Connect with us

ದಿನದ ಸುದ್ದಿ

ಚನ್ನಗಿರಿ | ಆಸ್ತಿ ವಿವಾದ : ಹಲ್ಲೆ ಮಾಡಿದ ಆರೋಪಿಗಳಿಗೆ ಶಿಕ್ಷೆ

Published

on

ಸುದ್ದಿದಿನ,ದಾವಣಗೆರೆ : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕು ನಲ್ಲೂರು ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದ ಸೋಮಶೆಟ್ಟಿ ಗ್ರಾಮದ 06 ಜನ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಬಿ. ವಿಜಯಾನಂದ ಅವರು ತೀರ್ಪು ನೀಡಿದ್ದಾರೆ.

ಸೋಮಶೆಟ್ಟಿ ಗ್ರಾಮದ ಶಿವು ಹಾಗೂ ಮಹೇಶ್ವರಪ್ಪ ಅವರು ಕಳೆದ 2014 ರ ಫೆಬ್ರವರಿ 18 ರಂದು ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿನ ಮೆಡಿಕಲ್ ಶಾಪ್ ಬಳಿ ಇದ್ದಾಗ, ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸೋಮಶೆಟ್ಟಿ ಗ್ರಾಮದವರೇ ಆದ ಈಶ್ವರಪ್ಪ ವೀರೇಂದ್ರ ಪಾಟಿ, ಎಸ್.ಜಿ. ನಾಗೇಂದ್ರಪ್ಪ, ನಾರೇಂದ್ರ, ನವೀನ್ ಎಸ್ ಪಂಚರಾಕ್ಷಪ್ಪ, ಕುಬೇರಪ್ಪ ಹಾಗೂ ಶಕುಂತಲಮ್ಮ ಎಂಬ ಆರೋಪಿಗಳು ಗುಂಪು ಕಟ್ಟಿಕೊಂಡು, ಶಿವು ಹಾಗೂ ಮಹೇಶ್ವರಪ್ಪ ಅವರ ಮೇಲೆ ಮಚ್ಚು, ಕಲ್ಲು, ರಾಡು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಪಿಎಸ್‍ಐ ಸತೀಶ್ ನಾಯ್ಕ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲ ಆರೋಪಿತರಿಗೆ ಕಲಂ 143 ಐಪಿಸಿಗೆ ತಲಾ 500 ರೂ. ದಂಡ ಅಥವಾ 1 ತಿಂಗಳ ಸಾದಾ ಸಜೆ. ಕಲಂ 148 ಐಪಿಸಿಗೆ ತಲಾ 1000 ರೂ. ದಂಡ ಅಥವಾ 2 ತಿಂಗಳು ಸಾದಾ ಸಜೆ. ಕಲಂ 323 ಐಪಿಸಿಗೆ ತಲಾ 1000 ರೂ. ದಂಡ ಅಥವಾ 02 ತಿಂಗಳು ಸಾದಾ ಸಜೆ. ಕಲಂ 324 ಐಪಿಸಿಗೆ ತಲಾ 1500 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ಸರ್ಕಾರದ ಪರ ವಾದ ಮಂಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ನೀರು ಬಿಡುಗಡೆ: ನದಿ ದಂಡೆಯ ಸಾರ್ವಜನಿಕರು, ರೈತರಿಗೆ ಎಚ್ಚರಿಕೆ

Published

on

ಸುದ್ದಿದಿನ,ದಾವಣಗೆರೆ: ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿ ಪಾತ್ರದ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರನ್ನು ಪೂರೈಸಲು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲು ನಿರ್ಧರಿಸಲಾಗಿದೆ.

ತುಂಗಭದ್ರಾ ನದಿಯನ್ನು ಅವಲಂಬಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ, ಮೇ 18 ರಿಂದ 23 ರವರೆಗೆ ಪ್ರತಿದಿನ 2000 ಕ್ಯೂಸೆಕ್ಸ್ ನಂತೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲಾಗುವುದು .

ನದಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ನದಿಯ ದಂಡೆಯ ಕೆಳಮಟ್ಟದಲ್ಲಿ ಸಾರ್ವಜನಿಕರು ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ . ನದಿ ಪಾತ್ರದಲ್ಲಿ ದನಕರುಗಳನ್ನು ಮೇಯಿಸುವುದು, ತೋಟಗಾರಿಕೆ ಮಾಡುವುದು ಮುಂತಾದ ಚಟುವಟಿಕೆಗಳನ್ನು ಮಾಡಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ . ನೀರು ಹರಿಸುವ ಈ ಅವಧಿಯಲ್ಲಿ ನದಿ ದಂಡೆಯ ಇಕ್ಕೆಲಗಳಲ್ಲಿ ರೈತರು ಅಳವಡಿಸಿರುವ ಪಂಪ್‌ಸೆಟ್‌ಗಳ ಮೂಲಕ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ .

ಸಾರ್ವಜನಿಕರು ಹಾಗೂ ರೈತರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶಿಕ್ಷಕರು, ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ‘ಚೈಲ್ಡ್ ಹೆಲ್ಪ್‌ಲೈನ್’ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಶಿಕ್ಷಕರು ಮತ್ತು ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳು ಹಾಗೂ ಆನ್‌ಲೈನ್ ವಂಚನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ‘ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್’ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿದ್ದ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಮಾಹಿತಿ ನೀಡಿ, ಈ ಯೋಜನೆಗಾಗಿ ಸುಮಾರು 20 ಕೋಟಿ ರೂಪಾಯಿಗಳ ಅನುದಾನವನ್ನು ಕೋರಲಾಗಿದ್ದು, ಪ್ರಾಥಮಿಕ ಹಂತವಾಗಿ ಕನಿಷ್ಠ 10 ಕೋಟಿ ರೂಪಾಯಿ ಬಿಡುಗಡೆಯಾದರೂ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಯೋಜನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಐಟಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿವರಿಸಿದರು.

ಪ್ರಸ್ತುತ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರೂ, ಮುಂಬರುವ ಹೊಸ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನುಮುಂದೆ ಪ್ರತಿ ತಿಂಗಳು ವಸತಿ ನಿಲಯಗಳಲ್ಲಿ ಸಂಜೆ ವೇಳೆ ಅರ್ಧ ಗಂಟೆಗಳ ಕಾಲ ವಚನ ಸಾಹಿತ್ಯ, ದಲಿತ ಸಾಹಿತ್ಯ ಹಾಗೂ ಮಹಿಳಾ ಸಾಹಿತ್ಯದ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಮುಂದಿನ ತಿಂಗಳಿಂದ ಮಾನ್ಯ ಸಂಸದರ ನೇತೃತ್ವದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದ ಸಮಾಜ ಕಲ್ಯಾಣ, ಬಿ.ಸಿ.ಎಂ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳಿಗೆ ಸ್ವಂತ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

ವಸತಿ ನಿಲಯದ ಮಕ್ಕಳಿಗೆ ‘ಹೆಲ್ತ್ ಕಾರ್ಡ್’ ವಿತರಿಸಲಾಗುತ್ತಿದ್ದು, ಪ್ರತಿ ತಿಂಗಳು ಕಡ್ಡಾಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆ ವಿಶೇಷ ಶ್ರಮವಹಿಸುತ್ತಿದ್ದು, ಫಲಿತಾಂಶದಲ್ಲಿ ಹಿಂದುಳಿದಿರುವ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದುಕೊಂಡು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಸಿಇಒ ಸ್ವತಃ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂಜಾನೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ಆಯೋಜಿಸುತ್ತಿದ್ದಾರೆ ಎಂದರು.

ಕಳೆದ ವರ್ಷ ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, ಕಳೆದ ತಿಂಗಳು ಶಾದಿಮಹಲ್‌ನಲ್ಲಿ ನಡೆಯುತ್ತಿದ್ದ ವಿವಾಹವೊಂದರ ಮೇಲೆ ದಾಳಿ ನಡೆಸಿ, ಅಪ್ರಾಪ್ತ ಬಾಲಕಿಯರ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. ಇನ್ನು ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಿ.ಇ.ಒ ಅವರು ಜಿಲ್ಲೆಯ ಆಸ್ಪತ್ರೆಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ನರ್ಸಿಂಗ್ ಹೋಂಗಳಲ್ಲಿ ಶೇಕಡಾ 100 ರಷ್ಟು ಸಿಸೇರಿಯನ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ, ವೈದ್ಯರ ಸಭೆ ಕರೆದು ಕಡ್ಡಾಯವಾಗಿ ನೈಸರ್ಗಿಕ ಹೆರಿಗೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದ್ದು, ಪ್ರಸ್ತುತ ಇದು ರಾಜ್ಯದ ಸರಾಸರಿಗಿಂತ ಕಡಿಮೆ ಇರುವುದು ಜಿಲ್ಲೆಯ ದೊಡ್ಡ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಚರ್ಮರೋಗ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಅರಿವಳಿಕೆ ತಜ್ಞರ ಹುದ್ದೆಗಳು ಖಾಲಿ ಇದ್ದು, ಲಭ್ಯವಿರುವ ಸಂಪನ್ಮೂಲಗಳಲ್ಲೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಕೃಷಿ, ನೀರಾವರಿ ಹಾಗೂ ನಾಗರಿಕ ಸೌಲಭ್ಯಗಳು

ಮುಂಬರುವ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಂಪೂರ್ಣ ಸಜ್ಜಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಅಡಿಕೆ-ತೆಂಗಿನ ಜೊತೆಗೆ ಹಣ್ಣು ಮತ್ತು ತರಕಾರಿ ಬೆಳೆಗಳಿಗೂ ಉತ್ತೇಜನ ನೀಡಲಾಗುತ್ತಿದ್ದು, ಹನಿ ನೀರಾವರಿ ಯೋಜನೆ ಸಬ್ಸಿಡಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.

ಗ್ರಾಮೀಣ ಭಾಗದ ‘ಜಲಜೀವನ್ ಮಿಷನ್’ ಯೋಜನೆಯಡಿ ಪೈಪ್‌ಲೈನ್ ಮತ್ತು ನಲ್ಲಿ ಸಂಪರ್ಕ ಕಾರ್ಯಗಳು ಕೊನೆಯ ಹಂತದಲ್ಲಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನಗರದ ಪ್ರಮುಖ ರಸ್ತೆಗಳ ನವೀಕರಣ, ಸ್ಮಾರ್ಟ್ ರಸ್ತೆಗಳ ನಿರ್ಮಾಣ ಹಾಗೂ ಒಳಚರಂಡಿ ಆಧುನೀಕರಣ ಪ್ರಗತಿಯಲ್ಲಿದೆ. ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು ಸೂಚಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ದಾವಣಗೆರೆಯಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನೇಷನ್ ಮತ್ತು ಸ್ಟೆರಿಲೈಸೇಶನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು, ಈಗಾಗಲೇ ಶೇಕಡಾ 80 ರಷ್ಟು ಯಶಸ್ಸು ಸಾಧಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಡಾ. ಶೇಖರ್‌ ಹೆಚ್.ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಗಿತ್ತೆ ಮಾಧವ ವಿಠ್ಠಲರಾವ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?

Published

on

ಡಾ. ಗಿರೀಶ್ ಕುಮಾರ್ ಗೌಡ ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಪತ್ತೆ. ಲಾರಿಗಳ ಮಾಲೀಕರೊಂದಿಗೆ ಶ್ಯಾಮಿಲು. ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೇ, ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಸಾಗಾಣಿಕೆ, ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಕೇಳಿಬಂದಿದೆ.

ಬಳ್ಳಾರಿ ನಗರದ ಹೊರವಲಯದ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನು ಲಾರಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಹೊನ್ನಳ್ಳಿ ತಾಂಡಾದ ತರುಣ್ ಎನ್ನುವ ಮಾಲೀಕರಿಗೆ ಸೇರಿದ ಲಾರಿಯಾಗಿದ್ದು. ಲಾರಿ ನಂಬರ್ ಕೆ.ಎ 35 ಸಿ 2813 ಆಗಿದೆ. ಸಂಜೆ 5 ಗಂಟೆ 30 ನಿಮಿಷಕ್ಕೆ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಲಾರಿಯಲ್ಲಿ ಸಾಗಾಣಿಕೆ ಮಾಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ

ನಾವು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯಾವುದೇ ಟ್ರಿಪ್ ಚೀಟಿ ಇಲ್ಲದೆ ಕೆಂಪು ಮಣ್ಣು ಲಾರಿಗಳಲ್ಲಿ ಸಾಗಾಟ ಮಾಡುತ್ತೆವೆ ಎಂದರು.

ಇನ್ನು ಲಾರಿ ಚಾಲಕನಿಗೆ ಟ್ರಿಪ್ ಚೀಟಿ ಕೇಳಿದರೆ ಇಲ್ಲ ಸಾರ್ ನಾವು ಒಂದು ಟ್ರಿಪ್ ಚೀಟಿ ಪಡೆದು ಎರಡು ಮೂರು ಕೆಂಪು ಮಣ್ಣು, ಜಲ್ಲಿ, ಕಲ್ಲು ಹೊಡೆಯುತ್ತೆವೆ ಎಂದು ವ್ಯಕ್ತಿ ಮತ್ತೊಂದು ಬಾರಿ ಟ್ರಿಪ್ ಚೀಟಿ ತೋರಿಸಿ ನೋಡೋಣ ಎಂದರೆ ಲಾರಿ ಮಾಲೀಕ ತರುಣ್ ಗೆ ಪೋನ್ ಕೊಟ್ಟಿದ್ದಾನೆ. ಮಾಲೀಕ ತರುಣ್ ಇಲ್ಲ ಸಾರ್ ನಾವು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಾಣಿಕೆ ಮಾಡುತ್ತೇವೆ ಎಂದರು. ಯಾವುದೇ ಟ್ರಿಪ್ ಚೀಟಿ ಪಡೆಯಲ್ಲ ಎಂದರು.

ಇನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯಾಗಿ ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಬಿಂಚೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡದೇ ನಷ್ಟ ಉಂಟು ಮಾಡುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮೂರಂ , ಕಲ್ಲು, ಬಿಂಚೆ, ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಲಾರಿಗಳನ್ನು ಹಿಡಿಯದೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆದ, ಲಾರಿ ಮಾಲೀಕರಿಗೆ ಸಹಕಾರಿ ನೀಡಿ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಕೇಳಿ ಬಂದಿದೆ.

ಫೀಲ್ಡ್ ವರ್ಕ್ ಮಾಡದೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ:
ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ, ಗ್ರಾಮಾಂತರ , ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಫೀಲ್ಡ್ ವರ್ಕ್ ಮಾಡದೆ ನಿದ್ದೆಗೆ ಜಾರಿದ್ದಾರೆ. ಅವರು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿಸದೇ ನಷ್ಟ ಉಂಟು ಮಾಡುತ್ತಿದ್ದಾರೆ.

ಬಳ್ಳಾರಿ ನಗರದ ಬಂಡಿಹಟ್ಟಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡಾ, ಮೋಕಾ, ಸಂಗನಕಲ್ಲು, ಸಿರವಾರ, ಕಪ್ಪಗಲ್ಲು ಸಿಂದಾವಾಳ, ಕಂಪ್ಲಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಈ ಕಲ್ಲು, ಬಿಂಚೆ, ಕೆಂಪು ಮಣ್ಣು, ಮರಂ ಅಕ್ರಮವಾಗಿ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವ ದುರಂತವಾಗಿದೆ. ಇನ್ನು ಕಪ್ಪಗಲ್ಲು ಸಿರವಾರ ರಸ್ತೆಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ನಾಪತ್ತೆ.

ಶಾಸಕರ, ಸಂಸದರ ಪ್ರೊತ್ಸಾಹ

ಇನ್ನು ಈ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಅಕ್ರಮ ಗಣಿಗಾರಿಕೆಯ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ಶಾಸಕರು ಹಾಗೂ ಸಂಸದರು ಮತ್ತು ಅವರ ಬೆಂಬಲಿಗರ ಪ್ರೊತ್ಸಾಹ ನೀಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಇದೆ.
ಒಟ್ಟಾರೆಯಾಗಿ ಜಿಲ್ಲಾಧಿಕಾರಿ ನಾಗೇಂದ್ರ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಚಾರಣೆ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending