ದಿನದ ಸುದ್ದಿ
ತುಂಗಭದ್ರಾ ನದಿಪಾತ್ರ ಗ್ರಾಮಗಳಲ್ಲಿ ಪ್ರವಾಹ ಭೀತಿ

ಸುದ್ದಿದಿನ ಡೆಸ್ಕ್: ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರು ಹರಿದು ಬಂದಿದ್ದು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಗದಗ ಜಿಲ್ಲೆಯ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಹರಿಹರ, ಹರಪನಹಳ್ಳಿ ತಾಲೂಕಿನ ಗ್ರಾಮಗಳಲ್ಲಿ ನೀರು ನುಗ್ಗುತ್ತಿದೆ. ಜಮೀನುಗಳು ಜಲಾವೃತವಾಗಿವೆ. ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಗ್ರಾಮ ತಲುಪಬೇಕಾದರೆ ತೆಪ್ಪಬಳಸಬೇಕಾದ ಅನಿರ್ವಾಯತೆ ಎದುರಾಗಿದೆ.
ಹರಿಹರದ ಹರಿಹರೇಶ್ವರ ದೇವಸ್ಥಾನದ ಹಿಂದೆ ಮೆಟ್ಟಿಲು ಮಟ್ಟದ ವರೆಗೆ ಬಂದಿದ್ದು, ನಡುಗಡ್ಡೆಯಲ್ಲಿದ್ದ ಗೋಪುರ ಮುಳುಗಡೆಯಾಗಿದೆ. ಉಕ್ಕಡಗಾತ್ರಿ ಅಜ್ಜಯ್ಯನ ಕ್ಷೇತ್ರ ಸಂಪೂರ್ಣ ಜಲಾವೃತಗೊಂಡಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಹಿರೇಕೆರೂರು ತಾಲೂಕು ಭಾಗಗಳಿಂದ ಉಕ್ಕಡಗಾತ್ರಿಗೆ ಬರುವ ಭಕ್ತರಿಗೆ ಸಂಚಾರ ಅಡಚಣೆ ಉಂಟಾಗಿದೆ. ಸಾರಥಿ ಸೇತುವೆ ಮುಳುಗಡೆಯಾಗಿದೆ.
*ಹೊನ್ನಾಳಿಯಲ್ಲಿ ಗಂಜಿ ಕೇಂದ್ರ ಆರಂಭ:
ಹೊನ್ನಾಳಿಯಲ್ಲಿ ನದಿಪಾತ್ರದ ಮನೆಗಳ ಸುತ್ತ ನದಿ ನೀರು ಹರಿದು ಬಂದಿದ್ದು, ನಿವಾಸಿಗಳ ಸ್ಥಳಾಂತರ ಮಾಡಲಾಗಿದೆ. ಕೆಲವೆಡೆ ಗಂಜಿ ಕೇಂದ್ರ ತೆರೆಯಲಾಗಿದೆ. ನೂರಾರು ಎಕರೆಯ ಜಮೀನುಗಳಿಗೆ ನೀರು ನುಗ್ಗಿದೆ. ಇದೇ ಸ್ಥಿತಿ ಹರಪನಹಳ್ಳಿ ತಾಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಎದುರಾಗಿದೆ. ಹಲವಾಗಲು- ಕಡತಿ ಸಂಪರ್ಕ ಕಡಿತಗೊಂಡಿದೆ. ಹಲವಾಗಲು ಗ್ರಾಮದ ಒಳಗೆ ನೀರು ನುಗ್ಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಸಾರ್ವಜನಿಕರ ಸಮಸ್ಯೆಗಳ ಸ್ಪಂದನೆಗೆ ಡಿಜಿಟಲ್ ಮೊರೆ ಹೋದ ಪಾಲಿಕೆ : ವಾಟ್ಸ್ ಆ್ಯಪ್ ನಂಬರ್ ಪೋಸ್ಟರ್ ಬಿಡುಗಡೆ ಮಾಡಿದ ಮೇಯರ್ ಎಸ್.ಟಿ.ವೀರೇಶ್

ಸುದ್ದಿದಿನ,ದಾವಣಗೆರೆ : ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಮಹಾನಗರಪಾಲಿಕೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು, ಗ್ರಾಹಕರು ತಮ್ಮ ಸಮಸ್ಯೆಗಳನ್ನು ತಕ್ಷಣವೇ ತಿಳಿಸಲು ವಾಟ್ಸ್ಆ್ಯಪ್ ನಂಬರ್ನ್ನು ನೀಡಲಾಗಿದೆ.
