ದಿನದ ಸುದ್ದಿ
ಕೊರೊನಾತಂಕದ ನಡುವೆ ಎಸ್.ಎಸ್.ಎಲ್.ಸಿ ಮಕ್ಕಳಿಗಿರಲಿ ನಿರಾತಂಕ ; ಪಠ್ಯ ಕಡಿತದ ಲಾಭ – ಅಂಕಗಳಿಕೆ ಸರಾಗ
- ವಿ.ಕೆ ಕುಮಾರಸ್ವಾಮಿ
ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ವಿರುಪಾಪುರ, ರಾಮನಗರ ಜಿಲ್ಲೆ
ಜಗತ್ತನ್ನು ಎಡಬಿಡದೆ ಕಾಡುತ್ತಿರುವ ಕೊರೋನಾ ವಿಷ ಪೀಡೆಯ ಬಾಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಉತ್ಸಾಹ ಉಲ್ಲಾಸದಿಂದ ಮುದ್ದು ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೀಗ ಮತ್ತೊಮ್ಮೆ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದೆ. ಹೀಗಾಗಿ ಕೊರೊನಾ ನಡುವಿನ ನಮ್ಮ ಬದುಕು ಇನ್ನೆಷ್ಟು ವರ್ಷಗಳೊ ಎಂಬುದು ಅರಿಯದಾಗಿದೆ.
ಈ ಮಧ್ಯೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆಗೆ ಸಮರ ಸೇನಾನಿಗಳಂತೆ ಎದೆಗುಂದದೆ ಸಜ್ಜಾಗುತ್ತಿದ್ದಾರೆ. ಈಗಾಗಲೆ ಶಿಕ್ಷಣ ಇಲಾಖೆ ಮಕ್ಕಳಿಗೆ ಪಠ್ಯ ಕಡಿತ ಮಾಡಿ ಪ್ರತಿ ವರ್ಷಕ್ಕಿಂತ ಈ ವರ್ಷ ಕಡಿಮೆ ಹೊರೆಯನ್ನು ನೀಡಿದೆ. ಇದರ ಲಾಭ ಪಡೆಯುವುದಾದರೂ ಹೇಗೆ? ಈ ಕುರಿತಾದ ಒಂದಷ್ಟು ಸಾಧಕ-ಬಾಧಕಗಳು ಇಲ್ಲಿವೆ.
ಪಠ್ಯ ಕಡಿತದ ಲಾಭ
ಪ್ರಸ್ತುತ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ 30%ಪಠ್ಯ ಕಡಿತ ಮಾಡಿರುವುದು ಅತ್ಯಂತ ಲಾಭದಾಯಕ ವಿಚಾರವಾಗಿದೆ. ಇದು ಮಕ್ಕಳಲ್ಲಿ ಕೊಂಚ ನೆಮ್ಮದಿ ತಂದಿದ್ದು, ಅವರು ಇನ್ನೂ ಹೆಚ್ಚಿನ ಅಭ್ಯಾಸ ಮಾಡಲು ಸಹಾಯಕವಾಗಿದೆ. ಲಭ್ಯವಿರುವ ಪಠ್ಯಾಂಶಗಳನ್ನು ಸರಳ ಮತ್ತು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳು ಬಳಸಿಕೊಂಡಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವುದು ನಿಶ್ಚಿತ. ಹೀಗಾಗಿ ಮಕ್ಕಳು ಪ್ರತಿನಿತ್ಯ ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕಿದೆ.
ಪಠ್ಯ ಪುಸ್ತಕವೇ ಪರ್ಯಾಯ ಮಾರ್ಗದರ್ಶಿ
ಶಿಕ್ಷಕರ ನಂತರ ಪಠ್ಯ ಪುಸ್ತಕಗಳೇ ಮಕ್ಕಳ ಪಾಲಿನ ಮಾರ್ಗದರ್ಶಿಯಾಗಿವೆ. ಯಾವ ಮಕ್ಕಳು ಪಠ್ಯ ಪುಸ್ತಕಗಳನ್ನು ಸತತವಾಗಿ ಅಭ್ಯಸಿಸುತ್ತಾರೋ ಅವರಲ್ಲಿ ಆತ್ಮ ವಿಶ್ವಾಸ ವೃದ್ಧಿಸುತ್ತದೆ ಹಾಗೂ ಪರೀಕ್ಷೆಯಲ್ಲಿ ಕೇಳುವ ಎಂತಹುದೇ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥರಾಗುತ್ತಾರೆ.
