಲ್ಲ. ಎಲ್ಲ ಸ್ವಾಮೀಜಿಗಳನ್ನು, ವರ್ಗದವರನ್ನು ಒಗ್ಗೂಡಿಸಿದ ಕುಂದುವಾಡ, ಸಾಮರಸ್ಯದ ಗ್ರಾಮವಾಗಿದೆ. ಪ್ರತಿ ಗ್ರಾಮದಲ್ಲೂ ಇಂತಹ ವಾತಾವರಣ ಇರಬೇಕು ಎಂದು ಆಶಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಆಂಜನೇಯನಿಗೆ ಸೀಮಿತ ಜಾತಿಯ ಭಕ್ತರಿಲ್ಲ. ಆತ ಜಾತ್ಯತೀತ ವ್ಯಕ್ತಿ. ಭಕ್ತಿಗೆ ಹೆಸರಾದ ಆಂಜನೇಯ ಹಾಗೂ ಸಮಾನತೆಗೆ ಹೆಸರಾದ ಬಸವೇಶ್ವರರ ದೇಗುಲ ಪ್ರತಿಷ್ಠಾಪನೆಯನ್ನು ಕುಂದುವಾಡ ಗ್ರಾಮಸ್ಥರು ಭಾವೈಕ್ಯ, ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಮಾಡುತ್ತಿದ್ದಾರೆ. ಈ ಕುಂದುವಾಡ ಗ್ರಾಮ ಸೌಹಾರ್ದ ಗ್ರಾಮವಾಗಿ ಬದಲಾಗಲಿ ಎಂದು ಹೇಳಿದರು.

ಹದಡಿಯ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ ಎಲ್ಲವನ್ನು ಕೊಟ್ಟ ದೇವರನ್ನು ಮರೆಯುತ್ತಿದ್ದೇವೆ. ನಿಸರ್ಗವನ್ನು ಹಾಳು ಮಾಡುತ್ತ, ಮಾಲಿನ್ಯ ಹೆಚ್ಚಿಸುತ್ತಿದ್ದೇವೆ. ನಮ್ಮಲ್ಲಿ ಭಯ ಮೂಡಿಸಲು ಹಿರಿಯರು ಊರಿಗೊಂದು ದೇವಸ್ಥಾನ ನಿರ್ಮಿಸಿದ್ದಾರೆ. ಆದರೆ ನಮ್ಮೊಳಗಿರುವ ದೇವರನ್ನು ನಾವು ಕಾಣಬೇಕು. ಮದಗಳನ್ನು ಕೈಬಿಡಬೇಕು. ಧರ್ಮ ಕಾರ್ಯ, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಬಸವತತ್ವ ಎಲ್ಲರೂ ಕೂಡಿ ಬಾಳುವುದನ್ನು ಹೇಳಿದೆ. ಎಲ್ಲ ವರ್ಗಗಳಿಗೂ ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ನಾವಿಂದು ಅವರ ದಾರಿಯಲ್ಲಿ ಸಾಗಬೇಕಿದೆ. ಬಸವಣ್ಣ ಕಂಡು ಕನಸು ಕುಂದುವಾಡ ಗ್ರಾಮದಲ್ಲಿ ಅನಾವರಣವಾಗಿದ್ದು, ಇಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಆಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಗ್ರಾಮದವರು ತುಂಬಾ ಒಗ್ಗಟ್ಟಿನಿಂದ ದೇವಾಲಯ ನಿರ್ಮಾಣ ಮಾಡಿರೋದು ಮೆಚ್ಚುವಂತಾಗಿದೆ,
ತಡವಾಗಿಯಾದರೂ ಗ್ರಾಮದಲ್ಲಿ ದೇಗುಲಗಳು ಉತ್ತಮವಾಗಿ ನಿರ್ಮಿತವಾಗಿವೆ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ದಾವಣಗೆರೆ- ಹಳೇ ಕುಂದುವಾಡ ಮುಖ್ಯ ರಸ್ತೆಗೆ ಹೊಂದಿಕೊಂಡ ರಸ್ತೆ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಇದನ್ನು ತೆರವುಗೊಳಿಸಿದಲ್ಲಿ ಗ್ರಾಮಸ್ಥರು ಬಯಸಿದಂತೆ 80 ಅಡಿ ರಸ್ತೆ ನಿರ್ಮಾಣ ಮಾಡಲು ಬದ್ಧನಿದ್ದೇನೆ. ಈ ಸಂಬಂಧ ದೂಡಾ ಅಧಿಕಾರಿಗಳು, ಜಮೀನಿನ ಮಾಲೀಕರು, ಗುತ್ತಿಗೆದಾರರನ್ನು ಸೇರಿಸಿ ಸಭೆ ನಡೆಸೋಣ ಎಂದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಈ ಭಾಗದಲ್ಲಿ ದೇಗುಲಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರಾದರೆ ಇಂತಹ ಹತ್ತು ದೇವಸ್ಥಾನ ಕಟ್ಟುತ್ತಾರೆ, ಹೀಗಾಗಿ ಶಾಲೆಗಳ ನಿರ್ಮಾಣಕ್ಕೂ ಮಹತ್ವ ನೀಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಲಾರ ಕ್ಷೇತ್ರದ ಕಾರ್ಣಿಕ ನುಡಿಯುವ ರಾಮಪ್ಪಜ್ಜ, ಹಳೆಕುಂದುವಾಡದ ಸ್ವಾಮಿಜಿ ರಾಜಣ್ಣ, ಮುಖಂಡರಾದ ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಎಚ್. ವೆಂಕಟೇಶ್, ಜೆ.ಎನ್. ಶ್ರೀನಿವಾಸ್. ಶ್ವೇತಾ ಶ್ರೀನಿವಾಸ್, ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಬಿ.ಎನ್.ಅಶ್ವಥ್, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending