Connect with us

ಲೈಫ್ ಸ್ಟೈಲ್

ಮಕ್ಕಳು‌ ‘ಸ್ಮಾರ್ಟ್ ಪೋನ್’ ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ..?

Published

on

  • ಸಂಧ್ಯಾ ಸಿಹಿಮೊಗೆ

ಈ ಮಾಯಾಜಗತ್ತು ಎಷ್ಟೊಂದು ಸುಂದರ…! ಕುಳಿತ ಜಾಗದಲ್ಲೇ ನಮ್ಮನ್ನು ಕುಳಿತುಕೊಳ್ಳುವಂತೆ ಮಾಡುವ, ದೂರ ಸರಿದರೂ ಮತ್ತೆಮತ್ತೆ ತನ್ನ ಬಳಿಯೆ ಉಳಿಯುವಂತೆ ಮಾಡುವ, ದಿನ ಪೂರ್ತಿ ಊಟ, ನಿದ್ದೆ, ಸ್ನಾನ ಹೀಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಸುಮ್ಮನೆ ಒಂದೆಡೆ ಮೂಲೆಗೊರಗಿ ಕುಳಿತುಕೊಳ್ಳುವಂತೆ ಮಾಡುವ ಮಾಂತ್ರಿಕ ಶಕ್ತಿ ಹೊಂದಿರುವ ಮಾಯೆ ಈ ಮೊಬೈಲು.

ಇಂದಿನ ವೈಜ್ಞಾನಿಕ ಯುಗದಲ್ಲಿ ಮೊಬೈಲ್, ಸ್ಮಾರ್ಟ್‍ಪೋನ್, ಐಪ್ಯಾಡ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ನಂತಹ ವಿನೂತನ ಅತ್ಯಾಧುನಿಕ ವಿದ್ಯುನ್ಮಾನ ಸಾಧನಗಳು ಕೈಲಿದ್ದರೆ ಸಾಕು ಇಡೀ ಜಗತ್ತೇ ನಮ್ಮ ಅಂಗೈಯಲ್ಲಿ. ನಮಗೆ ಅಗತ್ಯವಿರುವ ಎಲ್ಲಾ ಬಗೆಯ ವಿಷಯ, ಜ್ಞಾನ, ಮಾಹಿತಿ, ಸಂಗೀತ, ಮನೋರಂಜನೆ, ಸುದ್ದಿ, ಕ್ರೀಡೆ, ಸಂಪರ್ಕ, ಸಂದೇಶಗಳಂತಹ ತರಹೇವಾರಿ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಮಾನಸಿಕ ನೆಮ್ಮದಿ ನೀಡಿ ಮನಸ್ಸನ್ನು ಪುಳಕಗೊಳಿಸಬಲ್ಲ ಸಂಗತಿಗಳನ್ನು ನಾವು ಈ ಮೊಬೈಲ್ ತಂತ್ರಜ್ಞಾನದಿಂದ ಪಡೆಯಬಹುದಾಗಿದೆ.
ಮೊಬೈಲ್ ಅಥವಾ ಸ್ಮಾಟ್‍ಫೋನ್‍ನಿಂದ ಅವಶ್ಯಕ ಮಾಹಿತಿ, ಗೇಮ್, ಕಾರ್ಟೂನ್ ಮತ್ತು ಇನ್ನಿತರ ಮನಸ್ಸಿಗೆ ಮುದನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಬೌದ್ಧಿಕ ವಿಕಾಸ ಹಾಗೂ ಕಲಿತ ವಿದ್ಯೆಯನ್ನು ಒರೆಗೆ ಹಚ್ಚುವಲ್ಲಿಯೂ ಇದು ಸಹಾಯಕವಾಗಿದೆ.

ನಾವು ಸ್ಮಾರ್ಟ್‍ಫೋನ್‍ನಂತೆ ಸ್ಮಾರ್ಟ್ ಕೂಡ ಆಗಬಹುದೆಂಬುದೇನೋ ನಿಜ. ಆದರೆ, ಮೊಬೈಲ್ ಮತ್ತು ಸ್ಮಾರ್ಟ್‍ಫೋನ್‍ಗಳನ್ನು ಮಕ್ಕಳು ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ ?.. ಅವುಗಳಿಂದ ಆಗಬಹುದಾದ ದುಷ್ಟರಿಣಾಮಗಳ ಅರಿವಿಲ್ಲದೆ ಮೌನವಾಗಿರುವುದು ಅಪಾಯದ ಮುನ್ಸೂಚನೆಯೇ ಅಲ್ಲವೇ?.

ಇಂದಿನ ನಮ್ಮ ಬದುಕು ಮೊಬೈಲ್‍ಮಯವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಚಂದಮಾಮ ತೋರಿಸಿ, ಲಾಲಿ ಹಾಡಿ ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದೆ ಊಟ ಮಾಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಎಂಬ ಮಾಯೆ ತನ್ನ ಪ್ರಭಾವ ಬೀರಿರುವುದು ಅತ್ಯಂತ ಕಳವಳಕಾರಿ ಸಂಗತಿ.

ನಿರಂತರವಾಗಿ ಮೊಬೈಲ್ ಬಳಸುವುದರಿಂದ ಮಕ್ಕಳು ಭವಿಷ್ಯದಲ್ಲಿ ಎದುರಿಸಬಹುದಾದ ಸಮಸ್ಯೆಗಳ ಕುರಿತು ಪೋಷಕರು ಕಿಂಚಿತ್ತು ಗಮನಹರಿಸಿದರೆ ಒಳಿತು. ಪಬ್‍ಜಿ ಗೇಮ್, ಟಿಕ್‍ಟಾಕ್, ಸಾಮಾಜಿಕ ಜಾಲತಾಣ, ಆತಂಕಕಾರಿ ಸಾಪ್ಟವೇರ್‍ಗಳು ಹಾಗೂ ಅಶ್ಲೀಲ ಸಂಗತಿಗಳು ಮಕ್ಕಳ ಕೋಮಲವಾದ ಮನಸ್ಸನ್ನು ಕೆರಳಿಸಿ, ಪ್ರಚೋದಿಸಿ ಅವರ ಗಮನ ಕೇಂದ್ರೀಕರಿಸಿಕೊಂಡು ಕೊನೆಗೆ ಜೀವಹಾನಿಯಂತಹ ಘಟನೆಗಳು ಸಂಭವಿಸುತ್ತಿರುವುದು, ವೈಚಾರಿಕ ನೆಲೆಯಿಂದ ವಿಮುಖರಾಗಿ ಕ್ರೌರ್ಯಗಳಿಗೆ, ದುಷ್ಕøತ್ಯಗಳಿಗೆ ಕಾರಣವಾಗುತ್ತಿರುವುದು ಮೊಬೈಲ್ ಬಳಸುವ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಅತಿಯಾದ ಸ್ಮಾಟ್‍ಫೋನ್ ಬಳಕೆಯಿಂದ ಮಕ್ಕಳ ಆರೋಗ್ಯದ ಜೊತೆಗೆ ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಫಲಿತಾಂಶ ಕುಂಠಿತವಾಗುವ ಆತಂಕವಿದೆ. ಪ್ರೀತಿ, ವಾತ್ಸಲ್ಯ, ಮಮತೆ, ಜೀವನ, ಸಂಬಂಧಗಳ ಮೌಲ್ಯ ಹಾಗೂ ಸಂಸ್ಕøತಿಗಳ ಪರಿವೆಯೇ ಇಲ್ಲದೇ ಬದುಕುವ ಪರಿಸ್ಥಿತಿ ತಂದೊಡ್ಡಿದೆ.

ದೊಡ್ಡವರು ಮಕ್ಕಳ ಮುಂದೆ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ, ಮಕ್ಕಳ ಬದುಕಿಗೆ ಮಾದರಿಯಾಗಬೇಕು. ನಮ್ಮ ಮಕ್ಕಳ ಭವಿಷ್ಯವನ್ನು ನಾವು ಮಾತ್ರವೇ ಬದಲಾಯಿಸಬಹುದು ಎಂಬುದನ್ನು ಅರಿತು ಜಾಗೃತರಾಗಬೇಕು.ಮಕ್ಕಳನ್ನು ಮೊಬೈಲ್‍ನಿಂದ ದೂರವಿರಿಸುವುದು ಇಂದು ಕಷ್ಟದ ಕೆಲಸ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು ಎಂದು ಅಧ್ಯಯನಗಳು ತಿಳಿಸಿದೆ.

ಹದಿಹರೆಯದ ಮತ್ತು ಯೌವ್ವನಾವಸ್ಥೆಯಲ್ಲಿರುವವರ ಆಲೋಚನಾ ಶಕ್ತಿ ಕುಗ್ಗಲು ಹಾಗೂ ಕ್ಷೀಣಿಸಲು ಮೊಬೈಲ್‍ನಿಂದಾಗುವ ದುಷ್ಟರಿಣಾಮಗಳು ಕಾರಣವಾಗಿದೆ. ಪಬ್‍ಜಿ ಗೇಮ್‍ನಂತಹ ಅವೇಶಭರಿತ ಆಟಗಳ ನಿಯಂತ್ರಣಕ್ಕೊಳಪಟ್ಟು ಕೊನೆಗೆ ಆಟದಲ್ಲಿ ಸೋತ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದ ಮಕ್ಕಳ ಕಣ್ಣು, ಮೆದುಳು ಮತ್ತು ವಿವಿಧ ಶಾರೀರಿಕ ಬೆಳವಣಿಗೆಯ ಮೇಲೆ ಆರೋಗ್ಯದ ಅಡ್ಡ ಪರಿಣಾಮಗಳು ಆಗುತ್ತಿವೆ. ನಿರಂತರ ಮೊಬೈಲ್ ಬಳಕೆಯಿಂದ ರಕ್ತದೊತ್ತಡ ಮತ್ತು ನರರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಇರುವುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.
ನಿದ್ದೆ ಮಾಡೋಲ್ಲ ಮತ್ತು ಹೇಳಿದ ಮಾತು ಕೇಳೊಲ್ಲ ಎಂದರೆ ನಾವು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಗೊಂಬೆಗಳ ಕಾರ್ಯಕ್ರಮ ಮತ್ತು ಗೇಮ್ ಆಡುವುದಕ್ಕೆ ಹೇಳಿ ಸುಮ್ಮನಾಗಿಸುತ್ತೇವೆ. ತಾಂತ್ರಿಕತೆ ಮತ್ತು ತಂತ್ರಜ್ಞಾನ ಯುಗದತ್ತ ಮುಖ ಮಾಡುತ್ತಿರುವ ನಾವು ನಮ್ಮ ಕಾರ್ಯಬಾಹುಳ್ಯದ ಒತ್ತಡದಿಂದಾಗಿ ಮಕ್ಕಳ ಕಡೆಗೆ ಗಮನ ಕೂಡಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಬಳಕೆಯಿಂದ ಹಲವಾರು ತೊಂದರೆಗಳು ಎದುರಾಗುತ್ತಿವೆ. ಹೀಗಾಗಿ ಮಕ್ಕಳ ಮನಸ್ಸು ಮತ್ತು ಆರೋಗ್ಯದ ಮೇಲೆ ಭೀಕರವಾದ ಪರಿಣಾಮ ಪರಿಣಾಮ ಬೀರುತ್ತಿವೆ.

ಮೊಬೈಲ್ ಫೋನ್‍ಗಳು ಮತ್ತು ಅವುಗಳ ಟವರ್‍ಗಳು ಹೊರಸೂಸುವ ತರಂಗಗಳು ಮಹಿಳೆಯರಲ್ಲಿ ಫಲವತ್ತತೆಯ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಎಂದು ವಿಶ್ವ ಆರೋಗ್ಯ ಸಂಸ್ಥೆ(WHO)ಯ ಅಧ್ಯಯನವೊಂದು ತಿಳಿಸಿದೆ. ಮೊಬೈಲ್ ಫೋನ್‍ಗಳ ನಿರಂತರ ಬಳಕೆಯು ಸದಾ ಪ್ರಶ್ನೆಯಲ್ಲಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿತ ಮತ್ತು ಮಹಿಳೆಯರಲ್ಲಿ ಫಲವತ್ತತೆ ಕಂಠಿತ ಸೇರಿದಂತೆ ಮೊಬೈಲ್ ವಿಕಿರಣದ ದುಷ್ಪರಿಣಾಮಗಳನ್ನು ಹಲವಾರು ಅಧ್ಯಯನಗಳು ಮತ್ತು ಸಂಶೋಧನೆಗಳು ಬಹಿರಂಗಗೊಳಿಸಿವೆ. ಅಷ್ಟೇ ಅಲ್ಲ, ಮೊಬೈಲ್ ವಿಕಿರಣವು ಮೆದುಳು ಟ್ಯೂಮರ್‍ಗಳನ್ನೂ ಉಂಟುಮಾಡುತ್ತದೆ ಎಂಬುದನ್ನು ಖಚಿತಪಡಿಸಿದೆ.

ಸ್ಮಾರ್ಟ್‍ಫೋನ್‍ಗಳ ನಿರಂತರ ಬಳಕೆ ನಮ್ಮ ಪ್ರತಿದಿನ ಬದುಕಿನ ಭಾಗವಾಗಿಬಿಟ್ಟಿದೆ. ಆದರೆ ಮನಸ್ಸು ಮತ್ತು ಶರೀರದ ಮೇಲೆ ಅದರ ದುಷ್ಟಪರಿಣಾಮಗಳ ಬಗ್ಗೆಯೂ ಮೊಬೈಲ್ ಬಳಕೆದಾರರು ತಿಳಿದಿರಬೇಕು.ಮೊಬೈಲ್ ಫೋನ್‍ಗಳು ಹೊರಸೂಸುವ ವಿಕಿರಣಗಳು ಕ್ಯಾನ್ಸರ್‍ನಂತಹ ಮಾರಣಾಂತಿಕ ಕಾಯಿಲೆಯನ್ನುಂಟು ಮಾಡುವ ಅಪಾಯವಿದೆ ಎನ್ನುವುದನ್ನು WHO ಸಂಶೋಧನೆಯು ಬಹಿರಂಗಗೊಳಿಸಿದೆ. ಸೆಲ್ ಫೋನ್‍ಗಳನ್ನು ಬಳಸಿದ್ದ ಹಲವಾರು ಯುವಜನರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಹಂಗೇರಿಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಮೊಬೈಲ್ ಟವರ್‍ನ 400 ಮೀಟರ್‍ಗಳ ಪ್ರದೇಶದಲ್ಲಿರುವವರಲ್ಲಿ ಕ್ಯಾನ್ಸರ್ ಅಪಾಯದ ಸಂಭವನೀಯತೆ ಮೂರು ಪಟ್ಟು ಹೆಚ್ಚಾಗಿರುವುದನ್ನು ಜರ್ಮನಿಯಲ್ಲಿ ನಡೆಸಲಾದ ಸಂಶೋಧನೆಯೊಂದು ತೋರಿಸಿದೆ. ಈ 400 ಮೀ. ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್‍ಗಳ ಪ್ರಸರಣವು ಇತರ ಕಡೆಗಳಿಂದ 100 ಪಟ್ಟು ಹೆಚ್ಚಾಗಿರುತ್ತದೆ. ಮೊಬೈಲ್ ಫೋನ್ ಟವರ್‍ಗಳಿಂದ ಹೊರಹೊಮ್ಮುವ ವಿಕಿರಣದಿಂದಾಗಿ ಜೇನುನೊಣಗಳ ಸಂಖ್ಯೆ ಶೇ.60ರಷ್ಟು ಕುಸಿದಿದೆ ಎಂದು ಕೇರಳದಲ್ಲಿ ನಡೆಸಲಾದ ಸಂಶೋಧನೆಯೊಂದು ತಿಳಿಸಿದೆ.

ಸೆಲ್ ಫೋನ್ ಟವರ್‍ಗಳ ಸಮೀಪದಲ್ಲಿ ಕಾಗೆಗಳು ಇಡುವಂತಹ ಮೊಟ್ಟೆಗಳು 30ದಿನಗಳ ಬಳಿಕವೂ ಮರಿಗಳಾಗಿಲ್ಲ. ಸಾಮಾನ್ಯವಾಗಿ 10ರಿಂದ 14 ದಿನಗಳಲ್ಲಿ ಮೊಟ್ಟೆಗಳು ಒಡೆದು ಮರಿಗಳು ಹೊರಗೆ ಬರುತ್ತವೆ ಎನ್ನುವುದನ್ನೂ ಅಧ್ಯಯನಗಳು ಸೂಚಿಸಿವೆ. ಪೋನ್ ವಿಕಿರಣಗಳು ಆರೋಗ್ಯಕ್ಕೆ ಯಾವ ರೀತಿಯ ಅಪಾಯಗಳನ್ನು ಉಂಟುಮಾಡಬಹುದೆಂದು ತಿಳಿದರೆ ಅಚ್ಚರಿವುಂಟಾಗದಿರದು. ಮೊಬೈಲ್ ಫೋನ್ ವಿಕಿರಣವು ತಲೆನೋವು, ತಲೆಯೊಳಗೆ ಜುಮ್ಮೆನಿಸುವಿಕೆ, ನಿರಂತರ ಬಳಲಿಕೆ, ತಲೆ ಸುತ್ತುವಿಕೆ, ಖಿನ್ನತೆ, ನಿದ್ರಾಹೀನತೆ, ಮಂಪರು ನಿದ್ರೆ, ಕಣ್ಣಿನ ತೊಂದರೆ, ಏಕಾಗ್ರತೆ ನಷ್ಟ, ಕಿವಿಗಳಲ್ಲಿ ಗಂಟೆ ಬಾರಿಸಿದ ಅನುಭವ, ಶ್ರವಣ ಶಕ್ತಿ ಮತ್ತು ಜ್ಞಾಪಕ ಶಕ್ತಿ ನಷ್ಟ, ಅಜೀರ್ಣ ಸಮಸ್ಯೆ, ಅನಿಯಮಿತ ಹೃದಯಬಡಿತ ಇತ್ಯಾದಿ ನೋವುಗಳಿಗೆ ಕಾರಣವಾಗುತ್ತದೆ.
ಮೊಬೈಲ್ ವಿಕಿರಣವು ಫಲವತ್ತತೆ ನಷ್ಟ, ಕ್ಯಾನ್ಸರ್, ಮೆದುಳು ಟ್ಯೂಮರ್ ಮತ್ತು ಗರ್ಭಪಾತಕ್ಕೂ ಕಾರಣವಾಗುತ್ತವೆ ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ.

ನಮ್ಮ ಶರೀರದಲ್ಲಿ ಶೇ.70ರಷ್ಟು ಭಾಗ ನೀರಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ನಮ್ಮ ಮೆದುಳಿನ ಶೇ.90ರಷ್ಟು ಭಾಗವೂ ನೀರೇ ಆಗಿದೆ. ಈ ನೀರು ಕ್ರಮೇಣ ವಿಕಿರಣವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಸದಾಕಾಲ ಮೊಬೈಲ್ ಫೋನ್ ಬಳಸುವವರು ಕ್ಯಾನ್ಸರ್‍ಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ ಎಂದು WHO ವರದಿ ತಿಳಿಸಿದೆ.

1,000 ರಿಂದ 3,000 ಮೆಘಾ ಹರ್ಟ್ಸ್ ಸಾಮಥ್ರ್ಯದವರೆಗಿನ ವಿದ್ಯುತ್‍ಕಾಂತೀಯ ಅಲೆಗಳು ಮೈಕ್ರೊವೇವ್ ವಿಕಿರಣವನ್ನುಂಟು ಮಾಡುತ್ತದೆ. ಮೈಕ್ರೊವೇವ್ ಓವನ್, ಏರ್ ಕಂಡೀಷನರ್, ನಿಸ್ತಂತು ಕಂಪ್ಯೂಟರ್, ಕಾರ್ಡ್‍ಲೆಸ್ ಫೋನ್ ಮತ್ತು ಇತರ ವೈರ್‍ಲೆಸ್ ಸಾಧನಗಳೂ ವಿಕಿರಣಗಳನ್ನು ಸೂಸುತ್ತವೆ. ಆದರೆ ಹೆಚ್ಚುತ್ತಿರುವ ಸ್ಮಾರ್ಟ್‍ಫೋನ್ ಮತ್ತು ಮೊಬೈಲ್ ಬಳಕೆಯಿಂದ ಅದರ ಸಾಮೀಪ್ಯದಿಂದಾಗಿ ಮೊಬೈಲ್ ವಿಕಿರಣವು ಶರೀರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.
ಆಧುನಿಕತೆ ಮುಂದುವರೆದಂತೆ ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ಸಂಕೀರ್ಣವಾಗಿ ನಾಟಕೀಯತೆ, ಕೃತಕತೆ, ಸಮಯ ಸಾಧಕತನ, ಸ್ವಾರ್ಥಪರತೆ ಇತ್ಯಾದಿಗಳ ವಿಜೃಂಭಣೆಯನ್ನು ಈಗ ಎಲ್ಲೆಲ್ಲೂ ಕಾಣಬಹುದಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳು ಸೇರಿಕೊಂಡು ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸಲಾರಂಭಿಸಿವೆ ಎಂದರೆ ತಪ್ಪಾಗಲಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!

Published

on

3 ವರ್ಷದ ನಂತರ ಬಡ್ಡಿ ನಿಲ್ಲುತ್ತದೆ ಎಂಬುದು ಹಳೆಯ ನಿಯಮ; 58 ವರ್ಷದವರೆಗೆ ಬಡ್ಡಿ ಗ್ಯಾರಂಟಿ, ಆದರೆ ಈ ತೆರಿಗೆ ನಿಯಮ ಗೊತ್ತಿರಲಿ

ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.

http://Visit : www.suddidina.com

3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?

ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.

ಉದಾಹರಣೆ:

ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.

ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!

ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಖಾತೆದಾರರು ಏನು ಮಾಡಬೇಕು?

1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.

2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.

3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

Continue Reading

ದಿನದ ಸುದ್ದಿ

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!

Published

on

ಸೆಪ್ಟೆಂಬರ್ ಅಂತ್ಯಕ್ಕೆ ಹೊಸ ಸೇವೆ ಜಾರಿ; ಮುಂದಿನ ವಾರವೇ `ನಮ್ಮ ಬಿಎಂಟಿಸಿ 2.0' ಆ್ಯಪ್ ಲೋಕಾರ್ಪಣೆ, 200 ಹೊಸ ಮಿನಿ ಡೀಸೆಲ್ ಬಸ್ ಖರೀದಿಗೆ ಸಿದ್ಧತೆ

ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್, ರ‍್ಯಾಪಿಡೋ ನಂತಹ ಆ್ಯಪ್‌ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

http://Visit : www.suddidina.com

ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.

ನಮ್ಮ ಬಿಎಂಟಿಸಿ 2.0′ ಆ್ಯಪ್‌ನಲ್ಲಿ ಏನಿದೆ ಹೊಸತು?

ಖಾಸಗಿ ಆ್ಯಪ್‌ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್‌ನಲ್ಲಿ ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳಿವೆ. ಪ್ರತಿದಿನ ಸರಾಸರಿ 6,200 ಬಸ್‌ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.

ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ: 

ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

200 ಹೊಸ ಮಿನಿ ಬಸ್‌ಗಳ ಖರೀದಿ:

ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್‌ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್‌ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.

ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:

ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಎಸಿ ಇ-ಬಸ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್‌ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

Continue Reading

ದಿನದ ಸುದ್ದಿ

EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ

Published

on

ಕರ್ನಾಟಕ – ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ

ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.

http://Visit : www.suddidina.com

ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.

ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.

ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.

ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.

ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

Continue Reading

Trending