ನೂರಾರು ರೂಪಾಯಿಗಳನ್ನು ವ್ಯಯಿಸಿ ಇಲ್ಲಸಲ್ಲದ ಅಧ್ಯಯನ ಸಾಮಗ್ರಿಗಳನ್ನು ಕೊಳ್ಳುವ ಮುನ್ನ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ಓದುವ ಹವ್ಯಾಸವನ್ನು ಹೆಚ್ಚಾಗಿ ಬೆಳೆಸಿಕೊಂಡರೆ ಅದಕ್ಕಿಂತ ದೊಡ್ಡ ಮಾರ್ಗದರ್ಶಿ ಮತ್ತೊಂದಿಲ್ಲ. ಪಠ್ಯ ಪುಸ್ತಕವನ್ನು ಓದಿದ ನಂತರ ಇನ್ನಿತರ ಅಧ್ಯಯನ ಸಾಮಗ್ರಿಗಳನ್ನು ಅಭ್ಯಸಿಸುವುದು ಸೂಕ್ತ.
ಮನೆ ವೇಳಾಪಟ್ಟಿ ಇರಲಿ
ಶಾಲೆಯಲ್ಲಿ ತಿಳಿದ ಪಠ್ಯಾಂಶಗಳನ್ನು ಮನೆಯಲ್ಲೊಮ್ಮೆ ಪುನರ್ಮನನ ಮಾಡುವುದು ಅತ್ಯಂತ ಜವಾಬ್ದಾರಿಯುತ ವಿಚಾರ. ಇದಕ್ಕಾಗಿ ಮನೆಯಲ್ಲಿ ಒಂದು ಪ್ರತ್ಯೇಕ ವೇಳಾಪಟ್ಟಿಯನ್ನು ರಚಿಸಿಕೊಳ್ಳುವುದು ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಎಲ್ಲೆಡೆ ಕೇಳಿ ಬರುತ್ತಿರುವ ದೂರು ಎಂದರೆ ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ತಯಾರಿಸಲು ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ ಎಂಬುದು.
ಹೀಗಾಗಿ ಮಕ್ಕಳು ಪ್ರತಿ ವಿಷಯಗಳನ್ನು ಅಭ್ಯಸಿಸಲು ಪ್ರತ್ಯೇಕ ವೇಳಾಪಟ್ಟಿಯನ್ನು ರಚಿಸಿಕೊಳ್ಳಬೇಕು. ಅದರಂತೆ ಪ್ರತಿನಿತ್ಯ ಅಭ್ಯಸಿಸಬೇಕು. ಓದಿದ್ದನ್ನು ಬರೆದು ಖಾತ್ರಿ ಪಡಿಸಿಕೊಳ್ಳಬೇಕು.
ಪರೀಕ್ಷೆ ಬಗ್ಗೆ ಭಯ ಬೇಡ
ಪರೀಕ್ಷೆಗಳಿರುವುದು ನಮ್ಮ ಭವಿಷ್ಯವನ್ನು ನಿರ್ಧರಿಸುವುದಕ್ಕಾಗಿಯೇ ಹೊರತು ನಮ್ಮ ಧೈರ್ಯವನ್ನು ಪರೀಕ್ಷಿಸಲು ಅಲ್ಲ. ನಿರಂತರ ಅಭ್ಯಾಸ ಮಾಡಿದ ಯಾವ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಪರೀಕ್ಷೆಯ ಬಗ್ಗೆ ಹೆಚ್ಚಿನ ಭಯ ಹಾಗೂ ಒತ್ತಡವಿರುವುದಿಲ್ಲ.
ಹೀಗಾಗಿ ಪರೀಕ್ಷೆಯನ್ನು ಎಲ್ಲರೂ ಒಂದು ಹಬ್ಬದಂತೆ ಭಾವಿಸಿ ಎದುರಿಸಬೇಕಾಗಿದೆ. ನೆನಪಿರಲಿ, ಪರೀಕ್ಷೆಗೆ ಒಂದು ದಿನದ ಮುಂಚೆ ಈ ಹಿಂದೆ ಓದಿದ ಪಠ್ಯಾಂಶಗಳನ್ನು ಪುನರ್ಮನನ ಮಾಡಿಕೊಳ್ಳಬೇಕಷ್ಟೆ. ಅದನ್ನು ಬಿಟ್ಟು ಎಲ್ಲವನ್ನೂ ಓದುವುದು ಆರೋಗ್ಯಕರ ಹವ್ಯಾಸವಲ್ಲ.