ಶುಕ್ರವಾರ ಮಹಾನಗರಪಾಲಿಕೆಯ ಮಹಾಪೌರರಾದ ಎಸ್.ಟಿ.ವೀರೇಶ್ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆ-ಡಿಜಿಟಲ್ ತಂತ್ರಜ್ಞಾನ ವಾಟ್ಸ್ಆ್ಯಪ್ ಚಾಲನೆ ಪೋಸ್ಟರ್ ಬಿಡುಗಡೆ ಮಾಡಿ 8277234444 ವಾಟ್ಸ್ಆ್ಯಪ್ ನಂಬರ್ಗೆ ಚಾಲನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗಿದ್ದು, ಸಾಮಾನ್ಯ ಜನರು ಸಹ ಮೊಬೈಲ್ಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಸಂವಹನ ಮಾಧ್ಯಮವಾಗಿ ವ್ಯಾಪಕ ಬಳಕೆಯಲ್ಲಿದ್ದು, ಗ್ರಾಹಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದರು.
ಮಹಾನಗರಪಾಲಿಕೆಯ ಸ್ಥಿರ ದೂರವಾಣಿ 234444 ಇದ್ದು, ಸಾರ್ವಜನಿಕರ ಚಿರಪರಿಚಿತ ಸಂಖ್ಯೆಯು ಆಗಿದೆ. ಆದ್ದರಿಂದ ಇದೇ ನಂಬರ್ಗೆ 8277 ಎಂಬ ನಾಲ್ಕು ಸಂಖ್ಯೆಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು 8277234444 ನಂಬರ್ಗೆ ವಾಟ್ಸ್ಆ್ಯಪ್ ಮಾಡಬಹುದು ಎಂದು ತಿಳಿಸಿದರು.
ನಗರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು, ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ನಗರದಾದ್ಯಂತ ಯಾವುದೇ ಸೌಲಭ್ಯಗಳ ಪೂರೈಕೆ ಸ್ಥಗಿತಗೊಂಡಿದ್ದಲ್ಲಿ ಮಹಾನಗರ ಪಾಲಿಕೆ ನೀಡಿರುವ ವಾಟ್ಸ್ಆ್ಯಪ್ ನಂಬರ್ಗೆ ಮೆಸೇಜ್, ಫೋಟೋಗಳನ್ನು ಕಳಿಸಿಕೊಡಬಹುದು.
ಅಥವಾ ಕರೆ ಮಾಡಿ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಸಾರ್ವಜನಿಕರು ತಿಳಿಸುವ ಸಮಸ್ಯೆಗಳನ್ನು ಪಾಲಿಕೆ ವ್ಯಾಪ್ತಿಯ ಕಂಟ್ರೋಲ್ ರೂಂ ನಿರ್ವಹಿಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆಯನ್ನು ಬಗೆಹರಿಸುತ್ತಾರೆ.
ಇದನ್ನೂ ಓದಿ |ಪಡಿತರ ಚೀಟಿದಾರರು ಕೂಡಲೇ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಿ
ಈಗಾಗಲೇ ಕೆಲ ವಾರ್ಡ್ಗಳಲ್ಲಿ ಇದರ ಪ್ರಯೋಗ ಮಾಡಿದ್ದು ಯಶಸ್ವಿಯಾಗುತ್ತಿರುವುದರ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ನಗರದಾದ್ಯಂತ ವಿಸ್ತರಿಸುತ್ತಿದ್ದೇವೆÉ. ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು ಮೊದಮೊದಲು ನಿಭಾಯಿಸಲು ಕಷ್ಟವೆನಿಸಬಹುದು. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಸಾರ್ವಜನಿಕರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.
ದಾವಣಗೆರೆ ಜಿಲ್ಲೆಯು ವಾಸಯೋಗ್ಯ ನಗರವೆಂದು ದೇಶದಲ್ಲಿ 9ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಆದರೆ ಉಳಿದ ವಿಚಾರಗಳಲ್ಲಿ ಹಿಂದೆ ಉಳಿದಿದೆ. ಹಾಗೂ ಮಂಗಳೂರಿನಲ್ಲಿ ಸ್ವಚ್ಛ ಅಭಿಯಾನದಡಿ ಸುಮಾರು 440 ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಯಶಸ್ವಿಯಾಗಿದ್ದು, ಇದೀಗ ಸ್ವಚ್ಛ ದಾವಣಗೆರೆಯನ್ನು ಮಾಡಲು ಹಿರಿಯ ತಜ್ಞರು, ಆಡಳಿತಾಧಿಕಾರಿಗಳು, ಮಾಧ್ಯಮ ವರ್ಗದವರು,ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ವಾರ್ಡ್ ವಿಸಿಟ್
ವಾರಕ್ಕೆ ನಾಲ್ಕು ಬಾರಿ ಮುಖಂಡರು, ಆಡಳಿತಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಆಯಾ ವಾರ್ಡ್ಗಳ ಕಾರ್ಪೋರೇಟರ್ಗಳು ಖುದ್ದಾಗಿ ಸ್ಥಳ ವೀಕ್ಷಣೆ ಮಾಡಲು ಮುಂದಾಗಿದ್ದು, ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಶೀಲಿಸಿ ಸಾಧ್ಯವಾದಲ್ಲಿ ಸ್ಥಳದಲ್ಲೇ ಬಗೆಹರಿಸಲು ಯತ್ನಿಸುತ್ತೇವೆ. ಇಲ್ಲದಿದ್ದಲ್ಲಿ ಸಮಯವಕಾಶ ತೆಗೆದುಕೊಂಡು ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.
ತಿಂಗಳ ಅಂತ್ಯದಲ್ಲಿ ಬಜೆಟ್ ಮಂಡನೆ
ಮಾರ್ಚ್ ತಿಂಗಳ ಅಂತ್ಯದಲ್ಲಿ ಬಜೆಟ್ ಮಂಡನೆ ಮಾಡಲಿದ್ದು, ಅಧಿಕಾರಿಗಳು ಸೇರಿದಂತೆ ನಗರದ ಸಮಸ್ತ ಜನರು ನಗರಾಭಿವೃದ್ಧಿಗೆ ಸೂಕ್ತ ಸಲಹೆ, ಸೂಚನೆಗಳನ್ನು ವಾಟ್ಸ್ಆ್ಯಪ್ ನಂಬರ್ಗೆ ತಲುಪಿಸಬಹುದು ಅಥವಾ ಬರಹದ ಮೂಲಕ ಕಚೇರಿಗೆ ತಂದು ಕೊಡಬಹುದು. ನಿಮ್ಮ ಸಲಹೆಗಳನ್ನು ಪರಿಶೀಲಿಸಿ ಬಜೆಟ್ನಲ್ಲಿ ಅನುಮೋದಿಸಲು ಯತ್ನಿಸುತ್ತೇವೆ ಎಂದು ತಿಳಿಸಿದರು.
ಸನ್ಮಾನ, ಸಮಾರಂಭಗಳಿಗೆ ಕರೆಯಬೇಡಿ
ಮೇಯರ್ ಅವಧಿ ಒಂದು ವರ್ಷ ಮಾತ್ರ ಇದ್ದು, ಈ ಸಂಪೂರ್ಣ ಅವಧಿಯನ್ನು ಸಾರ್ವಜನಿಕರ ಸೇವೆಗೆ ಮೀಸಲಿಡುತ್ತೇನೆ. ಸಮಯದ ಅಭಾವವಿರುವುದರಿಂದ ಸಮರ್ಪಕ ಸೇವೆ ಸಲ್ಲಿಸಲು ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸನ್ಮಾನ, ಸಭೆ-ಸಮಾರಂಭಗಳಿಗೆ ನನ್ನನ್ನು ಕರೆದು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಬೇಡಿ.
ನನ್ನ ಅವಧಿ ಮುಗಿದ ನಂತರ ನಾನು ಮಾಡಿದ ಸೇವೆಯನ್ನು ಪರಿಶೀಲಿಸಿ ನಂತರ ಸನ್ಮಾನಿಸಿ ಹಾಗೂ ಹಾರ, ಬೊಕ್ಕೆ ಎಂದು ನೀಡುವ ಬದಲು ಪುಸ್ತಕಗಳನ್ನು ಕೊಡಿ ಎಂದು ಮನವಿ ಮಾಡಿದರು. ಈಗಾಗಲೇ 2 ಸಾವಿರ ಪುಸ್ತಕಗಳು ಕಚೇರಿಗೆ ಬಂದಿದ್ದು, ಅವುಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್, ಶಿವಪ್ರಕಾಶ್, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಡಿತರ ಚೀಟಿದಾರರು ಕೂಡಲೇ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಿ

ಸುದ್ದಿದಿನ,ದಾವಣಗೆರೆ : ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಕೂಡಲೇ ಭೇಟಿ ನೀಡಿ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ಪಡಿತರ ಚೀಟಿದಾರರ ಸೌಲಭ್ಯಕ್ಕಾಗಿ ಸರ್ಕಾರವು ಇ-ಕೆವೈಸಿ(ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಈಗಾಗಲೇ ಕೆಲವು ಪಡಿತರ ಚೀಟಿದಾರರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಕಾರ್ಯವನ್ನು ಪೂರ್ಣಗೊಳಿಸಿರುತ್ತಾರೆ.
ಇದನ್ನೂ ಓದಿ | ತಾಂಡಾ ರೋಜ್ಗಾರ್ ಮಿತ್ರ : ಅರ್ಜಿ ಆಹ್ವಾನ
ಸರ್ಕಾರವು ಪುನಃ ಈ ಯೋಜನೆಗೆ ಚಾಲನೆ ನೀಡಿರುವುದರಿಂದ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಕೂಡಲೇ ಭೇಟಿ ನೀಡಿ (ಪ್ರತಿ ಮಾಹೆಯ 1ನೇ ತಾರೀಖಿನಿಂದ 10ನೇ ತಾರೀಖಿನೊಳಗೆ ಮತ್ತು 25ನೇ ತಾರೀಖಿನಿಂದ 30ನೇ ತಾರೀಖೀನೊಳಗಾಗಿ) ತಮ್ಮ ಇ-ಕೆವೈಸಿ ಆಧಾರ್ ಬಯೋದೃಢೀಕರಣ ಕಾರ್ಯವನ್ನು ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತಾಂಡಾ ರೋಜ್ಗಾರ್ ಮಿತ್ರ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಹುಲಿಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟೆ ತಾಂಡಾ, ನೇರ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರ್ಲಿಗೆ ತಾಂಡಾ, ಶ್ರೀರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀರಾಮನಗರ ತಾಂಡಾ (ಆಲೂರು ಹಟ್ಟಿ) ಹಾಗೂ ತೋಳಹುಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಟೋಬನಹಳ್ಳಿ ತಾಂಡಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜ್ಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಾಂಡಾಗಳಲ್ಲಿನ ಪ್ರತಿ 250 ರಿಂದ 300 ಮನೆಗಳಿಗೆ ಒಬ್ಬರಂತೆ ತಾಂಡಾ ರೋಜ್ಗಾರ್ ಮಿತ್ರರನ್ನು ಆಯ್ಕೆ ಮಾಡಲಾಗುವುದು.ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರು ಲಭ್ಯವಿಲ್ಲದಿದ್ದಲ್ಲಿ ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು. ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿರುವವರಿಗೆ ಆದ್ಯತೆ ನೀಡಲಾಗುತ್ತದೆ. 45 ವರ್ಷ ವಯೋಮಾನವನ್ನು ಮೀರಿರಬಾರದು. ತಾಂಡಾದ ನಿವಾಸಿ ಆಗಿರಬೇಕು. ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು. ಕನ್ನಡ ಮತ್ತು ಲಂಬಾಣಿ ಭಾಷೆಯನ್ನು ಕಲಿತಿರಬೇಕು.
ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂಧಿಸುವ ಗುಣ ಲಕ್ಷಣಗಳನ್ನು ಹೊಂದಿರಬೇಕು. ತಾಂಡಾ ರೋಜ್ಗಾರ್ ಮಿತ್ರರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ದಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ತಾಂಡಾ ರೋಜ್ಗಾರ್ ಮಿತ್ರರ ಕುಟುಂಬ ಮತ್ತು ಸಮಾಜದ ಬೆಂಬಲವಾಗಿರಬೇಕು.
ಇದನ್ನೂ ಓದಿ | ಸುಳ್ಳಿನ ಸುಳಿಯಲ್ಲಿ ಸುಲ್ತಾನ
ತಾಂಡಾ ರೋಜ್ಗಾರ್ ಮಿತ್ರರಿಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಮಾಸಿಕ ರೂ. 3000/- ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರೂ. 3000/- ವರೆಗೂ ಪ್ರೋತ್ಸಾಹ ಧನ ನೀಡಲಾಗುವುದು.
ತಾಂಡಾ ರೋಜ್ಗಾರ್ ಮಿತ್ರರನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಐ.ಇ.ಸಿ ಚಟುವಟಿಕೆಯ ಭಾಗವಾಗಿ 06 ತಿಂಗಳ ಅವಧಿಗೆ ಮಾತ್ರ ತೊಡಗಿಸಿಕೊಳ್ಳಲಾಗುತ್ತದೆ. ತಾಂಡಾ ರೋಜ್ಗಾರ್ ಮಿತ್ರರು ಸ್ವಯಂ ಪ್ರೇರಿತ ಕಾರ್ಯಕರ್ತರು ಮಾತ್ರ ಆಗಿದ್ದು, ಗ್ರಾಮ ಪಂಚಾಯಿತಿಯ ಖಾಯಂ ಅಥವಾ ತಾತ್ಕಾಲಿಕ ನೌಕರರಾಗಿರುವುದಿಲ್ಲ.
ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದೆಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಸಿನಿ ಸುದ್ದಿ6 days ago
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?
-
ದಿನದ ಸುದ್ದಿ7 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ಸಿನಿ ಸುದ್ದಿ5 days ago
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!
-
ಭಾವ ಭೈರಾಗಿ5 days ago
ಕವಿತೆ | ಕಾಮಧೇನು
-
ನಿತ್ಯ ಭವಿಷ್ಯ6 days ago
ಫೆಬ್ರವರಿ-27 | ಈ ರಾಶಿಯವರಿಗೆ ಬಯಸಿದ್ದೆಲ್ಲ ಸಿಗುವುದು! ಶನಿವಾರ- ರಾಶಿ ಭವಿಷ್ಯ
-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ | ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು..? ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?
-
ನಿತ್ಯ ಭವಿಷ್ಯ5 days ago
ಸೋಮವಾರ ರಾಶಿ ಭವಿಷ್ಯ : ಕರೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ
-
ನಿತ್ಯ ಭವಿಷ್ಯ6 days ago
ಭಾನುವಾರ ರಾಶಿ ಭವಿಷ್ಯ : ಈ ರಾಶಿಯವರಿಗೆ ಈ ವಾರದ ಒಳಗಡೆ ಹಣಕಾಸಿನ ಸುರಿಮಳೆ ಆಗಲಿದೆ..!