ಕೆಲವು ಮಕ್ಕಳಲ್ಲಿ ಕಂಡುಬರುವ ಅನಪೇಕ್ಷಿತ ನಡವಳಿಕೆಗಳು
- ಪ್ರಶ್ನೆಗಳ ಬಗ್ಗೆ ಗಮನ ಹರಿಸದೆ ಕೇವಲ ಉತ್ತರಗಳನ್ನಷ್ಟೇ ಕಲಿಯುವುದು
- ಸರಳ ಪ್ರಶ್ನೋತ್ತರಗಳನ್ನು ನಿರ್ಲಕ್ಷ್ಯ ಮಾಡುವುದು
- ಕೇವಲ ಪರೀಕ್ಷೆಗಳು ಸಮೀಪಿಸಿದಾಗಲಷ್ಟೇ ಓದುವುದು
- ಓದಿದ ವಿಚಾರಗಳನ್ನು ಪುನರ್ಮನನ ಮಾಡದಿರುವುದು
- ಸಣ್ಣಸಣ್ಣ ಕಾರಣಗಳನ್ನು ಮುಂದಿಟ್ಟುಕೊAಡು ಶಾಲೆಗೆ ಗೈರು ಹಾಜರಾಗುವುದು
- ಶಿಕ್ಷಕರ ಒಡನಾಟದಿಂದ ದೂರ ಉಳಿಯುವುದು
- ಸಹಪಾಠಿಗಳಿಂದ ದೂರ ಉಳಿಯುವುದು
- ಸರಿಯಾಗಿ ಆಹಾರ ಸೇವಿಸದಿರುವುದು
- ಅಂದಿನ ಓದನ್ನು ಅಂದೇ ಮುಗಿಸದಿರುವುದು
- ಏಕಾಗ್ರತೆಯಿಲ್ಲದ ಅಧ್ಯಯನ
- ಓದುವುದನ್ನು ಹೊರೆ ಎಂದು ಭಾವಿಸುವುದು ಮತ್ತು ತೀವ್ರ ಆಲಸ್ಯ
- ಟಿವಿ ಅಥವಾ ಮೊಬೈಲ್ ಬಳಸುತ್ತಾ ಓದುವುದು
- ಪುಸ್ತಕಗಳನ್ನು ಎಲ್ಲೆಂದರಲ್ಲಿ ಹರಡುವುದು
ನಿಮ್ಮ ಓದು ಹೀಗಿರಲಿ
- ಕಷ್ಟಪಟ್ಟು ಓದಬೇಡಿ; ಇಷ್ಟದಿಂದ ಓದಿರಿ
- ಮೊದಲು ಸರಳ ಪ್ರಶ್ನೊತ್ತರಗಳನ್ನು ಖಾತ್ರಿಪಡಿಸಿಕೊಳ್ಳಿ
ಮನೆ ವೇಳಾಪಟ್ಟಿಯ ಖಚಿತ ಪಾಲನೆ
- ಓದಿದ ಪಠ್ಯಾಂಶಗಳನ್ನು ಪಟ್ಟಿ ಮಾಡುವುದು ಮತ್ತು ಪುನರ್ಮನನ ಮಾಡುವುದು
ಪದ್ಯಗಳು, ವ್ಯಾಕರಣ, ಪ್ರಬಂಧ, ಪ್ರಮೇಯಗಳು, ಚಿತ್ರಗಳು, ಪತ್ರಲೇಖನಗಳ ನಿರಂತರ ಅಭ್ಯಾಸ
ಕಠಿಣ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಂಡು ಶಿಕ್ಷಕರೊಂದಿಗೆೆ ಚರ್ಚಿಸುವುದು
ನಿಯಮಿತ ಧ್ಯಾನ, ಪ್ರಾರ್ಥನೆ ಹಾಗೂ ನಿದ್ದೆ ಇರಲಿ
ಓದುವ ಕೋಣೆಯಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು
- ಸರಿಯಾದ ಭಂಗಿಯಲ್ಲಿ ಕುಳಿತು ಓದುವುದು
ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು
ಸಡಿಲವಾದ ಉಡುಪುಗಳನ್ನು ಧರಿಸುವುದು
- ಸಹಪಾಠಿಗಳೊಂದಿಗೆ ಆರೋಗ್ಯಕರ ಚರ್ಚೆ
ಸಮಯ ಮತ್ತು ಶಿಸ್ತಿಗೆ ಆದ್ಯತೆ ನೀಡುವುದು
- ಪೋಷಕರೊಂದಿಗೆ ಪ್ರತಿದಿನ ಕನಿಷ್ಠ ಹತ್ತು ನಿಮಿಷಗಳ ಶೈಕ್ಷಣಿಕ ಚರ್ಚೆ
(ವಿ.ಕೆ ಕುಮಾರಸ್ವಾಮಿ
ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ವಿರುಪಾಪುರ,
ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ,
ಮೊಬೈಲ್ ಸಂಖ್ಯೆ : 9113906120)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


